“ವ್ಯಕ್ತಿತ್ವವಿಲ್ಲದ ಚಂದ್ರ ಡೊಂಕಾದರೆ ಬೆಳದಿಂಗಳೂ ಡೊಂಕೇ?”

gali.gif“ಗಾಳಿ ಬೆಳಕು”

 

 

 

ನಟರಾಜ್ ಹುಳಿಯಾರ್

ಲಂಕೇಶ್ ಹಾಗೂ ಡಿ ಆರ್ ನಾಗರಾಜ್ ಅವರನ್ನು ಬಲ್ಲ ಮಿತ್ರರೊಬ್ಬರು ಕೆಲವು ವಾರಗಳಿಂದ (ಕನ್ನಡ ಟೈಮ್ಸ್ ಪತ್ರಿಕೆಯಲ್ಲಿ) ಪ್ರಕಟವಾಗುತ್ತಿರುವ “ಇಂತಿ ನಮಸ್ಕಾರಗಳು” ಎಂಬ ಜೀವನ ಚರಿತ್ರಾತ್ಮಕ ವಿಮರ್ಶೆಯ ಒಂದು ಪ್ರತಿಕ್ರಿಯೆ ನೀಡಿದ್ದಾರೆ. ಆ ಪತ್ರ ಹೀಗಿದೆ:

ಪ್ರಿಯ ನಟರಾಜ್,
ನೀವು ಲಂಕೇಶರನ್ನು, ಡಿ ಆರ್ ನಾಗರಾಜರನ್ನು ಈ ಪಾಟಿ ಗಂಭಿರವಾಗಿ ಏಕೆ ಪರಿಗಣಿಸಿದಿರಿ ಎಂದು ನಿಮ್ಮ “ಇಂತಿ ನಮಸ್ಕಾರಗಳು” ಭಾಗಗಳನ್ನು ಓದಿದಾಗ ಯೋಚಿಸುತ್ತಿದ್ದೆ. ಆದರೆ ಅವರನ್ನು ವ್ಯವಸ್ಥಿತವಾಗಿ ಅಧ್ಯಯನಿಸದಿದ್ದರೆ ಅವರ ಕಾಣಿಕೆಗಳನ್ನು ಗುರುತಿಸುವ ಕೆಲಸ ಪೂರ್ತಿಯಾಗಿ ಕೈಬಿಟ್ಟು ಹೋಗುತ್ತದೆ ಎಂದು ಅರಿವಾಗಿ ನನ್ನ ಅರಿವುಗೇಡಿತನವನ್ನು ಅದುಮಿಟ್ಟುಕೊಂಡೆ. ಟಿ ಎನ್ ಸೀತಾರಾಂ ಅಂಥವರಿಗೆ ಲೇಖಕವ್ಯಕ್ತಿತ್ವವಿಲ್ಲದ್ದರಿಂದ “ಆಸ್ಫೋಟ”, “ನಾಜೂಕಯ್ಯ” ಅಂಥ ಕೃತಿಗಳನ್ನು ಸೃಷ್ಟಿಸಿದರೂ ಗಂಭೀರ ನಾಟಕಕಾರರಾಗಿ ನಿಲ್ಲಲಿಲ್ಲ ಎಂಬ ಲಂಕೇಶರ ವಿಮರ್ಶೆಯನ್ನು ನೀವು ಅಪೂರ್ವವಾದ ಫ್ಲ್ಯಾಶ್ ಎಂದು ಪರಿಗಣಿಸಿದ್ದರಿಂದ ಈ ಪತ್ರ ಬರೆಯಬೇಕೆನಿಸಿತು. ಸೀತಾರಾಂ ತರಹದ ಲೇಖಕ ಒಂದು ವ್ಯಕ್ತಿತ್ವ ಬೆಳೆಸಿಕೊಳ್ಳಲಿಲ್ಲ ಎಂದು ಅರ್ಥೈಸಿದರೆ ಮೊದಲು ವ್ಯಕ್ತಿತ್ವ ಬೆಳೆಸಿಕೊಂಡು ನಂತರ ಕೃತಿ ರಚನೆಗೆ ಮುಂದಾಗಬೇಕು ಎಂದು ಹೇಳಬೇಕಾಗುತ್ತದೆ. ಒಂದು ಅಪೂರ್ವ ಕೃತಿ ತನ್ನಿಂದ ತಾನಾಗೇ ಒಬ್ಬ ವ್ಯಕ್ತಿತ್ವವಿಲ್ಲದ ವ್ಯಕ್ತಿಯ ಮೂಲಕ ಬರೆಸಿಕೊಂಡರೆ ತಾವುಗಳು ಗಂಭೀರವಾಗಿ ಪರಿಗಣಿಸುವುದಿಲ್ಲವೇನೊ? ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಎಂಬ ಇಬ್ಬರು ಬರಹಗಾರರಲ್ಲಿ ಯಾವುದೇ ರೀತಿಯ ವ್ಯಕ್ತಿತ್ವ ರೂಪುಗೊಂಡಿರದಾಗ “ಸಂಸ್ಕಾರ”, “ತುಘಲಕ್”ನಂಥ ಕೃತಿ ಹೊರಬಂದು, ವ್ಯಕ್ತಿತ್ವ ರೂಪುಗೊಂಡ ಮೇಲೆ ಆ ಮಟ್ಟದ ಕೃತಿ ಬರಲಿಲ್ಲವಲ್ಲ, ಇದಕ್ಕೇನಂತೀರಿ? ಅಥವಾ ನೀವು ಲೇಖಕ-ವ್ಯಕ್ತಿತ್ವ ಎಂದು ಅರ್ಥೈಸಿದ್ದರಲ್ಲೂ ಮೇಲಿನ ವಾದ ಸರಿಹೋಗುತ್ತೆ. (ಶಂಕರ ಭಟ್ಟರಾಗಲಿ, ಕೆ ವಿ ನಾರಾಯಣರಾಗಲಿ ನಿಮಗೆ ರೈಟರ್ಸ್ ಪರ್ಸನಾಲಿಟಿ ಎಂಬುದನ್ನು ಹೇಗೆ ಬರೆಯಬೇಕೆಂದು ತಿಳಿಹೇಳಿಲ್ಲವೇ? ಇರಲಿ). ಲೇಖಕ-ವ್ಯಕ್ತಿತ್ವ ರೂಪುಗೊಂಡಲ್ಲಿ ಬರೆದಿದ್ದನ್ನೆಲ್ಲ ಗಂಭೀರವಾಗಿ ಪರಿಗಣಿಸುತ್ತೀರೋ ಹೇಗೆ? ನಿಮ್ಮ ಅಕಡೆಮಿಕ್ ಗಳ ವಿಚಾರ ಹೀಗೇ ಅಂತ ಹೇಳಲು ಬರುವುದಿಲ್ಲ ಸ್ವಾಮಿ.

ನೀವು ಲಂಕೇಶರು ಅಂದಿದ್ದನ್ನು ಒಪ್ಪಿದ್ದರಿಂದ, ನಿಮ್ಮನ್ನು “ಗುರು” ಎಂದು ಪರಿಗಣಿಸುವ ಹಲವಾರು ಮಂದಿ, ವ್ಯಕ್ತಿತ್ವ ರೂಪುಗೊಳ್ಳುವ ತನಕ ಬರೆಯುವ ತಂಟೆಗೆ ಹೋಗದಿದ್ದರೆ ಏನು ಗತಿ?

ಬರೆಯುವ ಆಸೆ, ಪ್ರತಿಭೆ, ಪರಿಶ್ರಮವೊಂದೇ ಸಾಲದೆ? ಲೇಖಕವ್ಯಕ್ತಿತ್ವ ಇರಲೇಬೇಕೇ? ಬಿದಿಗೆ ಚಂದ್ರಮ ಡೊಂಕಿರಬಹುದು, ಆದರೆ ಅದರಿಂದ ಹೊಮ್ಮುವ ಬೆಳದಿಂಗಳು ಡೊಂಕೇ? ಈ ಪ್ರಶ್ನೆಗೆ ನೀವು ಉತ್ತರಿಸದಿದ್ದರೆ ವುಡ್ ಹೌಸ್ ರೀತಿ ನೆಗಡಿ ಬಂದು ಮೂಗಿನಿಂದ ಸೋರುತ್ತಿರುವಾಗ ನಿಮ್ಮ ಜೇಬಲ್ಲಿ ಕರ್ಚಿಫ್ ಇಲ್ಲದಿರಲಿ; ನೀವು ಕತ್ತಲಲ್ಲಿ ಮೆಟ್ಟಿಲಿಳಿಯುವಾಗ ಇನ್ನೊಂದು ಮೆಟ್ಟಿಲಿದೆ ಎಂದು ಕಾಲಿಟ್ಟಾಗ ಮೆಟ್ಟಿಲು ಇಲ್ಲದಿರಲಿ; ನೀವು ಒರಗಲು ಗೋಡೆ ಇದೆ ಎಂದು ತಿಳಿದು ಒರಗಲು ಹೋದಾಗ ಗೋಡೆ ಇಲ್ಲದಿರಲಿ -ಹೀಗೆಲ್ಲಾ ಶಾಪ ಹಾಕಬೇಕಾಗುತ್ತದೆ!

ಇಂತಿ ನಿಮ್ಮ
……….

*

“ಇಂತಿ ನಮಸ್ಕಾರಗಳು” ಎಂಬ ನಿರೂಪಣೆ ಕನ್ನಡದ ಇಬ್ಬರು ಶ್ರೇಷ್ಠ ಬರಹಗಾರರನ್ನು ಕೇಂದ್ರದಲ್ಲಿಟ್ಟುಕೊಂಡು ಹರಿಯುತ್ತಿರುವುದರಿಂದ ಈ ವ್ಯಕ್ತಿತ್ವಗಳ ಬಗ್ಗೆ ಆಸಕ್ತಿಯುಳ್ಳವರಿಂದ ಒಮ್ಮೊಮ್ಮೆ ಪ್ರತಿಕ್ರಿಯೆಗಳು ಬರುತ್ತಿರುತ್ತವೆ. ಈ ಸಲ, ಮೇಲೆ ಕೊಟ್ಟಿರುವ ಪತ್ರ ಬರೆದ ಮಿತ್ರರೊಬ್ಬರು ಕೊಂಚ ಚುಡಾವಣೆಯ ಧಾಟಿಯಲ್ಲಿ ಗಂಭೀರ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಆ ಪತ್ರದಲ್ಲಿ ಚರ್ಚಿತವಾಗಿರುವ “ಲೇಖಕವ್ಯಕ್ತಿತ್ವ” ಎನ್ನುವುದು ಏನು ಎಂಬ ಬಗ್ಗೆ ಇನ್ನಷ್ಟು ಸ್ಪಷ್ಟವಾಗಿ ಯೋಚಿಸುವಂತೆ ಮಿತ್ರರ ಪತ್ರ ಕಚಗುಳಿ ಇಟ್ಟಿದ್ದರಿಂದ ಆ ಬಗ್ಗೆ ಒಂದು ಲಹರಿ…

ಬರವಣಿಗೆಯಲ್ಲಿ ತೊಡಗಿದ ಯಾವುದೇ ವ್ಯಕ್ತಿ ಮೊದಲೇ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬರಹಗಾರನಾಗಬೇಕು ಎಂಬರ್ಥವನ್ನು “ರೈಟರ್ಸ್ ಪರ್ಸನಾಲಿಟಿ” ಎಂಬ ಗ್ರಹಿಕೆ ಸೂಚಿಸುವುದಿಲ್ಲ. ಒಬ್ಬ ಮನುಷ್ಯನಾಗಿ ಲೇಖಕನೊಬ್ಬನ ವ್ಯಕ್ತಿತ್ವ ತುಂಬಾ ಮಹತ್ವದ್ದೇ ಅಥವಾ ಅಲ್ಲವೇ ಎಂಬ ಪ್ರಶ್ನೆ ಕೂಡ ಅಲ್ಲಿ ಮುಖ್ಯವಲ್ಲ. ಬದಲಿಗೆ “ಲೇಖಕ ವ್ಯಕ್ತಿತ್ವ” ಅನ್ನುವುದು ಈ ಕೆಲವು ಅಂಶಗಳನ್ನು ಒಳಗೊಂಡಿರುತ್ತದೆ ಎಂದು ಊಹಿಸಬಹುದು.

೧. ಲೇಖಕ ಅಥವಾ ಲೇಖಕಿ ಮಾನವ ವರ್ತನೆ, ಸಮಾಜ, ಸಾಂಸ್ಕೃತಿಕ ಸಂಗತಿಗಳು ಇವನ್ನೆಲ್ಲಾ ಆಳವಾಗಿ ನೋಡುವ, ವಿಶ್ಲೇಷಿಸುವ ವಿಶಿಷ್ಟ ಹಾಗೂ ಸೂಕ್ಷ್ಮ ರೀತಿಯನ್ನು ಹೇಗೆ ರೂಢಿಸಿಕೊಂಡಿದ್ದಾರೆ?

೨. ಸತ್ಯದ ಹುಡುಕಾಟದಲ್ಲಿ ತಾವು ಕಂಡ ನಿಷ್ಠುರ ಸಂಗತಿಗಳನ್ನು ದಾಖಲಿಸಬಲ್ಲ, ಗ್ರಹಿಸಬಲ್ಲ ಶಕ್ತಿ ಹೊಂದಿದ್ದಾರೆಯೆ?

೩. ಬಾಟಲಿಗೆ ಹಾಕಿದರೆ ಬಾಟಲಿಯ ಆಕಾರಕ್ಕೆ, ಅಥವಾ ಡಬ್ಬಕ್ಕೆ ಹಾಕಿದರೆ ಡಬ್ಬದ ಆಕಾರಕ್ಕೆ ತಿರುಗುವ ಅಳ್ಳಕವಾದ ವ್ಯಕ್ತಿತ್ವವಾಗುವುದನ್ನು ತಪ್ಪಿಸಿಕೊಂಡಿದ್ದಾರೆಯೆ?

೪. ಸುತ್ತಮುತ್ತಲಿನ ವಿದ್ಯಮಾನಗಳನ್ನು ಅರಿಯುವ ನಿಟ್ಟಿನಲ್ಲಿ ತಮ್ಮದೇ ಆದ ಸೂಕ್ಷ್ಮ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದಾರೆಯೆ?

೫. ಚಿಂತನೆ ಹಾಗೂ ಬರಹದಲ್ಲಿ ತಕ್ಷಣದ ಸ್ಮಾರ್ಟ್ ನೆಸ್ ಹಾಗೂ ಪರಿಣಾಮವನ್ನಷ್ಟೆ ಅಂತಿಮವೆಂದು ತಿಳಿಯದಷ್ಟು ಸೂಕ್ಷ್ಮತೆಯುಳ್ಳವರೆ?

೬. ಭಾಷೆಯ ಬಳಕೆಯಲ್ಲಿ ಸುಳ್ಳು-ನಿಜಗಳ ಬಗ್ಗೆ ಎಚ್ಚರವಾಗಿದ್ದಾರೆಯೆ?

೭. ಸ್ಪಷ್ಟವಾಗಿಯೋ ಅಸ್ಪಷ್ಟವಾಗಿಯೋ ತಮ್ಮದೇ ಆದ ತಾತ್ವಿಕತೆಯನ್ನು ರೂಪಿಸಿಕೊಂಡಿದ್ದಾರೆಯೆ?

೮. ತಾವು ನಂಬಿದ ಮೌಲ್ಯಗಳನ್ನು ಪರೀಕ್ಷೆಗೆ ಒಳಪಡಿಸಬಲ್ಲ ದಿಟ್ಟ ಸತ್ಯಬದ್ಧತೆ ಪಡೆದಿದ್ದಾರೆಯೆ?

…ಹೀಗೆ ಈ ನಿರೀಕ್ಷೆಗಳ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. ಅದೇನೇ ಇರಲಿ, ಸಾಮಾನ್ಯವಾಗಿ ಲೇಖಕ ಅಥವ ಲೇಖಕಿಯ ನೋಟ, ಪ್ರತಿಭೆ, ಪರಿಶ್ರಮ, ಒಳನೋಟ ಹಾಗೂ ಅವರು ತಮ್ಮ ಆಳದಲ್ಲಿ ವಿವರಿಸಿಕೊಂಡ ನೈತಿಕ ಪ್ರಜ್ಞೆ ಇವೆಲ್ಲದರ ಫಲವಾಗಿ ಒಂದು ರೈಟರ್ಸ್ ಪರ್ಸನಾಲಿಟಿ ವಿಕಾಸಗೊಳ್ಳುತ್ತದೆಂದು ಕಾಣುತ್ತದೆ. ಇಂಥ ವ್ಯಕ್ತಿತ್ವಗಳ ಬಗ್ಗೆ ಸೂಕ್ಷ್ಮವಾದ ಓದುಗ ವಲಯ ಕ್ರಮೇಣ ಗೌರವ ಬೆಳೆಸಿಕೊಳ್ಳಲಾರಂಭಿಸುತ್ತದೆ. ಯಾವುದೇ ವಿಚಾರಗಳ ಬಗ್ಗೆ ಇಂಥ ಲೇಖಕ ಅಥವಾ ಲೇಖಕಿ ಏನು ಹೇಳಿದ್ದಾರೆ ಎಂಬ ಬಗ್ಗೆ ಕುತೂಹಲದಿಂದ ಹಾಗೂ ಪ್ರಾಮಾಣಿಕವಾದ ನಿರೀಕ್ಷೆಯಿಂದ ಈ ವಲಯ ಕಾಯುತ್ತಿರುತ್ತದೆ. ಸಾಧ್ಯವಾದರೆ ಅವರ ಅಭಿಪ್ರಾಯಗಳನ್ನು ಒಪ್ಪಿ, ಅನುಕರಿಸಲೆತ್ನಿಸುತ್ತದೆ. ಇಷ್ಟಾಗಿಯೂ ಈ ಯಾವ ಅರ್ಹತೆಗಳೂ ಇಲ್ಲದೆ ಯಾವುದೇ ರೀತಿಯ ವ್ಯಕ್ತಿಗಳ ಪ್ರತಿಭೆಯಿಂದ ಒಂದು ವಿಶಿಷ್ಟ ಕೃತಿ ಹುಟ್ಟಿಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆದರೂ ಕೇವಲ ಸ್ಮಾರ್‍ಟ್ ನೆಸ್ ಅಥವಾ ಭಾಷೆಯ ಹಾಗೂ ಐಡಿಯಾಲಜಿಗಳ ರಂಜಕ ಶೈಲಿ, ತಮ್ಮೆಲ್ಲ ನಿಲುವುಗಳ ಅಸೂಕ್ಷ್ಮ ಸಮರ್ಥನೆ ಇತ್ಯಾದಿಗಳಿಂದ ಯಾರೂ ನಿಜವಾದ ಬರಹಗಾರರಾಗಿದ್ದನ್ನು ನಾನು ಕನ್ನಡದಲ್ಲಂತೂ ಕಂಡಿಲ್ಲ.

ಯಾಕೆಂದರೆ, ಕನ್ನಡದ ಬೌದ್ಧಿಕ ಸಂವೇದನೆ ಕೋಂಚ ಬೇರೆಯ ರೀತಿಯದು. ಇಲ್ಲಿ ಸಾಮಾಜಿಕ ವೇದಿಕೆಗಳಲ್ಲಾಗಲೀ ಮಾಧ್ಯಮಗಳಲ್ಲಾಗಲೀ ಹೆಚ್ಚು ಕಾಣಿಸಿಕೊಳ್ಳದೆ ಆಳವಾದ ಸ್ತ್ರ್‍ಈವಾದಿ ಚಿಂತನೆಯಲ್ಲಿ ತೊಡಗಿರುವ ಎಚ್ ಎಸ್ ಶ್ರ್‍ಈಮತಿಯವರಂಥ ಲೇಖಕಿಯರಲ್ಲಿ ವಿಶಿಷ್ಟ ರೈಟರ್ಸ್ ಪರ್ಸನಾಲಿಟಿಯನ್ನು ಕಾಣುತ್ತೇವೆ. ಅಥವಾ ಬರೇ ನೂರು, ನೂರೈವತ್ತು ಪುಟಗಳಷ್ಟು ಕತೆ ಬರೆದಿರುವ, ಬೇಗನೆ ತೀರಿಕೊಂಡ ಬಿ ಸಿ ದೇಸಾಯಿಯವರ ಅನನ್ಯ ವ್ಯಕ್ತಿತ್ವವನ್ನು ಅವರ ಕಥೆಗಳ ಮೂಲಕವೇ ಓದುಗರು ಕಂಡುಕೊಳ್ಳುವ ಸಾಧ್ಯತೆಯಿದೆ. ಯಾಕೆಂದರೆ, “ಲೇಖಕವ್ಯಕ್ತಿತ್ವ” ಎನ್ನುವುದು ಅವನು ಹೊರಬಿಂಬಿಸುವ “ಇಮೇಜ್” ಅಲ್ಲ. ನಮ್ಮ ಕಾಲದ ಮುಖ್ಯ ಚಿಂತಕರಾದ ಜಿ ರಾಜಶೇಖರ್ ಎಲ್ಲೂ ಹೆಚ್ಚಾಗಿ ಕಾಣಿಸುವುದೇ ಇಲ್ಲ. ಆದರೆ, ಆಗಾಗ್ಗೆ ಪ್ರಕಟವಾಗುವ ಅವರ ನಿಲುವು, ಮಾತು, ಬರಹಗಳಲ್ಲಿ ಕಾಣುವ ತೀಕ್ಷ್ಣ ಸಾಮಾಜಿಕ ಗ್ರಹಿಕೆಯ ಪ್ರಖರತೆಯಿಂದಾಗಿಯೇ ಅವರ ಲೇಖಕವ್ಯಕ್ತಿತ್ವ ಸೂಕ್ಷ್ಮ ಓದುಗರ ಮನಸ್ಸಿನಲ್ಲಿ ನೆಲೆಗೊಳ್ಳತೊಡಗುತ್ತದೆ. ಎಫ್ ಆರ್ ಲೀವಿಸ್ ನಂಥ ದೊಡ್ಡ ವಿಮರ್ಶಕ ಯಾವುದರ ಬಗ್ಗೆ ಏನು ಹೇಳಿದ್ದಾನೆ ಎಂದು ಒಂದು ಕಾಲಕ್ಕೆ ಜಗತ್ತಿನ ಸಾಹಿತ್ಯಕ ಲೋಕ ಕಾಯುತ್ತಿತ್ತು. ಯಾಕೆಂದರೆ, ಲೀವಿಸ್ ವಿಮರ್ಶೆಯಲ್ಲಿ ಸುಳ್ಳು ಹೇಳಲಾರ ಎಂಬ ನಂಬಿಕೆ ಸಾಹಿತ್ಯದ ಪ್ರಜ್ಞಾವಂತ ಓದುಗರಲ್ಲಿತ್ತು…

ಇದೆಲ್ಲದರ ಜೊತೆಗೆ, ಬರಹಗಾರರು ತಮ್ಮ ಬರವಣಿಗೆಯ ವಿಶಾಲವಾದ ವ್ಯಾಪ್ತಿಯಿಂದಾಗಿ ಹಾಗೂ ಆಗಾಗ್ಗೆ ತೋರುವ ಸಾಮಾಜಿಕ, ಸಾಂಸ್ಕೃತಿಕ ಜವಾಬ್ದಾರಿಗಳಿಂದಾಗಿ ತಳೆಯುವ ನಿಲುವುಗಳಿಂದಾಗಿ ಕೂಡ “ರೈಟರ್ಸ್ ಪರ್ಸನಾಲಿಟಿ” ರೂಪುಗೊಳ್ಳುತ್ತಿರುತ್ತದೆ. ಕಾರಂತ, ಕುವೆಂಪು, ಅನಂತಮೂರ್ತಿ, ಲಂಕೇಶ್, ತೇಜಸ್ವಿ, ದೇವನೂರ ಮಹಾದೇವ, ಸಿದ್ಧಲಿಂಗಯ್ಯ, ಬಾನು ಮುಷ್ತಾಕ್ ಥರದ ಬರಹಗಾರರು ನಾವು ಮೇಲೆ ಚರ್ಚಿಸಿದ ಅಂಶಗಳ ಜೊತೆಗೇ ಕಾಲಕಾಲಕ್ಕೆ ತಂತಮ್ಮ ಸಾಮಾಜಿಕ ಜವಾಬ್ದಾರಿಗಳ ನಿರ್ವಹಣೆಯಿಂದಾಗಿ ಕೂಡ ವಿಶಿಷ್ಟ ವ್ಯಕ್ತಿತ್ವ ಪಡೆದವರು ಎಂಬುದು ಎಲ್ಲ ಓದುಗರಿಗೂ ಗೊತ್ತಿರುತ್ತದೆ. 

‍ಲೇಖಕರು avadhi

December 6, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

೧ ಪ್ರತಿಕ್ರಿಯೆ

 1. nagaraj vastarey

  hi,

  very incidentally logged onto this. found this piece interesting. shall be regular.

  regards

  nv

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: