ವೇಸ್ಟ್ ಪೇಪರ್ ! – ಅಮೆರಿಕಾದಲ್ಲಿ ಪತ್ರಿಕೆಗಳ ಅವಸಾನ

RaviH1

-ರವಿ ಹೆಗಡೆ

ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ

ಅಮೆರಿಕದ ವೃತ್ತಪತ್ರಿಕೆಗಳನ್ನು ಈಗ Dying Media‘ಸಾಯುತ್ತಿರುವ ಮಾಧ್ಯಮ’ ಎಂದೇ ಬಣ್ಣಿಸಲಾಗುತ್ತಿದೆ. ಯಾಕೆಂದರೆ, ಅಮೆರಿಕ ಪತ್ರಿಕೆಗಳ ಓದುಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕಾ ಸಂಸ್ಥೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ.

ಕ್ರಿಸ್ತ ಶಕ ೨೦೪೩

ಅಂದರೆ, ಇನ್ನು ಸುಮಾರು ೩೫ ವರ್ಷಗಳ ಮುಂದೆ ಒಂದು ದಿನ ಮುಂಜಾನೆ… ಆತ ದೊಡ್ಡದಾಗಿ ಬಾಯಿ ತೆರೆದು, ಆಕಳಿಸಿ, ಕೈಯಲ್ಲಿದ್ದ ಪತ್ರಿಕೆಯನ್ನು ಮುದ್ದೆ ಮಾಡಿ ಬದಿಗೆ ಎಸೆಯುತ್ತಾನೆ. ಅದು ಅಮೆರಿಕ ಪತ್ರಿಕೆಗಳ ಕಟ್ಟ ಕಡೆಯ ದಿನ. ಅದು ಅಮೆರಿಕ ಪತ್ರಿಕೆಗಳ ಕಟ್ಟ ಕಡೆಯ ಸಂಚಿಕೆ ಹಾಗೂ ಆತನೇ ಆ ಪತ್ರಿಕೆಯ ಕಟ್ಟ ಕಡೆಯ ಓದುಗ! ಅಲ್ಲಿಗೆ ಅಮೆರಿಕದ ಎಲ್ಲ ಪ್ರಮುಖ ಪತ್ರಿಕೆಗಳ ಕಥೆಯೂ ಮುಗಿಯುತ್ತದೆ. ದಿ ನ್ಯೂಯಾರ್ಕ್ ಟೈಮ್ಸ್, ವಾಲ್‌ಸ್ಟ್ರೀಟ್ ಜರ್ನಲ್, ದಿ ವಾಷಿಂಗ್‌ಟನ್ ಪೋಸ್ಟ್, ಷಿಕಾಗೋ ಟ್ರಿಬ್ಯೂನ್, ಲಾಸ್ ಎಂಜಲೀಸ್ ಟೈಮ್ಸ್.. ಹೀಗೆ ಎಲ್ಲ ಪತ್ರಿಕೆಗಳೂ ಇತಿಹಾಸದ ಕಸದ ಬುಟ್ಟಿ ಸೇರುತ್ತವೆ.

ಫಿಲಿಪ್ ಮೇಯರ್ ಎಂಬ ಪತ್ರಿಕಾ-ಉದ್ಯಮ ತಜ್ಞ ‘ದಿ ವ್ಯಾನಿಷಿಂಗ್ ನ್ಯೂಸ್ ಪೇಪರ್ಸ್’ ಎಂಬ ಕೃತಿಯಲ್ಲಿ ಹೇಳಿರುವ ಭವಿಷ್ಯ ಇದು.

ಕಳೆದ ತಿಂಗಳು ನಾನು ಅಮೆರಿಕಕ್ಕೆ ಹೋದಾಗ ಆತನ ಭವಿಷ್ಯ ನಿಜವಾಗುತ್ತಿರುವುದನ್ನು ಕಣ್ಣಾರೆ ಕಂಡೆ. ಪತ್ರಿಕಾ ಮಾಲೀಕರು, ಗಾಬರಿಗೊಂಡಿರುವುದನ್ನು ನೋಡಿದೆ. ಅವರು, ಉಳಿವಿಗಾಗಿ ಹುಲ್ಲುಕಡ್ಡಿಯ ಆಸರೆ ಹುಡುಕುತ್ತಿರುವುದನ್ನು ಗಮನಿಸಿದೆ.

ಅಮೆರಿಕದ ವೃತ್ತಪತ್ರಿಕೆಗಳನ್ನು ಈಗ Dying Media‘ಸಾಯುತ್ತಿರುವ ಮಾಧ್ಯಮ’ ಎಂದೇ ಬಣ್ಣಿಸಲಾಗುತ್ತಿದೆ. ಯಾಕೆಂದರೆ, ಅಮೆರಿಕ ಪತ್ರಿಕೆಗಳ ಓದುಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕಾ ಸಂಸ್ಥೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ.

ಯಾಕೆ?

ಅಮೆರಿಕದಂಥ ಅತ್ಯಂತ ಸಾಕ್ಷರರ ದೇಶದಲ್ಲಿ ಪತ್ರಿಕೆಗಳು ಯಾಕೆ ಸಾಯುತ್ತಿವೆ?

ಇಂಟರ್ನೆಟ್ ಈಸ್ ದ ಕಿಲ್ಲರ್! ಇಂಟರ್ನೆಟ್ ಎಂಬ ‘ಹೊಸ ಮಾಧ್ಯಮ’ಕ್ಕೆ ಜಗತ್ತಿನ ಅತ್ಯಂತ ಪುರಾತನ ಸಮೂಹ ಮಾಧ್ಯಮ ‘ಪತ್ರಿಕೆ’ ಬಲಿಯಾಗುತ್ತಿದೆ. ಅಮೆರಿಕ, ಪಶ್ಚಿಮ ಯೂರೋಪ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ, ೩-೪ ದಶಕಗಳಿಂದ ಪತ್ರಿಕೆಗಳ ಸಂಖ್ಯೆ ಸ್ವಲ್ಪ ಸ್ವಲ್ಪವಾಗಿ ಇಳಿಮುಖವಾಗಿತ್ತು. ಅದಕ್ಕೆ ಟೀವಿಯ ಪ್ರಭಾವ ಕಾರಣವಾಗಿತ್ತು. ಆದರೆ, ಈಗ ಇಂಟರ್ನೆಟ್‌ನ ಪ್ರಹಾರ ಎಷ್ಟು ತೀವ್ರವಾಗಿದೆ ಎಂದರೆ ಅಮೆರಿಕದ ಪತ್ರಿಕೆಗಳ ಪ್ರಸಾರ ಹಾಗೂ ಜಾಹೀರಾತು ಆದಾಯ ಪ್ರಪಾತಕ್ಕೆ ಬೀಳುತ್ತಿದೆ.

ಸುಮಾರು ೧೦-೧೫ ವರ್‍ಷಗಳ ಹಿಂದೆ ಪತ್ರಿಕೆಗಳು ತಮ್ಮ ಮುಖ್ಯವಾಹಿನಿಗೆ ಪೂರಕವಾಗಿ ‘ಸೈಡ್ ಬಿಸಿನೆಸ್’ ಎಂದು ಅಂತರ್ಜಾಲ ಆವೃತ್ತಿಯನ್ನು ಆರಂಭಿಸಿದವು. ಆದರೆ, ಈ ಸೈಡ್ ಬಿಸಿನೆಸ್ಸೇ ತನಗೆ ಸುಸೈಡಲ್ ಆಗುತ್ತದೆ ಎಂದು ಆಗ ಪತ್ರಿಕೆಗಳು ಅಂದುಕೊಂಡಿರಲಿಲ್ಲ.

ಇಂದು ಅಮೆರಿಕದ ಯುವಕರಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸವೇ ಕಡಿಮೆಯಾಗುತ್ತಿದೆ. ಸಾಲದು ಎಂಬಂತೆ, ಕಚೇರಿಗೆ ಹೋಗುವವರೂ ಅಂತರ್ಜಾಲದಲ್ಲಿ ‘ಬ್ರೇಕಿಂಗ್ ನ್ಯೂಸ್’ ಓದಲು ಕಲಿತಿದ್ದಾರೆ. ಅದರಲ್ಲೂ, ಅಂತರ್ಜಾಲದಲ್ಲಿ ಪುಕ್ಕಟೆಯಾಗಿ ಹಲವಾರು ಪತ್ರಿಕೆಗಳನ್ನು ಓದಬಹುದು. ‘ಗೂಗಲ್ ನ್ಯೂಸ್’ ಎಂಬ ಅಂತರ್ಜಾಲ ಸುದ್ದಿ ಸರ್ಚ್ ಎಂಜಿನ್ ಬಂದಮೇಲಂತೂ ತಮಗೆ ಆಸಕ್ತಿ ಇರುವ ಸುದ್ದಿಗಳನ್ನು ಮಾತ್ರ ಜಗತ್ತಿನ ಎಲ್ಲ ಪತ್ರಿಕೆಗಳಿಂದ ಆರಿಸಿ ಓದಲು ಬಹಳ ಅನುಕೂಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂತರ್ಜಾಲ ಸುದ್ದಿ ಮಾಧ್ಯಮ ಮುದ್ರಣ ಮಾಧ್ಯಮಕ್ಕಿಂತ ಹೆಚ್ಚು ಇಂಟರ್ಯಾಕ್ಟಿವ್ ಆಗಿದೆ. ಸುದ್ದಿಗಳಿಗೆ ತಾವೂ ತಕ್ಷಣ ಪ್ರತಿಕ್ರಿಯೆ ನೀಡಲು, ಪರಸ್ಪರ ವಿಚಾರ ವಿನಿಮಯ ಮಾಡಲು, ಆಸಕ್ತಿದಾಯಕ ವಿಷಯಗಳನ್ನು ತಮ್ಮ ಮಿತ್ರರಿಗೆ ತಕ್ಷಣ ಕಳಿಸಲು, ಬ್ಲಾಗುಗಳ ಮೂಲಕ ತಮ್ಮದೇ ಸಂಪಾದಕೀಯ ಬರೆಯಲೂ ಅಂತರ್ಜಾಲ ಪತ್ರಿಕೆಗಳು ಅನುವು ಮಾಡುತ್ತವೆ. ಹಾಗಾಗಿ, ಮುದ್ರಿತ ಪತ್ರಿಕೆಗಳಿಂದ ಓದುಗರು ದೂರವಾಗಿ ಇಂಟರ್ನೆಟ್ ಪತ್ರಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ.ಇನ್ನೊಂದೆಡೆ, ಜಾಹೀರಾತುದಾರರಿಗೆ ಅಂತರ್ಜಾಲ ಸೋವಿ ಮಾರ್‍ಗವಾಗಿದೆ. ಕಡಿಮೆ ಖರ್ಚಿನಲ್ಲಿ ಗ್ರಾಹಕರನ್ನು ತಲುಪಲು ಅಂತರ್ಜಾಲ ಸಹಾಯ ಮಾಡುತ್ತದೆ. ಸಿನಿಮಾ, ರಾಕ್ ಷೋ, ಮ್ಯೂಸಿಕ್ ಸೀಡಿಯಂಥ ಮನರಂಜನಾ ಕ್ಷೇತ್ರದ ಜಾಹೀರಾತುಗಳು ನೇರವಾಗಿ ಇಂಟರ್ನೆಟ್ ಹಾಗೂ ಟೀವಿಯತ್ತ ಹರಿದುಹೋಗಿವೆ. ಅದರಲ್ಲೂ ವರ್ಗೀಕೃತ ಜಾಹೀರಾತುಗಳಂತೂ ಶೇ.೯೦ರಷ್ಟು ebay.comನಂಥ ಇಂಟರ್ನೆಟ್ ಪೋರ್ಟಲ್‌ಗಳಿಗೆ ರವಾನೆಯಾಗಿವೆ.

ಕೆಲವೇ ವರ್ಷಗಳ ಹಿಂದೆ, ‘ಮಾಧ್ಯಮ ದೊರೆ’ ರೂಪರ್ಟ್ ಮರ್ಡೋಕ್ ಹೇಳಿದ್ದ : ‘ವರ್ಗೀಕೃತ ಜಾಹೀರಾತುಗಳೆಂದರೆ ಪತ್ರಿಕೆಗಳಿಗೆ ಹರಿದುಬರುವ ಬಂಗಾರದ ನದಿ’ ಎಂದು. ಈಗ ಆತ ಹೇಳುತ್ತಾನೆ : ‘ಕೆಲವು ಬಾರಿ ನದಿಗಳು ಬತ್ತಿಹೋಗುತ್ತವೆ’ ಎಂದು!

೭೦೦೦ ಪತ್ರಕರ್ತರ ವಜಾ

ಒಂದೆಡೆ ಪ್ರಸಾರ ಸಂಖ್ಯೆ ಇಳಿಯುತ್ತಿದ್ದರೆ ಇನ್ನೊಂದೆಡೆ ಜಾಹೀರಾತು ಆದಾಯವೂ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ವೆಚ್ಚಗಳು ಅಧಿಕವಾಗುತ್ತಿವೆ. ಸಾಲದ್ದಕ್ಕೆ ಈಗಿನ ಆರ್ಥಿಕ ಹಿಂಜರಿತ ಬೇರೆ! ಈ ಹೊಡೆತ ತಾಳಲಾರದೇ ಅಮೆರಿಕದ ಪತ್ರಿಕೆಗಳು ತಮ್ಮ ಉತ್ಪಾದನಾ ವೆಚ್ಚ ಕಡಿತ ಮಾಡಲು ಆರಂಭಿಸಿವೆ. ಅಮೆರಿಕ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಹಾಗೂ ಪತ್ರಕರ್ತರು ಇರುವುದು ವಾಡಿಕೆ. ಹಾಗಾಗಿ, ವೆಚ್ಚ ಕಡಿತದ ಮೊದಲ ಪರಿಣಾಮ ಆಗಿರುವುದು ಪತ್ರಕರ್ತರ ಮೇಲೆ. ಕೇವಲ ಕಳೆದ ೩ ತಿಂಗಳಲ್ಲಿ ಅಮೆರಿಕದಲ್ಲಿ ೭೦೦೦ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸ ಕಳೆದುಕೊಂಡ ಇತರ ಸಿಬ್ಬಂದಿಗಳ ಸಂಖ್ಯೆ ದುಪ್ಪಟ್ಟು.

ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆ ಮೊದಲು ವಿಶ್ವದ ಅನೇಕ ದೇಶಗಳಲ್ಲಿ ತನ್ನ ವಿಶೇಷ ಬಾತ್ಮೀದಾರರನ್ನು ಹೊಂದಿತ್ತು. ಇಂದು ಅವರನ್ನೆಲ್ಲ ವಜಾ ಮಾಡಿ ಆ ಸ್ಥಾನದಲ್ಲಿ ಅಗ್ಗದ ವೇತನಕ್ಕೆ ದೊರಕುವ ಬಿಡಿ ಸುದ್ದಿಗಾರರನ್ನು ನೇಮಕ ಮಾಡಿದೆ. ಇದು ಅನಿವಾರ್ಯ ಎನ್ನುತ್ತಾರೆ ಪತ್ರಿಕೆಯ ಮ್ಯಾನೇಜಿಂಗ್ ಎಡಿಟರ್ ಫಿಲಿಫ್ ಬೆನೆಟ್.

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮಾಲೀಕ ಆರ್ಥರ್ ಸಲ್ಸ್‌ಬರ್ಗರ್ (ಜ್ಯೂನಿಯರ್) ಅವರ ಅಭಿಪ್ರಾಯವೂ ಭಿನ್ನವಾಗಿಲ್ಲ. ‘ಈಗ ಓದುಗರೆಲ್ಲ ಇಂಟರ್ನೆಟ್‌ನತ್ತ ವಾಲಿದ್ದಾರೆ. ಹಾಗಾಗಿ ಅವರಿರುವತ್ತಲೇ ನಾವೂ ಸಾಗಬೇಕಾಗಿದೆ. ಈ ಕಾರಣಕ್ಕೆ ನಾವು ನಮ್ಮ ಮುದ್ರಣ ಆವೃತ್ತಿಯಲ್ಲಿ ಹಣ ಹೂಡಿಕೆ ಕಡಿಮೆ ಮಾಡಿ ಅಂತರ್ಜಾಲ ಆವೃತ್ತಿಗೆ ಸಾಕಷ್ಟು ಬಂಡವಾಳ ಹೂಡುತ್ತಿದ್ದೇವೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬದುಕಬೇಕೆಂದರೆ ಈಗ ನಮಗದೊಂದೇ ದಾರಿ’ ಎನ್ನುತ್ತಾರೆ ಅವರು.

ಭಯಂಕರ ಮಡಿವಂತಿಕೆ

ಭಾರತದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾ ಸಮೂಹದಂತೆ ೩-೪ ರಾಷ್ಟ್ರೀಯ ಪತ್ರಿಕೆಗಳಿವೆ. ಆದರೆ, ಅಮೆರಿಕದಲ್ಲಿ ರಾಷ್ಟ್ರೀಯ ಪತ್ರಿಕೆಗಳಿಲ್ಲ. ನ್ಯೂಯಾರ್ಕ್ ಟೈಮ್ಸ್ ನ್ಯೂಯಾರ್ಕಿನ ಪತ್ರಿಕೆಯಾದರೆ, ವಾಷಿಂಗ್‌ಟನ್ ಪೋಸ್ಟ್ ವಾಷಿಂಗ್‌ಟನ್ ಡಿ.ಸಿ.ಯ ಪತ್ರಿಕೆ. ‘ಷಿಕಾಗೋ ಟ್ರಿಬ್ಯೂನ್’ ಷಿಕಾಗೋಗೂ, ‘ಲಾಸ್‌ಎಂಜಲೀಸ್ ಟೈಮ್ಸ್’ ಲಾಸ್ ಎಂಜಲೀಸ್‌ಗೂ ಸೀಮಿತ. ಸ್ಯಾನ್‌ಫ್ರಾನ್ಸಿಸ್ಕೋಗೆ ‘ಸ್ಯಾಕ್ರಮೆಂಟೋ ಬೀ’ ಹಾಗೂ ವಿಸ್ಕಾನ್‌ಸಿನ್‌ಗೆ ‘ಮಿಲ್‌ವಾಕೀ ಜರ್ನಲ್’ ಎಂಬ ಪತ್ರಿಕೆಗಳಿವೆ. ಹೀಗೆ, ಒಂದೊಂದು ರಾಜ್ಯದಲ್ಲಿ ಒಂದೊಂದು ಪತ್ರಿಕೆಯ ಸಾಮ್ರಾಜ್ಯವಿದೆ.

ಇದ್ದುದರಲ್ಲಿ ನ್ಯೂಯಾರ್ಕ್ ಟೈಮ್ಸ್ ಹಾಗೂ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಗಳು ನ್ಯೂಯಾರ್ಕ್ ಹೊರತುಪಡಿಸಿ ಅಮೆರಿಕದ ಇನ್ನೂ ಕೆಲವು ನಗರಗಳಲ್ಲಿ ದೊರೆಯುತ್ತದೆ.

ಯುಎಸ್‌ಎ ಟುಡೇ ಎಂಬ ಇನ್ನೊಂದು ಪತ್ರಿಕೆಯಿದೆ. ಇದು ಅಮೆರಿಕದ ಬಹುತೇಕ ನಗರಗಳಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶಗಳಲ್ಲೂ ಲಭ್ಯ. ಹಾಗೆ ನೋಡಿದರೆ, ಇದೊಂದೇ ಅಮೆರಿಕದ ರಾಷ್ಟ್ರೀಯ ಪತ್ರಿಕೆ. ಯುಎಸ್‌ಎ ಟುಡೇ ತನ್ನನ್ನು ಅಮೆರಿಕದ ಏಕೈಕ ರಾಷ್ಟ್ರೀಯ ಪತ್ರಿಕೆ ಎಂದೇ ಕರೆದುಕೊಳ್ಳುತ್ತದೆ. ಆದರೆ, ಪತ್ರಿಕೋದ್ಯಮದಲ್ಲಿ ಇದನ್ನು ಯಾರೂ ಗಂಭೀರ ಪತ್ರಿಕೆ ಎಂದು ಹೇಳುವುದೇ ಇಲ್ಲ. ಅಮೆರಿಕದ ಸಾರ್ವಜನಿಕ ಲೈಬ್ರರಿಗಳಲ್ಲಿ ಅಲ್ಲಿನ ಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ, ಯುಎಸ್‌ಎ ಟುಡೇ ಪತ್ರಿಕೆಯನ್ನು ಹಾಗೆ ಸಂಗ್ರಹಿಸುವುದು ಹಾಗಿರಲಿ ಲೈಬ್ರರಿಗೆ ತರಿಸುವುದೂ ಇಲ್ಲ.

ಇದಕ್ಕೆ ಅಮೆರಿಕ ಪತ್ರಿಕೋದ್ಯಮದ ತೀರಾ ಮಡಿವಂತಿಕೆಯೇ ಕಾರಣ. ಅಮೆರಿಕದ ಟೀವಿ ಸುದ್ದಿ ವಾಹಿನಿಗಳು ಮಡಿವಂತಿಕೆ ಬಿಟ್ಟರೂ ಅಮೆರಿಕದ ಮುಖ್ಯ ಪತ್ರಿಕೆಗಳು ಪತ್ರಿಕೋದ್ಯಮದ ‘ಬ್ರಾಹ್ಮಣ್ಯ’ವನ್ನು ಇನ್ನೂ ಪಾಲಿಸುತ್ತಿವೆ. ಅದೆಷ್ಟು ಸಂಪ್ರದಾಯವೆಂದರೆ, ಜಗತ್ಪ್ರಸಿದ್ಧ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟ ಇಂದೂ ಸಹ ೧೮೭೮ನೇ ಇಸವಿಯ ಪತ್ರಿಕೆಯಂತೆ ಕಾಣುತ್ತದೆ. ಇಂದಿನ ಆರ್ಥಿಕ ಸಂಕಷ್ಟದಲ್ಲೂ ಈ ಪತ್ರಿಕೆಗಳು ತಮ್ಮ ಮುಖಪುಟದಲ್ಲಿ ದೊಡ್ಡ ಜಾಹೀರಾತು ಪ್ರಕಟಿಸುವುದಿಲ್ಲ. ಪುಟದ ಅಡಿಯಲ್ಲಿ ೩ ಸೆಂ.ಮೀ. ಎತ್ತರದ ಜಾಹೀರಾತು ಮಾತ್ರ ಪ್ರಕಟಿಸುತ್ತವೆ.

ಅಮೆರಿಕದ ಪತ್ರಿಕೆಗಳಲ್ಲಿ ಮೇಧಾವಿಗಳು, ವೃತ್ತಿಪರರೂ ಇದ್ದಾರೆ. ಆದರೆ, ಅವರೆಲ್ಲ ಇನ್ನೂ ಹಳೆಯ ಮಡಿವಂತ ಪತ್ರಿಕೋದ್ಯಮಕ್ಕೇ ಅಂಟಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಅಮೆರಿಕ ಅಂದರೆ ಲ್ಯಾಂಡ್ ಆಫ್ ಗ್ರಾಫಿಕ್ಸ್. ಡೈನಾಸರ್, ಗಾಡ್‌ಝಿಲಾಗಳನ್ನು ಸೃಷ್ಟಿಸಿದ ನೆಲ ಇದು. ಅಮೆರಿಕದ ಟೀವಿ ಮಾಧ್ಯಮದಲ್ಲೂ, ಹಾಲಿವುಡ್ ಸಿನಿಮಾಗಳಲ್ಲೂ ಗ್ರಾಫಿಕ್ ವಿಜೃಂಭಿಸುತ್ತದೆ. ಭಾರತದ ‘ದಿ ಹಿಂದೂ’ವಿನಂಥ ಮಂಡಿವಂತ ಪತ್ರಿಕೆಗಳೂ ಅಮೆರಿಕದಿಂದ ವಿಶ್ವವಿಖ್ಯಾತ ಪತ್ರಿಕಾ ವಿನ್ಯಾಸಕಾರ ಮಾರಿಯೋ ಗಾರ್ಸಿಯಾನನ್ನು ಕರೆತಂದು ಕೋಟಿಗಟ್ಟಲೆ ರುಪಾಯಿ ಖರ್ಚು ಮಾಡಿ ಪತ್ರಿಕೆಗೆ ಆಧುನಿಕ ರೂಪ ನೀಡುತ್ತವೆ. ಆದರೆ, ಅಮೆರಿಕದ ಪ್ರಮುಖ ಪತ್ರಿಕೆಗಳು ತಮ್ಮ ಪತ್ರಿಕೆಗಳನ್ನು ಇನ್ನೂ ಹಳೆಯ ಶೈಲಿಯಲ್ಲೇ ಹೊರತರುತ್ತಿವೆ. ಬಹುಶಃ ಅದಕ್ಕೇ ಹೊಸ ಜನಾಂಗಕ್ಕೆ ಸಾಂಪ್ರದಾಯಿಕ ಪತ್ರಿಕೆಗಳು ರುಚಿಸುತ್ತಿಲ್ಲ. ಪರಿಣಾಮವಾಗಿ ಅವರು ಪತ್ರಿಕೆಗಳನ್ನು ಬಿಟ್ಟು ಅಂತರ್ಜಾಲಕ್ಕೆ ಮೊರೆಹೋಗಿದ್ದಾರೆ.

ಸ್ಪಾನಿಷ್, ಚೈನೀಸ್ ಏರಿಕೆ

ಇನ್ನೊಂದು ಗಮನೀಯ ಅಂಶ ಎಂದರೆ, ಅಮೆರಿಕದಲ್ಲಿ ಇಂಗ್ಲಿಷ್ ಪತ್ರಿಕೆಗಳು ಅವಸಾನಗೊಳ್ಳುತ್ತಿದ್ದರೂ, ಸ್ಪಾನಿಷ್ ಹಾಗೂ ಚೈನೀಸ್ ಭಾಷೆಯ ಪತ್ರಿಕೆಗಳ ಪ್ರಸಾರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಬಡಾವಣೆಗಳಿಗೆ ಸೀಮಿತವಾದ ಸಣ್ಣ ‘ನೈಬರ್‌ಹುಡ್’ ಪತ್ರಿಕೆಗಳನ್ನು ಜನರು ಓದುತ್ತಿದ್ದಾರೆ. ಜಾಹೀರಾತುಗಳನ್ನೇ ನಂಬಿರುವ ಟ್ಯಾಬ್ಲಾಯ್ಡ್ ಗಾತ್ರದ ‘ಉಚಿತ’ ಪತ್ರಿಕೆಗಳು ಲಾಭದಲ್ಲಿ ನಡೆಯುತ್ತಿವೆ. ಸಂಕಷ್ಟದಲ್ಲಿರುವುದು ದೊಡ್ಡ ಪತ್ರಿಕೆಗಳು ಮಾತ್ರ. ಅವುಗಳಿಗೆ ಮುಂದಿನ ದಾರಿ ಹೇಗೋ ಗೊತ್ತಿಲ್ಲ.

ಉದಾರ ದೇಣಿಗೆ ಕೊಡಿ

ಒಂದು ಕಾಲದಲ್ಲಿ ಅಮೆರಿಕದ ಪತ್ರಿಕೋದ್ಯಮ ಎಷ್ಟು ಬಲಿಷ್ಠವಾಗಿತ್ತು ಎಂದರೆ, ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆಯ ಇಬ್ಬರು ವರದಿಗಾರರು ಬಯಲುಗೊಳಿಸಿದ ವಾಟರ್‌ಗೇಟ್ ಹಗರಣದಿಂದ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆ ನೀಡಬೇಕಾಯಿತು. ಆದರೆ, ಇಂದು ಅದೇ ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆ ತನಿಖಾ ಪತ್ರಿಕೋದ್ಯಮಕ್ಕೆ ವ್ಯಯಮಾಡುತ್ತಿದ್ದ ಹಣದ ಮೇಲೆ ಕಡಿವಾಣ ಹಾಕಿದೆ. ಒಂದು ತಿಂಗಳಲ್ಲಿ ನೂರಕ್ಕಿಂತ ಹೆಚ್ಚು ಪತ್ರಕರ್ತರನ್ನು ತೆಗೆದುಹಾಕಿ ವೆಚ್ಚ ಕಡಿಮೆಮಾಡುವ ಹಂತದಲ್ಲಿದೆ. ಈ ಪತ್ರಿಕೆಯ ಭವಿಷ್ಯವೂ ಡೋಲಾಯಮಾನವಾಗಿದೆ. ಹಾಗಾದರೆ, ಇಂಥ ಪತ್ರಿಕೆಗಳು ಸತ್ತರೆ ಮುಂದೆ ತನಿಖಾ ಪತ್ರಿಕೋದ್ಯಮದ ಗತಿ ಏನಾಗುತ್ತದೆ?

ಜನರ ಉದಾರ ದೇಣಿಗೆಯಿಂದ ನಡೆಯುವ ಪತ್ರಿಕೆಗಳು ಹಾಗೂ ಬ್ಲಾಗುಗಳು ತನಿಖಾ ಪತ್ರಿಕೋದ್ಯಮವನ್ನು ಮುಂದುವರಿಸಬಹುದು. ನ್ಯಾಶನಲ್ ಪಬ್ಲಿಕ್ ರೇಡಿಯೋ ರೀತಿಯಲ್ಲಿ ಅಮೆರಿಕದಲ್ಲಿ, ಜನರ ದೇಣಿಗೆಯಿಂದಲೇ ನಡೆಯುವ ಅನೇಕ ಮಾಧ್ಯಮಗಳಿವೆ. ಮುಂದೊಂದು ದಿನ ಇಂಥ ಮಾಧ್ಯಮಗಳ ಸಾಲಿಗೆ ತನಿಖಾ ಪತ್ರಿಕೆಗಳೂ ಸೇರಬಹುದು ಎನ್ನುತ್ತಾರೆ ಅಮೆರಿಕದ ‘ಪ್ರಾಜೆಕ್ಟ್ ಫಾರ್ ಎಕ್ಸ್‌ಲೆನ್ಸ್ ಇನ್ ಜರ್‍ನಲಿಸಂ’ ಸಂಸ್ಥೆಯ ನಿರ್ದೇಶಕರಾದ ಟಾಮ್ ರೊಸೆಂಥಲ್.

ಯೂರೋಪ್‌ನ ಪತ್ರಿಕೆಗಳು ಸಾವಿನಿಂದ ಬಚಾವಾಗಲು ತಮ್ಮ ಸ್ವರೂಪದ ಜೊತೆ ಸುದ್ದಿಯ ವ್ಯಾಖ್ಯಾನವನ್ನು ಬದಲಿಸಿಕೊಂಡಿವೆ. ಅದರಲ್ಲೂ ಜರ್ಮನಿಯ ‘ಬಿಲ್ಡ್’ ಪತ್ರಿಕೆಯಂತೂ (ಸದ್ಯ ಜಗತ್ತಿನ ೭ನೇ ಅತಿ ಹೆಚ್ಚು ಪ್ರಸಾರ ಹೊಂದಿರುವ ಪತ್ರಿಕೆ) ಮುಖಪುಟದಲ್ಲೂ ಸಂಪೂರ್‍ಣ ನಗ್ನ ರೂಪದರ್ಶಿಯ ಚಿತ್ರ ಪ್ರಕಟಿಸಿ ಯುವಕರನ್ನು ಆಕರ್ಷಿಸಲು ಆರಂಭಿಸಿದೆ!

ಇದನ್ನೆಲ್ಲಾ ಗಮನಿಸಿದ ಮೇಲೆ, ‘ಸ್ಯಾಕ್ರಮೆಂಟೋ ಬೀ’ ಪತ್ರಿಕೆಯ ಡೆಪ್ಯೂಟಿ ಮ್ಯಾನೆಜಿಂಗ್ ಎಡಿಟರ್ ಮಾರ್ಟ್‌ರ್ ಸಾಲ್ಟ್ಸ್‌ಮನ್ ಅವರಿಗೆ ಹೇಳಿದೆ: ‘ಬಿಲ್ಡ್ ಪತ್ರಿಕೆಯಂಥ ಗಿಮಿಕ್‌ಗಳು ತೀರಾ ಅಸಹ್ಯಕರ, ನಿಜ. ಆದರೆ, ನಿಮ್ಮಂಥ ಮುಖ್ಯವಾಹಿನಿ ಪತ್ರಿಕೆಗಳು ಈಗ ಸಾವಿನಿಂದ ಪಾರಾಗಲು ಏನಾದರೂ ಮಾಡಲೇ ಬೇಕಲ್ಲ. ಅದಕ್ಕೆ ನಿಮಗಿರುವುದು ಒಂದೇ ದಾರಿ… ‘ಒಬಾಮಾ ಮಂತ್ರ’. ಬದಲಾವಣೆ!
Change that we need!
Change that we believe in.
Change that we can!

ಸಾಲ್ಟ್ಸ್‌ಮನ್ ನಕ್ಕರು. ಅವರ ನಗು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟದಷ್ಟೇ ಪೇಲವವಾಗಿತ್ತು!

‍ಲೇಖಕರು avadhi

July 15, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

 1. ಅಜಯ್

  ಅಮೆರಿಕಾದಲ್ಲಾಗಿದ್ದು ಭಾರತದಲ್ಲಾಗೋಕೆ ಅನಂತರ ಇಪ್ಪತ್ತು ವರ್ಷಗಳಾದ್ರೂ ಬೇಕು ಬಿಡಿ 🙂

  ಮಡಿವಂತ ಪತ್ರಿಕೋದ್ಯಮ ಎಂದು ಹಳೆಯದನ್ನು ಹೀನೈಸುವುದು ಈಗಿನ ಪತ್ರಿಕೋದ್ಯಮದವರ ಫ್ಯಾಷನ್ ಇರಬಹುದು. ಆದರೆ ಅದರಲ್ಲಿ ನಿಜವಾದ ವೃತ್ತಿಪರತೆ ಇತ್ತು, ಪತ್ರಿಕಾ ಧರ್ಮವಿತ್ತು. ಈಗಿನಂತೆ ಸುದ್ದಿಗಿಂತ ಜಾಹೀರಾತೇ ಮುಖ್ಯ ಎನ್ನುವ ಮನೋಭಾವವಿರಲಿಲ್ಲ. ಒಂದು ಮಿತಿ ಇತ್ತು. ಪತ್ರಿಕೆಗಳಿಗೆ ಒಂದು ಸಾಮಾಜಿಕ ಜವಾಬ್ದಾರಿ ಇತ್ತು. ಈಗಿನ ಪತ್ರಿಕೆಗಳ ಸುದ್ದಿ ಹಾದರದಿಂದ ಇನ್ನು ಸ್ವಲ್ಪ ವರ್ಷದಲ್ಲಿ ಪತ್ರಿಕೆಗಳೂ, ಮಾಧ್ಯಮಗಳೂ ಜನರ ನಂಬಿಕೆ ಕಳೆದುಕೊಳ್ಳುವುದಂತೂ ಗ್ಯಾರಂಟಿ. ಬೆತ್ತಲೆ ಚಿತ್ರ ಹಾಕುವುದು, ಅಸಂಬದ್ಧ ಹೆಡ್ಡಿಂಗು ಕೊಡುವುದು, ವೇಸ್ಟ್ ಸುದ್ದಿಯನ್ನು ಹೈಲೈಟು ಮಾಡುವುದು – ಇದನ್ನೇ ’ಬದಲಾವಣೆ’ ಎಂದುಕೊಂಡಿದ್ದಾರೆನೋ ಈಗಿನ ಪತ್ರಿಕೋದ್ಯಮದವರು ಅಂತ ಆತಂಕವಾಗುತ್ತಿದೆ!

  ಪ್ರತಿಕ್ರಿಯೆ
  • ರವಿ ಹೆಗಡೆ

   @ ಅಜಯ್,
   1. ಹೌದು. ಅಮೆರಿಕದಲ್ಲಾದದ್ದು ಭಾರತದಲ್ಲಿ ಆಗಲು ಇಪ್ಪತ್ತು ವರ್ಷಗಳಾದರೂ ಬೇಕು ಅಂದಿದ್ದೀರಿ. ನನಗೂ ಹೆಚ್ಚು ಕಡಿಮೆ ಹಾಗೇ ಅನ್ನಿಸುತ್ತಿದೆ. ಅಲ್ಲದೇ, ಹಿಂದಿ, ತಮಿಳು, ತೆಲುಗು, ಮಲೆಯಾಳಂ, ಬೆಂಗಾಲಿಯಂಥ ಕೆಲವು “ಆರ್ಥಿಕ-ಸಬಲ”ಭಾರತೀಯ ಭಾಷೆಯ ಪತ್ರಿಕೆಗಳು ಅಷ್ಟು ಬೇಗ ಅಳಿಯುವುದಿಲ್ಲ. ಆದರೆ ಕನ್ನಡದಂಥ “ಆರ್ಥಿಕ-ಬಲಹೀನ” ಭಾಷೆಯ ಪತ್ರಿಕೆಗಳು ಬೇಗನೆ ಸೊರಗುವ ಸಂಭವ ಇಲ್ಲದಿಲ್ಲ.

   2. ಪ್ರಾಡಕ್ಟ್ ಲೈಫ್ ಸೈಕಲ್‌ನಲ್ಲಿ, ಅವಸಾನ ಎಂದರೆ, Zero-existence ಅಂತ ಅರ್ಥ ಅಲ್ಲ. Insignificant presence ಅಂತ ಅರ್ಥ. ಉದಾಹರಣೆಗೆ, ಇವತ್ತು ಗ್ರಾಮಾಫೋನ್ ಡಿಸ್ಕ್ ಅವಸಾನಗೊಂಡಿದೆ. ಹಾಗಂತ ಅದು ಅಲ್ಲೋ ಇಲ್ಲೋ ಒಂದಷ್ಟು ಇದ್ದೇ ಇರುತ್ತದೆ. ಈಗ ಕ್ಯಾಸೆಟ್ ಬಹುತೇಕ ಅವಸಾನಗೊಂಡಿದೆ. ಹಾಗಂತ ಗ್ರಾಮಾಂತರ ಪ್ರದೇಶಗಳಲ್ಲಿ ಕ್ಯಾಸೆಟ್ ಇನ್ನೂ ಇದೆ. ಇತ್ತೀಚೆಗೆ ಬೆಂಗಳೂರಿನ ಆನಂದ್ ಆಡಿಯೋ ಮಾಲಿಕ ಹೇಳುತ್ತಿದ್ದರು “ಬೆಂಗಳೂರಿನಲ್ಲಿ ಕ್ಯಾಸೆಟ್ ಮಾರಾಟವಾಗೋದೇ ಇಲ್ಲ. ಆದರೆ, ಸ್ಮಾಲ್ ಟೌನಲ್ಲಿ ಇನ್ನೂ ಸ್ಪಲ್ಪ ಡಿಮಾಂಡ್ ಇದೆ. ಅದಕ್ಕೇ ಸ್ಪಲ್ಪ ಸ್ವಲ್ಪ ಕ್ಯಾಸೆಟ್ಟೂ ಬಿಡುಗಡೆ ಮಾಡ್ತಿದೀವಿ” ಅಂತ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ಯಾಸೆಟ್ಟಿಗೆ ಡಿಮಾಂಡೇ ಇಲ್ಲ. ಅಂದರೆ, ಕ್ಯಾಸೆಟ್ ಇಂದು Insignificant ಆಗಿದೆ. ಅವಸಾನದ ಹಂತದಲ್ಲಿರುವ ಮುಂದಿನ ಮಾಧ್ಯಮ ಸೀಡಿಗಳು… ನಂತರದಲ್ಲಿ ಡಿವಿಡಿಗಳು…

   ಪತ್ರಿಕೆಯ ಅವಸಾನವೂ ಹಾಗೇ… ಅಂತ ನನ್ನ ಸ್ಪಷ್ಟನೆ.

   3. ಮಡಿವಂತಿಕೆ ಎಂದು ನಾನು ಹೇಳಿದ್ದನ್ನು ತಾವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. (ಅಥವಾ ನನ್ನ ಲೇಖನದಲ್ಲಿ ಈ ಕುರಿತ ಸ್ಪಷ್ಟ ವಿವರಣೆ ಇಲ್ಲ.) ಮಡಿವಂತಿಕೆ ಅಂದರೆ, ನಾನು ಸೆಕ್ಸು, ಗ್ಲಾಮರ್ರು ಕುರಿತು ಹೇಳಿದ್ದಲ್ಲ. ಅದನ್ನೆಲ್ಲ ತೋರಿಸುವುದರಲ್ಲಿ, ಅಮೆರಿಕದ ಪತ್ರಿಕೆಗಳೇನೂ ಕಡಿಮೆಯಿಲ್ಲ. (ಆದರೂ, ಭಾರತೀಯ ಇಂಗ್ಲಿಷ್ ಪತ್ರಿಕೆಗಳಷ್ಟು ಬೇಕಾಬಿಟ್ಟಿಯಲ್ಲ ಎಂಬುದು ನಿಜ.) ನಾನು ಬರೆದದ್ದು ಪತ್ರಿಕೆಯ News presentation ಹಾಗೂ News Chemistry ಕುರಿತು. ಉದಾಹರಣೆಗೆ – ಚಾರ್ಲಿ ಚಾಪ್ಲಿನ್ ಚಿತ್ರಗಳು ಕಳಪೆ ಎಂದು ನಾನು ಹೇಳುವುದೇ ಇಲ್ಲ. ಆದರೆ, ಸ್ಪೀಲ್ ಬರ್ಗ್ ಚಿತ್ರ ನಿರ್ಮಾಣ ತಂತ್ರಗಳು ಹಾಗೂ ಚಿತ್ರದ ಪ್ರಸೆಂಟೇಶನ್ ಈಗ ಎಷ್ಟೋ ಬದಲಾಗಿದೆ. ಹಾಗಂತ ಚಾಪ್ಲಿನ್ ಬಳಸುತ್ತಿದ್ದ ಪದ್ಧತಿಯೇ ಸರಿ. ಸ್ಪೀಲ್ ಬರ್ಗ್ ಪದ್ಧತಿ ತಪ್ಪು ಎಂದು ಹೇಳಲಾಗುವುದಿಲ್ಲ. ಇಂಥ ಚೇಂಜ್ ಅಮೆರಿಕದ ಅನೇಕ ಪತ್ರಿಕೆಗಳಲ್ಲಿ ಇತ್ತೀಚಿನವರೆಗೂ ಇರಲಿಲ್ಲ. ಅವು ಟೀವಿ ಯುಗವನ್ನು ಮರೆತು ಸುದ್ದಿಯನ್ನು ಹಳೆಯ ಕಾಲದ ಶೈಲಿಯಲ್ಲೇ ಪ್ರಸ್ತುತಪಡಿಸುತ್ತಿದ್ದವು. ಪತ್ರಿಕೆಯಲ್ಲಿ ಬಣ್ಣಗಳು ಹಾಗೂ ವಿನ್ಯಾಸಕ್ಕೆ ಹಳೆಯ ಮಡಿವಂತಿಕೆ ಸೂತ್ರಗಳನ್ನೇ ಬಳಸುತ್ತಿದ್ದವು. ಮುಖಪುಟದಲ್ಲಿ ಜಾಹೀರಾತು ಹಾಕುವುದು ತಪ್ಪು ಎಂಬುದು ಅಮೆರಿಕದ ಅನೇಕ ಪತ್ರಿಕೆಗಳ ವಾದವಾಗಿತ್ತು. ಈ ಸೂತ್ರಗಳನ್ನು ಬಳಸದ ಪತ್ರಿಕೆಗಳನ್ನು ಮೂದಲಿಸುವುದು, ಕೀಳಾಗಿ ನೋಡುವುದು ಅಮೆರಿಕದ ಅನೇಕ ಪತ್ರಿಕಾದೊರೆಗಳ ಧೋರಣೆಯಾಗಿತ್ತು. ಈ ಹಿನ್ನೆಲೆಯಲ್ಲೇ, ಯುಎಸ್‌ಎ ಟುಡೇ ಪತ್ರಿಕೆಯನ್ನು ಅವರು ಮೂದಲಿಸುತ್ತಿದ್ದರು.

   ನಮ್ಮ “ದಿ ಹಿಂದೂ” ಪತ್ರಿಕೆಯ ಉದಾಹರಣೆ ತೆಗೆದುಕೊಳ್ಳಿ. ಈಗ 4-5 ವರ್ಷಗಳ ಹಿಂದೆ ಈ ಪತ್ರಿಕೆ ಮರುವಿನ್ಯಾಸ ಪಡೆದಾಗ ಅದರ “ಶೀಲ ಹಾಳಾಯಿತು” ಅಂತ ಮರುಗಿದವರು ಎಷ್ಟೋ ಜನ! ಆದರೆ, ಈ ಧೋರಣೆ ಬದಲಾಗದ ಹೊರತೂ ಪತ್ರಿಕೆಗಳಿಗೆ ಉಳಿಗಾಲವಿಲ್ಲ ಎಂಬುದನ್ನು ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯೂ ಅರಿತುಕೊಂಡಿದೆ. ನಾನು ಮಡಿವಂತಿಕೆ ಅಂತ ಹೇಳಿದ್ದು ಈ ಧಾಟಿಯಲ್ಲಿ.

   ಪ್ರತಿಕ್ರಿಯೆ
 2. ಶ್ರೀನಿವಾಸಗೌಡ

  ನೀವು ಹೇಳ್ತಾ ಇರೋದು ನಿಜ ರವಿ ಹೆಗ್ಗಡೆ ಅವರು ನಾನು ಮೊನ್ನೆ ತಾನೆ ಟಿಲಿವಿಶನ್ ಸ್ಟೋರಿ ಐಡಿಯಾ ಇದೇಯಾ, ನಂಗೊದ್ದು ಅರ್ಜಂಟ್ ಸ್ಟೋರಿ ಐಡಿಯೈ ಬೇಕು ಅಂತಾ ಗೂಗಲ್ ಸರ್ಚ್ ನಲ್ಲಿ ಹುಡುಕಿದ್ದೆ, ಇಂಟರ್ನೆಟ್ ನ ಬಳಕೆ ಹೆಚ್ಚಾದಂತೆ ಎಲ್ಲದನ್ನು ಅಲ್ಲಿಂದಲೇ ಕಂಡುಕೊಳ್ಳಲು ಯತ್ನಿಸುವುತ್ತೇವೆ ಕಾಣ್ತದೆ, ನೀವು ಕಾಮೆಂಟಿನಲ್ಲಿ ದಾಖಲಿದಂತೆ ನ್ಯೂಸ್ ಪೇಪರ್ ಇಲ್ಲವೇ ಇಲ್ಲ ಆನ್ನೊ ಸ್ಥಿತಿಗಿಂತಾ ಪಾಪುಲಾರಿಟಿ ಕಮ್ಮಿ ಆಗಬಹುದು…

  ಪ್ರತಿಕ್ರಿಯೆ
 3. SB

  ನಮ್ಮ ದೈನಂದಿನ ಜೀವನ ತೀವ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದ ಮೇಲೆ ತುಂಬಾ ಅವಲಂಬಿಸಿರುವುದರಿಂದ ಮಾಧ್ಯಮಗಳ ಸ್ವರೂಪ ಕೂಡಾ ಅಷ್ಟೇ ತೀವ್ರಗತಿಯಲ್ಲಿ ಬದಲಾಗುವುದು ಅನಿವಾರ್ಯವಷ್ಟೇ ಅಲ್ಲ, ಅವಶ್ಯಕ ಕೂಡಾ. ಆ ಅನಿವಾರ್ಯಯತೆಯನ್ನು ಯಾವ ಪತ್ರಿಕೆಗಳು ಒಪ್ಪಿಕೊಂಡು ತಾವೂ ಬದಲಾಗುತ್ತವೋ ಆ ಪತ್ರಿಕೆಗಳು ಬದುಕುಳಿದು ಬೆಳೆಯುತ್ತವೆ. ಇದು Information Age ಹಾಗಾಗಿ ಸುದ್ದಿಮಾಧ್ಯಮಗಳು ತಮಗೇ ಅರಿವಿಲ್ಲದಂತೆ ಈ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿವೆ. ಅವು ಹೊಸ ಹೊಸ business model-ಗಳನ್ನು ಕಂಡುಕೊಳ್ಳದೆ ಇದ್ದರೆ ಉಳಿವು ಸಾಧ್ಯವಿಲ್ಲ. ಅದಕ್ಕೋಸ್ಕರ ನಮ್ಮಲ್ಲಿನ ಸಾಕಷ್ಟು ಪತ್ರಿಕೆಗಳ ಹಾಗೆ ಪತ್ರಿಕೋದ್ಯಮದ ಧರ್ಮವನ್ನೇ ಹರಾಜು ಹಾಕುವ ಅವಶ್ಯಕತೆಯೂ ಇಲ್ಲ.

  ಈಗ ಇಂಟರನೆಟ್ ಹೊಸ ವಿಷಯ ಅಲ್ಲವೇ ಅಲ್ಲ. ಹಾಗೆ ನೋಡಿದರೆ, ಕಂಪ್ಯೂಟರ್ ಮುಂದೆ ಕೂತು ಪತ್ರಿಕೆಯನ್ನು ಓದುವುದು ಜನಕ್ಕೆ ಒಂದು ನಿರ್ಬಂಧವಾಗಿ ತೋರುತ್ತಿದೆ. ಈಗಿನ ಅವಶ್ಯಕತೆ mobility! ಕಾಗದದ ಪತ್ರಿಕೆಗಳು ಕೂಡಾ ಈ ‘ಜಂಗಮ’ತನಕ್ಕೆ ಪೂರಕವಾಗೇ ಇದ್ದದ್ದು. ಈಗಲೂ ಹಾಗೇ ಇರಬೇಕಾಗಿದೆ – ಕಾಗದವನ್ನು ಬಿಟ್ಟು ಇಲೆಕ್ಟ್ರಾನನ್ನು ಅವಲಂಬಿಸಬೇಕಾಗಿದೆ ಅಷ್ಟೆ. Subscription-based personalized news is probably what will catch on. Amazon-ನವರ Kindle-ಅನ್ನು ನೋಡಿದ್ದೀರಾ?

  ಪ್ರತಿಕ್ರಿಯೆ
  • test

   SB –
   ೧. ಪತ್ರಿಕೆ ಓದಕ್ಕೆ “ಕಂಪ್ಯೂಟರ್ ಮುಂದೆ ಕೂರುವ” ಅಗತ್ಯ ಇಲ್ಲ.
   ೨. Subscription-based personalized newsಗೆ ದುಡ್ಡು ಕೊಡಲು ಭಾರತದಂಥ ಮಾರುಕಟ್ಟೆಗಳು ಇನ್ನೂ ರೆಡಿ ಇಲ್ಲ.
   ೩. Amazon-ನವರ Kindle-ಅನ್ನು ನೀವು ನೋಡಿದ್ದೀರಾ? ಬಳಸುತ್ತಿದ್ದೀರಾ? ಎಷ್ಟು ಕಂಟೆಂಟ್ ಲಭ್ಯವಿದೆ/ಕೊಂಡಿದ್ದೀರಿ?

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: