ಶಾದಿ ಡಾಟ್ ಕಾಮ್, ಮೆಟ್ರಿಮೊನಿಯಲ್ ಕಾಲಂ ಹುಡುಕ್ತಾನೇ ಇರ್ತೀನಿ

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ…
 
ಇನ್ಯಾರಿಗೆ ಗಂಡು ಹುಡುಕ್ತಿದ್ದೀಯಾ
ನಿನಗೆ
ಹುಚ್ಚು ನಿಂಗೆ- ನಕ್ಕಳು ರಾಜಿ.
ನನಗೆ ವಿಶ್ವಾಸ ಇದೆ .ಈ ಬಾರಿ ಒಳ್ಳೇ ವರ ಸಿಕ್ಕೇ ಸಿಗ್ತಾನೆ.
ನಾನು ಫ್ರಸ್ಟ್ರೇಟೆಡ್ ಆಗಿದ್ದೀನಿ ಅಂತ ಅನ್ನಿಸ್ತಿದೆಯಾ ಸ್ವಲ್ಪ ಸಿಟ್ಟಿನಿಂದಲೇ ಕೇಳುತ್ತಾಳೆ
ನನ್ನನ್ನು ಇಷ್ಟೇನಾ ಅರ್ಥ ಮಾಡ್ಕೊಂಡಿದ್ದು ಎಂದು ನಾನೂ ಸಿಟ್ಟು ಪ್ರದರ್ಶಿಸುತ್ತೇನೆ.
35 ಆಗ್ಹೋಯ್ತಲ್ಲ. ಇನ್ನು ಯಾವ ಮಹಾನುಭಾವ ಬರ್ತಾನೆ? ಮತ್ತೆ ನಾನದರ ಬಗ್ಗೆ ವಿಚಾರ ಮಾಡ್ತಿಲ್ಲ. ಅಂಥ ಡಿಸೈರ್ ಇದ್ದಿದ್ದರೆ ನಾನೇ ಯಾರನ್ನಾದ್ರೂ ಇಟ್ಕೊತ್ತಿದ್ದೆ.ಇವನ್ನೆಲ್ಲ ಮೀರಿ ಬಂದಿದ್ದೇನೆ. ನಿನಗ್ಯಾಕೆ ಈ ಹುಚ್ಚು….

ನನ್ನನ್ನಾಕೆ ಪ್ರೀತಿಯಿಂದ ಗದರಿದಾಗ, ಅವಳನ್ನೊಮ್ಮೆ ಹಾಗೆ ನೋಡುತ್ತೇನೆ. ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಅವಳು ತನ್ನ ತಲೆಯನ್ನು ನುಣ್ಣಗೆ ಬೋಳಿಸಿಕೊಂಡಿದ್ದಳು.ನನಗೂ ಎಷ್ಟೋ ಸಾರಿ ಪರ್ಸಿಸ್ ಕಂಬಾಟ್ಟಾ, ಪ್ರೊತಿಮಾ ಬೇಡಿ ಥರ ತಲೆಬೋಳಿಸಿಕೊಂಡು ಫಿಲ್ ಫ್ರೀ ಥರ ಇರಬೇಕು ಎನ್ನಿಸಿದ್ದಿದೆ. ಆದರೆ ಧೈರ್ಯ ಇಲ್ಲ.
ಈ ಗೆಟ್ ಅಪ್ ನಲ್ಲಿ ಅವಳು ಅದೆಷ್ಟು ಚೆನ್ನಾಗಿ ಕಾಣಿಸುತ್ತಾಳೆ. ಮೈಯೋ ಜಿಮ್ಮರ್ ಥರ. ಬೆಳಿಗ್ಗೆ ಕಂಪಲ್ಸರಿ ಯೋಗ ಸಂಜೆ ಬ್ರಿಸ್ಕ್ ವಾಕಿಂಗ್. ಆರೋಗ್ಯಪೂರ್ಣ ಅವಳ ದೇಹ ನೋಡಿದ್ರೆ ಯಾರಿಗಾದ್ರೂ ಹೊಟ್ಟೆಕಿಚ್ಚಾಗಲೇ ಬೇಕು. ಬುದ್ದಿವಂತೆ.ಎಂಎಸ್ಸಿ ಗಣಿತದಲ್ಲಿ ರಾಶಿರಾಶಿ ಚಿನ್ನದ ಪದಕ ತಂದ್ಬಿಟ್ಟಿದ್ಳಲ್ಲಾ. ಕಣ್ಣಿಗೆ ಕನ್ನಡಕ, ಕಿವಿಗೊಂದು ಸಿಂಪಲ್ ಓಲೆ, ಕೈಯ್ಯಲ್ಲೊಂದು ಬ್ಲಾಕ್ ಮೆಟಲ್ ಬಳೆ, ಬಿಳಿ ಕಾಟನ್ ಸೀರೆಯಲ್ಲಿ ಎಷ್ಟೊಂದು ಡಿಗ್ನಿಫೈಡ್ ಆಗಿ ಕಾಣುತ್ತಿದ್ದಾಳೆ.
ಆದರೂ ಇವಳಿಗ್ಯಾಕೆ ಒಂದು ಗಂಡು ಸಿಕ್ತಾ ಇಲ್ಲ. ಹೀಗೆ ಯೋಚಿಸುವಾಗ ಒಮ್ಮೊಮ್ಮೆ ನನ್ನ ಮೇಲೆ ನನಗೆ ಕೋಪ ಬರುವುದುಂಟು. ಅವಳಿಗಿರುವ ಸ್ವಾತಂತ್ರ್ಯ ನನಗಿಲ್ಲ ಎಂಬ ಹೊಟ್ಟೆಕಿಚ್ಚಿಗೇನಾದರೂ ಹೆಂಗಾದರೂ ಮಾಡಿ ಅವಳನ್ನು ಸಂಸಾರವೆಂಬ ಬಂಧನದಲ್ಲಿ ಬಂಧಿಸಿಬಿಡಬೇಕೆಂದು ನಾನು ಈ ರೀತಿ ವರ್ತಿಸುತ್ತಿಲ್ಲ ತಾನೇ? ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ.
 
ಮತ್ತೆ ನನ್ನನ್ನು ನಾನು ಸಮಾಧಾನ ಪಡಿಸುವ ಪ್ರಯತ್ನ. ಅದ್ಯಾಕೋ ಏನೋ ರಾಜೀ ತನ್ನದೆಂಬ ಗೂಡಿನಲ್ಲಿ ನೆಮ್ಮದಿಯಾಗಿಯೇ ಇದ್ದಾಳೆ. ಆದರೆ ನನಗೋ ಅವಳಿಗೊಂದು ಗಂಡು ಹುಡುಕಲೇಬೇಕೆನ್ನುವ ಹುಚ್ಚು. ಭಾನುವಾರ ಬಂತೆಂದರೆ ಕ್ಲಾಸಿಫೈಡ್ಸ್, ಮೆಟ್ರಿಮೊನಿಯಲ್ ಕಾಲಂ ನೋಡುವ ನನ್ನ ಒತ್ತಾಯಕ್ಕೆ ಮಣಿದು ರಾಜೀ ಎರಡು ಮೂರು ಗಂಡುಗಳನ್ನು ನೋಡಿದ್ದಾಳೆ. ಸ್ವಲ್ಪ ವಯಸ್ಸಾದವರು, ವಿಧುರರು, ಡೈವೋರ್ಸಿಗಳು… ಎಷ್ಟೋ ಸಾರಿ ಅವರು ಕೊಡುವ ಜಾಹೀರಾತುಗಳಿಗೆ ಮೋಸ ಹೋಗಿರುವ ನಾನು ರಾಜೀ ಬೇಡ ಎನ್ನುವ ಮೊದಲೇ ನಾನೇ ಬೇಡ ಎಂದು ಅವಳನ್ನು ವಾಪಸು ಕರೆದುಕೊಂಡು ಬಂದಿದ್ದೇನೆ. ಹೊರಬಂದ ಮೇಲೆ ಇಬ್ಬರೂ ಹೊಟ್ಟೆ ಬಿರಿಯುವಷ್ಟು ನಕ್ಕಿದ್ದೇವೆ. ನಾನು ಮಾಡುವ ಅಧ್ವಾನಕ್ಕೆ ಅವಳು ಪ್ರೀತಿಯಿಂದ ಕಿವಿ ಜಿಗುಟುತ್ತಾಳೆ. ಇದಾದ ಮೇಲೆ ಯಾವುದೇ ಕಾರಣಕ್ಕೂ ಎಂತೆಂಥವರನ್ನೋ ರಾಜೀಗೆ ತೋರಿಸಬಾರದು ಎಂದು ನಿರ್ಧಾರ ಮಾಡುತ್ತೇನೆ.
ನನ್ನ ಮನಸ್ಸೋ ಮತ್ತೆ ಜಾಹೀರಾತು ಹುಡುಕುತ್ತಲೇ ಇರುತ್ತದೆ. ರಾಜೀಗೊಪ್ಪುವ ಅವಳನ್ನು ಮನಸಾರೆ ಪ್ರೀತಿಸುವ ಜೀವವೊಂದು ಎಲ್ಲೋ ಒಂದು ಕಡೆ ಜನ್ಮ ತಳೇದೇ ಇರುತ್ತದೆ ಅನ್ನೋ ಅಛಲ ನಂಬಿಕೆ ನನ್ನದು. ನನ್ನ ವಿಶ್ವಾಸ ನೋಡಿ ಅವಳು ನಗುತ್ತಾಳೆ.ನಿನ್ನ ತಲೆ ಸರಿಯಿಲ್ಲ ಬಿಡು ಎನ್ನುತ್ತಾಳೆ.ಅವಳು ಆ ರೀತಿ ಮನಬಿಚ್ಚಿ ನಗುವಾಗಲೆಲ್ಲಾ ನನಗೆ ಅಂದಿನ ದಿನಗಳು ನೆನಪಾಗ್ತಾವೆ.
ಕಣ್ಣುಗಳ ತುಂಬ ಬರೀ ಪ್ರೀತಿಯನ್ನೇ ತುಂಬಿಕೊಂಡಿದ್ದ ದಿನಗಳವು. ಅದೆಷ್ಟು ಖುಷಿಯಾಗಿದ್ದಳು ರಾಜೀ. ಒಬ್ಬರಿಗೊಬ್ಬರು ಒಂದು ಕ್ಷಣವೂ ಬಿಟ್ಟಿರಲಾರದ ಸ್ನೇಹ ನಮ್ಮಿಬ್ಬರದು. ಅವಳೋ ಬುಕ್ ವರ್ಮ್.ನಾನೋ ಸದಾ ನಿದ್ದೆ. ಅವಳು ಸಿಎಸ್ ಆರ್ ಓದಿದರೆ ನಾನು ಮಿಲ್ಸ್ ಎನ್ ಬೂನ್ ಓದುತ್ತಿದ್ದೆ. ಅಂಥಹ ಪುಸ್ತಕಗಳನ್ನು ನೋಡಿ ನಗುವ ರಾಜೀಗೆ ನೀನು ಸ್ವಲ್ಪನೂ ರೋಮ್ಯಾಂಟಿಕ್ ಇಲ್ಲ.ಅದಕ್ಕೆ ಅಷ್ಟೊಂದು ಬೋರಿಂಗ್ ಬುಕ್ಸ್ ಓದ್ತಿಯಾ ಎನ್ನುತ್ತಿದ್ದೆ.
ಇಂಥಹ ರಾಜೀಗೂ ಪ್ರೀತಿಯ ಜ್ವರ ತಗುಲಿತ್ತು. ಒಬ್ಬ ಬ್ಲ್ಯಾಕ್ ನನ್ನು ರಾಜೀ ಪ್ರೀತಿಸಿದ್ದಳು. ಇದನ್ನು ಕೇಳಿ ನನಗೆ ಕೊಂಚ ಇರುಸು ಮುರುಸಾದರೂ ಕಾಣೋಕೆ ಹೇಗಿದ್ದಾನೆ ವಿವಿಯನ್ ರಿಚರ್ಡ್ ತರಾನಾ, ಬ್ರಿಯನ್ ಲಾರಾ ಥರಾನಾ ಎಂದು ಕಿಚಾಯಿಸಿದ್ದೆ. ವಿಲ್ ಸ್ಮಿತ್ ಥರಾ ಇದ್ರೆ ನಂಗೆ ಬಿಟ್ಟು ಕೊಡೆ ಎಂದು ಅವಳಿಗೆ ಸಿಟ್ಟು ತರಿಸಿದ್ದೆ. ಎಡ್ಡಿ ಮರ್ಫಿ ಥರಾ ಇದ್ದಾನೆ ಎಂದು ಅವಳೂ ನನ್ನನ್ನು ಕೆಣಕಿದ್ದಳು.
ಡೆಂಜೆಲ್ ವಾಶಿಂಗ್ಟನ್, ವಿಲ್ ಸ್ಮಿತ್ ಬಗ್ಗೆ ತಲೆಕೆಡಿಸಿಕೊಂಡ ದಿನಗಳವು. ರಾಜೀ ಪ್ರೆಂಡ್ ಹೇಗಿರಬಹುದು ಎಂಬ ವಿಪರೀತ ಕ್ಯೂರಿಯಾಸಿಟಿ. ಅದೊಂದು ದಿನ ಅವನನ್ನು ನೋಡೋ ಸುಯೋಗ ನನಗೆ ಒದಗಿ ಬಂದಿತ್ತು. ಆತ ಯಾವುದೋ ಕೆಲಸಕ್ಕಾಗಿ ಅದೆಲ್ಲೋ ಹೊರಟಿದ್ದ. ಅಂದು ನಾವಿಬ್ಬರೂ ಬಸ್ ಸ್ಟಾಂಡ್ ಗೆ ಬಂದಿದ್ವಿ. ರಾಜೀ ಗೆಳೆಯನನ್ನು ನೋಡಿ ನನಗೇನೂ ಅನ್ನಿಸಲಿಲ್ಲ. ಆತ ಲಾರಾ ಥರನೂ ಇರಲಿಲ್ಲ. ವಿಲ್ ಸ್ಮಿತ್ ಥರನೂ ಇರಲಿಲ್ಲ. ನಾನು ಕೇಳಿದ್ದೆ. ಕಪ್ಪು ಹುಡುಗ್ರು, ಮ್ಯಾನ್ಲಿ ಆಗಿರ್ತಾರೆ. ಅವರ ಪ್ರೀತಿ ಗಾಢವಾಗಿರತ್ತೆ ಅಂತ.
ಆದರೆ ಈ ರಾಜೀ ಗೆಳೆಯನಲ್ಲಿ ಅಂಥದ್ದೇನೂ ನನಗೆ ಕಂಡು ಬರಲಿಲ್ಲ. ಒಳ್ಳೇ ಗೂಳಿ ಥರ ಇದ್ದಾನಲ್ಲೇ ಎಂದು ಅವಳಿಗೆ ತಿವಿದಿದ್ದೆ. ನನ್ನನ್ನು ಪರಿಚಯಿಸಿದ್ದಳು. ಅವನೇನೋ ಅಂದ. ನನಗೆ ಅರ್ಥವಾಗಲಿಲ್ಲ. ಅಕ್ಕಪಕ್ಕದ ಜನ ನಮ್ಮನ್ನೇ ತುಂಬಾ ಸಂಶಯದಿಂದ ನೋಡುತ್ತಿರುವುದು ನನ್ನಲ್ಲಿ ಅಸಮಾಧಾನ ಉಂಟು ಮಾಡಿತ್ತು. ನಾವಿನ್ನು ಹೊರಡೋಣ ಬಿಡೆ ಎಲ್ಲ ನಮ್ಮನ್ನೇ ನೋಡುತ್ತಿದ್ದಾರೆ ಎಂದಿದ್ದೆ. ಇವಳೋ ಗದ್ಗದಿತಳಾಗಿದ್ದಳು.
ಇನ್ನೇನು ಬಸ್ಸು ಹೊರಡಬೇಕು. ಅಷ್ಟರಲ್ಲಿ ಆತ ರಾಜೀನ ಎಳೆದುಕೊಂಡು ಮುತ್ತಿಕ್ಕಿದ್ದ. ಬಸ್ಸ್ಟಾಂಡಿನಲ್ಲಿದ್ದ ಜನರೋ ಭೂಕಂಪವಾದ ರೀತಿಯಲ್ಲಿ ಇವರಿಬ್ಬರನ್ನು ನೋಡತೊಡಗಿದ್ದರು. ನನಗೋ ಓಡಿ ಹೋಗಬೇಕು ಎಂಬ ಆಸೆ. ಏನೂ ಗೊತ್ತಿಲ್ಲದವರ ಥರ ನಿಂತುಬಿಟ್ಟಿದ್ದೆ. ಬಸ್ಸು ಹೊರಟಿತ್ತು. ರಾಜೀನ ಬಿಟ್ಟು ನಾನು ಮುಂದೆ ನಡೆದಿದ್ದೆ. ನನಗೆ ಇನ್ನಿಲ್ಲದ ಕೋಪ. ಹಿಂದಿನಿಂದ ಇವಳು ದಯವಿಟ್ಟು ತಪ್ಪು ತಿಳ್ಕೋಬೇಡ ಕಣೆ ಗೋಗರೆಯುತ್ತಿದ್ದಳು. ಈ ರೀತಿ ಪಬ್ಲಿಕ್ ನಲ್ಲಿ ಸರಿಯಲ್ಲ ರಾಜೀ. ಒಳ್ಳೇ ಗೂಳಿನ ಪ್ರೀತಿಸಿದ್ದೀಯಾ. ಅದು ನಿನ್ನಿಷ್ಠ. ಸ್ವಲ್ಪ ಸುತ್ತಮುತ್ತಲಿನವರ ಬಗ್ಗೆನೂ ಪರಿವೆ ಇರಬೇಕು ಅಲ್ವಾ. ಅವಳು ಸುಮ್ಮನಿದ್ದಳು.
ಕಷ್ಟನೋ ಸುಖನೋ ನಮ್ಮ ಇಂಡಿಯಾದವ್ರನ್ನೇ ಪ್ರೀತಿಸ್ಬಿಡೆ. ನಿನ್ನನ್ನು ನೋಡ್ಬೇಕೆಂದ್ರ ಅಷ್ಟು ದೂರ ನನ್ನ ಕೈಯ್ಯಲ್ಲಂತೂ ಬರಕ್ಕಾಗಲ್ಲ ನೋಡು. ಅವಳು ನಕ್ಕಿದ್ದಳು. ಸರಿ ಹಾಳಾಗಿ ಹೋಗು ಎಂದು ನಾನೂ ಸುಮ್ಮನಾಗಿದ್ದೆ. ಆದರೆ ಯಾವುದೇ ಕಾರಣಕ್ಕೂ ಇನ್ನು ಸ್ವಲ್ಪ ದಿನಗಳ ಕಾಲ ಬಸ್ ಸ್ಟ್ಯಾಂಡ್ ಬಳಿ ಸುಳಿಯಬಾರದು ಎಂದು ತೀರ್ಮಾನಿಸಿದ್ದೆ.
ರಾಜಿ ಪ್ರೇಮ ಮುಂದುವರಿದಿತ್ತು ಹಾಗಂತ ಅವಳೆಂದು ತನ್ನ ಓದಿನ ಜೊತೆ ಕಾಂಪ್ರಮೈಸ್ ಮಾಡಿಕೊಳ್ಳಲಿಲ್ಲ. ಹುಟ್ಟು ಬುದ್ದಿವಂತೆ ಗೊತ್ತಿರದ ವಿಷಯವಿರಲಿಲ್ಲ. ಓದಿದ್ದು ತನ್ನ ಮಾತೃಭಾಷೆಯಲ್ಲೇ. ಇಂಗ್ಲಿಷ್ನಲ್ಲಿ ಅಗಾಧ ಪಾಂಡಿತ್ಯ. ಹಾಸ್ಟೆಲ್ಗೆ ಬರೋ ಎಲ್ಲ ಪತ್ರಿಕೆಗಳನ್ನು ಸೀರಿಯಸ್ಸಾಗಿ ಅವಳು ಓದುತ್ತಿದ್ದರೆ, ನಾನು ಮ್ಯಾಟನಿ ಶೋಗೆ ತಡಕಾಡುತ್ತಿದ್ದುದು ಅವಳಿಗೆ ಕೋಪ ತರಿಸುತ್ತಿತ್ತು. ನಾವೆಲ್ಲ ಕ್ಯಾಂಟೀನ್ನಲ್ಲಿ ಹಾಳಾಗಿ ಹೋದ್ರೆ ಅವಳು ಮಾತ್ರ ಲೈಬ್ರರಿಯಲ್ಲಿ ಹೆಚ್ಹಿನ ಕಾಲ ಕಳೆಯುತ್ತಿದ್ದಳು.
ಫ್ರೆಂಚ್ ಭಾಷೆಯಲ್ಲಿ ಪರಿಣತಿ ಸಾಧಿಸಿದ್ದ ರಾಜೀ ಪ್ರೀತಿಯ ಬಲೆಗೆ ಬಿದ್ದ ಮೇಲೆ ಸ್ವಾಹಿಲಿ ಭಾಷೆ ಕಲಿಯತೊಡಗಿದ್ದಳು.ಗಣಿತ, ಇತಿಹಾಸ, ಜಿಯಾಗ್ರಪಿ ಹೀಗೆ ಏನು ಕೇಳಿದ್ರು ಎಲ್ಲವನ್ನು ಅರಗಿಸಿ ಕುಡಿದಿದ್ದ್ದ ರಾಜಿಗೆ ಎಲ್ಲರೂ ನೀನು ಐ ಎ ಎಸ್ ಮಾಡಬೇಕು ಕಣೆ ಎಂದು ದುಂಬಾಲು ಬೀಳುತ್ತಿದ್ದರು.
ಈ ಹಾಳಾದ ಓದು ಮತ್ತೆ ನಿನ್ನ ಪ್ರೀತಿಯನ್ನು ಅದ್ಹೇಂಗೆ ಸಂಭಾಳಿಸ್ತೀಯಾ ರಾಜೀ. ನಾನ್ಯಾರನ್ನಾದ್ರೂ ಪ್ರೀತಿಸಿದ್ರೆ ನನ್ನಿಂದ ಓದೋಕ್ಕಂತೂ ಸಾಧ್ಯವೇ ಇಲ್ಲ ಮಾರಾಯ್ತಿ ಎಂದಿದ್ದೆ. ಅವಳು ಅದಕ್ಕೆ ಎಲ್ಲವೂ ಅದರದರ ಪಾಡಿಗೆ ನಡ್ಕೊಂಡು ಹೋದ್ರೆ ಒಳ್ಳೇದು. ಯಾವೂದೂ ಹೊರೆ ಆಗ್ಬಾರ್ದು. ನನಗದು ಅಂದು ಅರ್ಥವಾಗಿರಲಿಲ್ಲ.
ಹೀಗಿದ್ದಾಗ ಒಂದು ದಿನ ರಾಜಿ ತನ್ನ ಬಾಯ್ ಫ್ರೆಂಡ್ ಮನೆಗೆ ನನ್ನನ್ನು ಆಹ್ವಾನಿಸಿದ್ದಳು. ಈ ಬಾರಿ ಮತ್ತೆ ಪಬ್ಲಿಕ್ ನಲ್ಲಿ ಮುತ್ತಿಕ್ಕೋದು ಗಿತ್ತಿಕ್ಕೋದು ಮಾಡಿದ್ರೆ ನಾನು ಸುಮ್ಮನಿರಲ್ಲ ನೋಡು ಎಂದಿದ್ದೆ. ಅವಳು ಪೂರ್ತಿ ಭರವಸೆ ನೀಡಿದ್ದಳು. ಬಾಡಿಗೆ ಮನೆ. ದೊಡ್ಡದಾಗಿಯೇ ಇತ್ತು. ಆದರೆ ಏನಿಲ್ಲವೆಂದರೂ ಅಲ್ಲಿ 20 ಮಂದಿ ಇದ್ದರು. ಹೆಣ್ಣು ಗಂಡು ಎನ್ನೋ ಯಾವುದೇ ಭೇದವಿಲ್ಲದೆ. ಎಲ್ಲರೂ ಒಂದೇ ಥರ. ನನ್ನನ್ನು ಕೆಲವರಿಗೆ ಪರಿಚಯ ಮಾಡಿಸಿದಳು. ಕೆಲವರು ನನ್ನನ್ನು ವಿಚಿತ್ರವಾಗಿ ನೋಡಿದರು. ನಮಗೆ ಅವರೆಲ್ಲ ವಿಚಿತ್ರ ಕಾಣಿಸುವಂತೆ ನಾನೂ ಕೂಡ ಅವರಿಗೆ ಹಂಗೆ ಕಾಣಿಸಿರಬೇಕು. ಅಷ್ಟರಲ್ಲೊಬ್ಬಳು ಬಂದು ತನ್ನನ್ನು ತಾನೇ ಪರಿಚಯಿಸಿಕೊಂಡಳು. ಅವಳ ಇಂಗ್ಲಿಷ್ ನನಗೆ ಸ್ವಲ್ಪ ಅರ್ಥ ಆಗಿತ್ತು. ಅವಳು ಆಕರ್ಷಕವಾಗಿದ್ದಳು. ಯಾಕೋ ಅವಳನ್ನು ನೋಡಿ ಖುಷಿಯಾಯ್ತು. ಅಷ್ಟೊತ್ತಿಗೆ ರಾಜೀ ಪ್ರೆಂಡ್ ಡಿಕಾಕ್ಶನ್ ಥರ ಏನೋ ಕುಡಿಯೋಕೆ ತಂದುಕೊಟ್ಟಿದ್ದ. ನನ್ನಮ್ಮ ಹೊಟ್ಟೆ ನೋವಿಗೆ ಕೊಡೋ ಕಷಾಯ ಥರ ಇತ್ತು. ಕಣ್ಮುಚ್ಚಿ ಕುಡಿದೆ.
ಅಲ್ಲಿಂದ ಹೊರಟ ನಾನು ಚಿಕ್ಕದರಲ್ಲಿ ಭಾಷಣ ಮುಗಿಸಿದ್ದೆ. ಏನೇ ಹೇಳು ರಾಜೀ. ಒಬ್ಬರ ಜೊತೆ ಬಾಳ್ವೆ ನಡೆಸೋಕೆ ಸ್ವಲ್ಪನಾದ್ರೂ ನಮ್ಮದು, ನಮ್ಮತನ ಇರಬೇಕು. ಪ್ರೀತಿ ಒಂದರಿಂದನೇ ಎಲ್ಲಾ ಆಗಲ್ಲ ಕಣೆ.ಇವನನ್ನು ಕಟ್ಟಿಕೊಂಡ ಮೇಲೆ ಇದೇ ಕಷಾಯ ಕುಡಿಯಬೇಕು ನೋಡು.ಹಾಸ್ಯ ಮಾಡಿದ್ದೆ. ಅವಳೇನೋ ಹೇಳ ಹೊರಟಳು. ಹಾಗೆ ಸುಮ್ಮನಾದಳು. ಮತ್ತೆ ಅವಳಿಗೆ ಬೇಸರ ಮಾಡಬಾರದು ಎಂದು ನಾನು ತೀರ್ಮಾನಿಸಿದೆ. ಆದರೆ ಇದಾದ ಕೆಲವೇ ದಿನಗಳಲ್ಲಿ ರಾಜೀಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿದ್ದವು. ಅವಳು ಹೆಚ್ಚು ಮಾತಾಡುತ್ತಿರಲಿಲ್ಲ. ತನ್ನ ಓದಿನಲ್ಲಿ ಮಗ್ನಳಾಗಿರೋದನ್ನು ನೋಡಿದ್ರೆ ಎಲ್ಲವೂ ಸರಿಯಾಗಿದೆ ಎನ್ನಿಸುತ್ತಿತ್ತು.
ಯಾಕೋ ತಳಮಳವಾಗಿ ಕೇಳಿಯೇ ಬಿಟ್ಟೆ ಏನಾಯ್ತು ಅಂತ ಹೇಳಬಾರ್ದಾ?
ವಿ ಬ್ರೊಕ್
ಯಾಕೆ?
ಐ ಥಿಂಕ್ ಅವನಿಗೆ ಬೇರೆಯವರ ಜತೆ ಅಫೇರ್ ,ರಿಲೇಶನ್ ಇದೆ. ಸಂಬಂಧ ಮುಂದುವರಿಸುವುದ್ರಲ್ಲಿ ಯಾವುದೇ ಅರ್ಥ ಇಲ್ಲ ಎಂದುಕೊಂಡೆ.
 
ಅವಳ ಮಾತು ಕೇಳಿ ನಾನೂ ಹೌಹಾರಿದ್ದೆ.
ಅವನ ಜೊತೆ ನಾನೇ ಮಾತಾಡ್ಲಾ? ಪುಸಲಾಯಿಸಿದೆ.
ಮೌನವಾಗಿದ್ದಳು.
ಒಂದೇ ಸಮಗಂಡಸರೆಲ್ಲ ಹೀಗೆ ಬಿಡೆ… ಸಮಾಧಾನ ಪಡಿಸಲು ಪ್ರಯತ್ನಿಸಿದೆ.
ಆದದ್ದಾದರೂ ಏನು?
ಅವನನ್ನು ನೋಡಬಾರದ ಸ್ಥಿತಿಯಲ್ಲಿ ನೋಡ್ದೆ. ಇನ್ನಾರದ್ದೋ ಜತೆ ಅವನಿದ್ದ. ಆ ಬಗ್ಗೆ ನಂಗೆ ನೋವಿಲ್ಲ. ಆದರೆ ಅವನಲ್ಲಿ ಯಾವುದೇ ಪಶ್ಚಾತ್ತಾಪ ಇರಲಿಲ್ಲ. ಮೇಲಾಗಿ ಏನೇನೋ ಸುಳ್ಳು ಹೇಳಿದ. ಇಷ್ಟ ಆಗಲಿಲ್ಲ. ಅದಕ್ಕೆ ಬಿಟ್ಟು ಬಿಟ್ಟೆ. ಮತ್ತವಳು ತನ್ನ ಕೆಲಸದಲ್ಲಿ ಮಗ್ನಳಾಗಿದ್ದಳು. ಅಂತೂ ರಾಜೀ ಪ್ರೇಮಕಥೆ ಈ ರೀತಿ ಅಂತ್ಯಕಂಡಿತ್ತು.
ಎಲ್ಲ ಪರೀಕ್ಷೆ ಮುಗಿಸಿ ಅವರವರ ಮನೆ ಸೇರಿದ್ವಿ. ಹೆಚ್ಚಿನವರು ನೌಕರಿ ಮದುವೆ ಅಂತ ಸೆಟ್ಲ್ ಆದ್ರೆ ರಾಜೀ ಮಾತ್ರ ಓದನ್ನು ಮುಂದುವರಿಸಿದ್ಲು. ಈ ಮಧ್ಯೆ ಮತ್ತೆ ಮತ್ತೆ ನಾನು ಅವಳಿಗೆ ಯಾವುದಾದರೂ ಕೆಲಸ ಹಿಡಿದುಕೊಂಡು ಮದ್ವೆ ಮಾಡ್ಕೊಳ್ಳುವಂತೆ ಹೇಳುತ್ತಿದ್ದೆ.. ಅದಕ್ಕವಳು ನನಗ್ಯಾಕೋ ಇನ್ನು ಬೇರೆಯವರನ್ನು ಇಷ್ಟಪಡಬಹುದು ಎನ್ನಿಸುತ್ತಿಲ್ಲ ಎಂದಿದ್ದಳು. ಇನ್ನೂ ಅವನನ್ನು ಮರೆತಿಲ್ವಾ? ಇದ್ಯಾವ ನ್ಯಾಯ ರಾಜೀ? ಅಂಥವನು ಅಂಥ ಗೊತ್ತಾದ ಮೇಲೂ ಆತನನ್ನು ನೆನಪಿಸಿಕೊಳ್ಳೋದು ಸರಿಯಲ್ಲ. ಅವನು ನಿನಗೆ ವರ್ಥ್ ಆಗಿರಲಿಲ್ಲ ನೆನಪಿಟ್ಕೋ ಅಂದೆ. ಅದು ನಂಗೂ ಗೊತ್ತು. ಅವನನ್ನೇನು ನಾನು ನೆನೆಸಿಕೊಳ್ತಾ ಇಲ್ಲ. ಆದ್ರೆ ಮತ್ತೆ ಯಾರನ್ನೋ ಇಷ್ಟ ಪಡೋಕೆ ಸಾಧ್ಯ ಇಲ್ಲ ಅನ್ಸುತ್ತೆ. ನೀನು ಏನೇ ಮಾಡು ನಾವಂತೂ ನಿನ್ನ ಮದ್ವೆ ಮಾಡ್ಸೇ ಮಾಡ್ತೀವಿ ನೋಡ್ತಾ ಇರು, ನನ್ನ ಮಾತಿಗೆ ಮತ್ತವಳು ನಕ್ಕಿದ್ದಳು.
ಅಲ್ಲಿಂದ ಎಷ್ಟೋ ವರ್ಷ ಅವಳಿಗೆ ಗಂಡು ಹುಡುಕುವ ನಮ್ಮ ಕೆಲಸ ಸಾಗಿತ್ತು. ಅಷ್ಟರಲ್ಲಿ ಅವಳು ಪಿಎಚ್ ಡಿ ಮುಗಿಸಿದ್ದಳು. ರಾಜೀ ಕ್ವಾಲಿಫಿಕೇಶನ್ ಗೆ ಒಳ್ಳೋಳ್ಳೇ ಕೆಲಸಗಳು ಹುಡುಕಿಕೊಂಡು ಬರುತ್ತಿದ್ದವು. ಆದರೆ 6 ತಿಂಗಳು ಕೆಲಸ ಮಾಡಿದರೆ ಹೆಚ್ಚು. ಭ್ರಷ್ಟ ವ್ಯವಸ್ಥೆ ನನಗೆ ಸಹಿಸಕ್ಕಾಗಲ್ಲ ಕಣೆ. ಅದಕ್ಕೆ ಬಿಟ್ಟು ಬಂದೆ ಎನ್ನೋಳು. ಎಷ್ಟಂತ ಕೆಲಸಕ್ಕೆ ರಾಜೀನಾಮೆ ಕೊಡ್ತೀಯಾ. ಹೀಗೆ ಮಾಡ್ತಾ ಹೋದ್ರೆ ವ್ವವಸ್ಥೆ ಸುಧಾರಿಸಲ್ಲ. ಅಲ್ಲೇ ನಿಂತು ಹೋರಾಡಬೇಕಾಗುತ್ತೆ.ಎಲ್ಲಾ ಗದರಿದ ಮೇಲೆ ಯಾವುದೋ ಕೆಲಸಕ್ಕೆ ಕಚ್ಚಿಕೊಂಡಿದ್ದಳು. ತನ್ನಿಬ್ಬರು ತಂಗಿಯರು ಪ್ರೀತಿಸಿದವರನ್ನೇ ಕೊಟ್ಟು ಮದುವೆ ಮಾಡಿಸಿದ್ದಳು. ಯಾವುದೇ ಜವಾಬ್ದಾರಿಯಿಲ್ಲದಂತೆ ಕಂಡು ಬರುತ್ತಿದ್ದ ಅವಳಪ್ಪ ಮಗಳ ಮದುವೆ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಮಗಳು ಮನೆಯಲ್ಲೇ ಇದ್ರೆ ತಮಗೆ ಆಸರೆ ಆಗ್ತಾಳೆ ಅನ್ನೋದು ಅವರ ಭಾವನೆಯಾಗಿತ್ತೇನೋ.
ಈ ಮಧ್ಯೆ ರಾಜೀ ತಂಗಿ ವಿದೇಶಕ್ಕೆ ನೆಗೆದಿದ್ದಳು ತಾನು ಹೆತ್ತ ಮಗುವನ್ನು ಅವಳ ಕೈಗೆ ಕೊಟ್ಟು. ಅಲ್ಲಿಂದ ಆ ಮಗುವನ್ನು ನೋಡಿಕೊಳ್ಳೋದೆ ಅವಳಿಗೆ ಕೆಲಸ. ಮಗುವಿಗೆ ರಾಜಿನೇ ತಾಯಿ ತಂದೆ ಎಲ್ಲ. ಅವಳ ಹೆಚ್ಚಿನ ಸಮಯ ಮಗುವಿನ ಆರೈಕೆಯಲ್ಲಿ ಕಳೆದು ಹೋಗುತ್ತಿತ್ತು. ಒಂದು ರೀತಿ ಮಗುವಿನೊಂದಿಗೆ ತಾನೂ ಮಗುವಾಗಿದ್ದಳು. ತನಗೆ ಬುದ್ಧಿ ಬಂದಾಗಿನಿಂದ ಎದುರಿಗೆ ಕಂಡಿದ್ದು, ರಾಜೀನೆ ಆಗಿದ್ರಿಂದ ರಾಜಿಯನ್ನೆ ಅದು ಅಮ್ಮಾ ಎಂದು ಕರೆಯುತ್ತಿತ್ತು.ಅವಳು ಖುಷಿಯಾಗಿರುವುದನ್ನು ನೋಡಿ ನಾವು ಎಲ್ಲ ನಿಶ್ಚಿಂತರಾಗೇ ಇದ್ವಿ.
ಇದ್ದಕ್ಕಿದ್ದಂತೆ ಒಂದು ದಿನ ರಾಜೀ ತಂಗಿ ಹಾಜರಾಗಿದ್ದಳು. ಅಮೆರಿಕದಲ್ಲಿ ಒಳ್ಳೊಳ್ಳೇ ಸ್ಕೂಲ್ ಇವೆ. ಅಲ್ಲೇ ಹಾಕಿಸ್ತೀನಿ ಅಂದಿದ್ದಳು. ಇವಳಿಗೋ ಮಗುವನ್ನು ಇಲ್ಲೇ ಬಿಟ್ಬಿರು ಎಂದು ಹೇಳಲಿಕ್ಕಾಗದು. ನಾನೇ ಧೈರ್ಯವಹಿಸಿ ಹೇಳಿದ್ದೆ. ರಾಜೀ, ಮಗು ಒಬ್ಬರಿಗೊಬ್ಬರು ತುಂಬಾ ಹಚ್ಚಿಕೊಂಡು ಬಿಟ್ಟಿದ್ದಾರೆ. ಇಲ್ಲೇ ಇದ್ದರೇನಂತೆ? ಅದಕ್ಕವಳು ನಾಳೆ ಮಗು ನಮ್ಮನ್ನು ಸಂಪೂರ್ಣ ಮರೆತುಬಿಡಬಾರದು ಎಂದಿದ್ದಳು. ಎಂಥಹ ಪರಮ ಸ್ವಾರ್ಥಿ ಈಕೆ? ಅಷ್ಟು ಚಿಕ್ಕ ಮಗುವನ್ನು ಬಿಟ್ಟು ಹೋಗುವಾಗ ನಿನಗೇನು ಅನಿಸಲಿಲ್ವ? ಕೋಪದಿಂದ ನಾನೂ ಗುಡುಗಿದ್ದೆ. ಮಗುಗೆ ಜ್ವರ ಬಂದಾಗ ನೀನೆಲ್ಲಿದ್ದೆ.ಇಂಜೆಕ್ಶನ್ ನೋವಿಗೆ ಮಗು ಕೂಗಿಕೊಂಡಾಗ ಅಳೋಕೆ ನೀನಿದ್ಯಾ? ಇವನ್ನೆಲ್ಲ ಅನುಭವಿಸ್ದೋಳು ರಾಜೀ ಕಣೆ. ನೀನು ಹೆತ್ತಿರೋದನ್ನು ಬಿಟ್ರೆ ಇನ್ನೇನು ಮಾಡಿರ್ಲಿಲ್ಲ. ರಾಜೀ ನನ್ನನ್ನು ಸಮಾಧಾನಿಸಿದ್ದಳು.
ಮಗುವನ್ನು ಉಳಿಸಿಕೊಳ್ಳುವ ನಮ್ಮ ಎಲ್ಲ ಪ್ರಯತ್ನಗಳು ವಿಫಲವಾಗಿದ್ವು. ರೆಡಿಮೆಡ್ ಮಗುವನ್ನು ಹೊತ್ತು ರಾಜೀ ತಂಗಿ ಅಮೆರಿಕಕ್ಕೆ ಹಾರಿದ್ದಳು. ರಾಜೀ ಮತ್ತೆ ಒಂಟಿಯಾದಳೆಂದು ನನಗೆನಿಸಿತ್ತು. ಇದಾಗಿ ಮತ್ತಷ್ಟು ವರ್ಷಗಳು ಕಳೆದಿವೆ. ರಾಜೀ ಖುಷಿಯಾಗಿಯೇ ಇದ್ದಾಳೆ. ಅನಾಥಾಶ್ರಮ ನಡೆಸ್ತಾಳೆ. ಈಗಲೂ ಅಷ್ಟೇ ಓದುತ್ತಾಳೆ. ದೇಶ ವಿದೇಶ ಸುತ್ತುತ್ತಾಳೆ. ಆದರೂ ನನಗೆ ಅವಳಿಗೊಂದು ಗಂಡು ಹುಡುಕಬೇಕು ಅಂತ ಅನ್ನಿಸುತ್ತಲೇ ಇರುತ್ತದೆ. ಮತ್ತೆ ಮತ್ತೆ ಶಾದಿಡಾಟ್ ಕಾಮ್, ಮೆಟ್ರಿಮೊನಿಯಲ್ ಕಾಲಂ ಹುಡುಕ್ತಾನೇ ಇರ್ತೀನಿ. ರಾಜೀನ ಪ್ರೀತಿಸೋ ಜೀವ ಸಿಗಬಹುದು ಎನ್ನೋ ಆಸೆಯಿಂದ…
ಕಲೆ: ಗುಜ್ಜಾರ್

‍ಲೇಖಕರು avadhi

September 23, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

12 ಪ್ರತಿಕ್ರಿಯೆಗಳು

 1. neelanjala

  ಇದನ್ನು ಓದಿದ ಮೇಲೆ ನಾನು ಹತ್ತಿರದಿಂದ ಬಲ್ಲ ರಾಜಿಯಂತಹವರ ಮುಖಗಳು ನೆನಪಾಗಿಬಿಟ್ಟಿತು 🙁
  ಅವರೆಲ್ಲರಿಗೂ ಪ್ರೀತಿಸೋ ಜೀವ ಸಿಗಲೀ ಅನ್ನೋದು ನನ್ನ ಹಾರೈಕೆ ಕೂಡ.

  ಪ್ರತಿಕ್ರಿಯೆ
 2. ಗಿರೀಶ ಕೆ ಎಸ್, ಶಾರ್ಜಾ

  ಯಾಕೋ ಮನಸ್ಸು ತುಂಬಾ ಭಾರ ಅನ್ನುಸ್ತು. ರಾಜಿ, ಆಕೆಯ ಓದು, ಅಲ್ಲೆ ಆಕೆ ಇಷ್ಟಪಟ್ಟ ಹುಡುಗ, ಅವ್ನು ಸಿಗ್ದೇ ಹೊದದ್ದು, ಕೊನೆ ತಂಗಿ ಮಗ್ಳೂ ಕೂಡ!!!!
  ಆದ್ರೂ ರಾಜಿ, ಅನಾಥಶ್ರಮದಲ್ಲಿ ನೆಮ್ಮದಿ ಕಂಡುಕೋಡಿದ್ದು….. ರಾಜಿನ ಪ್ರೀತ್ಸೋ ಜೀವ ಎಲ್ಲೋ ಇದೆ ಮತ್ತೆ ಅದು ಸಿಕ್ಕೇ ಸಿಗುತ್ತೆ,

  ಪ್ರತಿಕ್ರಿಯೆ
 3. ಗಿರೀಶ ಕೆ ಎಸ್, ಶಾರ್ಜಾ

  ಯಾಕೋ ಮನಸ್ಸು ತುಂಬಾ ಭಾರ ಅನ್ನುಸ್ತು. ರಾಜಿ, ಆಕೆಯ ಓದು, ಅಲ್ಲೆ ಆಕೆ ಇಷ್ಟಪಟ್ಟ ಹುಡುಗ, ಅವ್ನು ಸಿಗ್ದೇ ಹೊದದ್ದು, ಕೊನೆ ತಂಗಿ ಮಗ್ಳೂ ಕೂಡ!!!!

  ಆದ್ರೂ ರಾಜಿ, ಅನಾಥಶ್ರಮದಲ್ಲಿ ನೆಮ್ಮದಿ ಕಂಡುಕೋಡಿದ್ದು….. ರಾಜಿನ ಪ್ರೀತ್ಸೋ ಜೀವ ಎಲ್ಲೋ ಇದೆ ಮತ್ತೆ ಅದು ಸಿಕ್ಕೇ ಸಿಗುತ್ತೆ,

  ಪ್ರತಿಕ್ರಿಯೆ
 4. ಗಿರೀಶ ಕೆ ಎಸ್, ಶಾರ್ಜಾ

  ಯಾಕೋ ಮನಸ್ಸು ತುಂಬಾ ಭಾರ ಅನ್ನುಸ್ತು. ರಾಜಿ, ಆಕೆಯ ಓದು, ಅಲ್ಲೆ ಆಕೆ ಇಷ್ಟಪಟ್ಟ ಹುಡುಗ, ಅವ್ನು ಸಿಗ್ದೇ ಹೊದದ್ದು, ಕೊನೆ ತಂಗಿ ಮಗ್ಳೂ ಕೂಡ!!!!

  ಆದ್ರೂ ರಾಜಿ, ಅನಾಥಶ್ರಮದಲ್ಲಿ ನೆಮ್ಮದಿ ಕಂಡುಕೋಡಿದ್ದು….. ರಾಜಿನ ಪ್ರೀತ್ಸೋ ಜೀವ ಎಲ್ಲೋ ಇದೆ ಮತ್ತೆ ಅದು ಸಿಕ್ಕೇ ಸಿಗುತ್ತೆ,

  ಪ್ರತಿಕ್ರಿಯೆ
 5. ಗಿರೀಶ ಕೆ ಎಸ್, ಶಾರ್ಜಾ

  ಯಾಕೋ ಮನಸ್ಸು ತುಂಬಾ ಭಾರ ಅನ್ನುಸ್ತು. ರಾಜಿ, ಆಕೆಯ ಓದು, ಅಲ್ಲೆ ಆಕೆ ಇಷ್ಟಪಟ್ಟ ಹುಡುಗ, ಅವ್ನು ಸಿಗ್ದೇ ಹೊದದ್ದು, ಕೊನೆ ತಂಗಿ ಮಗ್ಳೂ ಕೂಡ!!!!

  ಆದ್ರೂ ರಾಜಿ, ಅನಾಥಶ್ರಮದಲ್ಲಿ ನೆಮ್ಮದಿ ಕಂಡುಕೋಡಿದ್ದು….. ರಾಜಿನ ಪ್ರೀತ್ಸೋ ಜೀವ ಎಲ್ಲೋ ಇದೆ ಮತ್ತೆ ಅದು ಸಿಕ್ಕೇ ಸಿಗುತ್ತೆ,

  ಪ್ರತಿಕ್ರಿಯೆ
 6. ಗಿರೀಶ ಕೆ ಎಸ್, ಶಾರ್ಜಾ

  ಯಾಕೋ ಮನಸ್ಸು ತುಂಬಾ ಭಾರ ಅನ್ನುಸ್ತು. ರಾಜಿ, ಆಕೆಯ ಓದು, ಅಲ್ಲೆ ಆಕೆ ಇಷ್ಟಪಟ್ಟ ಹುಡುಗ, ಅವ್ನು ಸಿಗ್ದೇ ಹೊದದ್ದು, ಕೊನೆ ತಂಗಿ ಮಗ್ಳೂ ಕೂಡ!!!!

  ಆದ್ರೂ ರಾಜಿ, ಅನಾಥಶ್ರಮದಲ್ಲಿ ನೆಮ್ಮದಿ ಕಂಡುಕೋಡಿದ್ದು….. ರಾಜಿನ ಪ್ರೀತ್ಸೋ ಜೀವ ಎಲ್ಲೋ ಇದೆ ಮತ್ತೆ ಅದು ಸಿಕ್ಕೇ ಸಿಗುತ್ತೆ,

  ಪ್ರತಿಕ್ರಿಯೆ
 7. ಗಿರೀಶ ಕೆ ಎಸ್, ಶಾರ್ಜಾ

  ಯಾಕೋ ಮನಸ್ಸು ತುಂಬಾ ಭಾರ ಅನ್ನುಸ್ತು. ರಾಜಿ, ಆಕೆಯ ಓದು, ಅಲ್ಲೆ ಆಕೆ ಇಷ್ಟಪಟ್ಟ ಹುಡುಗ, ಅವ್ನು ಸಿಗ್ದೇ ಹೊದದ್ದು, ಕೊನೆ ತಂಗಿ ಮಗ್ಳೂ ಕೂಡ!!!!

  ಆದ್ರೂ ರಾಜಿ, ಅನಾಥಶ್ರಮದಲ್ಲಿ ನೆಮ್ಮದಿ ಕಂಡುಕೋಡಿದ್ದು….. ರಾಜಿನ ಪ್ರೀತ್ಸೋ ಜೀವ ಎಲ್ಲೋ ಇದೆ ಮತ್ತೆ ಅದು ಸಿಕ್ಕೇ ಸಿಗುತ್ತೆ,

  ಪ್ರತಿಕ್ರಿಯೆ
 8. ಗಿರೀಶ ಕೆ ಎಸ್, ಶಾರ್ಜಾ

  ಯಾಕೋ ಮನಸ್ಸು ತುಂಬಾ ಭಾರ ಅನ್ನುಸ್ತು. ರಾಜಿ, ಆಕೆಯ ಓದು, ಅಲ್ಲೆ ಆಕೆ ಇಷ್ಟಪಟ್ಟ ಹುಡುಗ, ಅವ್ನು ಸಿಗ್ದೇ ಹೊದದ್ದು, ಕೊನೆ ತಂಗಿ ಮಗ್ಳೂ ಕೂಡ!!!!

  ಆದ್ರೂ ರಾಜಿ, ಅನಾಥಶ್ರಮದಲ್ಲಿ ನೆಮ್ಮದಿ ಕಂಡುಕೋಡಿದ್ದು….. ರಾಜಿನ ಪ್ರೀತ್ಸೋ ಜೀವ ಎಲ್ಲೋ ಇದೆ ಮತ್ತೆ ಅದು ಸಿಕ್ಕೇ ಸಿಗುತ್ತೆ,

  ಪ್ರತಿಕ್ರಿಯೆ
 9. viplava

  ನನ್ನ ಕಥೆನೂ ಅಷ್ಟೆ. ಸ್ವಲ್ಪ ಆಚೆ ಆಚೆ. ರಾಜಿಯ ಹುಡುಕಾಟದಲ್ಲಿ ದಣಿವರಿಯದ ರಾಜ

  ಪ್ರತಿಕ್ರಿಯೆ
 10. kumar sringeri

  ರಾಜಿ ನಿನ್ನ ಆಶಾವಾದವೇ ನಿನ್ನ ಮುಂದಿನ ಏಳಿಗೆಗೆ ಮೆಟ್ಟಿಲುಗಳು
  ಕುಮಾರ್ ಶೃಂಗೇರಿ

  ಪ್ರತಿಕ್ರಿಯೆ
 11. padmapani

  felt sad.When will our indian women mature like their counterparts of occidental soceity,god knows.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: