ವಿಜಯಶ್ರೀ ಬರೆದ ಪೀಜ್ಜಾ ಪುರಾಣ!!

ಪಿಜ್ಜಾ ಹಟ್ಟಿನಲ್ಲಿ ಡಿನ್ನರ್ರು..

– ವಿಜಯಶ್ರೀ

ಚುಕ್ಕಿ ಚಿತ್ತಾರ ಪಿಜ್ಜಾ ಹಟ್ಟಿಗೆ ಹೋಗಿದ್ದೆವು. ನಾನೂ, ಇವರು ಮತ್ತು ಐಶು. ಶಿಶಿರ ಹಠ ಮಾಡಿಕೊಂಡು ಊರಿಗೆ ಹೋಗಿದ್ದರಿಂದ ಅವನೊಬ್ಬ ಮಿಸ್ಸಿಂಗು. ಐಶುವಿನ ಬರ್ತ್ ಡೇ ಟ್ರೀಟಿಗೆ ಪಿಜ್ಜಾ ಹಟ್ಟಿಗೆ ಹೋಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾಯ್ತು. ನಮ್ಮನೆಯಲ್ಲಿ ಬರ್ತ್ ಡೇ ನಮ್ಮದಾದರೂ ಸರಿ, ಮಕ್ಕಳದ್ದಾದರೂ ಸರಿ ಪಾರ್ಟಿ ಕೊಡಿಸುವುದು ಮಕ್ಕಳಿಗೆ ! ಹಾಗಾಗಿ ಐಶುವಿನ ಮೋಸ್ಟ್ ಫೆವರಿಟ್ ಚ್ಹೀಸೀ ಬೈಟ್ ಅನ್ನು ಮೊದಲೇ ನೆನೆದುಕೊಂಡು ಪಿಜ್ಜಾ ಹಟ್ಟಿಗೆ ಪಯಣ ಬೆಳೆಸಿದ್ದಾಯ್ತು. ಅಲ್ಲಿ ವೈಟರ್ ತಂದಿಟ್ಟ ಮೆನು ನೋಡಿಯೇ ನೋಡಿದೆ. ಪ್ರತಿ ಬಾರಿಯೂ ಆರ್ಡರ್ ಮಾಡಿದ ಪಿಜ್ಜಾದ ರುಚಿ ನೋಡಿದ ಮೇಲೆ, ರುಚಿ ಏನ್ಬಂತು ಮಣ್ಣು, ಪಿಜ್ಜಾ ಬಾಯಿಗಿಟ್ಟ ಮೇಲೆ ಬೇರೇದು ತಗೋ ಬೇಕಿತ್ತು ಅನಿಸುತ್ತಿತ್ತು. ಆ ಇಟಲಿಯವರ ಸುಡುಗಾಡು ಹೆಸರು ಒಂದೂ ನೆನಪಿಗೆ ಬರುವಂತದ್ದಲ್ಲ. ಐಶು ಅದೊ೦ತರ ಸ್ಟಾರ್ಟ್ರು ಆರ್ಡರ್ ಮಾಡಿದ್ಲು. ರೊಟ್ಟಿ ತುಂಡಿನ ಒಳಗೆ ಒಂದೆರಡು ತರಕಾರೀ ಪೀಸೂ, ಒಂದೆರಡು ಪನ್ನೀರ್ ಪೀಸೂ ಇತ್ತು. ಮತ್ತೆ ಪನ್ನೀರ್ ಪಿಜ್ಜಾ , ಅವಳ ಇಷ್ಟದ ಚ್ಹೀಸೀ ಬೈಟೂ , ಆಮೇಲೆ ಆ ವೈಟರ್ ಪುಣ್ಯಾತ್ಮ ಅದೇನೋ ಬೆವರೆಜ್, ಎರಡು ತಗೊಂಡ್ರೆ ಡಿಸ್ಕೌಂಟ್ ಸಿಗುತ್ತೆ ಅಂತ ಅದನ್ನೂ ನಮ್ ಕೈಲಿ ಆರ್ಡರ್ ಮಾಡಿಸಿದ..! ಗ್ರೀನ್ ಆಪಲ್ ಮೋಜಿಟೋ ಅಂತ. ಅದು ಚನ್ನಾಗಿತ್ತು. ಮತ್ತು ಅದು ಮಾತ್ರ ರುಚಿಯಾಗಿತ್ತು..! ಸುಮಾರು ಹೊತ್ತಾದ ಮೇಲೆ ಸ್ಟಾರ್ಟ್ರು ಮುಗಿಸಿದ ಮೇಲೆ ಪಿಜ್ಜಾ ಬಂತು. ಆ ವೈಟರ್ರೆ ಎಲ್ಲಾ ಎಳೆದು, ಸುಗುದು ಒಂದೊಂದು ಪೀಸು ಬಡಿಸಿ ಹೋದ. ನನಗೆ ಆ ಫೋರ್ಕು ಚಾಕು ಹಿಡ್ಕೊಂಡು ಯಾವ ದಿಕ್ಕಿಂದ ಕತ್ತರಿಸ ಬೇಕೂ ಅಂತಾನೂ ಗೊತ್ತಾಗಲಿಲ್ಲ. ನಾರೂ ನಾರು. ಬಾಲ ಬಾಲ.. ಐಶು ಮಾತ್ರಾ ಪ್ರೊಫೆಶನಲ್ಸ್ ತರಾ, ‘ಅಮ್ಮ ಹೀಗೆ ಹಿಡ್ಕೋ ಹಾಗೆ ಹಿಡ್ಕೋ’ ಅಂತ ಯಾವಾಗಿನಂತೆ ನನಗೆ ಉಪದೇಶ ಕೊಟ್ಟಳು.ನಟರಾಜ್ ನೋಡಿದೆ. ಅವರು ಒಂದೊಂದು ಕೈಯಲ್ಲಿ ಒಂದೊಂದು ಆಯುಧ ಹಿಡಿದು ಯುದ್ಧೋನ್ಮಾದದಿಂದ ಥೇಟ್ ವೈರಿಯ ತಲೆ ಹರಿಯುವ ಸ್ಟೈಲಿನಲ್ಲಿ ಪಿಜ್ಜಾವನ್ನು ಕತ್ತರಿಸುತ್ತಿದ್ದರು.ನಾನೂ ಶ್ರದ್ಧೆಯಿಂದ, ಭಕ್ತಿಯಿಂದ ಕತ್ತರಿಸುವ ಕಾರ್ಯದಲ್ಲಿ ಮಗ್ನಳಾದೆ.ರುಚಿಯೇ ಇರದ ಈ ಪಿಜ್ಜಾವನ್ನು ಯಾಕಾದರೂ ತಿನ್ನುತ್ತಾರೋ ಅಂತ ಪ್ರತಿಸಾರಿಯಂತೆ ಈ ಸಲವೂ ಅನ್ನಿಸಿತು. ನಟರಾಜ್ ಒಮ್ಮೆಲೇ ಜ್ಞಾನೋದಯವಾದವರಂತೆ, ” ರುಕ್ಕಮ್ಮನ ಗಂಡನನ್ನು ಕರ್ಕೊಬರ್ಬೇಕಿತ್ತು.” ಅಂದರು. ಯಾಕೆ ಅಂದ್ರೆ ನಮ್ಮ ಕೆಲಸದಾಕೆ ರುಕ್ಕಮ್ಮನ ಗಂಡ ಗೋಪಾಲ ಕಾರ್ಪೆಂಟರು. ಅವನ ಹತ್ತಿರ ಇರುವ ಗರಗಸ ಪಿಜ್ಜಾ ಕೊಯ್ಯಲು ಸಹಕಾರಿಯಾಗುತ್ತೆ ಅಂತ ಇವರು ಆಗಲೇ ಮನದಟ್ಟು ಮಾಡಿಕೊಂಡಿದ್ದರು. ನನ್ನ ಅಣ್ಣಂದಿರು ಆಗಿದ್ದಿದ್ದರೆ ‘ನಾರು ಬಜ್ಜ’ ಅನ್ನುತ್ತಿದ್ದರು ಗ್ಯಾರಂಟಿ. ಇನ್ನೂ ವಿಶ್ಲೇಷಿಸಿ ಬೇಕಿದ್ದರೆ [ ಪಿಜ್ಜಾ ಅಭಿಮಾನಿಗಳು ಯಾರೂ ಕಲ್ಲೆತ್ಕೊಂಡು ಬರಬೇಡಿ..] ಇದು ಹಳೆ ಎಮ್ಮೆ ಚರ್ಮ ಎಳೆದ ಹಾಗಿರುತ್ತೆ.. ಎಂದು ಹೊಗಳುತ್ತಿದ್ದರು. ನಾವೂ ಹೀಗೆ ವಿಸ್ತಾರ ಮಾಡಿ ಐಶು ವನ್ನು ಕೆಣಕಿದೆವು. ”ಅಪ್ಪಾ ಬರ್ಗರ್ ತಿನ್ನುವುದು ಇನ್ನೂ ಕಷ್ಟ” ಎಂದಳು. ಅದಾದರೆ ಮೊಸಳೆಯಂತೆ ಇಷ್ಟಗಲ ಬಾಯಿ ತೆರೆದು ಗಬಕ್ಕನೆ ಕಚ್ಚಿ ಹರಿಯಬೇಕಿತ್ತು. ಬಾಯಿ ಎಷ್ಟಗಲ ಮಾಡ್ಬೇಕು ಅಂತಾನೂ ಗೊತ್ತಾಗದೆ ಎಮ್ಮೆ ಮುರ ತಿಂದಂತೆ ತಿನ್ನ ಬೇಕಿತ್ತು. ”ಅದು ನಿನಗೇ ಇರಲಿ” ಎಂದೆ. ನನಗಂತೂ ಈ ಪಿಜ್ಜ್ಯಾದಲ್ಲಿ ರುಚಿ ಎಲ್ಲಿದೆ ಅಂತಾನೆ ಗೊತ್ತಾಗಲಿಲ್ಲ. ಎಲ್ಲಾ ಚೀಸು ಚೀಸು. ನೆಂಚಿಕೊಳ್ಳಲು ಕೂಡಾ ಚೀಸಿ ಡಿಪ್ಪಂತೆ. ಅಲ್ಲಿರುವ ಮೆಣಸಿನ ಬೀಜ.. ಪೆಪ್ಪರ್ ಪೌಡರ್ ನಲ್ಲೆ ಸ್ವಲ್ಪ ರುಚಿ ಇದೆ ಅನ್ನಿಸಿತು. ನಮ್ಮೂರಲ್ಲಿ ಬೇಸಿಗೆಯಲ್ಲಿ ಕಾಳು ಕಡಿ ಮಾಡುವ ಸಮಯದಲ್ಲಿ, ಒಣ ಮೆಣಸಿನ ಕಾಯಿ ತಂದು ಅದನ್ನು ಹೆಕ್ಕಿ ಒಣಗಿಸಿ ಡಬ್ಬ ತುಂಬಿ ಇಡುವಾಗ ಕೆಳಗಷ್ಟು ಮೆಣಸಿನ ಬೀಜ ಉಳಿಯುತ್ತಲ್ಲ, ಅದನ್ನು ಎಸೆದು ಬಿಡುತ್ತಾರೆ. ಆದ್ರೆ ನೋಡಿ, ಇಟಲಿಯಲ್ಲಿ ಅದನ್ನು ದಂಡ ಮಾಡದೆ ಪಿಜ್ಜಾಗೆ ಹಾಕಿಕೊಂಡು ತಿನ್ನುತ್ತಾರೆ ! ಐಶು ಚೀಸಿ ಬೈಟು ತಿಂದಾದ ಮೇಲೆ ”ಅಯ್ಯೋ ಪಿಜ್ಜಾ ತಿಂದರೆ ಒಬೇಸ್ ಆಗ್ತಾರೆ. ನಾಳೆಯಿಂದ ನಾಲ್ಕು ದಿನ ಊಟ ಮಾಡೋಲ್ಲ ನಾನು” ಎಂದು ಯೋಚನೆಗೆ ಶುರುವಿಟ್ಟು ಕೊಂಡಳು. ”ಒಂದು ತಿಂಗಳು ಊಟ ಬಿಡು” ಎಂದರು ಅವಳಪ್ಪ. ”ಹಸಿವಾದರೆ ಮತ್ತೆ ಪಿಜ್ಜಾ ಕೊಡುಸ್ತೀಯಾ” ಎಂದು ಮುಗ್ಧೆಯಂತೆ ಅಪ್ಪನನ್ನು ಕೇಳಿದಳು. ನಾನು ”ಇನ್ನು ಮುಂದೆ ಪಿಜ್ಜಾ ತಿನ್ನೋಲ್ಲ ಕರ್ಮ ” ಅಂತ ಈ ಸಲವೂ ಪ್ರತಿಜ್ಞೆ ಮಾಡಿದೆ …! ನಟರಾಜ್ ಮಾತ್ರ ”ಈ ಪಿಜ್ಜಾ ಒಳ್ಳೆ ರಬ್ಬರ್ ತರಾ ಹೊಟ್ಟೆ ಒಳಗೆ ಓಡಾಡ್ತಾ ಇದೆ” ಅಂದರು.. ಮನೆಗೆ ಹೋದ ತಕ್ಷಣ ಒಂದು ಉದ್ದಾ ಲೋಟದಲ್ಲಿ ಮಜ್ಜಿಗೆ ಬೇಕು ಅಂತ ಹೊಸ ಆರ್ಡರ್ ಕೊಟ್ಟರು.]]>

‍ಲೇಖಕರು G

April 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. malathi S

  hahaha good one Vijayashree Nataraj…
  but i just love Pizza or any junk food for that matter 🙂
  ms

  ಪ್ರತಿಕ್ರಿಯೆ
 2. Anuradha.rao

  ರಬ್ಬರ್ ತರಹ ಹೊಟ್ಟೆಯಲ್ಲಿ ಓಡಾಡುವುದು ಹೌದು …ಚೆನ್ನಾಗಿದೆ ಪಿಜ್ಜಾ ಪುರಾಣ ..

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ malathi SCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: