ವಸುಧೇ೦ದ್ರ: ಬೇಗನೆ ಡಬ್ಬಿಂಗ್ ಬರಲಿ

ಪ್ರಿಯ ತಿರುಮಲೇಶ್, ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಸ್ಪರ್ಧೆಯಿಲ್ಲದ ಯಾವುದೇ ಚಟುವಟಿಕೆಯೂ ಕಾಲಕ್ರಮೇಣ ಗುಣಮಟ್ಟದಲ್ಲಿ ಕುಸಿಯುತ್ತದೆ. ಕನ್ನಡ ಸಿನಿಮಾ ಎಂಬ ‘ಹುಲಿಮರಿ’ಯನ್ನು ಬೆಕ್ಕಿನಂತೆ ಮನೆಯಲ್ಲಿ ಹಾಲು-ಅನ್ನ ಕೊಟ್ಟು ಸಾಕಿದ್ದು ಸಾಕು. ಈ ಮನೆಪ್ರೀತಿ ಇನ್ನೂ ಮುಂದುವರೆದರೆ ಅದು ತನ್ನ ಶಿಕಾರಿಯ ಶಕ್ತಿಯನ್ನೇ ಮರೆತುಬಿಟ್ಟೀತು. ಅದಕ್ಕೀಗ ಸ್ವಾತಂತ್ರ್ಯ ಕೊಡೋಣ. ಕಾಡಿನಲ್ಲಿ ಎಲ್ಲ ಪ್ರಾಣಿ ಸಂಕುಲದ ಮಧ್ಯೆ ಅದು ಘರ್ಜಿಸಲಿ. ತನ್ನ ಶಕ್ತಿಯನ್ನು ಮೆರೆಯಲಿ. ಮನೆಯಲ್ಲಿ ಅಕ್ಕ ಅತ್ಯಂತ ಪ್ರೀತಿಯಿಂದ ಡಿಸ್ಕವರಿ, ಹಿಸ್ಟರಿ ಛಾನಲ್ಗಳನ್ನು ನೋಡುತ್ತಾಳೆ. ಗಳಿಗೆಗೊಮ್ಮೆ ಅದರ ಆಂಗ್ಲ ವರದಿ ಅರ್ಥವಾಗದೆ ‘ಏನಂತೋ?’ ‘ಏನಂತೋ’ ಎಂದು ನನ್ನನ್ನು ಕೇಳಿದಾಗ, ಕನ್ನಡದಲ್ಲಿ ಅದನ್ನು ನಾವು ಕೊಡುತ್ತಿಲ್ಲವಲ್ಲಾ ಎಂದು ಬೇಸರವಾಗುತ್ತದೆ. ಕಲೆಯ ಆಸ್ವಾದನೆಗೆ ಸೀಮೆಗಳನ್ನು ಒಡ್ಡುವುದು ಅಮಾನವೀಯ. ಒಂಚೂರು ವಿಶಾಲ ಮನೋಭಾವದಿಂದ ಜಗತ್ತನ್ನು ನೋಡೋಣ. ದೇಶ-ವಿದೇಶಗಳಲ್ಲಿ ಎಂತೆಂಥಹ ಅದ್ಭುತ ಸಿನಿಮಾಗಳಿವೆ! ಅವುಗಳನ್ನು ನಮ್ಮವರು ನೋಡುವುದು ಬೇಡವೆ? ವಿದ್ಯಾವಂತರು ಮಾತ್ರ ಆಂಗ್ಲ ಸಬ್-ಟೈಟಲ್ ಹಾಕಿಕೊಂಡು ನೋಡಿಬಿಟ್ಟರೆ ಸಾಕೆ? ನಮ್ಮವರ ಸಿನಿಮಾ ಗ್ರಹಿಕೆ ಗುಣಮಟ್ಟ ಹೆಚ್ಚುವುದು ಯಾವಾಗ? ಲಾಂಗು-ಮಚ್ಚು ಹಿಡಿದುಕೊಂಡು ರಕ್ತ ಚೆಲ್ಲಾಡುವ ನಮ್ಮವರ ಸಿನಿಮಾಗಳು ಬಹು ಕೆಳಮಟ್ಟದಲ್ಲಿವೆ. ಬೇರೆ ರಾಜ್ಯದ ಗೆಳೆಯರ ಮುಂದೆ ಮಾತನಾಡುವಾಗ ನಮ್ಮಲ್ಲಿ ಒಳ್ಳೆಯ ಸಿನಿಮಾಗಳೇ ಇತ್ತೀಚೆಗೆ ಬಂದಿಲ್ಲವೆಂಬ ಕಟು ಸತ್ಯ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತದೆ. ನಾವು ದೇಶದ ಉಳಿದ ರಾಜ್ಯಗಳವರ ಜೊತೆಗೆ ಎದೆಯುಬ್ಬಿಸಿ ಮಾತನಾಡುವಂತಹ ಸಿನಿಮಾಗಳು ನಮಗೆ ಕನ್ನಡದಲ್ಲಿ ಬೇಕು. ಸ್ಪರ್ಧೆಯನ್ನು ಒಡ್ಡದೆ ಅದನ್ನು ಸಾಧಿಸುವುದು ಆಗುವದಿಲ್ಲ. ಜಗತ್ತಿನ ಸಕಲೆಂಟು ನುಡಿಯ ಪುಸ್ತಕಗಳನ್ನು ಅನುವಾದ ಮಾಡಿಕೊಂಡರೂ ಕನ್ನಡದ ಸಾಹಿತ್ಯಕ್ಕೆ ಯಾವ ಕೊರೆತೆಯೂ ಆಗಿಲ್ಲ ಅಥವಾ ಅದರಿಂದ ಕನ್ನಡ ಸಂಸ್ಕೃತಿ ನಶಿಸಿಯೂ ಇಲ್ಲ. ದೇಶದಲ್ಲಿ ಹೆಮ್ಮೆಯಿಂದ ತಲೆ ಎತ್ತುವಂತೆ ಈವತ್ತಿಗೂ ನಮ್ಮ ಸಾಹಿತ್ಯವಿದೆ. ಎಂಟು ಜ್ಞಾನಪೀಠಗಳನ್ನು ಪಡೆದಿದೆ. ಹಾಗಿದ್ದ ಮೇಲೆ ಸಿನಿಮಾ ರಂಗದಲ್ಲೇಕೆ ಕಳವಳ? ಗಟ್ಟಿ ಕಾಳುಗಳು ಖಂಡಿತಾ ಉಳಿದು ಕೊಳ್ಳುತ್ತವೆ. ಡಬ್ಬಿಂಗ್ ಅನುಮತಿ ಸಿಕ್ಕರೂ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳು ದೇಶ-ವಿದೇಶ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಲೇ ಹೋಗುತ್ತವೆನ್ನುವದರಲ್ಲಿ ನನಗೆ ಅನುಮಾನವಿಲ್ಲ. ಜೊಳ್ಳುಗಳು ಹಾರಿ ಹೋದರೆ ನನಗೆ ಬೇಸರವೇನೂ ಇಲ್ಲ. ಬೇಗನೆ ಡಬ್ಬಿಂಗ್ ಬರಲಿ. ಬೇಕಿದ್ದರೆ ಯಾವ ಸಿನಿಮಾ, ಯಾವ ಕಾರ್ಯಕ್ರಮಗಳನ್ನು ಕನ್ನಡಕ್ಕೆ ತರಬಹುದೆಂಬುದನ್ನು ನಿರ್ಧರಿಸುವ ಒಂದು ‘ಪ್ರಾಮಾಣಿಕ’ ಜನರ ಗುಂಪನ್ನು ಮಾಡೋಣ. ವಸುಧೇಂದ್ರ]]>

‍ಲೇಖಕರು G

May 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

17 ಪ್ರತಿಕ್ರಿಯೆಗಳು

 1. manasu

  ಟಿವಿ ಚಾನೆಲ್ ಗಳಲ್ಲಿ ಕಾರ್ಟೂನ್ ಕಾರ್ಯಕ್ರಮ ಬರುತ್ತಲಿದ್ದರೆ ಯಾವುದೋ ಒಂದು ಬಟನ್ ಒತ್ತಿದರೆ ತೆಲುಗು, ಹಿಂದಿ, ಇಂಗ್ಲೀಷ್ ಹೀಗೆ ಬದಲಾಗುತ್ತದೆ ನನ್ನ ೧೦ ವರ್ಷದ ಮಗ ಇದನ್ನು ಗಮನಸಿ ಅಮ್ಮ ನೋಡು ಕಾರ್ಟೂನ್ ಎಲ್ಲಾ ತೆಲುಗು, ಹಿಂದಿ, ತಮಿಳು ಎಲ್ಲದರಲ್ಲೂ ಬರುತ್ತೆ ಇದೊಂದೇ ಬಟನ್ ಒತ್ತಿದರೆ ಸಾಕು ನಮಗೆ ಬೇಕಾದ ಭಾಷೇಯಲ್ಲಿ ನೋಡಬಹುದು ಆದರೆ ಕನ್ನಡ ಮಾತ್ರ ಬರೋಲ್ಲ ಯಾಕೆ… ಕನ್ನಡ ಬೇರೆ ಭಾಷೆಗಳ ತರ ಇಲ್ವಾ ಯಾಕೆ ಹಾಗೆ ಮಾಡೋಲ್ಲ ಇದಕ್ಕೆ ನಾವು ಕನ್ನಡ ಕಲಿಯೋದೇ ಇಲ್ಲ ಯಾವಾಗಲೂ ಇಂಗ್ಲೀಷ್ ಹಿಂದಿನೇ ಜಾಸ್ತಿ ಕಲಿತೀವಿ ಅಂತಾ ಹೇಳ್ತಾ ಇರ್ತಾನೆ.
  ವಸುಧೇಂದ್ರ ಸರ್ ಹೇಳಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಅನುವಾದಗಳು ನೆಡೆಯುತ್ತಲೇ ಇವೆ ಹಾಗಂತ ಕನ್ನಡ ಸಾಹಿತ್ಯಕ್ಕೇನು ಕೊರತೆಯಾಗಿಲ್ಲ… ಡಬ್ಬಿಂಗ್ ಇರಬೇಕು ಅದರಲ್ಲೂ ಸಮಾಜದ ಒಳಿತಿಗೆ ನೆಡೆಯುತ್ತಿರುವ ಒಳ್ಳೆಯ ಕಾರ್ಯಕ್ರಮಗಳು ಬರುವುದಾದರೆ ಏಕಾಗಬಾರದು.

  ಪ್ರತಿಕ್ರಿಯೆ
 2. Anil

  ————————————————–
  ೫ ಸೆಪ್ಟೆಂಬರ್ ೨೦೧೨ :
  ಡಬ್ಬಿಂಗ್ ವಿವಾದಕ್ಕೆ ತೆರೆ : ಡಬ್ಬಿಂಗ್ ಗೆ ಹಸಿರು ನಿಶಾನೆ
  ೪ ಅಕ್ಟೋಬರ್ ೨೦೧೨ :
  ಡಬ್ಬಿಂಗ್ ಕಾನೂನು : ಸ್ವಂತಂತ್ರ ‘ಪ್ರಾಮಾಣಿಕ’ ಸಮಿತಿ ರಚನೆ
  ೧ ನವೆಂಬೆರ್ ೨೦೧೨ :
  ಡಬ್ಬಿಂಗ್ ಸಮಿತಿಗೆ ಸಾಹಿತಿಗಳ ಆಯ್ಕೆ : ಸಿ ಎ೦
  ಡಿಸೆಂಬರ್ ೨೦೧೨ ಸುದ್ದಿಗಳು :
  – ಕನ್ನಡಕ್ಕೆ ಬರಲಿರುವ ‘ಮಾಲ್ಗುಡಿ ಡೇಸ್’
  – ಕನ್ನಡದಲ್ಲಿ ‘ಐಸ್ ಏಜ್’ : ನೋಡಿ ಸಂತಸಪಟ್ಟ ಚಿಣ್ಣರು
  ಮಾರ್ಚ್ ೨೦೧೩ ಸುದ್ದಿಗಳು :
  – ಡಬ್ಬಿಂಗ್ ಪ್ರಮಾಣೀಕರಣ ಸಮಿತಿಯಲ್ಲಿ ಒಡಕು , ವಿಚಾರೆಧಾರೆಯಲ್ಲಿ ಗೊಂದಲ
  – ಡಬ್ಬಿಂಗ್ ಸಮಿತಿಯಿಂದ ವಸುಧೇಂದ್ರ ರಾಜಿನಾಮೆ
  ೧ ಏಪ್ರಿಲ್ ೨೦೧೩:
  – ‘ಡಬ್ಬಿಂಗ್’ ಸಮಿತಿ ಚಲನಚಿತ್ರ ಮಂಡಳಿ ಕಾರ್ಯವ್ಯಾಪ್ತಿಗೆ
  ಜೂನ್ ೨೦೧೩ ಸುದ್ದಿಗಳು:
  – ಕನ್ನಡದ ‘ಜವಾನಿ’ಯಲ್ಲಿ ಶೀಲಾ !!
  – ಕನ್ನಡಕ್ಕೆ ಬಂದ ‘ಟೈಟಾನಿಕ್ 3 ಡಿ’
  ಆಗಸ್ಟ್ ೨೦೧೩ ಸುದ್ದಿಗಳು:
  – ರಜನಿಯ ಮುಂದಿನ ಚಿತ್ರ ಕನ್ನಡಕ್ಕೆ ಡಬ್
  – ಬರಲಿದ್ದಾರೆ ಮೋಹನ್ ಲಾಲ್ !!
  – ಡಬ್ಬಿಂಗ್ ಕಾನೂನಿಗೆ ತಿದ್ದುಪಡಿ : ಧಾರಾವಾಹಿಗಳ ಡಬ್ಬಿಂಗ್ ಗೆ ಅನುಮತಿ
  – ಡಬ್ಬಿಂಗ್ ನಿಲ್ಲದಿದ್ದರೆ ಹೋರಾಟ : ಕನ್ನಡ ಚಲನಚಿತ್ರನಟರ ಸಂಘ
  ಅಕ್ಟೋಬರ್ ೨೦೧೩ ಸುದ್ದಿಗಳು:
  – ಚಿತ್ರಮಂದಿರದ ಮುಂದೆ ದಾಂಧಲೆ : ಇಬ್ಬರು ಚಿತ್ರನಟರ ಬಂಧನ
  – ರಾಜ್ಯ ಚಲಚಿತ್ರ ಪ್ರಶಸ್ತಿ ಪ್ರಕಟ : ‘ಉತ್ತಮ ಡಬ್ಬಿಂಗ್ ಚಿತ್ರ’ ಪ್ರಶಸ್ತಿ ಸೇರ್ಪಡೆ
  ೧ ನವೆಂಬರ್ ೨೦೧೩ :
  – ಉತ್ತಮ ಡಬ್ಬಿಂಗ್ ಚಿತ್ರ : ತಲಾಶ್ , ಉತ್ತಮ ಡಬ್ಬಿಂಗ್ ಕಲಾವಿದ : ಸುದೀಪ್
  ————————————————-
  ಅಲ್ಲಿಗೆ ‘ಉದಯವಾಯಿತು ನಮ್ಮ ಚೆಲುವ ಕನ್ನಡನಾಡು’ !!!

  ಪ್ರತಿಕ್ರಿಯೆ
  • ಆದಿ ಜೀವರತ್ನ

   ಅನಿಲ ಅವರೆ ವೀಣಾ ಮಲಿಕ್ ಕನ್ನಡತಿಯೇ ಅಥವಾ ವಿದ್ಯಾ ಬಾಲನ್ ಕನ್ನಡತಿಯೇ ?
   ಎರಡನೆಯಾಕೆ ನಟಿಸಿದ ಮೂಲ ಹಿಂದಿ ಚಿತ್ರದ ಭಾಗಶಹ ಕದಿಯಲಪ್ಡುವ ಕನ್ನಡ ಅವತರಣಿಕೆಯಲ್ಲಿ ಮೊದಲು ಹೆಸರಿಸಲ್ಪಟ್ಟ ಪಾಕಿಸ್ತಾನಿ ನಟಿ ನಟಿಸುವುದು ಖಾತರಿಯಾಗಿದೆ, ಇದ್ರಲ್ಲಿ ಕನ್ನಡತನ ಯಾವುದು ? ಸಹಜತೆ ಯಾವುದು? ಪ್ರಾಮಾಣಿಕತೆ ಯಾವುದು? ವೃತ್ತಿಪರಥೆ ಯಾವುದು? ಅಥವಾ ಇವರಿಬ್ಬರೂ ಕನ್ನಡದಲ್ಲಿ ನಟಿಸದoತೆ ತಡೆಯುವ ಶಕ್ತಿ ತಮಗಿದೆಯೇ? ಇಂತಹ ಪರಿಸ್ಥಿಯಲ್ಲಿ ಡಬ್ಬಿಂಗ್ ಬೇಡ ಎಂಬ ಹುಂಬತನ ಮತ್ತು ಮೌಡ್ಯತೆಯ ಘೋಷ ಯಾಕೆ?
   ಕನ್ನಡದ ಮತ್ತು ಕನ್ನಡಕ್ಕೆ ಡಬ್ಬಾದ ಚಿತ್ರಗಳ ನಡುವೆ ಸ್ಪರ್ದೆ ನಡೆಯಲು ಬಿಡಿ ( ನಿಮ್ಮ ಐ ಟಿ ಯಲ್ಲಿ ನೀವು ಕನ್ನಡೇತರರೊಡನೆ ಸ್ಪರ್ಧಿಸಿದಂತೆಯೆ) ಹೊಟ್ಟು ತೂರೀ ಕಾಳು ಮಾತ್ರ ಉಳಿಯಲಿ. ಪಡೆಯುವವರು ಜ್ಞಾನ ಪಡೆಯಲಿ ಬಿಡುವವರು ಬಿಡ್ಲಿ. ಹೂವಿನೊಡನೆ ನಾರು ಮುಳ್ಳು ಬರುವುದೆಂಬ ಭಯವೆ? ಬೆoಗಳೂರಿನ ನಾಯಕರೊ ತಮಿಳಿನ ದೊಣ್ಹೆನಾಯಕರೋ ಅಥವಾ ಹಾಲಿವುಡ್ನ ಪುಂಗಿನೋ ಬಾಲಿವುಡ್ನ ಪುಂಗಿನೋ ಎಲ್ಲವು ಕನ್ನಡದಲ್ಲೇ ಕೇಳಲಿ, ಎಲ್ಲ್ರರ ಬಂಡವಾಳ ಕನ್ನಡದಲ್ಲೇ ಬಯಲಾಗಲಿ ಬಿಡಿ.
   ಆತುರಗಾರನoತೆ ಈಗಲೇ ಯಾಕೆ ಜ್ಯೋತಿಷ್ಯ ಬರೆಯುತ್ತೀರೀ? ಬಿಟ್ಟು ಬಿಡಿ, ಕನ್ನಡದ ಕೊರಳನು ಬಿಟ್ಟು ಬಿಡಿ.

   ಪ್ರತಿಕ್ರಿಯೆ
 3. Priyank

  ನಲವತ್ತು ವರ್ಷಗಳ ಹಿಂದೆ ಡಬ್ಬಿಂಗ್ ಬ್ಯಾನ್ ಮಾಡಲಾಗಿತ್ತು ಅಂತಾರೆ.
  ಆಗ, “ಕನ್ನಡಕ್ಕೆ ಸಿನೆಮಾ ಡಬ್ ಮಾಡೋ ಹಾಗಿಲ್ಲ” ಅಂತ ಬ್ಯಾನ್ ಮಾಡುದ್ರು.
  ಆಮೇಲೆ, ಟೀವಿ ಬಂತು. ಅದಿಕ್ಕೂ ಬ್ಯಾನ್-ಅನ್ನು ವಿಸ್ತರಿಸಿದರು.
  ೨೦೦೫-ರಲ್ಲಿ ಹುಟ್ಟಿಕೊಂಡ ಯುಟ್ಯೂಬಿಗೂ ಈಗ ಬ್ಯಾನ್ ವಿಸ್ತರಿಸಿದಾರೆ.
  ಕನ್ನಡಕ್ಕೆ ಡಬ್ ಆಗಿದ್ದ “ಸತ್ಯಮೇವ ಜಯತೆ” ಕಾರ್ಯಕ್ರಮವನ್ನು ೩೦,೦೦೦ ಕನ್ನಡಿಗರು ಇಷ್ಟಪಟ್ಟು ನೋಡಿದ್ದೇ ಈ ಬ್ಯಾನಿಗೆ ಕಾರಣವಾಗಿದೆ.

  ಪ್ರತಿಕ್ರಿಯೆ
 4. Prashanth P Khatavakar

  ವಿಚಾರ ತುಂಬಾ ಚೆನ್ನಾಗಿದೆ.. ಆದರೆ ಈ ಡಬ್ಬಿಂಗ್ ಮಾಡುವುದರಿಂದ ಯಾರಿಗೆ ಮಾತು ಏಕೆ ನಷ್ಟ ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ.. ಸತ್ಯವಾಗಿ ನೋಡಿದಾಗ ನಷ್ಟ ಹೊಂದುವವರು ಯಾರೂ ಇಲ್ಲ.. ಸುಮ್ಮನೆ ನಷ್ಟ ಎನ್ನುವ ಸುಳ್ಳು ಸುದ್ದಿ .. ನಿಜವಾದ ನಷ್ಟವನ್ನು ಪ್ರಾಮಾಣಿಕವಾಗಿ ಲೆಕ್ಕಪತ್ರಗಳ ಸಹಿತ ತೋರಿಸಿಕೊಡಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ.. ಕೆಲವೇ ಉದಾಹರಣೆಗಳ ಮಾತು ಹಿಡಿದು ಚರ್ಚೆ ನಡೆದಿದೆಯೇ ಹೊರೆತು ಕನ್ನಡದ ಬೆಳವಣಿಗೆಯ ಆಲೋಚನೆಯ ಉದ್ದೇಶ ಆಗುತ್ತಲೇ ಇಲ್ಲ.. 🙂
  (ಮುಂದುವರೆಯುವುದು… )

  ಪ್ರತಿಕ್ರಿಯೆ
 5. ರೇಣುಕಾ ಮಂಜುನಾಥ್

  ವಸುಧೇಂದ್ರ ಅವರ ಮಾತನ್ನು ನಾನೂ ಅನುಮೋದಿಸುತ್ತೇನೆ! ಕನ್ನಡದಲ್ಲಿ HIT ಆದ ಸಿನಿಮಾಗಳೂ ಸಹ ನಮ್ಮಂತಹ ಬೇರೆ ಬಾಷೆ ಸಿನಿಮಾನೋಡುವವರಿಗೆ ರುಚಿಸದು! ಏಕೆಂದರೆ ಅದರಲ್ಲಿರಬೇಕಾದ ಯಾವ ರಸವೂ ಇರುವುದಿಲ್ಲ. professionals ಯಾರೂ ಕನ್ನಡದಲ್ಲಿ ಸಿನಿಮಾ ತೆಗೆಯಿತ್ತಿಲ್ಲ. ಹಾಗಾಗಿ ನಮ್ಮ ನೋಡುಗರೂ ಸಹ ತಮ್ಮ ಅಭಿರುಚಿಯನ್ನೇ ಕಳೆದುಕೊಂಡಿದ್ದಾರೆ! ಹಾಗಾಗಿ ಯಾವ ಆಧಾರದ ಮೇಲೆ ಕನ್ನಡದಲ್ಲಿ ಚಿತ್ರಗಳು HIT ಆಗುತ್ತಿವೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ! ‘ಡಬ್ಬಿಂಗ್’ ಬಂದರಷ್ಟೇ ನಮ್ಮಲ್ಲಿ ಗುಣಮಟ್ಟ ಸುಧಾರಿಸಲು ಸಾಧ್ಯ!

  ಪ್ರತಿಕ್ರಿಯೆ
 6. Deepu

  Idu samskruthi vishaya mathra alla, esto kannada janaru kannada film industry mele depend agidare, egagle namma kannada films ella reethi indanu thulithakke olgagide, olle film illa anthalla olle film idru jana nodalla, film nodadanna prestige issue madkondidare, otadalli spardhe irbeku nija, adre nadyakke hodaga namma neldalle nookoriruvaga ododralli bagavahisi andre????? intha sanniveshadalli dubbing estu sari????

  ಪ್ರತಿಕ್ರಿಯೆ
 7. Vasanth

  ಮೇಲೆ ಓದಿ ನೋಡಿ (Deepu) ಪ್ರಭು ಯಾರ್ಗೋ ಹತ್ತಲವು ಮಂದಿಗೆ ಲ ಕೋಟಿ ಜನರ ಒತ್ತಾಸೆಯನ್ನು ಅಡವಿಡಲು ನಾವು ಸಿದ್ದರಿಲ್ಲ. ಕನ್ನಡಕ್ಕೆ ಹೊಸ ತನ ಬರಬೇಕು ಕನ್ನಡದ ಭಾಷೆ ಎಲ್ಲೆಡೆ ಹಬ್ಬಬೇಕು. ಸಾಧ್ಯವಾದ್ರೆ ನಮ್ಮೊಂದಿಗೆ ಕೈಜೋಡಿಸು Deepu…

  ಪ್ರತಿಕ್ರಿಯೆ
 8. shama, nandibetta

  ವಸುಧೇಂದ್ರ ಅವರಿಗೆ ನಂದೂ ಒಂದು ವೋಟು… & ಸಂದೀಪ್ ಕಾಮತ್ ಹೇಳಿದ್ದು ನಿಜ : ಮುಂದಿನ ಆಕ್ರಮಣ ವಸುಧೇಂದ್ರ ಅವರ ಮೇಲೆ !

  ಪ್ರತಿಕ್ರಿಯೆ
 9. ಎಂ.ಆರ್. ದತ್ತಾತ್ರಿ

  ಡಬ್ಬಿಂಗ್‍ನ್ನು ವಿರೋಧಿಸಿದ್ದ/ವಿರೋಧಿಸುವ ಮಂದಿ – ವರನಟ ರಾಜಕುಮಾರರನ್ನೂ ಸೇರಿಸಿ, ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನವನ್ನೂ ವಿರೋಧಿಸಿ ಡಬ್ಬಿಂಗ್‍ನ ಮೇಲಾದಂತೆ ಅದರ ಮೇಲೂ ಬ್ಯಾನ್ ಹಾಕಿಸಿದ್ದರೆ ಅವರ ಹೋರಾಟಕ್ಕೆ ಒಂದು ದಿಕ್ಕು ಬರುತ್ತಿತ್ತು (ಸರಿಯೋ ತಪ್ಪೋ, ಸಂವಿಧಾತ್ಮಕವೋ ಅಸಂವಿಧಾತ್ಮಕವೋ, ಅದು ಬೇರೇ ವಿಚಾರ). ಇವತ್ತಿನ ವಿಪರ್ಯಾಸವನ್ನು ನೋಡಿ – ಟೈಟಾನಿಕ್‌ ಅಥವಾ ಷಿಂಡ್ಲರ್ಸ್‌ ಲಿಸ್ಟನ್ನು ನೀವು ನಿಮ್ಮ ಊರಿನಲ್ಲಿಯೇ ಇಂಗ್ಲೀಷಿನಲ್ಲಿ ನೋಡಬಹುದು ಆದರೆ ಅವಕಾಶವಿದ್ದರೂ ನಿಮ್ಮ ಮಾತೃಭಾಷೆಯಾದ ಕನ್ನಡದಲ್ಲಲ್ಲ! ಡಬ್ಬಿಂಗ್ ನಿಷೇಧವನ್ನು ಯಾವ ದೃಷ್ಟಿಯಲ್ಲಿ ನೋಡಿದರೂ ನಮ್ಮ ಕನ್ನಡಕ್ಕೆ ಹೇಗೆ ಒಳ್ಳೆಯದಾಗುತ್ತದೆ ಎಂದು ಹೊಳೆಯುವುದಿಲ್ಲ. ವಸುಧೇಂದ್ರ ಹೇಳುತ್ತಿರುವಂತೆ ಸಾಹಿತ್ಯದಲ್ಲಿ ಅನುವಾದವೆಂಬುದು ಇರದಿದ್ದಲ್ಲಿ ಜಗತ್ತಿನ ಅನೇಕ ಶ್ರ‍ೇಷ್ಠ ಕೃತಿಗಳು ನಮ್ಮ ಭಾಷೆಯನ್ನು ತಲುಪುವ ಬೇರೆ ಬಗೆ ಯಾವುದಿತ್ತು? ಟಾಲ್‌ಸ್ಟಾಯ್ ಓದದೆ ನಮಗೆ ನಾವೇ ನಿಷೇಧವನ್ನು ಹೇರಿಕೊಂಡಿದ್ದರೆ ಅದರ ನಷ್ಟ ಯಾರಿಗಾಗುತ್ತಿತ್ತು? ಟಾಲ್‌ಸ್ಟಾಯ್‍ ಸಾಹಿತ್ಯದ ಪ್ರಭಾವವಿರದಿದ್ದಲ್ಲಿ ಮಲೆಗಳಲ್ಲಿ ಮದುಮಗಳು ಥರದ ಶ್ರ‍ೇಷ್ಠ ಕೃತಿ ಎಷ್ಟರ ಮಟ್ಟಿಗೆ ಕನ್ನಡದಲ್ಲಿ ಮೂಡುತ್ತಿತ್ತು? ಅಕ್ಷರಪ್ರಪಂಚದಲ್ಲಿ ಹಾಗಿರುವಾಗ, ಸೃಜನಶೀಲತೆಯಲ್ಲಿ ಸಾಹಿತ್ಯದ ಒತ್ತೊಟ್ಟಿಗೇ ನಿಲ್ಲುವ ದೃಶ್ಯಮಾದ್ಯಮಕ್ಕೇಕೆ ಈ ನಿಬಂಧನ?
  ಹಾಲಿವುಡ್‌ನ ಬಹುಪಾಲು ಚಿತ್ರಗಳು ಹೆಚ್ಚುಕಡಿಮೆ ಇಂಗ್ಲಿಷ್ ಆವೃತ್ತಿಯ ಬಿಡುಗಡೆಯ ಜೊತೆಗೇ ಸ್ಪಾನಿಷ್‌‍ನಲ್ಲಿ ಬರುತ್ತವೆ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಯನ್ನು ಕಾಣುತ್ತವೆ. ಆದರೂ, ಹಾಲಿವುಡ್‌ನ ಪಕ್ಕದಲ್ಲಿದ್ದುಕೊಂಡೂ, ಮೇಕ್ಸಿಕೋದ ಸಿನಿಮಾ ಉದ್ದಿಮೆ ಚೆನ್ನಾಗಿಯೇ ಇದೆ. ಸ್ಪರ್ಧೆಯಲ್ಲಿ ಒಳ್ಳೆಯ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ಅಲ್ಲಿನ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಹಾಲಿವುಡ್ ಸಿನಿಮಾ ಮಾಡುವಷ್ಟರ ಮಟ್ಟಿಗೆ ಈ ಅನುಬಂಧ ಬೆಳೆದಿದೆ. ಹಾಲಿವುಡ್ ತನ್ನ ಲ್ಯಾಟಿನ್ ಸೆನ್ಸಿಬಿಲಿಟಿಯನ್ನು ಕಂಡುಕೊಂಡಂತೆ ಬಾಲಿವುಡ್ ಕೂಡ ಕನ್ನಡ ಸೆನ್ಸಿಬಿಲಿಟಿಯನ್ನು ಕಂಡುಕೊಳ್ಳಬಹುದು. ವೀಕ್ಷಕರು ಹೆಚ್ಚಾದಂತೆ ಆಮೀರ್ ಖಾನ್‍ ಕೂಡ ನಮ್ಮದೇ ಸಮಸ್ಯೆಗಳನ್ನು ತನ್ನ ಕಾರ್ಯಕ್ರಮಗಳಲ್ಲಿ ಚರ್ಚಿಸಬಹುದು. ಕಲೆಯು ಭಾಷೆಯ ಬಂಧವನ್ನು ಬಿಡಿಸಿಕೊಳ್ಳುವ ದಾರಿಯನ್ನು ಕಂಡುಕೊಳ್ಳುವಾಗ ನಾವೇಕೆ ಅಡ್ಡನಿಲ್ಲಬೇಕು?
  ಪ್ರಜಾಪ್ರಭುತ್ವದಲ್ಲಿ ನಿರ್ಬಂಧವೆನ್ನುವುದು ಸಲೀಸಾಗಿ ಹೊಂದಿಕೊಳ್ಳುವಂತದ್ದಲ್ಲ. ಒಮ್ಮೊಮ್ಮೆ ನಿರ್ಬಂಧಗಳು ವ್ಯಕ್ತಿಯ ಸ್ವಾತಂತ್ರದೊಂದಿಗೆ ಆಟವಾಡುತ್ತವೆ. ಆಗಾಗ ನಡೆಯುವ ಪುಸ್ತಕಗಳ ಮೇಲಾಗುವ ನಿರ್ಬಂಧಗಳನ್ನೂ ಸೇರಿಸಿ ಈ ಮಾತನ್ನು ಹೇಳುತ್ತಿದ್ದೇನೆ. ಯಾವ ಪುಸ್ತಕಗಳನ್ನು ಮಾತ್ರ ಓದಬೇಕು ಮತ್ತು ಯಾವ ಸಿನಿಮಾಗಳನ್ನಷ್ಟೇ -ಮತ್ತು ಯಾವ ಭಾಷೆಯಲ್ಲಿ- ನೋಡಬೇಕು ಎನ್ನುವ ನಿರ್ಧಾರಗಳನ್ನು ನನ್ನ ಪರವಾಗಿ ಬೇರೆಯವರು ಏಕೆ ಮಾಡಬೇಕು?
  ದತ್ತಾತ್ರಿ

  ಪ್ರತಿಕ್ರಿಯೆ
 10. Anil

  ಕೆಲವು ಅಭಿಪ್ರಾಯಗಳು :
  ೧. ಕನ್ನಡತನವನ್ನು ಬರೀ ಚಿತ್ರರಂಗಕ್ಕೆ ಸೀಮಿತ ಮಾಡಬಾರದು.
  ೨. ‘ಡಬ್ಬಿಂಗ್ ‘ ಮತ್ತು ‘ಅನುವಾದಿತ’ / ‘ಪ್ರೇರೇಪಿತ’ ಚಿತ್ರ – ಕೃತಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗೋದು ಅಷ್ಟು ಸಮಂಜಸವಲ್ಲ
  ಕನ್ನಡತನ – ಕನ್ನಡ ಬರೀ ಚಿತ್ರ – ಕಿರುತೆರೆಗಳಿಂದ ಬದುಕುವಂತಹ ಸ್ಥಿತಿ ಇನ್ನೂ ಬಂದಿಲ್ಲ , ಆದರೆ ಚಿತ್ರರಂಗ ಹಾಗೂ ಕಿರುತೆರೆಯನ್ನು ಒಂದು ಸೃಜನಾತ್ಮಕ ಉದ್ದಿಮೆಯನ್ನಾಗಿ ನೋಡಿದಾಗ, ಲಂಗು ಲಗಾಮಿಲ್ಲದ ಡಬ್ಬಿಂಗ್ ಒಂದಷ್ಟು ಕುಟುಂಬಗಳ ಜೀವನಾಧಾರವನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ …ಅಲ್ಲವೇ?
  ವಸುಧೇಂದ್ರರವರು ಹೇಳಿದ ಹಾಗೆ ಕೆಲವು ಉತ್ತಮ ಕಾರ್ಯಕ್ರಮಗಳು – ಚಿತ್ರಗಳು ಪ್ರಾಮಾಣಿಕವಾಗಿ ಡಬ್ ಆದರೆ ಕನ್ನಡಕ್ಕೆ ಒಳಿತೇ.ಆದರೆ ಅಂತಹ ಪ್ರಾಮಾಣಿಕ ಪ್ರಯತ್ನಗಳು ನಮ್ಮಲ್ಲಿ ಅದೆಷ್ಟರಮಟ್ಟಿಗೆ ಪ್ರಾಯೋಗಿಕ?
  ಇದ್ದ ಅಲ್ಪ- ಸ್ವಲ್ಪ ‘ನಮ್ಮ’ ಜೊಳ್ಳುಗಳು ತೂರಿಹೋಗಿ ದೊಡ್ಡ ಪ್ರಮಾಣದ ‘ಬೇರೆ’ ಜೊಳ್ಳುಗಳು ಬಂದರೆ?
  ಅದೇನೋ ಅ೦ತಾರಲ್ಲ – ‘ಊದೋದು ಕೊಟ್ಟು ಒದರೋದು ತಗೊಂಡ ಹಾಗೆ’ ಆಗಬಾರದು …ಅಲ್ವೇ?

  ಪ್ರತಿಕ್ರಿಯೆ
 11. jeeth

  knnada da nirmpakaru kalape chitragalannu tegedu,news channel galige hana kottu,adbuta chitra embante bimbisuvadakke kone hadabekide…yavde sparde illade iruvdarinda kannada da nirmapakaru mathu nirdesakaru kalape chittra galannu balavatavagi nodisutiddare…dabbing emba bhota kadaru baya biddu olle chitra tegili…hanavidda yavude manga cinema madabahudu emba kala hogali..uthamma chittra nirmisi kannadada mana ulisutiruva Girish Kasaravalli,M.S.Sathyu,P.Shesadri matitara pratibavantara mahatva namma chittrarangake arivagali…

  ಪ್ರತಿಕ್ರಿಯೆ
 12. Pramod ambekar

  Haraduv Hakki tanna swtatradalli harali haralu bidono Yake EE bhandahan.
  My one vote to Vasudendra
  Ambekar Pramod
  Belgaum
  9844039532

  ಪ್ರತಿಕ್ರಿಯೆ
 13. Deepu

  @anil, nija nimma matannu oplebeku, i vote for you, navu ramayana mahabaratha vannella hindi yalle nodiddeve, ega dubbing beke beku anno anivaryathe nammallilla.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: