ವಿವೇಕ-ಸುಘೋಷ ಪ್ರಕರಣ : ಪ್ರೆಸೆನ್ಸ್ ಆಫ್ ಮೈಂಡ್ ಮತ್ತು ಧೈರ್ಯ

ವಿವೇಕ್ ಒಬೆರಾಯ್ ಹಾಗೂ ಐಶ್ವರ್ಯ ಪ್ರಕರಣದ ಬಗ್ಗೆ  ಸುಘೋಷ್ ಕೇಳಿದ ಪ್ರಶ್ನೆ ಸಾಕಷ್ಟು ಚರ್ಚೆಗೆ ಬಾಗಿಲು ತೆರೆದಿದೆ.
ಅದರ ಭಾಗವಾಗಿ ಎಚ್ ಆನಂದರಾಮ ಶಾಸ್ತ್ರಿ ಅವರು ಬರೆದ ಅಭಿಪ್ರಾಯ ಇಲ್ಲಿದೆ. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ-

(ಅ)ವಿವೇಕ ಒಬೆರಾಯ್ ಮೇಲೆ ಸು(ಡು)ಘೋಷ ಮಾಡಿರುವ ಪ್ರಹಾರ ಕಂಡು ಈ ಬರಹ.
ರಾಯನದು ರೋಮ್ಯಾಂಟಿಕ್ ರಕ್ತ! ಸುಘೋಷ್ ವಿವರಿಸಿರುವಂತೆ ಆ ವಿವೇಕ ಐಶ್ ವಿಷಯದಲ್ಲಿ ಅವಿವೇಕದ ಕೆಲಸ ಮಾಡಿದ. ಸುಘೋಷರದು ಬಿಸಿರಕ್ತ! ಎಂದೇ ಆತ್ಮಸಮರ್ಥನೆ ತೀಕ್ಷ್ಣವಾಗಿ ಹೊರಹೊಮ್ಮಿದೆ. ಆದರೆ ಸುಘೋಷ್ ಹೇಳಿರುವ ಮಾತುಗಳಲ್ಲಿ ಸತ್ಯವಿದೆ. ಮಗನ ಅವಿವೇಕಿ ಕಾರ್ಯದ ಬಗ್ಗೆ ಮಾರ್ಮಿಕ ಪ್ರಶ್ನೆ ಎದುರಾದಾಗ ಕನಿಷ್ಠ ಸೌಜನ್ಯದ ಉತ್ತರವನ್ನೂ ’ಸುರ್ರ್’ಏಶ (ಡಿಸ್)ಒಬೆರಾಯ ನೀಡದೆ ಬರಿದೆ ಗುರ್ರ್ ಎಂದ. ಆತ ಉದ್ಧಟತನದ ಉತ್ತರ ನೀಡಿದ್ದು ಉದ್ದೇಶಪೂರ್ವಕವಾಗಿ. ತನ್ನ ಮಗನನ್ನು ಸಮರ್ಥಿಸಿಕೊಂಡ ಬಗೆ ಅದು. ಇಲ್ಲಿ ಆತನ ಪ್ರೆಸೆನ್ಸ್ ಆಫ್ ಮೈಂಡ್ ಅದ್ಭುತ!
ಆ ಪ್ರಶ್ನೆ ಕೇಳಿದ್ದು ಸುಘೋಷ್ ಅವರ ಪ್ರೆಸೆನ್ಸ್ ಆಫ್ ಮೈಂಡ್‌ನ ದ್ಯೋತಕ ಎನ್ನುವುದಕ್ಕಿಂತ ಪತ್ರಕರ್ತನೊಬ್ಬನಿಗಿರಬೇಕಾದ ಧೈರ್ಯದ ದ್ಯೋತಕ ಎನ್ನುವುದು ಹೆಚ್ಚು ಸೂಕ್ತ. ಆ ಪ್ರಶ್ನೆ ಅನಿರೀಕ್ಷಿತವಾಗಿ ಹುಟ್ಟಿದ್ದಲ್ಲ. ನಿರೀಕ್ಷಿತವೇ. ಗೋ ಸಮ್ಮೇಳನದ ಸಂದರ್ಭದಲ್ಲಿ ಅಂಥ ಪ್ರಶ್ನೆ ಕೇಳುವ ಧೈರ್ಯ ಮಾತ್ರ ಮೆಚ್ಚತಕ್ಕದ್ದು. ಪತ್ರಕರ್ತರಲ್ಲಿ ಇಂಥ ಧೈರ್ಯ ಅಪೇಕ್ಷಣೀಯ. ತಾನು ಆ ಪ್ರಶ್ನೆ ಕೇಳಿದ್ದಕ್ಕೆ ಕಾರಣವನ್ನು ವಿವರಿಸಿರುವ ಸುಘೋಷ್ ಒಂದು ಕಾರಣವನ್ನು ಕೈಬಿಟ್ಟಿದ್ದಾರೆ. ಅದೆಂದರೆ, ಟಿವಿ ವೀಕ್ಷಕರು ಆ ಸಂದರ್ಭದಲ್ಲಿ ಅಂಥ ಪ್ರಶ್ನೆಯನ್ನು ಮತ್ತು ಅದಕ್ಕೆ ವಿವೇಕನ ಉತ್ತರವನ್ನು ನಿರೀಕ್ಷಿಸಿದ್ದರು. ಆ ನಿರೀಕ್ಷೆಯನ್ನು ಪೂರೈಸುವುದು ಪತ್ರಕರ್ತನ ಧರ್ಮ. ಅದನ್ನೇ ಸುಘೋಷ್ ಮಾಡಿದ್ದಾರೆ. ತಪ್ಪಿಲ್ಲ. ಆದರೆ, ಆ ಬಗ್ಗೆ ಅವರು ಬರೆದ ಮೊದಲ ಬರಹದಲ್ಲಿ ಆತ್ಮಪ್ರಶಂಸೆ ಮತ್ತು ಎರಡನೆಯ ಬರಹದಲ್ಲಿ ಆತ್ಮಸಮರ್ಥನೆ ಕೊಂಚ ಜಾಸ್ತಿಯಾಯಿತೆನ್ನಿಸುತ್ತದೆ; ನಾನು ಮೊದಲೇ ಹೇಳಿದಂತೆ ಬಿಸಿರಕ್ತ, ವಿನಾಯಿತಿ ಕೊಡೋಣ.
ಪ್ರೆಸೆನ್ಸ್ ಆಫ್ ಮೈಂಡ್ ಮತ್ತು ಧೈರ್ಯ ಎರಡೂ ವ್ಯಕ್ತವಾಗುವಂಥ ಕೆಲ ಘಟನೆಗಳನ್ನು ನಾನಿಲ್ಲಿ ಹೇಳಲಿಚ್ಛಿಸುತ್ತೇನೆ. (ಇವು ನನ್ನ ಆತ್ಮಪ್ರಶಂಸೆಯ ಮಾತುಗಳೆಂಬುದನ್ನು ವಿನಯಪೂರ್ವಕವಾಗಿ ಮೊದಲೇ ಒಪ್ಪಿಕೊಂಡುಬಿಡುತ್ತೇನೆ. ನಾನು ಪತ್ರಕರ್ತನಲ್ಲ ಎಂಬುದನ್ನೂ ಪೂರ್ವಭಾವಿಯಾಗಿ ತಿಳಿಸಲಿಚ್ಛಿಸುತ್ತೇನೆ.)
ಬೆಂಗಳೂರಿನ ಯವನಿಕಾ ಸಭಾಂಗಣ. ದೇವೇಗೌಡರಿದ್ದ ಸಮಾರಂಭ. ಭಾಷಣದ ಮಧ್ಯೆ ದೇವೇಗೌಡರು ಆಡಿದ ಮಾತೊಂದರ ಮಿಥ್ಯೆಯನ್ನು ಸಭೆಯಲ್ಲಿದ್ದ ನಾನು ತತ್‌ಕ್ಷಣ ಎದ್ದುನಿಂತು ಬಯಲಿಗೆಳೆದೆ. ಅದಕ್ಕೆ ಗೌಡರು ನನ್ನನ್ನೊಮ್ಮೆ ಕೆಟ್ಟದಾಗಿ ದಿಟ್ಟಿಸಿ ಗುರ್ರ್ ಎಂದರು! ಸಭೆ ಮಾತ್ರ ಅವಾಕ್ಕಾಗಿತ್ತು!
ಬೆಂಗಳೂರಿನ ರವೀದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ. ಅತ್ಯುನ್ನತ ಪ್ರಶಸ್ತಿ ಪಡೆದ ಕನ್ನಡಿಗ ಪತ್ರಕರ್ತರೊಬ್ಬರು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡತೊಡಗಿದಾಗ ಸಭೆಯಲ್ಲಿದ್ದ ನಾನು ಎದ್ದುನಿಂತು ಸಕಾರಣ ಆಕ್ಷೇಪಿಸಿ, ’ದೆಹಲಿಯಲ್ಲಿರುವವರಾದರೇನಂತೆ, ಕನ್ನಡ ಗೊತ್ತಿರುವ ನೀವು ಕನ್ನಡದಲ್ಲೇ ಮಾತನಾಡಿ’, ಎಂದು ಕೂಗಿದೆ. ಅವರು ಆತ್ಮಸಮರ್ಥನೆಗಿಳಿದರು. ನಾನು ಬಗ್ಗಲಿಲ್ಲ. ಆಗ ವೇದಿಕೆಯಲ್ಲಿದ್ದ ಸರ್ಕಾರಿ ಉನ್ನತಾಧಿಕಾರಿಯೊಬ್ಬರು ನನಗೆ ಏನೋ ತಿಳಿಹೇಳುವವರಂತೆ ಪೋಸುಕೊಡತೊಡಗಿದರು. ಅವರನ್ನೂ ತರಾಟೆಗೆ ತೆಗೆದುಕೊಂಡೆ. ಪರಿಣಾಮ, ಸದರಿ ಪ್ರಶಸ್ತಿ ವಿಜೇತರ ಬಾಯಿಂದ ಕನ್ನಡ ಹೊರಹೊಮ್ಮಿತು!
ಬೆಂಗಳೂರಿನ ಶಿಕ್ಷಕರ ಸದನದ ಸಭಾಂಗಣದಲ್ಲಿ ಲೋಕಶಿಕ್ಷಣ ಟ್ರಸ್ಟ್ ಏರ್ಪಡಿಸಿದ್ದ ಚರ್ಚಾಸ್ಪರ್ಧೆಯ ಕಾರ್ಯಕ್ರಮ. ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬ ನಾನು. ’ಬಲಿಷ್ಠ ಭಾರತದ ನಿರ್ಮಾಣಕ್ಕೆ ಪ್ರಸ್ತುತ ರಾಜಕೀಯ ವ್ಯವಸ್ಥೆ ತೊಡಕಾಗಿದೆ’ ಇದು ಚರ್ಚೆಯ ವಿಷಯ. ಸಮಾರಂಭವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಚರ್ಚೆಯ ವಿಷಯ ವನ್ನು ಉಲ್ಲೇಖಿಸುತ್ತ ’ಭವ್ಯ ಭಾರತದ ನಿರ್ಮಾಣಕ್ಕೆ..’ ಎಂದು ತಪ್ಪು ಶಬ್ದ ಬಳಸಿದರು. ಕೂಡಲೇ ನಾನು, ’ಭವ್ಯ ಅಲ್ಲ, ಬಲಿಷ್ಠ’, ಎಂದು ಕೂಗಿಹೇಳಿದೆ. ನನ್ನೆಡೆ ದಿಟ್ಟಿಸುತ್ತ ಅವರು ತಪ್ಪನ್ನು ತಿದ್ದಿಕೊಂಡರು.
ಮೇಲಿನೆಲ್ಲ ಸಂದರ್ಭಗಳಲ್ಲೂ ಪ್ರೆಸೆನ್ಸ್ ಆಫ್ ಮೈಂಡ್ ಮತ್ತು ಧೈರ್ಯ ಎರಡೂ ಕೆಲಸಮಾಡಿದವಷ್ಟೆ. ಪ್ರೆಸೆನ್ಸ್ ಆಫ್ ಮೈಂಡ್ ಇತ್ಯಾದಿಯ ಜಿಜ್ಞಾಸೆ ಇಷ್ಟು ಸಾಕು. ಕೊನೆಯಲ್ಲಿ, ಹೀಗೇ ಸುಮ್ಮನೆ, ಅಭಿ-ಐಶ್-ವಿವೇಕ್ ಕುರಿತು ಒಂದು ಚಾಟುಪದ್ಯ. ಬಹಳ ಹಿಂದೆಯೇ ನಾನು ಬರೆದು ನನ್ನ ’ಗುಳಿಗೆ’ ಬ್ಲಾಗ್‌ನಲ್ಲಿ ಹಾಕಿಕೊಂಡಿದ್ದ ತುಣುಕು ಇದೀಗ ನಿಮ್ಮ ಓದಿಗೆ:
ಐಶ್ ವಿಷ್ಯ ಐಸಾ!
——————–
ಆ ದಿನಗಳಲ್ಲಿ
ಐಶ್ ಎಂಬ
ಐಸ್ಕಾಂತದ ಸೆಳೆತಕ್ಕೆ ಸಿಕ್ಕು
ಅಭಿಷೇಕು
ಶೇಕು!
ಅಭಿಷೇಕಿನ
ಶಾಕಿಗೆ
ಕರಗಿ
ಐಸ್
ಪಾನಿ ಪಾನಿ!
ಏನ್ಮಾಡೋದು ಸ್ವಾಮೀ,
ಜವಾನಿ
ದಿವಾನಿ!
ಪರಿಣಾಮ ಸು-
ಖಾಂತ.
ಅಭಿ-
ಶೇಕ್ ಸಾಹೇಬ ಆದ
ಐಶ್-
ಕಾಂತ.
ಅಮಿತಾಭನಿಗೆ ಅಮಿತಾನಂದ
ಜಯಾ ಮುಖದಲ್ಲಿ ಜಯ
ಕೃಷ್ಣರಾಜ ರೈ ಖುಷಿಯೇ ಸೈ
ವೃಂದಮ್ಮನೋರು?
ಕುಡಿದರು ಹಾಲುಖೀರು.
ಐಶ್-ಅಭಿ ಇಬ್ಬರೂ
ಕೋಟ್ಯಧಿಪತಿ-ಪತ್ನಿ;
ಇಬ್ಬರದ್ದೂ
ಐಶಾರಾಮಿ ಬದುಕು;
ಐಶಾಭಿರಾಮಿ ಬದುಕೂ.
ಪಾಪ,
ಸಲ್ಮಾನ್, ವಿವೇಕ್ ಮಾತ್ರ
ಸಲ್ಲಲಿಲ್ಲ
ಯದಕೂ.
(ಯದಕೂ = ಯಾವುದಕ್ಕೂ. ದಾವಣಗೆರೆ ಭಾಷೆಯಲ್ಲಿ)
ಇತಿ,
ದಿಟ್ಟ ಬರಹಗಾರ (ಕೆಟ್ಟ ಬರಹಗಾರ? ಸೊಟ್ಟ ಬರಹಗಾರ?)
ಎಚ್. ಆನಂದರಾಮ ಶಾಸ್ತ್ರೀ

‍ಲೇಖಕರು avadhi

March 8, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

3 ಪ್ರತಿಕ್ರಿಯೆಗಳು

 1. ಆತ್ರಾಡಿ ಸುರೇಶ ಹೆಗ್ಡೆ

  ಫೆಬ್ರವರಿ ಆರರಂದು ಬೆಂಗಳೂರಿನಲ್ಲಿ ಪ್ರತಾಪ ಸಿಂಹರ “ಮೈನಿಂಗ್ ಮಾಫಿಯಾ” ಪುಸ್ತಕ ಬಿಡುಗಡೆ ಮಾಡಿ ನಿವೃತ್ತ ಮುಖ್ಯ ನ್ಯಾಯಾಧೀಶ ಎನ್. ವೆಂಕಟಾಚಲಯ್ಯನವರು ಆಂಗ್ಲದಲ್ಲಿ ಮಾತನಾಡ ತೊಡಗಿದಾಗ, ಚಂದ್ರಶೇಖರ ಪಾಟೀಲರು ಎದ್ದು ನಿಂತು “ದಯವಿಟ್ಟು ಕನ್ನಡದಲ್ಲಿ ಮಾತಾಡಿ…” ಎಂದು ವಿನಂತಿಸಿಕೊಂಡದ್ದು ನೆನಪಾಯ್ತು.

  ಪ್ರತಿಕ್ರಿಯೆ
 2. arundati

  ಆಹಾ, ಆ ನಂದ ರಾಮ ರೇ,
  ಐಶ್ ಆಗಲಿ ಅ ವಿವೇಕ್ ಆಗಲಿ ಅಭಿ ಶೇಕ್ ಆಗಲಿ ಈ ಕವಿತೆಯನ್ನು ನೋಡಿ ಅಲ್ಲಲ್ಲ ಓದಿದ್ದರೆ ..
  ವೇಕ್ ಮತ್ತು ಶೇಕ್ ಗಳಿಗೊಂದು ಬ್ರೇಕ್ ಖಂಡಿತಾ …

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: