ವಿಲಾಸಿ ಸೈನಿಕರು

ಹೈವೇ 7                                                                     ವಿ ಎಂ ಮಂಜುನಾಥ್ 

———-

ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭ ಎಂಬ ಆತ್ಮಕಥನದ ಕೆಲವು ವಿಶಿಷ್ಟ ಭಾಗಗಳು 

 

* * *

ಗಡಿಭದ್ರತಾ ಪಡೆ(ಬಿಎಸ್ಎಫ್), ಇಂಡಿಯನ್ ಏರ್ಫೋಸರ್್ (ಐಎಎಫ್), ಪಿಡಿಎಂಎಸ್ ಇವು ಮೂರು ಒಂದಕ್ಕೊಂದು ಅಣ್ಣತಮ್ಮಂದಿರಂತೆ ಅಂಟಿಕೊಂಡಿದ್ದರೂ ಈ ಸೈನಿಕರು, ರಿಕ್ರೂಟ್ಗಳು ಹಾದರವನ್ನು ಕೂಡ ಪೈಪೋಟಿಯಲ್ಲಿ ನಡೆಸುತ್ತಿದ್ದರು. ಈ ಎಲ್ಲ ಕ್ಯಾಂಪುಗಳ ಟ್ರೈನಿಗಳು ಬೇರೆಬೇರೆ ರಾಜ್ಯಗಳ, ಜಿಲ್ಲೆಗಳಿಂದ ಬಂದಿರುತ್ತಿದ್ದರು. ಇವರು ಡ್ಯೂಟಿಯ ವೇಳೆಯಲ್ಲೇ ಈ ಗೇರುತೋಪಿನ ಕಡೆಗೆ ಬರುತ್ತಿದ್ದರು. ಈ ಕ್ಯಾಂಪುಗಳು ವೆಂಕಟಾಲ ಸೇರಿದಂತೆ ಸುತ್ತಮುತ್ತಲಿನ ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ಕೆಂಚೇನಹಳ್ಳಿ ಗ್ರಾಮಗಳ ಬಡಹುಡುಗಿಯರು, ಹೆಣ್ಣುಗಳನ್ನು ಸುಲಿದು ಹಾಕುವುದರ ಜೊತೆಗೆ ಅಸಂಖ್ಯಾತ ಬಡಬಗ್ಗರನ್ನು ಸಾಕಿವೆ. ಬಡಹೆಂಗಸರು ಅಕ್ಕಿ, ಗೋಧಿ ಮಾಟಲು ಈ ಕ್ಯಾಂಪುಗಳಿಗೆ ಹೋಗುತ್ತಿದ್ದರು.

ಆ ಹೊತ್ತಿನಲ್ಲಿ ಸೈನಿಕರು ಚಪಾತಿ, ಅಕ್ಕಿ, ಗೋಧಿ, ಬಟ್ಟೆ ಕೊಟ್ಟು ಪುಸಲಾಯಿಸಿ ತಮ್ಮ ಬ್ಯಾರೆಕ್ಸ್ಗಳಿಗೆ ಕರೆದೊಯ್ಯುತ್ತಿದ್ದರು. ಚಳಿಗಾಲದಲ್ಲಿ ಬೆಚ್ಚಗಿಡಲು ಪಾಚಿ ಹಸಿರುಬಣ್ಣದ ಸ್ವೆಟರ್ಗಳು, ಕಂಬಳಿಗಳು, ಕಾಕಿ ಪ್ಯಾಂಟ್ಗಳು, ಚೆಡ್ಡಿಗಳು, ಬಿಳಿಬಣ್ಣದ ಬನಿಯನ್ಗಳು, ಕ್ಯಾನ್ವಾಸ್ ಬೂಟುಗಳನ್ನು ಕೊಡುತ್ತಿದ್ದರು. ಸಣ್ಣಮಕ್ಕಳಿಗೆ ತಾವು ಧರಿಸುವ ಹ್ಯಾಟುಗಳನ್ನೂ ಕೊಡುತ್ತಿದ್ದರು. ಪಾಲನಹಳ್ಳಿಯಿಂದ ದನ ಕಾಯಲು ಬರುತ್ತಿದ್ದ ಹುಡುಗರು ಹ್ಯಾಟುಗಳನ್ನು ಹಾಕಿಕೊಂಡೇ ದಿನ್ನೆಯಲ್ಲಿ ನಡೆದಾಡುತ್ತಿದ್ದರು. ವಯಸ್ಸಾದ ವೃದ್ಧರು ಸಂಪೂರ್ಣವಾಗಿ ಮಿಲಿಟರಿ ಉಡುಪುಗಳಲ್ಲೇ ದಿನ್ನೆಯಲ್ಲಿ ದನಕರು, ಮೇಕೆಗಳನ್ನು ಮೇಯಿಸುತ್ತಿದ್ದರು.

ನಾವು ಅಪ್ಪನ ಪೋಲಿಸ್ ಕ್ಯಾಂಪಿನಿಂದ ಎಮ್ಮೆ ಹೊಡೆದುಕೊಂಡು ಗಡಿಭದ್ರತಾಪಡೆ ಕ್ಯಾಂಪಿನ ಮುಳ್ಳುಬೇಲಿಯ ಕಡೆ ಯಾವಾಗಲಾದರೂ ಹೋದಾಗ ಸೈನಿಕರು ನಮ್ಮನ್ನು ಕರೆದು ಚೀಲಗಟ್ಟಲೆ ಎಣ್ಣೆ ಸವರದ ಸುಕ್ಕ ರೊಟ್ಟಿಯನ್ನು ಕೊಡುತ್ತಿದ್ದರು. ಈ ಗೇರುಕಾಡು ಬಹಳ ದೊಡ್ಡದಾದ್ದರಿಂದ ಸುತ್ತಮುತ್ತಲಿನ ಗ್ರಾಮದವರೆಲ್ಲರೂ ದನಗಳನ್ನು, ಮೇಕೆಗಳನ್ನು ಮೇಯಿಸಲು ಈ ಗೇರುಕಾಡಿಗೆ ಬರುತ್ತಿದ್ದರು. ಇಷ್ಟೇಅಲ್ಲದೆ ಆಂಧ್ರಪ್ರದೇಶದಿಂದ ವಲಸೆ ಬಂದು ಭಾರತೀನಗರ, ದ್ವಾರಕಾನಗರಗಳಲ್ಲಿ ವಾಸ್ತವ್ಯ ಹೂಡಿರುವ ಘಾಟಿ ಹೆಂಗಸರು ಕರಿಎಮ್ಮೆಗಳನ್ನು ಹೊಡೆದುಕೊಂಡು ಇದೇ ಗೇರುತೋಪಿಗೆ ಬರುತ್ತಿದ್ದರು. ಮುದುಕಿಯರು ಜಾಕೀಟು ತೊಡುತ್ತಿರಲಿಲ್ಲವಾದ್ದರಿಂದ ಅವರ ಸ್ತನಗಳು ಕಿಬ್ಬೊಟ್ಟೆಗಳಿಗೆ ತಾಗುತ್ತಿತ್ತು. ಆ ಎಮ್ಮೆಗಳಂತೆಯೇ ಅವರೂ ಕೂಡ ಕಪ್ಪಗಿರುತ್ತಿದ್ದರು. ಆಂಧ್ರದ ಎಮ್ಮೆಗಳ ಕೊಂಬುಗಳು ನೆಲಕ್ಕೆ ತಾಗುವಂತಿರುತ್ತಿದ್ದವು. ಉದ್ದಗಿನ ಹುಲ್ಲುಹೊರೆಗಳನ್ನು ತಲೆ ಮೇಲೆ ಇಟ್ಟುಕೊಂಡು ಹೋಗುತ್ತಿದ್ದರೆ, ಸೈನಿಕರು ಅವರನ್ನೇ ಹಿಂಬಾಲಿಸುತ್ತಿದ್ದರು.

 
ಕೆಲವು ಹೆಂಗಸರು ಸೈಕಲ್ ಮೇಲೆ ಬಂದು ಹುಲ್ಲು ಕೊಯ್ದುಕೊಂಡು ಹೋಗುತ್ತಿದ್ದರು. ಗಡಿಭದ್ರತಾ ಪಡೆಯ ಸೈನಿಕರು ಯೂನಿಫಾರಂ ಮೇಲೆ ಸೈಕಲ್ ತುಳಿದುಕೊಂಡು ಈ ಗೇರುತೋಪಿನ ಕಡೆ ಹೆಂಗಸರನ್ನು ಹುಡುಕಿಕೊಂಡು ಬರುತ್ತಿದ್ದರು. ಮಿಲಿಟರಿ ಕ್ಯಾಂಟೀನ್ನಿಂದ ತಮಗೆ ಸಿಗುತ್ತಿದ್ದ ಮದ್ಯವನ್ನೂ ತರುತ್ತಿದ್ದರು. ಅಥವಾ ಹೈವೇ ಪಕ್ಕದ ಜೀರೋ ರೋಡಿನ ಬಾರ್ನಲ್ಲಿ ಮದ್ಯ ಕೊಂಡುಕೊಂಡಿರುತ್ತಿದ್ದರು. ಈ ಗೇರುತೋಪಿನ ಎದುರಿಗೆ ಇದರಷ್ಟೇ ವಿಶಾಲವಾದ ನೀಲಗಿರಿತೋಪು ಕೂಡ ಇದ್ದದ್ದರಿಂದ ಇಲ್ಲಿ ಏನೇ ನಡೆದರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಈ ಎರಡೂ ತೋಪುಗಳ ನಡುವೆ ಜಲ್ಲಿಕಲ್ಲುಗಳ ರಸ್ತೆ ಇತ್ತು. ಜಲ್ಲಿಕಲ್ಲುಗಳು ದಪ್ಪಗಿರುತ್ತಿದ್ದರಿಂದ ಅಪ್ಪ ಸೈಕಲ್ಲನ್ನು ಬಹಳ ಹುಷಾರಾಗಿ ಒಂದೇ ಬದಿಯಲ್ಲಿ ತುಳಿದುಕೊಂಡು ಹೋಗುತ್ತಿದ್ದರು. ನಾನು ಹಿಂದೆ ಕುಳಿತು ಗೇರುತೋಪು-ನೀಲಗಿರಿ ತೋಪುಗಳ ಪೊದೆಗಳನ್ನು ದಿಟ್ಟಿಸುತ್ತಿದ್ದೆ. ಅದನ್ನೆಲ್ಲ ನಾನು ನೋಡಬಾರದಂತೆ ಏನೋ ಅಪ್ಪ ನನಗೆ ಗಿಡ, ಮರ, ಪ್ರಾಣಿಪಕ್ಷಿ, ಹಣ್ಣುಗಳ ಕುರಿತೋ ಅಥವಾ ಪುರಾಣದ ಕತೆಗಳನ್ನು ಹೇಳುತ್ತಾ ಕರೆದೊಯ್ಯುತ್ತಿದ್ದರು. ಕೆಲವುಸಲ ನಾನೊಬ್ಬನೇ ಇವೆರಡೂ ತೋಪುಗಳ ಜಲ್ಲಿಕಲ್ಲಿನ ಹಾದಿಯಲ್ಲಿ ನಡೆದುಕೊಂಡು ಬರಬೇಕಾಗುತ್ತಿತ್ತು. ಸ್ಕೂಲು ಇಲ್ಲದಾಗ ಗೇರುಹಣ್ಣು, ಮುಳ್ಳಣ್ಣು, ಸಪೋಟ, ಸೀತಾಫಲ ತಿನ್ನಲು ಕ್ಯಾಂಪ್ಗೆ ಹೋಗುತ್ತಿದ್ದೆ. ಆಗ ನನಗೆ ತುಂಬಾ ಭಯವಾಗುತ್ತಿತ್ತು. ಕಣ್ಣುಗಳ ಬದಿಯಲ್ಲಿ ಈ ತೋಪುಗಳನ್ನು ನೋಡದೆ ಕಣ್ಮುಚ್ಚಿಕೊಂಡು ಹೈವೇವರೆಗೂ ಓಡಿಬಿಡುತ್ತಿದ್ದೆ.

ನಂತರ ನಿರಾಳವಾಗಿ ಉಸಿರಾಡುತ್ತಾ ಗೇರುತೋಪಿನ ಕಡೆ ತಿರುಗಿ ನೋಡುತ್ತಾ ಮುಂದೆ ಸಾಗುತ್ತಿದ್ದೆ. ಈ ಆತ್ಮಹತ್ಯೆ ಮಾಡಿಕೊಂಡವರ ಹೆಣಗಳು ಗೇರುಮರಗಳಲ್ಲಿ ವಾರಗಟ್ಟಲೆ ನೇತಾಡಿಕೊಂಡಿರುತ್ತಿದ್ದವು. ಗೇರುತೋಪಿನ ತೀರಾ ಒಳಕ್ಕೆ ಯಾರೂ ಹೋಗುತ್ತಿರಲಿಲ್ಲವಾದ್ದರಿಂದ ಆ ಹೆಣಗಳು ಕೊಳೆತು ನಾರಲುತೊಡಗಿದಾಗ ಗೊತ್ತಾಗುತ್ತಿತ್ತು. ಈ ತೋಪುಗಳಲ್ಲಿ ಅತ್ಯಾಚಾರ, ಕೊಲೆಸುಲಿಗೆಗಳು, ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿದ್ದವು. ಬರುಬರುತ್ತ ಅತ್ಯಾಚಾರಗಳು ಹಾದರಕ್ಕೆ ತಿರುಗಿಕೊಂಡು ವೃತ್ತಿಯಾಗಿ ಹೋಯಿತು.

ಇದನ್ನು ಅರಿತ ಕೆಲವು ಪಡ್ಡೆ ಹೆಂಗಸರು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಗೇರುಕಾಡಿನ ಮೊದಲ ಮರದಿಂದ ಹಿಡಿದು ಕೊನೆಯ ಮರದವರೆಗೂ ಬರೀ ಹೆಣ್ಣುಗಳೇ ನಿಂತಿರುವುದನ್ನು ನೋಡುತ್ತಿದ್ದೆ. ನನಗೆ ಆಗ ಏನೂಂತ ಗೊತ್ತಾಗುತ್ತಿರಲಿಲ್ಲ. ಕೆಲವು ಸಲ ಸೈಕಲ್ಗಳು ಮಾತ್ರ ಪೊದೆಗಳಲ್ಲಿ ಬಿದ್ದಿರುತ್ತಿದ್ದವು. ಆ ಸೈಕಲ್ಲುಗಳಲ್ಲಿ ಕ್ಯಾರಿಯರ್ಗಳಲ್ಲಿ ಸೈಡ್ ಡಬ್ಬಗಳಲ್ಲಿರುತ್ತಿದ್ದದ್ದರಿಂದ ಅದು ಸೈನಿಕರದ್ದೇ ಎಂದು ತಿಳಿಯುತ್ತಿತ್ತು. ಹ್ಯಾಂಡಲ್ಗೆ ಪಾಚಿಬಣ್ಣದ ಸೈನಿಕರು ಧರಿಸುವ ಸ್ವೆಟರ್ಗಳು ಇಳಿಬಿದ್ದಿರುತ್ತಿದ್ದವು. ದನ ಕಾಯುವ ಅನೇಕ ಹುಡುಗಹುಡುಗಿಯರನ್ನು ಈ ಸೈನಿಕರು ಕರೆಯುತ್ತಿದ್ದರು. ಬರದಿದ್ದರೆ ಬಲವಂತದಿಂದ ಗೇರುಮರಗಳ ಹಿಂದಿನ ಪೊದೆಗಳಿಗೆ ಎಳೆದೊಯ್ಯುತ್ತಿದ್ದರು. ಮೈಮೇಲಿನ ಉಡುಪುಗಳನ್ನೆಲ್ಲ ಕಳಚಿ ಬೆತ್ತಲಾಗಿ ಸೈನಿಕರು ಗೇರುತೋಪಿನಲ್ಲಿ ಓಡಾಡುತ್ತಿದ್ದರು.

ಇದೆಲ್ಲ ನನ್ನ ಅಪ್ಪನಿಗೆ ಗೊತ್ತಿದ್ದರಿಂದಲೋ ಏನೋ ಅಮ್ಮ ಮತ್ತು ನನ್ನ ಅಕ್ಕನನ್ನು ಕ್ಯಾಂಪ್ಗೆ ಒಬ್ಬೊಬ್ಬರನ್ನೇ ಕರೆಯುತ್ತಿರಲಿಲ್ಲ. ಇದು ಕಡೆಕಡೆಗೆ ಈ ರಸ್ತೆಯಲ್ಲಿ ಯಾರೇ ಹೆಂಗಸರು ಬರಲಿ, ಸೈನಿಕರು ಅವರನ್ನು ಮಾತನಾಡಿಸಿಕೊಂಡು ಕಷ್ಟಸುಖ ಕೇಳುವಂತೆ ಗೇರುಮರದ ಕೆಳಗೆ ಗಂಟೆಗಟ್ಟಲೆ ಕುಳಿತಿರುತ್ತಿದ್ದರು. ಸೈಕಲ್ಗಳಲ್ಲಿ ಅನೈತಿಕ ದಂಧೆಯ ಹೆಂಗಸರನ್ನು ಕುಳ್ಳಿರಿಸಿಕೊಂಡು ಗೇರುತೋಪಿನ ಹುಲ್ಲು ಪೊದೆಗಳಲ್ಲಿ ಹಿಂದಿ ಸಿನಿಮಾ ಹಾಡುಗಳನ್ನು ಹಾಡಿಕೊಂಡು ಒಳನುಗ್ಗುತ್ತಿದ್ದರು.

 

 

‍ಲೇಖಕರು avadhi

June 16, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. Ramesh Malakannavar

  Up course it shame on our indian culture, every body know all these happening all camps, from normal persons to the president of india, but nobody is bothering about this, one solution is that ” The press” & “Pen”

  ಪ್ರತಿಕ್ರಿಯೆ
 2. bharath

  really shocking….!but I also heard about such
  thing when I was a child. sir,tamma baravanige thumba chennagide.pustaka’kkagi kaayuvenu….

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ bharathCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: