ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು

-ಡಿ ಎಸ್ ರಾಮಸ್ವಾಮಿ

ಬೆಂಕಿ ಕಡ್ಡಿ

ಕೃತಿ: ಅವ್ವನ ಅಂಗನವಾಡಿ

ಕವಿ: ಅರುಣ್ ಜೋಳದ ಕೂಡ್ಲಿಗಿ

ವರ್ಷ: 2010

ಪ್ರಕಾಶಕರು: ಅಹರ್ನಿಶಿ, ಶಿವಮೊಗ್ಗ

ಪುಟಗಳು 104, ಬೆಲೆ ರೂ 60/-

ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪಧರ್ೆಗಳಲ್ಲೂ ತಮ್ಮ ಕವಿತೆಗಳಿಗೆ ಬಹುಮಾನಗಳನ್ನು ಪಡೆಯುವ ಮೂಲಕ ಎಡ ಪಂಥೀಯ ಆಶಯಗಳನ್ನು, ಸಮಾನತೆಯ ಕನಸುಗಳನ್ನೂ ತಮ್ಮ ಬರಗಳುದ್ದಕ್ಕೂ ಕಾಣಿಸುತ್ತಲೇ ಬಂದವರು. ಈಗಾಗಲೇ ‘ನೆರಳು ಮಾತಾಡುವ ಹೊತ್ತು’ (2004) ಕವನ ಸಂಕಲನವನ್ನೂ, ಮತ್ತು ‘ಸೊಂಡೂರಿನ ಭೂ ಹೋರಾಟಗಳು’ (2008) ಅಧ್ಯಯನ ಕೃತಿಯನ್ನೂ ಪ್ರಕಟಿಸಿ ಸಾರಸ್ವತ ಲೋಕದಲ್ಲಿ ದಾಖಲಾಗಿರುವವರು. ಅವರ ಎರಡನೇ ಕವನ ಸಂಕಲನ ‘ಅವ್ವನ ಅಂಗನವಾಡಿ’.

ಒಟ್ಟು 41 ಪದ್ಯಗಳೆಂದು ಕರೆದಿರುವ ರಚನೆಗಳು ಈ ಸಂಕಲನದಲ್ಲಿವೆ. ಕಾವ್ಯ ಪರಂಪರೆಯ ಬೆರಗು ಹುಟ್ಟಿಸುವ ದನಿಗಳನ್ನು ಅಭ್ಯಸಿಸಿ ಆ ಮೂಲಕ ಅದನ್ನು ಪಡೆದ ಕವಿ, ಹಾಗೆ ತನಗೊಲಿದ ತನ್ನದೇ ದನಿಯಲ್ಲಿ ಕವಿತೆ ಕಟ್ಟಬೇಕೆಂಬ ಮತ್ತು ಪ್ರತಿಮೆ/ರೂಪಕಗಳ ಜೊತೆಗೇ ಕವಿಯು ಅನುಸಂಧಾನ ಮಾಡಬೇಕೆನ್ನುವ ‘ಪುರಾತನ’ ಮಾತುಗಳನ್ನೂ ಈ ಕವಿ ನೇರವಾಗಿ ಮತ್ತು ನಯವಾಗಿ ತಿರಸ್ಕರಿಸಿರುವುದು ಮೊದಲ ಓದಿಗೇ ಶೃತವಾಗುವ ಅಂಶಗಳು. ಏಕೆಂದರೆ ಕವಿತೆಯ ಕಟ್ಟುವಿಕೆಗೆ ಕವಿಯಾದವನಿಗೆ ಇರಲೇಬೇಕೆಂದು ಬಹುತೇಕರು ನಂಬಿರುವ ‘ಕವಿಸಮಯ’ ಮತ್ತು ಕಾವ್ಯಾನ್ವೇಷಣೆಯ ದೀರ್ಘಪಥವನ್ನು ಬೇಕೆಂತಲೇ ಬಿಟ್ಟುಕೊಟ್ಟು ತನಗೊಲಿದ ಕಾಲುದಾರಿಯಲ್ಲೇ ಇಲ್ಲಿನ ಎಲ್ಲ ಕವಿತೆಗಳನ್ನೂ ಅರುಣ ಅರಳಿಸಿದ್ದಾರೆ.

ಮುನ್ನುಡಿಕಾರ ಕೆ.ವಿ.ನಾರಾಯಣರವರು ಗುತರ್ಿಸಿರುವಂತೆ ಈ ಕಾಲದ ಹೊಸ ಬರಹಗಾರ ಹಳೆಯ ಕಾಲದವರ ಹಳಹಳಿಕೆಯ ಮಾತುಗಳು ನುಸುಳದಂತೆ ಇಲ್ಲವೇ ಎಲ್ಲರೂ ಮೆಚ್ಚಿದಂತೆ, ಯಾರಿಗೂ ಗೊತ್ತಾಗದಂತೆ ಬರೆಯುವ ಬಗೆಯಿಂದ ಇಲ್ಲಿನ ಪದ್ಯಗಳು ತಪ್ಪಿಸಿಕೊಂಡಿವೆ. ಅರುಣ ವಯಸ್ಸು ಮತ್ತು ಅನುಭವದಲ್ಲಿ ಇನ್ನೂ ಚಿಕ್ಕವರು. ಅವರು ಬೆಳೆದು ಬಂದ ವಾತಾವರಣದಲ್ಲಿ ಅವರು ಕಂಡುಂಡ ನೋವು, ಹತಾಶೆ ನಿರಾಶೆಗಳನ್ನು ತಮಗೊಲಿದ ಕಾವ್ಯಮಾರ್ಗದಲ್ಲಿ ಹೇಳಬಯಸಿದ್ದಾರೆ. ಇಲ್ಲಿನ ಎಲ್ಲ ಕವಿತೆಗಳಲ್ಲೂ ಸಂತಸದ ಸುಳಿವಾಗಲೀ, ಆನಂದದ ಕ್ಷಣಗಳಾಗಲೀ ಇಲ್ಲವೇ ಇಲ್ಲ. ಎಲ್ಲ ರಚನೆಗಳ ಹಿಂದೂ ನೋವು ನಿಟ್ಟುಸಿರು ಮತ್ತದಕ್ಕೆ ಮರುಗುವ ಹೃದಯದ ಹಾಡುಗಳಿವೆ. ಆದರೆ ಎಂತಹುದೇ ಕಷ್ಟಕಾರ್ಪಣ್ಯದಲ್ಲಿರುವ ವ್ಯಕ್ತಿಗೂ ಕ್ಷಣಕಾಲದವರೆಗಾದರೂ ಸಂತಸದ ಘಳಿಗೆಗಳಿದ್ದೇ ಇರುವುದರಿಂದ ಈ ಕವಿ ಬೇಕೆಂತಲೇ ಅವನ್ನು ನಿರಾಕರಿಸಿದ್ದಾರೋ ಅಥವ ಪ್ರಯತ್ನಪೂರ್ವಕವಾಗಿ ಬೇಕೆಂತಲೇ ನೋವು-ವಿಷಾದಗಳನ್ನೇ ತಮ್ಮ ಕಾವ್ಯಾಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡಿದ್ದಾರೋ ಎಂಬುದನ್ನು ಕವಿತೆಗಳ ಓದಿನಿಂದಲೇ ಮನಗಾಣಬಹುದು.

ಅವ್ವನ ರಂಗೋಲಿ-ಹೆಸರಿನ ಸಂಕಲನದ ಮೊದಲ ಪದ್ಯದಲ್ಲಿ ತನ್ನವ್ವ ಎಳೆದ ರಂಗೋಲಿಯ ಗೆರೆಗಳನ್ನೇ ದಾರವಾಗಿ ಮಾಡಿಕೊಂಡು ಗಾಳಿಪಟ ಹಾರಿಸುವ ಕವಿ ಫ್ಯಾಂಟಸಿಯ ಲೋಕವೊಂದನ್ನು ಕಟ್ಟಿಕೊಡುತ್ತಲೇ ಆ ದಾರವನ್ನೇ ಹಗ್ಗವನ್ನಾಗಿ ಮಾಡಿಕೊಂಡು ಅವ್ವನನ್ನು ಬಯ್ಯುವ ತನ್ನಪ್ಪನನ್ನು ಹೆಡೆಮುರಿ ಕಟ್ಟುತ್ತಾನೆ. ಚಿತ್ರಪಟದ ಗಾಂಧಿಗೆ ನೂಲುವ ದಾರ ಖಾಲಿಯಾಗಿದೆಯೆಂದು ರಂಗೋಲಿಯಿಂದ ಪಡೆದ ದಾರವನ್ನೇ ನೀಡುವಾಗ ಅವ್ವನಿಗೊಂದು ಸೀರೆ ನೇಯ್ದು ಕೊಡಬೇಕೆಂಬ ಷರತ್ತು ಹಾಕುತ್ತಾನೆ. ಪದ್ಯ ಇಂಥ ರಮ್ಯ ಕಲ್ಪನೆಯಿಂದ ತೆರೆದುಕೊಳ್ಳುವುದಾದರೂ ಮೊದಲೇ ನಿರ್ಧರಿಸಿದ ಅಂತ್ಯ ಪದ್ಯಕ್ಕೆ ಬಂದೆದಗುವುದರಿಂದ, ಪದ್ಯ ಎದೆಗಿಳಿಯದೇ ಬರಿಯ ಫ್ಯಾಂಟಸಿಯ ಲೋಕವೊಂದನ್ನು ಮಾತ್ರ ಕಾಣಿಸಿಬಿಡುತ್ತದೆ.

ವ್ಯಂಗ್ಯದ ಮೊನಚನ್ನು ತಮ್ಮ ಕವಿತೆಗಳಿಗೆ ಆಯುಧವನ್ನಾಗಿ ಮಾಡಿಕೊಂಡಿರುವ ಈ ಕವಿ ‘ವಿಶ್ವ ವಿದ್ಯಾಲಯದ ಸೆಮಿನಾರಿನಲ್ಲಿ’, ‘ರೆಕ್ಕೆಗಳೇ ತ್ರಿಶೂಲವಾದ ದೇಶದಲ್ಲಿ’, ‘ಬಯಲ ಬಸಿರಿನ ಕನವರಿಕೆ’, ಪದ್ಯಗಳಲ್ಲಿ ವ್ಯಂಗ್ಯದ ಮೂಲಕವೇ ಈ ಸಮಾಜ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವ ಆಚರಣೆಗಳಿಗೆ ಉತ್ತರವನ್ನು ನೀಡುತ್ತಾರಾದರೂ, ಏಕೋ ಈ ಉತ್ತರಗಳೆಲ್ಲ ಚಳವಳಿಗಾರರ ಒಣ ಭಾಷಣದಂತೆ ಶುಷ್ಕವಾಗಿವೆಯೇ ವಿನಾ ಕವಿತೆಯಾಗುವಲ್ಲಿ ಸೋತಿವೆ.

ನೆಲದ ನೆತ್ತಿಯ ಮೇಲೆ, ಬಯಲೆಂದರೆ ಬರೀ ಬಯಲಲ್ಲ ಪ್ರಭುವೇ ಪದ್ಯಗಳು ಈ ಕವಿ ಮುಂದೆ ಬೆಳೆಯಬಹುದಾದ ಸಾಧ್ಯತೆಗಳನ್ನು ಹೇಳಿದರೆ ಬಿಡುಗಡೆಯ ಬಿಡಿ ಪದ್ಯಗಳು, ಮುಖವಿರದ ಚಿತ್ರಗಳು, ಮಾತುಗಳ ಸುಟ್ಟವರು ಕವಿತೆಗಳಲ್ಲಿ ಅನೇಕ ಸಾಧ್ಯತೆಗಳನ್ನು ಕಾಣಿಸುತ್ತಾರೆ. ಹುಲಿಯಾಗಲು ಬಣ್ಣ ಹಚ್ಚಿದವರು ಥರದ ಮೂರು ನಾಲ್ಕು ಪದ್ಯಗಳು ಬೇಕೆಂತಲೇ ವ್ಯವಸ್ಥೆಯನ್ನು ಅಣಕಿಸುವ ಸಲುವಾಗಿ ಬರೆದಂತೆ ಭಾಸವಾಗುತ್ತವೆ.

ತನ್ನ ಸ್ವಂತ ಅವ್ವನ ಬದುಕಿನ ಪುಟಗಳನ್ನೇ ಅವ್ವನ ಅಂಗನವಾಡಿ ಶೀಷರ್ಿಕೆಯಲ್ಲಿ ಪದ್ಯವಾಗಿಸಿರುವ ಕವಿ, ಇತ್ತ ಲಯಗಾರಿಕೆಯೂ ಇಲ್ಲದ ಅತ್ತ ಕಥನ ಕವನಗಳಲ್ಲಿರುವ ಕುತೂಹಲದ ಅಂಶಗಳನ್ನೂ ಹಿಡಿದಿಡದೇ ತನ್ನವ್ವನ ಬದುಕನ್ನು ನೆನೆಯುತ್ತಾರೆ. ಅವರ ಮಹತ್ವಾಕಾಂಕ್ಷೆಯ ಪದ್ಯ ಇದಾಗಿದೆಯೆಂಬುದು ಸಂಕಲನವನ್ನು ಇದೇ ಹೆಸರಿನಿಂದ ಕರೆದಿರುವುದು ಕಾರಣವಾಗಿದೆ.

ತಮ್ಮ ಆಶಯಗಳನ್ನು ವೈಭವೀಕರಿಸಲು ಮತ್ತು ತಾವು ನಂಬಿದ ಸಿದ್ಧಾಂತಗಳನ್ನು ಪ್ರತಿಪಾದಿಸಲು ಅರುಣ ಸಂಕಲನದ ರಚನೆಗಳಿಗೆ ಕೈ ಹಾಕಿದ್ದಾರೆ. ವಾಚ್ಯವಾಗಿಯೇ ಉಳಿದುಬಿಡುವ ಇಲ್ಲಿನ ಹಲವು ರಚನೆಗಳ ವಿನ್ಯಾಸ ಓದಿನ ಕ್ಷಣದಲ್ಲಿ ಕಾಡುವುವಾದರೂ ಮರು ಓದಿಗೆ ನಮ್ಮನ್ನು ಹಿಡಿದಿಡುವುದರಲ್ಲಿ ಸೋತಿವೆ. ಅಕಾರಣ ಎಲ್ಲ ತೊಂದರೆಗಳಿಗೂ ಅನ್ಯರನ್ನೇ ಸಂಶಯಿಸುವ/ಹೊಣೆಗಾರರನ್ನಾಗಿಸುವ ಮತ್ತು ಸಾಮಾಜಿಕ ಅಸಮಾನತೆಗೆ ಪ್ರಭುತ್ವವನ್ನೇ ಗುರಿಮಾಡುವ ಬಹುತೇಕರು ಇಂಥ ಸಮಸ್ಯೆಗಳಿಗೆ ಪಯರ್ಾಯವನ್ನು ಹುಡುಕದೇ/ಕಟ್ಟಿಕೊಡದೇ ಬರಿಯ ಸಂಕಟದ ಪ್ರದರ್ಶನಗಳಿಂದಲೇ ಸಮಾಧಾನಗೊಂಡರೆ/ಗೊಳ್ಳುತ್ತಲೇ ಹೋದರೆ, ‘ಕಾವ್ಯ’ ಮುಂದಿನ ದಿನಗಳಲ್ಲಿ ಸಾಗಬೇಕಾದ ಹೊರಳುದಾರಿಗಳ ಬಗ್ಗೆ ಆತಂಕಗಳೂ ಉಂಟಾಗುತ್ತವೆ.

-ಡಿ.ಎಸ್.ರಾಮಸ್ವಾಮಿ

‍ಲೇಖಕರು avadhi

July 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. shridhar hegde bhadran

    houdu ramaswamiyavare, itteecina aneeka samkalanagaLalli naanoo gamanisiruv, baree nOvugaLanne abhivyaktisuvudu, heegEke ennisittu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: