ವಿಲನ್ ಇಲ್ಲದ ಈ ಕಥೆ..

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

 

ನಾನು ತುಂಬ ಇಷ್ಟಪಡುವ, ನಂಬುವ ಪ್ರಕೃತಿಯಾಣೆ ನಾನಿದನ್ನ ಯಾವತ್ತೂ ನಿನಗೆ ಹೇಳಬೇಕೆಂದುಕೊಂಡಿರಲಿಲ್ಲ. ನಿನಗೆ ಮಾತ್ರ ಅಲ್ಲ ಯಾರಿಗೂ.. ಉಹುಂ ನಿನಗೆ ಅರ್ಥವಾಗುವುದಿಲ್ಲ ಅಂತ ಅಲ್ಲ, ಹೇಳಬಾರದು. ಹೇಳಿದರೆ ಕೇಳಿಸಿಕೊಂಡ ನೀನೋ ಅಥವ ಇನ್ಯಾರೋ ನನ್ನ ಮಾತುಗಳಿಗೆ ಅರ್ಥ ಹುಡುಕಲು ಹೋಗುತ್ತೀರಿ, ಆ ಮಾತುಗಳು ಅರ್ಥಕ್ಕೆ ನಿಲುಕುವುದಿಲ್ಲ, ಅರ್ಥಕ್ಕೆ ನಿಲುಕದ್ದು ಶ್ರೇಷ್ಠ ಎನ್ನುವುದು ಹುಚ್ಚು ಭ್ರಮೆ. ಆದರೆ ಅರ್ಥಕ್ಕೆ ನಿಲುಕದ್ದನ್ನು, ಬುದ್ದಿಯು ಜೀರ್ಣಿಸಿಕೊಳ್ಳಲಾಗದ್ದನ್ನು ಹೇಳಿದರೆ ಹೇಳಿದವ ಹುಚ್ಚ, ಪ್ರೇಮಿ ಎಂದು ಕರೆಸಿಕೊಳುತ್ತಾನೆ ಇಲ್ಲವೇ ಕವಿ ಎಂದು ಇನ್ನೂ ಹೆಚ್ಚಾದರೆ ಭವಿ. ನಾನು ಇದ್ಯಾವುದೂ ಅಲ್ಲ. ಜೊತೆಗೆ ಇಂಥಾ ಹಣೆಪಟ್ಟಿಗಳಲ್ಲಿ ಬದುಕು ಉಸಿರುಗಟ್ಟುತ್ತದೆ. ಈಗ ನಾನು ಇನ್ನೊಂದು ಸ್ಥಿತಿಗೆ ಬಂದಿದ್ದೇನೆ ದಯವಿಟ್ಟು ಅದಕ್ಕೊಂದು ಹೆಸರಿಟ್ಟು ರಾಡಿ ಮಾಡಬೇಡ.
ಈ ಸ್ಥಿತಿಯಿಂದ ಹಿಂದಿನದನ್ನು ನೋಡಿ ಮಾತಾಡುವಾಗ ಅಲ್ಲಿ ನಾನಿಲ್ಲ ನೀನಿಲ್ಲ ಅವರಿಬ್ಬರಿದ್ದಾರೆ ಅವನು ಅವಳು. ಇದಕ್ಕೆ ಸೀಯಿಂಗ್ ಫ್ರಂ ದಿ ಅಬವ್ ಅಂತ ಕರೆಯುತ್ತೇನೆ. ಈ ಪದಗುಚ್ಚ ನನ್ನದಾ? ಯಾರದೋ ಮರೆತು ಹೋದ ಲೇಖಕನದಾ? ಅಥವ ನನ್ನ ಕನಸಿನಲ್ಲಿ ಬಂದದ್ದಾ? ಇಂಥಾ ವಿಸ್ಮ್ರುತಿಗಳಲ್ಲೇ ಬದುಕುತ್ತಿರುವುದು ನಾನು… ಖುಶಿಯಾಗಿ ಬದುಕುತ್ತಿದ್ದೇನೆ..
2
…ಸೀಯಿಂಗ್ ಫ್ರಂ ದ ಅಬವ್- ಹೌದು ಅಲ್ಲಿ ಈಗಿನ ನಾನಿಲ್ಲ ನೀನಿದೆಯೋ ಇಲ್ಲವೋ ಗೊತ್ತಿಲ್ಲ ಜೊತೆಗೆ ಅಲ್ಲಿಲ್ಲಿರುವ ನಾನಲ್ಲದ ನನ್ನನ್ನೂ ನಿನ್ನನ್ನೂ ಆಗಿನ ನನ್ನ ಭಾವಾತಿರೇಕದ ಹಂಗಿನಿಂದ ಹೊರಬಂದು ನೋಡಲು ಪ್ರಯತ್ನಿಸಿದ್ದೇನೆ. ಇದನ್ನ ವಿಮರ್ಶೆ ಎಂದು ತಿಳಿಯಬೇಡ ವಿಮರ್ಶಿಸುವಾಗ ಸಾಮಾನ್ಯವಾಗಿ ತಪ್ಪುಗಳನ್ನ ಎತ್ತಿಹಿಡಿಯುವ ತವಕವಿರುತ್ತದೆ ಆದರೆ ಸುಮ್ಮನೆ ನೋಡುವಾಗ ವಿಮರ್ಶೆಯ ಅಗತ್ಯವಾಗಲೀ, ಕಾರಣಗಳನ್ನ ಅರ್ಥಗಳನ್ನ ಹುಡುಕುವ ತವಕವಾಗಲೀ, ಲಾಜಿಕ್ ಗಳಿಗೆ ತಡಕಾಡುವ ಅಗತ್ಯತೆಯಾಗಲೀ ಇರುವುದಿಲ್ಲ! ಈ ಲಾಜಿಕ್ ಎನ್ನುವುದು ಎಂಥಾ ವಿಚಿತ್ರವಾದುದು ಗೊತ್ತಾ? ಯಾರೋ ಹೇಳಿದರು ಈ ಲೋಕದಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಲಾಜಿಕ್ ಇರುತ್ತದೆ.. ಪ್ರತಿಯೊಂದು ಕ್ರಿಯೆಗೂ ತನ್ನದೇ ಆದ ಕಾರಣ ಪರಿಣಾಮಗಳಿರುತ್ತೆ ಮತ್ತು ನೀವಿಡುವ ಪ್ರತಿಯೊಂದು ಹೆಜ್ಜೆಯೂ, ಉಸಿರಾಟವು ಎಲ್ಲವೂ ಎಲ್ಲವೂ ಆ ಪ್ಲಾನಿನಂತೆಯೇ ನಡೆಯುತ್ತದೆ, ಯಾವುದೋ ಕಾರಣಕ್ಕಾಗಿ ನಡೆಯುತ್ತದೆ. ಹೀಗೆ ಅಂದುಕೊಳ್ಳುವವರ ಜೀವನ ಪ್ರೀತಿಯನ್ನು ಕಂಡು ಖುಶಿಯಾಗುತ್ತೆ ನನಗೆ.
ಆದರೆ ವಾಸ್ತವವೇ ಬೇರೆ ಆಗುವ ಆರಂಭಗಳಿಗೆ, ಘಟಿಸುವ ಘಟನೆಗಳಿಗೆ, ಮುಗಿಸುವ ಮುಕ್ತಾಯಗಳಿಗೆ ಒಂದಕ್ಕೊಂದು ಸಂಭಂಧವೇ ಇರುವುದಿಲ್ಲ.. ಸಂಭಂದವಿಲ್ಲದವುಗಳಿಗೆ ಕಥೆ ಕಟ್ಟುವ ಸಂಬಂಧ ಹುಡುಕುವ ಕ್ರಿಯೇಟಿವಿಟಿ ಕಲಾತ್ಮಕತೆ ತಮ್ಮ ಕಥೆಗಳನ್ನು ತಾವೇ ಮುಗ್ಧವಾಗಿ ನಂಬಿ ಸಂಭ್ರಮಿಸುವ, ಆತಂಕ ಪಡುವ, ಪಶ್ಚಾತಾಪದಲ್ಲಿ ನರಳುವ, ಮಮ್ಮಲ ಮರುಗುವ ಲೋಕದಲ್ಲಿ ಎಲ್ಲಾರೂ ಹಾಯಾಗಿದ್ದೇವೆ.
ನಿನಗೆ ಗೊತ್ತಲ್ಲ ನನ್ನ ಸ್ವಭಾವ ಪತ್ರ ಬರೆಯುವುದರಲ್ಲೂ ಒಂದು ವ್ಯವಸ್ಥೆ ಇಲ್ಲ ಮುಖ್ಯವಾಗಿ ಹೇಳಬೇಕಾದ್ದನ್ನು ಮರೆತು ಇನ್ನೇನನ್ನೋ ಕೊರೆಯುತ್ತಿದ್ದೇನೆ. ನಾನು ನೋಡಿದ್ದನ್ನು ಹೇಳುತ್ತೇನೆ ಕೇಳು.. ಅವರಿಬ್ಬರಿಗೂ ಪರಿಚಯವಾಗಿ, ಬಹಳದಿನಗಳಾದ ಮೇಲೆ ಅದು ಪ್ರೀತಿಯಂತ ಇಬ್ಬರಿಗೂ ಅನ್ನಿಸಿ ಅವನು ಅವಳನ್ನು ಪ್ರೀತಿಸತೊಡಗಿ ಅವಳೂ ಅವನನ್ನು ಒಪ್ಪಿ, ಅವಳಮ್ಮನಿಗೆ ಅದು ಗೊತ್ತಾದರೂ ತನ್ನ ಮಗಳು ಇಷ್ಟಪಡುತ್ತಿರುವ ಹುಡುಗ ‘ಯೋಗ್ಯ’ ಅನ್ನಿಸಿದ್ದರಿಂದ ಅವಳೂ ಸುಮ್ಮನಿದ್ದು ಪ್ರೋತ್ಸಾಹ ಕೊಟ್ಟಿದ್ದು.. ..ಲವ್ ಸ್ಟೋರಿ ವಿದೌಟ್ ವಿಲ್ಲನ್ಸ್..
ಅವನು ಅವಳನ್ನು ನೋಡಲು ಅದ್ಯಾವುದೋ ಊರಿನಿಂದ ಬರುತ್ತಿದ್ದನಲ್ಲ, ಆವಾಗ ಇವಳಿಗೆ ಕಾಯುವ ಸಂಭ್ರಮ. ಅವನಿಗೆ ಬಂದು ಕೂಡುವ… ಇಬ್ಬರೂ ಅಷ್ಟು ಪ್ರೀತಿಸುತ್ತಿದ್ದರಲ್ಲ, ಅವನು ಅವಳಿಗೆ ಉಡುಗೊರೆಗಳ ಮಳೆ ಸುರಿಯುತ್ತಿದ್ದ ಭಾವನೆಗಳ ಮಹಾಪೂರವೇ ಹರಿಯುತ್ತಿತ್ತು.. ಇವಳಿಗೆ ಅವನೆಂದರೆ ಮರಳ ಬಿಸುಪು ಸಮುದ್ರ ಪ್ರೀತಿ ಎಲ್ಲಾ ಸರಿ… ಮೊದಲ ಸಲ ಅವರಿಬ್ಬರೂ ಪ್ರೀತಿಸತೊಡಗಿದ ಮೇಲೆ ದೆಹಲಿಯಿಂದ ಅವಳನ್ನು ಭೇಟಿಮಾಡಲೆಂದೇ ಬೆಂಗಳೂರಿಗೆ ಬಂದಿದ್ದ, ದಿನವೆಲ್ಲಾ ಇಬ್ಬರೂ ಸುತ್ತಾಡಿದರು, ಒಟ್ಟಿಗೆ ಕಾಲ ಕಳೆದರು, ಅವಳದು ಬೆಂಗಳೂರಲ್ಲ ಅಲ್ಲೇ ಪಕ್ಕದಲ್ಲಿ ಒಂದು ಹಳ್ಳಿ, ರಾತ್ರಿ ಅವಳು ಮನೆಗೆ ವಾಪಾಸಾಗಬೇಕಲ್ಲ, ಪಕ್ಕದ ಹಳ್ಳಿಗೆ, ಆ ಹಳ್ಳಿಗೆ ಅವಳ ಜೊತೆ ಹೋಗಿ ತಲುಪಲು ರಾತ್ರಿ ಎಂಟುಗಂಟೆಯಾಗುತ್ತದೆ, ಆದರೆ ತಲುಪಿದ ಮೇಲೆ ಮತ್ತೆ ಬೆಂಗಳೂರಿಗೆ ಬರಲು ಒಂದೂವರೆ ಗಂಟೆಯ ಮೇಲೇ ಬಸ್ಸಿರುವುದು ಅವನು ಅವಳನ್ನು ಬಿಟ್ಟು ಅಲ್ಲಿಂದ ವಾಪಾಸ್ಸು ತಾನಿಳಿದುಕೊಂಡ ಜಾಗಕ್ಕೆ ಬರಲು ಬಸ್ಸಿಗಾಗಿ ಕಾಯುತ್ತಾ ಕುಳಿತಿರಲು ಯಾರಿಗೆ ಸಾಧ್ಯ ಹೇಳು? ಹುಡುಗನ ಸ್ಥಿತಿಯನ್ನ ಹುಡುಗಿ ಅರ್ಥಮಾಡಿಕೊಳ್ಳಬೇಕಲ್ಲವೇ.. ಅರ್ಥ ಮಾಡಿಕೊಂಡಳು. ವಿಶೇಷವೆಂದರೆ ಅವನು ಬರುವ ಮೊದಲೇ ಹೋಗುವ ಟಿಕೇಟೂ ಸಿದ್ಧವಾಗಿರುತ್ತಿತ್ತು..
ಹೋಗದೇ ಆಗುತ್ತದೆಯೇ ಅವನಿಗೇನು ಕೆಲಸವಿಲ್ಲವೇ? ಇದ್ದಾಗಲೂ ಹೋಗಿ ಮಾಡಬೇಕಾದ ಕೆಲಸಗಳು ಯೋಚನೆಗಳು.. ಉಹು ಅವನ ತಪ್ಪಲ್ಲ ಖಂಡಿತ. Its very human, but the girl used to feel bad about this.. ಅವನು ಅವಳನ್ನು ಇಷ್ಟಪಡುತ್ತಾನೆ, ದೂರ ಇದ್ದಾಗ ಇವಳಿಗಾಗಿ ಹಂಬಲಿಸಿ ಹಂಬಲಿಸಿ ನರಳುತ್ತಾನೆ. ಆದರೆ ಆ ಹುಡುಗಿಗೆ ಈ ರೀತಿಯ ಮನುಷ್ಯ ಪ್ರೀತಿ ವಿಚಿತ್ರ ಅನ್ನಿಸತೊಡಗಿತು, ಅರ್ಥವಾಗುತ್ತಿರಲಿಲ್ಲ. Its her disability.  ಬರಬರುತ್ತಾ ಅವನು ಬಂದು ಹೋಗುವಾಗಲೆಲ್ಲಾ ಅವನು ತನಗೆ ಅಪಾಯಿಂಟ್ಮೆಂಟ್ ಕೊಡುತ್ತಿದ್ದಾನೆ ಅಂದುಕೊಂಡಳು. ವಾರ ಪೂರ್ತಿ ಅವರಿವರೊಡನೆ ಬಿಸ್ನೆಸ್ ಮೀಟಿಂಗಳನ್ನು ಅಟೆಂಡ್ ಮಾಡುತ್ತಾ ಭೇಟಿಯಾಗಬೇಕಾದವರನ್ನೆಲ್ಲಾ ಭೇಟಿಯಾಗುತ್ತಾ ವಾರದ ಕೊನೆಗೆ ಇವಳನ್ನು ಬಂದು ಭೇಟಿಯಾಗುವಾಗ ಅವನಿಗೆ ಸಿಗುತ್ತಿದ್ದ ನೆಮ್ಮದಿ, ಸಾಂತ್ವನ ಪದಗಳ ಮಿತಿಯಲ್ಲಿ ಹೇಳಲಾರದು ಅನ್ನಿಸುತ್ತಿತ್ತು ಅವನಿಗೆ.
ವಾರ ಪೂರ್ತಿ ಮತ್ತೆ ದುಡಿಯುವ ಹುಮ್ಮಸ್ಸು ಎಲ್ಲಾ ಸಿಕ್ಕಿತು ಅಂದುಕೊಳ್ಳುತ್ತಿದ್ದ, ಈ ಹುಡುಗಿ ನನಗೂ ಅಪಾಯಿಂಟ್ಮೆಂಟ್ ಕೊಟ್ಟು ಪ್ರೀತಿಸುತ್ತಿದ್ದಾನೆ ಹಿಂಸೆಯಾಗುತ್ತಿತ್ತು.. ಅಷ್ಟು ಮಾತ್ರವಲ್ಲ ಮನುಷ್ಯ ಪ್ರೀತಿಯೇ ಅಷ್ಟು ಎಂದೂ ನಿರ್ಧರಿಸಿಯೇ ಬಿಟ್ಟಳು.. ಅವಳು ಮನೆಯಲ್ಲಿ ಸಾಕಿರುವ ಬೆಕ್ಕು ನಾಯಿ ಪಾರಿವಾಳ ಮೊಲಗಳು ಯಾವತ್ತೂ ಅಪಾಯಿಂಟ್ಮೆಂಟ್ ಕೊಡಲ್ಲ ಅಂತಾನೂ ಅನ್ನಿಸುತ್ತಾ ಹೋಯಿತು.
ಪ್ರಾಣಿಗಳ ಹಾಗೆ ಪ್ರೀತಿಸುವ ಹುಡುಗ ಸಿಕ್ಕರೆ ಮಾತ್ರ ಪ್ರೀತಿಸುತ್ತೇನೆ ಅಂದುಕೊಂಡಳು. ಅವನು ಇವಳಲ್ಲಿ ಆದ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲಾಗದೆ ವಿಹ್ವಲನಾದ! ಇವರಿಬ್ಬರಲ್ಲಿ ಯಾರದು ತಪ್ಪು ಯಾರದು ಸರಿ ಅಂತ ವಿಶ್ಶ್ಲೇಷಿಸಬೇಡ , ಮತ್ತೆ ಕಾರಣಗಳಲ್ಲಿ ಕಳೆದು ಹೋಗಬೇಡ..  just try to see it from the above..

‍ಲೇಖಕರು avadhi

December 13, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

 1. keshaa

  ಇಷ್ಟವಾಯ್ತು. ನೀವು ತುಂಬ ಚೆನ್ನಾಗಿ ಬರೀತೀರಿ.

  ಪ್ರತಿಕ್ರಿಯೆ
 2. Nalini

  Seeing things from above…..without judgment, without taking sides, without being too involved…..What a great concept! Nice article!

  ಪ್ರತಿಕ್ರಿಯೆ
 3. Sunil

  Hiiiiii enri heega bariyodu? ishtu chennagi ivatte baredre naale hege baritira? hmmm…i know innoo chennagi baritira..:)
  Sunil.

  ಪ್ರತಿಕ್ರಿಯೆ
 4. Sunil

  Mruganayanee,
  Modalane paragraph le odugarige huchchu hidisiddiya.Nange annisodu ee ninna katheya shakti kendra alle ide(shakti kendra annodondu irutta??)….”Premi,Kavi,Bhavi…intha hanepattigalalli..baduku usirukattisutade..” idu nange tumba tumba ishtavaaytu…..katheyanno,”ghatanegala motta”vannoo odidaaga….oduga enannoo nirikshisidante adanne katheyalli kandante bhaasavaagabekante..aaga adaramelina preeti adamyavaagi hechchutte..” anta ello kelida nenapu…..hey adakkinta hechchinade ide ninna katheli.
  Abhinandanegalu,
  Baritaa iru….
  Sunil.

  ಪ್ರತಿಕ್ರಿಯೆ
 5. Sharan

  Nice one..Tried my best to see it from the
  above but again lost in the letter.
  Keep up the good writing…

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ SunilCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: