ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯನ್ನು ‘ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ‘ವಿಜಯ ಕರ್ನಾಟಕ’ದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಆಧುನಿಕ ಸಂವಹನ ಮಾಧ್ಯಮಗಳ ಎಲ್ಲಾ ಭರಾಟೆಗಳ ನಡುವೆಯೂ ವಾರಕ್ಕೊಂದರಂತೆ ಪ್ರೇಮ ಪತ್ರ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದ ಹುಡುಗನೊಬ್ಬ ತನ್ನವಳಿಗೆ ತಲುಪಿಸಬೇಕಾದ ಅನೇಕ ವಿಷಯಗಳನ್ನು ಪತ್ರದಲ್ಲಿ ಬರೆಯುವ ಕಥೆಗಳ ಮುಖೇನ ದಾಟಿಸುತ್ತಿದ್ದನು.‌ ಅದ್ಯಾವ ಉತ್ಸಾಹದಲ್ಲಿದ್ದನೋ ಏನೋ ಒಂದೇ  ಪತ್ರದಲ್ಲಿ ಈ ಐದು ಕಥೆಗಳನ್ನು ಬರೆದಿದ್ದನು.‌ ಆ ಎಲ್ಲಾ ಕಥೆಗಳನ್ನು ಸೇರಿಸಿ ನಾನು ಈ ಶೀರ್ಷಿಕೆ ನೀಡಿದ್ದೇನೆಯೇ ಹೊರತು ಅವನು ಕಥೆಗಳಿಗೆ ಯಾವುದೇ ಟೈಟಲ್ ಕೊಡುತ್ತಿರಲಿಲ್ಲವಂತೆ … 

                *       *       *      * 

                    ಒಂದು :                   

ತಮ್ಮ ಹತ್ತನೇ ವರ್ಷದ ಪ್ರೇಮೋತ್ಸವದ ದಿ‌ನ ಆಕೆ ಅವನಿಗೆ ಇನ್ನೇನು ಕೇಕ್ ತಿನ್ನಿಸಬೇಕೆನ್ನುವಷ್ಟರಲ್ಲಿ ಅವನನ್ನು ಕೇಳಿದಳು :ನಾವು ಮೊದಲ ಬಾರಿ ಭೇಟಿಯಾದಾಗ ತಿಂದ ಕೇಕ್ ನ ಫ್ಲೇವರ್ ಯಾವುದು ಹೇಳು ನೋಡೋಣ ? 

ಅವನು ತಡವರಿಸಿದ. ನೆನಪಿಸಿಕೊಂಡವನಂತೆ ನಟಿಸುವುದರ ಬದಲಾಗಿ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸಿದ. ಆದರವಳು ಇವನ ನಾಟಕವನ್ನು ಪತ್ತೆ ಹಚ್ಚಿದಳು. ಕೊನೆಗೆ ‘ ಸಾರಿ‌ ಡಿಯರ್ ಸರಿಯಾಗಿ ನೆನಪಾಗುತ್ತಿಲ್ಲ. ಸುಳ್ಳು ಸುಳ್ಳೆ ಯಾವುದೋ ಒಂದು ಹೇಳುವುದು ನನಗೆ ಇಷ್ಟವಿಲ್ಲ’ ಎಂದು ಮುಖ ಸಪ್ಪಗೆ ಮಾಡಿಕೊಂಡು ಬಾಯಿ ತೆರೆದ. ಕೇಕ್ ನ ತುಂಡನ್ನು ಅವನ ಬಾಯಿಗಿರಿಸಿ ಸರಸರನೆ ಹೋಗಿ ರಾಣಿಯರಂತೆ ಕೋಪಗೃಹವನ್ನು ಪ್ರವೇಶಿಸಿದ್ದರಿಂದ ಅವರ ಪ್ರೇಮೋತ್ಸವದ ಸಂಭ್ರಮ ಭಂಗವಾಯಿತು. 

ಪ್ರೇಮಿಗಳೂ ಮನುಷ್ಯರು ಎಂಬುದನ್ನು ಅವರಿಬ್ಬರೂ ಮರೆತಿದ್ದರು. 

                          ಎರಡು :                         

‘ಅವ್ನಾ ಡೈರೆಕ್ಟ್ ಆಗಿ ಕೇಳ್ದೆ ಕಣೇ . ಹೌದು ನಾನು ಮಾಡಿದ್ದೆಲ್ಲ ಬರೀ ಟೈಂಪಾಸ್ ಗೇನೇ ಅಂದ’ 

‘ ಅಯ್ಯೋ ಹೌದಾ ? ಥೋ ..‌. ಡುಬಾಕ್ ನನ್ಮಗ ಹಾಗಂದ್ನಾ ? ಸಾಚಾ ಅನ್ಕೊಂಡಿದ್ನಲ್ಲೇ ಅವ್ನ ‘ 

ಡಿ-ಮಾರ್ಟ್ ನ ಪ್ಯಾಕೇಜಿಂಗ್ ಕೌಂಟರ್ ನಲ್ಲಿ ಗ್ರಾಹಕರು ತಂದಿಟ್ಟ ಕವರ್ ಗಳನ್ನು ತೂಕಮಾಡಿ,ಸೀಲ್ ಮಾಡಿ ಅವುಗಳಿಗೆ ಬಾರ್ ಕೋಡ್ ಯುಕ್ತ ಪ್ರೈಸ್ ಸ್ಲಿಪ್ ನ್ನು ಅಂಟಿಸುವ ಇಬ್ಬರು ಹುಡುಗಿಯರು ಹೀಗೆ ಮಾತಾಡಿಕೊಳ್ಳುತ್ತಿರುವ ಹೊತ್ತಿಗೆ ನಾನು ತೆಗೆದುಕೊಂಡಿದ್ದ ಅಕ್ಕಿಯ ಎರಡು ಕವರ್ ಗಳನ್ನು ತೂಕಯಂತ್ರದ ಮೇಲಿಟ್ಟು ಏನೂ ಕೇಳಿಸಿಕೊಂಡಿಲ್ಲ ಎಂಬಂತೆ ಅವರನ್ನು ದಿಟ್ಟಿಸಿದೆ. ಇದು ಅವರ ಗಮನಕ್ಕೂ ಬಾರದಂತಿದ್ದ ಅವರು ತಮ್ಮ ಮಾತು ಮುಂದುವರಿಸಿದರು. 

‘ಅಲ್ಲಾ, ಮಾನ ಮರ್ಯಾದೆ ಇದೆಯಾ ಅವನಿಗೆ ? ‘

‘ ಸರಿ , ಈಗೇನ್ ಮಾಡ್ತೀಯಾ ? ‘ 

‘ ಏನ್ ಮಾಡ್ಲಿ ? ಅವ್ನೇನ್ ಮಾಡ್ತಾನೋ ನಾನೂ ಅದ್ನೆ ಮಾಡ್ತೀನಿ ‘ 

‘ ಅಲ್ಲಾ ನೀವಿಬ್ರೂ ಒಂದು ಹೆಜ್ಜೆ ಮುಂದೆ ಹೋಗಿದ್ರಲ್ವಾ ? ಅದ್ಕೆ ಕೇಳಿದೆ ಕಣೇ ‘

‘ ಮುಂದೆ ಹೋಗಿದ್ದು ನಿಜ. ಆದ್ರೆ ಈಗ ಹಿಂದೆ ಬಂದ್ರೆ ಆಯ್ತು ‘ 

‘ ಏನೇ ನೀನು ಅಷ್ಟು ಈಸಿಯಾಗಿ ಹೇಳ್ತಿಯಾ ? ‘ 

‘ ಅಲ್ಲಾ, ಮೈಮರೆಯೋವಾಗ ಇಬ್ರೂ ಇದ್ವಿ‌. ಹಾಗೇ ಈಗ ಅವನು ಮರೆಯೋ ಹಾಗೆ ನಾನೂ ಮರೀತೀನಿ. ಅವನಿಗಿರೋ ಜ್ಞಾನ , ವಿಜ್ಞಾನವೇ ನನಗೂ ಇರೋದು ‘ 

ಹೀಗೆಂದು ಹೇಳಿದ್ದನ್ನು ಕೇಳಿ ಮುರಿದು ಬಿದ್ದ ಪ್ರೀತಿಯೊಂದರ ಬಗ್ಗೆ ನೋವಾಗಿದ್ದರೂ ಆಕೆಯ ಈ ಮಾತು ಕೇಳಿ ಒಂಥರಾ ಖುಷಿಯಾಯಿತು. ಡಿ-ಮಾರ್ಟ್ ನಲ್ಲೊಂದು ಡಿಸ್ಟರ್ಬಿಂಗ್ ಸ್ಟೋರಿ ಕೇಳಿಸಿಕೊಂಡು ಮನೆಗೆ ಬಂದೆ. 

                ಮೂರು :                

ಅವರಿಬ್ಬರೂ ಕಾಫಿ ಕುಡಿಯುತ್ತ ಕೂತಿರುವಾಗ ಅವಳು‌ ಅದೇನೇನೋ ಹೇಳುತ್ತಲೇ ಇದ್ದಳು. ಇವನು ಕೈಯಲ್ಲಿ ನ್ಯೂಸ್ ಪೇಪರ್ ಹಿಡಿದು ಅನ್ಯಮನಸ್ಕನಾಗಿ ಕೂತಿದ್ದ. 

‘ ನಾನು ಹೇಳಿದ್ದು ನೆನಪಿದೆ ತಾನೆ ? ‘ ಎಂದಳು. 

ಅವನು ಏನೂ ಉತ್ತರಿಸಲಿಲ್ಲ . 

ಅವಳು ಅಲ್ಲಿಂದ ಎದ್ದು ಮತ್ತೆಲ್ಲಿಗೋ ಬಿರುಸಾಗಿ ನಡೆದು ಹೊರಟಳು. 

ಆಗ ಅವನು, ‘ ಏಯ್ , ನಿಲ್ಲು ಎಲ್ಲಿಗೆ ಹೊರಟಿದ್ದೀಯ ? ‘ ಎಂದು ಸೌಮ್ಯವಾದ ಧ್ವನಿಯಲ್ಲಿ ಕೇಳಿದ.

ಅದಕ್ಕವಳು

‘ನಾನು ಜೀವನದಲ್ಲಿ ದೊಡ್ಡ ತಪ್ಪು ಮಾಡಿದೆ ‘ ಎಂದು ಹೇಳಿ,  ತನ್ನ ನಡಿಗೆಗೆ ಇನ್ನಷ್ಟು ಬಿರುಸು ಸೇರಿಸಿಕೊಂಡು ಅಲ್ಲಿಂದ ಮಾಯವಾದಳು…

ಇವನು ಎಲ್ಲಿಗೋ ಹೊರಟವನು ಎಲ್ಲಿಗೂ ಹೋಗದೆ ಅಲ್ಲಿಯೇ ಕೂತು ಯೋಚಿಸತೊಡಗಿದನು. ಕೆಲ ಸಮಯದ ನಂತರ ಮತ್ತೆ ತಾನೇನು ಯೋಚಿಸುತ್ತಿದ್ದೆನೆಂಬುದನ್ನು ಮರೆತು ಬೇರೇನೋ ಯೋಚಿಸ ತೊಡಗಿದನು. 

ಸಂಜೆ ಅವಳು ಬಂದಾಗ ಅವನು ಜಾಗ ಕದಲದೆ ಯೋಚಿಸುತ್ತಾ ಕೂತಿರುವುದನ್ನು ಕಂಡು ‘ಅಯ್ಯೋ ಪಾಪ’ ಅನ್ನಿಸಿತವಳಿಗೆ. 

‘ ಹೋಗ್ಲಿಬಿಡು… ಅಷ್ಟೊಂದು ತಲೆ ಕೆಡಿಸ್ಕೊಳ್ಬೇಡ ‘ ಎಂದು ಒಳ ಹೋದಳವಳು…

‘ ಹೌದು , ಇವಳು ನೆನಪಿದ್ಯಾ ನಾನು ಹೇಳಿದ್ದು ಅಂತ ಹೇಳಿದ್ದು ಏತಕ್ಕೆ ?’  ಎಂದು ಮತ್ತೆ ಯೋಚಿಸತೊಡಗಿದ. 

‘ ಪಾಪ , ಇಡೀ ದಿನ ನನ್ನ ಒಂದು ಮಾತಿನ ಬಗ್ಗೆ ಯೋಚಿಸುತ್ತಾ ಉಳಿದು ಬಿಟ್ನಲ್ಲ … ಇಂಥವನ ಬಗ್ಗೆ ನಾನು ಹಾಗೆ ಯೋಚಿಸಬಾರದಿತ್ತು ‘ ಎಂದುಕೊಂಡು  ಪಶ್ಚಾತ್ತಾಪ ಪಟ್ಟುಕೊಂಡಳು. 

ಕೊನೆಗೂ ಅವಳು ಹೇಳಿದ್ದೇನೆಂದು ಇವನಿಗೆ , ಅವನು ಯೋಚಿಸಿದ್ದೇನೆಂದು ಅವಳಿಗೆ ತಿಳಿಯಲೇ ಇಲ್ಲ…

             ನಾಲ್ಕು…         

ಅವರಿಬ್ಬರೂ ಬಹಳ ದಿನಗಳ ನಂತರ ಒಂದು ಲಾಂಗ್ ಡ್ರೈವ್ ಹೋಗಿ ಬರೋಣ ಎಂದು ಹೊರಟರು. ಮಕ್ಕಳಿಬ್ಬರನ್ನೂ ಅಜ್ಜಿ ಮನೆಗೆ ಕಳುಹಿಸಿ ಇಬ್ಬರೇ ಇರಬೇಕು ಅನ್ನಿಸಿ ತಾವಿಬ್ಬರೇ ಹೀಗೊಂದು ಡ್ರೈವ್ ಹೋಗುವಾಗ ತಮ್ಮ ಹಳೆಯ ದಿನಗಳ ಬಗ್ಗೆ ಮಾತಾಡುತ್ತ, ಒಬ್ಬರನ್ನೊಬ್ಬರು ಕಿಚಾಯಿಸುತ್ತ, ಅನಗತ್ಯವಾಗಿ ಹೊಗಳುತ್ತ, ಕಾಲೆಳೆಯುತ್ತ ಸಾಗುತ್ತಿದ್ದ ಪ್ರಯಾಣದ ಮಧ್ಯೆ ಒಂದು ಬ್ರೇಕ್ ಗೆಂದು ನಿಲ್ಲಿಸಿದರು. 

ಬ್ರೇಕ್ ನಲ್ಲಿ ತಿಂದು ,ಕುಡಿದು ಮತ್ತೆ ಕಾರು ಸಾಗಲಾರಂಭಿಸಿತು. ಬ್ರೇಕ್ ನಲ್ಲಿ ಅವನು ವಾಷ್ ರೂಮ್ ಗೆ ಹೋಗಿ ಬರುವ ಚಿಕ್ಕ ಬ್ರೇಕ್ ನಲ್ಲಿ ಅವಳು ಯಾವುದೋ ಒಂದು ಫೋನ್ ಕಾಲ್ ರಿಸೀವ್ ಮಾಡಿ ಅವನು ಬರುತ್ತಿದ್ದುದನ್ನು ನೋಡಿ ಅವಸರವಸರವಾಗಿ ಕಾಲ್ ಮುಗಿಸಿಟ್ಟಿದ್ದಳು. 

ಈಗ ನೋಡಿದರೆ ಜಾಲಿಯಾಗಿ ರೈಡ್ ಹೋಗುತ್ತಿದ್ದ ಸಂದರ್ಭದಲ್ಲಿ ಅವಳ ಮೊಬೈಲ್ ಗೆ ಪದೇ ಪದೇ ಕಾಲ್ ಬರುತ್ತಲೇ ಇತ್ತು. ಅವಳು ಆ ಕಾಲ್ ನ್ನು ಕಟ್ ಮಾಡಿ ಮಾಮೂಲಿನಂತೆ ಮಾತನಾಡುತ್ತಲೇ ಇದ್ದಳು. ಅವನಿಗೆ

 ‘ಆ ಕಾಲ್ ರಿಸೀವ್ ಮಾಡು . ಯಾಕೆ ರಿಸೀವ್ ಮಾಡುತ್ತಿಲ್ಲ’ ಎಂದು ಹೇಳಬೇಕು ಅನ್ನಸಿತು. ಆದರೆ ಹಾಗೆ ಕೇಳಲಿಲ್ಲ. 

ಆ ದಿನದ ರೈಡ್ ಮುಗಿಸಿ ಮನೆಗೆ ಬಂದು ಇಬ್ಬರೂ It has been a lovely day ಎಂಬಂಥ ಉದ್ಘಾರ‌ ತೆಗೆದು‌ ಮಲಗಿದರು … 

                      ಐದು …                     

ವೃದ್ಧ ದಂಪತಿಗಳು ಮನೆಯಲ್ಲಿ ಬೇರೆ ಬೇರೆ ಕೋಣೆಯಲ್ಲಿ ಮಲಗಲು ಪ್ರಾರಂಭಿಸಿ ಅನೇಕ ವರ್ಷಗಳೇ ಕಳೆದಿದ್ದವು. ಊಟೋಪಚಾರಗಳನ್ನು ಮಾತ್ರ ಯಾವಾಗಲೂ ಜೊತೆಯಲ್ಲೇ ಮಾಡುತ್ತಿದ್ದರು. ಆ ವೃದ್ದನಿಗೆ ಪಿಂಚಣಿ ಬಂದ ದಿನ ಅವನು ಮಕ್ಕಳಿಗೆ ಹಂಚುವಂತೆಯೇ ಪಿಂಚಣಿಯ ಒಂದಂಶವನ್ನು ಆ ವೃದ್ದೆಗೂ ಕೊಡುತ್ತಿದ್ದನು . 

ಹೀಗೆ ಕೊಡುವ ಹಣವನ್ನು ಅವನು ಆಕೆಗೆ ಕೊಡುತ್ತಿದ್ದು ರೀತಿ ಮಾತ್ರ ವಿಶೇಷವಾಗಿತ್ತು. ಪ್ರತಿ ತಿಂಗಳ ಪಿಂಚಣಿ ತರಲು ಬ್ಯಾಂಕಿಗೆ ಹೋದವನು ಆ ವೃದ್ಧೆಗೆ ತಂದುಕೊಡುವ ಮಾತ್ರೆಗಳ ಲಕೋಟೆಯೊಳಗೆ ಅವಳ ಪಾಲಿನ ಪಿಂಚಣಿಯನ್ನು ಇಟ್ಟು ಕೊಡುತ್ತಿದ್ದನು.‌ ಯಾವುದಾದರೂ ತಿಂಗಳು ಅವನು ಅದರಲ್ಲಿ ಹಣ ಇಟ್ಟಿಲ್ಲ ಎಂದಾದರೆ ಆಕೆ ರಂಪಾಟ ಮಾಡುತ್ತಿದ್ದಳು. 

ಹಾಗಾಗಿ ಅವನು ಪ್ರತೀ ತಿಂಗಳು ಪಿಂಚಣಿಯನ್ನು ತಪ್ಪದೇ ಕೊಡುತ್ತಿದ್ದನು. ಆ ವೃದ್ಧೆ ಅದನ್ನು ಏನು ಮಾಡುತ್ತಾಳೆ ಆ ವಯಸ್ಸಲ್ಲಿ ಅಕೆ ಅದನ್ನು ಖರ್ಚು ಮಾಡುತ್ತಾಳೋ ಇಲ್ಲವೋ ಎಂಬುದರ ಬಗ್ಗೆ ಯಾವತ್ತೂ ತನಿಖೆ ಮಾಡಲು ಹೋಗಿರಲಿಲ್ಲ. ಹೊತ್ತು ಹೊತ್ತಿಗೆ‌ ಸರಿಯಾಗಿ ಮಾತ್ರೆ ತಗೊಂಡ್ಡಿದ್ದಾರೋ ಇಲ್ಲವೋ ಎಂಬುದನ್ನು ಬಿಟ್ಟು ಅವರ ಮಧ್ಯೆ ಬೇರೆ ಯಾವ ಮಾತುಗಳೇ ಇರಲಿಲ್ಲವೆನ್ನಬಹುದು . 

ಹೀಗಿರುವಾಗ ಒಂದು ತಿಂಗಳು ಆ ವೃದ್ಧ ತಂದು ಕೊಟ್ಟ 

ಪಿಂಚಣಿ ಕವರ್ ನಲ್ಲಿ ಒಂದು ಗುಲಾಬಿ ಹೂವನ್ನು ಇಡಲಾಗಿತ್ತು. ಯಾವತ್ತೂ ಈ ಥರದ್ದನ್ನು ಅವನಿಂದ ನಿರೀಕ್ಷಿಸಿರದ ಆ ವೃದ್ಧೆಗೆ ಆ ಹೂವಿನ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯಲಿಲ್ಲ. ಆಕೆಯ ಪ್ರತಿಕ್ರಿಯೆ ಹೇಗಿರಬಹುದೆಂದು ಕಾದು ಕುಳಿತಿದ್ದ ಆ ವೃದ್ಧನಿಗೆ ಇದರಿಂದ ನಿರಾಸೆಯಾಯಿತು. ಮರುದಿನ ಬೆಳಗ್ಗೆ ಆ ವೃದ್ಧೆ ಸ್ನಾನಕ್ಕೆಂದು ಹೋದಾಗ ಕಳ್ಳ ಹೆಜ್ಜೆಯನಿಟ್ಟು ಅವಳ ಕೊಠಡಿಗೆ ಹೋದ ಆ ವೃದ್ಧ, ಗುಲಾಬಿ ಹೂವು ಎಲ್ಲಿರಬಹುದೆಂದು ಹುಡುಕಾಡಿ ನಿರಾಸೆಯಿಂದ ವಾಪಸ್ಸಾದ. 

ಅಲ್ಲಿ ಬಚ್ಚಲಮನೆಯಲ್ಲಿ  ಆ ವೃದ್ಧೆ

ಗುಲಾಬಿ ಹೂವಿನ ಒಂದೊಂದೇ ದಳಗಳನ್ನು ಬೆಂಕಿಗೆ ಹಾಕಿದಳು … 

October 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರೈತರ ‘ಚಲೋ ದಿಲ್ಲಿ’

ರೈತರ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು...

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್. ಸಾಯಿಲಕ್ಷ್ಮಿ ಸ್ನೇಹಗಾನಕ್ಕೆ ರಿತೀಷಾ ಎಂಬ ಬಾಲಾದ್ಭುತದ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು...

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

3 ಪ್ರತಿಕ್ರಿಯೆಗಳು

 1. T S SHRAVANA KUMARI

  ಕತೆಗಳು ಡಿಫರೆಂಟ್ ಆಗಿ ಚೆನ್ನಾಗಿವೆ.

  ಪ್ರತಿಕ್ರಿಯೆ
 2. ಗೀತಾ ಎನ್ ಸ್ವಾಮಿ

  ಪ್ರೇಮ ಯಾವುದಾದರೂ ಒಂದು ಹಂತದಲ್ಲಿ ಸೋಲುತ್ತದೆ,ಪಲಾಯನಮಾಡುತ್ತದೆ ಇಲ್ಲವೇ ಗುಟ್ಟಾಗಿ ಆಕರ್ಷಣೆಯ ಜೊತೆಗೆ ರಾಜಿಯಾಗಿಬಿಡುತ್ತದೆ….. ಕುತೂಹಲದಿಂದ ಓದಿಸಿಕೊಳ್ತು ಮಾವಲಿ ಸರ್.
  ಕಡೆಯ ಭಾಗದಲ್ಲಿ ಗುಲಾಬಿ ದಳಗಳು ಬೆಂಕಿಗೆ ಆಹುತಿಯಾದದ್ದಂತು ಇನ್ನೂ ಸಿಂಬಾಲಿಕ್. ಕನಸಿನಲ್ಲಿ ಅಗ್ನಿ ಮತ್ತು ಹೂವು ಒಟ್ಟಿಗೆ ವಾಸಿಸುತ್ತವೆ ಎಂಬ ಕಾರ್ನಾಡರ ಮಾತು ನೆನಪಾಯಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: