ವಿಶ್ವನಾಥರ ಪುಸ್ತಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಗಳು…

gali1.gif 

“ಗಾಳಿ ಬೆಳಕು”

ನಟರಾಜ್ ಹುಳಿಯಾರ್

ವೃತ್ತಿ ರಾಜಕಾರಣಿ ಎಚ್ ವಿಶ್ವನಾಥ್ ಬರೆದ “ಹಳ್ಳಿ ಹಕ್ಕಿಯ ಹಾಡು” ಎಂಬ ಪುಸ್ತಕ ಕೊಂಚ ಧೂಳೆಬ್ಬಿಸತೊಡಗಿದೆ. ಈ ಪುಸ್ತಕ ಕೆಲವೆಡೆ ಪ್ರಾಮಾಣಿಕವಾಗಿದೆ; ಇನ್ನು ಕೆಲವೆಡೆ ಉತ್ಪ್ರೇಕ್ಷಾಲಂಕಾರಗಳಿಂದ ತುಂಬಿದೆ. ಘಟನೆಗಳನ್ನು ತಮಾಷೆಯಾಗಿ ವರ್ಣಿಸಬಲ್ಲ ವಿಶ್ವನಾಥರ ತುಂಟತನ ಕೂಡ ಈ ಪುಸ್ತಕದಲ್ಲಿ ಎದ್ದು ಕಾಣುತ್ತದೆ. ಆದರೆ ವಿಶ್ವನಾಥ್ ತಮ್ಮನ್ನು ತಾವು ಗೇಲಿ ಮಾಡಿಕೊಂಡಾಗ ಮಾತ್ರ ತಮ್ಮ ಪಬ್ಲಿಕ್ ಇಮೇಜಿಗೆ ಹೆಚ್ಚು ಧಕ್ಕೆಯಾಗದ ಹಾಗೆ ಗೇಲಿ ಮಾಡಿಕೊಂಡಿದ್ದಾರೆ. ಎಸ್ ಎಂ ಕೃಷ್ಣರಂಥ ಕೆಲವು ರಾಜಕೀಯ ನಾಯಕರನ್ನು ತುಸು ಹೆಚ್ಚಾಗಿಯೇ ಹೊಗಳಿದ್ದಾರೆ. ಅವರ ಅಷ್ಟೆಲ್ಲ ಹೊಗಳೊಕೆಗೆ ಅರ್ಹರಾಗಿರುವವರು ದೇವರಾಜ ಅರಸು ಮಾತ್ರ. “ಈ ಪುಸ್ತಕ ಕಾಂಗ್ರೆಸ್ಸಿನ ಆತ್ಮದಂತಿದೆ” ಎಂದು ಅನಂತಮೂರ್ತಿಯವರು ವಿಶ್ವನಾಥರಿಗೆ ಹೇಳಿದರೆನ್ನಲಾದ ಮಾತು ಕೂಡ ಸಂದರ್ಭದ ಉತ್ಪ್ರೇಕ್ಷೆಯದಿರಬಹುದು, ಅಷ್ಟೆ. ಆಯ್ದ ಬಿಡಿ ಬಿಡಿ ಘಟನೆಗಳ ನಡುನಡುವೆ ಉಮರ್ ಖಯಾಂ, ಡಿವಿಜಿ ಎಲ್ಲರೂ “ಥಿಯರಿಟಿಷಿಯನ್”ಗಳಾಗಿ ಬರುವ ಈ ಪುಸ್ತಕ ನಮ್ಮ ಓದಿಗೆ ಹೆಚ್ಚಿನ ತಡೆಯುಂಟುಮಾಡುವುದಿಲ್ಲವೆನ್ನುವುದು ಈ ಪುಸ್ತಕದ ಒಂದು ಹೆಗ್ಗಳಿಕೆ. ಆದರೆ ತಪ್ಪು ಕಾರಣಗಳಿಗಾಗಿ ಈ ಪುಸ್ತಕ ಚರ್ಚೆಯಾಗುತ್ತಿದೆ.

ಈ ಪುಸ್ತಕದ ಮಟ್ಟ ಏನೇ ಇರಲಿ, ಒಂದು ಪುಸ್ತಕದ ಬಗ್ಗೆ ಗುಲ್ಲೆಬ್ಬಿಸುವ ಹಾಗೂ ಪುಸ್ತಕದ ನಿಷೇಧ ಮಾಡಿ ಎನ್ನುವ ಆತಂಕಕಾರಿ ಪ್ರವೃತ್ತಿ ಕನ್ನಡ ಸಂಸ್ಕೃತಿಯಲ್ಲಿ ಹೆಚ್ಚುತ್ತಿರುವ ಬಗ್ಗೆ ವಿಶ್ವನಾಥರಂಥ ರಾಜಕಾರಣಿಗಳೂ ಸೇರಿದಂತೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ. ಒಂದು ಪುಸ್ತಕದ ಬಗ್ಗೆ ಗಲಾಟೆ ಎದ್ದಾಗ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಎತ್ತುವ ಲೇಖಕರು ಈ ಬಗ್ಗೆ ಇನ್ನಷ್ಟು ವಿಸ್ತಾರವಾಗಿ ಆಲೋಚಿಸಬೇಕೆನ್ನಿಸುತ್ತದೆ.

ಯಾಕೆಂದರೆ, ಕೇವಲ ತಮ್ಮ ಅಭಿವ್ಯಕ್ತಿಯ ಬಗ್ಗೆ ಯಾರಾದರೂ ಆಕ್ಷೇಪಣೆ ತೆಗೆದಾಗ ಮಾತ್ರ ಸೃಜನಶೀಲ ಕ್ರಿಯೆಗೆ ಧಕ್ಕೆಯಾಗುತ್ತಿದೆ ಎಂದು ಕೆಲವರಿಗೆ ಅನಿಸುತ್ತದೆ. ಆದರೆ, ಇಡೀ ಸಂಸ್ಕೃತಿಯಲ್ಲಿ ನೂರಾರು ವರ್ಷಗಳಿಂದ ಬಲಾಢ್ಯರು ದುರ್ಬಲರನ್ನು ಬಾಯಿ ಮುಚ್ಚಿಸುತ್ತಲೇ ಇರುತ್ತಾರೆ ಎಂಬುದನ್ನು ಮಾತ್ರ ನಾವು ಕಂಡೂ ಕಾಣದಂತಿರುತ್ತೇವೆ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಬಾಯಿ ಮುಚ್ಚಿಸುವುದು, ಮಕ್ಕಳು ತಮ್ಮ ಅಭಿಪ್ರಾಯ ಹೇಳದಂತೆ ಹಿರಿಯರು ನೋಡಿಕೊಳ್ಳುವುದು ಅಥವಾ ಮುದುಕರು ತಮ್ಮ ನಿಲುವು ಹೇಳದಂತೆ ಮಕ್ಕಳು ತಡೆಯುವುದು, ಗೂಂಡಾಗಿರಿಯಿಂದ ಇತರರು ತಮ್ಮ ಅನಿಸಿಕೆಗಳನ್ನು ಹೇಳದಂತೆ ಮಾಡುವುದು, ಪ್ರಬಲ ಜಾತಿಗಳು ದುರ್ಬಲ ಜಾತಿಗಳಿಗೆ ಮಾತಿನ ಅವಕಾಶವೇ ಇಲ್ಲದಂತೆ ನೋಡಿಕೊಳ್ಳುವುದು, ಮತದಾನ ಮಾಡದಂತೆ ತಡೆಯೊಡ್ಡುವುದು… ಇವೆಲ್ಲ “ಅಭಿವ್ಯಕ್ತಿ ಸ್ವಾತಂತ್ರ್ಯ”ದ ಪ್ರಶ್ನೆಗಳೇ ಆಗಿವೆ ಎಂಬುದನ್ನು ನಮ್ಮ ಸಾಹಿತಿಗಳು ಯೋಚಿಸದಿದ್ದರೆ ತಪ್ಪಾಗುತ್ತದೆ.

ಅದಿರಲಿ, ಕೊನೆಯ ಪಕ್ಷ ಸಾಹಿತ್ಯಕ ಸಂಸ್ಕೃತಿಯಲ್ಲಾದರೂ ಈ ಬಗ್ಗೆ ಸ್ಪಷ್ಟತೆ ಇದೆಯೇ, ಒಗ್ಗಟ್ಟು ಇದೆಯೇ ಎಂಬುದು ಕೂಡ ಖಾತ್ರಿಯಿಲ್ಲ. ಮೊನ್ನೆ ಜಾನಪದ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಈ ಬಗೆಗಿನ ಒಂದು ಮುಖ್ಯ ಸಂಗತಿಯತ್ತ ನಮ್ಮ ಗಮನ ಸೆಳೆದರು: “ಶಿವಪ್ರಕಾಶರ ಮಹಾಚೈತ್ರದ ವಿರುದ್ಧ ಕೆಲವು ವೀರಶೈವ ಸನಾತನಿಗಳು ಗಲಾಟೆ ಶುರು ಮಾಡಿದಾಗ ವಿವಿಧ ವಲಯಗಳ ಲೇಖಕ, ಲೇಖಕಿಯರು ಶಿವಪ್ರಕಾಶರ ಪರವಾಗಿ ಬೀದಿಗಿಳಿದರು. ಆದರೆ, ಬಂಜಗೆರೆ ಜಯಪ್ರಕಾಶರ ಆನು ದೇವಾ ಹೊರಗಣವನು ಪುಸ್ತಕದ ಬಗ್ಗೆ ಗಲಾಟೆ ಶುರುವಾದಾಗ ಶಿವಪ್ರಕಾಶ್ ಒಂದು ಪತ್ರಿಕಾ ಹೇಳಿಕೆಯನ್ನೂ ಕೊಡಲಿಲ್ಲ. ಬಂಜಗೆರೆಯ ಪುಸ್ತಕದ ನಿಲುವುಗಳನ್ನು ಶಿವಪ್ರಕಾಶರು ಒಪ್ಪದಿರಬಹುದು. ಆದರೆ ಪುಸ್ತಕ ವಿರೋಧಿ ಸನಾತನಿಗಳಿಂದ ನೊಂದಿದ್ದ ಶಿವಪ್ರಕಾಶ್, ಬಂಜಗೆರೆಯವರ ಹಕ್ಕನ್ನಾದರೂ ಬೆಂಬಲಿಸಬೇಕಿತ್ತು…” ಎಂದ ಬಿಳಿಮಲೆಯವರ ವಾದದಲ್ಲಿ ಹುರುಳಿತ್ತು.

ಅಂದರೆ, ಸಾರ್ವಜನಿಕರು, ಓದಲು ಬಾರದವರು, ಅಕ್ಷರ ಓದಿದರೂ ಅರ್ಥ ತಿಳಿಯದವರು, “ತಾನು ಬಯಸಿದ್ದು ಈ ಪುಸ್ತಕದಲ್ಲಿಲ್ಲ; ಆದ್ದರಿಂದ ಈ ಪುಸ್ತಕವನ್ನು ಹಿಂತೆಗೆದುಕೊಳ್ಳಿ, ನಿಷೇಧಿಸಿ” ಎಂದು ಚೀರತೊಡಗಿದಾಗ ಅದರ ವಿರುದ್ಧ ಇಡೀ ಬರೆಯುವವರು ಒಂದು ವರ್ಗವಾಗಿ ಪ್ರತಿಭಟಿಸುವುದು ಅತ್ಯಗತ್ಯ. ಒಂದಲ್ಲ ಒಂದು ದಿನ ಉರುಳು ತಮ್ಮ ಕುತ್ತಿಗೆಗೂ ಬರುತ್ತದೆ ಎಂಬ ಕನಿಷ್ಠ ಪ್ರಜ್ಞೆ ಜವಾಬ್ದಾರಿಯಿಂದ ಬರೆಯುವ ಎಲ್ಲರಿಗೂ ಇರಬೇಕಾಗುತ್ತದೆ.

ಯಾವುದೇ ಪುಸ್ತಕದ ನಿಷೇಧದ ಪ್ರಶ್ನೆ ಎದುರಾದಾಗ ಸರ್ಕಾರಿ ಹಣದಲ್ಲಿ ಕನ್ನಡ ಸಂಸ್ಕ್ರುತಿಯನ್ನು ಪೋಷಿಸುವ ಹೊಣೆ ಹೊತ್ತ ಕರ್ನಾಟಕದ ವಿವಿಧ ಅಕಾಡೆಮಿಗಳು, ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರುಗಳು ಒಟ್ಟಾಗಿ ದನಿಯೆತ್ತಿದರೆ ಅದರ ಚರ್ಚೆ ಹಾಗೂ ಪರಿಣಾಮವೇ ವಿಭಿನ್ನವಾಗಬಲ್ಲದು. ಹಳ್ಳಿಮಕ್ಕಳು ಇಂಗ್ಲಿಷ್ ಕಲಿಯುವುದರ ವಿರುದ್ಧ ಠರಾವು ಮಾಡಿ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುವ ಕನ್ನಡ ಸಾಹಿತ್ಯ ಪರಿಷತ್ತಿನ ಕಂದಾಚಾರಿಗಳು ಒಂದು ಸಾಹಿತ್ಯ್ ಕೃತಿಯನ್ನು ನಿಷೇಧಿಸುವ ಕೂಗೆದ್ದಾಗ ಅದರ ವಿರುದ್ಧ ಠರಾವು ಪಾಸು ಮಾಡಿ ಸರ್ಕಾರದ ಮೇಲೇಕೆ ಒತ್ತಡ ತರುವುದಿಲ್ಲ ಎನ್ನುವುದಕ್ಕೆ ಉತ್ತರ ಸ್ಪಷ್ಟ: ಸರ್ಕಾರದ ಅನುದಾನ, ಟಿಎ, ಡಿಎ, ಸಣ್ಣಪುಟ್ಟ ಸವಲತ್ತು, ಹುಸಿಗಣ್ಯತೆ ಇವನ್ನೆಲ್ಲ ಅನುಭವಿಸುವುದು ತಮ್ಮ ಆಜನ್ಮಸಿದ್ಧ ಹಕ್ಕೆಂಬಂತೆ ಹಾಗೂ ಅದೇ ಪೂರ್ಣಾವಧಿ ಕೆಲಸವೆಂಬಂತೆ ನಂಬಿರುವ “ಸಾಹಿತ್ಯ್”ಗಳ ಸಂವೇದನೆ, ಆತ್ಮಸಾಕ್ಷಿಗಳು ತೋಪೆದ್ದು ಹೋಗಿರುತ್ತವೆ. ಎಲ್ಲಿ ಏನು ಮಾತಾಡಿದರೆ ಯಾವ ಪ್ರಶಸ್ತಿ, ಚೇರ್ಮನ್ ಗಿರಿ ಹಾಗೂ ಟಿಎ, ಡಿಎಗಳು ಇಲ್ಲವಾಗುತ್ತವೋ ಎಂಬ ಭಯದಲ್ಲಿ ಈ ಸಾಹಿತಿಗಳ ತುಟಿಗಳು ತಂತಾವೇ ಹೊಲಿದುಕೊಳ್ಳುತ್ತವೆ. ಇದಕ್ಕೆ ಅಪವಾದಗಳು ಇಲ್ಲದಿಲ್ಲ. “ಧರ್ಮಕಾರಣ” ಕಾದಂಬರಿಗೆ ಪ್ರಶಸ್ತಿ ವಾಪಸ್ ಪಡೆದಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಕೆಲವರು ಸರ್ಕಾರಿ ಅಕಾಡೆಮಿ ಇತ್ಯಾದಿಗಳಿಗೆ ರಾಜೀನಾಮೆ ನೀಡಿದರು. ಇನ್ನೂ ಕೆಲವರು ಪತ್ರಿಕಾ ಹೇಳಿಕೆಗಳಲ್ಲಿ ಮಾತ್ರ ರಾಜೀನಾಮೆ ಕೊಟ್ಟು, ಮೆಲ್ಲಗೆ ತಂತಮ್ಮ ಸಾಹಿತ್ಯ ಕೂಲಿ ವಸೂಲಿಗೆ ವಾಪಸ್ ಹೋದರು!

ಅದಿರಲಿ, ಹೀಗೆ ರಾಜೀನಾಮೆ ಕೊಟ್ಟು ತಮ್ಮ ಆತ್ಮಸಾಕ್ಷಿಯನ್ನು ತೃಪ್ತಿಗೊಳಿಸಿಕೊಳ್ಳುವುದರಿಂದ ಕೂಡ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ಎಲ್ಲ ಬಗೆಯ ಸಾಹಿತ್ಯ್ ಸಂಸ್ಥೆಗಳು ಸಂಘಟಿತವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲಬೇಕು. ಸಾಹಿತ್ಯದ ಅಥವಾ ಒಂದು ಪೇಂಟಿಂಗಿನ ವಿವಾದಗಳು ಸಾಹಿತ್ಯ ಹಾಗೂ ಸಂಸ್ಕೃತಿಯ ವಲಯದ ಶ್ರೇಷ್ಠ ಬುದ್ಧಿಜೀವಿಗಳ ತಂಡದಲ್ಲಿ ತೀರ್ಮಾನವಾಗುವಂತಾಗಬೇಕು. ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಅತ್ಯುನ್ನತ ಮನ್ನಣೆಗಳನ್ನು ಗಳಿಸಿರುವ ಹಾಗೂ ಅಪಾರ ಜವಾಬ್ದಾರಿಯಿಂದ ಬರೆಯುವ ಸಾಹಿತಿಗಳ, ಕಲಾವಿದರ, ಬುದ್ಧಿಜೀವಿಗಳ ತಂಡ ಈ ಪ್ರಶ್ನೆಗಳನ್ನು ಚರ್ಚಿಸಿ ತೀರ್ಮಾನಿಸಬೇಕು. ಅದನ್ನು ಬಿಟ್ಟು ಸರ್ಕಾರಿ ಮಂತ್ರಿಗಳು, ನ್ಯಾಯಂಗ ಹಾಗೂ ವಾಚಾಳಿ ಸಾರ್ವಜನಿಕ ನಾಯಕರು ಈ ಪ್ರಶ್ನೆಗಳನ್ನು ತೀರ್ಮಾನಿಸುವುದನ್ನು ಸಂಪೂರ್ಣವಾಗಿ ವಿರೋಧಿಸಬೇಕು.

ವಿಜ್ಞಾನ, ವೈದ್ಯಕೀಯ, ಸಮಾಜಶಾಸ್ತ್ರ, ನ್ಯಾಯಾಂಗ ಮುಂತಾದ ವಿಶೇಷ ಕ್ಷೇತ್ರಗಳ ಪುಸ್ತಕಗಳು ಬಂದಾಗ ಹಾದಿಬೀದಿಯ ಕೂಗುಮಾರಿಗಳು, ಉಗ್ರಪ್ಪ, ಮಾತೆ ಮಹಾದೇವಿ, ಭೀಮಣ್ಣ ಖ್ಂಡ್ರೆ ಥರದ “ಸ್ವನೇಮಿತ” ವಿಮರ್ಶಾ ಪಟುಗಳು ಬಾಯಿಗೆ ಬಂದಂತೆ ಮಾತಾಡುತ್ತಾರೆಯೇ? ಸಾಹಿತ್ಯ ಹಾಗೂ ಸಂಶೋಧನೆಯ ಗಂಭೀರ ಕೃತಿಗಳು ಸಾರ್ವಜನಿಕ ವಲಯಕ್ಕೆ ಬಂದಾಗ ಯಾರು ಏನಾದರೂ ಹೇಳುವ, ಅಕಸ್ಮಾತ್ ತಪ್ಪಾಗಿ ಕೂಡ ಓದುವ ಸ್ವಾತಂತ್ರ್ಯವನ್ನು ನಾವು ಒಪ್ಪಬಹುದು. ಆದರೆ ಆ ಬಗ್ಗೆ ವಿಶೇಷ ಜ್ಞಾನವಿಲ್ಲದವರ ಪ್ರತಿಕ್ರಿಯೆಗಳನ್ನು ಅಧಿಕೃತವೆಂಬಂತೆ ಹಾಗೂ ಗಂಭೀರವಾಗಿ ಪರಿಗಣಿಸಲಾಗದು. ಸಾಹಿತ್ಯ, ಕಲೆಗಳನ್ನು ಕುರಿತ ಬೀದಿಕೂಗುಗಳನ್ನು ನಿಲುವುಗಳೆಂದು, ಮೌಲ್ಯಮಾಪನವೆಂದು ಪರಿಗಣಿಸುವ ಚಾಳಿ ಶುರುವಾದರೆ ಇಡೀ ಸಾಂಸ್ಕೃತಿಕ ವಲಯದ ಚಟುವಟಿಕೆಗಳು ನಗೆಪಾಟಲಿಗೀಡಾಗುತ್ತವೆ.

ಈ ಅರಿವಿನ ಜೊತೆಗೇ ಇದು ಕೇವಲ ಪುಸ್ತಕ ರಕ್ಷಣೆಯ ಪ್ರಶ್ನೆಯಷ್ಟೇ ಅಲ್ಲದೆ, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರೇ ಮುಂತಾಗಿ ಎಲ್ಲ ದುರ್ಬಲರ ಅಭಿಪ್ರಾಯಗಳಿಗೆ ಅವಕಾಶಗಳಿಲ್ಲದ ಸ್ಥಿತಿ ಕೂಡ ಅಂತಿಮವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒದಗಿದ ಕುತ್ತು; ಹಾಗೂ ಆ ಕುತ್ತನ್ನು ಹೋಗಲಾಡಿಸುವುದು ಕೂಡ ತಮ್ಮ ಕರ್ತವ್ಯ ಎಂಬುದನ್ನು ಲೇಖಕ, ಲೇಖಕಿಯರು, ಕಲಾವಿದರು ಅರ್ಥಮಾಡಿಕೊಳ್ಳಬೇಕಾದದ್ದು ಅಗತ್ಯ. ಈ ಅರಿವು ೭೦-೮೦ರ ದಶಕದಲ್ಲಿದ್ದ ಬರಹಗಾರರಲ್ಲಿ ಹೆಚ್ಚು ಕಾಣುತ್ತಿತ್ತು. ಅದು ಈಗ ಹಿನ್ನೆಲೆಗೆ ಸರಿಯುತ್ತಿರುವುದರಿಂದ ಅದನ್ನು ತಮಗೆ ನೆನಪಿಸುತ್ತಿದ್ದೇನೆ, ಅಷ್ಟೆ.  

‍ಲೇಖಕರು avadhi

February 19, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

೧ ಪ್ರತಿಕ್ರಿಯೆ

  1. chiraviraha

    it’s the irresponsibity of our mass media, mr. natraj. The sms calls, collecting opinions, demanding one word answers from the public is heigt of stupidity. books need serious discussions, not one word answers.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: