ಶಾಮಣ್ಣ ಆತ್ಮ ಕಥನದ ಮುಖ್ಯ ಭಾಗ

-ಕೆ ಅಕ್ಷತಾ

ಶಾಮಣ್ಣ ಆತ್ಮ ಕಥನ ಕ್ಕೆ ಸಂಬಂಧಿಸಿದ ಮಯೂರ ಮತ್ತು ಲಂಕೇಶ್ ಎರಡರಲ್ಲೂ ಪ್ರಕಟವಾಗದ ಮುಖ್ಯ ಭಾಗ ಇಲ್ಲಿದೆ ಈ ಲೇಖನದ ಜೊತೆ ಅಪರೂಪದ ಫೋಟೋ ಇದೆ. ಅದು ಶಾಮಣ್ಣ ಅವರ ಊರು ಭಗವತಿಕೆರೆಯ ಸಮೀಪದ ಮೈದೊಳಲು ಗ್ರಾಮ ಪಂಚಾಯ್ತಿಯ ದೃಶ್ಯ . ಆ ಗ್ರಾಮ ಪಂಚಾಯ್ತಿಯಲ್ಲಿ ಶಾಮಣ್ಣ ಅವರಿಂದ ಪ್ರೇರಿತರಾಗಿ ಊರವರೆಲ್ಲ ಮಹಿಳೆಯರೇ ಗ್ರಾಮ ಪಂಚಾಯತ್ ಗೆ ಅರಿಸಿಬರುವಂತೆ ಮಾಡಿದ್ದರು.

ಈ ಸಂದರ್ಭದಲ್ಲಿ ಇದಕ್ಕೆ ಕಾರಣಕರ್ತರಾದ ಶಾಮಣ್ಣ ಅವರಿಗೆ ಮಹಿಳೆಯರು ಊಟ ಹಾಕಿಸಿ ದನ್ಯವಾದ ಸಲ್ಲಿಸಿದ್ದರು. ಆ ದೃಶ್ಯ ಅದು

Picture 001 (1)

ನಮ್ಮೂರಿನ ಜನರನ್ನು ಹೆಂಡದ ಹಾವಳಿಯಿಂದ ಹೇಗಾದರೂ ಮಾಡಿ ದೂರವಿಡಬೇಕೆಂದು ನಾನು ಮಾಡಿದ ಪ್ರಯತ್ನಗಳಿಗೆ ಲೆಕ್ಕವೇ ಇಲ್ಲ. ಏನೇ ಮಾಡಿದರೂ ಅದರ ಯಶಸ್ಸು ನಾಲ್ಕೇ ದಿನ ಮತ್ತೆ ಐದನೇ ದಿನ ನಾಲ್ಕು ದಿನ ಕುಡಿಯದೇ ಇದ್ದಷ್ಟನ್ನು ಸೇರಿಸಿಕೊಂಡು ಕುಡಿಯುತ್ತಿದ್ದರು. ಏನಾದರೂ ಆಗಲಿ ಇವರನ್ನು ಹೆಂಡದ ದಾಸರಾಗುವುದನ್ನು ತಪ್ಪಿಸಬೇಕು ಎಂದು ಒಂದು ಪ್ಲಾನ್ ಮಾಡಿದೆ. ಜೆ.ಹೆಚ್.ಪಟೇಲರು ಮುಖ್ಯಮಂತ್ರಿಯಾಗಿದ್ದ ಸಂದರ್ಭ, ಪಟೇಲರಲ್ಲಿ ನಮ್ಮೂರಿನ ಜನರನ್ನು ಕರೆದುಕೊಂಡು ಬೆಂಗಳೂರಿಗೆ ಪ್ರವಾಸ ಬರುತ್ತಿದ್ದೇನೆ ಅವರಿಗೆ ವಿಧಾನಸೌಧ, ಮುಖ್ಯಮಂತ್ರಿಗಳ ಮನೆ, ಕಛೇರಿ ಎಲ್ಲವನ್ನು ನೋಡಬೇಕೆಂದು ಆಸೆ ಇದೆ ಆದ್ದರಿಂದ ನೀವು ನಮ್ಮಗಳಿಗೆ ಉಳಿದುಕೊಳ್ಳಲು ಒಂದು ದಿನದ ಮಟ್ಟಿಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿನಂತಿಸಿದೆ. ಅವರು ಖುಷಿಯಾಗಿ ಒಪ್ಪಿದರು. ನನ್ನ ಗೆಳೆಯ ಮುತ್ತಣ್ಣ ಅಲ್ಲೆ ಅಧಿಕಾರಿಯಾಗಿದ್ದನಲ್ಲ, ಅವನ ಬಳಿ ಪಾಸ್ ಕೂಡಾ ಪಡೆದುಕೊಂಡೆ. ನಮ್ಮೂರಿನ ಜನರಿಗೆ `ನಾವೆಲ್ಲ ಸೇರಿ ಪ್ರವಾಸ ಹೋಗೋಣ. ಬೆಂಗಳೂರು, ಮೈಸೂರು, ಧರ್ಮಸ್ಥಳ, ಉಡುಪಿ ಮತ್ತು ಅಲ್ಲೆ ಹತ್ತಿರ ಇರೋ ಊರುಗಳಿಗೆಲ್ಲ ಹೋಗೋಣ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಮನೆಯಲ್ಲಿ ಉಳ್ಕಳೋಣ, ಮೈಸೂರಿನಲ್ಲಿ ಹಾ,ಮಾ,ನಾಯಕರ ಮನೆಯಲ್ಲೆ ತಿಂಡಿ ತಿನ್ನೋಣ, ಧರ್ಮಸ್ಥಳದಲ್ಲಿ ವಿರೇಂದ್ರ ಹೆಗ್ಗಡೆಯವರನ್ನ ಭೇಟಿ ಮಾಡೋಣ, ಆ ವ್ಯವಸ್ಥೆಯನ್ನೆಲ್ಲ ನಾನು ಮಾಡ್ತೀನಿ. ಇದು ಬರಿಯ ಪ್ರವಾಸ ಅಲ್ಲ. ಶೈಕ್ಷಣಿಕ ಪ್ರವಾಸ, ಆದ್ದರಿಂದ ನೀವು ಒಂದು ಮಾತು ಕೊಡಬೇಕು. ನೀವು ಪ್ರವಾಸದ ಸಂದರ್ಭದಲ್ಲಿ ಮತ್ತು ಪ್ರವಾಸ ಮಾಡಿ ಬಂದ ಮೇಲೆ ಹೆಂಡ ಕುಡಿಯದು ಬಿಡಬೇಕು. ಈ ಪ್ರವಾಸದಿಂದ ನೀವು ಕಲಿಯೋ ಪಾಠ ಅದು. ಹಂಗಿದ್ದರೆ ಮಾತ್ರ ಬನ್ನಿ ಇಲ್ಲ ಅಂದ್ರೆ ಬರಲೇಬೇಡಿ. ಹೆಂಡ ಕುಡಿಯದು ಬಿಡ್ತೀನಿ ಅನ್ನೋವರನ್ನು ಮಾತ್ರ ಕರೆದುಕೊಂಡು ಹೋಗೋದು’ ಅಂತ ಕಟ್ಟುನಿಟ್ಟು ಮಾಡಿದೆ. ಎಲ್ಲ ಖುಷಿಯಿಂದ ಒಪ್ಪಿದರು. 45 ಜನರನ್ನು ಕರೆದುಕೊಂಡು ವಾಹನ ಮಾಡಿಕೊಂಡು ಪ್ರವಾಸ ಹೊರಟೆವು.

Picture (1)ಮೊದಲಿಗೆ ಚಿತ್ರದುರ್ಗಕ್ಕೆ ಹೋಗಿ ಅಲ್ಲಿಯ ಮಠದಲ್ಲಿ ಊಟ ಮುಗಿಸಿಕೊಂಡು ಸಂಜೆ ಹೊತ್ತಿಗೆ ಬೆಂಗಳೂರು ಸೇರಿದೆವು. ಪಟೇಲರು ಗೃಹಕಚೇರಿ ಕೃಷ್ಣಾದಲ್ಲಿ ನಮಗೆಲ್ಲ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಬೆಳಿಗ್ಗೆ ಎದ್ದು ಮುಖ್ಯಮಂತ್ರಿಗಳ ಮನೆಗೆ ಹೋದೆವು ಅಲ್ಲಿ ಪಟೇಲರ ಹೆಂಡತಿ ಮತ್ತು ಮಗ ಮಹಿಮಾ ಪಟೇಲ್ ನಮಗೆ ಮನೆ ತೋರಿಸಿ ತಿಂಡಿ ಕಾಫಿ ಕೊಟ್ಟು ಕಳಿಸಿದರು. ಮುಖ್ಯಮಂತ್ರಿಗಳ ಬಂಗಲೆ ನೋಡಿದ ನಂತರ ನಮ್ಮ ತಾವರೇನಾಯ್ಕ ಮತ್ತೆ ಕೆಲವರು `ಓ! ಮುಖ್ಯಮಂತ್ರಿಗಳ ಬಂಗಲೆ ಅಂದ್ರೆ ಇಷ್ಟೆನೇಯ?’ ಎಂದು ರಾಗ ಎಳೆದರು. ನಂತರ ಮುತ್ತಣ್ಣ ಕೊಟ್ಟ ಪಾಸ್ ತೋರಿಸಿ ವಿಧಾನಸೌಧ ನೋಡಿದೆವು ಲಾಲ್ಬಾಗ್ ನೋಡಿಕೊಂಡು ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಹೋಗಿ ನಂತರ ಮೈಸೂರಿಗೆ ಹೋದೆವು. ಮೈಸೂರಿನಲ್ಲಿ ಹಾ.ಮಾ.ನಾಯಕರ ಹೆಂಡತಿ ಯಶೋಧಕ್ಕ ನಮ್ಮನ್ನೆಲ್ಲ ಮನೆಗೆ ಕರೆದು ತಿಂಡಿ ಕೊಟ್ಟು ಸತ್ಕರಿಸಿದರು. ನಾಯಕರ ಮನೆಯಲ್ಲಿದ್ದ ದೊಡ್ಡ ದೊಡ್ಡ ಪುಸ್ತಕದ ಬೀರುಗಳನ್ನು ನೋಡಿ ನಮ್ಮೂರಿನವರು ದಂಗಾದರು. ನಂತರ ಕುವೆಂಪು ಅವರ ಮನೆ ಉದಯರವಿ, ಮೈಸೂರು ಅರಮನೆ, ಬೃಂದಾವನ, ಕೆ.ಆರ್.ಎಸ್ ಎಲ್ಲ ನೋಡಿಕೊಂಡು ನಂಜನಗೂಡಿಗೆ ಹೋದೆವು.

ನಾವು ಹೋದ ಸಂದರ್ಭದಲ್ಲಿ ನಂಜನಗೂಡಿನ ದೇವಸ್ಥಾನದ ಎದುರು ಸಿನಮಾ ಒಂದರ ಶೂಟಿಂಗ್ ನಡೆಯುತ್ತಿತ್ತು. ನಟ ಧಿರೇಂದ್ರ ಗೋಪಾಲ್ ಶೂಟಿಂಗ್ನಲ್ಲಿದ್ದರು. ಅವರನ್ನು ನೋಡಿದ್ದೆ ನಮ್ಮ ಗುಂಪಿನ ಚಂದ್ರಶೇಖರ ಎಂಬ ಯುವಕನಿಗೆ ಧಿರೇಂದ್ರಗೋಪಾಲ್ ಜೊತೆ ನಿಂತು ಫೋಟೋ ತೆಗೆಸಿಕೊಳ್ಳಬೇಕು ಅಂತ ಆಸೆಯಾಯಿತು. ಅವನು ನನ್ನ ಹತ್ತಿರ `ಅಯ್ಯಾ, ಧಿರೇಂದ್ರ ಗೋಪಾಲರ ಜೊತೆ ನಿಲ್ಲಿಸಿ ನನ್ನದೊಂದು ಫೋಟೊ ತೆಕ್ಕೊಡಿ ನಾನು ಜೀವಮಾನದಲ್ಲೆ ಇನ್ನು ಹೆಂಡ ಕುಡಿಯಲ್ಲ’ ಅಂತ ದುಂಬಾಲು ಬಿದ್ದ. ಉಳಿದವರು ಅವನ ಮಾತಿಗೆ ದನಿಗೂಡಿಸಿದರು. ಅವರ ಮಾತಿನಿಂದ ನನಗೆ ಬಹಳ ಸಂತೋಷವಾಗಿ ಅಷ್ಟೆ ತಾನೇ ಕೈಯಲ್ಲೆ ಹೆಂಗಿದ್ರೂ ಕ್ಯಾಮರಾ ಇದೆ. ನೀವು ಹೆಂಡ ಕುಡಿಯದು ಬಿಟ್ಬಿಡ್ತೀರಿ ಅಂದ್ರೆ ಎಷ್ಟು ಫೋಟೊ ಬೇಕಿದ್ರು ತೆಕ್ಕೊಡ್ತೀನಿ ಅಂತ ಹೇಳಿ ಧಿರೇಂದ್ರ ಗೋಪಾಲ್ ಅವರ ಒಪ್ಪಿಗೆ ಕೇಳಲು ಹೋದೆ. ಅವರು ನನ್ನ ನೋಡಿದವರೇ ಓಹೋ ನಮಸ್ಕಾರ ಎಂದು ಹತ್ತಿರ ಬಂದರು. ನನ್ನ ಹೆಗಲ ಮೇಲಿದ್ದ ಹಸಿರು ಶಾಲನ್ನು ನೋಡಿ ನನ್ನನ್ನು ನಂಜುಂಡಸ್ವಾಮಿಯವರೆಂದು ತಿಳಿದಿದ್ದರು. ನಾನು ನಂಜುಂಡಸ್ವಾಮಿಯವರಲ್ಲ ಅವರ ಶಿಷ್ಯ ಎಂದು ಪರಿಚಯ ಮಾಡಿಕೊಂಡು ಅವರ ಬಳಿ ಚಂದ್ರಶೇಖರ ಮತ್ತಿತರರ ಆಸೆಯನ್ನು ತಿಳಿಸಿದೆ. ಅವರು ಅದಕ್ಕೇನಂತೆ ಆಗಬಹುದು ಎಂದರು. ಆದರೆ ನನ್ನ ಮಾತು ಕೇಳಿದ ಮೇಲೆ ಸ್ವಲ್ಪ ದೂರ ಸರಿದು ನಿಂತು ನನ್ನ ಕಡೆ ನೋಡದೆ ಮುಖವನ್ನೋ ಎಲ್ಲೋ ತಿರುಗಿಸಿ ಮಾತನಾಡುತ್ತಿದ್ದಾರೆ ಎಂದೆನಿಸಿತು. ಮೇಕಪ್ ಹಾಕಿದಾರಲ್ಲ ಅದಕ್ಕೆ ಇರಬಹುದು ಎಂದುಕೊಂಡೆ. ಚಂದ್ರಶೇಖರ ಮತ್ತಿತರರೆಲ್ಲರ ಜೊತೆ ನಿಂತು ಹೆಗಲ ಮೇಲೆ ಕೈ ಹಾಕಿ ವಿವಿಧ ಭಂಗಿಯಲ್ಲಿ ಧಿರೇಂದ್ರ ಗೋಪಾಲ್ ಫೋಟೊ ತೆಗೆಸಿಕೊಂಡರು. ನಾನು ಕ್ಯಾಮರಾ ಹಿಡಿದು ಅವರ ಹತ್ತಿರಕ್ಕೆ ಹೋದರೆ ಮಾತ್ರ ಅವರು ದೂರ ದೂರ ಸರಿಯುತ್ತಿದ್ದರು. ಇದ್ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ತಿಳಿಯಲಿಲ್ಲ. ನಾನು ಅವರಿಗೆ ತೊಂದರೆ ಆಗದಿರಲೆಂದು ಸ್ವಲ್ಪ ದೂರ ನಿಂತೆ ಫೋಟೊ ಕ್ಲಿಕ್ಕಿಸಿದೆ.

ಫೋಟೊ ತೆಗೆಸಿಕೊಂಡು ಧಿರೇಂದ್ರಗೋಪಾಲ್ ಅವರಿಗೆ ದನ್ಯವಾದ ಹೇಳಿ ಮರಳುವಾಗ ನಮ್ಮ ಜೊತೆ ಇದ್ದ ಗೌರಿಬಾಯಿ ನಗುತ್ತಾ `ಅಯ್ಯಾ ಸಾರಾಯಿ ಬಿಡಿಸಬೇಕೆಂತ ಶೈಕ್ಷಣಿಕ ಪ್ರವಾಸ ಕರ್ಕಂಬಂದು ಸಾರಾಯಿ ಕುಡಿದವರ ಜೊತಿಗೆ ನಿಲ್ಲಿಸಿ ಫೋಟೋ ತೆಗೆಸಿದ್ರಲ್ಲ’ ಅಂದಳು. ಅದಕ್ಕೆ ಚಂದ್ರನೂ ಧ್ವನಿಗೂಡಿಸಿ ಹೂಂ ಅವರ ಬಾಯಿಂದ ಸಾರಾಯಿ ವಾಸನೆ ಬರ್ತಾ ಇತ್ತು ಎಂದ. ಆಗ ಯಾಕೆ ಅವರು ಸ್ವಲ್ಪ ದೂರದಲ್ಲೆ ನಿಂತು ಮಾತಾಡ್ತ ಇದ್ದರು ಎನ್ನುವ ಕಾರಣ ಹೊಳೆಯಿತು. ಅದಕ್ಕೆ ನಮ್ಮ ಪಕ್ಕದ ಮನೆಯ ಜನಾರ್ಧನ ಇದ್ದವನು ಎಸ್ಟೆಂದರೂ ಅವರು ಕಲಾವಿದರು ತಾನೇ. ಕುಡಿಯೋದು ಸಾಮಾನ್ಯ ಅದನ್ನೇ ದೊಡ್ಡ ಮಾಡಬಾರದು ಎಂದು ಅಲ್ಲಿಗೆ ಈ ವಿಷಯ ಮುಕ್ತಾಯ ಮಾಡಿದ.

ನಂಜನಗೂಡಿನ ನಂಜುಂಡೇಶ್ವರನಿಗೆ ಪೂಜೆ ಮಾಡಿಸಿ ನಂತರ ಎಲ್ಲ ಬಸ್ ಹತ್ತಿ ಹೊರಟರೂ ನಮ್ಮ ತಾವರೇನಾಯ್ಕ ನಾಪತ್ತೆ. ಎಲ್ಲಿ ಹೋದ ಅಂತ ವಿಚಾರ ಮಾಡ್ತಾ ಇದ್ದಾಗ ಅವನೇ ಬಂದ ನೋಡಿದ್ರೆ ಸರಿ ಕುಡಿದು ಬಂದಿದ್ದಾನೆ. ಅವನು ಮೂರು ದಿವಸದಿಂದ ಚೂರು ಹೆಂಡ ಕುಡಿದಿರಲಿಲ್ಲವಲ್ಲ, ಈಗ ಕಲಾವಿದರ ಜೊತೆ ನಿಂತು ಫೋಟೊ ತೆಗೆಸಿಕೊಳ್ಳುವಾಗ ಅವರ ಬಾಯಿಂದ ಹೆಂಡದ ವಾಸನೆ ಬಂದು ಇವನಿಗೆ ತಡೆದುಕೊಳ್ಳಲಿಕ್ಕೆ ಆಗಲೆ ಇಲ್ವಂತೆ ಅದಕ್ಕೆ ನಮ್ಮಿಂದ ತಪ್ಪಿಸಿಕೊಂಡು ಹೋಗಿ ಎಲ್ಲೋ ಹೆಂಡದಂಗಡಿ ಪತ್ತೆ ಮಾಡಿ ಕುಡಿದು ಬಂದಿದ್ದ. ಅವನಿಗೆ ಈಗ ಏನು ಹೇಳಿದರೂ ಪ್ರಯೋಜನವಿಲ್ಲ ಎಂದು ಕೊಂಡು ಅವನನ್ನು ಬಸ್ ಹತ್ತಿಸಿ ಕೂರಿಸಿಕೊಂಡು ಪ್ರವಾಸ ಮುಂದುವರೆಸಿದೆವು. ಸ್ವಲ್ಪ ದೂರದಲ್ಲಿ ನದಿ ಕಂಡಾಗ ನಮ್ಮ ಕೆಲ ಯುವಕರು ತಾವರೇನಾಯ್ಕನನ್ನು ಇಳಿಸಿಕೊಂಡು ಕರೆದುಕೊಂಡು ಹೋಗಿ ಮೂರು ಮುಳುಗು ಹಾಕಿಸಿಕೊಂಡು ಬಂದರು. ಅವನಿಗೆ ಸಾರಾಯಿಯ ಅಮಲು ಇಳಿಯುವುದರ ಜೊತೆ ಚಳಿ ಶುರುವಾಗಿ ನಡಗಲು ಪ್ರಾರಂಭಿಸಿದ. ಪ್ರವಾಸ ಕಾಲದಲ್ಲಿ ನಮ್ಮಿಂದ ತಪ್ಪಿಸಿಕೊಂಡು ಹೋಗಬಾರದೆಂದು ಆಣೆ ಭಾಷೆ ಹಾಕಿಸಿಕೊಂಡೆವು.

ನಂತರ ಬೇಲೂರು,ಹಳೆಬೀಡು ನೋಡಿಕೊಂಡು ಚಾಮರ್ಾಡಿ ಘಾಟಿ ಇಳಿದು ಧರ್ಮಸ್ಥಳ ತಲುಪಿದೆವು. ಅಲ್ಲಿ ವಿರೇಂದ್ರ ಹೆಗ್ಗಡೆಯವರನ್ನು ಕಂಡು ಮಾತನ್ನಾಡಿದೆವು. ನಮ್ಮ ಪ್ರವಾಸದ ಉದ್ದೇಶ ತಿಳಿದ ಅವರು ಬಹಳ ಸಂತೋಷ ಪಟ್ಟು ತಮ್ಮ ಮಂಜುವಾಣಿ ಪತ್ರಿಕೆಯ ಫೋಟೋಗ್ರಾಫರ್ನನ್ನು ಕರೆಸಿ ನಮ್ಮಲ್ಲರ ಜೊತೆ ಕೂತು ಫೋಟೊ ತೆಗೆಸಿಕೊಂಡರು. ಈ ವಿಷಯವನ್ನು ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ತಿಳಿಸಿದರು. ನಮ್ಮವರಿಗೆಲ್ಲ ಆಶಿವರ್ಾದ ಮಾಡಿ ಸ್ಪೆಷಲ್ ಊಟ ಹಾಕಿಸಿ ಕಳಿಸಿದರು.

ನಮ್ಮವರ್ಯಾರು ಅದುವರೆಗೆ ಸಮುದ್ರ ನೋಡಿರಲಿಲ್ಲ. ಸಮುದ್ರ ನೋಡಿಕೊಂಡು ಹುಲಿಕಲ್ ಘಾಟಿ ಹತ್ತಿ ತೀರ್ಥಹಳ್ಳಿ ಮೂಲಕ ಊರಿಗೆ ಮರಳಿದೆವು. ಪ್ರವಾಸ ಮುಗಿಸಿ ಅವರವರ ಮನೆಗೆ ಹೋಗುವಾಗ ಪ್ರತಿವರ್ಷವೂ ಇದೇ ರೀತಿ ಶೈಕ್ಷಣಿಕ ಪ್ರವಾಸ ಮಾಡಿ ಬಂದು ದೊಡ್ಡ ಸಾಹಸ ಮಾಡಿದವರ ಹಾಗೆ ಬೀಗಿದೆವು. ಪ್ರತಿವರ್ಷವೂ ಇದೇ ರೀತಿ ಪ್ರವಾಸ ಹೋಗಬೇಕು ಬಹಳ ಪ್ರಯೋಜನವಾಗುತ್ತದೆ ಎಂದೆಲ್ಲ ಮಾತಾಡಿಕೊಂಡೆವು. ಆದರೆ ಮರುದಿನದಿಂದಲೇ ಮತ್ತೆ ಸಾರಾಯಿ ಸಹವಾಸ ಶುರುವಾಯಿತು. ಕೆಲವರು ಸ್ವಲ್ಪ ದಿನ ತಡೆದುಕೊಂಡರು ನಂತರ ತಡೆದುಕೊಳ್ಳಲಾಗದೆ ಮತ್ತೆ ಪ್ರಾರಂಭಿಸಿದರು. ಸೋಮ್ಲಾನಾಯ್ಕ ಮಾತ್ರ ಖಾಯಂ ಆಗಿ ಹೆಂಡ ಕುಡಿಯುವುದನ್ನು ಬಿಟ್ಟೆ ಬಿಟ್ಟ. ಶೈಕ್ಷಣಿಕ ಪ್ರವಾಸದಿಂದ ಒಬ್ಬರಾದರೂ ಹೆಂಡದ ಸಹವಾಸದಿಂದ ದೂರವಾದರಲ್ಲ ಉದ್ದೇಶ ಸಾರ್ಥಕವಾಯಿತು ಎಂದುಕೊಂಡೆ.

‍ಲೇಖಕರು avadhi

August 15, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

4 ಪ್ರತಿಕ್ರಿಯೆಗಳು

 1. ರಮೇಶ್ ಹಿರೇಜಂಬೂರು

  ಹಲ್ಲೆ ಅಕ್ಷತಾ, ನಿನ್ನ ಲೇಖನ ತುಂಬಾ ಚನ್ನಾಗಿದೆ… ಶಾಮಣ್ಣ ಹಾಗೂ ಅವರ ಜೀವನ ವೃತ್ತಾಂತಗಳು ನಿನ್ನ ಬರವಣಿಗೆಯಲ್ಲಿ ಅಚ್ಚುಕಟ್ಟಾಗಿ ಮೂಡಿ ಬರುತ್ತಿವೆ…

  ಪ್ರತಿಕ್ರಿಯೆ
 2. akshatha

  ರಮೇಶ, ನಿನ್ನ ವಿಶ್ವಾಸಕ್ಕೆ ಥ್ಯಾಂಕ್ಸ್. ಆದರೆ ನಿನ್ನಲ್ಲೊಂದು ವಿನಂತಿ . ಪ್ಲೀಸ್ ಕನ್ನಡದ ಮೇಲೆ ಹೀಗೆ ಹಲ್ಲೆ ಮಾಡಬೇಡ .

  ಪ್ರತಿಕ್ರಿಯೆ
 3. Dr. BR. Satyanarayana

  ಶಾಮಣ್ಣನವರ ಬಗೆಗಿನ ಅಕ್ಷತಾ ಅವರ ಬರಹವನ್ನು ಮಯೂರದಲ್ಲಿ ಓದುತ್ತಾ ಇದ್ದೆ. ನಂತರ ಒಮ್ಮೆ ಬೆಂಗಳೂರಿಗೆ ಶಾಮಣ್ಣನವರು ಬಂದಿದ್ದಾಗ ಅವರೊಂದಿಗೆ ಮಾತನಾಡುತ್ತಾ, ಮಯೂರದ ಕಂತುಗಳು ಅಷ್ಟು ಬೇಗ ಮುಗಿಯುತ್ತಿರುವುದನ್ನು ಕೇಳಿ ಬೇಸರವಾಗಿತ್ತು. ಆಗ ಅವರೇ, ಹೇಳಲು ಹೊರಟರೆ ಒಂದೊಂದೇ ಘಟನೆಗಳು ಯಾವಾಗಲೋ ನೆನಪಾಗುತ್ತಲೇ ಇರುತ್ತವೆ. ಎಂದಿದ್ದರು. ಈ ಮೇಲಿನ ಘಟನೆಯನ್ನು ಓದಿದಾಗ ಶಾಮಣ್ಣನವರನ್ನು ಮಾತನಾಡಿಸುತ್ತಲೇ ಇರಬೇಕು ಅನ್ನಿಸುತ್ತಿದೆ. ಅಕ್ಷತಾ ಅವರಿಗೆ ಧನ್ಯವಾದಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: