ಶಿರಾಡಿಘಾಟ್ ನಲ್ಲೊಂದು ‘ಪಾಪ’ನಾಶಿನಿ !!

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ಆಫ್ ದಿ ರೆಕಾರ್ಡ್ನಲ್ಲಿ.

ಎಲ್ಲಿ ಪ್ರಕೃತಿ ತನ್ನ ಛಾಪನ್ನು ಸುಂದರವಾಗಿ ಮೂಡಿಸಿರುತ್ತದೋ ಅಲ್ಲೆಲ್ಲಾ ಮಾನವನ ಪಾತಕತನಗಳೂ ಇದ್ದೇ ಇರುತ್ತವೆ. ಸಾಮಾನ್ಯವಾಗಿ ಎಲ್ಲೆಲ್ಲಿ ಮಾನವನ ಭೂಗತ ಚಟುವಟಿಕೆಗಳೂ, ಪಾತಕಲೋಕದ ತಾಣಗಳು ಇರುತ್ತವೋ ಅಲ್ಲೆಲ್ಲಾ ವೇಶ್ಯಾವಾಟಿಕೆ ಇರುತ್ತದೆ

ಅದರಲ್ಲಿ ಶಿರಾಡಿಘಾಟ್ ಕೂಡ

ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಹಾದು ಹೋಗುವ ಟ್ರಕ್ಕರ್ಸ್ ಮತ್ತು ಇತರರಿಗೆ ಹೆಚ್.ಐ.ವಿ. ನಿಯಂತ್ರಣದ ಜಾಗೃತಿ ಮೂಡಿಸುವ ತಂಡದ ಸಂಯೋಜಕಿಯಾಗಿ ಪೂರ್ಣವಾಗಿ ಅಲ್ಲಿಯೇ ಒಂದು ವರ್ಷ ಕಾಲ ವಾಸ್ತವ್ಯವಿದ್ದೆ. ಕಾನನದ ಎಲ್ಲ ಋತುಗಳ, ಹುಣ್ಣಿಮೆ,ಅಮಾವಾಸ್ಯೆಗಳ, ಎಲ್ಲ ಅಪಘಾತಗಳ, ಎಲ್ಲ ಪಾತಕಗಳ, ವೇಶ್ಯಾವಾಟಿಕೆಯ ಎಳೆ ಎಳೆಗಳ, ಕಾಡಿನ ಎಲ್ಲ ಚೀತ್ಕಾರಗಳನ್ನು ಆಘ್ರಾಣಿಸಲು ಸಾಧ್ಯವಾಯಿತು…

ಅದೊಂದು ದಿನ…. ರಾಜಿ, ಶಾಂತಮ್ಮ, ಸಾರಿಕ, ರೇಷ್ಮ ಓಡ್ಕೊಂಡು ಬಂದ್ರು. ಯಾವುದೋ ದೊಡ್ಡ ಮಾರಾಮಾರಿಯೇ ಆಗಿರ್ಬೇಕು ಅಂದ್ಕೊಂಡೆ, ಅವರ ಏದುಸಿರು, ಅವರ ಸಿಟ್ಟು ಸೆಡವು ನೋಡಿ. ಯಾಕೆ ? ಏನಾಯ್ತು ಅಂದೆ. ಎಲ್ಲಿಂದಲೋ ಗುಂಪು ಗುಂಪಾಗಿ ಹುಡುಗೀರು ಬಂದುಬಿಟ್ಟಿದ್ದಾರೆ. ಅವರೇನು ಲಾಟು-ಪೋಟು ಹುಡ್ಗೀರಲ್ಲ. ಸಖತ್ ಥಳಕು ಬಳುಕಿನೋರು, ಎಲ್ಲಾ ಭಾಷೆ ಮಾತಾಡ್ತಾರೆ, ಹೆಂಗೌರೆ ಅಂತೀಯಾ !! ದಷ್ಟಪುಷ್ಟವಾಗಿ ತುಂಬ್ಕೊಂಡೌರೆ. ಅವರ ಡ್ರೆಸ್ ಏನು? ಅವರ ವಯ್ಯಾರ ಏನು ? ಈವತ್ತಿನ ಗಿರಾಕಿಗಳನ್ನೆಲ್ಲ ಔಟ್ ಮಾಡ್ಬಿಟ್ಟೌರೆ. ಒಬ್ಬನೂ ಸಿಕ್ಕಿಲ್ಲ…. ಒಂದೇ ಉಸಿರಿಗೆ ಸಾರಿಕಾ ಪೇಚಾಡಿದ್ಲು. ಯಾಕೆ, ಇದು ನಮ್ಮ

ಖಾನ್ ದಾನ್, ಬೇರೆ ಜಾಗ ನೋಡ್ಕೊಳ್ರೀ ಅಂತ ಹೇಳ್ಬೇಕಿತ್ತು ಅಂದೆ. ಅದಕ್ಕೆ ರಾಜಿ ಬುಸ್ಗುಡ್ಕೊಂಡು , ಹಂಗೆ ಸಾಡೇಸಾತ್ ಗಳಾಗಿದ್ರೆ ಬಿಟ್ಬಿಡ್ತಿದ್ವಾ ! ಅವರು ಜೋರಿದ್ದಾರೆ, ಸುಮ್ನೆ ಒಂದು ಲುಕ್ ಕೊಟ್ಟಿದ್ದಕ್ಕೆ , ನಿಮ್ಮಪ್ಪಂದೇನ್ರೇ ಈ ಜಾಗ ಅನ್ನೋ ಹಂಗೆ ದುರುಗುಟ್ಟಿದ್ರು…. ಆ ನನ್ಮಕ್ಳೋ ಒಬ್ಬನೂ ನಮ್ಮ ಕಡೆ ನೋಡ್ದಂಗೆ ಹೋಗ್ತಾರೆ……

ನಾನು ಭವಾನಿ. ಈ ಶಿರಾಡಿಘಾಟ್ ಗೆ ಬಂದು  ಹಲವು ವರ್ಷಗಳೇ ಕಳೆದು ಹೋದ್ವು. ಈ ಜಡ ಬದುಕು ಹೊರೆಯುತ್ತಿದೆಯೇ ಹೊರತು ನಾನೇನು ದುಡಿದು ಬಣವೆ ಹಾಕಲಿಲ್ಲ… ಇಲ್ಲಿಗೆ ಬರೋ ಹುಡ್ಗೀರ್ಗೆ ಒಂಥರಾ ಗೈಡು ನಾನು. ಅದಕ್ಕೆ ಅವರೆಲ್ಲ ನನ್ನನ್ನು ಅವಲಂಬಿಸ್ತಾರೆ. ಅವರು ದುಡಿದಿದ್ರಲ್ಲಿ ಒಂದೊಂದು ಸಾರಿ ನನಗೆ ಕುಡಿಯೋಕೆ, ತಿನ್ನೋಕೆ ಕೊಡ್ತಾರೆ. ಅದೇ ನನ್ನ ಫೀಸು. ಪೋಲೀಸ್ನೋರು, ಫಟಿಂಗ್ರು, ಕ್ಯಾತೆ ತೆಗೆಯೋರು, ಲೋಕಲ್ನೋರು, ಕಳ್ಳಭಟ್ಟಿ ಮಾಡೋರು ಯಾರು ಏನೇ ತಕರಾರು ಮಾಡಿದ್ರೂ ಹುಡ್ಗೀರಿಂದ ಫಂಡ್ ಎತ್ತಿ ಕೇಸ್ ಸೆಟ್ಲ್ ಮಾಡ್ಬಿಡ್ತೀನಿ, ಇದೇ ನನ್ನ ಸಮಾಜಸೇವೆ.

ಶಿರಾಡಿಘಾಟ್ ಅಂದ್ರೆ ರುದ್ರರಮಣೀಯ ಅಂತೆಲ್ಲ ನಿಮ್ಮ ಮನಸ್ಸುಗಳಲ್ಲಿ ಉನ್ಮಾದ ಹುಟ್ಟೋದು ನಿಜಾನೇ…. ಆದ್ರೆ ಅದರ ಜೊತೇಲೇ ಥಳಕು ಹಾಕ್ಕೊಂಡಿರೋ ರೌದ್ರವತೆಯನ್ನು ನೋಡ್ಬೇಕಂದ್ರೆ ಅದರ ಒಳಸುಳಿಗಳ ಒಡಲೊಳಗೆ ಹೊಕ್ಕಬೇಕು… ಹೊರಪದರದ ಖನಿಯಲ್ಲಿ ಅದು ಗೋಚರಿಸೋಲ್ಲ, ಅಷ್ಟೇ ಯಾಕೆ ಊಹೇನೂ ಸಾಧ್ಯವಿಲ್ಲ. ಅದರಲ್ಲಿ ವೇಶ್ಯಾವಾಟಿಕೇನೂ ಒಂದು.

ಬನ್ನಿ ! ಈ ಕಾನನದೊಂದಿಗಿನ ನಮ್ಮ ಬೆತ್ತಲ ಬದುಕಿನ ಒಂದು ಸಣ್ಣ ಪರಿಚಯಾನ ನಿಮಗೆ ಮಾಡಿಸ್ತೀನಿ.

ಈ ಶಿರಾಡಿಘಾಟ್ ಬರೀ ದಟ್ಟವಾದ ಕಾನನವಷ್ಟೇ ಅಲ್ಲ,  ಕಣ್ಣು ಹಾಯಿಸಿದಷ್ಟೂ ನೂರಾರು ಬಣ್ಣದ ಹಸಿರು ಉಕ್ಕುತ್ತವೆ.  ವಿಧವಿಧವಾದ ಬಣ್ಣದ ಹೂಗಳು, ಝೀರುಂಡೆಗಳ ನಿರಂತರ ಸೈರನ್ ಹೀಗೇ…. ದಟ್ಟವಾದ, ಹಸಿರುಕ್ಕಿಸುವ, ಕಣ್ಣಳತೆ ಮೀರಿದ ವೃಕ್ಷ ಸಮೂಹಗಳ, ಮನಸ್ಸಿಗೆ ಮುದಗೊಳಿಸುವ ಶಿರಾಡಿ ಘಾಟ್ ಸದಾ ಕಂಗೊಳಿಸುತ್ತದೆ…

ಈ ಕಾಡಿನ ಬೈತಲೆ ಸೀಳಿದಂತೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಕಾನನ ಎರಡನ್ನೂ ವೇಶ್ಯಾವಾಟಿಕೆಯ ಜಾಲ ಚೆನ್ನಾಗಿಯೇ ಬಳಸಿಕೊಂಡಿದೆ. ಗಿರಾಕಿಗಳು ಅತಿ ಹೆಚ್ಚು ದೊರೆಯುವ  ಹಾಗೂ ಲೈಂಗಿಕ ಕ್ರಿಯೆಗೆ ತೊಡಗಬಹುದಾದ ನೂರಾರು ಏಕಾಂತದ ಉಚಿತ ಸ್ಥಳಗಳು ಇಲ್ಲಿ ಸಿಗ್ತಾವೆ.  ದಿನನಿತ್ಯ ನಿರಂತರವಾಗಿ ಓಡಾಡುವ ಸಾವಿರಾರು ಲಾರಿಗಳು,  ವಾಹನಗಳು ಅಲ್ಲಲ್ಲಿ ವಿರಮಿಸ್ತಾವೆ. ಡ್ರೈವರ್ ಗಳ,  ಕ್ಲೀನರ್ ಗಳ ವಿಶ್ರಾಂತಿಗೆ, ಸ್ನಾನಕ್ಕೆ, ಅವರ ಅಗತ್ಯಗಳಿಗೆ ತಕ್ಕಂತೆ ಎಲ್ಲ ಸೌಲಭ್ಯಗಳು ಇಲ್ಲಿ ಲಭ್ಯ. 

ಪ್ರಕೃತಿದತ್ತವಾದ ದಟ್ಟಕಾಡಿನ ನೆರಳಿನೊಂದಿಗೇ ಹರಿಯುವ ನದಿಗಳ, ಹಳ್ಳಗಳ, ಗುಂಡಿಗಳ ತಪ್ಪಲಲ್ಲಿ ವಾಹನಗಳ ತೊಳೆಯೋಕೆ ಹಾಗೂ ಊಟ ತಿಂಡಿ ಕುಡಿಯಲು ಅನುಕೂಲ ಮಾಡೋಕೆ ಇರೋ ಹೋಟೆಲ್ಗಳು ಕೂಡ ಈ ವಾಹನಗಳು ತಂಗಲು ಕಾರಣವಾಗಿವೆ.  ಗುಂಡ್ಯದಿಂದ  ದೋಣಿಗಾಲ್ ವರೆಗೆ ಅತ್ಯಂತ ಎತ್ತರದಲ್ಲಿ ರಸ್ತೆ ಹಾದುಹೋಗುತ್ತದೆ.  ನಿತ್ಯ ಈ ರಸ್ತೆಯಲ್ಲಿ ಓಡಾಡುವ ವಾಹನಗಳು ಸುಮಾರು 35000.  ಈ ಪೈಕಿ ಲಾರಿಗಳು ಸುಮಾರು 20 ಸಾವಿರಕ್ಕೂ ಹೆಚ್ಚು. 

ಹೀಗೆ ನಿಂತ ವಾಹನಗಳ ಸಿಬ್ಬಂದಿ ಹಾಗೂ ಅದರಲ್ಲೂ ಮುಖ್ಯವಾಗಿ ಲಾರಿ ಡ್ರೈವರ್ ಗಳು ಮತ್ತು ಕ್ಲೀನರ್ಗಳು ಲೈಂಗಿಕ ವೃತ್ತಿ ಮಹಿಳೆಯರೊಂದಿಗೆ ರೇಟು ಮಾತಾಡುತ್ತಾರೆ. ಹಾಗೆಯೇ ಆ ಕಾನನದಲ್ಲಿ ಕರಗಿ ಹೋಗ್ತಾರೆ.  ಒಮ್ಮೆ ಅಡವಿಯೊಳಗೆ ಹೊಕ್ಕರೆ ಸಾಕು ಎಲ್ಲವೂ ಪ್ರೈವೆಸಿಯೇ !ಆ ದಟ್ಟತೆ ಎಲ್ಲ…. ಎಲ್ಲವನ್ನೂ ತನ್ನೊಡಲೊಳಗೆ ಮುಚ್ಕೊಂಡು ಬಿಡುತ್ತೆ. ಗಿರಾಕಿಗಳು ಬರುವ ಮೊದಲೇ ಈ ಹುಡ್ಗೀರು ( ಹುಡ್ಗೀರು ಅಂದ್ರೆ ಇಲ್ಲಿ ವಯಸ್ಸಷ್ಟೇ ಮುಖ್ಯವಲ್ಲ, ಈ ವೃತ್ತಿಯಲ್ಲಿರುವವರ ಸಂಭೋದನೆ )  ಅಲ್ಲಲ್ಲಿಯೇ ಮರಗಳ ಬುಡಗಳಲ್ಲಿ,  ಸಮತಟ್ಟಾದ ಜಾಗಗಳಲ್ಲಿ ತಮಗೆ ಅಗತ್ಯವಿರುವಷ್ಟು ಜಾಗ ಸಿದ್ದ  ಮಾಡಿಕೊಳ್ತಾರೆ.  ಎಲೆಗಳ ರಾಶಿಯನ್ನೇ ಹಾಸಿಗೆಯನ್ನಾಗಿ ಮಾಡಿಕೊಳ್ಳುವುದು,  ತಮ್ಮ ದುಪ್ಪಟ್ಟಗಳನ್ನೇ ಹಾಸಿಕೊಳ್ಳೋದು ಸಾಮಾನ್ಯ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಏನೂ ಹಾಕಿಕೊಳ್ಳದೇ ಒದ್ದಾಡಿದ ಗುರುತುಗಳು ಅಲ್ಲಲ್ಲಿ ಕಾಣಸಿಗ್ತಾವೆ.

ಬಂದ ಗಿರಾಕಿಗಳು ಬೀಡಿ,ಸಿಗರೇಟು ಎಸೆದು ಕಾಡಿಗೆ ಬೆಂಕಿ ಹೊತ್ತಿಸ್ತಾರೆ ಅಂತ ಪೋಲೀಸರು ಕಾಡಿಗೆ ಬೆಂಕಿ ಹೊತ್ತಿದಾಗಲೆಲ್ಲಾ ನಮ್ಮ ಮೇಲೆ ಪ್ರಹಾರ ಮಾಡ್ತಾನೇ ಇರ್ತಾರೆ. ಅದಕ್ಕೆ ಅವರು ಸಾಕ್ಷಿ ತೋರಿಸೋದು, ಎಂದೋ ಉಪಯೋಗಿಸಿ ಬಿಸಾಡಿದ್ದ ಕಾಂಡೂಮ್ಗಳ ಪಳೆಯುಳಿಕೆಗಳನ್ನು. ಆದರೆ ಕಾಡಿಗೆ ಹಚ್ಚಿದ ಕಿಚ್ಚಿನ ಹಿಂದಿರುವ ಮಸಲತ್ತು ನಮಗೂ ಗೊತ್ತು, ಅವರಿಗೂ ಗೊತ್ತು…‌!!

ನೂರಾರು ಅಡಿ ಎತ್ತರದಲ್ಲಿ ಹೆದ್ದಾರಿ,  ಇಕ್ಕೆಲಗಳ ಅಡವಿಯ ಇಳಿಜಾರು. ಅದರೊಳಗೆ ಇಳಿದಿಳಿದು ಹೋದಂತೆ ಆಳದಲ್ಲಿ ತಣ್ಣಗೆ ಹರಿಯೋ ನದಿಗಳು, ಈ  ಮಹಿಳೆಯರ ಬದುಕಿನೊಂದಿಗೆ ಬೇರೆ ಬೇರೆ ಪಾತ್ರವನ್ನು ನಿರ್ವಹಿಸುತ್ತವೆ.  ದಣಿದ ದೇಹ ಮನಸ್ಸುಗಳಿಗೆ ತಣ್ಣನೆಯ ಸ್ಪರ್ಶದೊಂದಿಗೆ ಮೈದಡವುತ್ತವೆ. ಅನೇಕ ಬಾರಿ ಪೊಲೀಸರಿಂದಲೋ,   ಗಿರಾಕಿಗಳಿಂದಲೋ, ಪಾತಕಿಗಳಿಂದಲೋ ರಕ್ತಸಿಕ್ತವಾಗುವುದು,  ಘಾಸಿಗೊಳ್ಳುವುದು ಅತಿ ಸಾಮಾನ್ಯ. 

ಆಗೆಲ್ಲಾ ಅನಾಥ ಪ್ರಜ್ಞೆಯಿಂದ ಏಕಾಂಗಿಯಾಗಿ ಓಡಿ ಬಂದು ಈ ಪಾಪನಾಶಿನಿಯ ತೆಕ್ಕೆಯಲ್ಲಿ ಬೀಳುತ್ತೇವೆ. ( ಅದೇಕೆ ಈ ಗಂಗೆಗೆ ಪಾಪನಾಶಿನಿ ಹೆಸರು ಬಂತೋ ಗೊತ್ತಿಲ್ಲ… ನಮಗಂತೂ ಅವಳು ನಿಜವಾದ ಪಾಪನಾಶಿನಿಯೇ!!)  ಸಮಾಧಾನವಾಗುವ ವರೆಗೂ ಅಥವಾ ದುಗುಡ ಇಳಿಯುವವರೆಗೂ  ಅಲ್ಲೇ ಅವಳ ಮಡಿಲಲ್ಲೇ ಇದ್ದು ಬಿಡುತ್ತೇವೆ.  ಕೆಲವೊಮ್ಮೆ ಮನಸ್ಸಿಗೆ ಸಂತೋಷವಾದಾಗಲೂ ಬಹಳ ಅಪರೂಪವಾಗಿ ಕಾಲುಗಳನ್ನು ಇಳಿಬಿಟ್ಟು ಪಾಪನಾಶಿನಿಯ ಸ್ಪರ್ಶದೊಂದಿಗೆ ಹಗುರಾಗ್ತೇವೆ. ಇಂಥಾ ಸಂದರ್ಭಗಳಲ್ಲೆಲ್ಲ ಅವಳು ತಾಯಾಗಿ ಬಿಡುತ್ತಾಳೆ. ಇದೊಂದೇ ನಮಗೆ ಮಾನಸಿಕವಾಗಿ ನೆಮ್ಮದಿ ತಂದುಕೊಳ್ಳುವ ದಾರಿ.

ಇಲ್ಲಿ ಲೈಂಗಿಕ ವೃತ್ತಿಯಲ್ಲಿ ತೊಡಗುವ ಶೇಕಡ ನೂರರಷ್ಟು ಮಹಿಳೆಯರೂ ವಲಸೆ ಬಂದವರೇ. ಅದೇ ಜಿಲ್ಲಾ ಕೇಂದ್ರದಿಂದ, ಅಂತರ ಜಿಲ್ಲೆಗಳಿಂದ,  ನೆರೆ ರಾಜ್ಯಗಳಿಂದಲೂ ಇಲ್ಲಿಗೆ ವಲಸೆ ಬರುತ್ತಾರೆ.  ಕೆಲವೊಮ್ಮೆ ಅದೆಲ್ಲೋ ಲಾರಿ ಹತ್ತುತ್ತಾರೆ,  ಕೆಲವೊಮ್ಮೆ ಇಲ್ಲಿಂದ ಲಾರಿ ಹತ್ತಿ ಹೋದ ಮಹಿಳೆ ಇನ್ನೆಲ್ಲೋ ಇಳೀತಾಳೆ. ಸದಾ ಚಲಿಸುವ ಇಲ್ಲಿ ಗಿರಾಕಿಗಳಂತೂ ಗ್ಯಾರಂಟಿ ಅನ್ನೋ ಧೈರ್ಯದಿಂದ ಎಲ್ಲಾ ಆತಂಕಗಳ ನಡುವೆಯೂ ಇಲ್ಲಿಗೆ ಬರ್ತಾರೆ. 

ನಗರಗಳಲ್ಲಿ ರೇಡ್ ಹೆಚ್ಚಾದರೋ,  ಗಲಭೆಗಳಾದರೋ,  ಗಂಭೀರ ಪರಿಸ್ಥಿತಿ ಉಂಟಾದಾಗಲೋ,   ಸ್ಟ್ರೈಕ್ ಗಳಾದಾಗಲೋ,  ಅಯ್ಯಪ್ಪನ ಭಕ್ತರೆಲ್ಲ ಯಾತ್ರೆ ಹೋದಾಗಲೋ ಅಥವಾ ತನ್ನನ್ನು ರೌಡಿಗಳಿಂದ,  ಪುಡಿ ಪೋಕರಿಗಳಿಂದ,   ಬಾಡಿಗೆ ಗಂಡಂದಿರಿಂದ,  ತಪ್ಪಿಸಿಕೊಳ್ಳಲೋ…. ಹೀಗೆ ಹಲವಾರು ಕಾರಣಗಳಿಂದಾಗಿ ಇಲ್ಲಿಗೆ ವೃತ್ತಿ ಮಾಡಲು ಬರ್ತಾರೆ. ಕೆಲವು ದಿನಗಳಿದ್ದು ದುಡ್ಡು ಸಿಕ್ಕಾಗ ತನ್ನ ನಂಬಿದವರ,  ಕರುಳ ಕುಡಿಗಳ ಹಸಿವಿನ ಚೀಲ ತುಂಬಿಸಿ ಬರುತ್ತಾರೆ. ಇಲ್ಲಿಯ ವೃತ್ತಿ ಸದಾ ಚಲನಾ ಸ್ಥಿತಿಯಲ್ಲಿಯೇ ಇರುತ್ತದೆ.

ಹೀಗೆ ಹೆಚ್ಚು ಹೆಚ್ಚು ಹೆಣ್ಣುಗಳು ಸಂಚರಿಸಿದಾಗಲೂ ಗಿರಾಕಿಗಳಿಗೆ ಸುಗ್ಗಿ.   ಹೊಸ ಹೊಸ ಹುಡುಗಿಯರನ್ನು ಕಂಡಾಗ ಪುಳಕಿತರಾಗ್ತಾರೆ. ನಿರ್ಲಿಪ್ತವಾಗಿ ಹೋಗಬೇಕು ಅಂತ ನಿರ್ಧಾರ ಮಾಡಿ ಬಂದಿದ್ದ ವಿಟರೂ ಕೂಡ ಮನಸ್ಸು ಬದಲಾಯಿಸುತ್ತಾರೆ.

ನಮ್ಮಲ್ಲಿ ಎಷ್ಟೆಲ್ಲಾ ವೈರುದ್ಯತೆಗಳು, ದ್ವೇಷಾಸೂಯೆಗಳು, ವೃತ್ತಿ ಸ್ಪರ್ಧೆಗಳು ಎಲ್ಲವೂ ಮಾಮೂಲು… ಹಾಗಂತ ಇಡೀ ಸಮೂಹಕ್ಕೆ ಏನಾದ್ರೂ ಅಪಾಯ ಬಂದ್ರೆ ಒಟ್ಟಾಗಿಬಿಡ್ತೀವಿ. ನಮ್ಮ ಹುಡುಗಿಯರಲ್ಲಿಯೂ ಕಿರಿಕ್ ಗಳೂ ಇರ್ತಾರೆ.

ಇನ್ನು ಊಟ-ತಿಂಡಿ ಕೆಲವೊಮ್ಮೆ ಆಶ್ರಯಕ್ಕಾಗಿ ಹೆದ್ದಾರಿಯಲ್ಲಿರುವ ಹೋಟೆಲ್ ಗಳೇ ನಮ್ಮ ಆಶ್ರಯದಾತರು.   ಹೋಟೆಲ್ ಫ್ರೆಂಡ್ಶಿಪ್,  ಹೋಟೆಲ್ ಫೈವ್ ಸ್ಟಾರ್,  ಹೋಟೆಲ್ ರಂಗೀಲಾ ,  ಹೋಟೆಲ್ ಮಹಮದ್,   ಹೋಟೆಲ್ ಶಾಂಭವಿ, ಹೀಗೇ ಅನೇಕ ಹೋಟೆಲ್ ಗಳೊಂದಿಗೆ ನಮ್ಮ ಒಡನಾಟ. ಆದರೆ ಎಲ್ಲ ಹೋಟೆಲ್ ಗಳಲ್ಲಿಯೂ ನಮಗೆ ಸಹಕಾರ ಕೊಡಲ್ಲ.  ಕೆಲವು ಹೋಟೆಲ್ಗಳು ಪಕ್ಕ ಸಸ್ಯಹಾರಿಗಳಂತೆ ವರ್ತಿಸುತ್ತವೆ.  ನಮ್ಮ ಒಡನಾಟ ಅಂದರೆ ಹೋಟೆಲ್ ಗಳಿಗೆ ಪೊಲೀಸರ, ರೌಡಿಗಳ, ಪರ್ಕಿಗಳ ಹಾವಳಿ, ಮರ್ಜಿ,  ಅರಣ್ಯ ರಕ್ಷಕರ ಕಾಟ ಅಂತ ಕೆಲವರು ನಮ್ಮನ್ನು ಸೋಕಿಸಿ ಕೊಳ್ಳುವುದೇ ಇಲ್ಲ. 

ಇನ್ನು ಕೆಲವರು ನಮ್ಮನ್ನು ಲಾಭಗಳಿಕೆಯ ಒಂದು ದೊಡ್ಡ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾರೆ. ಈ ಹೋಟೆಲ್ ಗಳೂ ನಮ್ಮಂತೆಯೇ ಹೆಸರು, ಮಾಲೀಕರನ್ನು ಬದಲಾಯಿಸಿ ಕೊಳ್ಳುತ್ತಲೇ ಇರ್ತಾವೆ.  ಇಲ್ಲಿಯ ಹೋಟೆಲ್ ಗಳಿಗೆ ಹಾಗೂ ಪ್ರಭಾವ  ಬಳಸಿ   ಟ್ರಾನ್ಫರ್ ಮಾಡಿಸಿಕೊಂಡು ಬರೋ ಪೋಲೀಸರಿಗೆ ಎಲ್ಲ ವಿಧದಲ್ಲೂ ನಾವೂ ಕೂಡ ಆಕರ್ಷಣೆ ಅನ್ನೋದಂತು ಸತ್ಯ ಅಂತ ಗಂಟಾಘೋಷವಾಗಿ ಹೇಳ್ತೀನಿ.

ಈ ಕಾಡಲ್ಲಿ ನಾವು ಎರಡು ರೀತಿ ಪೊಲೀಸರನ್ನು ಸಂಭಾಳಿಸಬೇಕು ಒಂದು ಸಿವಿಲ್ ಪೊಲೀಸ್, ಇನ್ನೊಂದು ಅರಣ್ಯ ಪೊಲೀಸ್.  ಇಬ್ಬರಿಗೂ ಮಾಮೂಲಿ ಕೊಡಬೇಕು ಇಬ್ಬರಿಗೂ ಅವರು ಬಯಸಿದಾಗಲೆಲ್ಲ ಪುಕ್ಕಟೆಯಾಗಿ ದೇಹವನ್ನು ಹಾಸಬೇಕು. ಇಷ್ಟೆಲ್ಲಾ ಆದರೂ ಕ್ಷಣಂ ಚಿತ್ತಂ ಎಂಬಂತೆ ಲಾಠಿ ಹಿಡಿದು ಮುಖ ಗಂಟಿಕ್ಕಿ ಧಾವಿಸುತ್ತಲೇ ಇರ್ತಾರೆ.

ಆದರೆ ಇಲ್ಲಿ ನಾವು  ಪೊಲೀಸರು, ರೌಡಿಗಳು  ಹಿಂಬಾಲಿಸಲು ಸಾಧ್ಯವಾಗದಂತೆ ನಮ್ಮದೇ ಆದ ಕಾರ್ಯತಂತ್ರ ರೂಪಿಸಿ ಕೊಂಡಿರುತ್ತೇವೆ. ನಾವು ರೂಪಿಸಿರೋ ಕಿರುದಾರಿಗಳಲ್ಲಿ, ಮೆಟ್ಟಿಲುಗಳಲ್ಲಿ ಇನ್ನಾರು ಇಳಿಯಲು ಸಾಧ್ಯವೇ ಇಲ್ಲ,  ಹಾಗೇನಾದರೂ ನುಗ್ಗಿದರೆ ಬೂಟುಗಾಲಿನ ಸಮೇತ ಆಸ್ಪತ್ರೆ ಸೇರಬೇಕಾಗುತ್ತೆ.  ಸುಮಾರು ನಲವತ್ತು ಐವತ್ತು ಅಡಿಯವರೆಗೂ ಮೇಲಿಂದ ಕೆಳಗೆ ಇಂಥಾ ವ್ಯೂಹಗಳನ್ನು ಕಾಡಿನ ತುಂಬೆಲ್ಲಾ ಮಾಡಿಕೊಂಡಿರುತ್ತೇವೆ. 

ನಾವು ಸದಾ ಈ  ದಟ್ಟಡವಿಯೊಂದಿಗೇ, ಅದರ ಬಾಹುವಿನೊಳಗೇ ಹೆಣೆದು ಕೊಂಡಿರುತ್ತೇವೆ.  ನಮ್ಮ ವೃತ್ತಿಯೊಂದಿಗೆ ಲೈಂಗಿಕ ಕ್ರಿಯೆಗಳು ಅಥವಾ ನಮ್ಮನ್ನು ನಾವು ಬಚ್ಚಿಟ್ಟುಕೊಳ್ಳಲು,  ವಿಶ್ರಮಿಸಲು ಅದರೊಳಗೆ ಹೋಗಲೇ ಬೇಕಾಗುತ್ತದೆ. ನಾವೇ ಅದಕ್ಕಾಗಿ ನಿರ್ಮಿಸಿಕೊಂಡಿರುವ ತಂಗುದಾಣಗಳು ಅಲ್ಲಲ್ಲೇ ಇರುತ್ತವೆ.  ಗೂಡುಗಳಂತೆ  ಬೆಳೆದಿರೋ ಕುರುಚಲು ಪೊದೆಗಳನ್ನು ಗುಡಿಸಿ ಚೊಕ್ಕ ಮಾಡಿ, ಮೃದುವಾದ ಮಣ್ಣನ್ನು ಹಾಸಿ ಗೂಡು ಕಟ್ಟಿಕೊಳ್ಳುತ್ತೇವೆ.  ಒಂದು ಪೊದರಿನ ಗಿಡವನ್ನು ಬಾಗಿಲಾಗಿ ಬಳಸಿಕೊಳ್ಳುತ್ತೇವೆ.  ಇದೇ ಗೂಡುಗಳೇ ನಮ್ಮ ತಾಣಗಳು..

ಬೇಸಿಗೆ, ಚಳಿಗಾಲದಲ್ಲಿ ಇವು ನಮ್ಮನ್ನು ಕಾಯುತ್ತವೆ. ಮಳೆಗಾಲದಲ್ಲಿ ಎಲ್ಲವೂ ಅಯೋಮಯ. ಆಗೆಲ್ಲ ಹೋಟೆಲ್ ಗಳು, ಲಾರಿಗಳನ್ನೇ ಆಶ್ರಯಿಸುತ್ತೇವೆ.

ಹಾಗಂತ ಅಡವಿ ಅಡವಿಯೇ ಅಲ್ವಾ ?? ಅದೆಷ್ಟು ಬಾರಿ ಇದ್ದಕ್ಕಿದ್ದಂತೆ ನುಗ್ಗುವ ಆನೆಗಳ ಕಾಲ್ತುಳಿತಕ್ಕೆ ಮಾನಿನಿಯರು ಜೀವ ಬಿಟ್ಟಿದ್ದಾರೋ, ಅದೆಷ್ಟು ಅಸಹಾಯಕ ಹೆಣ್ಣುಗಳು ಇದರೊಳಗೆ ಸ್ವಚ್ಛಂದವಾಗಿ ಬದುಕಿರುವ ನೂರಾರು ಜಾತಿಯ ಸರ್ಪಗಳ, ವಿಷಜಂತುಗಳಿಗೆ ತುತ್ತಾಗಿದ್ದಾರೋ, ಹೆಜ್ಜೆ ತಪ್ಪಿ ಪ್ರಪಾತಕ್ಕೆ ಉರುಳಿದ ದೇಹಗಳೆಷ್ಟೋ, ಅರ್ಧ ರಾತ್ರಿಯಲ್ಲಿ ಲಾರಿ ಹತ್ತಿ ಅಲ್ಲೆಲ್ಲೋ ಅಪಘಾತಗಳಲ್ಲಿ ಜೀವ ಹಾರಿಹೋದ ಅನಾಥ ಹೆಣಗಳೆಷ್ಟೋ………

ಹೀಗೇ ಸದಾ ತೂಗುಗತ್ತಿಯ ಮೇಲೆ ನಡೆಯುವ ನಡಿಗೆಯಾಗೇ ನಮ್ಮ ಬದುಕುಗಳು ಸವೆಯುತ್ತಿರುತ್ತವೆ. ಹೀಗೇ ಪ್ರಾಣತೆತ್ತ ಅದೆಷ್ಟೋ ಹೆಣ್ಣುಗಳ ಅಸ್ಥಿಪಂಜರಗಳು ಈ ಶಿರಾಡಿಘಾಟ್ ನ ತುಂಬೆಲ್ಲಾ ಚೀತ್ಕರಿಸುತ್ತಾ  ಸಾಕ್ಷಿಯಾಗಿವೆಯೋ…..ನಮ್ಮ ಬದುಕಿನ ಮೇಲ್ಪದರದ ಒಂದು ಎಳೆಯಷ್ಟೇ ಇದು….

ಸದಾ ಕತ್ತಲು-ಬೆಳಕು-ಬೆತ್ತಲೆಗಳ ಚಕ್ರವ್ಯೂಹದೊಳಗೇ ರೋದಿಸುವ ನಮ್ಮ ಬದುಕುಗಳೂ ಕೂಡ ಅಕಸ್ಮಿಕ, ಅನಿವಾರ್ಯ !!

ನನಗೆ ಗೊತ್ತು ….. ನಮ್ಮ ಬಗ್ಗೆ ಸಹಜವಾದ ನಿಮ್ಮ ಪ್ರಶ್ನೆಯಿದೆ ; 

ಇಷ್ಟೆಲ್ಲಾ ಕಷ್ಟ ಯಾಕೆ?? ಅಂತ ಯಾಂತ್ರಿಕವಾಗಿ ಪ್ರಶ್ನಿಸುವ ಶಿಷ್ಟ ಸಮಾಜದ ನೀವು ಸೋಲುತ್ತೀರಿ ? ನಾವು ದಿನವೂ ಸಾಯುತ್ತೇವೆ.

‍ಲೇಖಕರು ಲೀಲಾ ಸಂಪಿಗೆ

September 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

2 ಪ್ರತಿಕ್ರಿಯೆಗಳು

  1. ಪದ್ಮನಾಭ ಆಗುಂಬೆ

    ಆಂಧ್ರದ ಚಿಲಕಲೂರಿ ಪೇಟ, ವಿಜಯವಾಡ, ತಮಿಳುನಾಡಿನ ನಾಮಕ್ಕಲ್ ನಲ್ಲಿ ಈ ರೀತಿಯ ದಂಧೆ ಇದೆಯೆಂದು ಕೆಲವು ಕಡೆ ಓದಿದ್ದಿತ್ತು. ನಮ್ಮದೇ ಶಿರಾಡಿ ಘಾಟ್ ನಲ್ಲಿಯೂ ಈ ಭಯಾನಕ ಲೋಕವಿದೆಯೆಂದು ವಿವರವಾಗಿ ತಿಳಿಯಪಡಿಸಿದ್ದೀರಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: