ವೀಲ್ ಛೇರ್ ನಲ್ಲಿ ಬಂದು ಸಿನೆಮಾ ನೋಡಿದ ಸುಜಾತ ದಂಪತಿಗಳು

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

|ಕಳೆದ ಸಂಚಿಕೆಯಿಂದ|

“ನಮ್ಮ ಕತೆ ಫುಲ್ ಢಿಫರೆಂಟ್, ಎಂಟು ಫೈಟ್ಸ್, ಒಟ್ಟು ಐದು ಸಾಂಗ್ಸ್, ಎಲ್ಲಾ ಸೂಪರ್ ಹಿಟ್, 100 ಡೇಸ್ ಗ್ಯಾರೆಂಟಿ”. ಟಿವಿಯಲ್ಲಿ ಹೊಸ ಸಿನೆಮಾದ ಪ್ರೆಸ್ ಮೀಟ್ ನಲ್ಲಿ ಸಾಮಾನ್ಯವಾಗಿ ಕೇಳುವ ಮಾತುಗಳಿವು. ರಿಲೀಸ್ ಗೆ ಮೊದಲೇ ಹೀಗೆ ಹೇಳುವುದನ್ನು ಕೇಳುತ್ತಾ ನಾವು ನಗುತ್ತಿದ್ದುದೆಷ್ಟು? ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ವಾ? ಅನಿಸುತ್ತಿತ್ತು.. ಅತ್ಯಂತ ಕೆಟ್ಟ ಸಿನೆಮಾ ನೋಡುವಾಗ ಅದರ ಡೈರೆಕ್ಟರ್ ಗೂ ತಮ್ಮ ಸಿನೆಮಾ ಅದ್ಭುತ ಅಂತಲೇ ಎನಿಸಿರಬಹುದಲ್ಲವೇ? ಅಂತೆಲ್ಲಾ ನಾವು ನಮ್ಮೊಳಗೇ ಮಾತನಾಡಿಕೊಳ್ಳುತ್ತಿದ್ದೆವು. ಇದೀಗ ಬಂದದ್ದು ನಮ್ಮ ಟರ್ನ್…

ನಾಳೆ ನಮ್ಮ ಸಿನೆಮಾ ರಿಲೀಸ್ “ನಮ್ಮ ಸಿನೆಮಾ” ಎಂದು ಮುದ್ದು ಮಾಡದೆ ನಾವೇ ಮೊದಲ ಕಟು ವಿಮರ್ಶಕರಾಗಿ ಬಹಳ ಎಚ್ಚರಿಕೆಯಿಂದ ಸಿನೆಮಾ ಮಾಡಿದ್ದರೂ ಒಂದು ಸಣ್ಣ ಆತಂಕ ಇದ್ದೇ ಇತ್ತು. ಪ್ರೀಮಿಯರ್ ಷೋ ನೋಡಿದ ಹಿತೈಶಿಗಳು ಮಾಧ್ಯಮದವರೇನೋ ಬಹಳಷ್ಟು ಹೊಗಳಿ ಭರವಸೆ ಕೊಟ್ಟಿದ್ದರು. ಆದರೂ ಪ್ರೇಕ್ಷಕರ ರಿಯಾಕ್ಷನ್ ಹೇಗಿರಬಹುದೆಂಬ ಕುತೂಹಲ ನಮ್ಮದು.

ನವೆಂಬರ್ 1 ಚಿತ್ರ ಬಿಡುಗಡೆಯ ದಿನ ಚಿತ್ರದ ಪ್ರಮೋಷನ್ ಗಾಗಿ ಬೆಳಗ್ಗೆ ರಾಜ್ ಶೆಟ್ಟಿಯವರೂ ಸೇರಿದಂತೆ ಕಲಾವಿದರು ಮತ್ತು ಟೆಕ್ನಿಷಿಯನ್ಸ್ ಎಲ್ಲರೂ ಸೇರಿ ಮೂರು ತಂಡ ಮಾಡಿಕೊಂಡು ಚಿತ್ರ ಮಂದಿರಗಳಿಗೆ ಭೇಟಿ ನೀಡಿದೆವು. ಅಮ್ಮಚ್ಚಿಯನ್ನು ನೋಡಿ ಹೊರಬರುವ ಪ್ರೇಕ್ಷಕರ ರಿಯಾಕ್ಷನ್ ಹೇಗಿರಬಹುದು ಎಂಬ ಕುತೂಹಲ. ಮೊದಲ ಪ್ರದರ್ಶನ ಮುಗಿಯಿತು, ಹೊರ ಬರುವ ಪ್ರೇಕ್ಷಕರಲ್ಲಿ ಬಹಳಷ್ಟು ಜನರ ಕಣ್ಣುಗಳು ಅತ್ತು ಕೆಂಪಗಾಗಿದ್ದವು. ಸಿನೆಮಾದ ಗುಂಗಿನಲ್ಲಿಯೇ ಇದ್ದ ಅವರು, ನಮ್ಮ ಕಲಾವಿದರನ್ನು ನೋಡುತ್ತಲೇ ಬೆರಗಾಗಿ ಎಷ್ಟು ಖುಷಿ ಪಟ್ಟರೆಂದರೆ,, ಅವರ ಆ ಎಕ್ಸೈಟ್ ಮೆಂಟ್ ನೋಡಿಯೇ ” ಓ!, ಸಿನೆಮಾ ಜನರನ್ನು ಮುಟ್ಟಿದೆ” ಎಂಬ ದೊಡ್ಡ ಸಮಾಧಾನವಾಗಿತ್ತು ನಮಗೆ.

“ಎಷ್ಟೊ ವರ್ಷದ ನಂತರ ಇಂತದ್ದೊಂದು ಸಿನೆಮಾ ನೋಡಿದೆವು”, “ವೈದೇಹಿಯವರ ಕತೆಗಳಂತೂ ಅದ್ಭುತ” “ಎಂತಹ ಇಂಪಾದ ಹಾಡುಗಳು” “ಇವರು ವಾಸು ಅಲ್ವಾ?” “ಓ ನೀವೆನಾ ಪುಟ್ಟಮ್ಮತ್ತೆ ?” “ಅರೆ ಇಲ್ಲಿ ಅಮ್ಮಚ್ಚಿ” “ಓ ಅಕ್ಕುನೂ ಬಂದಿದ್ದಾರೆ” “ಫೋಟೋಗ್ರಫಿ ಅಂತೂ ಸೂಪರ್” ಅಬ್ಬಾ! ಪ್ರೇಕ್ಷಕರ ಈ ಇಂತಹ ಮಾತುಗಳನ್ನು ನಾನೆಲ್ಲೋ ಒಂದು ಮೂಲೆಯಲ್ಲಿ ನಿಂತು ಕೇಳುತ್ತಿದ್ದೆ. ಪ್ರೇಕ್ಷಕರು ಸ್ಟಾರ್ ಗಳ ಜೊತೆ ನಿಲ್ಲುವ ಹಾಗೆ ನಮ್ಮ ಕಲಾವಿದರ ಜೊತೆ ನಿಂತು ಫೋಟೋ ತೆಗೆಸಿಕೊಳ್ಳುವಾಗ, ಹೇಳಲಾಗದ ಸಾರ್ಥಕ ಭಾವದಿಂದ ನನ್ನ ಕಣ್ತುಂಬಿಕೊಳ್ಳುತ್ತಿತ್ತು.

ಮೊದಲ ದಿನವೇ ಬಹುತೇಕ ಪ್ರದರ್ಶನಗಳು ಹೌಸ್ ಫುಲ್ ಆದದ್ದು ಮತ್ತೂ ಸಮಾಧಾನ. ಇನ್ನು ಇಂತಾ ಸಿನೆಮಾಗಳು ಬೆಳೆಯುವುದೇ ಬಾಯಿಂದ ಬಾಯಿಗೆ ಹರಡುವ ಸಿನೆಮಾ ಬಗೆಗಿನ ಮಾತುಗಳಿಂದ. ಅದು ಬಹಳಷ್ಟು ಕೆಲಸ ಮಾಡಿತ್ತೆಂಬುದಕ್ಕೆ ಅಮ್ಮಚ್ಚಿಯನ್ನು ನೋಡಲು ಚಿತ್ರಮಂದಿರಗಳಿಗೆ ಸಣ್ಣ ಮಕ್ಕಳಿಂದ ಕೋಲು ಹಿಡಿದು ಬಂದ ಹಿರಿಯರೇ ಸಾಕ್ಷಿ.

ಏಕೋ “ಇವಳು ಅಮ್ಮಚ್ಚಿ”ಯಲ್ಲಿ ಇಷ್ಟರವರೆಗೆ ಬರೆದ ಸಂಚಿಕೆಯಷ್ಟು ಸುಲಭವಾಗಿ ಈ ಸಂಚಿಕೆ ಬರೆಯಲು ಸಾಧ್ಯವಾಗುತ್ತಿಲ್ಲ ನನಗೆ. ಅದು ಹಾಗೇ, ನಮ್ಮನ್ನು ನಾವು ಹೊಗಳಿಕೊಳ್ಳುವಷ್ಟು ಮುಜುಗರದ ಸಂಗತಿ ಬೇರೊಂದಿಲ್ಲ. ಆದರೆ.. ಪ್ರೇಕ್ಷಕರ ಅಗಾಧವಾದ ಆ ಪ್ರೀತಿಯನ್ನು ನಿಮ್ಮ ಮುಂದೆ ಹಂಚಿಕೊಳ್ಳದೇ ಇರಲೂ ಸಾಧ್ಯವಾಗುತ್ತಿಲ್ಲ. ಅತ್ಯಂತ ಮುಜುಗರ ಮತ್ತು ವಿನಯದಿಂದಲೇ ಕೆಲವೊಂದು ಸನ್ನಿವೇಶಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಪ್ರೀಮಿಯರ್ ಷೋ ನೋಡಲು ಬೆಂಗಳೂರಿನವರೆಗೂ ಬರಲಾಗದ ವೈದೇಹಿ ಮೇಡಂ ಮಣಿಪಾಲ್ ನಲ್ಲಿ ಕುಟುಂಬದವರೊಂದಿಗೆ ಸಿನೆಮಾ ನೋಡಿ ಮನಸಾರೆ ಹರಸಿದ್ದು ನಮ್ಮ ಮೊದಲ ಯಶಸ್ಸು.

ರಿಲೀಸ್ ಆದ ಮರುದಿನ ಶುಕ್ರವಾರದ ಎಲ್ಲಾ ದಿನಪತ್ರಿಕೆಗಳಲ್ಲಿಯೂ ಪುಟದ ತುಂಬಾ ಅಮಚ್ಚಿಯೇ ರಾರಾಜಿಸುತ್ತಿದ್ದಳು. ಪತ್ರಿಕಾ ಮಾದ್ಯಮ ಅಮ್ಮಚ್ಚಿಗೆ ನೀಡಿದ ಸಹಾಕಾರದಿಂದ ದಿನದೊಳಗೆ ಅಮ್ಮಚ್ಚಿ ರಾಜ್ಯಾದ್ಯಂತ ಪ್ರಚಾರ ಪಡೆದುಕೊಂಡು ಬಿಟ್ಟಿದ್ದಳು. ಜೋಗಿಯವರು, ರವೀಂದ್ರ ಭಟ್ ಅವರು ರವಿ ಹೆಗಡೆಯವರು, ಸುನಯನ, ರಘುನಾಥ್ ಚ ಹ, ಮಂಜುನಾಥ್ ಚಾಂದ್ ಹೀಗೆ ಎಲ್ಲಾ ಪತ್ರಿಕೆಯವರೂ ಅಮಚ್ಚಿಯನ್ನು ಮನಸಾರೆ ಮೆಚ್ಚಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಮಾಡಿಬಿಟ್ಟಿದ್ದರು.

ಪತ್ರಿಕಾ ಬೇಧವಿಲ್ಲದೆ ಎಲ್ಲರೂ ಅಮ್ಮಚ್ಚಿಯನ್ನು ಮೆಚ್ಚಿ ಬರೆದಿದ್ದರೇ ವಿನಃ ಒಂದೇ ಒಂದು ಸಾಲೂ ನೆಗಟಿವ್ ಬರೆಯದೆ ಇದ್ದದು ಸಿನೆಮಾದ ಬಹು ದೊಡ್ಡ ಗೆಲುವು. ಇದೇ ಸಮಯದಲ್ಲಿ ‘ಅವಧಿ’ ಕೂಡಾ ಅಮ್ಮಚ್ಚಿಯ ಒಂದು ವಿಶೇಷ ಪ್ರೋಮೋ ಮಾಡಿ ಹಾಕಿದ್ದು ಅನೇಕ ಸಾಹಿತ್ಯಾಸಕ್ತರ ಗಮನ ಸೆಳೆಯಲು ಕಾರಣವಾಗಿತ್ತು.

ಸಿನೆಮಾ ರಿಲೀಸ್ ಆದ ಮರುದಿನದಿಂದ ನಮ್ಮ ಪರಿಚಯವೇ ಇಲ್ಲದಿದ್ದರೂ ಫೇಸ್ ಬುಕ್ ನಲ್ಲಿ ಅಮ್ಮಚ್ಚಿಯ ಬಗ್ಗೆ ಬರೆದು ತಮ್ಮ ಸಿನೆಮಾವೆಂದೇ ಪ್ರೀತಿಸಿದ ನೂರಾರು ಜನರಿಂದ ಅಮ್ಮಚ್ಚಿ ಇನ್ನಷ್ಟು ಬೆಳೆದಳು. ಯಾವ ಯಾವುದೋ ತಿಳಿಯದ ನಂಬರ್ ಗಳಿಂದ ವಾಟ್ಸ್ ಆಪ್ ನಲ್ಲಿ ಅಮ್ಮಚ್ಚಿಯನ್ನು ಮೆಚ್ಚಿದ ಉದ್ದ ಉದ್ದದ ವಿಮರ್ಶೆಗಳು ನಮಗೆ ಹುರುಪು ತುಂಬುತ್ತಿದ್ದವು.

ಅಮ್ಮಚ್ಚಿಯನ್ನು ನೋಡಿ, ಎಲ್ಲಿಂದಲೋ ನನ್ನ ನಂಬರ್ ತೆಗೆದುಕೊಂಡು ನಮ್ಮ ಪರಿಚಯ ಮಾಡಿಕೊಂಡು, “ಇದೊಂದು ಅದ್ಭುತ ಸಿನೆಮಾ ಇಂತಹ ಸಿನೆಮಾ ಗೆಲ್ಲಲೇ ಬೇಕು ಅದಕ್ಕೆ ನನ್ನಿಂದೇನಾದರೂ ಸಹಾಯ ಬೇಕಾ?” ಎಂದು ಕೇಳಿದ ಕೆ.ಎಂ.ಎಫ್.ನ ಹಿರಿಯ ಅಧಿಕಾರಿಯಾಗಿದ್ದ ಪ್ರೇಮ್ ನಾಥ್ ಅವರಂತಹ ಅದೆಷ್ಟು ಸಹೃದಯರು ನಮ್ಮ ಬೆಂಬಲಕ್ಕೆ ನಿಂತದ್ದು? ಇಂತಹ ನೈತಿಕ ಬೇಂಬಲವೇ ತಾನೇ ಬೇಕಿದ್ದದ್ದು ಅಮ್ಮಚ್ಚಿಗೆ?

ಒಮ್ಮೆ ಮನೆಯವರ ಜೊತೆ ಗಾಡಿಯಲ್ಲಿ ಹೋಗುವಾಗ ಊರ್ವಶಿ ಥಿಯೇಟರ್ ನ ಬಳಿ ಹಾರ್ನ್ ಮಾಡುತ್ತಾ ನಮ್ಮನ್ನು ಫಾಲೋ ಮಾಡಿಕೊಂಡು ಬಂದ ಗಂಡ ಹೆಂಡತಿ ಪಕ್ಕದಲ್ಲಿ ಬಂದು “ಬಹಳ ಒಳ್ಳೆಯ ಸಿನೆಮಾ ಮಾಡಿದ್ದೀರಿ” ಅಂದು ಹೊರಟು ಬಿಟ್ಟರು ನಾವು ಥ್ಯಾಂಕ್ಸ್ ಹೇಳಿ,.. ಇವರಿಗೆ ಹೇಗೆ ತಿಳಿಯಿತು? ಅದು ನಮ್ಮ ಸಿನೆಮಾ ಅಂತ ಯೋಚಿಸುವಾಗಲೇ ನಮ್ಮ ಕಾರಿನ ಹಿಂದೆ ಅಂಟಿಸಿದ್ದ ಪೋಸ್ಟರ್ ನಲ್ಲಿ ಅಮ್ಮಚ್ಚಿ ನಗುತ್ತಿದ್ದಳು.

ಮತ್ತೊಮ್ಮೆ ಗಾಂಧಿ ಬಜಾರ್ ನಲ್ಲಿ ಒಬ್ಬಳೇ ಹೋಗುತ್ತಿದ್ದೆ, ವಿದ್ಯಾರ್ಥಿ ಭವನದ ಬಳಿ ಒಬ್ಬರು “ಮೇಡಂ ಮೇಡಂ” ಅಂತಾ ಹಿಂದೆ ಬಂದರು, ತಿರುಗಿದೆ, “ಮೇಡಂ ನೀವು ಚಂಪಾ ಶೆಟ್ಟಿ ಅಲ್ವಾ”, ಅಂದರು ತಲೆಯಾಡಿಸಿದೆ, “ಮೇಡಂ ನಮ್ಮ ಸಾಹೇಬ್ರು ನಿಮ್ಮನ್ನು ಮಾತಾಡಿಸಬೇಕಂತೆ, ಕಾರಿನಲ್ಲಿ ಹೊರಟವರು ನಿಮ್ಮನ್ನು ನೋಡಿ ನಿಲ್ಲಿಸಿದ್ದಾರೆ” ಅನ್ನುವಷ್ಟರಲ್ಲಿ ಕಾರಿನಿಂದ ಒಬ್ಬ ವ್ಯಕ್ತಿ ಇಳಿದು ಬಂದರು. ಬಹು ದೊಡ್ಡ ಸರ್ಕಾರಿ ಅಧಿಕಾರಿಯಂತೆ, ತಮ್ಮನ್ನು ಪರಿಚಯಿಸಿಕೊಂಡು ವಿಸಿಟಿಂಗ್ ಕಾರ್ಡ್ ಕೊಟ್ಟು “ಎಂತಹ ಅದ್ಭುತ ಸಿನೆಮಾ ಮಾಡಿದ್ದೀರಿ ನಿಮ್ಮನ್ನು ಅಭಿನಂದಿಸಲೇಬೇಕು” ಅಂದು ಮತ್ತಷ್ಟು ಹೊಗಳಿ “ಯಾವಾಗಲಾದರೂ ಕಾಲ್ ಮಾಡಿ, ಏನು ಸಹಾಯ ಬೇಕಿದ್ದರೂ ಕೇಳಿ” ಎಂದು ಹೇಳಿ ಹೊರಟರು.

ಜನ ನನ್ನನ್ನು ಗುರುತಿಸುವುದು ನನಗೆ ಹೊಸತಲ್ಲ.. ಧಾರಾವಾಹಿ ಮಾಡುವಾಗ ನ್ಯೂಸ್ ಓದುವಾಗ ಇದು ಸಾಮಾನ್ಯವಾಗಿತ್ತು.. ಆದರೆ ಸಿನೆಮಾ ನೋಡಿ ನಿರ್ದೇಶಕಿ ಎಂದು ಗುರುತಿಸಿ ಮೆಚ್ಚಿ ಮಾತನಾಡಿಸಿದ್ದು ನಿಜಕ್ಕೂ ಖುಷಿಯಾಗಿತ್ತು.

ಮತ್ತೊಂದು ಮರೆಯದ ಸನ್ನಿವೇಶವೆಂದರೆ, ಮೈಸೂರಿನಲ್ಲಿರುವ ಹಿರಿಯ ಸಿನೆಮಾ ವಿಮರ್ಶಕರಾದ ಸುಜಾತ ದಂಪತಿಗಳು, ತಮ್ಮ ಅನಾರೋಗ್ಯದ ಸ್ಥಿತಿಯಲ್ಲಿಯೂ ಮೊದಲ ದಿನ, ಮೊದಲ ಪ್ರದರ್ಶನವನ್ನು ತಮ್ಮ ಸಹಾಯಕರ ಜೊತೆಗೆ ವೀಲ್ ಛೇರ್ ನಲ್ಲಿ ಹೋಗಿ ನೋಡಿಕೊಂಡು ಬಂದು ನಾಲ್ಕು ಪುಟದ ಪತ್ರ ಬರೆದು ಕಳುಹಿಸಿದ್ದು. ಆ ಪತ್ರ ಇಂದಿಗೂ ನಮ್ಮೊಂದಿಗಿದೆ. ಅಂತಹ ಇನ್ನೂ ಅನೇಕ ಹಿರಿಜೀವಗಳು ಹೀಗೆಯೇ ವೀಲ್ ಚೇರ್ ಮತ್ತು ವಾಕರ್ ಗಳ ಸಹಾಯದಿಂದ ಬಂದು ಸಿನೆಮಾ ನೋಡಿ‌ ಹರಸಿದ್ದು ನಿಜಕ್ಕೂ ಸಿನೆಮಾದ ಭಾಗ್ಯವಲ್ಲವೇ?

ಇನ್ನು ನನ್ನ ಕುಟುಂಬದವರೇ ಆದ ನನ್ನ ಇಬ್ಬರು ಸೋದರತ್ತೆಯರಲ್ಲಿ, ಒಬ್ಬರು ಅಮ್ಮಚ್ಚಿಗಾಗಿ, ನಲವತ್ತೈದು ವರ್ಷದ ನಂತರ ಮೊದಲ ಬಾರಿ ಚಿತ್ರ ಮಂದಿರಕ್ಕೆ ಬಂದರೆ, ಕಾಲು ನೋವಿನ ಕಾರಣದಿಂದ ಹೊರಗೆಲ್ಲಿಯೂ ಓಡಾಡದಿದ್ದ ಮತ್ತೊಬ್ಬ ಸೋದರತ್ತೆ ಅಮ್ಮಚ್ಚಿ ಯನ್ನು ನೋಡಲು ಕಷ್ಟ ಪಟ್ಟು ಚಿತ್ರಮಂದಿರಕ್ಕೆ ಬಂದವರು ಈಗ ಎಲ್ಲಡೆಯೂ ಓಡಾಡುವಂತಾಗಿದ್ದಾರೆ.

ನನ್ನ ಸೋದರಮಾವನಂತೂ, “ನಮ್ಮ ಮಾವ ಎಂ. ಆರ್. ವಿಠ್ಠಲ್ ಅವರ ನಂತರ ಇವಳೇ ಸಿನೆಮಾ ರಂಗಕ್ಕೆ ಬಂದದ್ದು” ಎಂದು ಖುಷಿಯಿಂದ ಕುಟುಂಬದವರನ್ನೆಲ್ಲಾ ಸೇರಿಸಿ ಊಟ ಕೊಟ್ಟು ನನ್ನನ್ನು ಅಕ್ಕರೆಯಿಂದ ಆಶೀರ್ವದಿಸಿ,, ನಾನು ಇಂತಹ ನೂರು ಸಿನೆಮಾದ ಕೆಲಸ ಮಾಡುವಷ್ಟು ಸ್ಪೂರ್ತಿ ತುಂಬಿದ್ದಾರೆ. ನನ್ನ ಮಾತ್ರವಲ್ಲ, ನಮ್ಮೆಲ್ಲಾ ಕಲಾವಿದರ ಮತ್ತು ಟೆಕ್ನಿಷಿಯನ್ನರ ಕುಟುಂದವರು ಸಾಲು ಸಾಲಾಗಿ ಬಂದು ಸಿನೆಮಾ ನೋಡಿ ಹರಿಸಿದ್ದಾರೆ. ರಂಗಭೂಮಿ ಗೆಳೆಯರು,, ವೈದೇಹಿ ಮೇಡಂ ನ ಅಭಿಮಾನಿಗಳು, ಸಾಹಿತ್ಯಾಸಕ್ತರು ಚಿತ್ರಮಂದಿರಗಳಲ್ಲಿ ಅಮ್ಮಚ್ಚಿಯನ್ನು ನೋಡಿ ಕೊಂಡಾಡಿದ್ದಾರೆ.

ಇಂತಹ ಸಹೃದಯ ಪ್ರೇಕ್ಷಕರ ಹಾರೈಕೆಯಿಂದ ಅಮಚ್ಚಿ ಮೂವತ್ತೊಂದು ದಿನಗಳ ಕಾಲ ಥಿಯೇಟರ್ ನಲ್ಲಿದ್ದು, ಸದಾಭಿರುಚಿಯ ಸಿನೆಮಾಗಳು ಖಂಡಿತ ಸೋಲುವುದಿಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ. ಒಂದು ತಿಂಗಳು ಚಿತ್ರ ಮಂದಿರಗಳಲ್ಲಿದ್ದರೂ ನೋಡಬೇಕೆಂದಿದ್ದ ಅನೇಕರಿಗೆ ಸಿನೆಮಾ ನೋಡಲಾಗಿರಲಿಲ್ಲ, ಮುಂದೆ, ಬೆಂಗಳೂರು ಸಿನಿಮೋತ್ಸವ, ಸೇರಿದಂತೆ ಹಲವಾರು ಚಿತ್ರೋತ್ಸವಗಳಲ್ಲಿ ಅಮ್ಮಚ್ಚಿಯನ್ನು ಸಾವಿರಾರು ಜನ ನೋಡಿದ್ದಾರೆ, ಮೌಂಟ್ ಕಾರ್ಮಲ್, ಮಂಗಳೂರಿನ ಅಲೋಷಿಯಸ್ ಕಾಲೇಜು ಸೇರಿದಂತೆ ಹಲವಾರು ಶಾಲಾ ಕಾಲೇಜಿನಲ್ಲಿ ಅಮ್ಮಚ್ಚಿ ಮಕ್ಕಳ ಮನತುಂಬಿದ್ದಾಳೆ.

“ಬಿ ಸುರೇಶ”ರ ಪ್ರೋತ್ಸಾಹದಿಂದ ಸುಚಿತ್ರಾದಲ್ಲಿಯಂತೂ ನಿರಂತರವಾಗಿ ಜನಭರಿತ ಹದಿನಾಲ್ಕು ಪ್ರದರ್ಶನಗಳನ್ನು ಅಮ್ಮಚ್ಚಿ ಕಂಡಿದ್ದಾಳೆ. ಕರೋನಾದ ಗಲಾಟೆಯಿಲ್ಲದಿದ್ದರೆ ಬಹುಶಃ ಸುಚಿತ್ರದಲ್ಲಿಯೇ ಅಮ್ಮಚ್ಚಿ ನೂರು ಪ್ರದರ್ಶನಗಳನ್ನೂ ಕಾಣುತ್ತಿದ್ದಳೇನೋ. ಅಲ್ಲಿ ಸಿನೆಮಾ ನೋಡಿದ ಪ್ರೇಕ್ಷಕರಿಂದಲೇ ಮುಂದಿನ ಪ್ರದರ್ಶನಕ್ಕೆ ಪ್ರೇಕ್ಷಕರು ತುಂಬಿ ಹೌಸ್ ಫುಲ್ ಆಗುತ್ತಿದ್ದು ನಮಗೆ ಪ್ರಚಾರದ ಕೆಲಸವೇ ಇಲ್ಲದ ಹಾಗೆ ಮಾಡಿಬಿಟ್ಟಿದ್ದರು.

ಸುಚಿತ್ರಾದಲ್ಲಿ ನಡೆಯುತ್ತಿದ್ದ ಸಂವಾದದಲ್ಲಿ ಪ್ರೇಕ್ಷಕರ ಒಂದೊಂದು ಅಭಿಪ್ರಾಯಗಳೂ ನಮ್ಮ ತಂಡಕ್ಕೆ ಮತ್ತಷ್ಟು ಪ್ರೇರಣೆ ನೀಡುತ್ತಿದ್ದವು. ಪ್ರತಿಯೊಬ್ಬ ಪ್ರೇಕ್ಷಕರೂ ಅಮ್ಮಚ್ಚಿಯನ್ನೋ, ಅಕ್ಕುವನ್ನೋ, ಪುಟ್ಟಮತ್ತೆಯನ್ನೋ, ತಮ್ಮ ಮನೆಯಲ್ಲಿನ ಯಾರಲ್ಲೋ ಕಂಡಿದ್ದಾಗಿ ಹೇಳಿ ದುಃಖ ಪಡುತ್ತಿದ್ದರು. ಕೆಲವು ಹಿರಿಯರು ಸಿನೆಮಾದಲ್ಲಿನ ಕೆಲವು ಆಚರಣೆಗಳು ಅಲ್ಲಿನ ಪ್ರಕೃತಿಯನ್ನು ನೋಡಿ ಮತ್ತೆ ನಾವು ಆ ಕಾಲಕ್ಕೆ ಹೋಗಿದ್ದಾಗಿ ಹೇಳುತ್ತಾ ನಮಗೆ ಕೃತಜ್ಞತೆ ಸಲ್ಲಿಸುತ್ತಿದ್ದರು. ಪ್ರೇಕ್ಷಕರಿಂದ ಇಷ್ಟೊಂದು ಪ್ರೀತಿ ಸಿಗುವಾಗ ಮತ್ತಷ್ಟು ಸಿನೆಮಾ ಮಾಡುವ ಉತ್ಸಾಹಕ್ಕೇನು ಕೊರತೆ..?

ಇಲ್ಲಿ ಒಂದೆರಡು ಅಭಿಪ್ರಾಯಗಳನ್ನು ಹೇಳಲೇಬೇಕು.

ಸುಚಿತ್ರಾದಲ್ಲಿ ಅಮ್ಮಚ್ಚಿ ನೋಡಿದ ಒಬ್ಬ ಹೆಣ್ಣು ಮಗಳು “ನಮ್ಮ ಆಫೀಸ್ ನಲ್ಲಿ ಇಷ್ಟು ದಿನ ಮಲಯಾಳಂ ಸಿನೆಮಾಗಳನ್ನ ಎಲ್ಲರೂ ಹೊಗಳುತ್ತಿದ್ದರು ಈಗ ನಾನೂ ಹೆಮ್ಮೆಯಿಂದ ಹೇಳುತ್ತೇನೆ ಅಂತದ್ದೇ ಒಂದು ಸಿನೆಮಾ ಕನ್ನಡಲ್ಲಿಯೂ ಇದೆ, ನೋಡಿ ಅಂತ…” ಎಂದು ಹೇಳಿ ಕಣ್ತುಂಬಿಕೊಂಡದ್ದು.

ಆಳ್ವಾಸ್ ನಲ್ಲಿ ಅಮ್ಮಚ್ಚಿ ಪ್ರದರ್ಶನ ವಾದಾಗಲೂ ಒಬ್ಬ ಹುಡುಗ ಹೀಗೇ ಮಲಯಾಳಂ ಸಿನೆಮಾಗಳಿಗೆ ಹೋಲಿಸಿದ್ದಲ್ಲದೆ, ಇಷ್ಟೊಳ್ಳೆ ಸಿನೆಮಾ ಮಾಡಿದ್ದೀರಾ ಇದನ್ನು ಜನಗಳಿಗೆ ತಲುಪಿಸುವುದು ಯುವಕರಾದ ನಮ್ಮ ಹೊಣೆ ಎಂದದ್ದು.

ಅದೇ ಆಳ್ವಾಸ್ ನ ಪ್ರದರ್ಶನ ಮುಗಿಸಿ ಹೊರ ಬಂದಾಗ ಹುಬ್ಬಳ್ಳಿಯಿಂದ ಬಂದಿದ್ದ ಹುಡುಗನೊಬ್ಬ ಹೊರಗೆ ಬಂದು ನನ್ನ ಕಾಲಿಗೆ ಬಿದ್ದು, “ಸಿನೆಮಾ ನೋಡಿ ನಮ್ಮ ಮನೆ ಹೆಣ್ಣುಮಕ್ಕಳ ನೆನಪಾಗುತ್ತಿದೆ. ನಾವು ಅವರನ್ನು ಚೆನ್ನಾಗಿ ನೋಡ್ಕೋಬೇಕ್ರೀ” ಅಂತ ಹೇಳುತ್ತಾ ಜೋರಾಗಿ ಅತ್ತದ್ದು…

ಇಂತಹ ಹಲವಾರು ಪ್ರತಿಕ್ರಿಯೆಗಳು ನಮ್ಮನ್ನು ಚಕಿತಗೊಳಿಸಿವೆ…ಇನ್ನು ಅನೇಕ ಪ್ರೇಕ್ಷಕರು ,”ಪುಟ್ಟಣ್ಣನವರ ಸಿನೆಮಾ ನೋಡಿದ ಹಾಗಾಯಿತು” ಎಂದು ಹೇಳಿದಾಗ ಅಷ್ಟೊಂದು ದೊಡ್ಡ ಕಾಂಪ್ಲಿಮೆಂಟ್ಸ್ ನಿಂದ ನಾನು ಖುಷಿಗಿಂತಾ ಹೆಚ್ಚು ಮುಜುಗರಕ್ಕೊಳಗಾಗಿದ್ದೆ.

ಇಂತಹ ನೂರಾರು ಅನುಭವಗಳನ್ನು ಅಮ್ಮಚ್ಚಿ ನಮಗೆ ನೀಡಿದ್ದಾಳೆ. ಚಿತ್ರಮಂದಿರದಲ್ಲಿದ್ದ ಒಂದು ತಿಂಗಳು ಮತ್ತು ನಂತರದ ದಿನಗಳಲ್ಲೂ ಸಹ ದಿನವೂ ಇಂತಹ ಪ್ರತಿಕ್ರಿಯೆಗಳು ಕಾಲ್ ಮೂಲಕ ಅಥವಾ ವಾಟ್ಸಾಪ್, ಫೇಸ್ ಬುಕ್ ಗಳ ಮೂಲಕ ಬರುತ್ತಲೇ ಇದ್ದು, ನಮ್ಮ ಉತ್ಸಾಹ ಒಂದಿನಿತೂ ಕುಗ್ಗದಂತೆ ಮಾಡಿದ್ದವು.

ಇಂತಿಪ್ಪ ಅಮ್ಮಚ್ಚಿಗೆ ಇದ್ದಕ್ಕಿದ ಹಾಗೆ ರೆಕ್ಕೆ ಬಂದು ಹಾರಾಡಿದ ಕತೆ ಮುಂದಿನ ಸಂಚಿಕೆಯಲ್ಲಿ……

‍ಲೇಖಕರು ಚಂಪಾ ಶೆಟ್ಟಿ

November 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This