ವಿನಯಾ ಅವರ 'ಊರ ಒಳಗಣ ಬಯಲು'

-ಜಿ ಎನ್ ರಂಗನಾಥ ರಾವ್

ದಿ ಸಂಡೇ ಇಂಡಿಯನ್

bookreview‘ಬಹುಮಾನಿತ’ ಎಂಬ ಹಣೆಪಟ್ಟಿ ಕಟ್ಟಿಕೊಂಡೇ ಬಂದಿರುವ ಡಾ. ವಿನಯಾ ಅವರ ‘ಊರ ಒಳಗಣ ಬಯಲು’ ಸಂಕಲನದ ಕಥೆಗಳು ಬಹುತೇಕ ನಮ್ಮನ್ನು ನಿರಾಶೆಗೊಳಿಸುವುದಿಲ್ಲವಾದರೂ ಪೂರ್ಣ ತೃಪ್ತಿಯನ್ನೂ ಕೊಡುವುದಿಲ್ಲ.

ಇಲ್ಲಿನ 11 ಕಥೆಗಳಲ್ಲಿ ಬಹುತೇಕ ಸ್ತ್ರೀ ಭೂಮಿಕೆಯವು. ಧ್ವನಿಪೂರ್ಣ ಶೀರ್ಷಿಕೆಗಳಲ್ಲಿ, ಮಂದ್ರಲಯದಲ್ಲಿ ತೆರೆದುಕೊಳ್ಳುವ ಈ ಕಥೆಗಳ ಪ್ರಬಂಧ ದನಿ ಪ್ರೀತಿ-ವಿರಸ ಸಂಬಂಧಗಳು. ಗಂಡು, ಹೆಣ್ಣಿನ ವ್ಯಕ್ತಿಗತ ನೆಲೆಯಲ್ಲಿ ಮತ್ತು ಸಮಷ್ಟಿ ನೆಲೆಯಲ್ಲಿ ಒರೆಗೆ ಬೀಳುವ ಈ ಸಂಬಂಧಗಳು ಮುಖ್ಯವಾಗುವುದು, ಗಟ್ಟಿಯಾಗುವ ಸಕಾರಾತ್ಮಕ ಬೆಳವಣಿಗೆ ಕಾಣುವುದು ಮಾನವೀಯ ಮೌಲ್ಯಗಳ ಆಯಾಮದಲ್ಲೇ. ಈ ಕಥೆಗಳಲ್ಲಿ ಎದ್ದು ಕಾಣುವ ಅನನ್ಯತೆಯೆಂದರೆ, ಬದುಕಿನ ಅಗ್ನಿದಿವ್ಯಗಳೆಲ್ಲವನ್ನು ಎದುರಿಸಿ, ಈ ಹೋರಾಟದಲ್ಲಿ ಹೈರಾಣಾದರೂ ಗಟ್ಟಿ ನಿಲ್ಲುವ, ಪ್ರಬುದ್ಧತೆಯತ್ತ ಮುಖಮಾಡುವ ಬೆಳವಣಿಗೆ. ಈ ಮಾತಿಗೆ ನಿದರ್ಶನವಾಗಿ ‘ಒಂದು ಖಾಸಗಿ ಪತ್ರ’ ‘ಊರ ಒಳಗಣ ಬಯಲು’ ‘ಸ್ವಯ’ ಮೊದಲಾದ ಕಥೆಗಳನ್ನು ನೋಡಬಹುದು.

ಯಶವಂತ ಚಿತ್ತಾಲರ ‘ಮೂರು ದಾರಿಗಳು’ ಕಾದಂಬರಿಯ ದುರಂತ ನಾಯಕಿಯನ್ನು ನೆನಪಿಗೆ ತರುವ ‘ಒಂದು ಖಾಸಗಿ ಪತ್ರ’ದ ಪಪ್ಪಿ, ಯುವಕನೊಬ್ಬ ಹಬ್ಬಿಸುವ ಪ್ರೀತಿ-ಪ್ರಣಯಗಳ ಗಾಳಿಮಾತಿನಿಂದಾಗಿ ಬಂಧುಗಳ- ಸಮಾಜದ ಭರ್ತ್ಸನೆಗೆ ಒಳಗಾಗಿ ಜರ್ಝರಿತಳಾಗುತ್ತಾಳಾದರೂ, ಅವಳು ಅದನ್ನು ನಿಭಾಯಿಸುವ ರೀತಿ ಮಾತ್ರ, ಅವಳಂಥವರಿಗೆ ಬದುಕಿನಲ್ಲಿ ಪ್ರೀತಿ- ವಿಶ್ವಾಸ ಮೂಡಿಸುವಂಥದ್ದು. ಆ ಯುವಕನಿಗೆ ಪತ್ರ ಬರೆಯುವ ಮೂಲಕ ಅವನ ಭಾನಗಡಿಯಿಂದ ತನಗಾದ ನೋವುಗಳನ್ನು ತೋಡಿಕೊಳ್ಳುತ್ತಲೇ, ‘ಇಷ್ಟಕ್ಕೂ ಬದುಕನ್ನು ಗಂಭೀರವಾಗಿ ಕಾಣುವ ಗರಜನ್ನು ನಂಗೆ ತಂದವನು ನೀನು. ಪ್ರತಿ ಗಳಿಗೆಯನ್ನೂ ಉತ್ಕಟವಾಗಿ ಬದುಕಲು ಹಚ್ಚಿದವ. ನಿನ್ನಲ್ಲಿಲ್ಲದ ಅಪ್ಪಟ ಮನುಷ್ಯತ್ವದ ನಿರಂತರ ಹುಡುಕಾಟಕ್ಕೆ ನಿನಗೆ ತಿಳಿಯದೆ ನನ್ನ ಸಿದ್ಧಗೊಳಿಸಿದ್ದೆ’ ಎಂದು ತಲುಪುವ ಈ ಅರಿವಿನ ಮೆಟ್ಟಿಲು ಗಟ್ಟಿಯಾಗಿ ನಿಲ್ಲಬೇಕೆಂಬ ಜೀವಪರವಾದ ಪ್ರಬುದ್ಧ ಬೆಳವಣಿಗೆಯಾಗಿದೆ. ಈ ಬೆಳವಣಿಗೆ ಚಿತ್ತಾಲರ ನಂತರದ ಸಣ್ಣಕಥೆಯ ಬೆಳವಣಿಗೆಯ ದ್ಯೋತಕ.

‘ಊರ ಒಳಗಣ ಬಯಲು’ ಒಂದು ಅಂತರ್ ಧರ್ಮೀಯ ವಿವಾಹದ ಕಥೆಯಾದರೂ ಅದರೊಳಗೆ ಕೋಮು ವೈಷಮ್ಯ ಮತ್ತು ಕರುಳಬಳ್ಳಿಯ ಸೆಳೆತಗಳೂ ಹೆಣೆದುಕೊಂಡಿದ್ದು ಮನುಷ್ಯ ಸಂಬಂಧಗಳು, ಮಾನವೀಯ ಮೌಲ್ಯಗಳು, ಅಕಾರಣ ದ್ವೇಷ, ಆವೇಶಗಳು ಸಂಘರ್ಷದ ಪಾತಳಿಯಲ್ಲೇ ಎದುರಾಗುತ್ತವೆ. ಕಥೆಯ ಶುರುವಿಗೆ ಸುಧಾಕರ ಎನ್ನುವವನು ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿ, ಮನೆಯಿಂದ ದೂರವಾಗಿ ‘ಹುಟ್ಟಿದ ಮಗನ ನೆತ್ತಿಯ ಮೇಲೆ ತಾಯಿಯ ಪ್ರಸಾದ ಬೀಳಲಿ’ ಎಂದು ಹುಟ್ಟಿದೂರಿಗೆ ಹಿಂದಿರುಗಿದ್ದಾನೆ. ದೇವಸ್ಥಾನದಲ್ಲಿ ಬಾಲ್ಯದ ಗೆಳೆಯ ನಾಗೇಶನ ಭೇಟಿಯೊಂದಿಗೆ ನೆನಪು ಭೂತಕಾಲಕ್ಕೆ ಸರಿಯುತ್ತೆ. ಭಟ್ಕಳದ ಕೋಮುಗಲಭೆ ದಿನಗಳಲ್ಲಿ ಸುಧಾಕರ ಮಾಪಳರ ಕೇರಿಯ ಮೇಲೆ ಹಲ್ಲೆ ನಡೆಸುವಾಗ ಮದೀನಾಳ ಮುಡಿಗೆ ಕೈ ಹಾಕಿದಾಗ ‘ಛೋಡದೊ ಭಯ್ಯಾ’ ಕೂಗಿನ ಪ್ರಜ್ಞಾಘಾತದಿಂದಾಗಿ ಅಕೃತ್ಯದಿಂದ ಹಿಂದೆ ಸರಿದು ಕೋಮುದ್ವೇಷದ ತೂಫಾನಿನಿಂದ ದೂರವಾಗುತ್ತಾನಾದರೂ ಪಾಪಪ್ರಜ್ಞೆಯಿಂದ ಬಿಡುಗಡೆ ಇಲ್ಲ. ಬಸ್ಸಿನಲ್ಲಿ ಕಂಡ ಬುರ್ಖಾ ಹೆಂಗಸು ಮದೀನಾ ಆಗಿ ಮತ್ತೆ ಅವಳಿಂದ ಭಯ್ಯಾ ಅನ್ನಿಸಿಕೊಂಡು ಪಾಪವಿಮುಕ್ತನಾಗಲು ಮನಸ್ಸು ಪರಿತಪಿಸುತ್ತದೆ. ಈ ಅರಿವಿನೊಂದಿಗೇ ದೋಣಿ ನಾರಾಯಣನ ‘ಹೊತ್ತ್ ತಿರುಗುಕ್ ಬಂತಪ್ಪ. ಅಂವಾ ನಮ್ಮ ಸುಧಾಕರನೇ ಹೌದಾದ್ರೆ ಇಟ್ಟೊತ್ತಿಗೇ ಹೊಳ್ಳಬೇಕಾಗಿತ್ತಪ್ಪ. ಅಥ್ವಾ ಪಾಂಡೊಡಿದೀರು ಮಗನ್ನ ಮನೀಗೆ ಕರ್ಕಂಡ್ರಾ ಏನ್ ಬಲಾ. ಅಟ್ಟಾಗಲಿ ದ್ಯಾವ್ರೇ’ ಎನ್ನುವ ಸಂಭ್ರಮದಲ್ಲಿ ಕಥೆಯ ಒಡಲೊಳಗಿನ ಕ್ಷೆಭೆ ತೀರಿ ಸಾಮರಸ್ಯ ಕೂಡಿಕೊಳ್ಳುತ್ತಿರುವುದರ ಸೂಚನೆಯಲ್ಲಿ ಮಾನವೀಯ ಮೌಲ್ಯಗಳ ಪಾರಮ್ಯ ಸ್ಪಷ್ಟವಾಗುತ್ತದೆ.

‘ಸ್ವಯ’-ಗಂಡನ ತಪ್ಪು ನಡೆ- ಹೆಂಡತಿಯ ಬಿಗುಮಾನ ಅಳುಕುಗಳಿಂದಾಗಿ ವಿಷಮ ದಾಂಪತ್ಯಕ್ಕೆ ಚಾಚಿಕೊಳ್ಳುತ್ತದೆ. ಅಪಘಾತವೊಂದು ದೂರವಾಗಿದ್ದ ಗಂಡ- ಹೆಂಡಿರನ್ನು ಹತ್ತಿರ ತಂದಾಗ ಪ್ರೀತಿಯ ನಿಜಸ್ವರೂಪ ತಾದಾತ್ಮ್ಯ ಭಾವದಲ್ಲಿ ಪ್ರಕಟಗೊಂಡಂತೆ, ‘ನನ್ನ ಕೈ ನೇವರಿಸುತ್ತಿದ್ದಾನೆಯೇ? ಈ ನಿದ್ದೆಯೆ ಇರಲಿ. ಎಚ್ಚರಕೆ ಲಜ್ಜೆ’ ಎಂದು ಅವಳಿಗೆ, ಚಿಲಿಪಿಲಿ ಬೆಳಕಾಗುತ್ತದೆ. ಪ್ರೀತಿಯ ನಿಜ ಸ್ವರೂಪ ಮತ್ತು ತಾದಾತ್ಮ್ಯಗಳೆರಡನ್ನೂ ದರ್ಶನ ಮಾಡಿಸುವ ‘ಸ್ವಯ’ ಪ್ರಬುದ್ಧತೆ ಮೆರೆಯುವುದರ ಜೊತೆಗೆ ಬಂಧದ ದೃಷ್ಟಿಯಿಂದಲೂ ತುಂಬಾ ಅಚ್ಚುಕಟ್ಟಾದ ಕಥೆ.

‘ಕ್ಷಮೆಯಿರಲಿ ಕಂದಾ’- ಮಾನವೀಯ ಸಂಬಂಧಗಳು ಸಮಷ್ಟಿಯ ನೆಲೆಯಲ್ಲಿ ಎದುರಿಸಬೇಕಾದ ಸಂದಿಗ್ಧತೆ-ಸವಾಲುಗಳು-ಆತ್ಮಾವಲೋಕನಗಳನ್ನು ವ್ಯಕ್ತಿಗತ ಸಂಬಂಧಗಳ ಮುಖೇನವೇ ಬಿಂಬಿಸುವ ಅಂತಃಕರಣದ ತುಡಿತ. ಅಧ್ಯಾಪಕಿ-ವಿದ್ಯಾರ್ಥಿಗಳಾದ ವಿಶ್ವಾಸ್-ಅಮ್ಜದಲಿ ಇವರ ಸ್ನೇಹ ಸಂಬಂಧಗಳು ಊರೊಳಗಣ ಕೋಮುವಿರಸದಿಂದಾಗಿ ದೂರ ಸರಿಯುವುದು ಅನಿವಾರ್ಯವಾಗುತ್ತದೆ. ಅಮ್ಜದ್-ವಿಶ್ವಾಸ್‌ರ ಸ್ನೇಹ, ನೀತಾ-ಹಮೀದರ ಸ್ನೇಹದ ಮಾತುಕತೆ, ಕಾಲೇಜಿನ ‘ಸುರ ಕುಂಭ’ ಸಮಾರಂಭ, ಅಮ್ಜದನಲ್ಲಿ ಪಾರ್ವತಿ ಪಾಟೀಲಳ ಪ್ರೀತಿ ಇದಾವುದೂ ತಪ್ಪಲ್ಲ. ಆದರೆ ಹಿಂದೂ ಸಂಘಟನೆಯೊಂದರ ಧರ್ಮೋನ್ಮಾದ ಮತ್ತು ವಿಕೃತ ಮನಸ್ಸುಗಳೆದುರು ಹಾಗೆ ಹೇಳಲಾಗದಂಥ ಪರಿಸ್ಥಿತಿಯನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸುವ ಈ ಕಥೆಯಲ್ಲಿ ಹೇಳಬೇಕಾದ ಮಾತು ಮನಸ್ಸಿನಲ್ಲೇ ಉಳಿದುಕೊಂಡರೂ ‘ಧೈರ್ಯವಾಗಿರು, ಬಿರುಸು ನೆಲದ ಮರವಾಗು, ಅಮ್ಜದನ ಸ್ನೇಹ ಎಂದೂ ಕಳಚಿಕೊಳ್ಳಬೇಡ’ ಎನ್ನುವ ಸಂಕಲ್ಪದ ಧ್ವನಿಯಲ್ಲಿ ದಿಟ್ಟ ನಿಲುವಿನ ಬೆಳವಣಿಗೆ ಸ್ಪಷ್ಟವಾಗುತ್ತದೆ.

ಪ್ರೀತಿ, ಜಾಣೆಯಾಗಿರು ನನ್ನ ಮಲ್ಲಿಗೆ, ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ- ಕವಿತೆಯಂತೆ ಓದಿಸಿಕೊಳ್ಳುವ ಮೂರು ಕಿರುಗತೆಗಳು. ‘ಪ್ರೀತಿ’ ಆಗತಾನೆ ಮದುವೆಯಾಗಿ ಕೆಲಸಕ್ಕೆ ಹೋಗಲಾರದ ವಿಷಾದ, ದಾಂಪತ್ಯ ದೀಪಿಕೆಗೆ ಗ್ಯಾಸು -ಬಾಡಿಗೆ ಗೂಡು ಇಂಥ ಕಿರಿಕಿರಿಗಳಲ್ಲಿ ‘ಪ್ರೀತಿಯೆಂಬ ನಿಧಿ ಬೊಗಸೆಯಲ್ಲಿ’ ತುಂಬಿಕೊಳ್ಳುವ ಪ್ರೀತಿಯ ಒಂದು ರಖಮ್ಮನ್ನೂ, ಕೈಕೊಳದ ಶಿಕ್ಷೆಗೊಳಗಾದ ಗಂಡನೊಂದಿಗೆ ಝಣಝಣ ಆತ್ಮದ ರುಚಿಕಾಣುವ ಇನ್ನೊಂದು ರಖಮನ್ನೂ ಅಕ್ಕಪಕ್ಕದಲ್ಲಿಟ್ಟು ಪ್ರೀತಿಯ ದರ್ಶನ ಮಾಡಿಸುತ್ತದೆ. ಒಂದು ಒಳ್ಳೆಯ ಕವಿತೆಯನ್ನೋದಿದಂತೆ ಪ್ರೀತಿಯ ಗುಂಗು ಹಿಡಿಸುತ್ತದೆ.

‘ಸ್ವಯ’ ‘ಕ್ಷಮೆಯಿರಲಿ ಕಂದಾ’ ‘ಪ್ರೀತಿ’ ‘ಜಾಣೆಯಾಗಿರು…’ ‘ಹತ್ತು ವರ್ಷದ ಹಿಂದೆ…’

ಈ ಕಥೆಗಳಲ್ಲಿ ಕಂಡುಬರುವ ‘ನಿರಾಯಾಸದ’ ಶೈಲಿ ವಿನಯಾ ಅವರ ಉಳಿದ ಕಥೆಗಳಲ್ಲಿ ಕಾಣುವುದಿಲ್ಲ. ಭಾಷೆ, ಕೆಲವು ಕಡೆಗಳಲ್ಲಿ ಹಳಹಳಿಕೆಯಲ್ಲೇ ಗಿರಕಿಹೊಡೆದಂತೆ, ನೆನಪುಗಳ ವಜನು ಜಾಸ್ತಿಯಾದಂತೆ, ಭೂತ-ವರ್ತಮಾನಗಳ ಲಾಳಿಯಲ್ಲಿ ನೇಯ್ಗೆ ಗೋಜಲಾದಂತೆ ನಿರಾಯಾಸದ ಓದಿಗೆ ತೊಡಕಾಗುತ್ತದೆ. ಇದು ಕವಿತೆಯ ಲೋಕದಿಂದ ಗದ್ಯಾಂತರದ ಕಷ್ಟವಿದ್ದೀತೇ ಎನ್ನಲು ಗದ್ಯಕಾವ್ಯದಂಥ ಕೊನೆಯ ಮೂರು ಕಥೆಗಳಿವೆಯಲ್ಲ !

‍ಲೇಖಕರು avadhi

October 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This