ಶಾಂತಿನೀಕೆತೋನ್, ಆಮಾದೇರ್ ಶಾಂತಿನೀಕೆತೋನ್…

ಚರಿತ ‘ಜಗದಗಲದ ಅಷ್ಟೂ ವಿಸ್ಮಯವನ್ನು ಹಿಡಿಯಲ್ಲಿ ಹಿಡಿದಿಡುವ ಹಂಬಲದವಳು. ನಿಸರ್ಗದ ಒಡನಾಡಿ-ಆರಾಧಕಿ. ಜನರಲ್ಲಿ ಪ್ರೀತಿ, ಬೆರಗು, ಮುಜುಗರ ಇಟ್ಟವಳು. ಪ್ರಸ್ತುತ, ಮೈಸೂರು ವಿ.ವಿ.ಯಲ್ಲಿ ದೃಶ್ಯಕಲಾ ಸಂಶೋಧಕಿ’. ನನ್ನ ಪಾಡಿಗೆ ನಾನು ಇವರ ಬ್ಲಾಗ್.
 
ಚರಿತ ಅವರ ಬರಹಕ್ಕೆ ತಂಗಾಳಿಯ ಸ್ಪರ್ಶವಿದೆ. ಕ್ಯಾನ್ವಾಸ್ ನ ಮೇಲೆ ಬಣ್ಣವನ್ನು ಎಷ್ಟು ತನ್ಮಯತೆಯಿಂದ ಹರಡುತ್ತಾರೋ ಅಷ್ಟೇ ತನ್ಮಯತೆಯಿಂದ ಹಾಳೆಯ ಮೇಲೂ ಅಕ್ಷರಗಳ ಚಿತ್ತಾರ ಬಿಡಿಸುತ್ತಾರೆ. ಟ್ಯಾಗೂರರ ಶಾಂತಿನಿಕೇತನದಲ್ಲಿ ಕಲಿತು ಬಂದ ಚರಿತಾ ತಾವು ಬಿಡಿಸಿಟ್ಟ ಅಕ್ಷರ- ಚಿತ್ರ ಇಲ್ಲಿದೆ-
 
ಮೋಹದ ಮಾಯೆಗೆ ಯಾವ ರಾಗದ ಹಂಗು..?!
ಪಶ್ಚಿಮ ಬಂಗಾಳದ ’ಶಾಂತಿನಿಕೇತನ’ ನನ್ನ ಮಟ್ಟಿಗೆ ಮೈನವಿರೇಳಿಸುವ ಹೆಸರು. ಮೈಸೂರಿನಲ್ಲಿ ಕಲಾವಿದ್ಯಾರ್ಥಿಯಾಗಿದ್ದಾಗ ಅಲ್ಲಿಗೆ ಭೇಟಿ ಕೊಡುವ ಅವಕಾಶ ದೊರಕಿತ್ತು. ಅಲ್ಲಿನ ಹಳ್ಳಿಗಳು, ಕಾಲುದಾರಿ, ಮನೆಗಳು, ವಿಶಾಲ ಬಯಲು, ಕಲಾಭವನದ ಕ್ಯಾಂಪಸ್, ಸೈಕಲ್ ತುಳಿಯುವ ಜನ – ಎಲ್ಲವೂ ಒಟ್ಟಾರೆ ಬೆಚ್ಚಗಿನ ಗೂಡು ಕಟ್ಟಿದ್ದವು ನನ್ನೊಳಗೆ. ಮುಂದೊಮ್ಮೆ ಎಂ.ಎಫ್.ಎ ಪದವಿಗಾಗಿ ಅಲ್ಲಿ ಪ್ರವೇಶ ಪಡೆದಾಗ ಜನ್ಮಾಂತರದ ಯಾವುದೋ ನಂಟು ಮತ್ತೊಮ್ಮೆ ನನ್ನನ್ನು ಆಪ್ತವಾಗಿ ಕರೆಸಿಕೊಂಡಂತೆ ಅನಿಸಿತ್ತು !
 
ರೈಲಿನಲ್ಲಿ ಬಂಗಾಳ ಪ್ರವೇಶಿಸುತ್ತಿದ್ದಂತೆ ಸೆಳೆಯುವುದು- ಅಲ್ಲಿನ ಭೂದೃಶ್ಯ . ಅಚ್ಚರಿಗೊಳಿಸುವಂತೆ ಒಂದೂ ಓರೆಕೋರೆಯಿಲ್ಲದ, ಕ್ರುತಕವೇನೋ ಅನಿಸುವಷ್ಟು ನೀಟಾಗಿ, ಸಪಾಟಾದ ವಿಶಾಲ ಬಯಲು… ಬಯಲಿನಿಂದ ಉಂಟಾದ ಅಡ್ಡಗೆರೆಗಳನ್ನು ಅಷ್ಟೇ ನಾಜೂಕಾಗಿ ಕತ್ತರಿಸಿ ಲಂಬಗೊಳಿಸುವ ತಾಳೆಮರಗಳು… ಯಾರೋ ಕಲಾವಿದ ಚೌಕಾಸಿ ಮಾಡಿ ಜೋಡಿಸಿಟ್ಟಂತೆ.  (ತಾಳೆಮರಗಳ ’ವ್ಯಕ್ತಿತ್ವ’ ನನ್ನನ್ನು ಆಕರ್ಷಿಸಿದ್ದು ಆಗಲೇ. ನೀಟಾಗಿ ಹೇರ್ ಕಟ್ ಮಾಡಿಸಿ ಟಾಕುಟೀಕಾಗಿ ಎದೆಯುಬ್ಬಿಸಿ ನಿಂತ ಹೈದನಂತೆ,…ಮತ್ತೊಮ್ಮೆ ತಲೆತುಂಬ ಹೂಮುಡಿದು ಕ್ಯಾಮೆರಾಗೆ ಪೋಸ್ ಕೊಡುವ ಸುಂದರಿಯಂತೆ ಕಾಣುತ್ತವೆ ಅವು.)
 
ಮತ್ತೊಂದೆಡೆ ಸದಾ ತುಂಬಿರುವ ಪುಟ್ಟ ಪುಟ್ಟ ಕೊಳಗಳು, ಅವುಗಳಲ್ಲಿ ಲಿಲ್ಲಿ, ತಾವರೆ, ಜೊಂಡು, ಗುಂಪುಗುಂಪಾಗಿ ಕ್ರೀಡಿಸುವ ಬಾತುಗಳು, ಪಕ್ಕಕ್ಕೆ ಸುಂದರ ಮನೆಗಳು…ಒಟ್ಟಾರೆ, ವಿಶಾಲ ಕ್ಯಾನ್ವಾಸಿನಲ್ಲಿ ಒಂದು ಭಾಗವಾಗಿ ನಾನೂ ಸೇರ್ಪಡೆಗೊಂಡ ಸಂತಸ.
 
ಶಾಂತಿನಿಕೇತನದ ಸಖ್ಯ ರವೀಂದ್ರನಾಥರ ’ಶಾಯಿಯ ಕಂಪು’ ಅನುಭವಿಸಿದಂತೆ ! ಅಲ್ಲಿನ ನೋಟ, ಪರಿಮಳ, ಜನ, ಸಂಗೀತ – ಎಲ್ಲವೂ ಹಳೆ ಪರಿಚಯವೋ ಎಂಬಂತೆ ನನ್ನದೇ ಆಗಿಬಿಟ್ಟವು. ಭಾವತೀವ್ರತೆಯ ಯಾವುದೋ ಅಮಲು ಆ ಪರಿಸರದಲ್ಲಿ ಅದ್ದಿ, ಹಾಗೆಯೇ ಸ್ಥಿರವಾಗಿ ಉಳಿದುಬಿಟ್ಟಹಾಗಿದೆ. ಅದು ಸದಾ ಸಾಂಸ್ಕೃತಿಕ ಚಟುವಟಿಕೆಗಳಿಂದ ಗಿಜಿಗುಡುವ ತಾಣ. ಮಧ್ಯಾಹ್ನದ ಪ್ರಖರತೆಯಲ್ಲಿ, ರಾತ್ರಿಯ ನೀರವತೆಯಲ್ಲಿ ತಾತ್ಕಾಲಿಕವಾಗಿ ಶಾಂತವಾಗುತ್ತದೆ. ಗುರುಕುಲಾಶ್ರಮದ ಪರಿಕಲ್ಪನೆಯಲ್ಲಿ ರೂಪುಗೊಂಡ ’ತಪೋವನ’ದ ಗಾಢ ಮೌನ ಮಾತ್ರ ಸುತ್ತೆಲ್ಲ ಮಡುಗಟ್ಟಿ ನಮ್ಮನ್ನೂ ಒಳಗುಮಾಡಿಕೊಳ್ಳುತ್ತದೆ.
 
ಹೊಸ ಸಹವಾಸಕ್ಕೆ ಸಾಸಿವೆ ಎಣ್ಣೆಯ ಘಾಟು, ಆಲೂಶೆದ್ದೊ, ಮಾಛ್(ಮೀನು), ಗುಗ್ನಿ(ಬಟಾಣಿ ಗೊಜ್ಜು)- ಇವುಗಳ ಅತಿಹಾವಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯವೇ. ಹೊಂದಿಕೊಂಡರೆ ಮಾತ್ರ ’ಮಿಶ್ಟಿ’(ಸಿಹಿ)ಯ ರುಚಿ ನಿಮ್ಮೊಂದಿಗೇ ಉಳಿದುಬಿಡುತ್ತದೆ. ಭಾಷೆ, ಆಚಾರ, ಆಹಾರದ ವ್ಯತ್ಯಾಸದ ಹೊರತು ’ಜನಮಾನಸ’ ಸ್ವಾಭಾವಿಕವಾಗಿ ಎಲ್ಲೆಡೆಯೂ ಒಂದೇ ತಾನೆ..?!
 
ತಿಳಿಹಸಿರಿನ ’ಲೇಡಿಬರ್ಡ್’ ನನ್ನ ಆಪ್ತ ಸಂಗಾತಿ. ನನಗೇ ರೆಕ್ಕೆಮೂಡಿಸಿದಂತೆ ಹಗುರವಾಗಿ, ನಾನು ಹೇಳಿದಲ್ಲಿ ಕರೆದೊಯ್ಯುವ ನಿಷ್ಠಾವಂತ ಸಾಂಗತ್ಯ ಅದರದು. ಮಧ್ಯಾಹ್ನ ಊಟದ ನಂತರ ಹೊಸ ಜಾಗಗಳ ಅನ್ವೇಷಣೆ ನಮ್ಮಿಬ್ಬರ ಇಷ್ಟದ ಹವ್ಯಾಸ. ನನ್ನದೇ ಖಾಸಗಿ ಸ್ಥಳಗಳೂ ಹಲವಾರಿದ್ದವು ನನಗಾಗಿ ಹೇಳಿ ಮಾಡಿಸಿದಂತೆ. ನಿಶ್ಶಬ್ದವಾಗಿ ಕುಳಿತು ನಿಸರ್ಗದ ಬಣ್ಣ, ವಿನ್ಯಾಸ, ಶಬ್ದವೈವಿಧ್ಯಕ್ಕೆ ಮೈಯೆಲ್ಲ ಕಣ್ಣು-ಕಿವಿಯಾಗಿಸಿಕೊಂಡು ನನ್ನನ್ನೇ ಮರೆತುಬಿಡುವುದು ಎಷ್ಟು ಹಿತವಾಗಿತ್ತು..!
 
ಇಡೀ ಸಂಸಾರದೊಂದಿಗೆ ಧ್ಯಾನಸ್ಥರಂತೆ ನಿಂತ ಸಾಲು ಸಾಲು ತಾಳೆಗಳು, ಎಳೆಮಕ್ಕಳ ಸಣ್ಣಚೀರಾಟದಂತೆ ಸದ್ದುಹೊರಡಿಸುತ್ತ ತಲೆಯಾಡಿಸುವ ಹೊಲದ ಪೈರು, ಎಲ್ಲಿದ್ದೆ ಇಷ್ಟು ಹೊತ್ತು ಎಂದು ಸಲುಗೆಯಿಂದ ಬರಮಾಡಿಕೊಳ್ಳುವ ಕಾಲುದಾರಿ, ಪ್ರತಿಕ್ಷಣವೂ ಹೊಸ ಸೀರೆ ಹೊದ್ದು ಬಿನ್ನಾಣದಿಂದ ಬಣ್ಣ ಬದಲಿಸುವ ಆಕಾಶ, ಬದುಕಿನ ಚಲನಶೀಲತೆಯನ್ನು ನೆನಪಿಸುವ ನೀರಧಾರೆ, ಕೊಳಗಳಲ್ಲಿ ಮುಳುಗಿ-ತೇಲಿ ಆಡುವ ಬಾತುಕೋಳಿಗಳ ಹಿಂಡು, ನೀರಿನಲ್ಲುಂಟಾಗುವ ಶುದ್ಧ ವೃತ್ತಾಕಾರದ ಅಲೆಗಳು, ನನ್ನೊಡನೆ ಮಾತಾಡುತ್ತಲೇ ಕಣ್ಣು ಮಿಟುಕಿಸಿ ನಾಳೆ ಸಿಗುವೆನೆಂದು ಮರೆಯಾಗುವ ಸೂರ್ಯ – ಇವುಗಳನ್ನೆಲ್ಲ ನಿಧಾನ
 
ಕರಗಿಸಿಕೊಳ್ಳುತ್ತಾ,… ನಾನೆ ಅವುಗಳಲ್ಲಿ ಕರಗುತ್ತಾ…ಕತ್ತಲಾದಮೇಲೆ ಅನಿವಾರ್ಯವೆಂಬಂತೆ ಹಾಸ್ಟೆಲ್ ಗೆ ಮರಳುವುದು ನನ್ನ ನಿತ್ಯದ ದಿನಚರಿಯಾಗಿತ್ತು. ಕತ್ತಲೆ, ನೆರಳು, ಗಾಢಬಣ್ಣಗಳೊಡನೆ ನಿಕಟತೆ ಬೆಳೆದದ್ದೂ ಆಗಲೇ ಇರಬೇಕು. ಹಾಸ್ಟೆಲ್ ಕೋಣೆಯ ಕಿಟಕಿಯಿಂದ ಕಾಣುತ್ತಿದ್ದುದು- ’ಕಾಲಾ ಘರ್’ (ಕಪ್ಪು ಮನೆ). ನಂದಲಾಲ್ ಬೋಸ್, ರಾಂ ಕಿಂಕರ್ ಬೈಜ್ ಮುಂತಾದ ಪ್ರಸಿದ್ಧರು ಇರುತ್ತಿದ್ದ ಸ್ಥಳ ಎಂಬುದಕ್ಕಿಂತಲೂ ಅದರ ದೈತ್ಯಾಕಾರ, ಪಕ್ಕದಲ್ಲಿದ್ದ ಸುಂದರ-ಸುಗಂಧಿತ ಮರ, ಎಲ್ಲಕ್ಕೂ ಮಿಗಿಲಾಗಿ ರಾತ್ರಿಯ ಕೃತಕ ಬೆಳಗಿನಲ್ಲಿ ಸ್ವತಃ ಕಲಾಕೃತಿಯಾಗಿ ಮೈದೋರುವ ಅದರ ಸೊಬಗು ಆಕರ್ಷಕವಾದುದು. ಕಪ್ಪುಛಾಯೆಯ ವೈವಿಧ್ಯತೆ ಕಾವ್ಯದ ಸೊಗಸಿನಂತೆ ಹೊಮ್ಮುತ್ತಿತ್ತು.
 
ಹಳ್ಳಿಗಳಲ್ಲಿ ಸಾಂಥಾಲಿ ಬುಡಕಟ್ಟು ಜನರ ಮನೆಗಳ ಸೊಗಸು-ಕಲಾತ್ಮಕತೆ, ಹಂದಿಮರಿಗಳ ಹಿಂಡು, ಮಕ್ಕಳ ಕೇಕೆ…ಹೀಗೆ ಗ್ರಹಿಕೆಗೆ ನಿಲುಕುವಷ್ಟೂ ನನ್ನವೇ…! ….ಎಷ್ಟೆಲ್ಲ… ಏನೆಲ್ಲ ಹೇಳುವುದು…..?! ಎಷ್ಟು ನೆನೆದು ಹರಟಿದರೂ ನನ್ನಲ್ಲಿ ನಾನೇ ಆಗಿಹೋದ ವಿವರಗಳೆಲ್ಲ ಹಾಗೇ ಉಳಿದುಬಿಡುತ್ತವೆ…! ”
ಶಾಂತಿನಿಕೆತೋನ್…….
ಶೇಜೆ ಶೋಬ್ ಹೋತೆ ಆಪೋನ್
ಆಮಾದೇರ್ ಶೋಬ್ ಹೋತೆ ಆಪೋನ್
ಆಮಾದೇರ್ ಶಾಂತಿನೀಕೆತೋನ್……
( ಶಾಂತಿನಿಕೇತನ……. ಎಲ್ಲರೂ ನಮ್ಮವರೇ ಇಲ್ಲಿ.. .ಇದು ನಮ್ಮೆಲ್ಲರ ಶಾಂತಿನಿಕೇತನ….)

‍ಲೇಖಕರು avadhi

October 23, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This