ವಾಸು ಸ್ವಲ್ಪ ಗುಲ್ಬರ್ಗಕ್ಕೆ ಹೋಗಿ ಬರ್ತೀಯಾ…

ವಾಸುದೇವ ಶರ್ಮಾ

‘ವಾಸು ಸ್ವಲ್ಪ ಗುಲ್ಬರ್ಗಕ್ಕೆ ಹೋಗಿ ಬರ್ತೀಯಾ..?ʼ ನಾನು ಕೂತಿದ್ದ ಸ್ಥಳಕ್ಕೆ ಬಂದು ಮಾತೃಛಾಯಾದ ಮ್ಯಾನೇಜರ್‌ ಪದ್ಮಾ ಸುಬ್ಬಯ್ಯನವರು ಆ ಬೆಳಗ್ಗೆ ಕೇಳಿದರು. 

‘ಆಗ್ಲಿ ಮೇಡಂ. ಹೋಗ್ಬರ್ತೀನಿʼ ಎಂದೆ. ಅವರು ನಾಲ್ಕು ಫೈಲ್‌ ಕೊಟ್ಟು. ಹೋದ ವಾರ ಮಾತಾಡಿದ್ವಲ್ಲ ಅವು ಎಂದು ಹೇಳಿ ಹೋದರು. ಅಷ್ಟರಲ್ಲಾಗಲೇ ನಾನು ಅವರ ನಿರ್ದೇಶನದಂತೆ ಮಂಡ್ಯ, ಮೈಸೂರು, ಕೋಲಾರಕ್ಕೆ ಮಾತೃಛಾಯದಲ್ಲಿ ಇರಿಸಲಾಗಿದ್ದ ಮಕ್ಕಳಿಗೆ ಸಂಬಂಧಿಸಿದ ಫೈಲುಗಳನ್ನು ಹಿಡಿದುಕೊಂಡು ಹೋಗಿ ಬಂದಿದ್ದೆ. ಈಗ ಗುಲ್ಬರ್ಗಕ್ಕೆ. 

ಫೈಲ್‌ಗಳ ಅಧ್ಯಯನ ಮಾಡಲಾರಂಭಿಸಿದೆ. ಎಲ್ಲವೂ ಗುಲ್ಬರ್ಗದ ವಿವಿಧ ತಾಲೂಕುಗಳಲ್ಲಿನ ಹಳ್ಳಿಗಳ ವಿಳಾಸ ಹೊಂದಿದ್ದ ಮಕ್ಕಳ ಪ್ರಕರಣಗಳು. ಎರಡು ಮಕ್ಕಳು ಗುಲ್ಬರ್ಗದಿಂದಲೇ ಬೆಂಗಳೂರಿನ ಫೌಂಡ್ಲಿಂಗ್‌ ಹೋಮಿಗೆ (೫ ವರ್ಷದೊಳಗಿನ ಎಳೆ ಮಕ್ಕಳ ಪೋಷಣೆ, ರಕ್ಷಣೆ, ಆರೈಕೆ ನಿಲಯಗಳು) ವರ್ಗಾವಣೆಯಾಗಿದ್ದ ಮಕ್ಕಳು. ಇನ್ನೊಂದು ಬೆಂಗಳೂರಿನಲ್ಲೇ ಪೊಲೀಸರ ಮೂಲಕ ಸರ್ಕಾರದ ಇಲಾಖೆಯ ಮುಂದೆ ಬಂದು ತಾಯಿಯೊಬ್ಬರು ಒಪ್ಪಿಸಿ ಹೋಗಿದ್ದ ಮಗು. ಇನ್ನೊಂದು ಮಗು ಬಳ್ಳಾರಿಯ ಮಕ್ಕಳ ನಿಲಯದಲ್ಲಿ ಬಿಟ್ಟು ಹೋಗಿದ್ದ ಮಗುವನ್ನು ಫೌಂಡ್ಲಿಂಗ್‌ ಹೋಮಿಗೆ ವರ್ಗಾಯಿಸಿದ್ದು. 

ಹಸುಗೂಸುಗಳನ್ನು ಸರ್ಕಾರ ನಡೆಸುವ ನಿಲಯಕ್ಕೋ, ಸರ್ಕಾರೇತರರು ನಡೆಸುವ ನಿಲಯಗಳಿಗೋ ತಾಯಂದಿರು ಬಿಟ್ಟು ಹೋಗುವಂತಹ ಸನ್ನಿವೇಶ ಕಲ್ಪಿಸಿಕೊಳ್ಳುತ್ತಿದ್ದೆ. ಏನೇನು ಒತ್ತಡಗಳೋ, ಕಷ್ಟಗಳೋ ಅಥವಾ ಅನಿವಾರ್ಯತೆಯೋ ಎಂದು ವಿವರಗಳನ್ನು ನೋಡುತ್ತಿದ್ದೆ. ಮುಖ್ಯ ಆ ಮಕ್ಕಳ ವಿವರಗಳೊಡನೆ ಇದ್ದ ಹೆಸರು, ವಿಳಾಸಗಳನ್ನು ಗುರುತು ಹಾಕಿಕೊಂಡು ಪ್ರವಾಸದ ಯೋಜನೆಯನ್ನು ಮಾಡುತ್ತಿದ್ದೆ. 

‘ವಾಸು, ಇಲ್ಲೇ ಇದ್ದೀಯಾ?ʼ ನಾನು ನಿಜವಾಗಿಯೂ ಸ್ವಲ್ಪ ಬೆಚ್ಚಿಬಿದ್ದು ತಲೆಯೆತ್ತಿದ್ದೆ. ಪದ್ಮಾ ಸುಬ್ಬಯ್ಯ ಮೇಡಂ ಎದುರು ಇದ್ದರು. ‘ಅಲ್ಲಾ ಇನ್ನೂ ಹೋಗಿಲ್ವ. ಈಗ್ಲೇ ಹೋದ್ರೆ ಸಾಯಂಕಾಲ ಬರಬಹುದಲ್ವ?ʼ ‘ಆಂ! ಸಾಯಂಕಾಲಾನಾ? ಗುಲಬರ್ಗಾಕ್ಕೆ ಇವತ್ತು ರಾತ್ರಿ ಹೋಗಿ ನಾಳೆ ಒಂದೆರೆಡು ಕೇಸ್‌ ನೋಡ್ಕೊಂಡು ನಾಡಿದ್ದು ಬರಬಹುದು…ʼ

‘ಏ! ಹೌದಾ. ಅಷ್ಟೊತ್ತಾಗುತ್ತಾ. ಸರಿ ಆಗಲಿʼ ಎಂದು ಪದ್ಮಾ ಸುಬ್ಬಯ್ಯ ತಮ್ಮ ಕೋಣೆಗೆ ಹೋದರು. ನನ್ನ ಸಹವರ್ತಿ ಕಲ್ಪನಾ ಸಂಪತ್ ಮತ್ತು ಮಾತೃಛಾಯಾದ ಸಮಾಜಕಾರ್ಯಕರ್ತೆ ಫ್ರೀಡಾ ಕುಮಾರ್‌ ಪರಸ್ಪರ ಮುಖಮುಖ ನೋಡಿಕೊಂಡೆವು.  

ಪದ್ಮಾಸುಬ್ಬಯ್ಯನವರಿಗೆ ಗುಲ್ಬರ್ಗಾ ಅಷ್ಟು ದೂರದ ಪ್ರಯಾಣ ಎಂಬುದು ಗೊತ್ತಿರಲಿಲ್ಲ ಎಂಬುದು ಇಲ್ಲಿನ ಸಂಗತಿಯಲ್ಲ, ಬದಲಿಗೆ ಬೇಗಬೇಗ ಎಲ್ಲವೂ ಆಗಬೇಕು. ಆದಷ್ಟೂ ಬೇಗನೆ ತೊಂದರೆಯಲ್ಲಿರುವ ಮಕ್ಕಳಿಗೆ ನೆರವು ಸಿಗಬೇಕು ಎನ್ನುವ ತವಕ. ಆಕೆ ಬೆಂಗಳೂರಿನ ಬನಶಂಕರಿಯಲ್ಲಿರುವ ಕೆನರಾ ಬ್ಯಾಂಕ್‌ ರಿಲೀಫ್‌ ಅಂಡ್‌ ವೆಲ್ಫೇರ್‌ ಸೊಸೈಟಿ ನಡೆಸುತ್ತಿದ್ದ ಮಾತೃಛಾಯಾ ಎಂಬ ಫೌಂಡ್ಲಿಂಗ್‌ ಹೋಮಿನ ಮ್ಯಾನೇಜರ್‌. ನಾನು ಮತ್ತು ಕಲ್ಪನಾ ಸಂಪತ್‌ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿದ್ಯಾರ್ಥಿಗಳಾಗಿ (೧೯೮೮-೮೯) ವಾರದಲ್ಲಿ ಎರಡು ದಿನ ಮಾತೃಛಾಯಾಕ್ಕೆ ಕ್ಷೇತ್ರಕಾರ್ಯ/ಫೀಲ್ಡ್‌ವರ್ಕ್‌ ಅಭ್ಯಾಸಕ್ಕಾಗಿ ಹೋಗುತ್ತಿದ್ದೆವು.

 ಆಗ ಕೆಲವು ವರ್ಷಗಳ ಹಿಂದಷ್ಟೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಭಗವತಿಯವರು ‘ವಿದೇಶಗಳಿಗೆ ಮಕ್ಕಳನ್ನು ದತ್ತು ನೀಡುವ ಕುರಿತು ನಿಯಂತ್ರಣಗಳನ್ನು ತರಲುʼ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದರು (೧೯೮೪). ಅದರಂತೆ ಯಾವುದೇ ಅನಾಥ ಮಗುವಿಗೆ ದತ್ತುವಿನ ಸ್ವರೂಪದಲ್ಲಿ ಪೋಷಕರನ್ನು ಕಲ್ಪಿಸುವ ಸಮಯದಲ್ಲಿ ಭಾರತೀಯ ಪೋಷಕರಿಗೆ ಮೊದಲ ಆದ್ಯತೆಯನ್ನು ನೀಡಬೇಕಿತ್ತು.

ದತ್ತು ಎಂದರೆ ಕೇವಲ ವಿದೇಶಿಯರಿಗೆ ಮಾತ್ರ ಎಂಬ ಬಹುತೇಕ ಸಂಸ್ಥೆಗಳ ಮನೋಭಾವನೆಯನ್ನು ಬದಲಿಸಬೇಕೆಂದು ಈ ನಿರ್ದೇಶನ ಸ್ಪಷ್ಟಪಡಿಸಿತ್ತು. ನಾನು ಮತ್ತು ಕಲ್ಪನಾ ಮಾತೃಛಾಯಾಕ್ಕೆ ಕ್ಷೇತ್ರಕಾರ್ಯಕ್ಕೆ ಹೋದ ಮೊದಲ ದಿನಗಳಲ್ಲೇ ಪದ್ಮಾ ಸುಬ್ಬಯ್ಯ ಈ ವಿಚಾರವನ್ನು ನಮಗೆ ಹೇಳಿದ್ದರು (ನಮಗೆ ಆಗ ಅದೆಷ್ಟು ಅರ್ಥವಾಗಿತ್ತೋ ಗೊತ್ತಿಲ್ಲ!).

ಜೊತೆಗೆ ತಮ್ಮ ಸಂಸ್ಥೆಯಿಂದ ದತ್ತು ಹೋಗಿರುವ ಮಕ್ಕಳ ಆಲ್ಬಮ್‌ ತೋರಿಸುವಾಗ ಬಹಳ ಹೆಮ್ಮೆಯಿಂದ ಹೇಳುತ್ತಿದ್ದುದು ಜ್ಞಾಪಕವಿದೆ. ಸುಮಾರು ಹತ್ತು ಮಕ್ಕಳು ದತ್ತು ಹೋದಲ್ಲಿ ಆರಕ್ಕೂ ಹೆಚ್ಚು ಮಕ್ಕಳಿಗೆ ಭಾರತೀಯ ಪೋಷಕರನ್ನೇ ಒದಗಿಸಿರುವುದು ತಮ್ಮ ಹೆಗ್ಗಳಿಕೆ ಎಂದು. [ಕ್ಷೇತ್ರಕಾರ್ಯದ ಮೊದಲ ದಿನವೇ ಆಲ್ಬಂನಲ್ಲಿ ನೋಡಿದ ಒಂದು ಫೋಟೋದಲ್ಲಿ ಅವರು ಹೇಳಿದ ಹೆಸರಾಂತರನ್ನು ಗುರುತಿಸಿ,  ಜೊತೆಯಲ್ಲಿರುವವರು ಅವರ ಹೆಂಡತಿಯಲ್ಲ ಎಂದು ಹೇಳಿ ನನಗೇ ಗೊತ್ತಿಲ್ಲದಂತೆ ದೊಡ್ಡದೊಂದು ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದ್ದೆ. ಆ ಪ್ರಕರಣ ಮುಂದೆ ನೋಡೋಣ]. 

ನಂತರದ ದಿನಗಳಲ್ಲಿ ತಿಳಿದದ್ದು [ಮತ್ತೆ ಮುಂದೆ ಭಗವತಿಯವರ ತೀರ್ಪಿನ ಫಲವಾಗಿ ಸರ್ಕಾರ ಏರ್ಪಡಿಸದ್ದ ವಾಲಂಟರಿ ಕೋ ಆರ್ಡಿನೇಟಿಂಗ್‌ ಏಜೆನ್ಸಿ (ವಿಸಿಎ)ನಲ್ಲಿ ನಾನು ಕೆಲಸ ಮಾಡುವಾಗ ಅರಿವಾದದ್ದು] ಮಕ್ಕಳನ್ನು ದತ್ತು ನೀಡುವ ಬಹುತೇಕ ಸಂಸ್ಥೆಗಳು ಆದಷ್ಟೂ ವಿದೇಶೀಯರಿಗೇ ತಮ್ಮಲ್ಲಿರುವ ಮಕ್ಕಳು ಮೀಸಲು ಎಂಬಂತೆ ವರ್ತಿಸುತ್ತಿದ್ದರು.

ಭಾರತೀಯ ದಂಪತಿಗಳು ದತ್ತು ಪಡೆಯಲು ಅಪೇಕ್ಷಿಸಿ ಬಂದಾಗ ಅವರನ್ನು ಹಿಮ್ಮೆಟ್ಟಿಸಲು ನೂರಾರು ಮಾರ್ಗಗಳು ಇದ್ದವರು, ‘…ಯಾರಿಗೆ ಹುಟ್ಟಿರುವ ಮಗುವೋ ಏನೋ?ʼ ‘…ಈ ಮಗು ತುಂಬಾ ಕಪ್ಪು, ನಿಮ್ಮ ಕಲರ್‌ಗೆ ಸರಿ ಹೋಗುತ್ತೋ ಇಲ್ಲವೋ?ʼ ‘ಮಗೂಗೆ ಸ್ವಲ್ಪ ಐಬು ಇದೆ. ನಿಮಗೆ ಏಗಕ್ಕೆ ಆಗುತ್ತಾ?ʼ ‘ಚಿಕ್ಕ ಮಕ್ಕಳಿಲ್ಲ, ದೊಡ್ಡ ಮಕ್ಕಳು ಆರೇಳು ವರ್ಷದ್ದು ಆಗಬಹುದಾ..?ʼ ‘ಹೆಣ್ಮಗೂನ ತೊಗೋತೀರಾ..?ʼ ಇಷ್ಟೇ ಸಾಕು ದತ್ತು ಬೇಕು ಎಂದುಕೊಂಡು ಬಂದಿರುವವರು ಓಡಿಹೋಗಲು. ಇದರೊಡನೆ ಸಾಕಷ್ಟು ಸಂಸ್ಥೆಗಳಿಗೆ ದತ್ತು ಹೆಸರಿನಲ್ಲಿ ಗುಟ್ಟಾಗಿ ಹಣ ಪಾವತಿಯಾಗಿ ಹೋಗುತ್ತಿತ್ತು.  ವಿದೇಶೀಯರು ಬಂದರೆ ಡಾಲರ್‌ಗಳಲ್ಲಿ ಹಣ ಸಿಗುವುದಾದರೆ ಇಲ್ಲಿಯವರಿಗೆ ಕೊಟ್ಟು ಯಾಕೆ ವ್ಯಾಪಾರ ಕೆಡಿಸಿಕೊಳ್ಳಬೇಕು. 

ಇಂತಹ ಸನ್ನಿವೇಶದಲ್ಲಿ ಪದ್ಮಾ ಸುಬ್ಬಯ್ಯನವರು ಮಾತೃಛಾಯಾ ಮೂಲಕ ದತ್ತು ಎಂಬುದಕ್ಕೆ ಧನಾತ್ಮಕ ವ್ಯಾಖ್ಯಾನ ಮತ್ತು ಆ ಪ್ರಕ್ರಿಯೆಗೆ ಗೌರವ ತರಿಸುವ ಕೆಲಸದಲ್ಲಿ ತೊಡಗಿದ್ದರು. ಅವರೊಡನೆ ಕೆಲಸ ಮಾಡುತ್ತಾ ದತ್ತುವಿನ ಜಗತ್ತನ್ನು ಅರ್ಥ ಮಾಡಿಕೊಳ್ಳುತ್ತಾ ಅದರಲ್ಲಿ ಸಮಾಜಕಾರ್ಯ ನಿರ್ವಹಣೆಯನ್ನು ತಿಳಿದುಕೊಳ್ಳತೊಡಗಿದ್ದೆವು. 

ಗುಲ್ಬರ್ಗಾಕ್ಕೆ… 

ಮಕ್ಕಳ ನ್ಯಾಯ ಕಾಯಿದೆಯ (ಆಗ ೧೯೮೬ರ ಕಾಯಿದೆ) ಪ್ರಕಾರ ಆರು ವರ್ಷದೊಳಗಿನ ಅನಾಥ, ಪರಿತ್ಯಕ್ತ, ಬಿಟ್ಟುಹೋದ, ಕಳೆದುಹೋದ ಮಕ್ಕಳನ್ನು ನೋಡಿಕೊಳ್ಳಲು ಶಿಶುಮಂದಿರಗಳು ಅಥವಾ ಫೌಂಡ್ಲಿಂಗ್‌ ಹೋಂಗಳನ್ನು ಏರ್ಪಡಿಸಬಹುದಾಗಿತ್ತು. ತೊಂದರೆಯಲ್ಲಿರುವ ಕುಟುಂಬ ಅಥವಾ (ಒಂಟಿ) ತಂದೆ ಅಥವಾ (ಒಂಟಿ) ತಾಯಿ ತಮ್ಮ ಮಕ್ಕಳನ್ನು ಸಹ ಇಂತಹ ಶಿಶು ಮಂದಿರಗಳಲ್ಲಿ ತಾತ್ಕಾಲಿಕವಾಗಿ ಇರಿಸಲು ಕೇಳಿಕೊಳ್ಳುತ್ತಿದ್ದರು.

ಇಷ್ಟಲ್ಲದೆ ನ್ಯಾಯಾಲಯವೂ/ಆಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿದ್ದ ಸಮಿತಿಯು, ಬೇರೆ ಬೇರೆ ಕಾರಣಗಳಿಂದ [ಕಾರಾಗೃಹ ವಾಸಿ ತಾಯಂದಿರ] ಪುಟ್ಟ ಪುಟ್ಟ ಮಕ್ಕಳನ್ನು ಶಿಶು ಮಂದಿರಗಳಲ್ಲಿ ತಾತ್ಕಾಲಿಕವಾಗಿ ಇರಿಸಲು ನಿರ್ದೇಶನ ನೀಡುತ್ತಿದ್ದರು. ಆಗ್ಗೆ ರಾಜ್ಯದಲ್ಲಿ ಎಲ್ಲೆಡೆ ಇಂತಹ ಮಂದಿರಗಳು ಅಷ್ಟಾಗಿ ಇರಲಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳನ್ನು ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ, ದಾವಣಗೆರೆಯಲ್ಲಿದ್ದ ಸರ್ಕಾರ ಮತ್ತು ಸರ್ಕಾರೇತರರು ನಡೆಸುತ್ತಿದ್ದ ಶಿಶು ಮಂದಿರಗಳಿಗೆ ವರ್ಗಾಯಿಸುತ್ತಿದ್ದರು.  ಹೀಗಾಗಿ ಎಷ್ಟೋ ಬಾರಿ ಗುಲ್ಬರ್ಗಾ, ಬೀದರ್‌, ಬಳ್ಳಾರಿ, ಬಿಜಾಪುರದ ಮಕ್ಕಳು ಕೂಡಾ ಬೆಂಗಳೂರಿನ ಶಿಶುಮಂದಿರಗಳಲ್ಲಿ ಆ‍ಶ್ರಯ ಕಾಣುತ್ತಿದ್ದರು. 

ಇಂತಹ ಕೆಲವು ಮಕ್ಕಳ ಫೈಲ್‌ ನನ್ನ ಮುಂದೆ. ನಾನು ಗುಲ್ಬರ್ಗಕ್ಕೆ ಹೊರಟೆ. 

ಈ ಹಿಂದೆ ೧೯೮೬ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಯೂತ್‌ ಫೆಸ್ಟಿವಲ್‌ನಲ್ಲಿ ಭಾಗವಿಸಲು ಗುಲಬರ್ಗಾಕ್ಕೆ ಪ್ರಯಾಣಿಸಿದ್ದ ಅನುಭವವಿತ್ತು. ಗೊತ್ತಿದ್ದಿದ್ದು ನಗರದ ರೈಲ್ವೆ ನಿಲ್ದಾಣದಿಂದ ಕಾರ್ಯಕ್ರಮ ಆಯೋಜಿಸಿದ್ದ ಕಾಲೇಜು ಅಲ್ಲಿಂದ ವಾಪಸ್ಸು ಬಂದಿದ್ದು ಅಷ್ಟೇ. ಆದರೂ ಧೈರ್ಯ ಮಾಡಿ ಹೊರಟಿದ್ದೆ. 

ನನ್ನ ಹತ್ತಿರ ಇದ್ದ ಎರಡು ಫೈಲುಗಳಲ್ಲಿ ಒಂದು ಗುಲ್ಬರ್ಗಾದ್ದೇ ವಿಳಾಸ, ಇನ್ನೊಂದು (ಆಗ್ಗೆ ಗುಲ್ಬರ್ಗಾದ್ದೇ ಭಾಗವಾಗಿದ್ದ) ಶಹಾಪುರದ ಯಾವುದೋ ಹಳ್ಳಿ. ಗುಲ್ಬರ್ಗಾ ರೈಲ್ವೆ ನಿಲ್ದಾಣದಲ್ಲಿ ಇಳಿಯುವುದಕ್ಕೆ ಮೊದಲೇ ನಿತ್ಯಕರ್ಮ ಮುಗಿಸಿಕೊಂಡು ನಿಲ್ದಾಣದಲ್ಲೇ ಸಿಕ್ಕಿದ್ದು ತಿಂದು ವಿಳಾಸ ಹುಡುಕಲು ಹೊರಟೆ.

ಸಾಮಿಲ್‌ ರಸ್ತೆ, ಆಳಂದ್‌ ರಸ್ತೆಯಾಗಿ, ಯಾವುದೋ ಖಾನವಳಿಯ ಹತ್ತಿರದ ಮಂದಿರದ ಹಿಂದೆಯಲ್ಲಿ ಯಾವುದೋ ಗಲ್ಲಿ ಎಂಬ ವಿಳಾಸ. ಖಾನಾವಳಿ ಸಿಕ್ಕಿತು. ಆದರೆ ವಿಳಾಸದಲ್ಲಿದ್ದ ಮಂದಿರ ಸಿಗಲೇ ಇಲ್ಲ. ಇನ್ನು ವಿಳಾಸದಲ್ಲಿದ್ದ ಗಲ್ಲಿ ಅಲ್ಲಿ ಇಲ್ಲವೇ ಇಲ್ಲ ಎಂದು ನಾನು ಮಾತನಾಡಿಸಿದ ಜನ ಹೇಳಿದರು. ಸುಮಾರು ಒಂದೂವರೆ ಗಂಟೆ ಅಲ್ಲೆ ಸುತ್ತಾಡಿದೆ.

ಯಾಕೆ ಏನು ಎಲ್ಲರಿಗೂ ವಿವರಿಸಿ ಹೇಳುವಂತಿಲ್ಲ. ಯಾರಿಗಾದರೂ ಅನುಮಾನ ಬರುವ ಮೊದಲು ವಿಳಾಸ ಸಿಗಲಿಲ್ಲ ಎಂದುಕೊಂಡು ಹಿಂದೆ ಬಂದೆ [ಬರಿ ಒಂದು ಹೆಸರು, ಆತ ಆಟೋ ಡ್ರೈವರ್‌ ಎಂಬುದಷ್ಟೇ ಪತ್ತೆ ಹಿಡಿದುಕೊಂಡು ವ್ಯಕ್ತಿಯನ್ನು ಮಂಡ್ಯ ನಗರದಲ್ಲಿ ಕಂಡುಹಿಡಿದಿದ್ದವನ ಹಮ್ಮಿಗೆ ಏಟು ಬಿದ್ದಿತ್ತು!] 

ಸರಿ ಇನ್ನೊಂದು ಶಹಾಪುರದ ಹಳ್ಳಿಯ ವಿಳಾಸದತ್ತ. ಅಷ್ಟು ಹೊತ್ತಿಗೆ ೧೨ ಗಂಟೆಯಾಗುತ್ತಿತ್ತು. ಶಹಾಪುರ ಎಷ್ಟು ದೂರವಿದೆ, ಇದು ಯಾವ ಹಳ್ಳಿ ಒಂದೂ ಗೊತ್ತಿಲ್ಲ [ಇಲ್ಲ, ಈಗಿನಂತೆ ಆಗ ಗೂಗಲ್‌ ಮ್ಯಾಪ್‌ ಇರಲಿಲ್ಲ. ಗೂಗಲಮ್ಮ, ಗೂಗಲಪ್ಪಗಳನ್ನು ಕೇಳಿಕೊಂಡು ಹೋಗಬೇಕಷ್ಟೆ!]. ಶಹಾಪುರಕ್ಕೆ ಹೋಗುವ ಬಸ್‌ ಸದ್ಯಕ್ಕೆ ಇಲ್ಲ ಎಂದು ಬಸ್‌ ಟ್ರಾಫಿಕ್‌ ಇನ್ಸ್‌ಪೆಕ್ಟರ್‌ ಹೇಳಿದಾಗ ದಿಕ್ಕೇ ತೋಚದಂತಾಯಿತು.

ಇಲ್ಲ ಟ್ಯಾಕ್ಸಿ ಮಾಡುವಷ್ಟು ಹಣವಿರಲಿಲ್ಲ. ಅಷ್ಟಕ್ಕೂ ಕೇಳಿದಾಗ ಟ್ಯಾಕ್ಸಿ ಸಿಗುತ್ತಿರಲಿಲ್ಲ. ಅಷ್ಟರಲ್ಲೇ ಯಾರೋ ಆ ಕಡೆ ಹೋಗುವ ಪುಣ್ಯಾತ್ಮನೊಬ್ಬ ಸಲಹೆ ಕೊಟ್ಟಂತೆ ಸಿಂಧಗಿಗೆ ಹೋಗುವ ಬಸ್‌ನಲ್ಲಿ ಹೋಗಿ ಜೀವರ್ಗಿಯಲ್ಲಿಳಿದು ಏನಾದರೂ ಪ್ರಯತ್ನಿಸಬಹುದು ಎಂದ. [ಆಮೇಲೆ, ಜೀವರ್ಗಿಯಲ್ಲಿ ಇಳಿದಾಗ ಅದರ ಎಡವಟ್ಟು ಏನು ಅಂತ ಗೊತ್ತಾಗಿದ್ದು]. ಅಂತೂ ಇಂತು ಶಹಾಪುರ ತಲುಪಿದ್ದಾಯಿತು.

ಅಲ್ಲಿಂದ ನಾನು ಹೋಗಬೇಕಿದ್ದ ಹಳ್ಳಿಗೆ. ಹೊಟ್ಟೆ ಚುರುಗುಟ್ಟುತ್ತಿತ್ತು. ಯಾವುದೋ ಖಾನಾವಳಿಯಲ್ಲಿ ತಿಂದ ರೊಟ್ಟಿ, ಚಟ್ನಿ, ಪಲ್ಯ, ಅನ್ನ, ಸಾಂಬಾರಿನ ಖಾರಕ್ಕೆ ನಾಲಗೆ ಉರಿದು ಹೋಯಿತು. ಹೇಗೋ ಕಷ್ಟಪಟ್ಟು ಯಾರುಯಾರನ್ನೋ ಕೇಳಿಕೊಂಡು ಯಾವುದೋ ಬಸ್‌ ಹತ್ತಿ ಎಲ್ಲಿಗೋ ತಲುಪಿ, ಅಲ್ಯಾರೋ ಪುಣ್ಯಾತ್ಮ ನಾನು ಹೋಗಬೇಕಿದ್ದ ಹಳ್ಳಿಯ ಕಡೆಗೆ ಹೋಗುತ್ತಿದ್ದ ಟ್ರಾಕ್ಟರ್‌ ಹತ್ತಿಸಿ ಕಳುಹಿಸಿದ. 

ಟ್ರಾಕ್ಟರ್‌ ಹಿಂದೆ ಇಡೀ ದಾರಿ ನಿಂತುಕೊಂಡೇ ಹೋಗಿದ್ದಾಯಿತು. ಆ ಅಮೋಘ ರಸ್ತೆಗಳನ್ನ, ಬಾಯಿ ಉರಿಯುವ ಊಟವನ್ನ, ಪದ್ಮಾ ಸುಬ್ಬಯ್ಯ ಕೇಳಿದ ಕೂಡಲೇ ಹೊರಟು ನಿಂತ ನನ್ನನ್ನ, ಸಮಾಜಕಾರ್ಯ ಅಭ್ಯಾಸವನ್ನ ಎಲ್ಲವನ್ನೂ ಒಂದು ಸುತ್ತು ಹಳಿದುಕೊಂಡಿದ್ದೆ. ಏನು ಮಾಡುವುದು! 

ಅಂತೂ ಊರು ತಲುಪಿದಾಗ ಗೊತ್ತಾಗಿದ್ದು ಅದೊಂದು ಸಣ್ಣ ಹಳ್ಳಿ. ಸಮಾಜಕಾರ್ಯದ ವಿದ್ಯಾರ್ಥಿ ಆಗ ಜಾಗೃತನಾದ. ಇಲ್ಲಿ ವಿಳಾಸ ಹಿಡಿದು ಹೊರಟರೆ ಕಷ್ಟ. ಹಳ್ಳಿಯಲ್ಲಿ ಇದ್ದಿರಬಹುದಾದ ಚಾ ಅಂಗಡಿ ಹುಡುಕಿದೆ. ಪುಣ್ಯಕ್ಕೆ ಸಿಕ್ಕಿತು. ಅಲ್ಲಿ ಕುಳಿತವನು ಎಲ್ಲರ ಗಮನ ಸೆಳೆಯಬಾರದೆಂಬ ಪ್ರಜ್ಞೆ ಬೇರೆ ಜಾಗೃತವಾಗಿತ್ತು.

ನಾನು ಧರಿಸಿದ್ದ ಪ್ಯಾಂಟ್‌, ಇನ್‌ಶರ್ಟ್‌, ಕ್ಯಾನ್‌ವಾಸ್‌ ಶೂ, ಕೈ ಚೀಲ, ಕನ್ನಡಕ ಎಲ್ಲವೂ ಬನ್ನಿ ಬನ್ನಿ ನೋಡಿ ಎನ್ನುವಂತಿತ್ತು. ಅಲ್ಲಿದ್ದ ಪುರುಷರೆಲ್ಲಾ ಅಲ್ಲಿನ ಸಾಂಪ್ರದಾಯಿಕ ಪಂಚೆ, ಶರ್ಟಿನಂತಹ ಜುಬ್ಬ, ಮೇಲೊಂದು ಟೋಪಿ ಅಥವಾ ಪಗಡಿ ಸುತ್ತಿರುವವರೇ. ನಾನು ಚಾ ಕೇಳಿ ಕುಳಿತೆ. ಸ್ವಲ್ಪ ಧೈರ್ಯ ಮಾಡಿ ಅಲ್ಲೇ ಕೂತಿದ್ದ ಸ್ವಲ್ಪ ಶಾಲೆ ಕಲಿತವನಂತೆ ಕಂಡ ಗಂಡಸೊಬ್ಬನನ್ನ ಕೇಳಿದೆ, ‘… ಇಂತಹವರ ಮನೆ ಯಾವ ಕಡೆ.ʼ ಪುಣ್ಯಕ್ಕೆ ಎಂಬಂತೆ ಆತ ಹೆಚ್ಚೇನೂ ವಿಚಾರಿಸದೆ, ಮನೆಯ ದಿಕ್ಕನ್ನೂ ಅಲ್ಲಿ ನಾನು ಹುಡುಕಿಕೊಂಡು ಬಂದಿರುವ ಹೆಂಗಸು ಇದ್ದಾರೆಂದೂ ಹೇಳಿಬಿಟ್ಟ. 

ಅಷ್ಟೇ ಸಾಕಾಗಿತ್ತು. ವಂದನೆ ಹೇಳಿ ಆ ಮನೆಯತ್ತ ಸಾಗಿದೆ. 

ʼತಾಯೀ… ಅಮ್ಮಾ… (ಆ ಹೆಂಗಸಿನ ಹೆಸರು ಹೇಳಿ) ಇದ್ದೀರಾ?ʼ 

ಒಬ್ಬ ಹೆಂಗಸು ಕೈ ಒರೆಸಿಕೊಂಡು ಬಂದು ಏನೆಂದು ಕೇಳಿದರು. ನಾನಿನ್ನೂ ಅವರ ಮನೆಯ ಹೊರ ಆವರಣದ ಬಾಗಿಲಲ್ಲೇ ಇದ್ದೆ. ಹೀಗೆ ಹೀಗೆ ನಾನು ಬೆಂಗಳೂರಿನಿಂದ ಬಂದಿದ್ದೀನಿ. ನೀವು ಇಂತಹವರೇನಾ ಎಂದು ಖಾತರಿ ಮಾಡಲು ಪ್ರಶ್ನಿಸಿದೆ. ‘ಹೌದು.ʼ 

‘ನಾನು ಬಂದಿದರೋದು ನಿಮ್ಮ ಮಗು…ʼ

ದಿಢೀರ್‌ ಎಂದು ಆಕೆಯಲ್ಲಿ ಏನೋ ಬದಲಾವಣೆ ಕಂಡಿತು. ಓಗು ಓಗು ದೂರೋಗ್‌. ಇಲ್ಯಾಕೆ ಬಂದೆ ಎಂದು ಮೆಲು ದನಿಯಲ್ಲೇ ಹೇಳಿ, ಆಕೆ ಓಗು ಆ ಬೇವಿನ ಮರದ ಹತ್ತಿರ ಹೋಗು ಎಂದು ಸಣ್ಣದಾಗಿ ಗದರಿ ಅಟ್ಟಿ ಬಿಟ್ಟಳು. ನನಗೋ ಅಯೋಮಯ. ಏನು ಮಾಡುವುದು, ಹೋಗಲೋ ಬೇಡವೋ ಎಂದು ಯೋಚಿಸುತ್ತಾ ಹೆಜ್ಜೆ ಹಾಕಿದೆ.

ಆಕೆ ಒಳಗೆ ಹೋಗಿ ಒಂದು ಚರಿಗೆಯಲ್ಲಿ (ಚಿಕ್ಕ ಚೊಂಬು) ನೀರು ತೆಗೆದುಕೊಂಡು ಬಾಗಿಲು ಮರೆ ಮಾಡಿ ರಸ್ತೆಗೆ ಬಂದು ನಡೆಯ ತೊಡಗಿದಳು. ಒಮ್ಮೆ ತಿರುಗಿ ಬಾ ಎಂಬಂತೆ ಕೈ ಸನ್ನೆ ಮಾಡಿದಳು. ಆಕೆ ಎತ್ತ ಹೊರಟಿರುವುದು ಎಂದು ಗೊತ್ತಾಯಿತು. ಕರೆದ ಕಾರಣ, ಆಕೆಯತ್ತ ಮತ್ತೆ ಹೆಜ್ಜೆ ಹಾಕಿದೆ. ಒಂದಷ್ಟು ದೂರ ಹೋದವಳು, ಒಂದು ಮುರಿದು ಬಿದ್ದಿದ್ದ ಮನೆಯ ಗೋಡೆಯ ಬಳಿ ತಿರುಗಿ ಮರೆಯಾಗಿ ನಿಂತಳು. ನಾನೂ ನಿಂತೆ. 

ಕೆಲವೇ ಮಾತುಗಳ ಚುಟುಕು ಸಂಭಾಷಣೆ. ನೀ ಬಂದದ್ದು ಇಲ್ಲಿ ಯಾರಿಗೂ ಹೇಳಬ್ಯಾಡ. ನೇರ ವಾಪಸ್ಸು ಹೋಗು. ಏನೋ ಕಷ್ಟ ಇದ್ದಾಗ ಆಗಬಾರದ್ದು ಮಾಡಿ ಮಗು ಆಗೋಯ್ತು. ಅದನ್ನ ಅಲ್ಲೇ ಸರ್ಕಾದೋರ್ಗೆ ಕೊಟ್ಬಿಟ್ಟಿದ್ದೆ. ಮತ್ತೆ ವಾಪಸ್ಸು ಹೋಗಿ ನೋಡೋಕ್ಕೆ ಆಗ್ಲಿಲ್ಲ. ಈಗ ಮದ್ವೆ ಆಗಿದೆ. ಒಂದು ಮಗು ಇದೆ. ಗಂಡಂಗೆ ಹಿಂಗ ಅಂತ ಗೊತ್ತಾದ್ರೆ ಹೂತಾಕ್ಬಿಡ್ತಾನೆ. ‘ಮತ್ತೆ ಮಗೂನ ಏನು ಮಾಡೋದು?ʼ ತನ್ನ ಜೀವ ಇದ್ದರೆ ಯಾವಾಗ್ಲಾದ್ರೂ ಬಂದು ನೋಡ್ತೀನಿ. ಈಗ ಈ ಸುದ್ದಿ ಬೇಡ. ‘ಹಾಗೆ ಮಗೂನ ಎಷ್ಟು ಕಾಲಾಂತ ಇಟ್ಕೊಳ್ಳೋದು?ʼ ಏನಾದ್ರೂ ಮಾಡಿ ಆ ಮಗೂಗೆ ಒಂದು ಬದುಕು ಕೊಡಿಸಿಬಿಡಿ. ನನಗೆ ಬೇಡ. ‘ಪತ್ರ ಬರೆದುಕೊಡ್ತೀಯ?ʼ ಅದೆಲ್ಲಾ ಈಗ ಆಗಲ್ಲ… 

ಇಷ್ಟು ಹೇಳಿದ ಆಕೆ, ಚೆರಿಗೆಯಲ್ಲಿದ್ದ ನೀರು ಚೆಲ್ಲಿ ಹಿಂದಕ್ಕೆ ಹೊರಟೇ ಹೋದಳು. ನನಗೋ ಧಿಗ್ಬ್ರಾಂತಿ. ಏನು ಮಾಡೋದು ಈಗ. ಅವಳ ಹಿಂದೆ ಹೋದರೆ, ಮನೆಗೆ ಕಾಲಿಟ್ಟರೆ ಆಕೆಗಿರಲಿ, ನನ್ನ ಚರ್ಮ ಸುಲಿಯುವ ಪರಿಸ್ಥಿತಿ. 

ಮತ್ತೆ ಹಿಂದಕ್ಕೆ ಪಯಣ. ಈ ಬಾರಿ ಆ ಹಳ್ಳಿಯಿಂದ ಸಾಕಷ್ಟು ದೂರ ನಡೆದು ಬರಬೇಕಾಯಿತು. ಯಾವುದೇ ವಾಹನ ಸಿಗಲಿಲ್ಲ. ಧೂಳು ಸ್ನಾನ. ಸರಿಯಾಗಿ ನೆನಪಿಲ್ಲ ಹೇಗೆ ಶಹಾಪುರ ತಲುಪಿದೆ ಅಂತ. ಎಲ್ಲೋ ಬಸ್‌ ಸಿಕ್ಕಿರಬೇಕು. ಶಹಾಪುರಕ್ಕೆ ಬಂದವನೇ ಪದ್ಮಾ ಸುಬ್ಬಯ್ಯನವರಿಗೆ ಎಸ್.ಟಿ.ಡಿ. ಬೂತ್‌ನಿಂದ ಫೋನು ಮಾಡಿದೆ. ಚುಟುಕಾಗಿ ವಿಚಾರ ಹೇಳಿದೆ. ಆಯ್ತು ವಾಪಸ್‌ ಬಾ. ಆಮೇಲೆ ನೋಡೋಣ ಎಂದರು. ಮತ್ತೆ ಗುಲ್ಬರ್ಗಾ ತಲುಪಿ ಧಡಬಡ ಎಂದು ರೈಲ್ವೆ ನಿಲ್ದಾಣಕ್ಕೆ ಓಡಿದೆ. ಬೆಂಗಳೂರು ಕಡೆಗೆ ಹೋಗುವ ಯಾವುದೋ ರೈಲು ಸಿಗುವುದು ಖಾತ್ರಿ ಆದ ಮೇಲೆಯೇ ಉಸಿರು ಬಿಟ್ಟಿದ್ದು. 

(ಮುಂದುವರಿಯುವುದು)

‍ಲೇಖಕರು ವಾಸುದೇವ ಶರ್ಮ

January 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು

22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು

ಸಿದ್ದನಗೌಡ ಪಾಟೀಲ ಆತ್ಮೀಯ ‘ಹೊಸತು’ ಓದುಗರೆ, ತಮ್ಮ ಸಹಕಾರದಿಂದ ಪತ್ರಿಕೆ 22ನೇ ವರ್ಷಕ್ಕೆ ಕಾಲಿಟ್ಟಿದೆ. ವೈಚಾರಿಕ ನೆಲೆಗಟ್ಟಿನಿಂದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This