ವಸುಧೇಂದ್ರ ಬದಲಾಗಿದ್ದಾರೆ !

ಕಥೆಗಾರ ವಸುಧೇಂದ್ರ ಬದಲಾಗಿದ್ದಾರೆ. ಇಷ್ಟು ದಿನ ತೊಟ್ಟು ಕೊಂಡಿದ್ದ ಕಥೆಗಾರನೆಂಬ ಓವರ್ ಕೋಟ್ ಕಳಚಿಟ್ಟು ಟೆಂಪೊರರಿ ಯಾಗಿ ವಿಮರ್ಶಕನ ಧಿರಿಸು ಧರಿಸಿದ್ದಾರೆ. ‘ಅಪಾರ’ ಬ್ಲಾಗ್ನಲ್ಲಿ ಅವರು ಕಾಣಿಸಿಕೊಂಡಿರುವುದು ಹೀಗೆ.

2301775314_50b185452d_m.jpg

’ಇಂತಿ ನಿನ್ನ ಪ್ರೀತಿಯ’ ಸಿನಿಮಾದ ಕತೆ ಹೇಳುವುದು ಅಂತಹ ಕಷ್ಟದ್ದೇನಲ್ಲ. “ಪ್ರೀತಿ-ನಿರಾಸೆ-ನಶೆ-ಹಸೆ-ಬಿಸಿ-ಹುಸಿ-ಸ್ವಸ್ತಿ” ಎಂಬ ಕೆಲವು ಪದಗಳಲ್ಲಿ ಕತೆಯನ್ನು ಕಟ್ಟಿ ಕೊಡಬಹುದು. ಆ ಪದಗಳ ವಿವರಣೆ ಕನ್ನಡ ಸಿನಿಮಾ ನೋಡಿ ಅಭ್ಯಾಸವಿರುವ ಯಾರಿಗೂ ಬೇಕಾಗುವದಿಲ್ಲ. ನೀವೇನಾದರೂ ಸಿನಿಮಾಕ್ಕೆ ಅದ್ಭುತ ಕತೆಯೊಂದು ಬೇಕೇ ಬೇಕೆನ್ನುವ ಹಳೆಯ ಕಾಲದವರಾದರೆ ನಿಮಗೆ ಈ ಸಿನಿಮಾ ನಿರಾಸೆ ಮೂಡಿಸಬಹುದು. ಕತೆಯನ್ನು ಬದಿಗಿಟ್ಟು ಸಿನಿಮಾ ನೋಡುವವರಾದರೆ, ಸೂರಿಯ ಪ್ರೀತಿಯಲ್ಲಿ ಕನ್ನಡ ಚಿತ್ರ ಜಗತ್ತು ಕಂಡರಿಯದ ಸಾಕಷ್ಟು ಹೊಸತುಗಳನ್ನು ಕಾಣಬಹುದಾಗಿದೆ.

ಸೂರಿ ಒಳ್ಳೆಯ ಪೇಂಟರ್ ಎಂದು ಕೇಳಿದ್ದೇನೆ. ಅದು ನಿಜವಿರಬೇಕು. ಚಿತ್ರದಲ್ಲಿ ಪ್ರತಿಯೊಂದು ದೃಶ್ಯವೂ ಒಳ್ಳೆಯ ಕಲಾಕೃತಿಯನ್ನು ನೋಡಿದ ಅನುಭವ ನೀಡುತ್ತದೆ. ಹಾಗಂತ ಗೆಳೆಯ ಯೋಗರಾಜ್ ಭಟ್‌ನಂತೆ ಸೂರಿ ಮಲೆನಾಡಿನ ಕಾಡನ್ನೋ, ಜೋಗಜಲಪಾತವನ್ನೋ ಹುಡುಕಿಕೊಂಡು ಹೋಗುವದಿಲ್ಲ. ಎತ್ತ ಕ್ಯಾಮರಾ ಹಿಡಿದರೂ ಸುಂದರವಾಗಿಯೇ ಕಾಣುವ ಅಂತಹ ದೈವನಿರ್ಮಿತ ತಾಣಗಳ ಸುಲಭದ ದಾರಿಯ ಆಯ್ಕೆ ಅವನದಲ್ಲ. ಸುಮ್ಮನೆ ನಮ್ಮ ದೈನಂದಿನ ಬದುಕಿನ ಚಕಮಕಿಗಳ ನಗಣ್ಯ ಸಂಗತಿಗಳಲ್ಲಿಯೇ ಸೊಗಸನ್ನು ಕಾಣುವ ಅವರ ಕಣ್ಣು ವಿಶೇಷವಾದದ್ದು. ಕೊರಳ ಸರವನ್ನು ಸುಮ್ಮನೆ ನಾಯಕಿ ಕೈಯಲ್ಲಿ ಹಿಡಿದುಕೊಳ್ಳುವುದು, ಗಂಡು ನೋಡಲು ಬಂದ ಹುಡುಗಿ ಕಣ್ಣಲ್ಲಿಯೇ ಮನೆಯನ್ನೆಲ್ಲಾ ಗಮನಿಸುವುದು, ಪ್ರೇಮಿಗಳಿಬ್ಬರು ಹಳೆಯ ಗೋಡೆಗೆ ನೇತು ಹಾಕಿದ ಓರೆಯಾದ ಕೆಂಪು ಅಂಚೆ ಪೆಟ್ಟಿಗೆಯ ಪಕ್ಕ ನಿಂತು ಮಾತನಾಡುವುದು – ಎಲ್ಲವೂ ಅದೆಷ್ಟು ಸೊಗಸಾಗಿ ಕಾಣುತ್ತದೆಂದರೆ ವಾಸ್ತವಕ್ಕಿಂತಲೂ ಕ್ಯಾಮರಾ ಸುಂದರವೆನ್ನಿಸುತ್ತದೆ. ಸೂರಿಯ ಕಲ್ಪನೆಯನ್ನು ಸೊಗಸಾಗಿ ಸೆರೆ ಹಿಡಿಯುವಲ್ಲಿ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ ಕೈ ಜೋಡಿಸಿದ್ದಾರೆ.
ಗೆಳೆಯ ಯೋಗರಾಜ್ ಭಟ್‌ಗೆ ಮಾತೇ ಮುತ್ತಿನ ಹಾರವಾದರೆ, ಸೂರಿಗೆ ಮೌನ ಬಂಗಾರ. ಪ್ರೇಮಿಗಳಿಬ್ಬರು ಮೌನವಾಗಿ ಕಣ್ಣಲ್ಲಿ ಪಿಸುಗುಟ್ಟುವುದು ಅವರಿಗಿಷ್ಟ, ವಾಚಾಳಿ ರಂಗಾಯಣದ ರಘುವಿನ ನಾಲಿಗೆ ಕತ್ತರಿಸಿ ಮೂಕನಾಗಿಸುವಲ್ಲಿ ಅವರಿಗೆ ಆನಂದ, ಮೌನದಲ್ಲಿಯೇ ಗಂಡನ ದೌರ್ಜನ್ಯವನ್ನು ಎದುರಿಸುವ ಭಾವನಾಳ ಬಗ್ಗೆ ಅವರಿಗೆ ಕುತೂಹಲ, ಹೆಂಡದಂಗಡಿಯ ಕಡೆ ಎಳೆಯುವ ಕಾಲುಗಳ ಸೆಳೆತಗಳನ್ನು ಚಿತ್ರಿಸುವದಲ್ಲಿ ಅವರಿಗೆ ಆಸಕ್ತಿ. ಅಬ್ಬರದ ಹಾಡು ಕುಣಿತಗಳ ಈ ದಿನಗಳಲ್ಲಿ, ಸೂರಿ ಬರೀ ಹಿನ್ನೆಲೆಗಾಯನದಲ್ಲಿ ಪ್ರೀತಿಯ ಮೌನಗೀತೆಗಳನ್ನು ಬರೆಯುತ್ತಾರೆ. ಸಂಗೀತ ನಿರ್ದೇಶಕ ಸಾಧು ಕೋಕಿಲ ಆ ಮೌನದಲ್ಲಿ ಕೆಲವೊಮ್ಮೆ ಗಲಾಟೆ ಮಾಡುತ್ತಾರೆ. ಆದರೆ ಒಂದೆರಡು ಒಳ್ಳೆಯ ಹಾಡುಗಳನ್ನು ಕನ್ನಡೀಕರಿಸಿ, ಕನ್ನಡದ ಧ್ವನಿಗಳಿಗೆ ಅವಕಾಶ ಕೊಟ್ಟಿದ್ದಾರೆಂದು ಅವರನ್ನು ಕ್ಷಮಿಸಬಹುದಾಗಿದೆ.
ಬೆಂಗಳೂರಿನ ಕೆಳಮಧ್ಯಮ ವರ್ಗದ ಚಿತ್ರಣ ಕನ್ನಡ ಚಿತ್ರರಂಗ ಅಷ್ಟಾಗಿ ಕಂಡಿಲ್ಲ. ಹಳ್ಳಿಯ ಬಡವರನ್ನು ಬೆಳ್ಳಿತೆರೆಯಲ್ಲಿ ಕಂಡಿದ್ದೇವೆ ಹೊರತು, ನಗರದ ಬಡವರನ್ನಲ್ಲ. ಸೂರಿಗೆ ಆ ದುನಿಯಾದ ಒಳನೋಟ, ಅಲ್ಲಿಯ ಮೌಲ್ಯ, ಹಾಸ್ಯ, ಬವಣೆ ಎಲ್ಲವೂ ಗೊತ್ತು. ಎಲ್ಲಿಯೂ ವಾಸ್ತವವನ್ನು ವೈಭವೀಕರಿಸದೆ ಆ ಬದುಕನ್ನು ನಮ್ಮ ಮುಂದಿಡುತ್ತಾನೆ. ಅನಾಥ ಹೆಣಗಳ ಸಂಸ್ಕಾರ ಮಾಡಿ ಬಂದ ಹಣದಿಂದ ಬದುಕುವ ವ್ಯಕ್ತಿ, ’ಒಳ್ಳೆ ಕ್ವಾಲಿಟಿ ಡ್ರಿಂಕ್ಸ ತೊಗೋ ॒ಪೇಪರಲ್ಲಿ ಕಳ್ಳಭಟ್ಟಿ ಕುಡಿದು ಸತ್ತವರ ವರದಿ ಬಂದಿದೆ’ ಎಂದು ಮೈದುನಗೆ ಕಳಕಳಿಯಿಂದ ಹೇಳುವ ಅತ್ತಿಗೆ, ಹೆಣ ಸಾಗಿಸುವ ವ್ಯಾನಿನಲ್ಲಿ ಸರಸ ಸಲ್ಲಾಪವಾಡುವ ಪ್ರೇಮಿಗಳು, ’ನೀ ಸತ್ತರೆ ನಾನು, ನಾ ಸತ್ತರೆ ನೀನು ಹೆಣದ ಮುಂದೆ ಸಖತ್ತಾಗಿ ಡ್ಯಾನ್ಸ್ ಮಾಡಬೇಕು’ ಎಂದು ಒಪ್ಪಂದ ಮಾಡಿಕೊಳ್ಳುವ ಗೆಳೆಯರು, ’ತುಟಿಯಲ್ಲಿ ರಕ್ತ ಬರೋ ಹಾಗೆ ಮುತ್ತು ಕೊಡೋ’॒ ಎಂದು ಪೀಡಿಸುವ ಹುಡುಗಿ – ಹೀಗೆ ವಿಭಿನ್ನ ಲೋಕವೊಂದು ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಈ ಲೋಕದಲ್ಲಿ ಕುಡಿಯುವದೆಂದರೆ ಎಲ್ಲೋ ಪಬ್ಬಿನಲ್ಲಿ ಮಬ್ಬು ಬೆಳಕಿನಲ್ಲಿ ಆರಾಮಾಗಿ ಕುಳಿತು ಹೀರುವದಲ್ಲ, ಸುಮ್ಮನೆ ಮನೆಗೆಲಸಕ್ಕಾಗಿ ರಣಬಿಸಿಲಿನಲ್ಲಿ ಹೊರಗೆ ಬಂದಾಗ ಹಾಗೇ ಮೂಲೆಯ ಅಂಗಡಿಯ ಮುಂದೆ ನಿಂತು ಗುಳಿಗೆ ನುಂಗಿ ನೀರು ಕುಡಿದಂತೆ ಎರಡು ಗ್ಲಾಸ್ ಗಟಗಟನೆ ಹೀರಿ ಹೊರಡುವುದು ಎಂದು ಸೂರಿಗೆ ಗೊತ್ತು.
2300981979_e41f6a0e7d_m.jpgಇಷ್ಟೆಲ್ಲಾ ಹೇಳಿದರೂ ನಾನು ಸ್ವಲ್ಪ ಹಳೆಯ ಕಾಲದವನು. ಚಿತ್ರಕ್ಕೆ ಒಳ್ಳೆಯ ಕತೆಯಿಲ್ಲದೆ ಉಳಿದ ವೈಭವಗಳನ್ನು ಸ್ವೀಕರಿಸುವುದು ನನಗೆ ಒಗ್ಗದ್ದು. ಹಂಜಕ್ಕಿ ಅನ್ನಕ್ಕೆ ಎಂತಹ ಅದ್ಭುತ ಸಾರು-ಹುಳಿ-ಚಟ್ಣಿಗಳಿದ್ದರೆ ಏನುಪಯೋಗ? ಸೂರಿ ಒಳ್ಳೆಯ ಕತೆಯನ್ನು ಮೊದಲು ತಯಾರಿ ಮಾಡಿಕೊಂಡು ನಂತರ ಸಿನಿಮಾಕ್ಕೆ ಕೈ ಹಾಕಬೇಕಿತ್ತೆನ್ನಿಸುತ್ತದೆ. ಅನಾವಶ್ಯಕವಾಗಿ ಸಹಾಯಕ ಪಾತ್ರಗಳಿಗೆ ಉಪಕತೆಗಳನ್ನು ಕೊಟ್ಟು ಮುಖ್ಯ ಕತೆಯನ್ನು ಮರೆಯುತ್ತಾನೆ. ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ ನಾಯಕ ಮದ್ಯವ್ಯಸನಿಯಾಗುವುದು ಸಹಜವಾದರೂ, ವರ್ಷಗಟ್ಟಳೆ ಅದರಲ್ಲಿಯೇ ಮುಳುಗಿ ಹೋಗುತ್ತಾನೆನ್ನುವ ದೇವದಾಸ್ ಕತೆಯನ್ನು ಬೆಂಗಳೂರಿನ ಪರಿಸರದಲ್ಲಿ ಸ್ವೀಕರಿಸುವುದು ಕಷ್ಟ. ಮದ್ಯವ್ಯಸನದಂತಹ ಜ್ವಲಂತ ಸಮಸ್ಯೆಯನ್ನಾದರೂ ಮುಖ್ಯವಾಗಿ ತೆಗೆದುಕೊಂಡು ಅದರ ಸೂಕ್ಷ್ಮಗಳನ್ನು ಗುರುತಿಸಬೇಕಿತ್ತು.
ಸುಖಾಸುಮ್ಮನೆ ಕೆಲವು ಪಾತ್ರಗಳನ್ನು ಸಾಯಿಸುವದರಿಂದ ಹೃದಯಸ್ಪರ್ಶಿ ಸನ್ನಿವೇಶಗಳನ್ನು ಸೃಷ್ಟಿಸಲಾಗುವದಿಲ್ಲ ಎನ್ನುವುದು ಸೂರಿಗೆ ಗೊತ್ತಿಲ್ಲವೆ?
ಕಡೆದಿಟ್ಟ ಶಿಲ್ಪದಂತೆ ದಷ್ಟಪುಷ್ಟವಾಗಿ ಸುಂದರವಾಗಿರುವ ಕಿಟ್ಟಿ ಪಡ್ಡೆ ಹುಡುಗನಾಗಿ ಇಷ್ಟವಾಗುತ್ತಾನೆ. ಆದರೆ ಯಾಕೋ ಕುಡಿತದ ಪಾತ್ರವನ್ನು ಅಭಿನಯಿಸಲು ಒದ್ದಾಡಿದ್ದಾನೆ! ಭಾವನಾ ತನ್ನ ಕಣ್ಣಲ್ಲಿ ಇನ್ನೂ ಜೀವಂತಿಕೆಯನ್ನು ಉಳಿಸಿಕೊಂಡಿದ್ದಾಳಾದರೂ ಉಳಿದಂತೆ ಯಾಕೋ ಸುಸ್ತಾಗಿದ್ದಾಳ. ಗರಮಾಗರಂ ದೃಶ್ಯಗಳಿರುವ ಒಂದು ಹಾಡಿಗೆ ಜಯಂತ ಕಾಯ್ಕಿಣಿಯವರ ಒಂದು ಸುಂದರ ಭಾವಗೀತೆಯನ್ನು ಬಳಸಿಕೊಳ್ಳಲಾಗಿದೆ. ಯೋಗರಾಜ ಭಟ್ಟರ ಕವನಗಳಲ್ಲಿ ಒಂದೆರಡು ಸಾಲುಗಳು ಕಾಡುವಂತಿವೆ. ಕ್ಷಿಪ್ರ ನಿರೂಪಣೆಗೆ ಸಂಕಲನಕಾರನ ಕೊಡುಗೆ ಅಪಾರವಾಗಿದೆ.
ಇಷ್ಟಾಗಿಯೂ ನೀವು ಈ ಸಿನಿಮಾಕ್ಕೆ ಹೊರಡುವಿರಾದರೆ ನಾನು ನಿಮ್ಮೊಡನೆ ಮತ್ತೊಮ್ಮೆ ಬರಲು ಸಿದ್ಧ. ಕನ್ನಡದ ಹುಡುಗರು ಸ್ವತಂತ್ರವಾಗಿ ನಮ್ಮ ಮಣ್ಣಿನ ವಾಸನೆಯ ಸಿನಿಮಾಗಳನ್ನು ಹೊಸ ಹುರುಪಿನಲ್ಲಿ ಮಾಡುತ್ತಿದ್ದಾರೆನ್ನುವ ಸಂಗತಿಯೇ ನನಗೆ ಚಿತ್ರದ ಚಿಕ್ಕಪುಟ್ಟ ದೋಷಗಳನ್ನು ಗೌಣವಾಗಿ ಕಾಣುವಂತೆ ಮಾಡುತ್ತದೆ.

‍ಲೇಖಕರು avadhi

March 7, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. amara

    ನಮಸ್ಕಾರ,

    ವಸುಧೇಂದ್ರ ಅವರ ವಿಮರ್ಶೆ ನೈಜತೆಗೆ ಹಿಡಿದ ಕನ್ನಡಿಯಂತಿದೆ ಅನ್ನೊದು ನನ್ನ ಅನಿಸಿಕೆ, ಕ್ಷಮಿಸಿ ನಾನಿನ್ನು ಸಿನಿಮಾ ನೋಡಿಲ್ಲ. ಅಲ್ಲಲ್ಲಿ ಕೇಳಿಬಂದ ಗುಸು ಗುಸು ಆಲಿಸಿ ಸುಮ್ಮನಾಗಿದ್ದೆ, ಒಮ್ಮೆ ಹೋಗಿಬರಲು ಮನಸ್ಸು ಮಾಡಿರುವೆ.

    -ಅಮರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: