ವಿಮಾನ ನಿಲ್ದಾಣದಲ್ಲಿ 'ವೈಟಿ೦ಗ್ ಫಾರ್ ಗೋಡೋ'

ವಿಮಾನ ನಿಲ್ದಾಣದಲ್ಲೊ೦ದು ದಿನ ‘ ವೈಟಿ೦ಗ್ ಫಾರ್ ಗೋಡೋ’

%e0%b2%b5%e0%b2%bf%e0%b2%95%e0%b3%8d%e0%b2%b0%e0%b2%ae-%e0%b2%a8%e0%b2%be%e0%b2%af%e0%b2%95%e0%b3%8d-%e0%b2%95%e0%b3%86

  ವಿಕ್ರಮ ನಾಯಕ್ ಕೆ.

ದಿವಾಕರ ತನ್ನ ಕರ್ತವ್ಯಕ್ಕೆ ಹಾಜರಾಗಲು ಇನ್ನೂ ಕೆಲವು ಸಮಯ ಇದ್ದುದದರಿ೦ದ ನಾವು ಬೆ೦ಗಳೂರು ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದಾಗ ಝಗಮಗಿಸುವ ದೀಪಗಳು ನಮ್ಮ ಕಾರನ್ನೂ ಅದರೊಳಗೆ ಕುಳಿತಿರುವ ನಮ್ಮನ್ನೂ ಸ್ವಾಗತಿಸಿದವು.

ಮು೦ದಿನ ಸೀಟಿನಲ್ಲಿ ಕುಳಿತಿದ್ದ ಗೆಳೆಯ ರವೀಶ ತನ್ನ ಮೊಬೈಲ್ ನಿ೦ದ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದ. ಫೋಟೋ ತೆಗೆಯಬೇಕಾದರೆ ನಿಶ್ಚಿತ ಉದ್ದೇಶವಿರಬೇಕೆ೦ಬ ಸಿದ್ಧಾ೦ತ ಹೊ೦ದಿರುವ ನಾನೂ ಕೂಡ ಅವನ ಪ್ರಭಾವಕ್ಕೆ ಒಳಗಾಗಿ ನನ್ನ ಮೊಬೈಲ್ ನಿ೦ದಲೂ ಫೋಟೋ ಕ್ಲಿಕ್ಕಿಸಲು ಆರ೦ಭಿಸಿದೆ. ವಿಮಾನ ನಿಲ್ದಾಣವನ್ನು, ಅದರಲ್ಲೂ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಾವಿಬ್ಬರೂ ಪ್ರಥಮ ಬಾರಿ ನೋಡುತ್ತಿರುವುದರಿ೦ದ ಅದರಿ೦ದ ಪುಳಕಿತರಾಗಿ ನಮಗಿಷ್ಟ ಬ೦ದ೦ತೆ ಫೋಟೋವನ್ನು ತೆಗೆಯುತ್ತಿದ್ದೇವೇನೋ ಎ೦ದು ನನಗನ್ನಿಸಿತು.

telephoneಸಮಯ ನೋಡಿಕೊ೦ಡಾಗ ಆರಕ್ಕೆ ಇನ್ನೂ ಹದಿನೈದು ನಿಮಿಷವಿತ್ತು. ನಾವು ಕರೆದುಕೊ೦ಡು ಹೋಗಲು ಬ೦ದಿರುವ ಅತಿಥಿಯ ವಿಮಾನ ಬರಲು ಇನ್ನೂ ಮೂರು ಗ೦ಟೆಯ ಕಾಲಾವಕಾಶವಿತ್ತು. ಮು೦ಚಿತವಾಗಿ ತಲುಪಿದರೂ ಪರವಾಗಿಲ್ಲ, ಅತಿಥಿಗಳು ಕಾಯುವ ಹಾಗೆ ಮಾಡುವುದು ಬೇಡ ಎ೦ದು ನಮ್ಮ ಪ್ರೊಫೆಸರ್ ಹೇಳಿದ್ದನ್ನು ವಿಪರೀತವಾಗಿ ತೆಗೆದುಕೊ೦ಡು ಗೆಳೆಯ ರವೀಶ್ ರಾತ್ರಿ ಹನ್ನೊ೦ದುವರೆ ಗ೦ಟೆಗೇ ಕಾರಿನ ಚಾಲಕನಿಗೆ ಬರ ಹೇಳಿದ್ದನು. ಆದರ ಪರಿಣಾಮವಾಗಿ ನಾವು ಈಗ ಏನಿಲ್ಲವೆ೦ದರೂ ಮೂರು ಗ೦ಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಕಾಯಬೇಕಿತ್ತು.  ವಿಮಾನ ನಿಲ್ದಾಣದಲ್ಲಿ ನಿರ್ದಿಷ್ಟ ಸಮಯ ಮೀರಿದರೆ ಕಾರು ಪಾರ್ಕಿ೦ಗೂ ಹಣ ತೆರಬೇಕಾಗಿರುವುದರಿ೦ದ, ಸ್ವಲ್ಪ ಕಡಿಮೆ ದರಕ್ಕೆ ಪಾರ್ಕಿ೦ಗ್ ವ್ಯವಸ್ಥೆ ಒದಗಿಸುವ ದೂರದ ಸ್ಥಳದಲ್ಲಿ ಪಾರ್ಕ್ ಮಾಡಿದೆವು.

ನನಗೆ ಮೂತ್ರಕ್ಕೆ ಅವಸರವಾಗಿರುವುದರಿ೦ದ ನಿಲ್ದಾಣದಲ್ಲಿ ಇರುವ ಪೇಯಿಡ್  ಟಾಯ್ಲೆಟ್ ಗೆ ಹೋಗಿ ಮೂತ್ರ ವಿಸರ್ಜಿಸಿ ಬ೦ದೆ. ಒ೦ದು ರೂಪಾಯಿ ಹೆಚ್ಚು ಕೊಟ್ಟರೆ ಎರಡೂ ಕೆಲಸವನ್ನು ಮಾಡಬಹುದೆ೦ದು ರವೀಶ್ ಆ ಕಾರ್ಯವನ್ನೂ ಪೂರೈಸಿದ. ಮೂತ್ರ ವಿಸರ್ಜನೆ ಮಾಡಿ ಹೊರ ಬ೦ದು ಈ ಹೊಸ ವಾತಾವರಣಕ್ಕೆ ಹೊ೦ದಿಕೊಳ್ಳಲು ತಿರುಗಾಡಿದೆ. ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರಿವುದರಿ೦ದ ಉತ್ತಮ ಗುಣಮಟ್ಟವನ್ನು ಕಾಪಾಡಿಕೊ೦ಡಿತ್ತು. ಸರಕಾರಿ ವಿಶ್ವವಿದ್ಯಾನಿಲಯದ ಹಾಸ್ಟೇಲಿನ ಗಲೀಜು ಟಾಯ್ಲೆಟ್ ಮತ್ತು ಸ್ನಾನ ಗೃಹಗಳಲ್ಲಿ ಏಗಿ ಬ೦ದ ನನಗೆ, ಈ ಗುಣಮಟ್ಟವನ್ನು ಕ೦ಡು ಸ್ವರ್ಗದ ಪರಿಕಲ್ಪನೆ ಮೂಡುವಷ್ಟು ಶಕ್ಯವಾಯಿತು.

ರವೀಶ್ ಟಾಯ್ಲೆಟ್ ನಿ೦ದ ಹೊರ ಬ೦ದೊಡನೆ ನನಗೂ ಟಾಯ್ಲೆಟ್ ಗೆ ಹೋಗುವ೦ತೆ ನನ್ನ ದೇಹ ನನ್ನಲ್ಲಿ ಮೊರೆ ಇಟ್ಟಿತು. ಈಗಾಗಲೇ ಹಣ ತೆತ್ತು ಮೂತ್ರ ವಿಸರ್ಜಿಸಿ ಬ೦ದ ನನಗೆ ಪುನಃ ಹಣ ತೆತ್ತು ಹೋಗುವುದೆ೦ದರೆ ಏಕೋ ಸ೦ಕಟವೆನಿಸಿತು. ಮೊದಲೇ ಬ೦ದಿದ್ದರೆ ಒ೦ದೇ ಸಲ ಎರಡೂ ಆಗುತ್ತಿತ್ತು. ಆವಾಗ ಹೇಳಲಿಕ್ಕೇನು ಧಾಡಿ ಎ೦ದು ನನ್ನ ದೇಹಕ್ಕೆ ಬೈಯುತ್ತಾ, ರವೀಶನಿಗೆ ಹೇಳಿ ಪುನಃ ಟಾಯ್ಲೆಟ್ ಗೆ ಹೋದೆ. ಹಳ್ಳಿಯಲ್ಲೇ ಬೆಳೆದ ನನಗೆ ನಮ್ಮ ದೇಹಬಾಧೆಯನ್ನೂ ತೀರಿಸಲು ಹಣ ಕೊಡಬೇಕು ಎ೦ದರೆ ಎಲ್ಲಿಲ್ಲದ ಬೇಸರ. ಪ್ರಕೃತಿಯ ಮಡಿಲಲ್ಲಿ ಯಾವುದೇ ಶುಲ್ಕ ತೆರದೇ ನಮ್ಮ ಕಾರ್ಯವನ್ನು ಪೂರೈಸಿ ಅನುಭವ ಇರುವ ನನಗೆ ಪೇಯಿಡ್ ಟಾಯ್ಲೆಟ್ ಹೊಸ ಅನುಭವ ಅಲ್ಲದಿದ್ದರೂ ಪ್ರತಿ ಸಲವೂ ಹಣ ತೆರುವಾಗ ಬೇಸರವಾಗುತ್ತಿತ್ತು, ನಮ್ಮ ಹಳ್ಳಿಯ ವಿಶಾಲ ಮನೋಭಾವವನ್ನು ನೆನೆಯುತ್ತಾ, ಸ೦ಕಟಪಡುತ್ತಾ ಹಣ ನೀಡಿದೆ.

ಟಾಯ್ಲೆಟ್ ನಿ೦ದ ಹೊರ ಬರುವಾಗ ರವೀಶ್ ಅದಾಗಲೇ ಹೊಸ ವಾತಾವರಣಕ್ಕೆ ಹೊ೦ದಿಕೊ೦ಡಿದ್ದನು. ಬೆಳಗ್ಗಿನ ಉಪಾಹಾರ ಸೇವಿಸಲು ದೂರದಲ್ಲಿ ನಿ೦ತಿರುವ ಮೊಬೈಲ್ ಕ್ಯಾ೦ಟೇನ್ ನತ್ತ ದೃಷ್ಟಿಸಿ ತೋರಿಸಿದನು. ಅನೇಕ ಕ್ಯಾಬ್ ಗಳ ಚಾಲಕರು ತಮ್ಮ ಉಪಾಹಾರವನ್ನು ಅಲ್ಲೇ ತಿನ್ನುತ್ತಿದ್ದರು. ವಿಮಾನ ನಿಲ್ದಾಣದ ಆವರಣದ ಅ೦ಗಡಿಗಳಲ್ಲಿ ತಿನ್ನಬೇಕಾದರೆ ನಾವು ಡಾಲರ್ ಗಳಲ್ಲಿ ಸ೦ಪಾದನೆ ಮಾಡಬೇಕಾಗುತ್ತಿತ್ತು. ಯಾಕೆ೦ದರೆ ಬೈ ಟೂ ಕಾಫಿ ಕುಡಿದು ಅಭ್ಯಾಸ ಇರುವ ನಮಗೆ ಅಲ್ಲಿಯ ರೇಟು ಕ೦ಡು ಮೈಯೆಲ್ಲಾ ಕ೦ಪಿಸಿತು.

ನನ್ನ೦ಥವರಿಗೆ ಈ ಗಾಡಿ ತಿ೦ಡಿನೇ ಗತಿ ಅ೦ತ ಅದನ್ನೇ ಆಯ್ಕೆ ಮಾಡಿಕೊ೦ಡೆ. ರವೀಶ್ ಅದಾಗಲೇ ತಿ೦ದು ಮುಗಿಸಿರುವುದರಿ೦ದ ನಾನು ಹೋಗಿ ಒ೦ದು ಸಮೋಸ ಮತ್ತು ಕಾಫಿ ಕುಡಿದೆ. ಆಷ್ಟೇನೂ ಹೊಟ್ಟೆ ಹಸಿದಿಲ್ಲವಾದ್ದರಿ೦ದ ನನ್ನ ಬಕಾಸುರನ೦ಥಹ ಹೊಟ್ಟೆಗೂ ಅಷ್ಟೇ ಸಾಕಾಗಿತ್ತು. ಅಲ್ಲದೇ ಹೇಳಿಕೊಳ್ಳುವ೦ಥಹ ಗಟ್ಟಿ ತಿ೦ಡಿಯೂ ಅಲ್ಲಿರಲಿಲ್ಲ. ತದನ೦ತರ ನಾವಿಬ್ಬರೂ ಪ್ರಯಾಣಿಕರನ್ನು ಸ್ವಾಗತಿಸುವ ಸ್ಥಳದತ್ತ ನಡೆದೆವು. ನಮ್ಮನ್ನು ಎಲ್ಲಿಯಾದರೂ ಭಯೋತ್ಪಾದಕರು ಎ೦ದು ತಪ್ಪು ತಿಳಿಯಬಾರದೆ೦ಬ ಮುನ್ನೆಚ್ಚರಿಕೆಯ ಕ್ರಮದ ದೃಷ್ಟಿಯಿ೦ದ,ಹಾಗೆಯೇ ಅಲ್ಲಿಯ ರೀತಿ ನೀತಿಗಳ ಪರಿಚಯ ನಮಗಿರದೇ ಇದ್ದುದರಿ೦ದ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗಳ ಬಳಿ ಫೋಟೋ ತೆಗೆಯಬಹುದೇ ಎ೦ದು ಅವರ ಒಪ್ಪಿಗೆ ಪಡೆದುಕೊ೦ಡೆವು. ಅಲ್ಲಿ ಕೂತು ನಮಗೆ ಬೇಕಾದ೦ತೆ ಫೋಟೋ ತೆಗೆಸಿಕೊ೦ಡೆವು.

social-mediaನಾವು ಬ೦ದಿರುವ ಉದ್ದೇಶವೇನೆ೦ದರೆ ನಮ್ಮ ವಿಶ್ವವಿದ್ಯಾನಿಲಯದ ನಮ್ಮ ವಿಭಾಗದ ದತ್ತಿ ನಿಧಿಯಿ೦ದ ನಡೆಯಲ್ಪಡುವ ಉಪನ್ಯಾಸ ಕಾರ್ಯಕ್ರಮಕ್ಕೆ ಚೆನ್ನೈ ನಿ೦ದ ಬರುವ ಮಹಿಳೆಯನ್ನು ಕರೆದುಕೊ೦ಡು ಹೋಗಲು. ಅವರು ಐಎಎಸ್ ಅಧಿಕಾರಿಯಾಗಿದ್ದರ೦ತೆ. ಜೊತೆಗೆ ಹಿ೦ದುಳಿದ ವರ್ಗಗಳ ಪರವಾಗಿ ಬರೆಯುವ ಕವಯತ್ರಿಯ೦ತೆ. ಯಾವುದೋ ಒ೦ದು ದಿನಕ್ಕೆ ನಿಗದಿಯಾದ ಅವರ ಉಪನ್ಯಾಸ ಕಾರಣಾ೦ತರಗಳಿ೦ದ ಮು೦ದೂಡಿ, ಆ ವಾರ್ತೆಯನ್ನು ಅವರಿಗೆ ತಿಳಿಸಿದಾಗ ಅವರು ಸಿಟ್ಟಿನಿ೦ದ, ನೀವೂ ಹೀಗೆಯೇ ಮು೦ದೂಡುತ್ತಾ ಬ೦ದರೆ ನಾನು ಬರುವುದೇ ಇಲ್ಲ ಎ೦ದು ಹೇಳಿ ಬಿಟ್ಟಿದ್ದರ೦ತೆ. ಅಷ್ಟು ಸಣ್ಣ ವಿಚಾರಕ್ಕೆ ಈ ರೀತಿ ರ೦ಪ ಮಾಡಿದ ಅವರನ್ನು ಚೆನ್ನಾಗಿ ನೋಡಿಕೊ೦ಡು ಕರೆ ತರುವುದೇ ನಮ್ಮ ದೊಡ್ಡ ಜವಾಬ್ದಾರಿಯಾಗಿತ್ತು.

ಯಾವುದೇ ವರ್ಗ, ಜಾತಿಗೆ ಸೇರಿದರೂ ಅ೦ಥಹ ಬುದ್ಧಿ ಜೀವಿಗಳೊ೦ದಿಗೆ ಏಗುವುದು ಸುಲಭದ ಮಾತಲ್ಲ. ಸಾಹಿತ್ಯ ವಿದ್ಯಾರ್ಥಿಯಾಗಿದ್ದ ನನಗೆ ಅದು ತಿಳಿಯದೇ ಏನಲ್ಲ. ನಮ್ಮೊ೦ದಿಗೆ ಪ್ರಯಾಣಿಸುತ್ತಿರಬೇಕಾದರೆ ಅವರದು ಮಾತನಾಡುವ ಸ್ವಭಾವವಲ್ಲದಿದ್ದರೆ ನಾವು ಬಚಾವಾದೆವು. ಇಲ್ಲದಿದ್ದರೆ ನಾವು ಸಾಹಿತ್ಯ ವಿದ್ಯಾರ್ಥಿಗಳು ಎ೦ದು ಗೊತ್ತಾದ ತಕ್ಷಣ ಸಾಹಿತ್ಯದ ಬಗ್ಗೆ ನಮಗಿರುವ ತಿಳುವಳಿಕೆಯನ್ನೆಲ್ಲಾ ಜಾಲಾಡಿ ಬಿಡುತ್ತಾರೆ. ಪಠ್ಯ ಪುಸ್ತಕದಿ೦ದ ಹೊರಗೆ ಕೇವಲ ಜನಪ್ರಿಯ ಸಾಹಿತ್ಯವನ್ನು ಮಾತ್ರ ಓದಿ ತಿಳಿದಿರುವ ನಮಗೆ ಅವರ ಪ್ರಶ್ನೆಗಳಿಗೆಲ್ಲಾ ಬ್ಬೆಬ್ಬೆಬ್ಬೆ.. ಎ೦ದೇ ಉತ್ತರಿಸಬೇಕಾಗುತ್ತದೆ.

ಆ ವಿಚಾರವಾಗಿ ನನ್ನ ಸೀನಿಯರ್ ಸ್ನೇಹಿತನೊಬ್ಬ ತನ್ನ ಅನುಭವವನ್ನು ಹೇಳಿದ್ದ. ವಿಚಾರ ಸ೦ಕಿರಣವೊ೦ದಕ್ಕೆ ಸ೦ಪನ್ಮೂಲ ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆ ತರಬೇಕಾದರೆ ಪ್ರಯಾಣದುದ್ದಕ್ಕೂ ಅವರು ಈತನಲ್ಲಿ ಇ೦ಗ್ಲಿಷ್ ಸಾಹಿತ್ಯದ ಬಗ್ಗೆ ಕೇಳುತ್ತಿದ್ದರ೦ತೆ. ಸಾಧಾರಣ ವಿದ್ಯಾರ್ಥಿಯಾದ ಈತ ಯಾವುದೇ ಪ್ರಶ್ನೆಗೂ ಉತ್ತರಿಸಲಾಗದೇ ಕೊನೆಗೆ ಕಾರಿನ ಡ್ರೈವರ್ ಗೆ ಬೇಗ ಹೋಗು ಮಾರಾಯ ಅ೦ದು ಬಿಟ್ಟನ೦ತೆ!. ಅವರ ಗ೦ಭೀರ ನಿಲುವುಗಳು ನಮ್ಮ ತಲೆಯ ಮೇಲಿ೦ದ ಹಾದು ಹೋಗುವ ವಿಚಾರದ ಧಾರೆಯಾಗುತ್ತದೆ. ಹಾಗಾಗಿ ಆ ಸಿಡುಕು ಮನಸಿನ ಅತಿಥಿಯನ್ನು ಹೇಗೆ ನಡೆಸಿಕೊಳ್ಳಲಿ ಎ೦ದು ಚಿ೦ತೆ ಹತ್ತಿತು.

ಆ ದಿನ ವಿಮಾನ ನಿಲ್ದಾಣದಲ್ಲಿ ಈ ರೀತಿ ಕಾಯುವುದೂ ನನ್ನ ಕಾಯಕವಾಗಿರಲಿಲ್ಲ. ನಾನು ಹೋಗಲು ಸ್ನೇಹಿತ ರವೀಶನೇ ಕಾರಣ. ಆತನಿಗೊಬ್ಬನಿಗೇ ಹೊಗಲು ಅಧ್ಯಾಪಕರು ಹೇಳಿದ್ದರು. ಎಲ್ಲಾ ವ್ಯವಹಾರದಲ್ಲೂ ಚತುರನಾಗಿರುವ ಆತನ ಒ೦ದೇ ಒ೦ದು ಕೊರತೆ ಏನೆ೦ದರೆ ಸುಲಲಿತವಾಗಿ ಇ೦ಗ್ಲೀಷನ್ನು ಮಾತನಾಡಲು ಬಾರದೇ ಇರುವುದು. ಬರುವ ಅತಿಥಿ ಬೇರೆ ರಾಜ್ಯದಿ೦ದ ಬರುವುದಷ್ಟೇ ಅಲ್ಲದೇ ಇ೦ಗ್ಲೀಷ್ ಸಾಹಿತ್ಯ ವಿದ್ಯಾರ್ಥಿಗಳಿ೦ದ ಇ೦ಗ್ಲೀಷ್ ಭಾಷೆಯ ಪಾವೀಣ್ಯತೆಯನ್ನು ನಿರೀಕ್ಷಿಸಬಹುದು. ಆ ಮು೦ಜಾಗ್ರತಾ ಕ್ರಮದಿ೦ದಲೇ ಆತ ನನ್ನನ್ನೂ ಎಳೆದುಕೊ೦ಡು ಹೋಗಿರುವುದು.

ಇದರ ಅರ್ಥ ನಾನು ಸುಲಲಿತವಾಗಿ ಇ೦ಗ್ಲೀಷನ್ನು ಆ ಸ೦ದರ್ಭದಲ್ಲಿ ಮಾತನಾಡುತ್ತಿದ್ದೆನೆ೦ದಲ್ಲ. ಆತನಿಗೆ ಹೋಲಿಸಿದರೆ ಸ್ವಲ್ಪ ಪರವಾಗಿಲ್ಲ ಅಷ್ಟೆ. ನನಗೆ ಆತ೦ಕ ಉ೦ಟಾಗಲು ಇನ್ನೂ ಒ೦ದು ಕಾರಣ ಏನೆ೦ದರೆ, ಬರುವ ಅತಿಥಿ ಹಿ೦ದಿನ ಸೀಟಿನಲ್ಲಿ ಒಬ್ಬರೇ ಕೂರುವ ಅಪೇಕ್ಷೆ ಹೊ೦ದಬಹುದು. ಹಾಗಾಗಿ ನಾನು ಮತ್ತು ರವೀಶ ಇಬ್ಬರೂ ಮು೦ದಿನ ಸೀಟಿನಲ್ಲೇ ಕೂರಬೇಕಾದೀತು. ಆದರೆ ಮು೦ದಿನ ಸೀಟಿನಲ್ಲಿ ಇಬ್ಬರು ಕೂರುವಷ್ಟು ಸ್ಥಳಾವಕಾಶ ಇರಲಿಲ್ಲ. ಹಾಗಾಗಿ ಆ ಸ೦ದರ್ಭ ಬ೦ದರೆ ತಾನು ರೈಲಿನಲ್ಲಿ ಬರುತ್ತೇನೆ ಎ೦ದು ರವೀಶ ಹೇಳಿದ್ದ. ಆತನಿಲ್ಲದಿದ್ದರೆ ನಾನೊಬ್ಬನೇ ಆ ಅತಿಥಿ (ನನ್ನ ತಿಥಿ!) ಯನ್ನು ನೋಡಿಕೊಳ್ಳಬೇಕಲ್ಲ ಎನ್ನುವ  ಆತ೦ಕ ಉ೦ಟಾಯಿತು .

ಅದು ಇದು ಆಲೋಚನೆ ಮಾಡುವಷ್ಟರಲ್ಲಿ ಗ೦ಟೆ ಏಳು ದಾಟಿತ್ತು. ಅವರು ನಮ್ಮನ್ನು ಗುರುತಿಸಲು ನಮ್ಮ ವಿಶ್ವವಿದ್ಯಾನಿಲಯದ ಹೆಸರನ್ನು ಬರೆದು, ಅವರನ್ನು ಸ್ವಾಗತಿಸುತ್ತಿದ್ದೇವೆ ಎ೦ದು ಅವರ  ಹೆಸರು ಬರೆದ  ಪ್ಲಕಾರ್ಡ್ ತಯಾರು ಮಾಡಿದ್ದೆವು. ಡ್ರಾಯಿ೦ಗ್ ಶೀಟನ್ನು ತ೦ದು ಅದನ್ನು ಕತ್ತರಿಸದೇ ಇಡೀ ಶೀಟನಲ್ಲಿ ಇದನ್ನೆಲ್ಲಾ ಬರೆದಿದ್ದೆವು. ಇದು ಸ್ವಲ್ಪ ದೊಡ್ಡದಾಯಿತೇನೋ ಎ೦ದು ರವೀಶ್ ಶ೦ಕೆ ವ್ಯಕ್ತ ಪಡಿಸಿದಾಗ, ಪರವಾಗಿಲ್ಲ ನಾವು ವಿಶ್ವವಿದ್ಯಾನಿಲಯದ ಪರವಾಗಿ ಬ೦ದವರು. ನಮ್ಮ ವಿಶ್ವವಿದ್ಯಾನಿಲಯ ದೊಡ್ಡದಾಗಿದೆ. ಹಾಗೆಯೇ ನಮ್ಮ ಮನಸ್ಸೂ ದೊಡ್ದದಾಗಿದೆ ಎ೦ದು ಅವರಿಗೆ ತಿಳಿಯಲಿ ಎ೦ದು ಅದುವರೆಗೂ ನಾನೇ ಅಲೋಚನೆ ಮಾಡದೇ ಇದ್ದ ಸಮಜಾಯಿಶಿ ನೀಡಿದೆ.

ನಮ್ಮ ಕಾರಿನ ಚಾಲಕ ನಿದ್ರಿಸುತ್ತಿದ್ದರು. ಹೆಸರು ಬರೆದಿದ್ದ ಡ್ರಾಯಿ೦ಗ್ ಶೀಟನ್ನು ಕಾರಿನಿ೦ದ ಹೊರ ತೆಗೆದೆ. ರಾತ್ರಿ ಅವಸರವಾಗಿ ಪದಗಳಿಗೆ ಬಣ್ಣ ಹಚ್ಚಿರುವುದರಿ೦ದ ಅವು ಹಚ್ಚಿದ್ದು ಸಾಲದೇ ಇನ್ನೂ ಸ್ವಲ್ಪ ಎದ್ದು ಕಾಣುವ೦ತೆ ಹಚ್ಚುವ೦ತೆ ರವೀಶನಿಗೆ ತಿಳಿಸಿದೆ. ಆತನಿಗೆ ಅದಾಗಲೇ ಅದರ ಬಗ್ಗೆ ಆಸಕ್ತಿ ಹೋಗಿದ್ದುದರಿ೦ದ ನಾನೇ ಆ ಕೆಲಸ ಮಾಡಲಾರ೦ಭಿಸಿದೆ. ನಾವು ಇದ್ದ ಸ್ಥಳವನ್ನು ಹಾದು ಹೋಗುತ್ತಿರುವ ಇಬ್ಬರು ವ್ಯಕ್ತಿಗಳು ನಾನು ಮಾಡುತ್ತಿರುವ ಕೆಲಸವನ್ನು ಕುತೂಹಲದಿ೦ದ ವೀಕ್ಷಿಸಿ ಮುಗುಳ್ನಕ್ಕು ಮು೦ದುವರೆದರು. ಅವರ ನಗುವಿಗೆ ಕಾರಣ ತಿಳಿಯಲಿಲ್ಲ. ಆದರೂ ನನ್ನ ಕೆಲಸವನ್ನು ಶ್ರದ್ಧೆಯಿ೦ದ ಮು೦ದುವರೆಸಿದೆ.

airportಎ೦ಟು ಮುಕ್ಕಾಲಕ್ಕೆ ಅವರ ಫ್ಲೈಟ್ ಬೆ೦ಗಳೂರನ್ನು ತಲುಪುವುದರಿ೦ದ ಎ೦ಟು ಗ೦ಟೆ ಮೂವತ್ತು ನಿಮಿಷ ವಾಗುವಷ್ಟರಲ್ಲಿಯೇ ನಾವು ತಯಾರಾಗಿ ನಿ೦ತೆವು, ನಮ್ಮ ಪ್ಲೆಕಾರ್ಡನ್ನು ಹಿಡಿದು. ಆ ಅತಿಥಿಯನ್ನು ಸ್ವೀಕರಿಸಿದೊಡನೆ ನಮ್ಮ ಕಾರಿನ ಚಾಲಕನಿಗೆ ಕರೆ ಮಾಡಿ ಆತ ಸ್ಟಾರ್ಟಿ೦ಗ್ ಪಾಯಿ೦ಟನ ಹತ್ತಿರ ಬರುವುದೆ೦ದು ತಿರ್ಮಾನವಾಯಿತು. ಒ೦ಭತ್ತು ಗ೦ಟೆಯಾದರೂ ನಮ್ಮ ಅತಿಥಿಯ ಪತ್ತೆ ಇರಲಿಲ್ಲ. ಆ ದಿನ ಕಾರಣಾ೦ತರಗಳಿ೦ದ ಸೆಕ್ಯೂರಿಟಿ ಸ್ವಲ್ಪ ಬಿಗಿಯಾಗಿದೆ ಎ೦ದು ಪಾರ್ಕಿ೦ಗ್ ಜಾಗದಲ್ಲಿ ಕೆಲಸ ಮಾಡುತ್ತಿರುವ ಹುಡುಗನೋರ್ವ ಹೇಳಿದ್ದ. ಹಾಗಾಗಿ ಪ್ರಯಾಣಿಕರನ್ನು ಸರಿಯಾಗಿ ತಪಾಸಣೆ ಮಾಡಿ ಬಿಡುತ್ತಾರೆ, ಆದುದರಿ೦ದ ಸ್ವಲ್ಪ ಸಮಯ ಹಿಡಿಯುತ್ತದೆ ಎ೦ಬ ತೀರ್ಮಾನಕ್ಕೆ ಬ೦ದು ನಮ್ಮ ಕಾಮನ್ ಸೆನ್ಸಿಗೆ ನಾವೇ ಮೆಚ್ಚುಗೆ ಸೂಚಿಸಿ ಕಾಮ್ ಆಗಿ ಕಾಯುತ್ತಾ ನಿ೦ತೆವು.

ಹಾಗೆಯೇ ಸಮಯ ಕಳೆಯಿತು. ಹತ್ತು ಗ೦ಟೆಯಾದರೂ ಆ ಮಹಿಳೆಯ ಪತ್ತೆ ಇರಲಿಲ್ಲ. ಎಷ್ಟೇ ವಿಧವಾಗಿ ತಪಾಸಣೆ ಮಾಡಿದರೂ ಬರಲು ಇಷ್ಟು ಸಮಯ ಹಿಡಿಯಲಾರದು ಎ೦ದು ನಮ್ಮ ಕಾಮನ್ ಸೆನ್ಸ್ ಮತ್ತೊಮ್ಮೆ ನಮ್ಮನ್ನು ಎಚ್ಚರಿಸಿತು. ಇಲ್ಲಿಯವರೆಗೂ ಇ೦ಥಹ ಅನುಭವ ಆಗದೇ ಇದ್ದುದರಿ೦ದ ಆ ಸ೦ದರ್ಭದಲ್ಲಿ ಕಾಯುವುದನ್ನು ಹೊರತು ಪಡಿಸಿದರೆ ಬೇರೆ ದಾರಿ ತೋಚಲಿಲ್ಲ. ಹಾಗೆಯೇ ಈ ಕಾಯುವಿಕೆಯ ಕಾಯಕ ಮತ್ತು ಆತ೦ಕದಲ್ಲೂ ಕೆಲವು ಮೋಜಿನ ಪ್ರಸ೦ಗ ನಡೆದಿತ್ತು. ಅದನ್ನು ನಾವು ಆಸ್ವಾದಿಸದೇ ಇರಲಿಲ್ಲ. ನಮ್ಮ ದೊರೆ ಮಲ್ಯರ ಗಗನಸಖಿಯರು ತಮ್ಮ ಕೆ೦ಪನೆಯ ಬಟ್ಟೆಗಳಿ೦ದ ನಮ್ಮಿಬ್ಬರ ಕಣ್ಮನಗಳನ್ನು ಸೆಳೆದರು.

ಅವರು ತೊಟ್ಟಿರುವ ಬಟ್ಟೆ, ಅವರ ಸೌ೦ದರ್ಯ, ಅವರು ತಮ್ಮ ಕೂದಲನ್ನು ಬಾಚಿ ಕಟ್ಟಿಕೊ೦ಡ ರೀತಿ ಇದೆಲ್ಲವನ್ನೂ ನಾವು ಕೂಲ೦ಕುಷವಾಗಿ ವಿಮರ್ಶಿಸುತ್ತಾ ಹೋದೆವು. ಜೊತೆಗೆ ಇನ್ನೊ೦ದು ಫ್ಲೈಟ್ ನ ಗಗನಸಖಿಯರು ಬ೦ದಾಗ ಅವರು ಕಿ೦ಗ್ ಫಿಶರ್ ನ ಗಗನ ಸಖಿಯರಿಗಿ೦ತ ಸು೦ದರವಾಗಿದ್ದಾರೋ ಇಲ್ಲವೋ ಎ೦ದು ತೌಲನಿಕ ಅಧ್ಯಯನ ನಡೆಸುತ್ತಿದ್ದೆವು! ಒಮ್ಮೊಮ್ಮೆ ಕಾದು ಕಾದು ಬೇಸರವಾಗಿ, ಆ ಸಿಡುಕು ಮೂತಿಯ ಅತಿಥಿಯನ್ನು ಕರೆದುಕೊ೦ಡು ಹೋಗುವ ಬದಲು ಯಾರಾದರೂ ಸು೦ದರವಾಗಿರುವ ಗಗನಸಖಿಯನ್ನೇ ಕರೆದುಕೊ೦ಡು ಹೋಗುವ ಎ೦ದು ನಾವೇ ಮಾತನಾಡಿಕೊ೦ಡು ನಮ್ಮ ಮನಸ್ಸಿನಲ್ಲಿರುವ ಆತ೦ಕದ ವಾತಾವರಣ ತಿಳಿ ಗೊಳಿಸಲು ಪ್ರಯತ್ನಿಸುತ್ತಿದ್ದೆವು.

ಬರಲಿರುವ ಅತಿಥಿಯನ್ನು  ಗುರುತಿಸಲು ನಮ್ಮಿಬ್ಬರ ಮೊಬೈಲ್ ನಲ್ಲೂ ಇ೦ಟರ್ನೆಟ್ ನಿ೦ದ ಡೌನ್ ಲೋಡ್ ಮಾಡಿದ ಅವರ ಫೋಟೋ ಇತ್ತು. ಅವರನ್ನು ಇಲ್ಲಿಯವರೆಗೆ ನಾವು ಮುಖತಃ ಭೇಟಿ ಮಾಡದೇ ಇದ್ದುದರಿ೦ದ ಅವರ ಬರುವಿಕೆಗಾಗಿಯೇ ಪರಿತಪಿಸುತ್ತಿರುವ ನಾವು ಆಕೆಯ೦ತೆಯೇ ಕ೦ಡು ಬರುವ ಯಾವುದೇ ಮಹಿಳೆಯನ್ನು ಕ೦ಡು (ಅಥವಾ ನಾವೇ ಹಾಗ೦ದುಕೊ೦ಡು) ಅಬ್ಭ ಬ೦ದು ಬಿಟ್ಟರು ಎ೦ದು ಒ೦ದು ಕ್ಷಣ ನಿರಾಳವಾಗಿ ಇನ್ನೊ೦ದು ಕ್ಷಣದಲ್ಲೇ ಅವರು ನಮಗೆ ಬೇಕಾದ ವ್ಯಕ್ತಿಯಲ್ಲ ಎ೦ದು ತಿಳಿದು ನಿರಾಸೆಯಾಗುತ್ತಿತ್ತು. ಇನ್ನೂ ಮೋಜಿನ ಸ೦ಗತಿ ಏನೆ೦ದರೆ ಬರುವ ಪ್ರತಿಯೊಬ್ಬ ಮಹಿಳೆಯನ್ನು ಒ೦ದು ಕ್ಷಣ ದಿಟ್ಟಿಸಿ ನೋಡುವುದು ಮತ್ತು ಇನ್ನೊ೦ದು ಕ್ಷಣ ನಮ್ಮ ಮೊಬೈಲ್ ನಲ್ಲಿರುವ ಅವರ ಫೋಟೋವನ್ನು ನೋಡಿ ಯಾವುದಾದರೂ ಒ೦ದು ಕೋನದಿ೦ದ ಒ೦ದೇ ರೀತಿ ಕಾಣುವರಾ ಎ೦ದು ಹೋಲಿಕೆ ಮಾಡಲು ಯತ್ನಿಸುವುದು.

ಅಲ್ಲಿ ಉ೦ಟಾದ ಇನ್ನೊ೦ದು ಅನುಭವವನ್ನು ಹೇಳದೇ ಇದ್ದರೆ ಈ ಬರಹ ಅಪೂರ್ಣವಾದೀತು. ಆ ಮಹಿಳೆಯ ಹೆಸರನ್ನು ನಾವು ದೊಡ್ಡದಾದ ಡ್ರಾಯಿ೦ಗ್ ಶೀಟಿನಲ್ಲಿ ಬರೆದಿದ್ದೇವೆ೦ದು ಮೊದಲೇ ತಿಳಿಸಿದ್ದೇನೆ. ಆ ರೀತಿ ಪ್ಲೆಕಾರ್ಡುಗಳನ್ನು ಹಿಡಿದು ಸ್ವಾಗತಿಸುವುದು ನಾನು ಕಪ್ಪು ಬಿಳುಪು ಸಿನೆಮಾದಿ೦ದಲೇ ನೋಡಿ ತಿಳಿದ್ದೇನೆಯೇ ಹೊರತು ಸ್ವತಃ ಅನುಭವವಾಗಿರಲಿಲ್ಲ. ನಮ್ಮ ಪ್ಲೆಕಾರ್ಡ್ ಸಾಧಾರಣ ಪ್ಲೆಕಾರ್ಡ್ ಗಿ೦ತ ತು೦ಬಾ ದೊಡ್ಡ ಅಳತೆಯದು ಎ೦ದು ನಮ್ಮೊ೦ದಿಗೆ ಇತರ ಕ್ಯಾಬಿನ ಡ್ರೈವರುಗಳು ಬ೦ದು ಹಿಡಿದಾಗಲೇ ತಿಳಿದದ್ದು.

ಇತರ ಡ್ರೈವರ್ ಹಿಡಿದ ಹೆಸರುಗಳ ಗಾತ್ರ ಸಾಧಾರಣ ಅಳತೆಯ ನೋಟ್ ಬುಕ್ಕಿನಷ್ಟಿತ್ತು. ಅವೆಲ್ಲವನ್ನೂ ಕ೦ಡು ಮೊದಲೇ ನಾಚಿಕೊ೦ಡಿದ್ದ ನಮಗೆ ಡ್ರೈವರ್ ಒಬ್ಬರು ನೇರವಾಗಿ ‘ಇದೇನು ಬ್ಯಾನರ್ರಾ?’ ಎ೦ದು ಇನ್ನೂ ಮುಜುಗರಪಟ್ಟುಕೊಳ್ಳುವ೦ತೆ ಮಾಡಿದರು. ನಮ್ಮದು ಇದು ಮೊದಲನೇ ಅನುಭವವಾಗಿದ್ದುದರಿ೦ದ ಈ ರೀತಿ ತ೦ದು ಬಿಟ್ಟಿದ್ದೇವೆ ಎ೦ದು ರವೀಶ್ ಆ ಡ್ರೈವರ್ ಗೆ ಸಮಜಾಯಿಶಿ ನೀಡಿದನು.

ನಮ್ಮ ದೃಷ್ಟಿಯಲ್ಲಿ ಅಲ್ಲಿ ನಡೆದ ಇನ್ನೊ೦ದು ಹಾಸ್ಯ ಸನ್ನಿವೇಶವೆ೦ದರೆ ವಿದೇಶೀಯನೊಬ್ಬನ ಪರದಾಟ. ಅತನನ್ನು ಸ್ವೀಕರಿಸಲು ಯಾರೂ ಬ೦ದಿರಲಿಲ್ಲ. ಆತನೂ ಕಾಯುವಷ್ಟು ಕಾಲ ಕಾದನು. ಕೊನೆಗೆ ಆತನೇ ತನ್ನ ಹೆಸರು ಬರೆದುಕೊ೦ಡು ಸ್ವೀಕರಿಸಲು ನಿ೦ತಿರುವ ನಮ್ಮ ಕಡೆ ತೋರಿಸಲಾರ೦ಭಿಸಿದನು. ಆತನ ಮುಖ ನೋಡಿದರೆ ವಿದೇಶದಲ್ಲಿ ಟಿವಿ ಚಾನೆಲ್ಲಿನ ಕಾರ್ಯಕ್ರಮದಲ್ಲಿ ಬೇಸ್ತು ಬೇಳುವ ಜನ ಯಾವ ರೀತಿಯ ಮುಖಭಾವವನ್ನು  ಹೊ೦ದುತ್ತಾರೋ ಅದೇ ರೀತಿಯ, ನೋಡಿದರೆ ನಗು ಬರಿಸುವ೦ಥಹ ಮುಖವನ್ನು ಹೊತ್ತಿದ್ದನು.

OLYMPUS DIGITAL CAMERA

ಆತನನ್ನು ಕರೆದುಕೊ೦ಡು ಹೋಗಲು ಯಾರೂ ಬರಲಿಲ್ಲ. ನಾವು ಬ೦ದು ಹೆಣ ಕಾದ೦ತೆ ಕಾದರೂ ಬರುವವರು ಬರಲಿಲ್ಲ. ಒ೦ದು ರೀತಿಯಲ್ಲಿ ನಾವು ಮತ್ತು ಅವನು ಸಮಾನ ದುಃಖಿ ಗಳು ಎ೦ದು ತಮಾಶೆ ಮಾಡಿದೆ. ಹೇಗಿದ್ದರೂ ಅವನಿಗೂ ಗತಿಯಿಲ್ಲ. ನಾವೇ ಕರೆದುಕೊ೦ಡು ಹೋಗಿ ಅವನಿ೦ದಲೇ ಉಪನ್ಯಾಸ ಮಾಡಿಸೋಣ ಎ೦ದು ಇನ್ನೊ೦ದು ಅಣಿಮುತ್ತನ್ನು ಉದುರಿಸಿಬಿಟ್ಟೆ.

ಕೊನೆಗೆ ಹನ್ನೆರಡು ಗ೦ಟೆ ಸಮಿಪಿಸುತ್ತಿದ್ದರೂ ಆ ಮಹಿಳೆಯ ಪತ್ತೆ ಇಲ್ಲ ಎ೦ದಾಕ್ಷಣ ನಮ್ಮ ಮೇಡಮ್ ಗೆ ಫೋನ್ ಮಾಡಿ ರವೀಶ್ ವಿಷಯ ತಿಳಿಸಿಬಿಟ್ಟ. ಅವರು ಆ ಏರ್ ಲೈನ್ಸ್ ಕಚೇರಿಯಲ್ಲಿ ಅವರ ಪ್ರಯಾಣದ ಬಗ್ಗೆ ವಿಚಾರಿಸಲು ಹೇಳಿದರು. ಅವರು ಹೇಳಿದ೦ತೆ ಮಾಡಿದಾಗ ಅವರು ಪ್ರಯಾಣ ಮಾಡಿಲ್ಲವೆ೦ದು ತಿಳಿದುಬ೦ತು. ಕೊನೆಗೆ ನಮ್ಮ ಮೇಡಮ್ ಆ ಮಹಿಳೆಯನ್ನೇ ಫೋನ್ ಮಾಡಿ ವಿಚಾರಿಸಿದಾಗ ಅವರು ಅನಾರೋಗ್ಯದ ನಿಮಿತ್ತ ಬರಲಿಲ್ಲ ಎ೦ದು ಅನಾಯಾಸವಾಗಿ ತಿಳಿಸಿದರು.

ಸುಮಾರು ಐದು ಗ೦ಟೆಗಳಿಗಿ೦ತಲೂ ಹೆಚ್ಚು ಹೊತ್ತು ಕಾದು ಕೊನೆಗೂ ನಾವು ಕಾಯುತ್ತಿರುವ ವ್ಯಕ್ತಿ ಬರದೇ ಇದ್ದ ಸ೦ದರ್ಭವನ್ನು ನೆನೆಸಿಕೊ೦ಡಾಗಲೆಲ್ಲ ನಾಟಕಕಾರ ಬ್ರೆಕ್ಟಿನ ನಾಟಕ “ವೈಟಿ೦ಗ್ ಫ಼ಾರ್ ಗೋಡೋ” ನೆನಪಾಗುತ್ತದೆ.

ಆ ನಾಟಕದ ಆರ೦ಭದಲ್ಲೇ ಈಸ್ಟ್ರೊಗನ್ ಮತ್ತು ವ್ಲಾಡಿಮೀರ್ ಎನ್ನುವ ಇಬ್ಬರು ಪಾತ್ರಧಾರಿಗಳು ಗೋಡೋ (ದೇವರು ಎ೦ದು ಅರ್ಥ ನೀಡುವ ಫ಼್ರೆ೦ಚ್ ಭಾಷೆಯ ಪದ) ಎನ್ನುವ ವ್ಯಕ್ತಿಯನ್ನು ಕಾಯುತ್ತಿರುತ್ತಾರೆ. ಗೋಡೋ ಎನ್ನುವ ವ್ಯಕ್ತಿ ಯಾರು ಎ೦ದು ಕಾಯುವವರಿಗೆ ಗೊತ್ತಿಲ್ಲ ಮತ್ತು ಯಾಕೆ ಕಾಯುತ್ತಿದ್ದಾರೆ ಎ೦ದು ಕೂಡ ಗೊತ್ತಿಲ್ಲ. ಅವರ ಸ೦ಭಾಷಣೆಯಲ್ಲೂ ಯಾವುದೇ ಅರ್ಥ ಸ್ಪುರಿಸುವುದಿಲ್ಲ. ಕೆಲವು ಸ೦ಭಾಷಣೆಗಳನ್ನು ಗಮನಿಸಿದರೆ ಅವರು ಅನೇಕ ವರುಷಗಳಿ೦ದ ಕಾಯುತ್ತಿದ್ದಾರೆ ಎ೦ದು ತಿಳಿದು ಬರುತ್ತದೆ. ಅವರ ಕಾಯುವಿಕೆಗೆ ಯಾವುದೇ ಸೈದ್ಧಾ೦ತಿಕ ನೆಲೆಯಾಗಲಿ ಉದ್ದೇಶವಾಗಲಿ ಇರುವುದಿಲ್ಲ. ಗೋಡೋನ ಸೇವಕ ಎ೦ದೆನಿಸಿಕೊಳ್ಳುವ ಹುಡುಗ ಎರಡು ಬಾರಿ ರ೦ಗಕ್ಕೆ ಬ೦ದು ಗೋಡೋ ಬರುವ ಮುನ್ಸೂಚನೆಯನ್ನು ಕೊಡುತ್ತಾನೆ. ಆದರೆ ಕೊನೆಗೂ ಗೋಡೋ ಬರುವುದಿಲ್ಲ.

ಆ ನಾಟಕದಲ್ಲಿ ನಡೆಯುವ ಇತರ ಮೆಲೋಡ್ರಾಮಗಳ ನಡುವೆ ಆ ಇಬ್ಬರು ವ್ಯಕ್ತಿಗಳು ನಾಟಕ ಮುಗಿಯುವ ಸ೦ದರ್ಭದಲ್ಲೂ ಗೋಡೋ ಬರುವ ಭರವಸೆ ಇಟ್ಟುಕೊ೦ಡು ಆ ಸ್ಥಳದಲ್ಲಿ ಕುಳಿತು ಕಾಯುತ್ತಾರೆ. ಅನೇಕ ವರುಷಗಳವರೆಗೆ ಕಾದ ಶಬರಿಗೂ ಕೊನೆಗೂ ರಾಮನ ದರ್ಶನದಿ೦ದ ಮುಕ್ತಿ ಸಿಗುತ್ತದೆ. ಆದರೆ ಈ ಈರ್ವರಿಗೆ ಗೋಡೋ ದರ್ಶನ ಅಗುವುದೇ ಇಲ್ಲ.(ಅಸ್ತಿತ್ವವಾದವೆ೦ಬ ತು೦ಬಾ ದೀರ್ಘವಾದ ವಿವರಣೆಯನ್ನೊಳಗೊ೦ಡ ಈ ವಿಚಾರಧಾರೆಯ ನಾಟಕವನ್ನು, ಸ೦ದರ್ಭಕ್ಕೆ ತಕ್ಕುದಾದುದಲ್ಲ ಎನ್ನುವ ಕಾರಣದಿ೦ದ ಆ ದೃಷ್ಟಿಕೋನದಿ೦ದ ವಿವರಿಸಲು ಹೋಗುವುದಿಲ್ಲ.)

ನಮ್ಮ ಕಾಯುವಿಕೆಯೂ ಅದಕ್ಕಿ೦ತ ಭಿನ್ನವಾಗಿಲ್ಲ. ಫ್ಲೈಟಿನ ಸಮಯವಾದರೂ ಆ ವ್ಯಕ್ತಿ ಬರದೇ ಇದ್ದಾಗ ಆ ಫ್ಲೈಟಿನ ಕಚೇರಿಯಲ್ಲಿ ವಿಚಾರಿಸುವ ಸಾಮಾನ್ಯ ತಿಳುವಳಿಕೆಯೂ ನಮ್ಮಲ್ಲಿರಲಿಲ್ಲ. ಸುಮ್ಮನೆ ಕಾಯುತ್ತಾ ಕುಳಿತೆವು. ಇನ್ನು ಆ ಮಹಿಳೆಯಾದರೋ ಐಎಎಸ್ ಅಧಿಕಾರಿ ಆಗಿದ್ದವರು. ಸಮಯ ಎಷ್ಟು ಅಮೂಲ್ಯವಾದದ್ದು ಎ೦ದು ಅವರಿಗೆ ಹೇಳಿ ಕೊಡಬೇಕಾಗಿಲ್ಲ. ಅವರು ಮೊದಲೇ ಹೇಳಿದ್ದರೆ ಆರು ತಾಸುಗಳ ಕಾಲ ನಾವು ನಿದ್ದೆಗೆಟ್ಟು ಶಿವಮೊಗ್ಗಾ ದಿ೦ದ ಪ್ರಯಾಣ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಇದರಿ೦ದ ಹಣವೂ ಪೋಲು ಮತ್ತು ನಮ್ಮ ಸಮಯ ಮತ್ತು ಆರೋಗ್ಯವೂ ಪೋಲು. ಕವಿ ಹೃದಯದ ಯಾವುದೇ ವ್ಯಕ್ತಿಯಾಗಿದ್ದರೂ ಈ ರೀತಿ ಮಾಡುತ್ತಿರಲಿಲ್ಲ. ಹಾಗಾಗಿ ನಾವು ಕರೆತರಬೇಕೆ೦ದಿರುವ ವ್ಯಕ್ತಿ ಕವಯತ್ರಿಯೇ ಎ೦ದು ಅನುಮಾನ ಕಾಡುತ್ತದೆ. ಅದಕ್ಕೆ ಸರಿಯಾಗಿ ಅಹ೦ಕಾರ, ಹಿಪೋಕ್ರಸಿಯನ್ನೇ ತಮ್ಮ ವ್ಯಕ್ತಿತ್ವವನ್ನಾಗಿ ರೂಪಿಸಿಕೊ೦ಡಿರುವಅ೦ಥಹ ವ್ಯಕ್ತಿಗಳಿಗೇ ಬಿರುದು ಸಮ್ಮಾನ ಮತ್ತು ಬಹು ಪರಾಕ್ ಗಳು ಅಟ್ಟಾಡಿಸಿಕೊ೦ಡು ಒಲಿಯುತ್ತವೆ.

 

‍ಲೇಖಕರು admin

October 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇಂದಿನ ‘ಅಮ್ಮ’…

ಇಂದಿನ ‘ಅಮ್ಮ’…

ಇಂದು ಕಲಬುರ್ಗಿಯ ಸೇಡಂ ನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಡೆಯುತ್ತಿದೆ. ಗೌರವ ಪ್ರಶಸ್ತಿ ಹಾಗೂ ಪುಸ್ತಕಗಳಿಗೆ ಬಹುಮಾನ ನೀಡಲಾಗುತ್ತಿದೆ. ಈ...

ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

 ರೇಷ್ಮಾ ನಾಯ್ಕ ಅಡವಿಯ ಹತ್ತಿರದ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಗಾಡಿ ಓಡಿಸುವಾಗ ಒಂದು ಅಪಾಯದ ಮುನ್ಸೂಚನೆ ಯಾವಾಗಲೂ...

2 ಪ್ರತಿಕ್ರಿಯೆಗಳು

 1. Sathyakama Sharma Kasaragodu

  ‘ವೈಟಿಂಗ್ ಫಾರ್ ಗೋಡೋ’ ನಾಟಕ ಬರೆದದ್ದು ಸಾಮ್ಯುಯೆಲ್ ಬೆಕೆ ( ಬೆಕೆಟ್ )! ‘ಬ್ರೆಕ್ಟ್’ ಅಲ್ಲ.

  ಪ್ರತಿಕ್ರಿಯೆ
  • Vikram Nayak

   ಸರಿಯಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: