ವಿಶೇಷಾಂಕಗಳ ಸುತ್ತಾಮುತ್ತಾ..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

|ಕಳೆದ ಸಂಚಿಕೆಯಿಂದ|

ಪತ್ರಿಕೆಗಳು ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರ ಮಾಧ್ಯಮಗಳಾಬೇಕೆಂಬ ಚಿಂತನೆ ಇವತ್ತಿನದೇನಲ್ಲ. ‘ಪ್ರಬುದ್ಧ ಕರ್ನಾಟಕ’, ಜಯಂತಿ’ಗಳಿಂದ ಹಿಡಿದು ʼಸಾಕ್ಷಿ’, ʼಸಂಕ್ರಮಣ’ದವರೆಗೆ ಅನೇಕ ಸಾಹಿತ್ಯ ಪತ್ರಿಕೆಗಳು ಈ ಕೆಲಸವನ್ನು ತಮ್ಮ ಮಿತಿಯೊಳಗೇ ಲಾಗಾಯ್ತಿನಿಂದ ಮಾಡಿಕೊಂಡು ಬಂದಿವೆ. ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ, ʼಪ್ರಜಾವಾಣಿ’ ಶುರವಿನಿಂದಲೂ ಕರ್ತವ್ಯ ಬದ್ಧತೆಯಿಂದ ಈ ಕೆಲಸವನ್ನು ಮಾಡಿಕೊಂಡು ಬಂದಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಈ ಎಲ್ಲ ಪ್ರಮುಖ ಚಳವಳಿಗಳ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಪ್ರೋತ್ಸಾಹ ಮತ್ತು ಪ್ರಚಾರ ಎರಡರಲ್ಲೂ ʼಪ್ರಜಾವಾಣಿ’ ಮುಂಚೂಣಿಯಲ್ಲಿ ನಿಂತು ಗಣನೀಯ ಕೆಲಸಮಾಡಿದೆ.

ನವ್ಯ ಕಾವ್ಯ-ಕಥೆ-ವಿಮರ್ಶೆಗಳಿಗಂತೂ ʼಪ್ರವಾ’ ಒಂದು ವೇದಿಕೆಯಾಗಿಯೇ ಕೆಲಸ ಮಾಡಿತು. ಆದರೆ ಅದು ಕೇವಲ ಪ್ರಚಾರದ ವೇದಿಕೆಯಷ್ಟೇ ಆಗದೆ ವಿಮರ್ಶೆ, ಮೌಲ್ಯ ವಿವೇಚನೆಗೂ ವೇದಿಕೆಯಾಯಿತು. ನವ್ಯಕ್ಕೆ  ಮೊದಲು ಪ್ರಗತಿಶೀಲರ ಭರಾಟೆಯ ಕಾಲಘಟ್ಟದಲ್ಲಿ, ಸಾಹಿತ್ಯ ಮತ್ತು ಕಾಮ ಪ್ರಚೋದನೆ ಕುರಿತಂತೆ ಅನಕೃ ಮತ್ತು ನಿರಂಜನರ ವಾದ-ತರ್ಕಗಳಿಗೆ ವೇದಿಕೆಯಾದುದನ್ನು ಇಲ್ಲಿ ಸ್ಮರಿಸಬಹುದು. ಈ ಎಲ್ಲ ಚಳವಳಿಯ ಪ್ರಮುಖ ಲೇಖಕರ ಹೊಸದನಿಗಳ ಅಭಿವ್ಯಕ್ತಿಗೆ ಜಾಗ ಮಾಡಿಕೊಟ್ಟಿದ್ದಷ್ಟೇ ಅಲ್ಲದೆ ಓದುಗರಲ್ಲಿ ಈ ಹೊಸ ಸಾಹಿತ್ಯಗಳ ಬಗ್ಗೆ ಒಲವು, ಅಭಿರುಚಿಗಳನ್ನು ಬೆಳೆಸುವ ಕೆಲಸವನ್ನೂ ಮಾಡಿತು. ಈ ಮಾತು ಹೊಸ ಸಿನಿಮಾ, ರಂಗಭೂಮಿ, ಮತ್ತು ಇತರ ಪ್ರದರ್ಶಕ ಕಲೆಗಳಿಗೂ ಲಲಿತ ಕಲೆಗೂ ಅನ್ವಯಿಸುತ್ತದೆ.

ಸಾಪ್ತಾಹಿಕ ಪುರವಣಿಯ ಜೊತೆಗೆ ಸಾಹಿತ್ಯ ಪೋಷಣೆ ಮತ್ತು ಪ್ರಸಾರ ಕಾರ್ಯಗಳಲ್ಲಿ ದೀಪಾವಳಿ ವಿಶೇಷಾಂಕಗಳ ಪಾತ್ರ ಮಹತ್ವ ಪೂರ್ಣವಾದುದು. ಸಾಹಿತ್ಯ, ಜಾನಪದಕಲೆ, ಸಂಗೀತ, ನೃತ್ಯ ಮೊದಲಾದ ಸಾಂಸ್ಕೃತಿಕ ಮಾಧ್ಯಮಗಳನ್ನು ಕುರಿತ ಲೇಖನಗಳು, ಪ್ರಾಚೀನ, ಅರ್ವಾಚೀನ, ಪರಂಪರೆ. ಆಧುನಿಕತೆ ಕುರಿತ ವಿಚಾರ ವಿಮರ್ಶೆಯ ಸಂಕಿರಣಗಳು, ಸಂವಾದಗಳು, ಪ್ರಖ್ಯಾತ ಕವಿಗಳು, ಕಥೆಗಾರರರ ಕತೆ-ಕಾವ್ಯಗಳ ಜೊತೆಗೆ ಹೊಸ ಪ್ರತಿಭೆ, ಸೃಜನಶೀಲತೆಗೆ ವೇದಿಕೆಯಾದ ಕಥಾ ಸ್ಪರ್ಧೆ ಮತ್ತು ಮಕ್ಕಳ ವರ್ಣಚಿತ್ರ ಸ್ಪರ್ಧೆ ಇವುಗಳಿಂದ ದೀಪಾವಳಿ ಸಂಚಿಕೆಗಳಲ್ಲಿ ತಾನೇ ತಾನಾಗಿ ಸಾಂಸ್ಕೃತಿಕ ಸೌರಭ ಒಡಮೂಡುತ್ತಿತ್ತು.

ಕಥಾ ಸ್ಪರ್ಧೆಯಂತೂ ಎರಡು ಮೂರು ಹೊಸ ಪೀಳಗೆಯ ಶ್ರೇಷ್ಠ ಕತೆಗಾರರನ್ನು ಕೊಟ್ಟು ಕನ್ನಡ ಸಣ್ಣ ಕಥೆಗೆ ಮುತ್ತು ಮಾಣಿಕ್ಯಗಳಂಥ ಅಮೂಲ್ಯ ಕೊಡುಗೆಯನ್ನು ನೀಡಿದೆ ಎಂದರೆ ಅತಿಶಯೋಕ್ತಿಯಾಗದು. ಅನಂತಮೂರ್ತಿ, ರಾಮಚಂದ್ರ ಶರ್ಮ, ತೇಜಸ್ವಿ, ಲಂಕೇಶ್, ಕೆ.ಸದಾಶಿವ, ಟಿ.ಜಿ.ರಾಘವ ಮೊದಲಾಗಿ ನವ್ಯರಿಂದ ಹಿಡಿದು ದಲಿತ, ಬಂಡಾಯಗಳ ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ, ಅಬ್ದುಲ್ ರಶೀದ್ ಮೊದಲಾದವರೂ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಿಂದ ಹುಟ್ಟಿಬಂದ ಕಥೆಗಾರರರು. ಸ್ವಾರಸ್ಯವೆಂದರೆ ಬಹುಮಾನ ಪಡೆದ ಕಥೆಗಾರರಲ್ಲಿ ಕೆಲವರು ಮುಂದಿನ ವರ್ಷಗಳಲ್ಲಿ ತೀರ್ಪುಗಾರರೂ ಆದರು.

ದೀಪಾವಳಿ ವಿಶೇಷ ಸಂಚಿಕೆಯ ಸಿದ್ಧತೆ ಆರೇಳು ತಿಂಗಳುಗಳ ಮುಂಚೆಯೇ ಶುರುವಾಗುತ್ತಿತಾದರೂ ಈ ದೀಪಾವಳಿ ವಿಶೇಷಾಂಕ ವರ್ಷವಿಡೀ ನಮ್ಮ ತಲೆಯಲ್ಲಿ ಸಕ್ರಿಯವಾಗಿರುತ್ತಿತ್ತು. ಒಂದು ದೀಪಾವಳಿ ವಿಶೇಷ ಸಂಚಿಕೆ ಮುಗಿದ ಕೂಡಲೇ ಮುಂದಿನ ವರ್ಷದ ಸಂಚಿಕೆ ಹೇಗಿರಬೇಕೆಂಬ ಚಿಂತನೆ ಶುರುವಾಗುತ್ತಿತ್ತು. ವಿಶೇಷಾಂಕ ಸಿದ್ಧಪಡಿಸುವುದು ʼಸಾಪು’ ಹೊಣೆಯಾದರೂ ವೈಎನ್ಕೆ ಸಂಪಾದಕೀಯ ಸಲಹೆಗಾರರಾಗಿ ಸ್ಥಳಾಂತರ ಹೊಂದುವವರೆಗೆ ಇದರಲ್ಲಿ “ಬ್ರೈನ್ ಬಿಹೈಂಡ್ ಇಟ್” ಎನ್ನುವೋಪಾದಿ ಇರುತ್ತಿದ್ದರು. ಕನ್ನಡ/ಭಾರತ/ವಿಶ್ವ ಸಾಹಿತ್ಯ/ಸಿನೆಮಾ/ರಂಗಭೂಮಿ ಈ ಯಾವುದೇ ರಂಗದಲ್ಲಿ ಏನಾದರೂ ಒಂದು ಭೂಕಂಪನದಂಥ ಘಟನೆಯಾದರೆ, ಹೊಸತು ಏನಾದರೂ ಸಂಭವಿಸಿದರೆ, ವೈಎನ್ಕೆ ಕೂಡಲೇ “ಈ ಬಗ್ಗೆ ದೀಪಾವಳಿಗೆ ಬರೆಸಬಹುದು” ಎಂದು ಒಂದು ಚೀಟಿ ಬರೆದು ʼಸಾಪು’ ಸಂಪಾದಕರಿಗೆ ಕಳುಹಿಸುತ್ತಿದ್ದರು. ಇದು ನಮಗೆ ಪ್ರತಿ ವರ್ಷ ʼವಿಶೇಷ ಥೀಮ್’ ಹುಡುಕುವುದರಲ್ಲಿ ಸಹಕಾರಿಯಾಗುತ್ತಿತ್ತು.

ಅವರ ಕನ್ನಡ/ಇಂಗ್ಲಿಷ್ ಸಾಹಿತ್ಯಗಳ ಓದು ನಮಗೆ “ಯಾರಿಂದ ಏನು ಬರೆಸಬಹುದು” ಎನ್ನುವುದರ ಬಗ್ಗೆಯೂ ಮಾರ್ಗಸೂಚಿಯಾಗುತ್ತಿತ್ತು. ಉದಾಹರಣೆಗೆ ಹೇಳುವುದಾದರೆ ಒಂದು ವರ್ಷ “ಪುತಿನ ಅವರ, ಮ್ಯೂಸಿಕಲ್ ಆಪೆರಾ ಎನ್ನಬಹುದಾದ ಗೇಯ ನಾಟಕಗಳ ಬಗ್ಗೆ ವಿಶೇಷ ಲೇಖನ ಏಕೆ ಬರೆಸಬಾರದು ಎನ್ನುವ ಆಲೋಚನೆ ನನ್ನಲ್ಲಿ ಬಂತು. ವೈಎನ್ಕೆ ಅವರ ಮುಂದೆ ಈ ಸಲಹೆ ಇಟ್ಟೆ. “ಗುಡ್ ಐಡಿಯಾ..ನೀವು ಬಿ.ವಿ.ಕೆ ಹತ್ತಿರ ಮಾತಾಡಿ” ಎಂದರು.

ಏಕೋ ಏನೋ ಆ ವರ್ಷ ಅದು ಸಾಧ್ಯವಾಗಲಿಲ್ಲ. ಆದರೆ ಅದು ನನ್ನ ಮನಸ್ಸಿನ ಒಂದು ಮೂಲೆಯಲ್ಲಿ ಶೇಷವಾಗಿ ಉಳಿದಿತ್ತು. ನಾನು ʼಸಾಪು’ ವಹಿಸಿಕೊಂಡ ದಿನಗಳಿಂದ ಕಾರ್ಯನಿರ್ವಾಹಕ ಸಂಪಾದಕನಾಗಿ ನಿವೃತ್ತಿ ಹೊಂದುವವರೆಗೆ ಭಾನುವಾರ ರಜೆ ತೆಗೆದುಕೊಳ್ಳುತ್ತಿರಲಿಲ್ಲ. ಭಾನುವಾರದ ದಿನವೂ ಆಫೀಸಿಗೆ ಹೋಗುತ್ತಿದ್ದೆ. ಭಾನುವಾರಗಳಂದು ಭೇಟಿ ಮಾಡುವವರು ಇತ್ಯಾದಿ ತೊಂದರೆಗಳಿರುತ್ತಿರಲಿಲ್ಲ, ಸಾವಧಾನದಿಂದ ಒಂದಷ್ಟು ಯೋಚಿಸಲು ಗಲಾಟೆಮುಕ್ತ ಪರಿಸರವಿರುತ್ತಿತ್ತು. ಜೊತೆಗೆ ಕೆಲವು ವಿಷಯಗಳನ್ನು ನಿಧಾನವಾಗಿ ಯೋಚಿಸೋಣ ಎಂದು ಭಾನುವಾರಕ್ಕೆ ಮುಂದೂಡಿರುತ್ತಿದ್ದೆ. ಅವೆಲ್ಲವನ್ನೂ ಅಂದು ನಿರ್ವಹಿಸುವ ಪ್ರಯತ್ನ ಮಾಡುತ್ತಿದ್ದೆ.

ಈ ಭಾನುವಾರಗಳಂದು ಬಿ.ವಿ.ಕೆ.ಯವರೂ ಸಾಮಾನ್ಯವಾಗಿ ʼಪ್ರವಾ’ಗೆ ಬರುತ್ತಿದ್ದರು. ಬೇರೆಬೇರೆ ಪತ್ರಿಕೆಗಳನ್ನೋದುತ್ತ ಕುಳಿತಿರುತಿದ್ದರು. ಕೊನೆಗೆ, “ಏನು ರಂಗನಾಥರಾಯರಿಗೆ ಮನೆಗೆ ಹೋಗಲು ಇನ್ನೂ ವೇಳೆ ಯಾಗಲಿಲ್ಲವೇ?” ಎಂದು ಮಾತಿಗೆಳೆಯುತ್ತಿದ್ದರು. ಅಂಥ ಒಂದು ಭಾನುವಾರ ಪುತಿನ ಅವರ ಗೇಯ ನಾಟಕಗಳ ಬಗ್ಗೆ ಪ್ರಸ್ತಾಪ ಎತ್ತಿದೆ.
“ಇದೇನಿದು ಏಕಾಏಕಿ ಪುತಿನ ಬಗ್ಗೆ …”
“ಏಕಾಏಕಿ ಏನಿಲ್ಲ. ಪುತಿನ ಅವರ ಗೇಯ ನಾಟಕಗಳ ಬಗ್ಗೆ ನಮ್ಮ ದೀಪಾವಳಿ ಸಂಚಿಕೆ ಒಂದು ಘನವಾದ ಲೇಖನ ಬರೆಸಬೇಕೆಂಬ ಆಲೋಚನೆ ಒಂದರೆಡು ವರ್ಷಗಳಿಂದ ಇದೆ. ಸಂಗೀತ ಮತ್ತು ಸಾಹಿತ್ಯ ಎರಡೂ ರಸಾಭಿಜ್ಞತೆಗಳನ್ನು ಬಲ್ಲವರಿಂದ ಬರೆಸಬೇಕಷ್ಟೆ….ಅದಕ್ಕೆ….”
“ರಂಗನಾಥ ರಾಯರೆ ಅನೇಕರಿಗೆ ಗೊತ್ತಿಲ್ಲದ ಒಂದು ವಿಷಯ ನಿಮಗೆ ಹೇಳ್ತೀನಿ, ಕೇಳಿ. ಪುತಿನ ಕವಿ ಅಷ್ಟೇ ಅಲ್ಲ ರಾಗ ಸಂಯೋಜನೆ ಮಡುವಷ್ಟು ಸಂಗೀತಜ್ಞರೂ ಹೌದು..”
“ಹೌದೆ!”
“ಹೌದು. ಪುತಿನ ಬೆಳಗಿನ ಜಾವಕ್ಕೇ ಎದ್ದು ತಮ್ಮ ಗೀತೆಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದರು. ಅದು ಪೂರ್ತಿ ಪಕ್ಕಾ ಆಯಿತು ಎನಿಸಿದ್ದೇ ಬೆಳ್ಳಂಬೆಳಗೇ ವೀಣೇ ದೊರೆಸ್ವಾಮಿ ಅಯ್ಯಂಗಾರರ ಮನೆಗೆ ಓಡುತ್ತಿದ್ದರು. ಅವರ ಮುಂದೆ ತಮ್ಮ ರಾಗ ಸಂಯೋಜನೆಯನ್ನು ಮಂಡಿಸುತ್ತಿದ್ದರು. ಅವರು, ಸರಿ, ಚೆನ್ನಾಗಿದೆ ಎಂದು ಬಿಟ್ಟರೆ ಪುತಿನ ಅವರಿಗೆ ತೃಪ್ತಿಯಾಗುತ್ತಿತ್ತು.”
(ಇದನ್ನು ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರೂ ‘ಸುಧಾ’ದಲ್ಲಿ ನಾನು ಬರೆಸಿದ ಆತ್ಮಕಥೆಯಲ್ಲಿ  ಪ್ರಸ್ತಾಪಿಸಿದ್ದಾರೆ)
“ಹಾಗಿದ್ದಲ್ಲಿ ಕವಿ/ರಾಗ ಸಂಯೋಜಕ ಪುತಿನ ಅವರ ಬಗ್ಗೆ ಒಂದು ಲೇಖನ ಬರೆದುಕೊಡಿ. ಈ ವರ್ಷದ ದೀಪಾವಳಿ ಸಂಚಿಕೆಗೆ ಎಂದು ಶಾಸ್ತ್ರಿಯವರಿಗೆ ಹೇಳಿದೆ. ಅವರು ಒಪ್ಪಿ ಬರೆದುಕೊಟ್ಟರು. ಆ ಲೇಖನ ಪುತಿನ ಅವರ ಸೃಜನಶೀಲ ಮನಸ್ಸಿನ ಇನ್ನೊಂದು  ಮಗ್ಗುಲನ್ನು ಸೋದಾಹರಣವಾಗಿ ಅನಾವರಣಗೊಳಿಸಿತ್ತು. ಜೊತೆಗೆ ಸಂಗೀತ ಮತ್ತು ಸಾಹಿತ್ಯದ ನಡುವಣ ಅವಿನಾಭಾವ ಸಂಬಂಧವನ್ನೂ ರುಜುವಾತು ಪಡಿಸಿತ್ತು.

ಮತ್ತೆ ಕಥಾ ಸ್ಪರ್ಧೆಯತ್ತ ಒಂದು ಹಿನ್ನೋಟ ಹರಿಸುವುದಾದರೆ ಅದೊಂದು ಹಿಂದಿನ ದಿನಗಳ ಶ್ರಮದ ಪುನರಾವರ್ತನೆಯೇ ಸರಿ. ಪತ್ರಿಕಾ ವೃತ್ತಿಯ ದೈನಂದಿನ ಕೆಲಸದಂತೆಯೇ ದೀಪಾವಳಿ/ಯುಗಾದಿ ವಿಶೇಷಾಂಕಗಳ ಕೆಲಸವು ಬೌದ್ಧಿಕವಾಗಿ, ನೈತಿಕವಾಗಿ, ದೈಹಿಕವಾಗಿ ತುಂಬ ಶ್ರಮದಾಯಕ ಕೆಲಸ. ಕಥಾ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸುವ ಪ್ರಕಟಣೆಯೊಂದಿಗೇ ಈ ಶ್ರಮ ಶುರುವಾಗುತ್ತಿತ್ತು. ಕಥೆಗಾರರಿಗೆ ಸಾಕಷ್ಟು ಸಮಯಾವಕಾಶ ನೀಡುವ ದೃಷ್ಟಿಯಿಂದ ಒಂದೆರಡು ತಿಂಗಳು ಅವಕಾಶ ನೀಡಲಾಗುತ್ತಿತ್ತು. ಕಥೆಗಳು ಬರಲು ಶುರುವಾದಂತೆ ಅವುಗಳನ್ನು ಒಂದು ರಿಜಿಸ್ಟರಿನಲ್ಲಿ ದಾಖಲಿಸಿ, ಅಂದರೆ ಕಥೆ ಹೆಸರು, ಕಥೆಗಾರರ ಹೆಸರು, ವಿಳಾಸ, ತಲುಪಿದ ದಿನ ಇತ್ಯಾದಿ ವಿವಿರಗಳನ್ನು ರಿಜಿಸ್ಟರಿನಲ್ಲಿ ಬರೆದು ಕಥೆಗಳಿಗೆ ಕ್ರಮ ಸಂಖ್ಯೆ ನೀಡಲಾಗುತ್ತಿತ್ತು. ಕಥೆಗಾರರ ಹೆಸರು,ವಿಳಾಸ ಇತ್ಯಾದಿ ವೈಯಕ್ತಿಕ ವಿವರಗಳನ್ನು ಹಸ್ತಪ್ರತಿಯಿಂದ ಬೇರ್ಪಡಿಸಿ, ತೀರ್ಪುಗಾರರಿಗೆ ಕಥೆಗಾರರ ಹೆಸರು, ಚಹರೆಗಳು ಪತ್ತೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿತ್ತು. ಕೊನೆಯ ದಿನಾಂಕ ಆದ ಮೇಲೆ ಮುಂದಿನ ಕ್ರಮ. ಪ್ರತಿವರ್ಷ ಸುಮಾರು ೧೦೦ ರಿಂದ ೨೦೦ ಕಥೆಗಳು ಬರುತ್ತಿದ್ದವು. ಕಥೆಗಳನ್ನು ಆಖೈರಾಗಿ ತಿರ್ಪುಗಾರರಿಗೆ ಕೊಡುವ ಮುನ್ನ ಪೂರ್ವಭಾವಿ ಪರಿಶೀಲನೆ ನಮ್ಮಿಂದಲೇ ನಡೆಯುತ್ತಿತ್ತು.

ಸಾಹಿತ್ಯ ಕಲೆಗಳ, ಅಭಿರುಚಿ ಸಂವೇದನೆಯುಳ್ಳ ಸಹೋದ್ಯೋಗಿಗಳನ್ನು ಗುರುತಿಸಿ ಅವರಿಗೆ ಪೂರ್ವಭಾವಿ ಪರಾಮರ್ಶೆ ಕೆಲಸವನ್ನು ವಹಿಸಲಾಗುತ್ತಿತ್ತು. ಅವರಿಗೆ ಇದಕ್ಕಾಗಿ ಪ್ರತ್ಯೇಕ ಸಂಭಾವನೆ ನೀಡಲಾಗುತ್ತಿತ್ತು. ಪ್ರತಿಯೊಬ್ಬರಿಗೂ ೨೫-೩೦ ಕಥೆಗಳನ್ನು ಕೊಡಲಾಗುತ್ತಿತ್ತು. ಕೊಡುವ ಮುನ್ನ ಕಥೆಗಾರರ ಹೆಸರು, ವಿಳಾಸಗಳಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಲಾಗುತ್ತಿತ್ತು. ಪೂರ್ವಭಾವಿ ಪರಾಮರ್ಶೆಯಲ್ಲಿ ತೀರ್ಪುಗಾರರು ಬಹುಮಾನಕ್ಕೆ ಯೋಗ್ಯ ಎಂದು ಪರಿಶೀಲಿಸಬಹುದಾದಂಥ ಕಥೆಗಳನ್ನು ಅವರು ಶಿಫಾರಸು ಮಾಡಬೇಕಿತ್ತು. ಈ ಪೂರ್ವಭಾವಿ ಪರಾಮರ್ಶೆಯಲ್ಲೂ ತಪ್ಪು ನಿರ್ಣಯಗಳಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿರಲಿಲ್ಲ. ಆದ್ದರಿಂದಲೇ ʼಡಬಲ್ ಚೆಕ್’ ವ್ಯವಸ್ಥೆಯನ್ನು ರೂಪಿಸಲಾಗಿತ್ತು, ಪೂರ್ವಭಾವಿ ಪರಿಶೀಲನೆಯಾಗಿ ಬಂದ ಕಥೆಗಳನ್ನು ನಾವು ಮೂವರು (ಬಿವಿವಿ. ಸದಾಶಿವ ಮತ್ತು ನಾನು) ಮತ್ತೊಮ್ಮೆ ಪರಿಶೀಲಿಸುತ್ತಿದ್ದೆವು.

ಸಾಮಾನ್ಯವಾಗಿ ನಮ್ಮ ಸಹೋದ್ಯೋಗಿಗಳ ಬಹುಮಾನಯೋಗ್ಯ ಕಥೆಗಳ ಆಯ್ಕೆ ಸರಿಯಾಗಿಯೇ ಇರುತ್ತಿತ್ತು. ಅಪರೂಪದ ಅಪವಾದಗಳು ಇರುತ್ತಿದ್ದವು. ಕೆಲವೊಮ್ಮೆ ಭಾಷೆ, ಶೈಲಿ, ವಸ್ತು ಈ ಕೆಲವು ಕಾರಣಗಳಿಂದಾಗಿ ‘ಒಳ್ಳೆಯ ಕಥೆಯೂʼ ಪೂರ್ವಭಾವಿ ಪರಿಶೀಲನೆಯಲ್ಲಿ ತಿರಸ್ಕರಿಸಲ್ಪಡುತ್ತಿದ್ದವು. ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ, ಕುಂ.ವೀರಭದ್ರಪ್ಪ ಅವರುಗಳಂಥ ಪ್ರಾದೇಶಿಕ ಸೊಗಡಿನ ಕೆಳಗೇರಿಯ ಭಾಷೆಯನ್ನು ಅರಗಿಸಿಕೊಳ್ಳಲು ಸಾಕಷ್ಟು ಸಹನೆ, ಸಂಯಮ ಮತ್ತು ಸಾವಧಾನತೆಗಳು ಬೇಕು. ಇಲ್ಲವಾದಲ್ಲಿ ಇವು ಅವಗಣನೆಗೆ ಗುರಿಯಾಗುತ್ತವೆ.

ಒಂದು ವರ್ಷ ಹೀಗಾಯಿತು. ಮೊಗಳ್ಳಿ ಗಣೇಶ್ ಅವರ ಕಥೆಯನ್ನು ಮೊದಲ ಸುತ್ತಿನ ಪರಾಮರ್ಶಕರು ತಿರಸ್ಕರಿಸಿದ್ದರು. ಡಬಲ್ ಚೆಕ್ ಪ್ರಕ್ರಿಯೆಯಲ್ಲಿ ಇದು ತೀರ್ಪುಗಾರರ ಗಮನಕ್ಕೆ ಬಂದು ಯೋಗ್ಯವಾದ ಕಥೆ ಎನಿಸಿತು. ಆಶ್ಚರ್ಯವೆಂದರೆ, ತೀರ್ಪುಗಾರರು ಆ ಕಥೆಯನ್ನೇ ಪ್ರಥಮ ಬಹುಮಾನಕ್ಕೆ ಅರ್ಹವೆಂದು ತೀರ್ಮಾನಿಸಿದ್ದರು. ಡಬಲ್ ಚೆಕ್ ನಿಂದಾಗಿ ಒಂದು ಅನ್ಯಾಯ ತಪ್ಪಿತ್ತು.

ಪೂರ್ವಭಾವಿ ಪರಾಮರ್ಶನೆ ನಡೆಯುತ್ತಿದ್ದಂತೆಯೇ ನಾವು ತೀರ್ಪುಗಾರರ ಭೇಟೆ ಆರಂಭಿಸುತ್ತಿದ್ದೆವು. ಸಾಮಾನ್ಯವಾಗಿ ಪ್ರಸಿದ್ಧ ವಿಮರ್ಶಕರು, ಹೆಸರಾಂತ ಕಥೆಗಾರರು ಮತ್ತು ಕವಿಗಳನ್ನು ತೀರ್ಪುಗಾರರ ಪೀಠಕ್ಕೆ ನಾವು ಪರಿಗಣಿಸುತ್ತಿದ್ದೆವು. ಸಂಭವನೀಯ ತೀರ್ಪುಗಾರರ ಪಟ್ಟಿ ಸಿದ್ಧಪಡಿಸಿ ಸಂಪಾದಕರ ಮುಂದೆ ಇಡುತ್ತಿದ್ದೆವು. ಅವರ ಒಪ್ಪಿಗೆ ನಂತರ ಮುಂದಿನ ಕೆಲಸ. ಇದೇನೂ ಸುಲಭದ ಕೆಲಸವಾಗಿರಲಿಲ್ಲ. ಇಬ್ಬರು ತೀರ್ಪುಗಾರರಿರುತ್ತಿದ್ದರು.

“ಸರ್,  ಈ ಸಲದ ದೀಪಾವಳಿ ಕಥಾ ಸ್ಪರ್ಧೆಗೆ ನೀವು ತೀರ್ಪುಗಾರರಾಗಿರಬೇಕು ಎನ್ನವುದು ನಮ್ಮ ಸಂಪಾದಕರ ಅಪೇಕ್ಷೆ”- ಎಂದು ಹೇಳುತ್ತಿದ್ದಂತೆಯೇ ಬರುತ್ತಿದ್ದ ಪ್ರಶ್ನೆ:
“ಇನ್ನೊಬರು ಯಾರು?
“……..’
“ಅವರಿದ್ದರೆ ನನನ್ನು ಬಿಟ್ಟುಬಿಡಿ”
-ಹೀಗೆ ತೀರ್ಪುಗಾರರ ಆಯ್ಕೆಯೂ ಒಮ್ಮೊಮ್ಮೆ ಕಠಿಣವಾಗುತ್ತಿತ್ತು.
ಆದರೆ ಫಲಿತಾಂಶ ಮಾತ್ರ ನಿರ್ವಿವಾದಾತ್ಮಕವಾಗಿರುತ್ತಿತ್ತು.

ದೀಪಾವಳಿ ವಿಶೇಷಾಂಕದ ಕೆಲಸಗಳಲ್ಲಿ ಒಂದೆರಡು ಬಾರಿ ನಾನು ಪೇಚಿಗೆ ಸಿಲುಕಿದ್ದೂ ಉಂಟು. ಟಿಎಸ್ಸಾರ್ ಕಾಲದಲ್ಲಿ ವಿಶೇಷಾಂಕದ ವೈಶಿಷ್ಟ್ಯಗಳು ಮತ್ತು ಯಾರ‍್ಯಾರಿಂದ ಏನೆಲ್ಲ ಬರೆಸುವ ಉದ್ದೇಶವಿದೆ ಎಂಬುದನ್ನು ತಿಳಿಸಿ ಅವರ ಒಪ್ಪಿಗೆ ಪಡೆದುಕೊಳ್ಳುತ್ತಿದ್ದೆವು, ನಂತರ ಆಹ್ವಾನಿತ ಲೇಖನ, ಕಥೆ, ಕವನಗಳ ಇವು ಯಾವುದನ್ನೂ ಅವರ ಪರಿಶೀಲನೆಗೆ ಒಪ್ಪಿಸುವ ಪದ್ಧತಿ ಇರಲಿಲ್ಲ. ಕಥಾ ಸ್ಪರ್ಧೆಯ ತೀರ್ಪುಗಾರರ ಸಭೆಯಲ್ಲಿ ಸಂಪಾದಕರ ಪರವಾಗಿ ʼಸಾಪು’ ಸಂಪಾದಕರೇ ಭಾಗವಹಿಸುತ್ತಿದ್ದರು. ತೀರ್ಪುಗಾರರು ಬಹುಮಾನಕ್ಕೆ ಕಥೆಗಳನ್ನು ಆಯ್ಕೆ ಮಾಡಿ ಬರೆದ ಶಿಫಾರಸುಗಳ ಟಿಪ್ಪಣಿಯೊಂದಿಗೆ ಸಭೆಯ ನಂತರ ಸಂಪಾದಕರೊಂದಿಗೆ ಕಾಫಿಯ ಅನೌಪಚಾರಿಕ ಭೇಟಿ ನಡೆಯುತ್ತಿತ್ತು. ಆಗ ಟಿಎಸ್ಸಾರ್ ಟಿಪ್ಪಣಿಗೆ ಅನುಮೋದನೆಯ ಸಹಿ ಹಾಕುತ್ತಿದ್ದರು.

ಸಿಂಗ್ ಸಾಹೇಬರು ಸಂಪಾದಕರಾಗಿ ಬಂದಾಗ ಇದರಲ್ಲಿ ಕೊಂಚ ಬದಲಾವಣೆಯಾಯಿತು. ಆಹ್ವಾನಿತ ಲೇಖನ/ಕಥೆ/ಕವನಗಳನ್ನು ತಮ್ಮ ಅವಗಾಹನೆಗೆ ತರದೆ ಕಂಪೋಸಿಂಗ್‌ಗೆ ಕಳುಹಿಸಬಾರದೆಂದು ತಾಕೀತು ಮಾಡಿದರು. ಹಾಗೂ ಸ್ಪರ್ಧೆಯ ಕಥೆಗಳನ್ನು ತೀರ್ಪುಗಾರರಿಗೆ ಕಳಹಿಸುವ ಮುನ್ನ ತಮ್ಮ ಗಮನಕ್ಕೆ ತರಬೇಕೆಂದು ಹೇಳಿದರು. ಇವೆಲ್ಲವನ್ನೂ ಸಿಂಗ್ ಅವರು ಓದುತ್ತಿದ್ದರು. ಹಾಗೂ ತೀರ್ಪುಗಾರರ ಸಭೆಯಲ್ಲೂ ಭಾಗವಹಿಸುತಿದ್ದರು.

೧೯೮೭ರಲ್ಲಿರಬೇಕು. ಆ ವರ್ಷ ದೀಪಾವಳಿ ಸಂಚಿಕೆಗೆ ಒಂದು ಕವಿತೆ ಬರೆದುಕೊಡುವಂತೆ ಖ್ಯಾತ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರನ್ನು ಕೇಳಿದ್ದೆವು. ಅವರು ʼಗುಂಡಪ್ಪ ವಿಶ್ವನಾಥ್’ ಕವಿತೆ ಕಳುಹಿಸಿಕೊಟ್ಟರು. ವಿಶ್ವನಾಥರ ಕಲಾತ್ಮಕ ಆಟವನ್ನು ʼಧ್ಯಾನಸ್ಥ’ ಮನೋಭಾವದಿಂದ ನೋಡುವ ಕವಿ, ವಿಶ್ವನಾಥರ ಆಟದ ಕಲಾತ್ಮಕತೆಯನ್ನು ಪ್ರತಿಮಾತ್ಮಕವಾಗಿ ಚಿತ್ರಿಸುವ ವ್ಯಕ್ತಿಚಿತ್ರ ಕಾವ್ಯವಾಗಿತ್ತು ಆ ಕವನ.. ನಾನು ಓದಿ ಖುಷಿಪಟ್ಟು ಸಿಂಗ್ ಅವರಿಗೆ ಕಳುಹಿಸಿಕೊಟ್ಟೆ. ಮರುದಿನ ಸಿಂಗ್ ಅವರಿಂದ ಕರೆಬಂತು. “ಲಕ್ಷ್ಮಣ ರಾವ್ ಕವಿತೆ ಓದಿದಿರಾ? ನಿಮಗೇನಾದರೂ ಅರ್ಥವಾಯಿತೆ? ಎಂದು ಕೇಳಿದರು. ಕವಿತೆಯನ್ನು ಅರ್ಥಮಾಡಿಸುವುದು ಕಷ್ಟದ ಕೆಲಸ. ಅದೊಂದು ಪ್ರತಿಮಾತ್ಮಕ ಕವನ ಸರ್, ಎಂದು ಅರ್ಥಮಾಡಿಸುವ ಪ್ರಯತ್ನ ಮಾಡಿದೆ.

“ಏನು ಪ್ರತಿಮೆಯೋ ಏನೋ…ತುಂಬ ಕ್ಲಿಷ್ಟವಾಗಿದೆ. ನನಗೇನೂ ಅರ್ಥವಾಗಲಿಲ್ಲ. ನನಗೆ ಅರ್ಥವಾಗದ್ದನ್ನ ಓದುಗರ ತಲೆಗೆ ಕಟ್ಟುವುದು ನನಗಿಷ್ಟವಿಲ್ಲ. ಸಾಮಾನ್ಯ ಓದುಗರಿಗೂ ಅರ್ಥವಾಗುವಂಥ ಬೇರೊಂದು ಕವಿತೆ ಬರೆದುಕೊಡುವಂತೆ ಹೇಳಿ” ಎಂದು ಅಪ್ಪಣೆ ಕೊಡಿಸಿದರು. ನನಗೆ ಆಶ್ಚರ್ಯ, ಮುಜುಗರ ಎರಡೂ ಆಯಿತು. ಆಶ್ಚರ್ಯ ಏಕೆಂದರೆ ಸಿಂಗ್ ಅವರಿಗೆ ಕಾವ್ಯ ಸಂವೇದನೆ ಇರಲಿಲ್ಲವೆಂದಲ್ಲ. ಅಡಿಗರ ʼಪ್ರಾರ್ಥನ’ ಕವಿತೆಯನ್ನು ʼಸಾಪು’ ಪ್ರಕಟಿಸಿ ಸುದ್ದಿ ಮಾಡಿದವರು ಅವರು.. ಅದು ಅಶ್ಲೀಲ ಎಂದು ಕೆಲವರ ದೂರಿನ ಮೇರೆ ಸರ್ಕಾರ ಸಮಜಾಯಿಷಿ ಕೇಳಿದಾಗ ಟಿಎಸ್ಸಾರ್ “ಬೇಲೂರಿನ ಶಿಲಾಬಾಲಿಕೆಗಳಿಗೆ ಮೊದಲು ಬಟ್ಟೆ ತೊಡಿಸಿ” ಎಂದು ಸವಾಲು ಹಾಕಿ ಮಡಿವಂತಿಕೆ ವಕ್ತಾರರ ಬಾಯಿಮುಚ್ಚಿಸಿದ್ದು ಈಗ ಇತಿಹಾಸ. ಇಂಥ ಸಿಂಗ್‌ಗೆ  ಬಿ.ಆರ.ಎಲ್. ಕವಿತೆ ಅರ್ಥವಾಗಲಿಲ್ಲ ಅಂದರೆ…. ಲಕ್ಷ್ಮಣ ರಾವ್‌ಗೆ ನಿಮ್ಮ ಕವಿತೆ ಅರ್ಥವಾಗಲ್ಲ ಎಂದು  ಬರೆಯುವುದು ಮುಜುಗರದ ಕೆಲಸವೇ ಆಯಿತು. ಪತ್ರ ಬರೆದು ಸಿಂಗ್ ಅವರ ಕೈಯಲ್ಲೇ ಸಹಿ ಮಾಡಿಸಿದ್ದಾಯಿತು. ಎದುರಿಗೆ ಸಿಕ್ಕಾಗ ಇನ್ನಷ್ಟು ಮುಜುಗರವಾಯಿತು. ಆ ವರ್ಷ ಲಕ್ಷ್ಮಣ ರಾವ್ ಬೇರೊಂದು ಕವಿತೆ ಬರೆದು ಕೂಡಲಿಲ್ಲ.

ಮತ್ತೊಂದು ಪೇಚಿನ ಪ್ರಸಂಗ. ವಿಶೇಷಾಂಕಕ್ಕೆ ಆಹ್ವಾನ ನೀಡಿ ಪತ್ರ ಬರೆದ (ಒಪ್ಪಿಗೆ ಸೂಚಿಸಲು ಅಂತರ್ದೇಶಿಯ ಪತ್ರ ಲಗತ್ತಿಸುತ್ತಿದ್ದೆವು) ಉತ್ತರ ಬರದಿದ್ದಾಗ  ಟೆಲಿಫೋನಿನಲ್ಲೂ ಕೋರುವ ರೂಢಿ ನಮ್ಮಲ್ಲಿತ್ತು. ಒಂದು ವರ್ಷ ಪತ್ರ ಬರೆದ ನಂತರ ಜವಾಬು ಬಾರದೆ ನಾನು ಪೂರ್ಣಚಂದ್ರ ತೇಜಸ್ವಿಯವರಿಗೆ ಫೋನ್ ಮಾಡಿ ‘ಸರ್, ಈ ವರ್ಷದ ದೀಪಾವಳಿ ವೀಶೇಷಾಂಕಕ್ಕೆ ಒಂದು ಕಥೆ ಬರೆದುಕೊಡಿ ಎಂದು ವಿನಂತಿ ಮಾಡಿಕೊಂಡೆ.

“ಆಯಿತು ಬರೆದು ಕೊಡುತ್ತೇನೆ, ನೀವು ೫೦೦೦ ಸಂಭಾವನೆ ಕೊಡುವುದಾದಲ್ಲಿ ಮಾತ್ರ. ಅದಕ್ಕೆ ಕಡಿಮೆಗೆ ನಾನು ಬರೆಯುವುದಿಲ್ಲ.”

ನಾನು ಸ್ತಂಭೀಭೂತನಾದೆ. ನನಗೆ ವಿಶೇಷಾಂಕದ ಲೇಖನ/ಕಥೆಗೆ ೧೦೦೦ಕ್ಕಿಂತ ಹೆಚ್ಚು ಕೊಡುವ ಅಧಿಕಾರವಿರಲಿಲ್ಲ. ಆ ದಿನಗಳಲ್ಲಿ ವಿಶೇಷಾಂಕದ ಬಜೆಟ್ಟೂ ೮-೧೦ ಸಾವಿರದ ಅಸುಪಾಸಿನಲ್ಲಿರುತ್ತಿತ್ತು.

“ತೇಜಸ್ವಿಯವರೇ ಅದೂ….”
“ನೀವು ರಾಗ ಎಳೆಯಬೇಡಿ ರಂಗನಾಥ ರಾವ್. ನಿಮ್ಮ ಪತ್ರಿಕೆಗೆ ಅಷ್ಟು ಕೊಡುವ ಸಾಮರ್ಥ್ಯ ಉಂಟು”
ತೇಜಸ್ವಿಯವರು ಬರೆಯಲಿಲ್ಲ. ಅವರು ಸಂಭಾವನೆ ಕಾರಣಕ್ಕಾಗಿ ಬರೆಯಲಿಲ್ಲವೋ, ಅಥವಾ ಆ ಕಾಲಘಟ್ಟದಲ್ಲಿ ಕೆಲವು ಲೇಖಕರು ʼಪ್ರವಾ’ಗೆ ಬರೆಯಬಾರದು ಎಂಬ ನಿರ್ಣಯ ಕೈಗೊಂಡಿದ್ದರು. ಈ ಕಾರಣಕ್ಕಾಗಿ ಬರೆಯಲಿಲ್ಲವೋ ತಿಳಿಯದು.
ಎಲ್ಲವೂ? ಇಂದಿಗೂ ನನಗೆ ಕಾಡುತ್ತಿರುವ ಪ್ರಶ್ನೆ ಇದು.

ಮತ್ತೊಂದು ಪ್ರಸಂಗ. ಒಂದು ವರ್ಷ ವಿಶೇಷಾಂಕಕ್ಕೆ ವರನಟ ಡಾ.ರಾಜಕುಮಾರ್ ಅವರ ಸಂದರ್ಶನ ಪ್ರಕಟಿಸುವ ನಿರ್ಧಾರವಾಯಿತು. ಅದರಂತೆ ಸಂದರ್ಶನಕ್ಕೆ ದಿನ, ವೇಳೆ ಕೇಳಿ ರಾಜಕುಮಾರ್ ಅವರಿಗೆ ಮನವಿ ಮಾಡಲಾಯಿತು. ಒಂದು ವಾರದ ನಂತರ ನಮಗೆ ಅವರ ಕಡೆಯವರಿಂದ ಪೋನ್ ಬಂತು:

“ಓಂ ಶ್ರೀ ರಾಘವೇಂದ್ರಾಯ ನಮಃ… ಪ್ರಜಾವಾಣಿ ಸಂದರ್ಶನಕ್ಕೆ ಡಾ.ರಾಜಕುಮಾರ್ ಅವರು ಒಪ್ಪಿದ್ದಾರೆ. ಸಂದರ್ಶನಕ್ಕೆ ನಿಮ್ಮಲ್ಲಿ ಸೀನಿಯರ್ ಜರ್ನಲಿಸ್ಟ್ ಆಗಿರುವ ಶ್ರೀ ಬಿ.ಎಂ.ಕೆ.ಯವರನ್ನೇ ಕಳುಹಿಸತಕ್ಕದ್ದು”

ನಾನು ಇದನ್ನು ಸಿಂಗ್ ಅವರಿಗೆ ಮುಟ್ಟಿಸಿ “ಬಿ,ಎಂ.ಕೆ” ಯವರಿಗೇ ಸಂದರ್ಶನ ಮಾಡಲು ಹೇಳಿ ಬಿಡಿ ಸರ್ ಎಂದೆ.‌ ಶ್ರೀ ಬಿ.ಎಂ.ಕೆ. ಅವರಿಗೂ ರಾಜಕುಮಾರ್ ಮತ್ತು ಅವರ ಕುಟುಂಬಕ್ಕೂ ಆಪ್ತ ಸಂಬಂಧವಿತ್ತು. ಗಂಗಾಧರ ಮೊದಲಿಯಾರ್ ಅವರನ್ನು ಡಾ.ರಾಜಕುಮಾರ್ ಅಭಿಮಾನಿಗಳು ಅಪಹರಿಸಿ ಸ್ಥಾನಬದ್ಧತೆಯಲ್ಲಿಟ್ಟಿದ್ದಾಗ ಅವರನ್ನು ಬಂಧನಮುಕ್ತಗೊಳಿಸುವುದರಲ್ಲಿ ಬಿ.ಎಂ.ಕೆ. ಮುಖ್ಯಪಾತ್ರ ವಹಿಸಿದ್ದರು.

ಬಿ.ಎಂ.ಕೆ. ಏನು ಕಾರಣವೋ ಸಂದರ್ಶನ ಮಾಡಲು ಒಪ್ಪಲಿಲಲ್ಲ. ನಾನು ಸಂದರ್ಶನ ಕೇಳಿದಾಗ, ಬಿ.ಎಂ.ಕೆ.ಯವರನ್ನು ಕಳುಹಿಸಿ ಎಂದು ಹೇಳಿದ್ದರಿಂದ ನನಗೆ ಅವಮಾನವಾಗಿತ್ತು. ಅಂದರೆ ನನ್ನ ಪ್ರಾಮಾಣಿಕತೆಯಲ್ಲಿ ಅವರಿಗೆ ಗೌರವವಿಲ್ಲ ಎಂಬುದು ನನಗೆ ಸ್ಪಷ್ಟವಾಗಿತ್ತು. ಹೀಗಾಗಿ ಸಂದರ್ಶನ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಯಾರು ಸಂದರ್ಶನ ಮಾಡಬೇಕು ಎಂಬ ಜಿಜ್ಞಾಸೆಯಲ್ಲೇ ಒಂದು ವಾರ ಕಳೆಯಿತು. ನಂತರ ಒಂದು ದಿನ ಸಿಂಗ್ ಅವರು “ನೀವೇ ಸಂದರ್ಶನ ಮಾಡಬೇಕು’ ಎಂದರು.

“ನಾನು ಅವರಿಗೆ ಅನಪೇಕ್ಷಿತ ವ್ಯಕ್ತಿ. ಈ ಅವಮಾನವನ್ನು ನುಂಗಿಕೊಂಡು ನಾನು ಸಂದರ್ಶನ ಮಾಡುವುದಿಲ್ಲ ಎಂದೆ:”
“ಇಲ್ಲ ನೀವು ಮಾಡಲೇ ಬೇಕು.”

“ಬೇಡ ಸರ್, ಪತ್ರಿಕಾ ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ಆಣತಿ ಮಾಡುವವರಿಗೆ ನಾವು ತಲೆಬಾಗಬೇಕೆ? ಅವರ ಸಂದರ್ಶನ ಇಲ್ಲದೆಯೂ ನಮ್ಮ ವಿಶೇಷ ಸಂಚಿಕೆಯ ಮೌಲ್ಯಕ್ಕೆ ಧಕ್ಕೆಬಾರದು”

“ಸಂಪಾದಕನಾಗಿ ನಾನು ನಿಮಗೆ ಆರ್ಡರ್ ‌ಮಾಡುತ್ತಿದ್ದೇನೆ, ನೀವು ಡಾ. ರಾಜಕುಮಾರ್ ಅವರ ಸಂದರ್ಶನ ಮಾಡಬೇಕು”
ಇದಾದ ಮಾರನೆಯ ದಿನ ಮಧ್ಯಾಹ್ನದ ವೇಳೆ ಟೆಲಿಫೋನ್ ಕರೆ ಬಂತು:
“ಓಂ ಶ್ರೀ ರಾಘವೇಂದ್ರಾಯ ನಮಃ ನೀವು ನಾಳೆ ಬೆಳಗ್ಗೆ ೧೦ಕ್ಕೆ ಸಂದರ್ಶನಕ್ಕೆ ಬರಬಹದು”

December 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

೧ ಪ್ರತಿಕ್ರಿಯೆ

  1. ಸಿ. ಎನ್. ರಾಮಚಂದ್ರನ್

    ಪ್ರಿಯ ಜಿ. ಎನ್. ಆರ್ ಅವರಿಗೆ: ಈ ವಾರದ ನಿಮ್ಮ ಅಂಕಣ ತುಂಬಾ ಕುತೂಹಲಕರವಾಗಿದೆ; ಬೆಂಗಳೂರಿನಿಂದ ದೂರದಲ್ಲಿದ್ದ ನನ್ನಂತಹವರಿಗೆ ಗೊತ್ತಿರದಿದ್ದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುತ್ತದೆ. 50ರ ದಶಕದಲ್ಲಿ ಸುಮಾರು ಮೂರ್ನಾಲ್ಕು ವಾರ ನಡೆದ ಅನಕೃ-ನಿರಂ ಜನ -ದೇವುಡು ಮುಂತಾದವರ ನೇರ ನುಡಿಗಳನ್ನು ಓದುತ್ತಾ (ಆಗ ನಾನು ಮೈಸೂರಿನಲ್ಲಿದ್ದೆ), ಸಂಭ್ರಮಿಸುತ್ತಾ, ಆ ಸಂಚಿಕೆಗಳನ್ನು ಆದಷ್ಟು ಕಾಲ ನನ್ನ ಬಳಿ ಇಟ್ಟುಕೊಂಡಿದ್ದೆ; ನವ್ಯ ಸಾಹಿತ್ಯವನ್ನು ಕುರಿತ ಲೇಖನಗಳನ್ನೂ ತುಂಬಾ ಗಂಭೀರವಾಗಿ ಓದುತ್ತಿದ್ದೆ. ನವ್ಯಕಾವ್ಯದಲ್ಲಿ ಹೇಗೆ ಪ್ರತಿಮೆಗಳ ಮೂಲಕವೇ ಕವಿ ಒಂದು ಅನುಭವ ಹಾಗೂ ವಿಚಾರವನ್ನು ಕಟ್ಟಿಕೊಡುತ್ತಾನೆ ಎಂದು ದೀರ್ಘ ಲೇಖನವನ್ನು ಓದಿದ ನೆನಪು ಈಗಲೂ ಇದೆ. (ಅದರ ಲೇಖಕರು ಯಾರು? ನರಸಿಂಹಮೂರ್ತಿಗಳು?)
    ಆದರೆ, ಮೊಗಳ್ಳಿ ಅವರ ಮೊದಲ ಸುತ್ತಿನಲ್ಲಿ ತಿರಸ್ಕರಿಸಲ್ಪಟ್ಟ ಕಥೆಗೆ ಮೊದಲ ಬಹುಮಾನ ಬಂದುದು, ಪುತಿನ ಅವರ ಗೀತನಾಟಕಗಳನ್ನು ಕುರಿತ ಲೇಖನ, ಇತ್ಯಾದಿ ಗೊತ್ತಿರಲಿಲ್ಲ. ಬಿ ಆರ್ ಎಲ್ ಅವರ ಜಿ. ವಿಶ್ವನಾಥ್ ಅವರ ಬಗ್ಗೆ ಇರುವ ಕವನ ಬಿ ಆರ್ ಎಲ್ ಅವರ ಶ್ರೇಷ್ಠ ಕವನಗಳಲ್ಲಿ ಒಂದು; ಅದನ್ನು ತಿರಸ್ಕರಿಸಿದುದರಿಂದ ಅವರು ಮತ್ತೊಂದು ಕವನವನ್ನು ಕಳಿಸದಿದ್ದುದು ನಿರೀಕ್ಷಿತವೆ; ತೇಜಸ್ವಿ, ಪ್ರಾಯಃ, ಆಗ ತಾನೇ ಅಸ್ತಿತ್ವಕ್ಕೆ ಬಂದಿದ್ದ ಒಕ್ಕೂಟದ ಧೋರಣೆಗೆ ಬದ್ಧರಾಗಿ ಕಥೆ ಕೊಡಲಿಲ್ಲ ಎಂದು ಅನಿಸುತ್ತದೆ. ಒಟ್ಟಿನಲ್ಲಿ ಮತ್ತೊಮ್ಮೆ, ಮಗದೊಮ್ಮೆ ಓದಬಹುದಾದ ಅಂಕಣ. ಅಭಿನಂದನೆಗಳು ಹಾಗೂ ಧನ್ಯವಾದಗಳು. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: