ಲೌಕಿಕದ ತೊಡಕುಗಳ ದಾಟಿಬಿಟ್ಟಳೆ ಅವಳು?

ರಶ್ಮಿ ಕಾಮತ್

ಮೂರು ಮಳೆಗಾಲಗಳೇ ಮುಗಿದು ಹೋಗಿವೆ. ಒಮ್ಮೊಮ್ಮೆ ಅವಳ ಮರೆಯಲಾಗದಂತಹ ಮಂದಹಾಸ ಕೂಡ ಮಾಸಿದಂತಾಗಿ ದಿಗಿಲಾಗುತ್ತೇನೆ.

ಎಲ್ಲಿ ಹೋಗಿಬಿಟ್ಟಳು ಅವಳು ಇದ್ದಕ್ಕಿದ್ದಂತೆ ಎಂಬ ಪ್ರಶ್ನೆ ಕಳೆದ ಮೂರು ವರ್ಷಗಳಿಂದಲೂ ಮನಸ್ಸನ್ನು ಭಾರವಾಗಿಸಿದೆ. ನನ್ನೊಡನೆ ಒಡನಾಡಿದ ಒಂದೇ ಒಂದು ವರ್ಷದ ಕ್ಷಣಬಿಂದುಗಳನ್ನೇ “ನಿನ್ನ ಇನ್ನು ಮುಂದಿನ ಬದುಕಿಗಾಗಿ ಹಂಚಿಕೊ” ಎಂದು ಅವಳು ಬಿಟ್ಟುಹೋಗಿದ್ದಾಳೇನೋ ಎಂದೆನಿಸುತ್ತದೆ ಒಮ್ಮೊಮ್ಮೆ. ಎಲ್ಲಿಂದಲೋ ಅವಳು ಪಿಸುಗುಟ್ಟಿದಂತೆನ್ನಿಸಿ ಉಕ್ಕಿಬಿಡುತ್ತೇನೆ. ಎಚ್ಚರದ ಸತ್ಯದಲ್ಲಿ ಮಾತ್ರ ಎಲ್ಲ ಬಯಲು ಬಯಲು.

ಹೀಗೆ ಧಿಗ್ಗನೆದ್ದು ರಾಚುವ ಅವಳಿಲ್ಲವೆಂಬ ಶೂನ್ಯ ನನ್ನನ್ನು ಎಂಥದೋ ತಡವರಿಕೆಗೆ ತಳ್ಳುತ್ತದೆ. ಆಗೆಲ್ಲ ಮತ್ತೆ ನನ್ನನ್ನು ಸಂತೈಸುವುದು ಅವಳೊಂದಿಗೆ ಕಳೆದ ಗಳಿಗೆಗಳೇ. ಅವಳೇ ಬಂದು ತನ್ನ ಮಡಿಲಲ್ಲಿ ನನ್ನ ತಲೆಯಿರಿಸಿಕೊಂಡು ಆಪ್ತ ನೇವರಿಕೆಗಳಿಂದ ನನ್ನ ನೋವುಗಳನ್ನು ಅಳಿಸಿ ಹಾಕಿದಂತೆ, ಹೊಸದೇ ಭರವಸೆಯನ್ನು ಕರುಣಿಸುತ್ತವೆ ಆ ಗಳಿಗೆಗಳು.

ಯಾವ ಏರಿಳಿತಗಳಾಗಲಿ ವಿಶೇಷಗಳಾಗಲಿ ನನ್ನ ಮನಸ್ಸಿಗೆ ತೀರಾ ತಾಕುವಷ್ಟು ಮಟ್ಟಿಗೆ ಇದ್ದಿರದಂತಹ ಬದುಕು ನನ್ನದಾಗಿದ್ದಾಗಲೇ ಆಕೆ ನನ್ನ ಬಾಳಿನೊಳಗೆ ಪ್ರವೇಶಿಸಿದ್ದಳು. ಎಂಥದೋ ಮಿಂಚಿನಂತೆ ಭಾಸವಾದ ಪ್ರವೇಶವಾಗಿತ್ತು ಅದು. ಆವರೆಗೂ ಇಲ್ಲದ ಏನೋ ಅನಂತರ ಸಿಕ್ಕಂತೆ ಅನ್ನಿಸುವುದಕ್ಕೆ ಅವಳ ಒಳಬರುವಿಕೆ ಕಾರಣವಾಗಿತ್ತು.

ಎಲ್ಲವೂ ಅಚ್ಚೊತ್ತಿದಂತೆ ನೆನಪಿದೆ. ನಾನು ಪಿ.ಜಿ.ಗೆ ಪ್ರವೇಶ ಪಡೆಯಲು ಧಾರವಾಡಕ್ಕೆ ಹೋಗಿದ್ದೆ. ಅಣ್ಣನ ನೆರವಿನಿಂದ ಅಪ್ಲಿಕೇಷನ್ನು ತುಂಬುತ್ತಿದ್ದಾಗಲೇ “ಎಕ್ಸ್ ಕ್ಯೂಸ್ ಮಿ” ಕೇಳಿಸಿ ತಿರುಗಿದವಳಿಗೆ ಕಂಡದ್ದು ಜೀನ್ಸಿನ ಮೇಲೆ ತುಂಬುದೋಳಿನ ದೊಗಳೆ ಷರಟು ಧರಿಸಿದ್ದ, ಉಲ್ಲಾಸವೇ ಸುರಿಯುವಂತಿದ್ದ ಕಂಗಳ ಆಕೆ. ಅಪ್ಲಿಕೇಷನ್ ಭರ್ತಿ ಮಾಡಲು ನನ್ನ ನೆರವು ಕೇಳಿ ಹತ್ತಿರ ಬಂದಿದ್ದ ಆಕೆ ನನ್ನನ್ನು ಎಂದೆಂದೂ ಕಾಡುತ್ತಲೇ ಉಳಿದುಬಿಡಬಲ್ಲಷ್ಟು ಹತ್ತಿರದವಳಾಗಿ ಬಿಡುತ್ತಾಳೆಂಬ ಕಿಂಚಿತ್ ಕಲ್ಪನೆಯಾದರೂ ಆ ಕ್ಷಣ ನನ್ನಲ್ಲಿ ಬರುವುದು ಸಾಧ್ಯವೇ ಇರಲಿಲ್ಲ.

ಮೊದಲ ಅಪೀಯರೆನ್ಸ್ ನಲ್ಲೇ ನನಗವಳು ಆಪ್ತಳಾಗಿಬಿಟ್ಟಿದ್ದಳು. ಒಂದೇ ಹಾಸ್ಟೆಲಿಗೆ ಅಡ್ಮಿಶನ್ ಪಡೆದು ರೂಮ್ ಮೇಟ್ಸು ಕೂಡ ಆದೆವು. ಆಮೇಲಿನ ಅವಳ ಚುರುಕು ಚುರುಕು ಮಾತುಗಳಲ್ಲಿ, ಲವಲವಿಕೆ ಮೊಗೆವಂಥ ಜೋಕುಗಳಲ್ಲಿ ಸುಖಪಡುತ್ತ ನನ್ನ ಪಕ್ಕದ ಮನೆಯ ಹುಡುಗಿ ಅವಳೆನ್ನಿಸಿಬಿಟ್ಟಿತು. ಅವಳು ನನ್ನ ಒಳಗೂ ಹೊರಗೂ ಗಾಢವಾಗಿಬಿಟ್ಟಿದ್ದಳು. ಅವಳು ಊರಿಂದ ತರುವ ರೊಟ್ಟಿ-ಪಲ್ಯದ ರುಚಿ ಅನುಭವಿಸುವಾಗ, ಇಬ್ಬರೂ ಸೀರೆ ಆರಿಸುವಾಗ, ಸಲ್ವಾರ್ ಕಮೀಜ್ ನ ಒಂದೇ ಪೀಸ್ ಗೆ ಇಬ್ಬರೂ ಆಸೆಪಟ್ಟಾಗ, ಅಲ್ಲೆಲ್ಲೋ ಕತ್ತಲೆ ಮುಖ ಮುಖ ನೋಡಿಕೊಳ್ಳುವ ಹೊತ್ತು ಕಡಲೆ ಮಾರುವವನಿಂದ ಕಡಲೆ ಕೊಂಡು ತಿನ್ನುವಾಗ, ಹಿಂದಿ ಸಿನಿಮಾಕ್ಕೆ ಬ್ಲಾಕ್ ಟಿಕೆಟ್ ಕೊಂಡುಕೊಂಡು ಹೋದಾಗ, ಪ್ರತಿ ಶನಿವಾರ ಸಾಯಂಕಾಲ ಮಾರುತಿ ಟೆಂಪಲ್ ಸುತ್ತುವಾಗ ನಮ್ಮ ನಡುವೆ ಸ್ನೇಹ ಇನ್ನಷ್ಟು ಚಾಚಿಕೊಳ್ಳುತ್ತಿತ್ತು.

ಅವಳು ನನ್ನ ಬ್ಲೌಸಿನ ತೋಳಿನಂಚಿಗೆ ಕಸೂತಿಯಲ್ಲಿ ರೋಸು ಬರೆದಿದ್ದಳು. ತಾನು ಹೋಗಬೇಕಾದೆಡೆಗಳಲ್ಲೆಲ್ಲ ನಾನು ಜೊತೆಗಿರಲೇಬೇಕೆಂದು ಹಠ ಮಾಡಿ ಗೆಲ್ಲುತ್ತಿದ್ದಳು. ನನ್ನನ್ನೊಂದು ಮಾತೂ ಕೇಳದೆ ನನ್ನ ಸೀರೆ, ಬ್ಲೌಸನ್ನೆಲ್ಲ ತನ್ನದೇ ಅನ್ನುವಷ್ಟು ನಿರ್ಲಿಪ್ತತೆಯಿಂದ ಬಳಸಿ ಹಾಗೇ ನನ್ನ ಮುಖಕ್ಕೇ ಒಗೆವಂತೆ ಬಿಸಾಡುತ್ತಿದ್ದಳು. ಆಗಾಗ ಅಕಾರಣವಾಗಿ ಜಗಳ ತೆಗೆದು ಸಿಕ್ಕಾಪಟ್ಟೆ ರೇಗಾಡಿ ನಾಲ್ಕು ದಿನ ಮಾತುಬಿಡುತ್ತಿದ್ದಳು.

ಅಂಥ ಅವಳು ನನಗೆ ಸಿಗದ ಹಾಗೆ ಹೋದಳಾದರೂ ಎಲ್ಲಿ ಎಂದು ಯೋಚಿಸುವಾಗ ಆತ್ಮವಿಶ್ವಾಸ ಕುಸಿದಂತೆ ಭಾಸವಾಗುತ್ತದೆ. “ಈ ಓದು, ಈ ಬಗೆಯ ಬದುಕು ನಾನು ಬಯಸಿದ್ದಲ್ಲ ಎನ್ನಿಸಿದೆ. ನನಗೆ ಬೇರೇನೋ ಬೇಕು. ಅದನ್ನು ಹುಡುಕಿಕೊಂಡು ಹೊರಟಿದ್ದೇನೆ. ನನ್ನನ್ನು ಹುಡುಕುವ ಶ್ರಮವನ್ನು ಯಾರೂ ತೆಗೆದುಕೊಳ್ಳಬೇಡಿ” ಎಂದು ಪುಟ್ಟ ಚೀಟಿ ಬರೆದಿಟ್ಟು ಇಲ್ಲವಾದವಳು ಆ ಕ್ಷಣ ಅದೆಷ್ಟು ನಿರಾಯಾಸವಾಗಿ ಲೌಕಿಕದ ತೊಡಕುಗಳನ್ನು ದಾಟಿಬಿಟ್ಟಳಲ್ಲ ಎನ್ನಿಸಿ ಮತ್ತೆ ಮತ್ತೆ ಬೆರಗಾದದ್ದಿದೆ ನಾನು.

ಅವಳಿಲ್ಲ, ಆದರೆ ಮತ್ತೆಲ್ಲೋ ತಾನು ಬಯಸಿದಲ್ಲಿ ಅವಳಿದ್ದಾಳೆ. ಗಂಡ ಮಗು, ಅತ್ತೆ-ಮಾವ, ನಾದಿನಿಯರ, ನೂರೆಂಟು ರಗಳೆಗಳ, ಹತ್ತು-ಹಲವು ತಕರಾರುಗಳ ನಮ್ಮ ಲೋಕವನ್ನು ಮೀರಿದಂಥ ಮತ್ತೆಲ್ಲೋ ಅವಳು ನಮ್ಮೆಲ್ಲರಿಗಿಂತಲೂ ಚೆನ್ನಾಗಿಯೇ ಇದ್ದಿರಲೂಬಹುದು.

ಇದೆಲ್ಲ ಸತ್ಯಗಳ ನಡುವೆಯೂ ಒಂದೊಂದು ಸಲ ನಾನು ಅವಳಿಗಾಗಿ ಕಾಯುತ್ತ ಕೂತುಬಿಡುತ್ತೇನೆ. ಅವಳು ಬರುತ್ತಾಳೆ, ತುಂಬಾ ಮಾತಾಡುತ್ತಾಳೆ, ಉಟ್ಟುಕೊಳ್ಳಲು ನನ್ನ ಸೀರೆ ಕೇಳುತ್ತಾಳೆ, ನನ್ನ ಬ್ಲೌಸಿನ ತೋಳಿಗೆ ಕಸೂತಿ ಬರೆಯುತ್ತಾಳೆ ಅಂತೆಲ್ಲ ಅನ್ನಿಸಿ ಪುಳಕಿತಳಾಗಿಬಿಡುತ್ತೇನೆ.

ಅವಳು ಬರುತ್ತಾಳೋ ಇಲ್ಲವೋ ಗೊತ್ತಿಲ್ಲ. ಆದರೆ ಈ ದುಂಡಗಿನ ಭೂಮಿಯಲ್ಲಿ ಮತ್ತೆ ಆಕೆ ನನ್ನ ಬಾಳಿನಲ್ಲಿ ಬರುವಂತಾಗಿಬಿಟ್ಟರೆ? ಅಂಥದೊಂದು ದಿನಕ್ಕಾಗಿ ಸಾವಿರ ವಂದನೆಗಳಿವೆ, ನನ್ನ ಬಳಿ.

‍ಲೇಖಕರು avadhi

April 1, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This