ವಿವೇಕ ರೈ ಬಣ್ಣಿಸುತ್ತಾರೆ: ಅವರೊಬ್ಬ ಅಸಹಜ ಅವಧೂತ

ಅಸಹಜ ಅವಧೂತ ಡಾ. ಶ್ರೀನಿವಾಸ ಹಾವನೂರ

-ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ

1980 ಮಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದಾಗ, ಅದರ ಮೊದಲ ಕುಲಪತಿಯಾಗಿ ಬಂದವರು ಪ್ರಸಿದ್ದ ಇತಿಹಾಸ ತಜ್ಞರಾದ  ಪ್ರೊ. ಬಿ  ಷೇಖ್ ಅಲಿ ಅವರು. ಆಗ ಅಸ್ತಿತ್ವದಲ್ಲಿ ಇದ್ಧ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ  ಏಳು ವಿಭಾಗಗಳಿದ್ದು,  ಅವುಗಳಲ್ಲಿ ಯಾವುದರಲ್ಲೂ  ಪ್ರಾದ್ಯಾಪಕರು ಇರಲಿಲ್ಲ. ಅವುಗಳಲ್ಲಿ ಕನ್ನಡ ವಿಭಾಗ ಕೂಡ ಒಂದು.  ಹೊಸ ವಿಶ್ವವಿದ್ಯಾಲಯದ ಆರಂಭದ ಹಂತದಲ್ಲಿ ಕರಾರಿನ ರೂಪದಲ್ಲಿ ತಜ್ಞರೊಬ್ಬರನ್ನು  ಪ್ರಾದ್ಯಾಪಕರಾಗಿ ನಿರ್ದಿಷ್ಟ ಅವಧಿಗೆ ಆಹ್ವಾನಿಸುವ ಅವಕಾಶ ಇರುತ್ತದೆ. ಕುಲಪತಿಗಳಾದ ಪ್ರೊ, ಬಿ. ಷೇಖ್ ಅಲಿ ಅವರು ಒಂದು ದಿನ ಕನ್ನಡ ವಿಭಾಗದಲ್ಲಿದ್ದ ನನ್ನನ್ನು ಈ ಕುರಿತು ವಿಚಾರಿಸಿದರು.  ಯಾವುದಾದರೂ ಒಬ್ಬ ಹಿರಿಯ ವಿದ್ವಾಂಸರನ್ನು ಆಹ್ವಾನಿಸುವ ಪ್ರಸ್ತಾಪವನ್ನು ತಿಳಿಸಿದರು. ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿರುವವರು ಯಾರೂ ಕೊಣಾಜೆಗೆ ಬರಲು ಸಾಧ್ಯವಿರಲಿಲ್ಲ ಹಾಗಾಗಿ ನನ್ನ ಗುರುಗಳಾದ ಡಾ. ಹಾ. ಮಾ. ನಾಯಕ ಅವರಲ್ಲಿ ಈ ವಿಷಯ ಪ್ರಸ್ತಾಪಿಸಿದೆ .

ಅವರು ಸಾಕಷ್ಟು ಯೋಚಿಸಿ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್  ರಿಸರ್ಚ್ ಗ್ರಂಥಾಲಯದಲ್ಲಿ  ಡಾ ಶ್ರೀನಿವಾಸ ಹಾವನೂರ ಇದ್ದಾರೆ  ಹೊಸಗನ್ನಡದ ಅರುಣೋದಯದ  ಬಗ್ಗೆ ಡಾಕ್ಟರೇಟ್ ಮಾಡಿದ್ದಾರೆ.  ಒಳ್ಳೆಯ ಸಂಶೋಧಕರು ಹಾಗೂ ಕೆಲಸಗಾರರು ಎಂದು ತಿಳಿಸಿ, ಅವರನ್ನು ಸಂಪರ್ಕಿಸಿ, ಅವರ ವ್ಯಕ್ತಿ ವಿವರವನ್ನು ನನಗೆ ತಲುಪುವಂತೆ ಮಾಡಿದರು.  ಅದರಲ್ಲಿ  ಇವರ ಎಂ. ಎ. ಕನ್ನಡ ಮತ್ತು ಪಿ ಎಚ್ ಡಿಯ ಅರ್ಹತೆಗಳೊಂದಿಗೆ ಗ್ರಂಥಾಲಯದ  ಅಪಾರ ಅನುಭವ. ಅಧ್ಯಯನಗಳ ಮಾಹಿತಿ  ಕೂಡ ಇತ್ತು. ಒಂದು ದಿನ ಹಾವನೂರರನ್ನು ಸಂಪರ್ಕಿಸಿ ಮಂಗಳೂರಿಗೆ ಬರಲು ಹೇಳಿದೆ.  ಕುಳ್ಳಗಿನ ದೇಹದ, ಬೋಳು ತಲೆಯ, ನೇರ ದೃಷ್ಟಿಯ, ಸಂಕ್ಷಿಪ್ತ ಸ್ವಷ್ಟ ಮಾತಿನ  ಹಾವನೂರರ ಭೇಟಿ  ಆಯಿತು  ಅವರನ್ನು ಕರೆದು ಕೊಂಡು ಕುಲಪತಿಯವರ  ಭೇಟಿ ಮಾಡಿಸಿದೆ . ಮಾತುಕತೆ ನೆಡೆಯಿತು,  ಹಾವನೂರರು  ಬರಲು ಒಪ್ಪಿಕೊಂಡರು.

ಹೀಗೆ 1982 ರಲ್ಲಿ ಡಾ ಶ್ರೀನಿವಾಸ ಹಾವನೂರರು  ಮಂಗಳೂರು ವಿಶ್ವವಿದ್ಯಾಯಲದ   ಕನ್ನಡ ವಿಭಾಗದಲ್ಲಿ  ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ  ಜವಾಬ್ದಾರಿ  ವಹಿಸಿಕೊಂಡರು. ಆ ಸಂದರ್ಭದಲ್ಲಿ  ಕೆಲವು  ಅಪಸ್ವರದ  ಮಾತುಗಳು ಕೇಳಿ ಬಂದವು . ನಾನು ಅವರನ್ನು  ಉದ್ದೇಶಪೂರ್ವಕವಾಗಿ  ಕರೆದುಕೊಂಡು  ಬಂದಿದ್ದೇನೆ  ಎಂದೂ  ಹಾವನೂರ ಅವರಿಗೆ ಕನ್ನಡದ  ಪ್ರಾಧ್ಯಾಪಕರಾಗುವ ಅರ್ಹತೆ  ಇಲ್ಲ ಎಂದು ಅವರಿಗೆ  ಬೋಧನಾನುಭವ ಇಲ್ಲ ಎಂದೂ ಇತ್ಯಾದಿ  ಇತ್ಯಾದಿ. ಹಾವನೂರರು ಇವು ಯಾವುದನ್ನು ಲೆಕ್ಕಿಸದೆ 1982-84 ರವರೆಗೆ ಎರಡು ವರ್ಷಗಳ ಕಾಲ ಕನ್ನಡ ವಿಭಾಗವನ್ನು ಕಟ್ಟಿದರು ಮತ್ತು ಮುನ್ನಡೆಸಿದರು. ಅವರ ಮುಖ್ಯ ಆಸಕ್ತಿಗಳಲ್ಲಿ  ಒಂದು ಆಕರ ಸಾಮಗ್ರಿಗಳ ಸಂಗ್ರಹ . ಇದಕ್ಕಾಗಿ  ದಕ್ಷಿಣ ಕನ್ನಡ ಜೆಲ್ಲೆಯ  ಮೂಲೆಮೂಲೆಗಳಿಂದ  ಹಸ್ತಪ್ರತಿಗಳು, ಹಳೆ ಪುಸ್ತಕಗಳು,  ಹಳೆಯ ಪ್ರತಿಗಳು ,  ಕಡತಗಳು,  ವಾರ್ಷಿಕ ಮತ್ತು ಕಾಲಿಕ ಸಂಚಿಕೆಗಳು, ಸಂಪುಟಗಳು ಹೀಗೆ  ಅಪೂರ್ವ  ಪಳೆಯುಳಿಕೆಗಳ  ಸಾಮಗ್ರಿಗಳ ಭಂಡಾರವೇ ಕನ್ನಡ ವಿಭಾಗಕ್ಕೆ  ಹರಿದು ಬಂತು. ವಿಭಾಗದಲ್ಲಿ ಕನ್ನಡ  ವಾಜ್ಞಯ  ಮಾಹಿತಿ  ಕೇಂದ್ರವೊಂದನ್ನು ಆರಂಭಿಸಿದರು ಕನ್ನಡ ಸಾಹಿತ್ಯಕ್ಕೆ  ಸಂಬಂಧಿಸಿದಂತೆ ಪ್ರಾದೇಶಿಕ ಸಾಹಿತ್ಯ  ಸಂಸ್ಕೃತಿಗಳ ಸಾಮಗ್ರಿಗಳನ್ನು ಮೂಲೆ ಮೂಲೆಗಳಿಂದ ಹೊತ್ತು ತಂದರು.  ಹಾವನೂರರು ತಂದು ರಾಶಿ ಹಾಕಿದ ಸ್ವದೇಶಾಭಿಮಾನಿ, ನವಯುಗ, ರಾಷ್ಟ್ರಮತ , ರಾಷ್ಟ್ರಬಂಧು, ಕಂಠೀರವ ಇಂತಹ ಅನೇಕ ಹಳೆಯ ಪತ್ರಿಕೆಗಳ  ಅಮೂಲ್ಯ ಸಾಮಗ್ರಿ ಮುಂದೆ ಅನೇಕ ಸಂಶೋಧಕರ ಸಂಶೋಧೆನೆಗಳಿಗೆ, ಗ್ರಂಥ  ಪ್ರಕಟಣೆಗಳಿಗೆ ನೆರವಾಯಿತು.  ವೆಂಕಟರಾಯ ಪುಣಿಂಚತ್ತಾಯರ ಸಂಗ್ರಹದ ತುಳು ಭಾಗವತೋ ಎಂಬ ತುಳು ಹಸ್ತ ಪ್ರತಿಯನ್ನು ಗುರುತಿಸಿ , ಅದರ ಪ್ರಕಟಣೆಗಾಗಿ ಕೇಂದ್ರ ಸರ್ಕಾರದ ಹಸ್ತ ಪ್ರತಿ ಸಂಪನ್ಮೂಲ ಇಲಾಖೆಯಿಂದ ಧನ ಸಹಾಯ ಪಡೆದು,  ಪ್ರಕಟಣೆಯ ಕಾರ್ಯವನ್ನು  ಆರಂಭಿಸಿದರು. ತಮ್ಮಲ್ಲಿದ್ದ ಕಡಲಾಚೆಯ ಕನ್ನಡ ಸಂಪತ್ತು  ಭಂಡಾರದ  ಪ್ರತಿಗಳನ್ನು  ಮಾಡಿಸಿ  ಕನ್ನಡ ವಿಭಾಗವನ್ನು ಶ್ರೀಮಂತಗೊಳಿಸಿದರು .

ಕನ್ನಡ ಎಂ.ಎ. ಪಾಠಪಟ್ಟಿಯಲ್ಲಿ  ಡಾ. ಹಾವನೂರ ಅವರು ಸೇರ್ಪಡೆಗೊಳಿಸಿದ ಕನ್ನಡ –ಸಂಸ್ಕೃತ ಸಂಬಂಧ ಎನ್ನುವ ಪತ್ರಿಕೆ, ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ವಾದವಿವಾದಗಳಿಗೆ  ಎಡೆಕೊಟ್ಟಿದ್ದು  ವಿಷಾದದ ಸಂಗತಿ. ಹಾವನೂರರು ಸಂಸ್ಕೃತದ  ಪರವಾಗಿ, ಕನ್ನಡ ವಿರೋಧಿಯಾಗಿ ಈ ಪತ್ರಿಕೆಯನ್ನು  ಸೇರಿಸಿದ್ದಾರೆ  ಎನ್ನುವ ತಪ್ಪು ಕಲ್ಪನೆ  ಮತ್ತು ಆ ಕುರಿತು ನಡೆದ  ಪತ್ರಿಕೆಗಳಲ್ಲಿನ  ವಾದ-ವಿವಾದ  ಹಾವನೂರ ಅವರ  ಮನಸ್ಸಿಗೆ ನೋವುಂಟು ಮಾಡಿತು. ಆದರೆ  ಅವೆಲ್ಲವನ್ನು  ನುಂಗಿಕೊಂಡು ಸ್ಥಿತಪ್ರಜ್ಞರಂತೆ ಕನ್ನಡ ಕೆಲಸವನ್ನು  ಮಾಡಿದರು. ವಿಭಾಗದಲ್ಲಿರುವಾಗಲೇ ನಾ ದಾಮೋದರಶೆಟ್ಟಿ  ಮತ್ತು  ತಾಳ್ತಜೆ  ವಸಂತ ಕುಮಾರ ಅವರಿಗೆ  ಪಿ ಎಚ್ ಡಿಗೆ ಮಾರ್ಗದರ್ಶನವಿತ್ತು,  ಎರಡು  ಒಳ್ಳೆಯ  ಪಿ ಎಚ್ ಡಿ ಪ್ರಬಂಧಗಳ ನಿರ್ಮಾಣಕ್ಕೆ ಕಾರಣಕರ್ತರಾದರು.

ಡಾ ಹಾವನೂರರು ಕನ್ನಡ ವಿಭಾಗದಲ್ಲಿ ಇದ್ದಾಗ  ನಡೆಸಿದ ಒಂದು ಪ್ರಯೋಗ ಬಹಳ ನವೀನವಾದದ್ದು  ಮತ್ತು ತುಂಟತನದ್ದು.  ‘ಬದುಕಿನ ಸಣ್ಣ ಸುಖಗಳು’  [life’s little pleasures] ಎಲ್ಲರಿಗೂ  ಬೇಕಾಗುತ್ತದೆ. ಆದರೆ  ಅದನ್ನು ಯಾರು  ಎಲ್ಲೂ  ಹೇಳಿಕೊಳ್ಳುವುದಿಲ್ಲ, ಅದಕ್ಕಾಗಿ  ವಿಭಾಗದ ಎಲ್ಲ ಅಧ್ಯಾಪಕರು  ವಿದ್ಯಾರ್ಥಿಗಳಿಗೆ ಒಂದೊಂದು  ಹಾಳೆ ಕೊಟ್ಟು, ಹೆಸರು  ಬರೆಯದೆ ತಮ್ಮ ಖುಷಿಯ ಐದು ಸಣ್ಣ ಸುಖಗಳ ಬಗ್ಗೆ ಬರೆಯಲು  ಹೇಳಿದರು,   ಅದನ್ನು ಒಟ್ಟು ಸೇರಿಸಿ  ಸುಧಾ ಪತ್ರಿಕೆಗೆ  ಕಳುಹಿಸಿದರು . ಅದರಲ್ಲಿ ಪ್ರಕಟವಾದ ತುಣುಕುಗಳಲ್ಲಿ  ಚಿಕ್ಕಮಕ್ಕಳ  ತಲೆ ಸವರುವುದು  ಮತ್ತು ಚಿಕ್ಕನ್ ಲಿವರ್ ತಿನ್ನುವುದು ಕೂಡ ಇತ್ತು. ಅದು ನಾನು ಬರೆದದ್ದು ಎನ್ನುವುದು  ಯಾರಿಗೂ ಗೊತ್ತಿರಲಿಲ್ಲ. ಹೀಗೆ ಸಣ್ಣ ಸುಖಗಳ ಜೊತೆಗೆ ದುಡಿಮೆಯ  ಸುಖವನ್ನು ಅನುಭವಿಸುವ  ಮನೋಧರ್ಮವನ್ನು  ತೆರೆದು ತೋರಿಸಿದವರು ಹಾವನೂರರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ  ತಮ್ಮ ಕರಾರಿನ ಅವಧಿ ಮುಗಿದ ಬಳಿಕ 1984ರಲ್ಲಿ  ಅನಿವಾರ್ಯವಾಗಿ ಆ ಜವಾಬ್ಧಾರಿಯಿಂದ ಬಿಡುಗಡೆ ಹೊಂದಿದ ಹಾವನೂರು  ಅವರನ್ನು ಅವರ ಪ್ರೀತಿಯ ಮುಂಬೈ ಕೈ ಬೀಸಿ ಕರೆಯಿತು. ಆದರೆ  ಈ ಬಾರಿ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರ ಜವಾಬ್ದಾರಿ. ಅಲ್ಲೂ ತಮ್ಮ ನಿವೃತ್ತಿಯವರೆಗೆ ಬಹುಮುಖಿಯಾಗಿ ಕನ್ನಡದ ಕೆಲಸಗಳನ್ನು ಮಾಡಿದರು  1984 ರಲ್ಲಿ ಮುಂಬೈನಲ್ಲಿ  ಅವರು  ನಡೆಸಿದ ಪು.ತಿ. ನರಸಿಂಹಾಚಾರ್ ವಿಚಾರ ಸಂಕಿರಣಕ್ಕೆ  ನನ್ನನ್ನು ವಿಮಾನದಲ್ಲಿ  ಕರೆಸಿಕೊಂಡದ್ದು ಒಂದು ಅಪೂರ್ವ ಘಟನೆ.

ಡಾ ಹಾವನೂರ ಅವರು ಸದಾ ಕಾಯಕ ಜೀವಿ.  ಇರುವೆಯಂತೆ ಸದಾ ಚಲಿಸುತ್ತಾ , ಕೆಲಸಮಾಡುತ್ತಾ , ಕೂಡಿಹಾಕುತ್ತಾ, ಬೇರೆಯವರಿಗಾಗಿ ದುಡಿಯುತ್ತಾ ಸಂತೃಪ್ತಿಪಡುವ  ಸಂತ. ‘ಚಂಚು ಪ್ರವೇಶ’ ಎನ್ನುವುದು ಅವರಿಗೆ ಪ್ರಿಯವಾದ ಪದ . ಯಾರಿಂದಲಾದರೂ ಸಾಮಗ್ರಿ. ನೆರವು ಬೇಕಾಗಿದ್ದರೆ, ಮೊದಲು ತಮ್ಮಿಂದ ಆಗುವಷ್ಟು ಸಾಮಗ್ರಿ  ಹಾಗೂ ನೆರವನ್ನು ಕೊಟ್ಟು ಬಳಿಕ ಅವರಿಂದ ಪಡಯಬೇಕಾದದ್ದನ್ನು ಪಡೆಯುತ್ತಿದ್ದದು ಹಾವನೂರ ಅವರ ಕಾರ್ಯಶೈಲಿ, ಜಾಣತನ . ಕನ್ನಡದ  ಅಪೂರ್ವ ಸಂಪತ್ತುಳ್ಳ ಸ್ವಿಟ್ಜರ್ಲೆಂಡಿನ ಬಾಸೆಲ್ ಗೆ ಸಾಕಷ್ಟು ಬಾರಿ ಹೋಗಿ ಕನ್ನಡ, ತುಳು ಸಾಮಗ್ರಿಗಳನ್ನು ಹೊತ್ತು ತಂದಿರುವ ಹಾವನೂರ ಅವರನ್ನು ನಾನು ಬಾಸೆಲ್ ನಲ್ಲಿ  ಭೇಟಿ ಮಾಡಿ ಅವರು ಮಾಡುವ ಕೆಲಸವನ್ನು  ಕಣ್ಣಾರೆ  ಕಾಣುವ ಸುಯೋಗ ದೊರಕಿತು. ಬಾಸೆಲ್ ನ ಸಂಗ್ರಹಾಲಯದಲ್ಲಿ  ಅವರು ಒಬ್ಬ ಮಿಷನರಿಯಂತೆ  ದುಡಿಯುತ್ತಿದ್ದರು. ಬರವಣಿಗೆ, ಓಡಾಟದ ನಡುವೆ  ಆರೋಗ್ಯವನ್ನು ಎಳ್ಳಷ್ಟು ಲೆಕ್ಕಿಸದ ಹಾವನೂರ ಅವರು  ಹಠಮಾರಿ ಮತ್ತು ಚಲವಾದಿ. ಆಸ್ಪತ್ರೆಯ ಹಾಸಿಗೆಯಂದ ಎದ್ದು ಮುದ್ರಣಾಲಯಕ್ಕೆ ಪ್ರೂಫ್ ನೋಡಲು ಹೋಗುವ , ಔಷಧಿ ನುಂಗಿ ಗ್ರಂಥಾಲಯದಲ್ಲಿ ಕುಳಿತುಕೊಳ್ಳುವ, 80ರ ಹರೆಯದಲ್ಲಿ  ಏಕಾಂಗಿಯಾಗಿ ಅಡುಗೆ ಮಾಡಿ ಬರೆಯುತ್ತಾ ಕೂರುವ ಡಾ. ಶ್ರೀನಿವಾಸ ಹಾವನೂರರು ಸಹಜವಾಗಿ ಇಂದಿನ ಆಧುನಿಕ ಕಾಲದಲ್ಲಿ  ಅಸಹಜ ಅಸಾಮಾನ್ಯ ಅವಧೂತ.

ಡಾ. ಶ್ರೀನಿವಾಸ ಹಾವನೂರ ಅಭಿನಂದನ ಗ್ರಂಥ -2009

‍ಲೇಖಕರು avadhi

April 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

3 ಪ್ರತಿಕ್ರಿಯೆಗಳು

 1. HSV Murthy

  ಪ್ರೊ ವಿವೇಕ ರೈ ಅವರು ಡಾ ಹಾವನೂರರ ಬಗ್ಗೆ ಆಪ್ತವಾಗಿ ಬರೆದ ಟಿಪ್ಪಣಿ ಹೃದಯ ತುಂಬಿದೆ. ನಾನು ಕಂಡಂತೆ ಡಾ ಶ್ರೀನಿವಾಸ ಹಾವನೂರರು ತಮ್ಮನ್ನು ನೂರಕ್ಕೆ ನೂರು ಸಂಶೋಧನೆಗೆ ತೆತ್ತುಕೊಂಡಂತ ಹಳೆಯ ತಲೆಮಾರಿನ ವಿದ್ವತ್ ಪರಂಪರೆಗೆ ಸೇರಿದವರು. ಮಹಾ ಪಂಡಿತರಾಗಿದ್ದೂ ಅವರ ಕಾವ್ಯ ಸಂವೇದನೆ ಸೂಕ್ಷ್ಮವಾಗಿತ್ತು. ನನಗೆ ಪ್ರಶಸ್ತಿಯೊಂದು ಸಂದರ್ಭದಲ್ಲಿ ಅವರು ನನ್ನ ಕಾವ್ಯದ ಕುರಿತು ಮಾಡಿದ ಾಭಿನಂದನ ಉಪನ್ಯಾಸ ನಾನು ಮರೆಯಲಿಕ್ಕೇ ಸಾಧ್ಯವಿಲ್ಲ. ಪ್ರಶಸ್ತಿ ಬಂದದ್ದು ನನ್ನ ಯಾವುದೋ ವಿಮರ್ಶೆಯ ಪುಸ್ತಕಕ್ಕೆ. ಆದರೆ ಡಾ ಹಾವನೂರರು ಮಾತಾಡಿದ್ದು ನನ್ನ ಕಾವ್ಯದ ಬಗ್ಗೆ! ಈ ಹಿರಿಯರ ನೆನಪು ನನ್ನಲ್ಲಿ ಸದಾ ಹಸಿರಾಗಿ ಉಳಿದಿರುತ್ತದೆ.
  ಎಚ್ಚೆಸ್ವಿ

  ಪ್ರತಿಕ್ರಿಯೆ
 2. ಅಶೋಕವರ್ಧನ ಜಿ.ಎನ್

  ೧೯೭೩ – ಇನ್ನೂ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ನಾನು, ಯಾವ ಪುಸ್ತಕೋದ್ಯಮದ ಕನಸೂ ಇಲ್ಲದೆ, ಕೇವಲ ಹೊಸ ಸಾಹಸದ ಹೊಳಹಿನೊಡನೆ ಒಂದಷ್ಟು ಪುಸ್ತಕ ಹೊತ್ತು ಮುಂಬೈ ಸೇರಿದ್ದೆ. ನನಗೆ ಅತ್ತ ಮೈಸೂರಿನಿಂದ ತಂದೆ (ಜಿಟಿನಾ), ಇತ್ತ ಮುಂಬೈಯಲ್ಲೇ ಇದ್ದ ಚಿಕ್ಕಪ್ಪ (ವಿಕೆ ಭಟ್) ಮುಂಬೈಯಲ್ಲಿ ಕನ್ನಡ ನಾಡಿ ತಜ್ಞ ಎಂದು ಹೇಳಿದ್ದು ಒಂದೇ ಹೆಸರು – ಶ್ರೀನಿವಾಸ ಹಾವನೂರ. ಅವರ ಜೀವದ ಗೆಳೆಯ ರಾಮಚಂದ್ರ ಉಚ್ಚಿಲ್, ಎ.ಎಸ್ಕೆ ರಾವ್, ಗುಡಿ, ವ್ಯಾಸರಾಯ ಬಲ್ಲಾಳ್ ಮುಂತಾದವರನ್ನೆಲ್ಲ ಪರಿಚಯಿಸಿಕೊಟ್ಟರು. ಮುಂದುವರಿದ ಮಿಂಚಿನಬಳ್ಳಿ ಅಥವಾ ದ್ವೈಪಾಯನ ಟ್ರಸ್ಟಿನ ಪ್ರಕಟಣೆಗಳನ್ನೆಲ್ಲ ಮುಕ್ತವಾಗಿ ಮಾರಲು ಕೊಟ್ಟರು………. (ಚಂಚು ಪ್ರವೇಶ) ನನ್ನ ಮೀಸೆಯ ಕುಡಿ ಕೊಟ್ಟದ್ದೇ ಸಾಕಾಯ್ತು, ಎಳೆದು ಹಾಕಿದರು. ಒಂದು ತಿಂಗಳ ‘ಸಾಹಸ’ಕ್ಕೆ ಹೋದವನಿಗೆ ವೃತ್ತಿ ಪುಸ್ತಕೋದ್ಯಮಿಯಾಗುವಲ್ಲಿ ಇವರ ಕೊಡುಗೆ ಸಣ್ಣದಲ್ಲ.

  ನನ್ನ ಅಂದಾಜಿನಲ್ಲಿ ಮಂಗಳೂರು ಇವರನ್ನು ಮುಖ್ಯವಾಗಿ ಎರಡು ತಾಕತ್ತುಗಳಲ್ಲಿ ಕಂಡಿತು. ಒಂದು ಪ್ರೊ| ರೈಯವರು ಹೇಳಿದಂತೆ ವಿವಿನಿಲಯದ ಕನ್ನಡ ವಿಭಾಗ ಕಟ್ಟಿದ್ದು. ಆಗಲೂ ನನಗಿವರ ಒಡನಾಟ ಕಡಿಮೆಯಿರಲಿಲ್ಲ. ಇನ್ನೊಂದು ಇಲ್ಲಿನ ಒಪ್ಪಂದ ಮುಗಿದು ಮರಳಿದವರು (ಮುಂಬೈಗೆ) ಮತ್ತೆ ಬೆಂಗಳೂರು ಮೂಲಕ ಅವತರಿಸಿದಾಗ ವ್ಯಾಪ್ತಿ ವಿಸ್ತರಿಸಿಕೊಂಡು ಕನ್ನಡವನ್ನೇ ಕಟ್ಟಿದ್ದು! ಎಲ್ಲೆಲ್ಲಿನ ಅಧ್ಯಾಪಕರುಗಳು ನನ್ನ ಮಳಿಗೆ ಹಿಂದೆಯೇ ಇದ್ದ ಹಾವನೂರರ ಬಿಡಾರಕ್ಕೆ ಧಾವಿಸುತ್ತಿದ್ದ ಪರಿ, ಅಲ್ಲಿಂದ ಬೆಳಕಿನ ಕುಡಿ ಹಿಡಿದು ಜಿಲ್ಲೆಯ ಮೂಲೆಮೊಡಕುಗಳಲ್ಲಿ ಸಂಶೋಧನೆಯ ಬೆಳಕು ಚೆಲ್ಲಿದ್ದು ನಿಜಕ್ಕೂ ಅಸಾಮಾನ್ಯ. ಒಬ್ಬ ಎಸ್ವೀಪೀ ತ್ರಿವಿಕ್ರಮನಾಗಿ ಜಿಲ್ಲೆಯೊಳಗೆ ಕನ್ನಡಾಭಿಮಾನದ ಭೂಮಪಾದಗಳನ್ನಿಟ್ಟದ್ದು ಗೊತ್ತು. ಹಾವನೂರರ ವರಿಸೆ ವಾಮನನದು – ಅಸಂಖ್ಯ ತ್ರಿವಿಕ್ರಮತ್ವಕ್ಕೆ ಅಲ್ಲಿತ್ತು ದೃಢ ಸಂಕಲ್ಪ ಮತ್ತು ಕ್ರತುಶಕ್ತಿ.

  ಅವರ ನೆಪದಲ್ಲಿ ‘ನನ್ನ’ ಮೆರೆಸುವುದು ಶ್ರದ್ಧಾಂಜಲಿಯಾಗದು ಎಂಬ ಎಚ್ಚರವೂ ಹಾವನೂರರಿಗೆ ಶ್ರದ್ಧಾಂಜಲಿ.
  ಅಶೋಕವರ್ಧನ

  ಪ್ರತಿಕ್ರಿಯೆ
 3. ತುರಂಗ

  ಹಾವನೂರರ ಬಗ್ಗೆ ಸಾಮಾನ್ಯವಾಗಿ ತಿಳಿಯದೆ ಇರಬಹುದಾದ ಇನ್ನೊಂದು ವಿಷಯ – ಅವರು ಟಾಟಾ ಇನ್ಸ್ಟಿಟ್ಯೂಟ್ ಆಫ಼್ ಫ಼ಂಡಮೆಂಟಲ್ ರಿಸರ್ಸ್ಚಿನಲ್ಲಿದ್ದಾಗ ಅವರು ನಮಗೆಲ್ಲಾ ಗ್ರಂಥಪಾಲಕರು, ಕನ್ನಡ ವಿದ್ವಾಂಸರಲ್ಲ. ಅವರ ಅಲ್ಲಿನ ಕೆಲಸದ ವ್ಯಾಪ್ತಿಯಲ್ಲಿ ಇದು ಒಳಗೊಂಡಿಲ್ಲದಿದ್ದರೂ ನಮಗೆ ಬೇಕಾದ ಕನ್ನಡ ಪುಸ್ತಕಗಳನ್ನು ತರಿಸಿಕೊಡುತ್ತಾರೆ ಎನ್ನುವುದು, ಹೇಗೋ ಬಾಯಿಂದ ಬಾಯಿಗೆ ಹರಡಿತ್ತು. ಒಂದು ಸಲ ನನಗೆ ನನ್ನ ಸ್ನೇಹಿತ ಒಬ್ಬನ ಹತ್ತಿರ ನೋಡಿದ್ದ ಕಿಟ್ಟೆಲ್ ನಿಘಂಟು ಬೇಕು ಎನ್ನಿಸಿತು. ಬೊಂಬಾಯಿನ ಅಂಗಡಿಗಳಲ್ಲಿ ಸ್ವಲ್ಪ ಹುಡುಕಿದೆ. ಸಿಕ್ಕಲಿಲ್ಲ. ಅವರನ್ನು ಹೋಗಿ ಕೇಳಿದೆ. ಸರಿ ಎಂದರು. ಒಂದೆರಡು ವಾರಗಳ ನಂತರ ಒಂದು ಚೀಟಿ ಕಳಿಸಿ ಬಂದಿದೆ ಎಂದು ತಿಳಿಸಿದರು. ಅವರಿಗೆ ಅದರ ಬೆಲೆ ಕೊಟ್ಟು ಇಟ್ಟುಕೊಂಡೆ. ಇಂದಿಗೂ ಇದು ನನಗೆ ಆಗಾಗ ಬಳಕೆಯಾಗುವ ಪುಸ್ತಕ, ನೋಡಿದಾಗೆಲ್ಲಾ ಅವರ ನೆನಪು ತರುವಂತಹದು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: