ವಿಮೆ ಮತ್ತು ಹೂಡಿಕೆಯ ಹೈಬ್ರಿಡ್ !…

-ಜಯದೇವ ಪ್ರಸಾದ ಮೊಳೆಯಾರ
ಕಾಸು ಕುಡಿಕೆ-29
Success is simply a matter of  luck. Ask any failure. . . . . Earl Wilson
ಸಫಲತೆಯು ಕೇವಲ ಅದೃಷ್ಟದ ವಿಷಯ; ಯಾವುದೇ ವಿಫಲಾತ್ಮನನ್ನು ಕೇಳಿರಿ. . . . . ಅರ್ಲ್ ವಿಲ್ಸನ್
ಕಾಕು-೨೮ ರಲ್ಲಿ ವಿಮಾ ಪಾಲಿಸಿಗಳ ಬಗ್ಗೆ ಪರಿಚಯಾತ್ಮಕವಾಗಿ ಬರೆದು ಅವುಗಳ ಮೇಲಿನ ರಿಟರ್ನ್ ಬಗ್ಗೆ ಕಾಕುನೋಟವನ್ನು ಮುಂದಿನ ವಾರ ಕೊಡುತ್ತೇನೆ ಎಂದಿದ್ದೆ. ಈಗ ಅದನ್ನು ನೋಡೋಣ:
ವಿಮೆಯಲ್ಲಿ ಅತಿಮುಖ್ಯವಾಗಿ ಮೂರು ವಿಧ:
೧. ಹೂಡಿಕೆಯಿಲ್ಲದ, ಯಾವುದೇ ರಿಟರ್ನ್ ಕೂಡಾ ಇಲ್ಲದ ಶುದ್ಧ ವಿಮೆ ಮಾತ್ರ ಆಗಿರುವ ಟರ್ಮ್ ಇನ್ಶೂರನ್ಸ್
೨. ಸಾಲಪತ್ರಗಳಲ್ಲಿ ಹಣ ಹೂಡುವ, ಬೋನಸ್ ರೂಪದಲ್ಲಿ ರಿಟರ್ನ್ ಸಿಗುವ With profits ಯೋಜನೆಗಳಾದ ಎಂಡೋಮೆಂಟ್, ಮನಿಬ್ಯಾಕ್ ಇತ್ಯಾದಿ.
೩. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವ, ಮಾರುಕಟ್ಟೆಯಾಧಾರಿತ ರಿಟರ್ನ್ ನೀಡುವ Market linked Policies (ULIP,ULPP)
ಇದೋ ಈವಾರ, ವಿಮಾ ನಿಗಮದ ಶಾಸ್ತ್ರೀಯ ಸ್ಕೀಂ ಎಂದು ಪರಿಗಣಿಸಲಾಗುವ ಎರಡನೆಯ ನಮೂನೆಯ ವಿದ್ ಪ್ರಾಫಿಟ್ ಎಂಡೋಮೆಂಟ್ ಪಾಲಿಸಿಯ ಬಗ್ಗೆ ವಿಶ್ಲೇಷಣೆ:
ಮೊದಲೇ ತಿಳಿಸಿದಂತೆ ಎಂಡೋಮೆಂಟ್ ಪಾಲಿಸಿ ಎಂಬುದು ಪ್ಯೂರ್ ಟರ್ಮ್ ಪ್ಲಾನಿನ ವಿಮೆ ಮತ್ತು ಸಾಲ/ಡೆಟ್‌ಗಳಲ್ಲಿನ ಹೂಡಿಕೆಯ ಹೈಬ್ರಿಡ್. (ಎಲ್ಲೈಸಿಯು ಈ ಪಾಲಿಸಿಯ ನಿಧಿಯನ್ನು ಮುಖ್ಯವಾಗಿ ಸರಕಾರಿ ಸಾಲಪತ್ರಗಳಲ್ಲಿ ಹೂಡುತ್ತದೆ) ಹಾಗಾಗಿ ಎಲ್ಲೈಸಿಯ ಎಂಡೋಮೆಂಟ್ ಪಾಲಿಸಿಯನ್ನು ಇಲ್ಲಿ ಎಲ್ಲೈಸಿಯದ್ದೇ ಆದ ಅನ್ಮೋಲ್ ಜೀವನ್ ಎಂಬ ಟರ್ಮ್ ಪ್ಲಾನ್ ಹಾಗೂ ಸರಕಾರ ಸಾಲಪತ್ರಗಳಲ್ಲಿ ಹೂಡುವ PPಈ ಜೊತೆ ಹೋಲಿಸಲಾಗಿದೆ. ಅರ್ಥಾತ್, ಎಂಡೋಮೆಂಟ್ v/s ಟರ್ಮ್ ಪ್ಲಾನ್ + PPಈ

With profits ಸ್ಕೀಂಗಳಲ್ಲಿ ಪ್ರತಿವರ್ಷ ವಿಮಾಸಂಸ್ಥೆ ಸಾಲಪತ್ರಗಳಲ್ಲಿ ಮಾಡಿದ ತನ್ನ ಹೂಡಿಕೆಯ ಆಧಾರದಲ್ಲಿ ಬಂದ ಲಾಭವನ್ನು ವಿಮಾ ಮೊತ್ತದ (Sum assured) ಮೇಲೆ ಹಂಚುತ್ತದೆ. ಸಾವಿರಕ್ಕೆ ಇಂತಿಷ್ಟು ಅಂತ ಬೋನಸ್ ಹೆಸರಿನಲ್ಲಿ ಇದು ನಿಮ್ಮ ಪಾಲಿಸಿಯಲ್ಲಿ ಜಮೆಯಾಗುತ್ತದೆ. ಇದು ಸಾಕಷ್ಟು ಸೇಫ್ ಮತ್ತು ಊಹ್ಯವಾಗಿರುತ್ತದೆ. ನಾವು ಕಟ್ಟಿದ ಪ್ರೀಮಿಯಂಗೆ ಈ ಬೋನಸ್ಸೇ ಪ್ರತಿಫಲವಾದರೂ ಈ ಬೋನಸ್ ಎಂಬುದು ವಿಮಾ ಮೊತ್ತದ ಮೇಲೆಯೇ ಹೊರತು ಕಟ್ಟಿದ ಪ್ರೀಮಿಯಂನ ಮೇಲೆ ಅಲ್ಲ.
ಒಂದು ಟರ್ಮ್ ಪಾಲಿಸಿಯಲ್ಲಿ ಕೇವಲ ವಿಮೆಗಾಗಿ ಪ್ರೀಮಿಯಂ ಕಟ್ಟಲಾಗುತ್ತದೆ. ಅದು ಯಾವ ಕಾರಣಕ್ಕೂ ಹಿಂದಕ್ಕೆ ಬರುವುದಿಲ್ಲ. ಹೂಡಿಕೆಗಳಲ್ಲಿ ಜನಪ್ರಿಯವಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ( PPಈ) ನಾವು ವಾರ್ಷಿಕವಾಗಿ ಕಟ್ಟುವ ಕಂತಿಗೆ ಸರಕಾರಿ ನಿಗದಿತ ಬಡ್ಡಿದರವನ್ನು ವರ್ಷಾಂತ್ಯದಲ್ಲಿ (ಸಧ್ಯಕ್ಕೆ ೮%) ನೀಡುತ್ತದೆ. ಅದು ಆಗ ಅಸಲಿಗೆ ಸೇರಲ್ಪಟ್ಟು ಮುಂದಕ್ಕೆ ಅದರ ಮೆಲೆ ಚಕ್ರಬಡ್ಡಿ ಸಿಗುತ್ತದೆ.
ಕೆಳಗಿನ ಟೇಬಲ್ ನೋಡಿ ಯಾರೂ ಬೆಚ್ಚಿ ಬೀಳುವ ಅವಶ್ಯಕತೆ ಇಲ್ಲ. ಒಂದು ದೊಡ್ಡ ಆಕಳಿಕೆ ತೆಗೆದು ಪೇಪರನ್ನು ಎತ್ತಿ ಟೀಪೋಯ್ ಮೇಲೆ ಕುಕ್ಕಿ ಇನ್ನೊಂದು ಕಪ್ ಟೀ ಸಿಗುತ್ತದೆಯೋ ಎಂಬ ಆಸೆಯಲ್ಲಿ ಕಿಚನ್ ಕಡೆ ನೋಡಬೇಕಾಗಿಲ್ಲ. ಕಾಸು-ಕುಡಿಕೆಯ ಮಾತು ಮತ್ತು ಮ್ಯಾಟ್ಟರ್ ಎರಡನ್ನೂ ಅತ್ಯಂತ ಸಿಂಪಲ್ ಆಗಿ ಇಡುವುದು ನನ್ನ ಲಾಗಾಯ್ತಿನಿಂದ ಬಂದಂತಹ ಪರಿಪಾಠವಾಗಿದೆ.

ಆದರೆ ಏನೇನೂ ಆಧಾರ ಕೊಡದೆ ಇದಮಿತ್ಥಂ ಎಂದು ಅಪ್ಪಣೆ ಕೊಡುವುದು ಕೂಡಾ ಚೆನ್ನಾಗಿರುವುದಿಲ್ಲ. ಅದಕ್ಕೇ ಇವತ್ತು ಈ ಟೇಬಲ್. (ಮೊಳೆಯಾರರು ಮನಸ್ಸಿಗೆ ಬಂದಂತೆ ಬರೆಯುತ್ತಾರೆ ಅಂತಲೂ ಯಾರೂ ಹೇಳಬಾರದು, ಅಲ್ಲವೇ?) ಆಸಕ್ತರು ಈ ಟೇಬಲ್ ಅನ್ನು ಗಮನಿಸಬಹುದು. ಇದು ಗೋಜಲು ಎಂದು ಅನಿಸುವವರು ಟೇಬಲ್ ಬಿಟ್ಟು ಮುಂದಕ್ಕೆ ಹಾರಿ ಆರಾಮವಾಗಿ ಕುರ್ಚಿಯೊಂದರಲ್ಲಿ ಕುಳಿತು ಮುಂದಿನ ಪ್ರವಚನ ಓದಬಹುದು.

Age=30 ENDOWMENT PLAN (Table: 18-25) for
Sum Assured Rs 10,00,000
TERM PLAN (Anmol Jeevan Table: 164-25) for Sum Assured Rs 10,00,000 (Premium  paid Rs 3821 p.a)
YEAR Premium Bonus @ 45 per  1000 S.A Death/Maturity Benefit
Balance PPF Deposit Interest @ 8% Closing Balance PPF A/c Death      |   % Gain
Benefit    |
1 37,819 45,000 1,045,000 33,998 2,720 36,718 1,036,718
99.21
5 37,819 225,000 1,225,000 33,998 15,956 215,409 1,215,409
99.22
10 37,819 450,000 1,450,000 33,998 39,401 531,915 1,531,915 105.65
15 37,819 675,000 1,675,000 33,998 73,849 996,967 1,996,967 119.22
20 37,819 900,000 1,900,000 33,998 124,465 1,680,280 2,680,280 141.07
25 37,819 1,125,000 2,125,000 33,998 198,836 2,684,292 3,684,292 173.38
Return
5.77%
7.3%

(ಇಲ್ಲಿನ ಪ್ರೀಮಿಯಂ ಬಗ್ಗೆಗಿನ ಅಂಕಿ-ಅಂಶಗಳನ್ನು ಎಲ್ಲೈಸಿಯ ವೆಬ್‌ಸೈಟಿನಿಂದ ತೆಗೆದುಕೊಳ್ಳಲಾಗಿದೆ. ಎಲ್ಲೈಸಿಯ ಬೋನಸ್ ಅನ್ನು ಸಾವಿರಕ್ಕೆ ೪೫ ರೂ ಎಂದು ಅಂದಾಜಿಸಲಾಗಿದೆ. PPಈ ಬಡ್ಡಿದರವನ್ನು ೮% ಎಂದು ಅಂದಾಜಿಸಲಾಗಿದೆ. ಪಾಲಿಸಿ ಮಾಡುವವನ ವಯಸ್ಸನ್ನು ೩೦ ಎಂದೂ ಪಾಲಿಸಿಯ ಅವಧಿಯನ್ನು ೨೫ ವರ್ಷ ಅಂತಲೂ ತೆಗೆದುಕೊಳ್ಳಲಾಗಿದೆ. ಕರ ನೀತಿ/ವಿನಾಯಿತಿ ಎರಡು ಬಗೆಯ ಸ್ಕೀಂಗಳಿಗೂ ಏಕರೂಪವಾಗಿದೆ. ಈ ಅಂದಾಜುಗಳು (assumptions) ಬದಲಾದರೆ ಅಂಕಿ ಅಂಶಗಳೂ ಅಲ್ಪಸ್ವಲ್ಪ ಬದಲಾಗಬಹುದಾದರೂ ತೌಲನಾತ್ಮಕ ತೀರ್ಮಾನಗಳು (Conclusions) ಬದಲಾಗಲಾರವು.)

ಯಾರೋ ಒಬ್ಬ ವ್ಯಕ್ತಿ, ಯಾರಾದ್ರೂ ಆಗಬಹುದು. ನಮ್ಮ ಗುರುಗುಂಟಿರಾಯರ ಅಳಿಯ ಎಂದೇ ಬೇಕಾದರೆ ಇಟ್ಟುಕೊಳ್ಳಿ. ಯಾರೋ ಒಬ್ಬ ಏಜೆಂಟ್ ಆತನಿಗೆ ರೂ ೧೦ ಲಕ್ಷದ ವಿಮೆಯನ್ನು ಎಂಡೋಮೆಂಟ್ ಪ್ರಕಾರ ೨೫ ವರ್ಷಾವಧಿಗೆ ಮಾಡುತ್ತಾನೆ. ಅದಕ್ಕೆ, ೩೦ ವರ್ಷದವನಾದ ಅಳಿಯದೇವರಿಗೆ ವಾರ್ಷಿಕ ಪ್ರೀಮಿಯಂ ರೂ ೩೭,೮೧೯ ಆಗುತ್ತದೆ. ಟೇಬಲ್‌ನ ಎಡಭಾಗದಲ್ಲಿ ಪ್ರೀಮಿಯಂ, ಬೋನಸ್ ಮತ್ತು ಡೆತ್ ಬೆನಿಫಿಟ್‌ಗಳ ವಿವರಗಳಿವೆ.
ಇದರ ಬದಲಾಗಿ ನಾವೀಗ ನಮ್ಮದೇ ಆದ ಸ್ವಂತ ಒಂದು ಯೋಜನೆಯನ್ನು ಹಾಕಿಕೊಳ್ಳೋಣ. ಅದೇ ೧೦ ಲಕ್ಷಕ್ಕೆ ಅನ್ಮೋಲ್ ಜೀವನ್ ಎಂಬ ಪ್ಯೂರ್ ಟರ್ಮ್ ವಿಮಾ ಯೋಜನೆ ತೆಗೆದುಕೊಂಡರೆ ಅದರ ಪ್ರೀಮಿಯಂ ಕೇವಲ ರೂ ೩೮೨೧ ಆಗುತ್ತದೆ. ಅಷ್ಟು ದುಡ್ಡನ್ನು ಎಂಡೋಮೆಂಟ್ ಪ್ರೀಮಿಯಂ ಆದ ರೂ ೩೭,೮೧೯ ರಿಂದ ಕಳೆದರೆ ಕೈಯಲ್ಲಿ ರೂ ೩೩,೯೯೮ ಉಳಿಯುತ್ತದೆ. ಆ ದುಡ್ಡನ್ನು ಒಂದು ಪಿ.ಪಿ.ಎಫ್ ಖಾತೆಯಲ್ಲಿ ಪ್ರತಿವರುಶವೂ ಹಾಕುತ್ತಾ ಹೋದರೆ ಅದು ಹೇಗೆ ಬೆಳೆಯುತ್ತದೆ? ಆ ವಿವರಗಳೆಲ್ಲವೂ ಟೇಬಲ್‌ನ ಬಲಭಾಗಗಲ್ಲಿ ಇವೆ. ಈಗ ಈ ಕೆಳಗಿನ ಕೆಲವು ಕೆಲವು ಅಂಶಗಳನ್ನು ಗಮನಿಸಿ:
* ಗರಿಷ್ಟ ಅವಧಿ, ೨೫ ವರ್ಷಗಳಲ್ಲಿ ಎಂಡೋಮೆಂಟಿನಲ್ಲಿ ಡೆತ್ ಅಥವ ಮೆಚ್ಯೂರಿಟಿ ಬೆನಿಫಿಟ್ ರೂ ೨೧.೨೫ ಲಕ್ಷವಾದರೆ ನಿಮ್ಮದೇ ಆದ ಟರ್ಮ್+ಪಿ.ಪಿ.ಎಫ್ ಯೋಜನೆಯಲ್ಲಿ ನಲ್ಲಿ ಡೆತ್ ಬೆನಿಫಿಟ್ ರೂ ೩೬.೮೪ ಲಕ್ಷ ಆಗುತ್ತದೆ. ಇದು ಎಂಡೋಮೆಂಟಿಗಿಂತ ಸುಮಾರು ೭೩% ದಷ್ಟು ಹೆಚ್ಚು ಲಾಭಕರ!
* ಮೃತ್ಯು ಸಂಭವಿಸದೆ ಹೋದಲ್ಲಿ ಕೂಡಾ ಮೆಚ್ಯೂರಿಟಿ ಮೊತ್ತ ರೂ ೨೬.೮೪ ಲಕ್ಷ (೭.೩% ರಿಟರ್ನ್) ಪಿ.ಪಿ.ಎಫ್‌ನಲ್ಲಿ ಇರುತ್ತದೆ. ಅದೂ ಕೂಡಾ ಎಂಡೋಮೆಂಟಿನ ರೂ ೨೧.೨೫ ಲಕ್ಷಕ್ಕಿಂತ (೫.೭೭% ರಿಟರ್ನ್) ಜಾಸ್ತಿಯೇ.
* ಇವೆರಡು ಆಪ್ಷನ್ಸ್‌ಗಳಲ್ಲಿ ಸುಮಾರು ೧೦ ವರ್ಷಗಳ ಅವಧಿಯವರೆಗೆ ವಿಶೇಷ ವ್ಯತ್ಯಾಸ ಕಾಣದಿದ್ದರೂ ಬಳಿಕ ಅವಧಿ ಜಾಸ್ತಿಯಾದಂತೆ ವ್ಯತ್ಯಾಸ ಜಾಸ್ತಿಯಾಗುತ್ತಲೇ ಹೋಗುತ್ತದೆ. ಇದು ಪಿ.ಪಿ.ಎಫ್‌ನಲ್ಲಿ ನಡೆಯುವ ಚಕ್ರಬಡ್ಡಿಯ ಪ್ರಭಾವ (Power of compounding)ದಿಂದಾಗಿಯೇ ಸರಿ. ವಿಮೆಯೆಂಬುದು ಯಾವತ್ತೂ ದೀರ್ಘಕಾಲಿಕ ಯೋಜನೆಯಾಗಿರಬೇಕಾದ್ದರಿಂದ ಅದು ಪ್ರಸ್ತುತವೆನಿಸುತ್ತದೆ.
* ವಿಮೆಯನ್ನು ಆದಷ್ಟು ಎಳೆ ವಯಸ್ಸಿನಲ್ಲಿ (ಕನಿಷ್ಟ ೧೮) ಮಾಡಿದಷ್ಟು ಲಾಭಕರ. ಪ್ರೀಮಿಯಂ ಕಡಿಮೆಯಾಗಿ ರಿಟರ್ನ್ ಸುಮಾರು ೦.೨೫% ದಷ್ಟು ಜಾಸ್ತಿಯಾಗುತ್ತದೆ. (ಬೋನಸ್ ಯಾವತ್ತೂ ವಿಮೆಯ ಮೊತ್ತದ (Sum assured) ಮೇಲೆಯೇ ಆಗಿರುತ್ತದೆ ಮತ್ತು ವಯಸ್ಸು ಕಡಿಮೆಯಿದ್ದಷ್ಟು ರಿಸ್ಕ್ ಕಡಿಮೆಯಾಗಿ ಪ್ರೀಮಿಯಂ ಕಡಿಮೆಯಿರುತ್ತದೆ)
* ಇದು ಎಲ್ಲೈಸಿಯ ಕತೆಯಾದರೆ, ಇನ್ನು ಖಾಸಗಿ ವಿಮಾ ಸಂಸ್ಥೆಗಳಲ್ಲಿ ಬೋನಸ್ ಇನ್ನೂ ಕಳಪೆಯಾದ ಕಾರಣ ಈ ವ್ಯತ್ಯಾಸ ಇನ್ನಷ್ಟೂ ಜಾಸ್ತಿಯಾಗುತ್ತದೆ. ಪ್ರೀಮಿಯಂ ಕಡಿಮೆ ಎಮ್ದು ಎತ್ತಿ ತೋರಿಸುವ ಕೆಲ ಕಂಪೆನಿಗಳು ಎಷ್ಟು ಬೋನಸ್ ಕೊಡುತ್ತಿದ್ದಾರೆ ಎಂಬ ವಿಷಯದ ಬಗ್ಗೆ ಚಕಾರವೆತ್ತುವುದಿಲ್ಲ.
ಆದ್ದರಿಂದ ಎಂಡೋಮೆಂಟ್ ಪಾಲಿಸಿ ಮಾಡಿಕೊಳ್ಳುವುದಕ್ಕಿಂತ ಅದೇ ವಿಮಾ ಮೊತ್ತಕ್ಕೆ ಒಂದು ಟರ್ಮ್ ಇನ್ಶೂರನ್ಸ್ ಮಾಡಿಕೊಂಡು ಉಳಿದ ದುಡ್ಡನ್ನು ಪಿ.ಪಿ.ಎಫ್‌ನಲ್ಲಿ ಹಾಕುವುದು ಹೆಚ್ಚು ಲಾಭಕರ. ವಿಮೆಯೆಂಬ ಅತ್ಯಮೂಲ್ಯ ಕಾರ್ಯದಲ್ಲಿ ನಿಗಮವು ಅದ್ಭುತ ಸೇವೆ ನೀಡುತ್ತಿದ್ದರೂ ಒಂದು ಹೂಡಿಕಾ ಮಾರ್ಗವಾಗಿ ಅದು ಸಾಕಷ್ಟು ಪ್ರತಿಫಲ ನೀಡುತ್ತಿಲ್ಲ.
ಆದ್ದರಿಂದ ನಾವುಗಳು ವಿಮೆಯನ್ನೂ, ಹೂಡಿಕೆಯನ್ನೂ ಬೇರ್ಪಡಿಸಿ ಎರಡರ ಲಾಭವನ್ನೂ ಗರಿಷ್ಟಮಟ್ಟಿಗೆ ಪಡೆದುಕೊಳ್ಳುವುದು ಒಳ್ಳೆಯದು. ವಿಮೆಗಾಗಿ ಟರ್ಮ್ ಇನ್ಶೂರನ್ಸ್, ಹೂಡಿಕೆಗಾಗಿ ಪಿ.ಪಿ.ಎಫ್!! ವಿಮೆ ಮಾಡಿಕೊಳ್ಳುವವರು ಈ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.
ಈ ವ್ಯತ್ಯಾಸ ಅಥವ ಅನಾಮಲಿ ವಿಮಾಲೋಕದಲ್ಲಿ ಬಹಳ ಸಮಯದಿಂದಲೇ ನಡೆಯುತ್ತಾ ಬರುತ್ತಿದ್ದರೂ ಎಲ್ಲೈಸಿಯು ಪಾಲಿಸಿದಾರರ ಹಿತದೃಷ್ಟಿಯಲ್ಲಿ ತನ್ನ ವಿದ್ ಪ್ರಾಫಿಟ್ ಪಾಲಿಸಿಗಳ ರಿಟರ್ನ್ ಬಗ್ಗೆ ಯಾಕೆ ಏನೂ ಮಾಡುವುದಿಲ್ಲವೋ ನಾನರಿಯೆ. ಇದು ಸರಕಾರದ ವತಿಯಿಂದ ತುರ್ತಾಗಿ ಆಗಬೇಕಾಗಿರುವ ಕಾರ್ಯ. ಅದು ಸಾಧ್ಯವಾಗುವುದಿಲ್ಲವಾದರೆ ವಿಮಾನಿಗಮವನ್ನು ವಿದೇಶಗಳಲ್ಲಿ ಇದ್ದಂತೆ ಕೇವಲ ಟರ್ಮ್ ಇನ್ಶೂರನ್ಸ್ ಪ್ರಾಧಾನ್ಯವಾಗಿ ಬೆಳೆಸಿಕೊಂಡು ಹೋಗುವುದು ಉತ್ತಮ.

‍ಲೇಖಕರು avadhi

September 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

೧ ಪ್ರತಿಕ್ರಿಯೆ

 1. ಚಂದ್ರಾವತಿ ಬಡ್ಡಡ್ಕ

  ಇದೇ ವಿಚಾರವಾಗಿ ನಾನು ಇತ್ತೀಚೆಗೆ ಎಲ್ಲೈಸಿ ಏಜೆಂಟರೊಬ್ಬರೊಡನೆ ಜಗಳವಾಡಿದ್ದೆ. ಪಿಪಿಎಫ್‌ನೊಂದಿಗೆ ಹೋಲಿಸಿ, ನಿಮ್ಮದು ಜೀವ ಇರೋವಾಗ ಸಹಾಯವಾಗೋ ಯೋಜನೆ ಅಲ್ಲ ಎಂದಿದ್ದೆ. ನಿಮ್ಮ ಲೇಖನ ನೋಡಿ ನನ್ನ ವಾದಕ್ಕೆ ಆನೆ ಬಲ ಬಂದಂತಾಗಿದೆ.
  ಎಲ್ಲೈಸಿಯ ಹೆಲ್ತ್ ಪ್ಲಸ್ ಎಂಬ ಪಾಲಿಸಿಯನ್ನು ತೆಗೆದುಕೊಂಡರೆ, ಪಾಲಿಸಿ ಮಾಡುವ ವೇಳೆ ಆನೆ, ಕುದುರೆ ತೋರಿಸೋ ಏಜೆಂಟರುಗಳು ನಮಗೆ ತುರ್ತು ಪರಿಸ್ಥಿತಿ ಏರ್ಪಟ್ಟಾಗ ನಿಮ್ಮ ಕೇಸು ಇದರಲ್ಲಿ ಬರುವುದಿಲ್ಲ ಎಂದು ಕೈ ತೊಳೆದುಕೊಳ್ಳುತ್ತಾರೆ. ಅವರ ಸರ್ಜರಿ ಪಟ್ಟಿಯನ್ನು ನಾನು ವೈದ್ಯರೊಬ್ಬರ ಬಳಿ ಕೊಂಡೊಯ್ದು ತೋರಿಸಿದಾಗ ಪುತಕ್ಕನೆ ನಕ್ಕ ಅವರು, ಇಂಥ ಸರ್ಜರಿಗಳನ್ನೆಲ್ಲ ವ್ಯಕ್ತಿ ‘ಈಚೆ ಇಲ್ಲ’ ಎಂಬಂತ ಸ್ಥಿತಿಯಲ್ಲಿ ಮಾಡೋದು, ಕೆಲವು ಸರ್ಜರಿಗಳನ್ನು ಮಾಡೋದೇ ಇಲ್ಲ ಎಂದರು.
  ಈ ಪಾಲಿಸಿ ಮಾಡಿ (ಆ ಬ್ರಾಂಚಲ್ಲಿ ಮೊದಲ ಪಾಲಿಸಿಯೇ ನನ್ನದಂತೆ!) ವರ್ಷಕ್ಕೆ 12 ಸಾವಿರ ರೂಪಾಯಿ ಪ್ರೀಮೀಯಂ ಕಟ್ಟುವ ನಾನು ಥೇಟ್ ಇಂಗು ತಿಂಗ ಮಂಗಿಯಾಗಿದ್ದೇನೆ. ಇದೀಗ ನನಗೆ ಸರ್ಜರಿಯೊಂದು ಆಗಬೇಕಿದ್ದು, ಇದಕ್ಕೆ ನಾನು ಇತರೆಡೆಗಳಿಂದ ಹಣ ಹೊಂಚುವ ದುರ್ದಿಗೆ ಬಿದ್ದಿದ್ದೇನೆ. ನಿಮಗೆ ಹಾಸ್ಪಿಟಲ್ ಬೆನೆಫಿಟ್ ಇದೆ ಅಂತಾರೆ. ಇದಕ್ಕೆ ಏನೆಲ್ಲಾ ಕುಣಿಯಬೇಕೋ. ಅದರಲ್ಲೂ ಐಸಿಯುವಿನಲ್ಲಿದ್ದರೆ ನಾವು ಆಯ್ಕೆ ಮಾಡಿದ ಮೊತ್ತದ ದುಪ್ಪಟ್ಟು ಅಂತಾರಾದರೂ, ಆಸ್ಪತ್ರೆಯಲ್ಲಿ ದಾಖಲಾದ ಮೊದಲ ಎರಡು ದಿನಗಳಿಗೆ ಇಲ್ಲವಂತೆ. (ಗಂಭೀರವಾಗಿದ್ದ ಮೊದಲ ದಿನಗಳಲ್ಲಿ ತಾನೆ ಐಸಿಯುವಿನಲ್ಲಿ ಇರುವುದು) ಹೇಗಿದೆ ಇವರು ಮೊಣಕೈಗೆ ತುಪ್ಪು ಹಚ್ಚಿ ನೆಕ್ಕಿಸುವ ವಿಧಾನ? ಪಾಲಿಸಿ ಮಾಡುವ ವೇಳೆ ಸಹಿ ಹಾಕುವುದನ್ನು ಬಿಟ್ಟರೆ, ಚಿಕ್ಕ ಅಕ್ಷರಗಳಲ್ಲಿ ಬರೆದ ಬೇರೆಲ್ಲ ಓದುವ ವ್ಯವಧಾನ ಇಲ್ಲದಿರುವುದಕ್ಕೇ ಇಂತಹ ಖೆಡ್ಡಾದಲ್ಲಿ ಬೀಳುವ ಮೂರ್ಖರಾಗುತ್ತೇವೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ? ದಯವಿಟ್ಟು ತಿಳಿಸಿ.
  ಇದಲ್ಲದೆ ಇನ್ನೊಂದು ಪ್ರಶ್ನೆ ಎಂದರೆ, ಇದೇ ಎಲ್ಲೈಸಿಯಲ್ಲಿ ಪ್ರೀಮಿಯಂ ಕಟ್ಟದೆ ಲ್ಯಾಪ್ಸ್ ಆದ ಅದೆಷ್ಟೊ ಪಾಲಿಸಿಗಳ (ದೇಶಾದ್ಯಂತ ಇಂತಹ ಪಾಲಿಸಿಗಳು ಅವೆಷ್ಟೋ ಇರಬಹುದು) ಮೊತ್ತಗಳೆಲ್ಲ ಎಲ್ಲಿ ಹೋಗುತ್ತವೆ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: