ವಿಷವಿಲ್ಲದ ತರಕಾರಿ, ಅಸಲು ಗಿಟ್ಟದ ಮಾರಾಟ..

ಪಿ ಪಿ ಬಾಬುರಾಜ್

ನಾನೊಬ್ಬ ವಕೀಲ. ಅದಕ್ಕಿಂತ ಹೆಚ್ಚಾಗಿ ನಾನು ಗುರುತಿಸಿಕೊಂಡಿರುವುದು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ. ಕೋವಿಡ್ ಹೆಸರಿನಲ್ಲಿ ನಡೆದ ಲಾಕ್‍ಡೌನ್ ಮತ್ತು ಅನಿವಾರ್ಯ ‘ಗೃಹಬಂಧನ’ವು ನಿರಂತರವಾಗಿ ಜನಸಂಪರ್ಕದಲ್ಲಿರುವ ನನ್ನಂಥವರಿಗೆ ಪ್ರಾಣ ಹಿಂಡುವಂತಾಗಿತ್ತು ಎನ್ನುವುದು ಕಟುವಾಸ್ತವ. ಲಾಕ್‍ಡೌನ್ ತೆರವಾದರೂ ನ್ಯಾಯಾಲಯಗಳಲ್ಲಿದ್ದ ನಿರ್ಬಂಧಗಳು ತೆರವಾಗಲಿಲ್ಲ. ತುರ್ತು ಪ್ರಕರಣಗಳಿಗೆ ಮಾತ್ರ ನ್ಯಾಯಾಲಯಕ್ಕೆ ಹೋಗಬೇಕೆಂದಾಯಿತು. ನನಗೆ ಅಂಥಾ ತುರ್ತು ಕೇಸುಗಳೇನೂ ಬರಲಿಲ್ಲ.

ಈ ಕಾಲದಲ್ಲೇ ನನ್ನ ಡ್ರೀಂ ಪ್ರೋಜೆಕ್ಟ್ ಜಾರಿ ಮಾಡುವ ಆಲೋಚನೆಗೆ ವೇಗ ಸಿಕ್ಕಿತು. ಮೈಸೂರಿನ ಶ್ರೀರಾಂಪುರದಲ್ಲಿ ‘ತುಂತುರು ನ್ಯಾಚುರಲ್ಸ್’ ಎನ್ನುವ ನೈಸರ್ಗಿಕ ಆಹಾರೋತ್ಪನ್ನಗಳ ಮಾರಾಟ ಕೇಂದ್ರವನ್ನು ಜುಲೈ 24ರಂದು ಪ್ರಾರಂಭಿಸಿದೆ. ಹೆಚ್ಚು ಜನರ ಬಳಿ ಚರ್ಚೆ ಮಾಡಲು ಹೋಗಲೇ ಇಲ್ಲ. ಶುರು ಮಾಡಬೇಕೆಂದೆನಿಸಿತ್ತು. ಶುರು ಮಾಡಿಯೇ ಬಿಟ್ಟೆ. ವಕೀಲನೊಬ್ಬ ತರಕಾರಿ ಅಂಗಡಿ ಶುರುಮಾಡಿದ ನಂತರ ಹಲವು ಅನುಭವಗಳು ನನ್ನದಾದವು. 

ಕೋವಿಡ್ ಕಾಲದಲ್ಲಿ ವಕೀಲರೊಬ್ಬರು ತರಕಾರಿ ಅಂಗಡಿ ತೆರೆದರು ಎನ್ನುವಂತೆ ಬಿಂಬಿಸಲು ನಡೆದ ಮಾಧ್ಯಮಗಳ ಪ್ರಯತ್ನವನ್ನು ನೋಡಿ ನಾನು ಬೆರಗಾದೆ. ಉದ್ಘಾಟನಾ ದಿನವೇ ಈ ಪ್ರಶ್ನೆಯನ್ನು ಕೆಲವು ಮಾಧ್ಯಮ ಮಿತ್ರರು ಎತ್ತಿದರು. ಕೋವಿಡ್‍ನಿಂದಾಗಿ ವಕೀಲನಿಗೆ ಹೊಟ್ಟೇಪಾಡಿಗೆ ಗತಿಯಿಲ್ಲದೆ ಅಂಗಡಿ ಪ್ರಾರಂಭಿಸಿದ್ದಾರೆ ಎನ್ನುವ ರೀತಿಯಲ್ಲಿ ಸುದ್ದಿ ಮಾಡಬೇಕೆನ್ನುವ ತವಕ ಅವರದ್ದಾಗಿತ್ತು. ನಾನದನ್ನು ಒಪ್ಪಲಿಲ್ಲ. ಏಕೆಂದರೆ, ಅದು ಸತ್ಯವಾಗಿರಲಿಲ್ಲ.

ಹಲವು ವರ್ಷಗಳಿಂದ ನೈಸರ್ಗಿಕ ಜೀವನ ನಡೆಸಿಕೊಂಡು ಬರುವವನು ನಾನು. ಔಷಧಗಳಿಲ್ಲದ ಆರೋಗ್ಯ ಜೀವನ ಎಂಬ ವಿಚಾರದಲ್ಲಿ ಸತತ ಮೂರು ವರ್ಷಗಳು ಮೈಸೂರು ನಗರದಲ್ಲಿ ತರಗತಿಗಳನ್ನು ಆಯೋಜನೆ ಮಾಡಿದ್ದೆ. ಜನಾರೋಗ್ಯಕ್ಕೆ ಪೂರಕವಾದ ಪದಾರ್ಥಗಳನ್ನು ನನ್ನ ಮನೆಯಲ್ಲೇ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದೆ. ಸಿರಿಧಾನ್ಯಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಕೆಲಸವೂ ನಡೆದಿದೆ. ‘ತುಂತುರು’ ಎನ್ನುವ ಅಂಗಡಿ ಪ್ರಾರಂಭಿಸಬೇಕೆನ್ನುವುದು ನನ್ನ ಹಲವು ವರ್ಷಗಳ ಆಸೆಯಾಗಿತ್ತು.

ನೋಡಿ, ನಾವು ತಿನ್ನುತ್ತಿರುವ ಆಹಾರದಲ್ಲಿ ಅದೆಷ್ಟೋ ವಿಷಾಂಶಗಳು ಅಡಗಿವೆ. ನಮಗೆ ಅವು ಗೋಚರಿಸುವುದೇ ಇಲ್ಲ. ಟೂತ್‍ಪೇಸ್ಟ್, ಸೋಪ್, ಉಪ್ಪು, ಸಕ್ಕರೆ, ಅಡುಗೆ ಎಣ್ಣೆ… ಹೀಗೆ ಹಲವು ದಿನನಿತ್ಯದ ಪದಾರ್ಥಗಳಲ್ಲಿ ವಿಷಾಂಶಗಳು ಅಡಗಿವೆ. ಇವೆಲ್ಲವೂ ನಿಯಮಿತವಾಗಿ ನಮ್ಮ ದೇಹದೊಳಗೆ ಸೇರುತ್ತಿವೆ. ಇಂದು ಮಾರುಕಟ್ಟೆಯಲ್ಲಿ ಬರುವ ತರಕಾರಿ ಮತ್ತು ಹಣ್ಣುಗಳಲ್ಲಿ ರಾಸಾಯನಿಕಗಳು ಮತ್ತು ಕೀಟನಾಶಕಗಳು ಬೃಹತ್ ಪ್ರಮಾಣದಲ್ಲಿವೆ. ಕೋವಿಡ್ ಸಂದರ್ಭದಲ್ಲಿ ಇದರ ಬಳಕೆಯೂ ಹೆಚ್ಚಾಗಿದೆ.

ಆದರೆ, ರಸಗೊಬ್ಬರ ಮತ್ತು ಕೀಟನಾಶಕ ಬಳಸದೆ ನೈಸರ್ಗಿಕವಾಗಿ ಬೆಳೆ ಬೆಳೆಯುವ ರೈತರಿದ್ದಾರೆ. ಪ್ರಾಮಾಣಿಕರಿದ್ದಾರೆ. ಇವರನ್ನು ಜನರು ಗುರುತಿಸುತ್ತಿಲ್ಲವೇಕೆ? ಮಾರುಕಟ್ಟೆಯಿಲ್ಲದೆ ಇವರು ತಮ್ಮ ಉತ್ಪನ್ನಗಳನ್ನು ರಾಸಾಯನಿಕ ತರಕಾರಿಗಳ ಮಾರುಕಟ್ಟೆಯಲ್ಲೇ ಮಾರುತ್ತಾರೆ. ಮೈಸೂರಿನಲ್ಲಿ ನೈಸರ್ಗಿಕವಾಗಿ ಬೆಳೆದ ತರಕಾರಿ ಮತ್ತು ಹಣ್ಣುಗಳಿಗೆ ಮಾತ್ರ ಅಂಗಡಿ ಇರಲಿಲ್ಲ. ಈ ಸ್ಪೇಸನ್ನು ತುಂಬುವುದು ನನ್ನ ಉದ್ದೇಶವಾಗಿತ್ತು. ನೈಸರ್ಗಿಕರ ರೈತರನ್ನು ಮತ್ತು ನೈಸರ್ಗಿಕ ಆಹಾರ ಪ್ರೇಮಿಗಳನ್ನೂ ಸಮನ್ವಯಿಸುವ ಕೊಂಡಿಯಾಗಿ ‘ತುಂತುರು’ ಕೆಲಸ ಮಾಡಬೇಕೆಂದು ಅಂದುಕೊಂಡೆ.

ಒಬ್ಬ ರೈತನು ಎಲ್ಲ ತರಕಾರಿಗಳನ್ನೂ ಬೆಳಯಲು ಸಾಧ್ಯವಿಲ್ಲ. ಹಾಗಾಗಿ ಎಲ್ಲ ತರಕಾರಿಗಳೂ ಸಿಗಬೇಕಾದರೆ ರೈತರ ಒಕ್ಕೂಟವೇ ಬೇಕು. ತುಮಕೂರಿನ ನೆಲಮಂಗಲದಲ್ಲಿ ಸಾವಯವ ಬೆಳೆಗಾರರ ಸಂಘಗಳ ಒಕ್ಕೂಟವನ್ನು ಪತ್ತೆ ಹಚ್ಚಿದೆ. ಹೋಗಿ ನೋಡಿದೆ. ಸಾವಯವ ರೈತರು ತಾವು ಬೆಳೆದ ತರಕಾರಿಗಳನ್ನು ಒಂದು ಕಡೆ ತಂದು ಇತರೆಡೆಗಳಿಗೆ ವಿತರಣೆ ಮಾಡುವಂತಹ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ‘ತುಂತುರು’ಗೆ ಅಲ್ಲಿಂದಲೇ ಮುಖ್ಯವಾಗಿ ತರಕಾರಿ ಮತ್ತು ಹಣ್ಣುಗಳ ಸರಬರಾಜಾಗುತ್ತೆ.

ಉಳಿದಂತೆ, ಮೈಸೂರು ಸುತ್ತಮುತ್ತಲಿನ ರೈತರ ಉತ್ಪನ್ನಗಳೂ ಬರುತ್ತವೆ. ಸ್ಥಳೀಯವಾಗಿ ಸಿಕ್ಕುವುದನ್ನು ಇಲ್ಲೇ ತೆಗೆದುಕೊಳ್ಳುವುದನ್ನು ಕಲಿತೆ. ಇಲ್ಲಿ ಸಿಗದಿರುವ ಪದಾರ್ಥಗಳನ್ನು ಮಾತ್ರ ದೂರದಿಂದ ತರಿಸಲು ಕಲಿತೆ.

ನೈಸರ್ಗಿಕ ರೈತನು ತನ್ನ ಪದಾರ್ಥಗಳಿಗೆ ತಾನೇ ಬೆಲೆ ನಿಗದಿ ಮಾಡುತ್ತಾನೆ. ಅವರು ನಿಗದಿ ಮಾಡಿದ ಬೆಲೆಯ ಮೇಲೆ ನಮ್ಮ ಬೆಲೆಯನ್ನು ನಿರ್ಧರಿಸುತ್ತೇವೆ. ಉದಾಹರಣೆಗೆ, ಹೆಸರ ಕಾಳು ಬೆಳೆದ ರೈತನು ಕೆಜಿಗೆ 120 ಬೇಕೆಂದು ಕೇಳಿದರು. ಮಾರುಕಟ್ಟೆಯ ಬೆಲೆಯೂ ಹೆಚ್ಚುಕಡಿಮೆ ಅಷ್ಟೇ ಇತ್ತು. ನಾನು ಯಾವುದೇ ಚೌಕಾಸಿ ಇಲ್ಲದೆ ಅಷ್ಟು ಬೆಲೆಗೆ ಒಪ್ಪಿದೆ. ಶೇ.15ರಷ್ಟು ಲಾಭಾಂಶ ಸೇರಿಸಿ ಬೆಲೆಯನ್ನು ನಿಗದಿ ಮಾಡಿದೆ. ಇಲ್ಲಿ ನೀವು ಗಮನಿಸಿ.

ರೈತನಿಗೆ ಉತ್ತಮವಾದ ಬೆಲೆ ಸಿಕ್ಕಿದೆ. ಅದೂ ನೇರವಾಗಿ. ಇಲ್ಲಿ ಯಾವ ದಲ್ಲಾಳಿಯೂ ಇಲ್ಲ. ಆದರೆ, ರಾಸಾಯನಿಕ ಬಳಸುವ ರೈತನು ಮಾರುಕಟ್ಟೆಗೆ ಹೋದಾಗ ಅವನ ಬೆಳೆಯ ಬೆಲೆಯನ್ನು ಇನ್ಯಾರೋ ನಿರ್ಧರಿಸುತ್ತಾರೆ. ನಿಗದಿಯಾದ ಬೆಲೆಯಲ್ಲಿ ಆತನಿಗೆ ಸಿಗುವುದೆಷ್ಟೋ. ಅಲ್ಲಿ ರೈತನಿಗೆ ಘನತೆಯೂ ಇಲ್ಲ, ಮರ್ಯಾದೆಯೂ ಇಲ್ಲ. ಆದರೆ, ನೈಸರ್ಗಿಕ ರೈತನಿಗೆ ಇವೆರಡೂ ಇವೆ. ಇದನ್ನು ಅಂಗಡಿ ಪ್ರಾರಂಭಿಸಿದ ಮೇಲೆ ನಾನು ಗುರುತಿಸಿಕೊಂಡೆ.

ಸಾವಯವ ಕ್ಷೇತ್ರವೂ ಕಲುಷಿತವಾಗಿದೆ. ಸಾವಯವ ಅಂದರೆ ನಂಬುವವರೇ ಕಡಿಮೆ. ಇದೇ ಈಗಿರುವ ದೊಡ್ಡ ಸವಾಲು. ಗ್ರಾಹಕರು ನಂಬಬೇಕು. ಪದಾರ್ಥಗಳು ಬಳಸುತ್ತಾ ಅದನ್ನು ಅವರಿಗೆ ಮನವರಿಕೆಯಾಗಬೇಕು. ಅದಕ್ಕೆ ಕಾಲಾವಕಾಶ ಬೇಕಾಗುತ್ತೆ. ಅಲ್ಲಿಯ ವರೆಗೆ ನಷ್ಟ ಅನುಭವಿಸಬೇಕಾಗುತ್ತೆ. ಕೆಲವು ತರಕಾರಿಗಳು ನೋಡಿ, ‘ಇಷ್ಟು ದಪ್ಪ ಗಾತ್ರ ಬರುವುದೇ ಇಲ್ಲ, ಇದು ಸಾವಯವ ಅಲ್ಲ’ ಎಂದು ಹೇಳುವವರನ್ನು ನೋಡಿದೆ. 

ಸ್ನೇಹಿತರೊಬ್ಬರು ಎರಡುವರೆ ಉದ್ದ ಮತ್ತು ಅದಕ್ಕೆ ತಕ್ಕ ಅಗಲದ ಪಡವಲಕಾಯಿ ತಂದು ಕೊಟ್ಟರು. ಜೈಜಾಂಟಿಕ್ ರೂಪ! ಅಲ್ಲೇ ನಿಂತಿದ್ದ ಗ್ರಾಹಕರೊಬ್ಬರು ‘ಇದು ಆರ್ಗಾನಿಕಾ?’ ಎಂದರು. ಇದಕ್ಕೆ ಅಡುಗೆಮನೆ ವೇಸ್ಟ್ ಅಲ್ಲದೆ ಬೇರೆ ಏನು ಕೊಟ್ಟಿಲ್ಲ ಎಂದರು ಸ್ನೇಹಿತ. ಇದು ಸಾಧ್ಯವಿದೆ. ಸಾವಯವದಲ್ಲೂ ಸರಿಯಾಗಿ ಪೌಷ್ಟಿಕಾಹಾರ ಕೊಡದೆ ಅಥವಾ ತಿಳಿಯದೆ ಬೆಳೆಯುವವರಿದ್ದಾರೆ. ಫಲ ನೋಡಿದರೆ ‘ಅಯ್ಯೋ’ ಅನಿಸುತ್ತೆ. ನಂತರ ಅದನ್ನು ‘ಸಾವಯವ’ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಹುಣಸೂರಿನ ತಮ್ಮಯ್ಯ ಎಂಬ ರೈತ ಮತ್ತು ಯೋಗಪಟು ಕಳೆದ ವರ್ಷ 170 ಕೆಜಿಯ ಗಾತ್ರದ ಹುತ್ತರಿ ಗೆಣಸನ್ನು ಬೆಳೆದದ್ದು ನೆನಪು. ಹೊಲದಲ್ಲಿ ಬೇಕಾದಷ್ಟು ಪೌಷ್ಟಿಕಾಂಶಗಳಿದ್ದರೆ, ಬೆಳೆಯೂ ಚೆನ್ನಾಗಿ ಆಗುತ್ತೆ. ಆಗ ಗಾತ್ರವೂ ದೊಡ್ಡದಾಗುತ್ತೆ. ಮುಖ್ಯವಾಗಿ ಮಣ್ಣಿನಲ್ಲಿ ಪೊಟಾಷ್ ಕಡಿಮೆಯಿದ್ದರೆ ತರಕಾರಿ-ಹಣ್ಣುಗಳು ದಪ್ಪ ಉದ್ದ ಬರುವುದೇ ಇಲ್ಲ. ಆದುದ್ದರಿಂದ ಅಂಥ ಸಂದರ್ಭದಲ್ಲಿ ಸಾವಯವ ರೈತರು ಇದನ್ನು ಗಮನದಲ್ಲಿಟ್ಟು ಮಣ್ಣಿನ ಪೌಷ್ಟಿಕತೆಗೆ ಕೆಲಸ ಮಾಡಬೇಕಾಗಿರುತ್ತದೆ. ಇದರ ಜೊತೆಗೆ ಉಳಿದ ಲವಣಾಂಶಗಳು, ಸೂಕ್ಷ್ಮ ಜೀವಿಗಳ ಸಂವರ್ಧನೆ ಇತ್ಯಾದಿಯೂ ಗಮನಿಸಬೇಕು.

ಮಧ್ಯವಯಸ್ಸಿನ ಮಹಿಳೆಯೊಬ್ಬರು ನಮ್ಮ ತರಕಾರಿಗಳ ಬಳಿ ಬಂದರು. ಎಲ್ಲವನ್ನೂ ನೋಡಿದರು. ತರಕಾರಿಗಳನ್ನು ತಂದು ಅಷ್ಟರಲ್ಲೇ ಎರಡು ದಿನಗಳಾಗಿದ್ದವು. “ಎಲ್ಲವೂ ಬಾಡಿ ಹೋಗಿವೆ,” ಎಂದು ಮುಖವನ್ನು ಸಿಂಡರಿಸಿ ಅರ್ಧ ಕೆಜಿ ಆಲೂಗೆಡ್ಡೆ ತೆಗೆದುಕೊಂಡು ಹೋದರು. ಹೋಗುವಾಗಲೂ ನಮ್ಮನ್ನು ಬೈದುಕೊಂಡೇ ಹೋಗುತ್ತಿದ್ದರು. ಇನ್ನೊಂದು ಮಾರುಕಟ್ಟೆ ಕೇಂದ್ರದಲ್ಲಿ ಅದೇ ವಯೋಮಾನದ ಇನ್ನೊಬ್ಬ ಮಹಿಳೆ ತರಕಾರಿ ಕೊಳ್ಳಲು ಬಂದರು. ಬೀನ್ಸ್ ಬೇಕೆಂದಾಗ ಪ್ರದೀಪ ಹೇಳಿದ: “ಮ್ಯಾಡಂ, ಬೀನ್ಸ್ ಸ್ವಲ್ಪ ಬಾಡಿದೆ. ಆಗಬಹುದಾ?” ಅದಕ್ಕೆ ಪ್ರತಿಯಾಗಿ ಅವರು, “ಸ್ವಲ್ಪ ಬಾಡಿದೆ ಅಷ್ಟೇ ತಾನೇ. ವಿಷ ಹಾಕಿಲ್ವಲ್ಲ?” ಎಂದರು. ಅವರ ಪ್ರತಿಕ್ರಿಯೆ ನಮಗೆ ಸ್ಪೂರ್ತಿಯಾಯಿತು. ಆ ಮಹಿಳೆಗೆ ನೈಸರ್ಗಿಕ ಆಹಾರದ ಬಗ್ಗೆ ಇದ್ದ ಜಾಗೃತಿಗೆ ನಾನು ಮನಸ್ಸಾರೆ ನಮಿಸಿದೆ.

ಸಣ್ಣತನಗಳನ್ನು ತೋರಿದ ಘಟನೆಗಳೂ ನಡೆದಿವೆ. ಸಾಮಾನ್ಯವಾಗಿ ನೈಸರ್ಗಿಕ ಪದಾರ್ಥಗಳು ಕೊಳ್ಳಲು ಶ್ರೀಮಂತ ವರ್ಗದವರೇ ಬರುತ್ತಾರೆ. ಎಲ್ಲ ಮಾರುಕಟ್ಟೆಯೂ ಅವರಿಂದ ತಾನೇ ಶುರುವಾಗುತ್ತೆ ! ಒಬ್ಬರು ಮುಕ್ಕಾಲು ಕೆಜಿ ಏಲಕ್ಕಿ ಬಾಳೆಕಾಯಿ ಕೊಂಡರು. ಎರಡು ಮೂರು ದಿನಗಳಲ್ಲಿ ಹಣ್ಣಾಗುತ್ತೆ ಎಂದು ನಾವು ಅಂದಾಜಿನಲ್ಲಿ ಹೇಳಿದ್ದು ನಿಜ. ದೊಡ್ಡ ಅಪಾರ್ಟ್‍ಮೆಂಟ್ ಒಂದರಲ್ಲಿ ಅವರ ವಾಸ. ಅದನ್ನು ಹಣ್ಣು ಮಾಡಲು ಅವರು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರೂ ಅದು ಹಣ್ಣಾಗಲಿಲ್ಲ. ವಾರದ ಸಂತೆಗೆ ನಾವು ಅಲ್ಲಿ ಹೋದಾಗ ಅವರು ಬಾಳೆಕಾಯಿ ತಂದರು. ಇದಕ್ಕೆ ಬದಲು ಏನಾದರೂ ಕೊಡಿ ಎಂದರು. ನಾವು ಆಯ್ತು ಎಂದೆವು.

ಬಾಳೆಕಾಯಿ ತೂಕ ಮಾಡುವಾಗ ಅರ್ಧ ಕೆಜಿ ಮಾತ್ರ ಇದೆ. “ಅದ್ಹೇಗೆ,,ಮುಕ್ಕಾಲ್ ಕೆಜಿ ಇತ್ತಲ್ಲ. 45 ರೂ. ಕೊಟ್ಟಿದ್ದೆ” ಎಂದು ಜೋರಾಗಿ ಕಿರುಚಿದರು. ಪಾಪ, ತೂಕ ಮಾಡುತ್ತಿದ್ದ ಮನುಗೆ ಏನು ಮಾಡಬೇಕೆಂದು ತಿಳಿಯದೆ ‘ಈ ತೂಕಕ್ಕೆ 35 ರೂ. ಬರುತ್ತೆ’ ಎಂದ. ಅಷ್ಟರಲ್ಲಿ ಸಾಹೇಬರಿಗೆ ಕೋಪ ನೆತ್ತಿಗೇರಿತ್ತು. ಅವರು ಆಯ್ಕೊಂಡ ಹಾಗಲಕಾಯಿ ಬಿಟ್ಟು, ‘ಕೊಡು 45ರೂಪಾಯಿ. ಏನೂ ಬೇಡ’ ಎಂದರು. ಅದನ್ನು ಕೊಡಲು ಮನುವಿಗೆ ನಾನು ಸೂಚನೆ ನೀಡಿದ್ದೆ. ಆ ಬಾಳೆಕಾಯಿ ಅಂಗಡಿಗೆ ತಂದ ಮರುದಿನವೇ ಹಣ್ಣಾಗಲು ಪ್ರಾರಂಭಿಸಿತು! ಅವರು ಇನ್ನೂ ಸ್ವಲ್ಪ ಕಾದಿದ್ದರೆ ಹಣ್ಣು ತಿನ್ನಬಹುದಿತ್ತು! ಯಾವುದೇ ಕೃತಕ ರೀತಿಗಳಿಲ್ಲದ ಕಾರಣ ಅವು ನಿಧಾನಕ್ಕೆ ಹಣ್ಣಾಗುತ್ತೆ. ನಮಗೆ ತಾಳ್ಮೆ ಇರಬೇಕಷ್ಟೇ.

ನೈಸರ್ಗಿಕ ಅಥವಾ ಸಾವಯವ ಎನ್ನುವ ಹೆಸರಿನಲ್ಲಿ ಸ್ವಲ್ಪ ತಪ್ಪಾದರೂ ಯಾರೂ ತಡಕೊಳ್ಳುವುದೇ ಇಲ್ಲ. ಬಹುತೇಕ ಮಂದಿ ನಮ್ಮ ಪದಾರ್ಥಗಳನ್ನು ನಂಬುವುದೇ ಇಲ್ಲ. ಅನುಮಾನದಿಂದ ನೋಡಿ ಹೊರಟು ಹೋಗುತ್ತಾರೆ. ಒಂದು ಸಲ ರುಚಿ ನೋಡಿದವರು ಕ್ರಮೇಣ ನಮ್ಮ ಗ್ರಾಹಕರಾಗುತ್ತಾರೆ.

ನೈಸರ್ಗಿಕವಾಗಿ ಬೆಳೆದದ್ದು ಬೇಗ ಕೆಟ್ಟು ಹೋಗಲ್ಲ. ನಾಲ್ಕೈದು ದಿನಗಳಾದರೂ ಏನೂ ಆಗುವುದಿಲ್ಲ. ನಂತರ ಬಾಡುತ್ತೆ. ಆದರೂ ಅದನ್ನು ಅಡುಗೆಗೆ ಬಳಸಬಹುದು. ಇದು ನನಗೆ ಪೂರ್ತಿ ತಿಳಿದಿರಲಿಲ್ಲ.  ಅದಕ್ಕೆ, ನಾನು ನಮ್ಮ ಅಂಗಡಿಯಿಂದ ತಂದ ಬದನೆಕಾಯಿ ಮನೆಯಲ್ಲಿ ಹಾಗೆಯೇ ಇಟ್ಟಿದ್ದೆ. ಮೂರು ವಾರಗಳ ನಂತರ ಅದು ಕೊಳೆಯುವುದಕ್ಕೆ ಪ್ರಾರಂಭಿಸಿತು. ಅದೂ ತುದಿಯಿಂದ. ಆದರೆ, ರಾಸಾಯನಿಕ ಬೆರೆಸಿದ ತರಕಾರಿಯು ಬೇಗನೇ ಕೆಟ್ಟುಹೋಗುತ್ತೆ. ಕೆಟ್ಟ ವಾಸನೆಯೂ ಬರುತ್ತೆ.

ಹಲವು ರೈತರು ಸಂಪರ್ಕಕ್ಕೆ ಬರುತ್ತಿದ್ದಾರೆ. ಅಲ್ಲಲ್ಲಿ ಸಾವಯವ ಕೃಷಿ ಮಾಡುತ್ತಿರುವ ಕೆಲವರಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಅದರಿಂದ ಅವರಿಗೆ ಬೇಸರ. ನಮ್ಮ ಅಂಗಡಿ ಶುರುವಾದದ್ದು ಅವರಿಗೆ ಏನೋ ಸ್ವಲ್ಪ ಬರವಸೆ ಹುಟ್ಟಿಸಿದೆ. ಅದಕ್ಕೆ ನಾನು ಎಷ್ಟರ ಮಟ್ಟಿಗೆ ನೆರವಾಗುತ್ತೋ ತಿಳಿಯದು.

ರೈತನಿಗೆ ತಾನು ಬೆಳೆದ ಬೆಳೆಗೆ ಉತ್ತಮ ಬೆಲೆ ಕೊಡಬೇಕು ಎನ್ನುವುದು ಗ್ರಾಹಕರ ಜವಾಬ್ದಾರಿಯಾಗಬೇಕು. ಟೊಮಾಟೋ ಕೆಜಿಗೆ ಒಂದು ರೂ. ತಲುಪಿದಾಗ ಗ್ರಾಹಕನು ಖುಷಿಪಡಬಾರದು. ತನಗೆ ಬೆಳೆ ಬೆಳೆಯುವ ರೈತನ ಪಾಡೇನು ಎಂದು ಗಾಬರಿಯಾಗಬೇಕಾಗುತ್ತದೆ. ಒಂದು ರೂ. ಗ್ರಾಹಕ ಕೊಟ್ಟರೆ, ಅದು ಬೆಳೆದ ರೈತನ ಪಾಲೆಷ್ಟು? 20 ಪೈಸೆ… 30 ಪೈಸೆ?! ಆತ್ಮಹತ್ಯೆ ಮಾಡದೆ ಇನ್ನೇನು ದಾರಿ? ಹಾಗಾಗಿ ರೈತರು ನೈಸರ್ಗಿಕ ಕೃಷಿಗೆ ಬರಲಿ.

ಎಲ್ಲರಿಗೂ ಘನತೆ ಗೌರವ ಬರಲಿ. ಉತ್ತಮ ಬೆಲೆ ಸಿಗಲಿ. ಎಲ್ಲ ಬೆಳೆಗಳಿಗೂ ಕನಿಷ್ಠ ಬೆಲೆ ನಿಗದಿಯಾಗಲಿ. ಉದಾಹರಣೆಗೆ ಟೊಮಾಟೋಗೆ ಕನಿಷ್ಠ ಬೆಲೆ ಕೆಜಿಗೆ 20 ರೂ. ಯಾವುದೇ ಕಾರಣಕ್ಕೂ ಅದಕ್ಕಿಂತ ಕೆಳಗೆ ಇಳಿಯದಂತಹ ಮಾರುಕಟ್ಟೆ ಸೃಷ್ಟಿಯಾಗಬೇಕು. ಗ್ರಾಹಕರೂ ಅಷ್ಟೇ ಜವಾಬ್ದಾರಿಯಿಂದ ಬೆಲೆ ಕೊಟ್ಟು ಕೊಳ್ಳಲು ತಯಾರಾಗಬೇಕು. ನಮ್ಮ ಉತ್ತಮ ಆರೋಗ್ಯಕ್ಕೆ, ಸುರಕ್ಷಿತವಾದ ನೈಸರ್ಗಿಕ ಆಹಾರ ಭದ್ರತೆಗೆ, ಈ ಹೆಜ್ಜೆ ಅನಿವಾರ್ಯ ಎಂದೆನಿಸುತ್ತೆ.

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವರು ಸ್ವಾಮಿ ಅಗ್ನಿವೇಶ್..

ಅವರು ಸ್ವಾಮಿ ಅಗ್ನಿವೇಶ್..

ಮ ಶ್ರೀ ಮುರಳಿಕೃಷ್ಣ ನಮ್ಮ ತತ್ವಶಾಸ್ತ್ರದಲ್ಲಿ ಭಾವನವಾದಿ(Idealist) ಮತ್ತು ಭೌತವಾದಿ(Materialist) ಎಂಬ ಧಾರೆಗಳಿವೆ.  ದೇವರು,...

ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ಅನುಪಮಾ ಪ್ರಸಾದ್ ನಾನಾಗ ಹತ್ತನೇ ತರಗತಿಯಲ್ಲಿದ್ದಿರಬೇಕು. ಮನೆಯಿಂದ ಶಾಲೆಗೆ ಬರುವ ಕಾಲುದಾರಿಯ ಒಂದು ತಿರುವಿನಲ್ಲಿ ನನಗಿಂತ ಎರಡು ಮೂರು...

ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..

ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..

ಎಂ ಆರ್ ಭಗವತಿ ಕೋಳಿ ಮೊಟ್ಟೆಯನ್ನೊಡೆದು, ಮೇಲಿನ ಚಿಪ್ಪನ್ನು ಸ್ವಲ್ಪ ತೆಗೆದು, ಒಳಗೆ ಹತ್ತಿಯನಿಟ್ಟು, ಪಿಳಿಪಿಳಿ ಕಣ್ಣನು ಬರೆದು, ಕೆಂಪು...

2 ಪ್ರತಿಕ್ರಿಯೆಗಳು

 1. Raj

  ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ನಿಮ್ಮ ಸಂತತಿ ಸಾವಿರವಾಗಲಿ.. ಎಲ್ಲಾ ಕಡೆ ಸಾವಯವ ತರಕಾರಿ ಸಿಗುವಂತಾಗಲಿ…

  ಪ್ರತಿಕ್ರಿಯೆ
 2. Seema

  Sir,
  Tunturu sante yalli nanu tarakari kondiddene. Nimma vishamukta padarthagala asakti great. Adare nivu lekanadalli Mysore nalli naisargika tarakari kendragalu illa endeiddidiri. Adare avu sakashtive. Nesara, Prakruti modaladavu adu sumaru varshagalida.
  All the best for Tunturu team. Olleyadagali…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: