
ಚಂದ್ರು ಎಂ ಹುಣಸೂರು
ಪದಗಳಿಗೀಗ ನಮ್ಮ ನಡುವೆ
ಯಾವ ಕೆಲಸವೂ ಇಲ್ಲ
ನಾನು ಹೇಳುವುದು ನಿನಗೆ
ನೀನು ಹೇಳುವುದು ನನಗೆ
ಈ ಮೊದಲೇ ಯಾರೊ ಬರೆದುಕೊಟ್ಟಂತೆ
ನಮ್ಮದೇ ಕಥೆ ಟೀವಿಯಲ್ಲಿ ಪ್ರಸಾರವಾದಂತೆ
ಇತ್ತೀಚೆಗೆ ಹೀಗೆಲ್ಲ
ನಿನ್ನ ಬಗ್ಗೆ ಬರೆಯುವ ಸಾಲುಗಳಿಗೆ
ಯಾಕೊ ಖಾಲಿ ಹಾಳೆಯ ಸ್ವಚ್ಛ ಕಾಪಾಡುವ ಹುಚ್ಚು
ಹೇಳುವುದು ಕೇಳುವುದು
ಎರಡೂ ಭಾರವಾದಂತೆ
ಹವಮಾನ ಇಲಾಖೆಯ ಮಾತನ್ನು
ಮಳೆ ಸುತಾರಾಂ ಧಿಕ್ಕರಿಸಿದಂತೆ
ಎಲ್ಲೋ ಇರುವ ನೀನು
ಇಲ್ಲೇ ಇರುವ ನಾನು
ನಮ್ಮ ನಮ್ಮ ಯೋಗಕ್ಷೇಮ
ಕುಶಲೋಪರಿಗಳ ಹಂಗು ಬಿಟ್ಟಿದ್ದೇವೆ
ವಿದಾಯಕ್ಕೂ ಮುನ್ನದ ಕೊನೆಯ ಆಟದಂತೆ
ಕುಯಿಲಿಗೆ ಹಿಂದಿನ ದಿನ
ಗದ್ದೆ ಬದುವಲ್ಲಿ
ಇಲಿಯೊಂದು ಹತ್ತು ಮಕ್ಕಳ ಹೆತ್ತಂತೆ

ನಾವೇ ನಿಂತು ಕಟಕಟೆಯಲ್ಲಿ
ಮಾಡಿದ ಸಾಲು ಸಾಲು ಪ್ರಮಾಣಗಳು
ನಮ್ಮ ಎದೆಗೆ ಮುಖ ಆನಿಸಿ ಮಲಗಿರುವ ನಮ್ಮದೇ ಶವದಂತೆ
ಮಗು ಬಾಯಿ ತೆರೆವ ಸಮಯಕ್ಕೆ
ಚಂದಿರ ಅವಿತು ಕೂತಂತೆ
ನಾಳೆ ನನ್ನ ಎದುರು ನೀನು
ನಿನ್ನ ಎದುರು ನಾನು
ಅಚಾನಕ್ಕಾಗಿ ಸಿಕ್ಕಾಗ
ಏನು ಮಾತನಾಡುತ್ತೇವೆಂದು
ನಮಗೀಗಲೇ ಗೊತ್ತು
ಪರೀಕ್ಷೆಯಾದ ಮೇಲೆ ಹೊಳೆದ ಉತ್ತರದಂತೆ
ಎಚ್ಚರವಾದ ಮೇಲೆ ಕೂಗ ತೊಡಗಿದ ಅಲಾರಾಮಿನಂತೆ
ಕಾಡಿ ಬೇಡಿ ರಸ್ತೆ ತಿರುವುಗಳನ್ನು
ಶಪಿಸುತ್ತಾ ಒಲವು ಹುಟ್ಟಿತ್ತು
ದೂರವಾಗುವುದನ್ನು ಸ್ವಾಗತಿಸಿದ ನಮ್ಮ ಪ್ರೇಮಕ್ಕೆ
ಇಬ್ಬರೂ ಕೃತಜ್ಞರಾಗಬೇಕಿದೆ
ಆದಷ್ಟು ಬೇಗ ಹರಿದ
ನನ್ನ ಅತೀ ಇಷ್ಟದ ಅಂಗಿಯಂತೆ
ಒಂದೇ ಸಲ
ನಿಜವಾದ ಪ್ರೀತಿ
ಒಮ್ಮೆಲೇ ಆಗುವುದು
ಅನ್ನೋದೆಲ್ಲ ಕಟುಸುಳ್ಳು
ನಿನ್ನ ಮೇಲೆ ನನಗೆ ಪದೆ ಪದೇ ಪ್ರೀತಿಯಾಗುತ್ತದೆ
ನಿನ್ನನ್ನು ಪ್ರೀತಿಸಲು ಕಲಿತ ನಾನು
ನಿನ್ನ ಅಗಲಿಕೆಗೆ ನಾಲ್ಕು ದಿನ ಮುದುಡಿ
ನಂತರ ಮತ್ತದೇ ಒಲವಿಗೆ
ಪೊರೆ ಬಿಟ್ಟ ಹಾವಿನಂತೆ ಹೊಸಬನಾಗುತ್ತೇನೆ
ಪ್ರೀತಿಸುತ್ತೇನೆ
ಪ್ರೀತಿಸುತ್ತಲೇ ಇರುತ್ತೇನೆ
ಒಂದೇ ಸಲ ಪ್ರೀತಿ ಅನ್ನುವುದು ಹಾಸ್ಯಾಸ್ಪದ

ನಾನು ಆಗ ಒಬ್ಬಳನ್ನು ಪ್ರೀತಿಸಿದ್ದೆ
ಅವಳನ್ನು ಕುರಿತು ದಿನಕ್ಕೊಂದು ಪದ್ಯ ಬರೆದೆ
ಒಬ್ಬನೇ ಅವನ್ನು ಪದೆ ಪದೇ ಓದಿದೆ
ಓದುವ ಬರೆಯುವ ಬರದಲ್ಲಿ ಮಿಲನದ ಚಲನೆಯನ್ನೇ ಮರೆತಿದ್ದೆ
ಅವಳಿಗೆ ಮುತ್ತು ಕೊಡುವ ಅಥವಾ
ಕಣ್ಣೀರೊರೆಸುವ ತಾಪತ್ರಯಗಳಿಗೆ ಬೇಗ ಒಗ್ಗಲಿಲ್ಲ
ಅಪ್ಪಿಕೊಳ್ಳಲಿಲ್ಲ
ಜಾತಿ ಧರ್ಮದ ಹೆಸರಿನಲ್ಲಿ
ಅವಳನ್ನು ದೂರವಿಟ್ಟೆ
ಅವಳನ್ನು ಕೂಡುವ ಯೋಗ್ಯತೆ ಇಲ್ಲದ ಹೇಡಿಯೇ ಆಗಿದ್ದರೂ ಬಿಡುವಾಗ ಅವಡುಗಚ್ಚಿ ಅತ್ತಿದ್ದೆ
ಅವಳು ಅತ್ತಂತೆ ಕಾಣಲಿಲ್ಲ
ಅವಳು ಇನ್ನೊಬ್ಬನ ಕೈ ಕೈ ಹಿಡಿದು ನಡೆದಳಂತೆ
ಅವನು ಅವಳಿಗೆ ಮುತ್ತು ಕೊಟ್ಟನಂತೆ
ಇಲ್ಲಿ ನಾನು ನನ್ನ ತುಟಿಗಳನ್ನು ಕನ್ನಡಿಯಲ್ಲಿ
ಹೊಸದಾಗಿ ನೋಡಿಕೊಂಡೆ
ನನಗು ಎಲ್ಲರೂ ಸೇರಿ
ಮದುವೆ ಮಾಡಿದರು
ಮಕ್ಕಳಾದವು
ಈಗ ಸರಿ ರಾತ್ರಿಯಲ್ಲಿ ಅವಳಿಲ್ಲದ ಹಾಸಿಗೆಗೆ ಬೆಂಕಿ ಹಚ್ಚುತ್ತೇನೆ
ಅವಳು ಮಾಡುವ ಶುಶ್ರೂಷೆಗಾಗಿ ಜ್ವರ ಹೆಚ್ಚಾದಂತೆ ನರಳುತ್ತೇನೆ
ಅವಳೊಂದಿಗೆ ಮುನಿದ ದಿನವೇ
ಅಪ್ಪುಗೆಗಾಗಿ ಹಾತೊರೆಯುತ್ತೇನೆ
ಇದು ಪ್ರೀತಿ ತಾನೆ
ಆ ಒಂದೇ ಸಲ ಪ್ರೀತಿ ಅನ್ನುವುದಾದರೆ ಇದೇನು?

ಪ್ರೀತಿಸಲಾಗದ ಹೇಡಿಗಳಷ್ಟೇ
ಇನ್ನೊಬ್ಬರ ಪ್ರೀತಿಗೆ ವ್ಯಾಖ್ಯಾನ ಕೊಡಬಲ್ಲರು
ಅವಳನ್ನು ಜೀವದಂತೆ ಪ್ರೀತಿಸುವ ನಾನು
ಅವಳನ್ನು ಪ್ರೀತಿಸದೇ ಹೋದರೆ
ಅಥವಾ ನೆಗೆದು ಬಿದ್ದರೆ
ಅವಳ ಕಣ್ಣೀರು ಒರೆಸುವ
ಆ ಕೈಗಳ ಮೇಲೆ ಅವಳಿಗೆ ಪ್ರೀತಿಯಾಗಲೇಬೇಕು
ತೃಣಮಾತ್ರ ಹಸಿ ಇರುವಷ್ಟು ದಿನ
ಗರಿಕೆ ಚಿಗುರುವಂತೆ
ಹೊಳೆ ಇದ್ದಷ್ಟೂ ಕಾಲ
ಮೀನುಗಳು ಹುಟ್ಟುವಂತೆ
ಪ್ರತಿ ರಾತ್ರಿಯೂ
ಪ್ರತಿ ಹಗಲೂ
ಈಗ ಇದನ್ನು ಓದಿದ ಮೇಲೆಯೂ
ನಿಮ್ಮ ಪ್ರೀತಿ ಪಾತ್ರರು ಕಣ್ಣ ಮುಂದೆ ಬಂದೇ ಬರುತ್ತಾರೆ
ಒಬ್ಬರೂ ಬರದ ದಿನ ಪ್ರೀತಿ ಸತ್ತಿರುತ್ತದೆ
0 ಪ್ರತಿಕ್ರಿಯೆಗಳು