‘ವಾಶಿಂಗ್ ಪೌಡರ್ ನಿರ್ಮಾ’

-ಟೀನಾ

‘ವಾಶಿಂಗ್ ಪೌಡರ್ ನಿರ್ಮಾ’ದ ಜಾಹೀರಾತು ಯಾರಿಗೆ ನೆನಪಿಲ್ಲ? ದೂರದರ್ಶನ ಆಗಷ್ಟೆ ಮನೆಮನೆಗಳಲ್ಲಿ ಇಣುಕುತ್ತಿದ್ದ ಕಾಲ. ತಲೆಗೆ ರಿಬ್ಬನ್ನು ಕಟ್ಟಿ ಕೂದಲು ಇಳಿಬಿಟ್ಟ ಹುಡುಗಿಯೊಬ್ಬಳು ಬೆಳ್ಳಗಿನ ಫ್ರಾಕು ಧರಿಸಿ ಗಿರಿಗಿರಿ ಬುಗುರಿಯಂತೆ ತಿರುಗುವ ಜಾಹೀರಾತು ನೋಡಿ ನಾವು ವಿಪರೀತ ಮೋಹಕ್ಕೊಳಗಾಗುತ್ತಿದ್ದೆವು. ನಮ್ಮ ಹಳೆಯ ಫ್ರಾಕುಗಳ ಅಂಚುಗಳನ್ನು ಹಿಡಿದು ‘ದೂಧ್ ಸಿ ಸಫೇದಿ..ರಂಗೀನ್ ಕಪಡಾ ಭೀ ಖಿಲ್ ಖಿಲ್ ಜಾಯೇ’ ಎಂದು ಅಪಸ್ವರದಲ್ಲಿ ಅರಚಿಕೊಳ್ಳುತ್ತ ಆ ಹುಡುಗಿಯಂತೆಯೆ ತಿರುಗಲು ಹೋಗಿ ತಲೆಸುತ್ತು ಬಂದು ಕುಕ್ಕರಿಸಿ ಮುಖಮುಖ ನೋಡಿಕೊಂಡು ನಗಾಡಿಕೊಳ್ಳುತ್ತಿದ್ದುದುಂಟು. ಆಗ ಟಿ.ವಿ.ಯಲ್ಲಿ ಯಾವ ಹೊಸ ಪ್ರಾಡಕ್ಟು ಬಂದರೂ ಕೊಳ್ಳೋಣವೆಂದು ಅಮ್ಮನ ಬಳಿ ಕಾಡುವುದಿತ್ತು-ಹೆಚ್ಚಾಗಿ ಶಾಂಪೂ, ಸೋಪು, ಕ್ರೀಮುಗಳಿಗಾಗಿ. ಶ್ರೀಮಂತರ ಮನೆಯ ಹುಡುಗಿಯರು ತಮ್ಮ ಅಪ್ಪ ಅಮ್ಮಂದಿರು ಕೊಡಿಸಿದ ಹೊಸವಸ್ತುಗಳನ್ನು ಬ್ಯಾಗಿನಲ್ಲಿ ಬಚ್ಚಿಟ್ಟುತಂದು ಕ್ಲಾಸಿನಲ್ಲಿ ಪ್ರದರ್ಶಿಸುವಾಗ ನಮ್ಮ ಬೇಡಿಕೆಗಳಿಗೆ ಸೊಪ್ಪುಹಾಕದ ನಮ್ಮ ಮಿಡಲ್ ಕ್ಲಾಸ್ ಪೇರೆಂಟುಗಳ ಮೇಲೆ ಒಮ್ಮೊಮ್ಮೆ ಕೋಪವುಕ್ಕಿದರೂ ಪ್ರಯೋಜನವಿಲ್ಲವೆಂದು ಸುಮ್ಮನಾಗುತ್ತ ಇದ್ದೆವು. ನಮ್ಮ ಟಿ.ವಿ. ಹುಚ್ಚಿಗೆ ನಮ್ಮ ಅಪ್ಪಮ್ಮಂದಿರು ಹಿಡಿಶಾಪ ಹಾಕಿಕೊಂಡು ಅವರೂ ಸುಮ್ಮನಾಗುತ್ತಿದ್ದರು. ಈ ಜಾಹೀರಾತುಗಳಲ್ಲಿ ಕಾಣಬರುತ್ತಿದ್ದ ಸುಂದರ ಮಹಿಳೆಯರು, ಹ್ಯಾಂಡ್ಸಂ ಪುರುಷರು, ಅವರ ಉಡುಗೆತೊಡುಗೆಗಳು, ನೀಟಾದ ಮನೆಗಳು, ಆ ಮನೆಗಳ ಆಧುನಿಕ ಸಲಕರಣೆಗಳು ಇವನ್ನೆಲ್ಲ ಅಕ್ಕಪಕ್ಕದ ಮನೆಯ ಹೆಂಗಸರು ನೋಡಿ ಕರುಬಿ ನಿಟ್ಟುಸಿರು ಬಿಡುತ್ತಿದ್ದರೆ ನಾವು ಮಕ್ಕಳು ಮಿಕಿಮಿಕಿ ನೋಡುವುದಾಗಿತ್ತು.

ನಾನು ಮೊದಲಬಾರಿಗೆ ಗೆಳತಿಯೊಬ್ಬಳ ಮನೆಯಲ್ಲಿ ‘ಫೆಮಿನಾ’ ನೋಡಿದ್ದು, ಅದರಲ್ಲಿನ ತರಹೇವಾರಿ ಗೃಹಾಲಂಕಾರದ ಚಿತ್ರಗಳು, ವಿವಿಧ ರಂಗಿನ ಜಾಹೀರಾತುಗಳನ್ನು ನೋಡಿ ಮರುಳಾಗಿದ್ದು, ನನಗೂ ಅವೆಲ್ಲ ದಕ್ಕಬೇಕೆಂಬ ಹಂಬಲ ಉಂಟಾಗಿದ್ದು – ಎಲ್ಲವನ್ನು ನೆನಪಿಸಿಕೊಂಡರೆ ಈಗ ನಗು ಬರುತ್ತದೆ. ‘ಇವೆಲ್ಲ ಪಡೆಯಲು ತುಂಬ ದುಡ್ಡು ಬೇಕು. ಅದು ನಮ್ಮ ಬಳಿ ಇಲ್ಲ’ ಎಂಬ ತರಹದ ಯೋಚನೆಗಳು ಬಂದದ್ದೂ ಆಗಲೆ. ಆಗೆಲ್ಲ ನಾವು ಒಟ್ಟಿಗೆ ಕೂತು ಪೇಪರುಗಳಲ್ಲಿ ರಾಶಿರಾಶಿ ದುಡ್ಡು ತುಂಬಿದ ಮನೆಗಳ ಚಿತ್ರ ಬರೆದುಕೊಂಡು ಸಮಾಧಾನಪಟ್ಟುಕೊಳ್ಳುತ್ತಿದ್ದೆವು. ಒಟ್ಟಿನಲ್ಲಿ ಈ ಜಾಹೀರಾತುಗಳು ಅಲ್ಲಿಯತನಕ ಕೆಲವು ಚಾಕಲೇಟು, ಸಿಹಿತಿಂಡಿಗಳನ್ನು ಮಾತ್ರ ಬಯಸುತ್ತಿದ್ದ ನಮ್ಮ ಮನಸ್ಸಿನಲ್ಲಿ ತರತರಹದ ಆಸೆಗಳನ್ನು ಹುಟ್ಟಿಸಿದ್ದಷ್ಟೇ ಅಲ್ಲ, ನಮ್ಮಲ್ಲಿ ಕ್ಲಾಸ್ ಕಾನ್ಶಿಯಸ್ನೆಸ್ ಅನ್ನು ಕೂಡ ಮೂಡಿಸಲಾರಂಭಿಸಿದವು. ನಾವು ಉಳ್ಳವರ ಮನೆಯ ಮಕ್ಕಳನ್ನು ಆದಷ್ಟು ನಮ್ಮ ಗುಂಪಿನಿಂದ ದೂರವಿಡಲಾರಂಭಿಸಿದೆವು. ಅವರ ಚರ್ಚೆಯ ಕಾಮನ್ ವಿಷಯಗಳಾದಂತಹ ಫಾರಿನ್ ವಸ್ತುಗಳು, ಹೊಸತಾಗಿ ರಿಲೀಸ್ ಆದ ಚಲನಚಿತ್ರಗಳ ವಿಡಿಯೊಕ್ಯಾಸೆಟ್ಟುಗಳು, ಹೊಸಬ್ರ್ಯಾಂಡಿನ ವಾಚು, ಶೂ, ಆಭರಣಗಳು ಇತ್ಯಾದಿಗಳ ಜತೆ ನಮ್ಮನ್ನು ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತ ನಮಗೇ ಅರಿವಿಲ್ಲದ ಹಾಗೆ ನಾವು ಅಂತಹ ಮಕ್ಕಳಿಂದ ದೂರವಾಗತೊಡಗಿದೆವು. ಅವರಿಗಿಂತ ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದಾಗೆಲ್ಲ ನಮ್ಮ ’ಈಗೋ’ಗಳೆಂಬ ಬೆಂಕಿ ಸ್ವಲ್ಪವಾದರು ಆರುತ್ತಿತ್ತು. ಕಾಲೇಜು ಓದುವಾಗ ಗೆಳತಿಯರು ನನ್ನ ಹೊಸ ಬಟ್ಟೆ, ಚಪ್ಪಲಿಗಳ ನಿರ್ಮೋಹದ ಬಗ್ಗೆ ಛೇಡಿಸಿ ‘ನೀನು ಹುಡುಗಿಯಾಗಿರಲಿಕ್ಕೆ ನಾಲಾಯಕ್ಕು!’ ಅನ್ನುತ್ತಿದ್ದರು. ಅವರೆಲ್ಲ ಬೀದಿಯ ಬಿಲ್ಬೋರ್ಡುಗಳ ನೋಡಿ ಕನಸು ಕಟ್ಟುವಾಗ ನಾನು ಮೂರು ಮಕ್ಕಳನ್ನು ತನ್ನ ಸಂಬಳದಲ್ಲಿ ಓದಿಸಬೇಕಾಗಿದ್ದ ಅಮ್ಮನನ್ನು ನೆನೆದು ನಕ್ಕು ಸುಮ್ಮನಾಗುತ್ತಿದ್ದೆ. ಎಂ.ಎ ಓದುವಾಗ ನಮ್ಮ ಲೆಕ್ಚರರೊಬ್ಬರು ‘ಜಾಹೀರಾತು ಸಂಸ್ಕೃತಿಯ ಮೇಲೆ ಸೆಮಿನಾರು ಮಾಡಿ’ ಎಂದು ಹೇಳಿದಾಗ ತಮಾಷೆಯೆನಿಸಿತ್ತು. ಆದರೆ ಚರ್ಚೆ ಮಾಡುತ್ತ ಹೋದಹಾಗೆ ನಾವೆಲ್ಲ ಈ ಜಾಹೀರಾತು ಸಂಸ್ಕೃತಿಯ ಅದೃಶ್ಯ ಭಾಗಗಳೆ ಎಂದು ಅರಿವಾದಾಗ ಅಷ್ಟೇನೂ ತಮಾಷೆಯ ಭಾವನೆ ಉಂಟಾಗಲಿಲ್ಲ. 

ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿದ್ದ ಹುಡುಗನೊಬ್ಬ ತನ್ನ ತಂದೆ ಮೊಬೈಲುಫೋನು ಕೊಡಿಸದಿದ್ದಕ್ಕೆ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಗೆಳತಿ ಸುಪ್ರಿಯಾ ಹೇಳುತ್ತ ಈಗಿನ ಮಕ್ಕಳು ನಮ್ಮ ಹಾಗೆ ಅಡ್ಜಸ್ಟ್ ಮಾಡ್ಕೊಳೊಲ್ಲ ಕಣೆ. ನನ್ನ ಮಗನ ಹತ್ರ ಬೇಬ್ಲೇಡ್ (ಒಂದು ರೀತಿಯ ಆಟಿಕೆ) ಇರಲಿಲ್ಲ ಅಂತ ನಮ್ಮ ಅಪಾರ್ಟ್ಮೆಂಟಿನ ಮಕ್ಕಳು ಆಟಕ್ಕೇ ಸೇರಿಸ್ತಿರ್ಲಿಲ್ಲ. ಪಾಪ. ಡಿಪ್ರೆಸ್ ಆಗ್ಬಿಟ್ಟಿದ್ದ. ನಂಗೆ ತಡ್ಕೊಳೋಕಾಗದೆ ಅವನು ಹೇಳಿದಂಥದೆ ಕೊಡಿಸಿದೆ. ಭಯ ಆಗತ್ತೆ ಕಣೆ ಅನ್ನುತ್ತಿದ್ದಳು. ಜಾಹೀರಾತು ಸಂಸ್ಕೃತಿ ಇವತ್ತು ನಮ್ಮನ್ನು ಹಿಂದೆಂದೂ ಇಲ್ಲದಂತೆ ಆವರಿಸಿಕೊಂಡುಬಿಟ್ಟಿದೆ. ಕಂಪನಿಗಳು ಮಕ್ಕಳು, ಹೆಂಗಸರು, ಗಂಡಸರು, ಯುವಕಯುವತಿಯರು, ವಯಸ್ಸಾದವರು ಎಂದು ಮುಂತಾಗಿ ವರ್ಗೀಕರಿಸಿ, ಪ್ರತಿಯೊಂದು ವರ್ಗವನ್ನೂ ವಿಶೇಷ ಜಾಹೀರಾತುಗಳ ಮೂಲಕ ಓಲೈಸಲಾರಂಭಿಸಿವೆ. ಜಾಹೀರಾತುಗಳ ಮೇಲೆ ಕೋಟಿಗಟ್ಟಲೆ ಖರ್ಚು ಮಾಡುತ್ತವೆ. ‘ನಮ್ಮ ಕಂಪನಿಯ ವಸ್ತು ಕೊಂಡರೇ ನಿಮಗೆ ಮೋಕ್ಷ’ ಎಂದು ಸಾರುತ್ತವೆ. ನಮಗೆ ಇತ್ತೀಚೆಗೆಲ್ಲ ಬೀದಿಬದಿಯ ಸಣ್ಣ ಅಂಗಡಿಗಳಲ್ಲಿ ಮಾರಲ್ಪಡುವ ಲೋಕಲ್ ಕಂಪನಿಯ ಪದಾರ್ಥಗಳು ಒಗ್ಗುವದಿಲ್ಲ. ಮಕ್ಕಳು ಗಲಾಟೆ ಮಾಡದಿರಲು ಟಿ.ವಿ ತೋರಿಸುವವರೂ ನಾವೆ. ಮಕ್ಕಳನ್ನು ಸೂಪರ್ ಮಾರ್ಕೆಟ್ಟಿಗೆ ಕರೆದುಕೊಂಡು ಹೋಗುವವರೂ ನಾವೆ. ಅಲ್ಲಿ ಕಂಡ ವಸ್ತುಗಳು ಬೇಕೆಂದು ಅವರು ರಂಪಾಟ ಮಾಡಿದರೆ ಹುಸಿಕೋಪ ತೋರುತ್ತ ಮುಜುಗರದ ನಗೆ ನಗುತ್ತ ನಮ್ಮ ಕೈಗೆಟುಕದಿದ್ದರೂ ಕೊಡಿಸುವವರೂ ನಾವೆ. ಅವರಿಗೆ ನಮ್ಮ ತೊಂದರೆಗಳು ಎಂದೆಂದಿಗೂ ಅರಿವಿಗೆ ಬರದಂತೆ ಮಾಡುವವರೂ ನಾವೆ. ಅಲ್ಲವೆ?
 
ಸುಪ್ರಿಯಾಳ ತರಹ ನನಗೂ ಭಯವಾಗುತ್ತಿದೆ.

‍ಲೇಖಕರು avadhi

May 3, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

3 ಪ್ರತಿಕ್ರಿಯೆಗಳು

 1. madhuramanase

  ಇಂಥದೊಂದು ಬ್ಲಾಗ್ ರೂಪಿಸಿದ್ದಕ್ಕೆ ತಮಗೆ ತುಂಬಾ ಧನ್ಯವಾದಗಳು
  ಸಚಿನ್ ಕುಮಾರ್ ಬಿ.ಹಿರೇಮಠ

  ಪ್ರತಿಕ್ರಿಯೆ
 2. Godlabeelu Parameshwara

  kollubaaka samskruthiyavarige echcharikeya
  bareha. Lekhana chennaagide.

  Godlabeelu

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: