ವಿಷ ಕುಡಿದು ವಿಷಕಂಠರಾದ ಅರಸರು…

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ಇವತ್ತು ನಾಡಿನ ಹಿರಿಯ ನಾಯಕರಾಗಿ ಬೆಳೆದು ನಿಂತಿರುವ ಹೆಚ್ ವಿಶ್ವನಾಥ್‌ ಅವರ ರಾಜಕೀಯ ಬದುಕಿನ ಅವಿಸ್ಮರಣೀಯ ಘಟನೆ ಇದು.

ಒಮ್ಮೆ ಅವರು ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರನ್ನು ಭೇಟಿ ಮಾಡಿದರು. ಹೀಗೆ ಭೇಟಿ ಮಾಡಿದವರು ಅರಸರ ಮುಂದೆ ಒಂದು ಬೇಡಿಕೆ ಇಟ್ಟರು.

ಸಾರ್‌, ನನಗೆ ರಾಜಕೀಯ ಬದುಕನ್ನು ನಿರ್ವಹಿಸಲು ಹಣ ಬೇಕಿದೆ. ಅದನ್ನು ಕೊಡಲು ಪ್ರಮುಖರೊಬ್ಬರು ಮುಂದೆ ಬಂದಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಒಂದು ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಜತೆ ಮಾತನಾಡಿ ಅಸೆಂಬ್ಲಿ ಎಲೆಕ್ಷನ್‌ಗೆ ಸ್ಪರ್ಧಿಸಲು ನನಗೆ ಪಕ್ಷದ ಟಿಕೆಟ್‌ ಕೊಡಿಸಬೇಕು ಎಂದು ಹೇಳಿದ್ದಾರೆ.

ಹೀಗಾಗಿ ದಯವಿಟ್ಟು ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕಟ್‌ ಕೊಡಿ. ಅವರೂ ಪಕ್ಷದ ಕೆಲಸ ಮಾಡುತ್ತಾ ಬಂದವರು. ಹೀಗಾಗಿ ಕೊಟ್ಟರೆ ತಪ್ಪೇನಾಗುವುದಿಲ್ಲ. ಅದೇ ರೀತಿ ನನಗೂ ಅನುಕೂಲವಾಗುತ್ತದೆ.

ವಿಶ್ವನಾಥ್‌ ಅವರ ಮಾತು ಕೇಳಿದ ಮುಖ್ಯಮಂತ್ರಿ ದೇವರಾಜ ಅರಸರು ತಮ್ಮ ತುಟಿಗಳ ನಡುವೆ ಕುಳಿತು ಹಬೆಯಾಡುತ್ತಿದ್ದ ಸಿಗಾರ್‌ನ್ನು ಕೈಗೆ ತೆಗೆದುಕೊಂಡು ನಗು ಬೀರುತ್ತಾರೆ.

ಅರಸರ ಮುಖದಲ್ಲಿ ಮಂದಹಾಸ ಮಿನುಗುತ್ತಿರುವುದನ್ನು ನೋಡಿದ ವಿಶ್ವನಾಥ್‌ ಅವರಿಗೆ ಸಮಾಧಾನವಾಗುತ್ತದೆ. ನಾನು ಬಂದ ಕೆಲಸವಾಗುತ್ತದೆ ಎಂಬ ವಿಶ್ವಾಸ ಮೂಡುತ್ತದೆ. ಹಾಗಂತಲೇ ತಮ್ಮ ಮುಷ್ಟಿಗಳೆರಡನ್ನು ಒಂದರೊಳಗೊಂದು ಬೆರೆಸಿ ಉಜ್ಜತೊಡಗುತ್ತಾರೆ.

ಅಷ್ಟರಲ್ಲಿ ದೇವರಾಜ ಅರಸರ ಕಂಚಿನ ಕಂಠ ಕೇಳುತ್ತದೆ: ವಿಶ್ವನಾಥ್‌, ಎಲೆಕ್ಷನ್‌ ಟಿಕೆಟ್‌ ಬೇಕು ಅಂತ ಅವನು ನಿನ್ನ ಬಳಿ ಹೇಳಿ ಕಳಿಸಿದನಾ? ಗುಡ್. ಅವನು ಪಕ್ಷಕ್ಕಾಗಿ ಕೆಲಸ ಮಾಡಿದ್ದಾನೆ. ಅದೂ ನಿಜವೇ. ಹಾಗಂತ ಅವನಿಗೆ ಟಿಕೆಟ್‌ ಕೊಟ್ಟರೆ ನಿನ್ನಂತವರಿಗೆ ಏನು ಗೌರವ ಉಳಿಯುತ್ತದೆ?

ಅರಸರ ಮಾತು ಕೇಳಿ ವಿಶ್ವನಾಥ್‌ ಮುಖದಲ್ಲಿ ಮುಜುಗರ ಆಕಳಿಸತೊಡಗುತ್ತದೆ. ಹಾಗಂತಲೇ: ಸಾರ್‌, ನಿಮ್ಮ ಬಳಿ ಕೇಳಲು ಅವರಿಗೆ ಧೈರ್ಯ ಕಡಿಮೆ. ಹೀಗಾಗಿ ನನ್ನ ಬಳಿ ಹೇಳಿ ಕಳಿಸಿದ್ದಾರೆ, ಅದೇ ರೀತಿ ಅವರಿಗೆ ಟಿಕೆಟ್‌ ಕೊಡುವುದರಿಂದ ನನಗೂ ಅನುಕೂಲವಾಗುತ್ತದೆ ಎಂದು ನಾನೇ ಹೇಳುತ್ತಿದ್ದೇನೆ ಎನ್ನುತ್ತಾರೆ.

ಆಗ ಅರಸರು ವಾತ್ಸಲ್ಯದ ದೃಷ್ಟಿ ಬೀರಿ: ವಿಶ್ವನಾಥ್‌, ಅವನು ಉದ್ಯಮಿ. ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುತ್ತಾನೆ. ಶೈಕ್ಷಣಿಕ ಸಂಸ್ಥೆಗಳಿಂದ ಹಿಡಿದು ಹಲವು ಉದ್ಯಮಗಳನ್ನು ನಡೆಸುತ್ತಾನೆ. ಅದಕ್ಕೆ ಬೇಕಾದ ಪರವಾನಗಿಯನ್ನು ಸರ್ಕಾರ ಕೊಟ್ಟಿದೆ. ಕೊಡುತ್ತಿದೆ.

ಆದರೆ ನೆನಪಿಸು, ಒಂದು ಸಲ ಅವನಂತವರು ವಿಧಾನಸಭೆಗೆ ಆಯ್ಕೆಯಾಗಿ ಬಂದರೆ ನಿನ್ನಂತವರಿಗೆ ಏನು ಗೌರವ ಉಳಿಯುತ್ತದೆ? ಎಂದು ಪ್ರಶ್ನಿಸುತ್ತಾರೆ.

ಹಾಗೇ ಮುಂದುವರಿದು: ನೀನು ಜನಸೇವೆಗೆ ಅಂತ ಬಂದಿದ್ದೀಯ. ಕಷ್ಟ, ಸುಖದ ನಡುವೆ ಅದನ್ನು ಮಾಡುತ್ತೀಯ. ನಿನಗೆ ಶಾಸಕ ಸ್ಥಾನ ಅನ್ನುವುದು ಉದ್ಯೋಗವಲ್ಲ, ಸೇವೆ. ಆದರೆ ಅವನಂತವರಿಗೆ ಅದು ಉದ್ಯೋಗ. ತನಗಿರುವ ದುಡ್ಡಿನ ಬಲದಿಂದ ಅವನು ಎಲ್ಲವನ್ನು, ಎಲ್ಲರನ್ನು ಕೊಳ್ಳತೊಡುತ್ತಾನೆ.

ಹೀಗೆ ಶಾಸಕರಾದವರು ಎಲ್ಲವನ್ನು ಖರೀದಿಸತೊಡಗಿದರೆ ಜನಸೇವೆ ಮಾಡುವುದಿಲ್ಲ. ಬದಲಿಗೆ ತಮ್ಮ ಉದ್ಯಮವನ್ನು ಬೆಳೆಸಿಕೊಳ್ಳಲು ಈ ಅಧಿಕಾರವನ್ನು ಬಳಸಿಕೊಳ್ಳುತ್ತಾರೆ. ನೀನು ಬಂದು ಅಂತವರಿಗೆ ಟಿಕೆಟ್‌ ಕೊಡು ಎನ್ನುತ್ತಿದ್ದೀಯ ಎಂದು ಪ್ರೀತಿಯಿಂದ ಬೆನ್ನು ಸವರುತ್ತಾರೆ.

ವಿಶ್ವನಾಥ್‌ ಮೂಕ ವಿಸ್ಮಿತರಾಗಿ ನಿಲ್ಲುತ್ತಾರೆ.

ಇದೇ ರೀತಿಯ ಮತ್ತೊಂದು ಘಟನೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬದುಕಿನಲ್ಲಿ ನಡೆಯುತ್ತದೆ.

ಆವತ್ತು ಶಾಸಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಒಬ್ಬ ಕಂಟ್ರಾಕ್ಟರ್‌ ಪರವಾಗಿ ದೇವರಾಜ ಅರಸರನ್ನು ಭೇಟಿ ಮಾಡುತ್ತಾರೆ.

ಸಾರ್‌, ಈ ಕಂಟ್ರಾಕ್ಟರು ನನಗೆ ತುಂಬ ಬೇಕಾದವರು. ಪಕ್ಷದ ಕೆಲಸಕ್ಕೆ ಅಂತ ನೆರವು ನೀಡುತ್ತಿರುತ್ತಾರೆ. ಅವರಿಗೆ ಇಂತದೊಂದು ಕೆಲಸವಾಗಬೇಕಿದೆ. ಯೋಜನೆಯೊಂದರ ಗುತ್ತಿಗೆ ಪಡೆಯಲು ಅವರು ಬಯಸಿದ್ದಾರೆ. ದಯವಿಟ್ಟು ನೀವು ಅವರಿಗೆ ಸಹಾಯ ಮಾಡಬೇಕು.

ಮಲ್ಲಿಕಾರ್ಜುನ ಖರ್ಗೆಯವರ ಮಾತು ಕೇಳಿ ಅರಸರು ಕೆಲ ಕಾಲ ಮಾತನಾಡದೆ ಸುಮ್ಮನಿರುತ್ತಾರೆ. ಆನಂತರ ಮೆಲುವಾಗಿ: ಈ ಗುತ್ತಿಗೆ ಸಿಕ್ಕರೆ ಆ ಕಂಟ್ರಾಕ್ಟರ್‌ಗೆ ಎಷ್ಟು ಹಣ ಸಿಗುತ್ತದೆ ಗೊತ್ತಾ? ಎಂದು ಪ್ರಶ್ನಿಸುತ್ತಾರೆ.

ಆಗ ಮಲ್ಲಿಕಾರ್ಜುನ ಖರ್ಗೆ, ಸಾರ್‌, ಗುತ್ತಿಗೆ ಸಿಕ್ಕರೆ ಕಂಟ್ರಾಕ್ಟರ್‌ಗೆ ಸ್ವಲ್ಪ ಲಾಭವಾಗುತ್ತದೆ. ನಮಗೂ ರಾಜಕಾರಣ ಮಾಡಲು ಆಗಾಗ ನೆರವು ನೀಡಲು ಶಕ್ತಿ ಅವರಿಗೆ ಬರುತ್ತದೆ ಎನ್ನುತ್ತಾರೆ.

ಅದಕ್ಕೆ ಪ್ರತಿಯಾಗಿ ಅರಸರು: ಸದರಿ ಕಂಟ್ರಾಕ್ಟರ್‌ಗೆ ಈ ಗುತ್ತಿಗೆ ಸಿಕ್ಕರೆ ಎಷ್ಟು ಲಾಭ ಪಡೆಯಬಹುದು ಎಂಬುದು ಜನರ ಪರವಾಗಿ ಸೇವೆ ಮಾಡಲು ಬಂದಿರುವ ನಿಮ್ಮಂತವರಿಗೆ ಗೊತ್ತಿಲ್ಲ. ಹೀಗಾಗಿಯೇ ಈ ಕೆಲಸವನ್ನು ಮಾಡಿಸಿಕೊಳ್ಳಲು ಆತ ನಿಮ್ಮನ್ನು ಇಲ್ಲಿಗೆ ಕಳಿಸಿರುವುದು ಎನ್ನುತ್ತಾರೆ.

ಸಾರ್‌, ಹಾಗಿದ್ದರೆ ಏನು ಮಾಡಬೇಕು? ಎಂದು ಮಲ್ಲಿಕಾರ್ಜುನ ಖರ್ಗೆ ಕೇಳುತ್ತಾರೆ. ಅದಕ್ಕೆ ಅರಸರು: ಆ ಕಂಟ್ರಾಕ್ಟರ್‌ ಅನ್ನು ನನ್ನ ಬಳಿ ಕಳಿಸು, ನಾನು ಮಾತನಾಡುತ್ತೇನೆ. ಭ್ರಷ್ಟಾಚಾರದ ಹಣೆ ಪಟ್ಟಿ ನನಗೆ ತಗಲಲಿ. ಆದರೆ ನಿಮ್ಮಂತವರಿಗೆ ತಗಲಬಾರದು ಎಂದು ಹೇಳುತ್ತಾರೆ.

ಅಷ್ಟೇ ಅಲ್ಲ, ಏನೇ ತೊಂದರೆ ಇದ್ದರೂ ಬಂದು ನನ್ನನ್ನು ಕೇಳಬೇಕು. ಯಾವ ಕಾರಣಕ್ಕೂ ಇಂತವರನ್ನು ಹತ್ತಿರ ಬಿಟ್ಟುಕೊಳ್ಳಬಾರದು. ಇವರೆಲ್ಲ ಹೇಗೆ ಎಂದರೆ ನೂರು ರೂಪಾಯಿ ಕೊಟ್ಟು ಹತ್ತು ಸಾವಿರ ರೂಪಾಯಿ ಗಳಿಸುತ್ತಾರೆ. ನಿಮಗೆ ಅರ್ಥವಾಗುವುದಿಲ್ಲ. ಹೀಗಾಗಿ ನಾನೇ ಹ್ಯಾಂಡಲ್‌ ಮಾಡುತ್ತೇನೆ. ನನ್ನ ಬಳಿ ಕಳಿಸಿ ಎನ್ನುತ್ತಾರೆ.

ದೇವರಾಜ ಅರಸರಾಡಿದ ಮಾತುಗಳನ್ನು ಕೇಳಿ ಮಲ್ಲಿಕಾರ್ಜುನ ಖರ್ಗೆ ವಿಸ್ಮಿತರಾಗುತ್ತಾರೆ. ನಾನು ಭ್ರಷ್ಟ ಎಂಬ ಕಳಂಕವನ್ನು ಹೊತ್ತರೂ ಪರವಾಗಿಲ್ಲ. ಆದರೆ ನಿಮ್ಮಂತವರು ಅಂತಹ ಕಳಂಕ ಹೊರಬಾರದು ಎಂಬ ಅರಸರು ಮಾತನ್ನು ಈಗಲೂ ತಮ್ಮ ಖಾಸಗಿ ಮಾತುಕತೆಯ ಸಂದರ್ಭದಲ್ಲಿ ಆಪ್ತರೆದುರು ಹೇಳಿಕೊಳ್ಳುತ್ತಾರೆ.

ಈ ಘಟನೆಯನ್ನು ಇವತ್ತು ನೆನಪಿಸಿಕೊಳ್ಳಲು ಒಂದು ಕಾರಣವಿದೆ. ಅದೆಂದರೆ, ಭ್ರಷ್ಟಾಚಾರ ಎಂಬ ವಿಷ ತಳ ಮಟ್ಟಕ್ಕೆ ಹರಿಯದಿರಲಿ ಎಂಬ ಕಾರಣಕ್ಕಾಗಿ ತಾವೇ ಅದನ್ನು ಕುಡಿದು ವಿಷಕಂಠರಾದ ಅರಸರು, ಅದರ ನಡುವೆಯೇ ದುರ್ಬಲ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಮಾಜಿಕ ಕ್ರಾಂತಿ ನಡೆಸಿದರು.

ಅಂತಹ ಮಹಾನ್‌ ನಾಯಕನ ನೂರಾ ಐದನೇ ಜನ್ಮ ದಿನಾಚರಣೆ ಆಗಸ್ಟ್‌ ಇಪ್ಪತ್ತರಂದು ಆಚರಣೆಯಾಗಿದೆ.

ಸಂಪತ್ತಿನ ಕೇಂದ್ರೀಕರಣದ ವಿರುದ್ಧ ಹೋರಾಡಿದ ಅರಸರ ವಿಚಾರಧಾರೆಗಳು ದಿನಕಳೆದಂತೆ ಹೆಚ್ಚೆಚ್ಚು ಪ್ರಸ್ತುತವಾಗುತ್ತಾ ನಡೆದಿವೆ ಎಂಬ ಕಾರಣಕ್ಕಾಗಿ ಮತ್ತೆ, ಮತ್ತೆ ಅವರನ್ನು ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ.

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಹೊಲದೊಡೆಯ ಎಂಬ ಕಾರ್ಯಕ್ರಮವನ್ನು ಜಾರಿ ಮಾಡಿದ ದೇವರಾಜ ಅರಸರು ಜಡಗಟ್ಟಿದ್ದ ಕರ್ನಾಟಕದ ರಾಜಕೀಯ ವ್ಯವಸ್ಥೆಗೆ ಚಲನೆ ತಂದವರು.

ಅಂದ ಹಾಗೆ ವ್ಯವಸ್ಥೆಯ ಕೆಲವೇ ಪಾಲು ಜನರ ಕೈಲಿ ಸಂಪತ್ತು ಕೇಂದ್ರೀಕೃತವಾದಾಗ ಬಹುಸಂಖ್ಯಾತರು ಹಾಹಾಕಾರ ಎಬ್ಬಿಸುವ ಸ್ಥಿತಿ ಬರುತ್ತದೆ.

ಅಂತಹ ಹಾಹಾಕಾರ ದಟ್ಟವಾಗಿದ್ದ ಸಂದರ್ಭದಲ್ಲಿ ಅರಸರು ಜಾರಿಗೆ ತಂದ ಉಳುವವನೇ ಹೊಲದೊಡೆಯ ಕಾರ್ಯಕ್ರಮ ದುರ್ಬಲ ವರ್ಗಗಳಿಗೆ ಗಣನೀಯ ಪ್ರಮಾಣದ ಭೂಮಿ ಲಭ್ಯವಾಗುವಂತೆ ಮಾಡಿತು. ಆ ಮೂಲಕ ದುರ್ಬಲ ವರ್ಗಗಳು ಸಮಾಜದ ಮುಖ್ಯವಾಹಿನಿಗೆ ಬರಲು ಅನುಕೂಲವಾಯಿತು.

ಅವತ್ತು ಯಾವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ದೇವರಾಜ ಅರಸರು ಹೋರಾಡಿದರೋ? ಅದೇ ಪ್ರಶ್ನೆ ಮತ್ತೆ ಬೃಹದಾಕಾರವಾಗಿ ಮೇಲೆದ್ದು ನಿಂತಿದೆ. ದುಡ್ಡಿದ್ದರೆ ಯಾರು ಬೇಕಾದರೂ ಕೃಷಿ ಭೂಮಿ ಕೊಳ್ಳಬಹುದು ಎಂಬ ಸರ್ಕಾರದ ನೀತಿ ಯಥಾ ಪ್ರಕಾರ ಸಂಪತ್ತಿನ ಕೇಂದ್ರೀಕರಣಕ್ಕೆ ಮೂಲವಾಗುವುದು ನಿಸ್ಸಂಶಯ.

ಈ ಸಂಪತ್ತಿನ ಕೇಂದ್ರೀಕರಣಕ್ಕೆ ತಡೆಯಾಗದಿದ್ದರೆ ವ್ಯವಸ್ಥೆಯ ಬಹುಪಾಲು ಜನ ಹಾಹಾಕಾರ ಎಬ್ಬಿಸುವ ಸ್ಥಿತಿ ಬರುತ್ತದೆ. ಹೀಗಾಗಿ ಸಾಮಾಜಿಕ ನ್ಯಾಯದ ಕನಸು ಕಾಣುವ ಎಲ್ಲರೂ ದೇವರಾಜ ಅರಸರನ್ನು ಸ್ಮರಿಸಿಕೊಳ್ಳಬೇಕಾದ ಅಗತ್ಯವಿದೆ.

August 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This