ಫೋಟೋಗ್ರಫಿ ವಿಶ್ವಕಪ್: ಮಿಸ್ ಮಾಡಿಕೊಳ್ಳಬೇಡಿ…

ಶಿವು.ಕೆ. ಇದೇನಿದೂ ಫೋಟೊಗ್ರಫಿಯಲ್ಲಿ ವಿಶ್ವಕಪ್? ಅಂತ ಈ ಕ್ಷಣ ನಿಮಗನ್ನಿಸಿರಬಹುದು. ನಿಮಗೆಲ್ಲರಿಗೂ ಪುಟ್‍ಬಾಲ್ ವಿಶ್ವಕಪ್ [ಫಿಪಾ], ಟೆನಿಸ್‍ನಲ್ಲಿ [ಡೇವಿಸ್ ಕಪ್], ಟೇಬಲ್ ಟೆನ್ನಿಸಿನಲ್ಲಿ ವಿಶ್ವಕಪ್, ಕ್ರಿಕೆಟ್ಟಿನಲ್ಲಂತೂ ಒಂದು ದಿನದ ಪಂದ್ಯಾವಳಿಯ ವಿಶ್ವಕಪ್ ಅಲ್ಲದೇ, ೨೦-೨೦ ವಿಶ್ವಕಪ್ ಕೂಡ ನಡೆಯುವುದು ಪುಟ್ಟ ಮಕ್ಕಳಿಗೂ ಗೊತ್ತು. ಹಾಗಾದರೆ ಈ ಫೋಟೊಗ್ರಫಿ ವಿಶ್ವಕಪ್ ಅಂದರೇನು? ಅದು ಹೇಗಿರುತ್ತದೆ? ತಿಳಿದುಕೊಳ್ಳುವ ಕುತೂಹಲವೇ! ಬನ್ನಿ ತಿಳಿದುಕೊಳ್ಳೋಣ. ಬೆಂಗಳೂರಿನಲ್ಲಿ ಫೋಟೊಗ್ರಫಿಯ ವಿಶ್ವಕಪ್ ನಡೆಯುತ್ತದೆ ಎನ್ನುವ ವಿಚಾರವೇ ನನಗೆ ಒಂಥರ ಥ್ರಿಲ್ ಅನ್ನಿಸಿತ್ತು. ನಾನು ಒಬ್ಬ ಛಾಯಾಗ್ರಾಹಕನಾಗಿ ವಿದೇಶಗಳಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಫೋಟೊಗ್ರಫಿ ವಿಶ್ವಕಪ್ ಸ್ಪರ್ಧೆಗಳನ್ನು ಓದಿ ತಿಳಿದುಕೊಳ್ಳುತ್ತಿದ್ದೆ. ೨೦೦೬ರಲ್ಲಿ ಯುರೋಪಿನ ಲಕ್ಸಂಬರ್ಗ್‍ನಲ್ಲಿ ನಡೆದ ಪಿಕ್ಟೋರಿಯಲ್ ವಿಶ್ವಕಪ್ ಫೋಟೊಗ್ರಫಿಯಲ್ಲಿ ನಮ್ಮ ಭಾರತಕ್ಕೆ ಚಿನ್ನದ ಪದಕ ಲಭಿಸಿತ್ತು. ಅಲ್ಲಿ ಭಾಗವಹಿಸಿದ್ದ ಹತ್ತು ಚಿತ್ರಗಳಲ್ಲಿ ನನ್ನ “ಮೀನಿನ ಬಲೆ ಎಸೆಯುವ” ಚಿತ್ರವೂ ಸ್ಪರ್ಧಿಸಿದ್ದು ನನಗೆ ಮರೆಯಲಾಗದ ಅನುಭವ. “ಇಂಟರ್‌ನ್ಯಾಷನಲ್ ಫೆಡರೇಷನ್ ಅಫ್ ಫೋಟೊಗ್ರಫಿಕ್ ಆರ್ಟ್” [ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಲ ಆರ್ಟ್ ಫೋಟೊಗ್ರಫಿಕ್”] ಸಂಸ್ಥೆಯವರು ಎರಡು ವರ್ಷಕ್ಕೊಮ್ಮೆ ಫೋಟೊಗ್ರಫಿ ವಿಶ್ವಕಪ್ಪನ್ನು ವಿವಿದ ದೇಶಗಳಲ್ಲಿ ನಡೆಸುತ್ತಾರೆ. ಇದರ ಮುಖ್ಯ ಕಛೇರಿ ಈಗ ಪ್ಯಾರಿಸ್‍ನಲ್ಲಿದೆ. ವಿಶ್ವದ ಫೋಟೊಗ್ರಫಿಯ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ಯುನೆಸ್ಕೋದಿಂದ ಅಧಿಕೃತವಾಗಿ ಮನ್ನಣೆ ಪಡೆದುಕೊಂಡ ಏಕೈಕ ಫೋಟೊಗ್ರಫಿ ಆರ್ಗನೈಸೇಷನ್ ಇದು. ವಿಶ್ವದ ಐದು ಖಂಡಗಳ ೮೫ಕ್ಕೂ ಹೆಚ್ಚು ರಾಷ್ಟ್ರಗಳ ಫೋಟೊಗ್ರಫಿ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಮತ್ತು ಹತ್ತು ಲಕ್ಷಕ್ಕೂ ಹೆಚ್ಚು ಛಾಯಾಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ವಿಶ್ವಕಪ್ ಅತಿಥ್ಯವನ್ನು ವಹಿಸಿಕೊಂಡ ದೇಶಕ್ಕೆ ನಾವು ಸ್ಪರ್ಧೆಗಾಗಿ ಫೋಟೋಗಳನ್ನು ಕಳಿಸಬೇಕಲ್ಲವೇ? ಅದು ಹೇಗೆ ಕಳುಹಿಸಬಹುದು ಎನ್ನುವುದರ ಎಲ್ಲಾ ಹಂತಗಳನ್ನು ತಿಳಿದುಕೊಳ್ಳೋಣ. ೨೦೧೦ರಲ್ಲಿ ನಮ್ಮ ಭಾರತ ದೇಶಕ್ಕೆ ನೇಚರ್ ವಿಭಾಗದಲ್ಲಿ ವಿಶ್ವಕಪ್ ಫೋಟೊಗ್ರಫಿ ಸ್ಪರ್ಧೆಯನ್ನು ನಡೆಸುವ ಅವಕಾಶ ಸಿಕ್ಕಿದೆ. ಅದರ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ವಹಣೆಯನ್ನು ಪ್ರತಿಷ್ಠಿತ ಬೆಂಗಳೂರಿನ ಯೂತ್ ಫೋಟೊಗ್ರಫಿಕ್ ಸೊಸೈಟಿ ವಹಿಸಿಕೊಂಡಿದೆ. ಮೊದಲಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಛಾಯಾಗ್ರಾಹಕರು ತಾವು ಕ್ಲಿಕ್ಕಿಸಿದ ಅತ್ಯುತ್ತಮ ನೇಚರ್ ವಿಭಾಗದ ಛಾಯಾಚಿತ್ರಗಳನ್ನು[ಒಬ್ಬರು ಎಷ್ಟು ಚಿತ್ರಗಳನ್ನಾದರೂ ಕಳಿಸಬಹುದು ಆದ್ರೆ ಅತ್ಯುತ್ತಮವಾಗಿರಲೇಬೇಕು] ಈ ಸ್ಪರ್ಧೆಯಲ್ಲಿ ನಮ್ಮ ದೇಶದ ಹೆಸರಿನಲ್ಲಿ ಭಾಗವಹಿಸುವ ಫೋಟೊಗ್ರಫಿ ಸಂಸ್ಥೆಗೆ ಕಳಿಸಬೇಕು. ಹೀಗೆ ದೇಶದಾದ್ಯಂತ ಫಿಯಪ್ ಸದಸ್ಯತ್ಯ ಹೊಂದಿರುವ ಫೋಟೊಗ್ರಫಿ[೨೫ಕ್ಕೂ ಹೆಚ್ಚು ಸಂಸ್ಥೆಗಳಿವೆ]ಸಂಸ್ಥೆಗಳ ಎಲ್ಲಾ ಸದಸ್ಯರೂ ಹೀಗೆ ತಮ್ಮ ಅತ್ಯುತ್ತಮ ನೇಚರ್ ವಿಭಾಗದ ಛಾಯಾಚಿತ್ರಗಳನ್ನು ಕಳಿಸುತ್ತಾರೆ. ದೇಶದ ಎಲ್ಲಾ ಸದಸ್ಯತ್ವ ಹೊಂದಿದ ಒಂದೊಂದು ಸಂಸ್ಥೆಯಿಂದಲೂ ನೂರಾರು ಚಿತ್ರಗಳು ಸೇರಿ ನಮ್ಮ ದೇಶವನ್ನು ಪ್ರತಿನಿಧಿಸುವ ಸಂಸ್ಥೆಗೆ ಸಾವಿರಾರು ಛಾಯಾಚಿತ್ರಗಳು ಬರುತ್ತವೆ. ಅಷ್ಟು ಚಿತ್ರಗಳಲ್ಲಿ ಒಂದು ದೇಶವನ್ನು ಪ್ರತಿನಿಧಿಸಲು ಹತ್ತು ಚಿತ್ರಗಳಿಗೆ ಮಾತ್ರ ಅವಕಾಶ ಮತ್ತು ಒಬ್ಬ ಛಾಯಾಗ್ರಾಹಕನ ಒಂದು ಚಿತ್ರ ಮಾತ್ರ ಆಯ್ಕೆಯಾಗಲು ಸಾಧ್ಯ. ಇವೆಲ್ಲಾ ಚಿತ್ರಗಳಲ್ಲಿ ನಮ್ಮ ದೇಶಕ್ಕೆ ವಿಶ್ವಕಪ್ ಗೆದ್ದು ಕೊಡುವ ಹತ್ತು ಅತ್ಯುತ್ತಮ ಚಿತ್ರಗಳನ್ನು ಆರಿಸುವ ಜವಾಬ್ದಾರಿ ಈಗ ಆ ಸಂಸ್ಥೆಯ ಮೇಲಿರುತ್ತದೆ. ನಮ್ಮ ಶಾಲಾ-ಕಾಲೇಜು, ಗ್ರಾಮೀಣ ಮತ್ತು ನಗರ ಮಟ್ಟದಲ್ಲಿ ಪ್ರತಿನಿಧಿಸಿದ ನಮ್ಮ ಕ್ರಿಕೆಟ್ ಪ್ರತಿಭೆಗಳನ್ನು ರಾಜ್ಯಮಟ್ಟದಲ್ಲಿ ಆಯ್ಕೆ ಮಾಡಿ ಅದರೊಳಗೆ ರಾಷ್ಟ್ರಮಟ್ಟಕ್ಕೆ ನಮ್ಮ ಸಚಿನ್, ದಾವಿಡ್, ಸೆಹ್ವಾಗ್, ದೋನಿ……………..ಹನ್ನೊಂದು ಜನರು ಮಾತ್ರ ಆಯ್ಕೆಯಾದಂತೆ ಇಲ್ಲಿಯೂ ಅದೇ ರೀತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ವಿಶ್ವಕಪ್‍ನಲ್ಲಿ ನಿಮ್ಮ ಒಂದು ಚಿತ್ರವೂ ಸ್ಪರ್ಧೆಗೆ ಆಯ್ಕೆಯಾಗಬೇಕಾದರೆ ಅದರಲ್ಲಿ ನಿಮ್ಮ ಸಾಧನೆ, ಶ್ರಮ ಎಂಥದಿರಬೇಕೆನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದು. ಆಯ್ಕೆಯಾಗುವ ಚಿತ್ರಗಳೆಲ್ಲಾ ಅತ್ಯುತ್ತಮವೆಂದುಕೊಂಡರೂ ತಂಡರೂಪದಲ್ಲಿ ಪದಕ ಗೆಲ್ಲಬೇಕಲ್ಲವೇ! ಕ್ರಿಕೆಟ್ಟಿನಲ್ಲಿ ಅತ್ಯುತ್ತಮ ನಾಯಕ ದೋನಿ ಇದ್ದರೆ ಸಾಲದು. ಪಂದ್ಯ ಗೆಲ್ಲಲೂ ಅತ್ಯುತ್ತಮ ೫ ಬ್ಯಾಟ್ಸ್‍ಮೆನ್‍ಗಳು, ಮೂವರು ವೇಗದ ಮತ್ತು ೧-೨ ಸ್ಪಿನ್ ಬೌಲರುಗಳು, ಉತ್ತಮ ಮತ್ತು ಅನುಭವವುಳ್ಳ ವಿಕೆಟ್ ಕೀಪರುಗಳು, ಅವರೊಳಗೆ ಪ್ರತಿಭಾನ್ವಿತ ಫೀಲ್ಡರುಗಳು, ಆಲ್‍ರೌಂಡರುಗಳೆಲ್ಲಾ ಇದ್ದಲ್ಲಿ ಒಂದು ಪ್ರತಿಭಾನ್ವಿತ ಸಮತೋಲನದ ತಂಡವೆನಿಸಿಕೊಳ್ಳುವಂತೆ ಈ ಫೋಟೊಗ್ರಫಿ ಸ್ಪರ್ಧೆಯಲ್ಲೂ ಇದೇ ರೀತಿಯಲ್ಲಿ ಸಮತೋಲನ ಹೊಂದಿದ ಹತ್ತು ಚಿತ್ರಗಳಿರಬೇಕಾಗುತ್ತದೆ. ಸೆಹ್ವಾಗ್ ನೂರು ಬಾಲಿನಲ್ಲಿ ಇನ್ನೂರು ಹೊಡೆದಾಗ ನಾವು ಮೆಚ್ಚಿ ಕೊಂಡಾಡಿದಂತೆ, ಇಲ್ಲಿ ಒಂದು ಛಾಯಾಚಿತ್ರವೂ ತನ್ನನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕನ ಹಲವು ವರ್ಷಗಳ ಸಾಧನೆ, ಪ್ರತಿಭೆ, ಕ್ಲಿಕ್ಕಿಸುವ ಸಮಯದಲ್ಲಿನ ತ್ವರಿತ ತಾಂತ್ರಿಕತೆ, ಆ ಸಮಯದಲ್ಲಿ ಆತನ ಮನಸ್ಥಿತಿ, ಎದುರಿಸಿದ ಗಂಭೀರ ಅಪಾಯಗಳು, ಆತನ ಕಾಯುವಿಕೆಯ ತನ್ಮಯತೆ, ಇತ್ಯಾದಿಗಳನ್ನು ಕ್ಷಣಮಾತ್ರದಲ್ಲಿ ತೀರ್ಪುಗಾರರ ಮನಸ್ಸಿನಲ್ಲಿ ಮೂಡಿಸಬೇಕು. ಇದರ ನಂತರದ ಹಂತವೇ ಕೋಹರೆನ್ಸ್ ಇದನ್ನು ಕನ್ನಡದಲ್ಲಿ ಸಮತೋಲನ, ವಿವಿಧ್ಯತೆಯಲ್ಲಿ ಏಕತೆ ಎನ್ನುತ್ತಾರೆ. ಅದು ಹೇಗೆ ಎಂದು ತಿಳಿದುಕೊಳ್ಳೋಣ. ನೇಚರ್ ವಿಭಾಗದಲ್ಲಿ ಲ್ಯಾಂಡ್‍ಸ್ಕೇಪ್, ಪಕ್ಷಿಗಳು, ಕಾಡುಪ್ರಾಣಿಗಳು, ಕೀಟಲೋಕ, ಸಸ್ಯಗಳು,………..ಹೀಗೆ ಹತ್ತಾರು ವಿಭಾಗಗಳಿವೆ. ಇಷ್ಟು ವಿಭಾಗಗಳಲ್ಲಿ ನಾವು ಸ್ಪರ್ಧೆಗೆ ಕಳಿಸಲು ಒಂದು ವಿಭಾಗವನ್ನು ಮಾತ್ರ ಆಯ್ಕೆಮಾಡಿಕೊಳ್ಳಬೇಕು. ಉದಾಹರಣೆಗೆ ಕಾಡುಪಾಣಿಗಳ ಚಿತ್ರಗಳನ್ನು ಆಯ್ಕೆ ಮಾಡಿಕೊಂಡರೆ ಹತ್ತು ಚಿತ್ರಗಳು ಕಾಡುಪ್ರಾಣಿಗಳದೇ ಆಗಿರಬೇಕು. ಅದರಲ್ಲಿ ಚಿಟ್ಟೆಗಳ, ಪಕ್ಷಿಗಳ, ಪ್ರಕೃತಿಯ ಚಿತ್ರಗಳು ಇರುವಂತಿಲ್ಲ. ಬೇಕಾದರೆ ಹುಲಿ, ಚಿರತೆ, ಸಿಂಹ, ತೋಳ, ಕಾಡುಬೆಕ್ಕು, ಕಾಡುನಾಯಿ,………..ಹೀಗೆ ಹತ್ತು ಬಗೆಯವು ಇದ್ದರೂ ಅವೆಲ್ಲಾ ಕಾಡುಪ್ರಾಣಿಗಳೇ ಆಗಿರಬೇಕು. ಹಾಗೆ ಹದ್ದು, ಗಿಡುಗ, ಮೈನಾ, ರಣಹದ್ದು, ಕಿಂಗ್‍ಫಿಷರ್, ಹಾರ್ನಬಿಲ್………..ಹತ್ತು ವೈವಿಧ್ಯಮಯ ಪಕ್ಷಿಗಳಿದ್ದರೂ ಅವುಗಳ ನಡುವೆ ಪ್ರಾಣಿಗಳ, ಕೀಟಗಳ ಚಿತ್ರಗಳು ಸೇರಿರಬಾರದು. ಒಂದು ಹದ್ದು ತಾನು ಹಿಡಿದು ತಂದ ಹಾವನ್ನು ಬಾಯಲ್ಲಿ ಕಚ್ಚಿಕೊಂಡು ಕುಳಿತಿದ್ದರೇ ಉಳಿದ ಎಲ್ಲಾ ಒಂಬತ್ತು ಚಿತ್ರಗಳಲ್ಲಿರುವ ವಿವಿಧ ಹಕ್ಕಿಗಳೂ ಕೂಡ ತಮ್ಮ ಬಾಯಲ್ಲಿ ತಮಗಿಷ್ಟವಾದ ಆಹಾರವನ್ನು ಹಿಡಿದು ತಂದ ಚಿತ್ರಗಳಿರಬೇಕು. ಮತ್ತೆ ಎಲ್ಲಾ ಚಿತ್ರಗಳ ಹಿನ್ನೆಲೆ ಬಣ್ಣಗಳು ಒಂದೇ ತೆರನಾಗಿದ್ದಲ್ಲಿ ತಂಡದ ಅಂಕ ಹೆಚ್ಚಾಗುತ್ತದೆ. ಮತ್ತೆ ಕ್ಲಿಕ್ಕಿಸುವಾಗಿನ ತಾಂತ್ರಿಕತೆ ಒಂದೇ ಆಗಿದ್ದಲ್ಲಿ ಅದೂ ತಂಡದ ಅಂಕಗಳು ಹೆಚ್ಚಿಸುವಲ್ಲಿ ಸಹಾಯಮಾಡುತ್ತವೆ. ಹೀಗೆ “ಚಲನೆಯಲ್ಲಿರುವ ಎರಡು ಪಕ್ಷಿಗಳು” “ಕಾಡುಪ್ರಾಣಿಯ ಬಾಯಲ್ಲಿ ಬೇಟೆ” “ಚಿಟ್ಟೆಗಳ ಪ್ರಪಂಚ” ಹಿಮ ಆವರಿಸಿದ ಬೆಟ್ಟಗುಡ್ಡಗಳು, ಹೀಗೇ ನೂರಾರು ವಿಭಾಗದಲ್ಲಿ ಫೋಟೊಗಳನ್ನು ಕಳಿಸಬಹುದು. ಇದೆಲ್ಲವೂ ಪ್ರಿಂಟ್ ವಿಭಾಗದ ಸ್ಪರ್ಧೆಯಾಯಿತು. ಮುಂದುವರಿದ ತಂತ್ರಜ್ಞಾನದ ನಿಟ್ಟಿನಲ್ಲಿ ಹೊಸದಾಗಿ ಸೇರಿಕೊಂಡ ಮತ್ತೊಂದು ವಿಭಾಗವೆಂದರೆ ಪ್ರೊಜೆಕ್ಟೆಡ್ ಇಮೇಜ್ ವಿಭಾಗ. ಇದರಲ್ಲಿ ಛಾಯಾಚಿತ್ರಗಳನ್ನು ಸಿಡಿಗಳಲ್ಲಿ ಸಾಪ್ಟ್ ಕಾಪಿಯಾಗಿ ಕಳಿಸಬೇಕು. ಇದಕ್ಕೂ ಪ್ರಿಂಟ್ ವಿಭಾಗದ ನಿಯಮಗಳೇ ಅನ್ವಯವಾದರೂ ಇದರಲ್ಲಿ ಇಪ್ಪತ್ತು ಚಿತ್ರಗಳು ಸ್ಪರ್ಧೆಗೆ ಭಾಗವಹಿಸುವುದಕ್ಕೆ ಅವಕಾಶ. ಹಾಗೆ ಒಬ್ಬ ಛಾಯಾಗ್ರಾಹಕನಿಗೆ ಎರಡು ಚಿತ್ರಗಳನ್ನು ಸ್ಪರ್ಧೆಗೆ ಕೊಡಲು ಅವಕಾಶ. ಇಂಥ ಒಂದು ವಿಶ್ವಕಪ್ ಸ್ಪರ್ಧೆಯನ್ನು ಫೆಡರೇಷನ್ ಅಪ್ ಇಂಡಿಯನ್ ಫೋಟೊಗ್ರಫಿ ಸಂಸ್ಥೆಯ ವತಿಯಿಂದ ನಮ್ಮ ಬೆಂಗಳೂರಿನ ಪ್ರತಿಷ್ಟಿತ ಫೋಟೊಗ್ರಫಿ ಸಂಸ್ಥೆಯಾದ “ಯೂತ್ ಫೋಟೊಗ್ರಫಿ ಸೊಸೈಟಿ”ಗೆ ನಡೆಸುವ ಅವಕಾಶ ಸಿಕ್ಕಿತ್ತು. ವಿಶ್ವದಾದ್ಯಂತ ೩೨ ದೇಶಗಳ ೫೭೦ ಛಾಯಾಗ್ರಾಹಕರ ೮೫೦ಕ್ಕೂ ಹೆಚ್ಚು ಪ್ರಿಂಟ್ ಮತ್ತು ಸಾಪ್ಟ್‍ಕಾಪಿಯಲ್ಲಿನ ಛಾಯಾಚಿತ್ರಗಳು ಫೈನಲ್ ಅಂತಕ್ಕೆ ಆಯ್ಕೆಯಾಗಿದ್ದವು. ಈ ಸ್ಪರ್ಧೆಗೆ ತೀರ್ಪುಗಾರರಾಗಿ ಸೌತ್ ಆಫ್ರಿಕಾದಿಂದ ಜಿಲ್ ಸ್ನೀಸ್ಬೆ ಇಎಸ್‍ಎಫ್‍ಐಎಪಿ, ಪ್ರಾನ್ಸಿನಿಂದ ಜಾಕಿ ಮಾರ್ಟಿನ್ ಇಎಫ್‍ಐಅಪಿ, ಇಟಲಿಯಿಂದ ರೆಕಾರ್ಡೋ ಬುಸಿ ಎಮ್‍ಎಫ್‍ಐಎಪಿ, ನಮ್ಮ ಭಾರತ ದೇಶದಿಂದ ಬೆಂಗಳೂರಿನ ಖ್ಯಾತ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ ಎಮ್‍ಎಫ್‍ಐಎಪಿ, ಟಿ.ಎನ್.ಎ.ಪೆರುಮಾಳ್ ಎಮ್‍ಎಫ್‍ಐಎಪಿ. ಆಯ್ಕೆಯಾಗಿದ್ದರು. ಸೆಪ್ಟಂಬರ್ ೧೦ ಮತ್ತು ೧೧ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟಲಿನಲ್ಲಿ ಸ್ಪರ್ಧೆಯ ತೀರ್ಪುಗಾರಿಕೆ ನಡೆಯಿತು. ಪ್ರಿಂಟ್ ವಿಭಾಗದಲ್ಲಿ ಇಟಲಿ ಕೂದಲೆಳೆಯ ಅಂತರದಲ್ಲಿ ವಿಶ್ವಕಪ್ ಗೆದ್ದರೆ, ನಮ್ಮ ಭಾರತ ಚಿನ್ನದ ಪದಕ, ಪ್ರಾನ್ಸಿಗೆ ಬೆಳ್ಳಿ ಪದಕ, ಸ್ಕಾಟ್‍ಲೆಂಡಿಗೆ ಕಂಚು ಲಭಿಸಿತು. ನಂತರ ಉಳಿದ ಆರು ಸ್ಥಾನಗಳನ್ನು ಸೌತ್ ಆಫ್ರಿಕ, ಐರ್‌ಲ್ಯಾಂಡ್, ಟರ್ಕಿ, ಸ್ಯಾನ್ ಮೆರಿನೋ, ಬೆಲ್ಜಿಯಂ, ಆಸ್ಟ್ರಿಯ ಪಡೆದವು. ಇನ್ನೂ ಪ್ರೊಜೆಕ್ಟೆಡ್ ಇಮೇಜ್ ವಿಭಾಗದಲ್ಲಿ ಭಾರತ ವಿಶ್ವಕಪ್ ಗಳಿಸಿದರೆ, ಚಿನ್ನದ ಪದಕವನ್ನು ಇಟಲಿ ಗೆದ್ದಿತು. ಇಲ್ಲೂ ಕೂಡ ಕೂದಲೆಳೆಯ ಅಂತರ ಉತ್ತಮ ಸ್ಪರ್ಧೆ ಏರ್ಪಟ್ಟಿತ್ತು. ಮೂರನೆ ಸ್ಥಾನದಲ್ಲಿ ಸೌತ್ ಅಫ್ರಿಕಾಗೆ ಬೆಳ್ಳಿ ಪದಕ, ನಾಲ್ಕನೇ ಸ್ಥಾನದ ಪ್ರಾನ್ಸಿಗೆ ಕಂಚು ಲಭಿಸಿತು. ಉಳಿದ ಆರು ಸ್ಥಾನಗಳು ಕ್ರಮವಾಗಿ ಸ್ಕಾಟ್‍ಲ್ಯಾಂಡ್, ಆಷ್ಟ್ರೀಯ, ಜರ್ಮನಿ, ಐರ್‌ಲ್ಯಾಂಡ್, ಟರ್ಕಿ, ಮತ್ತು ಹತ್ತನೇ ಸ್ಥಾನವನ್ನು ಫಿನ್‍ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್ ಹಂಚಿಕೊಂಡವು. ನೇಚರ್ ಫೋಟೊಗ್ರಫಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಭಾರತ ಬೇರೆ ದೇಶಗಳನ್ನು ಮೀರಿಸಿ ವಿಶ್ವಕಪ್ ಮತ್ತು ಪದಕಗಳನ್ನು ಗೆಲ್ಲುತ್ತಿದೆ! ನಮ್ಮ ದೇಶದಿಂದಲೂ ಉತ್ತಮ ನೇಚರ್ ಛಾಯಾಗ್ರಾಹಕರು ಬಹುಮಾನ ಗಳಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ವೈಯಕ್ತಿಕ ವಿಭಾಗದಲ್ಲಿ ಪ್ರಾನ್ಸಿನ ಆಲ್ಬರ್ಟ್ ಫರ್ನಾಂಡ್ ತಮ್ಮ ಚಿತ್ರವಾದ “ಡ್ಯಾನ್ಸಿಂಗ್ ಬರ್ಡ್ಸ್” ಚಿತ್ರಕ್ಕೆ ಚಿನ್ನದ ಪದಕ, ಬೈಲೋರಷ್ಯಾದ ಸಾಯಿರಿಯಾ ಗ್ರೇಜ್ ತಮ್ಮ “ಹಾರೆ” ಎನ್ನುವ ಕಾಡು ಪ್ರಾಣಿಯ ಚಿತ್ರಕ್ಕೆ ಹಾಗು ಭಾರತದ ಬಾಬಿ ನೋಬಿಸ್ ತಮ್ಮ “ಬೇಟೆಯೊಂದಿಗೆ ಚಿರತೆ” ಚಿತ್ರಕ್ಕೆ ಬೆಳ್ಳಿಯ ಪದಕ, ಭಾರತದ ಮಂದಣ್ಣ ಕೆ.ಎ. ಬೈಲೋರಷ್ಯಾದ ಸಿಯಾಗೆಜ್ ಪ್ಲೆಕೆವಿಚ್, ಸೆರ್ಬಿಯಾದ ಲಾಡನೋವಿಕ್ ಡಾರಿಂಕ ಕಂಚಿನ ಪದಕಗಳನ್ನು ಪಡೆದರು. ಪ್ರೊಜೆಕ್ಟೆಡ್ ಇಮೇಜ್ ವಿಭಾಗದಲ್ಲಿ ಇಟಲಿಯ ಬಿಯಾಂಚೇಡಿ ಪ್ಲಾವಿಯೋ ತಮ್ಮ ಚಿತ್ರ “ಅಲ್ಬೆನೆಲ್ಲಾ” ಕ್ಕೆ ಚಿನ್ನದ ಪದಕ, ಪ್ರಾನ್ಸಿನ ಮ್ಯಾಗ್ನಾಲ್ಡೋ ಅಲಿಸ್ಟೇರ್ ತಮ್ಮ ಚಿತ್ರ “ಲಿಂಕ್ ಡಿ ಯುರೋಪ್” ಚಿತ್ರಕ್ಕೆ ಬೆಳ್ಳಿಪದಕ, ಬೋಸ್ನಿಯಾ ಅರ್ಜೆಗೋವಿನಾದ ಸ್ಲಿಜೀವ್ ಹುಸೇನ್ ತಮ್ಮ ಚಿತ್ರ “ಒನ್ ಇಸ್ ಎಕ್ಸಸೀವ್” ಚಿತ್ರಕ್ಕೆ ಕಂಚಿನ ಪದಕ ಪಡೆದರು. ಇದಲ್ಲದೇ ಕೆಲವು ವೈಯಕ್ತಿಕ ಪ್ರಶಸ್ತಿಗಳ ವಿವರ ಹೀಗಿವೆ. ಅತ್ಯುತ್ತಮ ಕಾಡುಪ್ರಾಣಿ ಚಿತ್ರ: “ಲೆಟ್ ಮಿ ಟ್ರೈ” ಶ್ರೀಲಂಕಾದ ಬಂಡುಗುಣರತ್ನೆ ಅತ್ಯುತ್ತಮ ಪಕ್ಷಿ ಚಿತ್ರ : “ಮರಬು” ಇಟಲಿಯ ಬಾರ್ತಲೋನಿ ರಾಬರ್ಟೋ ಅತ್ಯುತ್ತಮ ಲ್ಯಾಂಡ್‍ಸ್ಕೇಪ್ ಚಿತ್ರ: “ರಸ್” ಸೌತ್ ಅಫ್ರಿಕಾದ ಕೋಬಸ್ ಪಿಟ್ಜಿಯೇಟರ್ ಅತ್ಯುತ್ತಮ ಮ್ಯಾಕ್ರೋ ಕೀಟ ಚಿತ್ರ : “ಹುಳು” ಟರ್ಕಿಯ ಕಾಕಿರ್ ಮೆಹಮತ್ ಅತ್ಯುತ್ತಮ ವಾತಾವರಣದ ಭಾವನೆಯನ್ನು ಮೂಡಿಸುವ ಕಾಡಿನ ಚಿತ್ರ: “ಚಳಿಗಾಲದ ಬೆಳಕು” ಚಿತ್ರಕ್ಕಾಗಿ ಫಿನ್‍ಲ್ಯಾಂಡಿನ ಇಲ್ಕಾ ಇಸ್ಕನೆನ್ ಪ್ರಶಸ್ತಿ ಪಡೆದರು. ಎಲ್ಲಾ ವಿಭಾಗದಲ್ಲೂ ಉತ್ತಮ ಅಂಕಗಳಿಸಿ ಸಮಗ್ರ ಪ್ರದರ್ಶನವನ್ನು ತೋರಿದ ಇಟಲಿ ೨೦೧೦ನೇ ಮರ್ಸಿಡೀಸ್ ಬೆಂಜ್ ಪೋಟೊಗ್ರಫಿ ವಿಶ್ವಕಪನ್ನು ಗೆದ್ದುಕೊಂಡಿತು. ವಿಶ್ವಕಪ್ ಫೋಟೊಗ್ರಫಿಯ ಉದ್ಘಾಟನೆ ಕಾರ್ಯಕ್ರಮ ಆಕ್ಟೋಬರ್ ಏಳರಂದು ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ. ಬಹುಮಾನ ವಿಜೇತ ಚಿತ್ರಗಳಲ್ಲದೇ ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನವೂ ಆಕ್ಟೋಬರ್ ಏಳರಿಂದ ಹನ್ನೊಂದರವರೆಗೆ ನಡೆಯಲಿದೆ. ವನ್ಯ ಜೀವಿ ಆಸಕ್ತರೂ ಮತ್ತು ಛಾಯಾಭಿಮಾನಿಗಳಿಗೆಲ್ಲಾ ಅತ್ಯುತ್ತಮ ಚಿತ್ರಗಳನ್ನು ನೋಡುವ ಅವಕಾಶ. ಯಶಸ್ವಿಯಾಗಿ ಫೋಟೊಗ್ರಫಿ ವಿಶ್ವಕಪ್ ಕಾರ್ಯಕ್ರಮವನ್ನು ನಡೆಸುತ್ತಿರುವುದರಿಂದ ನಮ್ಮ ಬೆಂಗಳೂರಿನ ಯೂತ್ ಫೋಟೊಗ್ರಫಿ ಸಂಸ್ಥೆಗೆ ಮತ್ತೊಂದು ಹಿರಿಮೆಯ ಗರಿ.
]]>

‍ಲೇಖಕರು avadhi

October 3, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿರಾಷ್ಟ್ರೀಯ ನಾಟಕೋತ್ಸವ - 2020 ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This