ವಚನ ಭ್ರಷ್ಟತೆಯ ಪ್ರಶ್ನೆ

gali.gif“ಗಾಳಿ ಬೆಳಕು” ಕಾಲಂ

ನಟರಾಜ್ ಹುಳಿಯಾರ್

ಮ್ಮ ಸಾರ್ವಜನಿಕ ವಲಯದಲ್ಲಿ ಇದೀಗ ಹಠಾತ್ತನೆ “ವಚನ ಭ್ರಷ್ಟತೆ”ಯ ಮಾತು ಕೇಂದ್ರರಂಗಕ್ಕೆ ಬರಲೆತ್ನಿಸುತ್ತಿದೆ. ಒಂದು: ಬಿಜೆಪಿ-ಜೆಡಿಎಸ್ ಪಕ್ಷಗಳ ಸಮ್ಮಿಶ್ರ ರಾಜಕಾರಣದ ವಲಯದಲ್ಲಿ. ಇನ್ನೊಂದು: ಅತ್ಯಂತ ಕಡಿಮೆ ಸಾಹಿತ್ಯ ಹಾಗೂ ಹೆಚ್ಚು ರಾಜಕೀಯ ಕಾಣಬರುವ ಕನ್ನಡ ಸಾಹಿತ್ಯ ಪರಿಷತ್ತಿನ ವಲಯದಲ್ಲಿ. ಇವೆರಡೂ ಸನ್ನಿವೇಶಗಳಲ್ಲಿ ವಚನ ಪಾಲನೆ, ವಚನ ಭ್ರಷ್ಟತೆಯ ಮಾತುಗಳಲ್ಲಿ ಇರುವ ಹೋಲಿಕೆ ಕುತೂಹಲಕರವಾಗಿದೆ.

ಮೊದಲನೆಯ ಸನ್ನಿವೇಶ ತಕ್ಕ ಮಟ್ಟಿಗೆ ಎಲ್ಲರಿಗೂ ಗೊತ್ತಿದೆ. ಸುಮಾರು ಹದಿನೆಂಟು ತಿಂಗಳ ಕೆಳಗೆ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ನಲವತ್ತು ಶಾಸಕರ ಜೊತೆ ಗೋವಾ ಮುಂತಾದ “ತೀರ್ಥ”ಕ್ಷೇತ್ರಗಳಲ್ಲಿ ಯಾತ್ರೆ ಮಾಡಿಕೊಂಡು ಬಂದು ಯಡಿಯೂರಪ್ಪನವರ ಜೊತೆ ಕೂಡಿಕೆ ಮಾಡಿಕೊಂಡರು. ಅದಕ್ಕೂ ಮುನ್ನ ಕುಮಾರಸ್ವಾಮಿಯವರ ಪಕ್ಷ ಧರಂಸಿಂಗ್ ಅವರ ಜೊತೆ ಮದುವೆ ಮಾಡಿಕೊಂಡು, ವರ್ಷದ ನಂತರ ರಾತ್ರೋರಾತ್ರಿ ಕೈಕೊಟ್ಟಿತ್ತು. ಸಾಮಾನ್ಯವಾಗಿ ಹಾಸ್ಯರಸ ಎಂಬ ರಸ ಇರುವುದನ್ನೇ ಅರಿಯದ ಯಡಿಯೂರಪ್ಪನವರು ಅವತ್ತಿನ ತಮ್ಮ ನವವಿವಾಹವನ್ನು “ಪ್ರೇಮವಿವಾಹ” ಎಂದು ಕರೆದುಕೊಂಡು ನಗಲೆತ್ನಿಸಿದರು. ನಮ್ಮ ಪಿ.ಮಹಮ್ಮದ್, ಗುಜ್ಜಾರ್ ಮುಂತಾದ ಕಾರ್ಟೂನಿಸ್ಟ್ ಗಳು ಯಡಿಯೂರಪ್ಪನವರಿಗೆ ಬಣ್ಣಬಣ್ಣದ ಸೀರೆ ಉಡಿಸಿ ಈ ವಿವಾಹ ಸಮಾರಂಭವನ್ನು ಇನ್ನಷ್ಟು ಕಳೆಗಟ್ಟಿಸಿದರು. ಇದೆಲ್ಲ ಆದ ನಂತರ, ಈ ಪ್ರೇಮಸಂಸಾರದಲ್ಲಿ ಗಂಡ ಹೆಂಡತಿ ಒಂದೇ ಪಲ್ಲಂಗದಲ್ಲಿ ಕೂತಿದ್ದರೂ ಒಬ್ಬರ ಮುಖ ಒಬ್ಬರು ನೋಡದಿರುವುದು; ನೆಂಟರು ಬಂದಾಗ ತೋರಿಕೆಗಾಗಿ ಸುಮ್ಮನೆ ಒಟ್ಟಿಗೆ ನಗುವುದು; ಗಂಡನು ಹೆಂಡತಿಗೆ ಹೇಳದೆ, ಎಲ್ಲೆಂದರಲ್ಲಿ ಹೋಗಿ ಗ್ರಾಮ ವಾಸ್ತವ್ಯ ಮಾಡುವುದು; ಹೆಂಡತಿ ಗಂಡನಿಗೆ ಬಜೆಟ್ ಬಗ್ಗೆ ಸರಿಯಾಗಿ ಹೇಳದೆ ತನ್ನ ವ್ಯಾನಿಟಿ ಬ್ಯಾಗಿನಲ್ಲಿರುವ ಹಣವನ್ನು ತನಗೆ ಬೇಕಾದಂತೆ ಖರ್ಚು ಮಾಡುವುದು… ಇದೆಲ್ಲ ಆಗಿ ಮನೆಯೊಳಗೆ ಮನೆಯೊಡೆಯ, ಒಡತಿಯರ ಜಗಳ ನಡೆಯುತ್ತಲೇ ಇತ್ತು. ಅತ್ತ ಹೊಸ್ತಿಲಲ್ಲಿ ಹುಲ್ಲು ಬೆಳೆಸುತ್ತ ನಿಂತ ಬೀಗರಾದ ದೇವೇಗೌಡ, ಅನಂತಕುಮಾರ್ ಮೊದಲಾದವರು ಈ ಯುವದಂಪತಿಗಳಿಗೆ ಹಾದಿ ತಪ್ಪಿಸುವುದು, ಹಾದಿ ತೋರಿಸುವುದು ನಡೆದೇ ಇತ್ತು. ಹೀಗಾಗಿ ಗಂಡ ಹೆಂಡಿರ ಜಗಳ ತಿಂದು ತೇಗಿ ಮಲಗಿದರೂ ಮುಗಿಯದ ಸ್ಥಿತಿ ಮುಂದುವರಿಯುತ್ತಲೇ ಹೋಯಿತು…

ಆದರೆ ಬರುವ ಅಕ್ಟೋಬರ್ ೨ರಂದು ಗಾಂಧೀ ಜಯಂತಿ ಆಚರಿಸಿದ ಮಾರನೆಯ ದಿನವೇ ಪತಿ ಕುಮಾರಸ್ವಾಮಿಯವರು ಈ ಹಿಂದಿ ಸತಿ ಯಡಿಯೂರಪ್ಪನವರಿಗೆ ಕೊಟ್ಟ ಮಾತಿನಂತೆ ಅಧಿಕಾರ ಬಿಟ್ಟು ಕೊಡಬೇಕಾಗಿದೆ. ಆದರೆ ಈ ನಡುವೆ ಬಿಜೆಪಿಯ ಕೆಲವು ಶಾಸಕರೂ ಕೂಡ “ಕುಮಾರಣ್ಣನವರೇ ಮುಖ್ಯಮಂತ್ರಿಯಾಗಿ ಇರಬೇಕು” ಎಂದು ಗೋಗರೆಯುತ್ತಿದ್ದಾರೆಂದು “ಕುಮಾರ್ ಟೈಮ್ಸ್” ವರದಿ ಮಾಡುತ್ತಲೇ ಇದೆ! ಅದರಲ್ಲೂ ಇದು ತಮ್ಮ ಕೊನೆಯ ಇನ್ನಿಂಗ್ಸ್ ಎಂದು ಭಯಭೀತರಾದಂತಿರುವ ಜೆಡಿಎಸ್ ಶಾಸಕರಂತೂ ಕುಮಾರಣ್ಣನವರು ಇರಲೇಬೇಕೆಂದು ಇನ್ನಷ್ಟು ಜಗ್ಗುತ್ತಿದ್ದಾರೆ. ಇದೆಲ್ಲದರ ಜೊತೆಗೆ ಅನಂತಕುಮಾರ್ ಕೂಡ ಕುಮಾರಣ್ಣನವರ ಅಭಿಮಾನಿಯಾಗಿದ್ದಾರೆ… ಹೀಗೆ ಸುದ್ದಿ ಸೈತಾನ ಕಾರ್ಖಾನೆಗಳು ಎಡೆಬಿಡದೆ ಹೊಗೆ ಉಗುಳುತ್ತಲೇ ಇವೆ.

ಈ ಸನ್ನಿವೇಶದಲ್ಲಿ ಈ “ವಚನ ಭ್ರಷ್ಟತೆ” ಎಂಬ ನುಡಿಗಟ್ಟನ್ನು ಕೆಲವರು ತೇಲಿಬಿಡುತ್ತಿದ್ದಾರೆ. ಕುಮಾರಸ್ವಾಮಿಯವರು ವಚನಭ್ರಷ್ಟರಾದರೆ ಜನತೆ ಅವರನ್ನು ಕ್ಷಮಿಸುವುದಿಲ್ಲ. ಜನ ಅವರ ಪಕ್ಷವನ್ನು ಸೋಲಿಸುತ್ತಾರೆ ಎಂಬ ವಿಶ್ಲೇಷಣೆ ಒಂದು ವಲಯದಲ್ಲಿ ಹಬ್ಬುತ್ತಿದೆ. ಅದು ಸರಿ ಇರಬಹುದು. ಆದರೆ ಭಾರತದ ಇಂದಿನ ರಾಜಕಾರಣದಲ್ಲಿ “ಕೊಟ್ಟ ಮಾತನ್ನು ನಾನು ಉಳಿಸಿಕೊಂಡಿದ್ದೇನೆ” ಎಂದು ದಿಟ್ಟವಾಗಿ ಕತ್ತೆತ್ತಿ, ಇನ್ನೊಬ್ಬನ ಕಣ್ಣಲ್ಲಿ ಕಣ್ಣಿಟ್ಟು ಹೇಳಬಲ್ಲ, ವಚನ ಭ್ರಷ್ಟನಲ್ಲದ ರಾಜಕಾರಣಿ ಯಾವನಾದರೂ ಇದ್ದಾನೆಯೇ ಎಂಬ ಪ್ರಶ್ನೆಗೆ, “ಹೌದು” ಎಂಬ ಉತ್ತರ ಕೊಡಲು ಯಾರೂ ಸಿದ್ಧರಿಲ್ಲ ಎನ್ನುವುದನ್ನು ಮರೆಯಬಾರದು. ನಮ್ಮ ಶಾಸಕರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಓದುವ ಪ್ರಮಾಣ ವಚನದಲ್ಲಿ ತಾವು ಏನೇನನ್ನು ಘೋಷಿಸುತ್ತಾರೋ ಅದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂಬ ಸತ್ಯ ಜಗತ್ತಿಗೆಲ್ಲ ಗೊತ್ತಿದೆ. ಹಾಗೆಯೇ ಈ ಶಾಸಕರು ಚುನಾವಣೆಗಳ ಸಂದರ್ಭದಲ್ಲಿ ಹೊರತಂದ ಪ್ರಣಾಳಿಕೆಗಳಲ್ಲಿ ಜನತೆಗೆ ತಾವು ಕೊಡುವ ವಚನಗಳ ಬಗ್ಗೆ ಅಪ್ಪಿತಪ್ಪಿ ಕೂಡ ಆಮೇಲೆ ಮಾತಾಡುವುದಿಲ್ಲವೆಂಬುದು ಕೂಡ ಎಲ್ಲರಿಗೂ ಗೊತ್ತಿದೆ.

ರಾಜಕಾರಣಿಗಳಿಗೂ ಅವರು ಕೊಟ್ಟ ವಚನಗಳಿಗೂ ಯಾವ ಸಂಬಂಧವೂ ಇಲ್ಲದಂಥ ನಿರ್ಲಜ್ಜ ಹಂತವನ್ನು ಭಾರತದ ರಾಜಕಾರಣ ಎಂದೋ ತಲುಪಿಯಾಗಿದೆ. ಹದಿನೈದು ವರ್ಷಗಳ ಕೆಳಗೆ ಬಾಬರಿ ಮಸೀದಿ ಉರುಳಿಸುವುದಿಲ್ಲವೆಂದು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾಯರಿಗೆ ಮಾತು ಕೊಟ್ಟ ಬಿಜೆಪಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿತು. ಒಂದು ಅವಧಿಯ ನಂತರ, ಸಮಾಜವಾದಿ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಡುತ್ತೇನೆಂದ ಬಹುಜನ ಸಮಾಜ ಪಕ್ಷ ಕೊಟ್ಟ ಮಾತಿಗೆ ತಪ್ಪಿತು. ಕಾಂಗ್ರೆಸ್ ಒಂದು ಪಕ್ಷಕ್ಕೆ ಬೆಂಬಲ ಕೊಟ್ಟು ತನಗೆ ಬೇಕಾದಾಗ ಬೆಂಬಲ ಹಿಂತೆಗೆದುಕೊಂಡಿತು… ಹೀಗೆ ಇವತ್ತು ಯಾವುದೇ ರಾಜಕೀಯ ನಾಯಕ, ನಾಯಕಿಯರಾಗಲೀ ವಚನ ಭ್ರಷ್ಟತೆಯ ಬಗ್ಗೆ ಮಾತಾಡುವ ಯಾವ ಹಕ್ಕನ್ನಾದರೂ ಉಳಿಸಿಕೊಂಡಿದ್ದಾರೆಯೇ?

ರಾಜಕಾರಣಿಗಳ ವಚನ ಭ್ರಷ್ಟತೆಯ ಬಗ್ಗೆ ಜನ ತಾತ್ಕಾಲಿಕವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಅವರ ವಿರುದ್ಧ ಮತ ಚಲಾಯಿಸಿರುವ ಉದಾಹರಣೆಗಳಿವೆ, ನಿಜ. ಆದರೆ ರಾಜಕಾರಣಿಗಳು ದಿನನಿತ್ಯ ಆಡುವ ಆಟಗಳನ್ನು ಜನ ಆನಂದಿಸುತ್ತಾ ಇರುವ ಉದಾಹರಣೆಗಳೂ ಇವೆ! ಯಾಕೆಂದರೆ, ಒಂದು ಪಕ್ಷದ ಬೆಂಬಲಿಗರು ಇನ್ನೊಂದು ಪಕ್ಷಕ್ಕೆ ಕೈ ಕೊಟ್ಟ ತಮ್ಮ ನಾಯಕನನ್ನು “ಚಾಣಕ್ಯ”ನೆಂದು ಮೆಚ್ಚುತ್ತಿರುತ್ತಾರೆ. ಗೋವಾ ಎಂಬ ರಾಜ್ಯದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಇಂಥ ಚಾಣಕ್ಯರು ಎಲ್ಲ ಪಕ್ಷಗಳಲ್ಲೂ ಹುಟ್ಟಿಕೊಳ್ಳುತ್ತಿರುತ್ತಾರೆ. ಯಾವುದೋ ಅಜ್ಞಾನಯುಗದಲ್ಲಿ ಯಾವನೋ ರಾಜನನ್ನು ರಕ್ಷಿಸಲು ಚಾಣಕ್ಯ ಎಂಬುವವನು ವದರಿದ್ದನ್ನೆಲ್ಲ “ನೀತಿ”ಯೆಂದು ಹೇಳುವ ಭಂಡತನ ಆಧುನಿಕ ಭಾರತದಲ್ಲೂ ಕಾಣುತ್ತಿರುವುದು ಅಸಹ್ಯಕರವಾಗಿದೆ. ಇಲ್ಲಿ ತಾವು ಕುತಂತ್ರ ಮಾಡಿದಾಗ ಅದನ್ನು “ಚಾಣಕ್ಯ ನೀತಿ”ಯೆಂದು ಹೆಮ್ಮೆ ಪಡುವವರು ಅದನ್ನೇ ಬೇರೆಯವರು ಮಾಡಿದಾಗ ಕುಟಿಲತೆಯೆಂದು ಚೀರುತ್ತಿರುತ್ತಾರೆ. ಅಂದಹಾಗೆ ಚಾಣಕ್ಯ ಎಂಬುವವನ ಇನ್ನೊಂದು ಹೆಸರಾದ “ಕೌಟಿಲ್ಯ” ಎಂಬ ಪದ ಕುಟಿಲತೆಯಿಂದಲೇ ಹುಟ್ಟಿ ಬಂದಿದೆಯಲ್ಲವೇ?

ನಮ್ಮ ರಾಜಕಾರಣಿಗಳ ಒಟ್ಟು ನಡವಳಿಕೆಯೇ ಈ ಬಗೆಯ ಕುಟಿಲತೆಯಿಂದ ರೂಪುಗೊಂಡಿರುವಾಗ, ಇಲ್ಲಿ ಯಾರು ಯಾರ ಬಗ್ಗೆಯಾದರೂ ವಚನ ಭ್ರಷ್ಟತೆಯ ಪ್ರಶ್ನೆಯೆತ್ತಿದರೆ, ಅದು ತಮಾಷೆಯಾಗಿಯಷ್ಟೇ ಕಾಣುತ್ತದೆ. ಇದೆಲ್ಲದರ ನಡುವೆ, ದಿನನಿತ್ಯ ತಾವು ದೇವರಿಗೆ ಕೊಟ್ಟ ವಚನವನ್ನು ಉಳಿಸಿಕೊಳ್ಳಲಾಗದ ಸ್ವಾಮೀಜಿಗಳು ಕೂಡ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ಬಗ್ಗೆ ತಮ್ಮ ನೀತಿ ಪಾಠ ಶುರು ಮಾಡಿದ್ದಾರೆ. ನಮ್ಮ ಧಾರ್ಮಿಕ ವಲಯದ ಬಹುಭಾಗವನ್ನು ಆವರಿಸಿರುವ ಆಷಾಢಭೂತಿತನವನ್ನು ಕಂಡರೆ, ಈ ಸ್ವಾಮಿಗಳು ಕೂಡ ವಚನಭ್ರಷ್ಟತೆಯ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಎಂದೋ ಕಳೆದುಕೊಂಡಂತಿದ್ದು, ಇವರೆಲ್ಲ ಸಂಕುಚಿತ ಜಾತಿ ನೆಲೆಯಿಂದ ಮಾತ್ರ ಈ ಠರಾವು ಹೊರಡಿಸುತ್ತಿರುವುದು ಎದ್ದು ಕಾಣುವಂತಿದೆ.

ಈ ಎಲ್ಲ ಗಲಾಟೆಗಳ ಮಧ್ಯೆ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕೈ ತಪ್ಪಿ ಹೋಯಿತೆಂದು ಕೊರಗುತ್ತಿರುವ ನಮ್ಮ ಮಧ್ಯಮ ಮಾರ್ಗದ ಸಾಹಿತಿ ವ್ಯಾಸರಾಯ ಬಲ್ಲಾಳರ ಅಹವಾಲನ್ನು ಗಮನಿಸೋಣ. ಬಲ್ಲಾಳರ ಪ್ರಕಾರ, ಚಂದ್ರಶೇಖರ ಪಾಟೀಲರು ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುತ್ತೇನೆಂದು ಮಾತು ಕೊಟ್ಟಿದ್ದರು. ಆದರೆ ಈ ಮಾತಿಗೆ ತಪ್ಪಿದ ಚಂಪಾ, ಒಬ್ಬ ಸಾಧಾರಣ ವಿಮರ್ಶಕರಾದ ಹಾಗೂ ತಮ್ಮ ಜೀವಿತದ ಬಹುಭಾಗವನ್ನು ಮತೀಯವಾದಿ ಸಂಸ್ಥೆಗಳ ಗುಪ್ತಭಕ್ತರಾಗಿ ಕಳೆದಿರುವ ಎಲ್.ಎಸ್.ಶೇಷಗಿರಿರಾಯರಿಗೆ ಪಟ್ಟ ಕಟ್ಟಿದ್ದಾರೆ. ಈ ಬಗ್ಗೆ ಪರಿಷತ್ ವಲಯವನ್ನು ಪ್ರಶ್ನಿಸಿದರೆ, “ಚಂಪಾ ಹಾಗೆ ಬಲ್ಲಾಳರಿಗಾಗಲೀ ಯಾರಿಗೇ ಆಗಲೀ ಮಾತು ಕೊಟ್ಟಿಲ್ಲ, ಇದೆಲ್ಲ ಜಿಲ್ಲಾಧ್ಯಕ್ಷರ ಲಾಬಿಗೆ ತಕ್ಕ ಹಾಗೆ ನಡೆಯುತ್ತದೆ” ಎಂಬ ಉತ್ತರ ಬಂತು.

ಇದೆಲ್ಲದರ ಮಧ್ಯೆ, ಚಂದ್ರಶೇಖರ ಪಾಟೀಲರಂಥ ಬಂಡಾಯ ಸಾಹಿತ್ಯದ ಮುಂಚೂಣಿ ನಾಯಕರ ಅಧಿಕಾರಾವಧಿಯಲ್ಲಿ ಶೇಷಗಿರಿರಾವ್ ಥರದ ಮತೀಯ ವಾಸನೆಯ ವ್ಯಕ್ತಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ ಎಂಬ ವಿರೋಧಾಭಾಸ ಅನೇಕರನ್ನು ಚಿಂತೆಗೀಡು ಮಾಡಿದೆ. ಅಂದರೆ, ಚಂದ್ರಶೇಖರ ಪಾಟೀಲರು ಒಬ್ಬ ಪ್ರಗತಿಪರ ಲೇಖಕರಾಗಿ ತಾವು ಬದ್ಧವಾಗಿರಬೇಕಾದ ತತ್ವಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ ಎಂಬುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಕಳೆದ ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಗೌರಿ ಲಂಕೇಶರ ವಿರುದ್ಧ ಮತೀಯವಾದಿಗಳು ತರಲೆ ಮಾಡಿದಾಗ ಚಂಪಾ ದಿಟ್ಟವಾಗಿ ಗೌರಿ ಲಂಕೇಶರ ಪರವಾಗಿ ನಿಂತಿದ್ದರು; ಉಪಮುಖ್ಯಮಂತ್ರಿಯನ್ನೂ ಎದುರು ಹಾಕಿಕೊಂಡು ತಮ್ಮ ಅಳಿದುಳಿದ ಬಂಡುಕೋರತನವನ್ನು ಮರಳಿ ಗಳಿಸಲೆತ್ನಿಸಿದ್ದರು. ಇದೀಗ ಶೇಷಗಿರಿರಾಯರ ಆಯ್ಕೆಯ ಸಂದರ್ಭದಲ್ಲಿ ಮಾತ್ರ ಚಂಪಾ ವ್ಯಕ್ತಿತ್ವ ಕರುಣಾಜನಕ ಸ್ಥಿತಿ ತಲುಪಿದಂತಿದೆ. ಲೇಖಕನೊಬ್ಬ ತನ್ನ ಆಳದ ನಿಲುವುಗಳಿಗೆ ತಾನೇ ಬದ್ಧನಾಗಲಾರದ ಈ ವಚನಭ್ರಷ್ಟತೆ ಅತಿಸೂಕ್ಷ್ಮವಾದ ಭ್ರಷ್ಟತೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಅದೆಲ್ಲಕ್ಕಿಂತ ಮುಖ್ಯವಾಗಿ, ಇವತ್ತು ಯಾರದಾದರೂ ವಚನ ಭ್ರಷ್ಟತೆಯ ಬಗ್ಗೆ ನೈತಿಕ ಧ್ವನಿಯಿಂದ ಮಾತಾಡುವ ಹಕ್ಕು ನಮ್ಮ ರಾಜಕಾರಣಿಗಳು ಅಥವಾ ಧರ್ಮಗುರುಗಳಿಗೆ ಮಾತ್ರವಲ್ಲ, ಹತ್ತಾರು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿದ ನಮ್ಮ ಬರಹಗಾರರಿಗೂ ಇಲ್ಲವಲ್ಲ ಎಂಬ ಕಟುಸತ್ಯ ನಮ್ಮನ್ನೆಲ್ಲ ಬೆಚ್ಚಿ ಬೀಳಿಸುವಂತಿದೆ.

‍ಲೇಖಕರು avadhi

August 6, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

೧ ಪ್ರತಿಕ್ರಿಯೆ

  1. krishnamasadi

    This website really unique in its content and writings. I welcome this with goodwishes.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: