ವಿಷ ತಯಾರಿಸುವುದು; ಕೇಕ್ ತಯಾರಿಸುವುದು…

ನಿರ್ನಿಮಿತ್ತವಾಗಿ, ಕೇವಲ ಖುಷಿಗಾಗಿ ಮನುಷ್ಯ ಕೇಡಾಗಬಲ್ಲ; ಹಾಗೆಯೇ ಯಾವ ಕಾರಣವೂ ಇಲ್ಲದೆ ಅವನು ಕೇಡಾಗಬಲ್ಲ ಎಂಬುದು ಲಂಕೇಶರನ್ನು ಓದುವಾಗ ಮತ್ತೆ ಮತ್ತೆ ನಮಗೆ ಮನದಟ್ಟಾಗುತ್ತಿರುತ್ತದೆ.

* * *

gali5_thumbnail.gif

ನಟರಾಜ್ ಹುಳಿಯಾರ್

ನುಷ್ಯನಿಗೆ ಇನ್ನೊಬ್ಬರನ್ನು ಹಿಂಸಿಸುವುದರಲ್ಲಿ, ವಂಚಿಸುವುದರಲ್ಲಿ ಆನಂದವಿದೆ. ಈ ಆನಂದವನ್ನು ಅವನು ಸುಲಭವಾಗಿ ಬಿಟ್ಟುಕೊಡಲಾರನೆಂದು ಕಾಣುತ್ತದೆ. ಲಂಕೇಶ್ ಒಮ್ಮೆ ನೆನಪಿಸಿಕೊಂಡ ಘಟನೆ ಇದು: ಅವರ ಪರಿಚಿತನೊಬ್ಬ ತನ್ನ ಗೆಳತಿಯನ್ನು ಮದುವೆಯಾದ. ಅವರಿಬ್ಬರಿಗೂ ಮನಸ್ತಾಪವಾಯಿತು. ಅವಳನ್ನು ಹಿಂಸಿಸಲು ಅವನು ಕಂಡುಕೊಂಡ ಸ್ವಹಿಂಸೆ ಎಷ್ಟು ಭಯಾನಕವಾಗಿತ್ತೆಂದರೆ ಆತ ಅವಳನ್ನು ಬಯ್ಯಲಿಲ್ಲ, ಹೊಡೆಯಲಿಲ್ಲ; ಬದಲಿಗೆ ನಡುರಾತ್ರಿ ಎದ್ದು ತನ್ನ ಮೈಯ ಭಾಗಗಳನ್ನು ಕೊಯ್ದುಕೊಂಡು ರಕ್ತ ಸುರಿಸುತ್ತಾ, ಅವಳನ್ನು ನೋಯಿಸತೊಡಗಿದ. ಇದನ್ನೆಲ್ಲಾ ಹೇಳುತ್ತಾ ಲಂಕೇಶ್, “ನೋಡು, ರೈಟರ್ ಆದವನಿಗೆ ಇವೆಲ್ಲ ಮುಖಗಳು ಗೊತ್ತಿರಬೇಕು” ಎಂದರು.

ಮಾರ್ಗರೆಟ್ ಆಟ್ ವುಡ್ ಎಂಬ ಕೆನಡಾದ ಲೇಖಕಿ ಒಂದೆಡೆ ಬರೆಯುತ್ತಾಳೆ: “ವಿಷ ತಯಾರಿಸುವುದು ಕೇಕ್ ತಯಾರಿಸುವುದಷ್ಟೇ ಆನಂದದ ಕೆಲಸ. ಜನಕ್ಕೆ ವಿಷ ತಯಾರಿಸುವುದು ಅಂದರೆ ಇಷ್ಟ. ಇದು ನಮಗೆ ಅರ್ಥವಾಗದಿದ್ದರೆ ಬೇರೆ ಯಾವುದೂ ಅರ್ಥವಾಗುವುದಿಲ್ಲ”. ಅಂದರೆ, ನಿರ್ನಿಮಿತ್ತವಾಗಿ, ಕೇವಲ ಖುಷಿಗಾಗಿ ಮನುಷ್ಯ ಕೇಡಾಗಬಲ್ಲ; ಹಾಗೆಯೇ ಯಾವ ಕಾರಣವೂ ಇಲ್ಲದೆ ಅವನು ಕೇಡಾಗಬಲ್ಲ ಎಂಬುದು ಲಂಕೇಶರನ್ನು ಓದುವಾಗ ಮತ್ತೆ ಮತ್ತೆ ನಮಗೆ ಮನದಟ್ಟಾಗುತ್ತಿರುತ್ತದೆ.

ಈವಿಲ್ ಗೆ ಇರುವ ವಿಚಿತ್ರ ಚಾಲಕ ಶಕ್ತಿ ಹಾಗೂ ಅದರ ಆಕರ್ಷಣೆ ಎಷ್ಟು ಆಳವಾದದ್ದು ಎಂಬುದನ್ನು ಅರಿಯದ ಲೇಖಕ ಭೋಳೆಯಾಗಿಬಿಡಬಲ್ಲ. ಕೇಡು ಅದೆಷ್ಟು ಆಕರ್ಷಕವೆಂದರೆ, ಬರೆಯುತ್ತಾ ಬರೆಯುತ್ತಾ ಲೇಖಕನೇ ಅದರ ಸ್ವರೂಪಕ್ಕೆ ಬೆರಗಾಗಿ ಅದರ ಮೋಹಕ್ಕೆ ಒಳಗಾಗಬಲ್ಲ. ಸೈತಾನನನ್ನು ಚಿತ್ರಿಸಿದ ಕವಿ ಮಿಲ್ಟನ್ ಗೆ ಅಥವಾ ರಾವಣನನ್ನು ಸೃಷ್ಟಿಸಿದ ವಾಲ್ಮೀಕಿಗೆ ಹೀಗಾಗಿರಬಹುದು. ಈ ಕೇಡು ಓದುಗನಿಗೂ ಆಕರ್ಷಕವಾಗಿ ಕಾಣುವುದು ಕಲೆಯ ಕಾರಣದಿಂದಾಗಿ ಎಂಬುದು ನಿಜ. ಆದರೂ ಕೇಡಿನ ಬಗ್ಗೆ ನಮಗಿರುವ ಸುಪ್ತ ಆರಾಧನೆಯ ಮನೋಭಾವವನ್ನೂ ಇದು ಸೂಚಿಸುತ್ತದೆ. ಜೊತೆಗೆ ಕೇಡು ದಕ್ಷತೆಯ ಪ್ರತಿರೂಪದಂತಿದ್ದಾಗ ಅದರ ಬಗ್ಗೆ ವಿರೋಧ ತಳೆಯುವುದು ಹಾಗೂ ಅದನ್ನು ಎದುರಿಸುವುದು ಇನ್ನಷ್ಟು ಕಷ್ಟ. ಲಂಕೇಶರ “ಮಾರಲಾಗದ ನೆಲ” ಕತೆಯ ರುದ್ರಮೂರ್ತಿ ಊರನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ಊರಿಗೆ ರಸ್ತೆ ಹಾಗೂ ಕರೆಂಟು ತರುವ ಮೂಲಕ. ಆತ ನಟಿಯರನ್ನು ಕರೆಸಿ ನಾಟಕ ಆಡಿಸಬಲ್ಲ. ಚಾಲಾಕಿನಿಂದ ಮಾತಾಡಬಲ್ಲ. ಹಗಲು ರಾತ್ರಿ ಎಲ್ಲೆಡೆ ಸುತ್ತಬಲ್ಲ. “ಸೈತಾನ ನಿದ್ರಿಸುವುದಿಲ್ಲ” ಎಂದು ಮಿಲ್ಟನ್ ಕಂಡುಕೊಂಡ ಸತ್ಯವನ್ನು ಲಂಕೇಶರು ಚಿತ್ರಿಸಿದ ಕೇಡಿನ ವ್ಯಕ್ತಿತ್ವಗಳು ಹಾಗೂ ಕೇಡಿನ ಮುಖಗಳು ಧ್ವನಿಸುತ್ತವೆ. ಈ ಅಂಶ ಕೇವಲ ಲಂಕೇಶರ ಕಥಾಲೋಕದಲ್ಲಷ್ಟೆ ಅಲ್ಲದೆ ಅವರ ಪತ್ರಿಕೆಯಲ್ಲೂ ವ್ಯಕ್ತವಾಗುತ್ತಿತ್ತು. ಹಗಲು ರಾತ್ರಿ ರಾಜಕೀಯವನ್ನೇ ಯೋಚಿಸಿ, ತಮಗಾಗದವರನ್ನು ನಿರ್ನಾಮ ಮಾಡುವ ದೇವೇಗೌಡರ ವ್ಯಕ್ತಿತ್ವ ಕುರಿತು “ಲಂಕೇಶ್ ಪತ್ರಿಕೆ”ಯಲ್ಲಿ ಪ್ರಕಟವಾದ ಒಂದು ಮುಖಪುಟ ಲೇಖನಕ್ಕೆ ಲಂಕೇಶರು “ರಾಕ್ಷಸ ನಿದ್ರಿಸುವುದಿಲ್ಲ” ಎಂಬ ಶೀರ್ಷಿಕೆ ಕೊಟ್ಟರು.

ಹೀಗೆ ಗೆಲ್ಲಲು ಹಗಲು ರಾತ್ರಿ ದುಡಿಯುವ ರಾಜಕಾರಣಿಗಳ ಬಗ್ಗೆ ಜನರಿಗಿರುವ ಆಕರ್ಷಣೆಯ ಬಗ್ಗೆ ಲಂಕೇಶ್ ಒಮ್ಮೆ ಮಾತಾಡುತ್ತಾ, ಆಗ ಗಂಗಾವತಿಯ ಶಾಸಕರಾಗಿದ್ದ ಬಸವರಾಜ ಪಾಟೀಲ ಅನ್ವರಿಯವರ ಬಗ್ಗೆ ಹೇಳಿದರು: “ಅವನು ಈವಿಲ್ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಅವನು ವರ್ಣರಂಜಿತವಾಗಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದರಲ್ಲಿ ನಿಸ್ಸೀಮ. ಒಮ್ಮೆ ರವೀಂದ್ರ ರೇಶ್ಮೆ ಈ ಅನ್ವರಿಯ ಬಗ್ಗೆ ಬರೆದಾಗ “ಆ ರೇಶ್ಮೆ ಈ ಕ್ಷೇತ್ರದಲ್ಲಿ ಎಂಎಲ್ ಎ ಟಿಕೆಟ್ ಗೆ ಟ್ರೈ ಮಾಡ್ದ, ಸಿಗಲಿಲ್ಲ. ಅದಕ್ಕೆ ಹೀಗೆ ಬರೀತಾನೆ; ಆ ಲಂಕೇಶ್ ನೋಡ್ರಿ ನನ್ನ ಬಗ್ಗೆ ಏನೂ ಬರ್ದಿಲ್ಲ” ಎಂದು ಸುಳ್ಳು ಭಾಷಣ ಮಾಡಿ, ಅನ್ವರಿ ಜನರನ್ನೆಲ್ಲ ನಗಿಸಿದ. ಹೀಗೆ ಅವನು ಗೆದ್ದು ಮಿಂಚ್ತಾ ಇರುವಾಗ ಇನ್ನೊಬ್ಬ ಒಳ್ಳೆಯ ರಾಜಕಾರಣಿ “ಜನರಿಗೆ ಒಳ್ಳೆಯದಾಗಬೇಕು…” ಮುಂತಾಗಿ ಭಾಷಣ ಕೊಡ್ತಿದ್ದರೆ ಜನರೆಲ್ಲಾ ಜಾಗ ಖಾಲಿ ಮಾಡಿರ್ತಾರೆ. ನಾವು ಈ ಜಯಲಲಿತಾ, ಅಧ್ವಾನಿಗಳನ್ನೆಲ್ಲಾ ಡಿಸ್ಟ್ರಕ್ಟಿವ್ ಫೆಲೋಸ್, ಈವಿಲ್ ಗಳು ಅಂತ ಇರ್ತೀವಿ. ಆದ್ರೆ ಅವರ ಈವಿಲ್ ಗೆ ಇರೋ ಚಾರ್ಮ್ ನೋಡಿ ಜನ ಆರಿಸ್ತಾನೇ ಇರ್ತಾರೆ…”

ಇದಕ್ಕೆ ಮುಖ್ಯ ಕಾರಣವೆಂದರೆ, ಈವಿಲ್ ಗೆ ವಿಚಿತ್ರವಾದ ಏಕೋದ್ದೇಶವಿರುತ್ತದೆ. ಈವಿಲ್ ಏಕಮನಸ್ಸಿನಿಂದ ಕೆಲಸ ಮಾಡುತ್ತಿರುತ್ತದೆ. ಅದಕ್ಕೆ ವಿನಾಶ ಮಾಡುವುದು ಹಾಗೂ ಗೆಲ್ಲುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ. ಆದರೆ ಒಳಿತು ಹಾಗಲ್ಲ. ನಮ್ಮ ಸ್ವಂತದ ದೈನಂದಿನ ಅನುಭವದಲ್ಲೇ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೇಡು ಹೆಚ್ಚಿಗೆ ಇರುವ ಜನ ಏನಾದರೂ ಮಾಡಿ ತಮ್ಮ ಕೆಲಸ ಸಾಧಿಸಿ ಕೊಂಡುಬಿಡುತ್ತಾರೆ; ಆದರೆ ಒಳ್ಳೆಯತನ ಹೆಚ್ಚಿಗೆ ಇರುವ ಸಂಕೋಚದ ಸ್ವಭಾವದವರು ಹಿಂದೆ ಸರಿದುಬಿಡುತ್ತಾರೆ.

‍ಲೇಖಕರು avadhi

March 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This