ಅಳಿಯನ ತಳಕ್ಕೆ ಹೇಳಿಮಾಡಿಸಿದ ಮೆಟ್ಟುಗತ್ತಿ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡುನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಕಂಡರೆ- ‘ಒಂದು ಬುಟ್ಟಿ ಉರಿಗೆಂಡ ಅಪ್ಪಳಿಸಿ ಕೊಂದುಬಿಡಬೇಕು’ ಅಥವಾ ‘ಒಂದು ಕೊಳಗ ಸೊಣಗಿಪುಡಿ (ಗುಲಗಂಜಿ ತುರಿಕೆ ಪುಡಿ) ಸೋಕಿ ಅವನು ತೈ ತಕ ಕುಣಿಯುತ್ತ ತುರಿಸಿಕೊಳ್ಳುವುದನ್ನು ನಾನು ಹಾಯ್ ಎನಿಸಿಕೊಳ್ಳುತ್ತ ನೋಡಬೇಕು’ ಎಂಬಷ್ಟು ಹೇವರಿಕೆಯನ್ನು ನನ್ನಲ್ಲಿ ಹುಟ್ಟಿಸಿದ್ದ ಹೊಸಬಣ್ಣ ಮಾಸ್ತರ ಎಂದೂ ಎಲ್ಲೂ ನನ್ನ ಎದರಾಬದರಾ ಸಿಕ್ಕದವನು ಇಂದು ನಾನು ಕುಳಿತ ಸುಬ್ಬಾಚಾರಿ ಸಾಲೆಯ ಎತ್ತಿನಗಾಡಿ ಪಟ್ಟಿಕಟ್ಟುವ, ಕತ್ತಿ ಪಿಕಾಸು ಕೊಡಲಿ ಹಣಿಯುವ ಕುಲುಮೆಯಿರೋ ಜಾಗಕ್ಕೇ ನೇರ ಬಂದು ನನ್ನ ಕೈಲಿ ಸಿಕ್ಕಿಹಾಕಿಕೊಂಡು ಒಂದು ಕ್ಷಣ ತಬ್ಬಿಬ್ಬಾಗಿ ಪೆಕರು ನಗೆ ನಕ್ಕವನು ತಕ್ಷಣದಲ್ಲಿ ‘ಹೆಂಗಸರಿಗೆಲ್ಲ ಇಲ್ಲೆಂಥ ಕೆಲಸ..?’ ಎಂಬರ್ಥದ ಮುಖ ಮಾಡಿ ‘ಇಲ್ಲೆಲ್ಲಿ ಬಂದಿದ್ದೆ ನೀನು..?’ ಎಂಬಂತೆ ಹುಬ್ಬು ಹಾರಿಸಿದ. ಈ ಪ್ರಶ್ನಾರ್ಥಕ ಹುಬ್ಬಿಗೆಲ್ಲ ಉತ್ತರಕೊಡಲೇಬೇಕಾದಷ್ಟು ಸಾಚಾ ಮನುಷ್ಯನಲ್ಲ ಅಂವ.. ಹಾಗಾಗಿ ಅಲಕ್ಷವಹಿಸಿ ನಾನು ಸುಬ್ಬಾಚಾರಿ ಮಗನೊಂದಿಗೆ ಮತ್ತೆ ಮಾತು ಮುಂದುವರೆಸತೊಡಗಿದೆ.

ಮೊನ್ನೆ ಒಂದೇ ರಾತ್ರಿ ಈ ಆಚಾರಿಸಾಲೆಯ ಕನಸು ಬಿದ್ದಿದ್ದರೆ ನಾನು ಅಷ್ಟೇನೂ ಲಕ್ಷ್ಯ ಕೊಡದೇ ಸೈಡಿಗಿಟ್ಟುಬಿಡುತ್ತಿದ್ದೆನೋ ಏನೋ.. ಆದರೆ ಈಗೊಂದೆರಡು ತಿಂಗಳಿಂದ ಈ ಸಾಲೆ ಪದೇಪದೇ ಕನಸಿಗೆ ಬಂದು-ಗದ್ದೆ ಕೊಯ್ಲಿಗೆ ಕತ್ತಿಗೆ ಹಲ್ಲುಹಾಕಿಸಲು ಅಪ್ಪ ನಾನು ಇಬ್ಬರೂ ಹಾಳಿಕಂಟೆ ದಾಟುತ್ತ ಅವನ ಮನೆಗೆ ಹೋದ ಹಾಗೆ.. ಆಚಾರಿ “ಬರಿಬರಿ” ಎನ್ನುತ್ತ “ಪಟೇಲ್ರು ಬಂದ್ರು ಕಂಬಳಿ ಹಾಸೇ” ಎಂದು ಮನೆಯ ಹೆಂಗಸಿಗೆ ಹೇಳಿದ ಹಾಗೆ.. ಕಾರವಾರದ ಪ್ರೇಮಕ್ಕ ನಾನು ಹೋದಾಗ ಕೆಂಪು ಸಣ್ಣಸಣ್ಣ ಚಿಕ್ಕಿ ಹೂವಿನ ಅಂಗಿ ಅರಿವೆ ಕೊಟ್ಟದ್ದನ್ನು ನಾನು ಪ್ರಿಲ್ಲಿನ ಫ್ರಾಕು ಹೊಲೆಸಿಕೊಂಡು ಅಲ್ಲಿಗೆ ಹಾಕಿಕೊಂಡು ಹೋಗಿ ಕಂಬಳಿಯ ಮೇಲೆ ರೌಂಡಾಗಿ ಹರಡಿಸಿ ಕುಳಿತ ಹಾಗೆ..

ಆಚಾರಿಮನೆಯ ಚಿಳ್ಳೆಪಿಳ್ಳಿಗಳಿಗೆಲ್ಲ ಆಚಾರಿಯ ನಾಲ್ವರೂ ಸೊಸೆಯರು ಸಾಲಾಗಿ ಎರಡೂ ಬದಿಗೆ ಸರಸರ ಅಲ್ಯುಮಿನಿಯಮ್ ತಾಟು ಇಟ್ಟು ಅನ್ನ ಮೀನುಪಳದಿ ಬಡಿಸುತ್ತ ಹೋದಹಾಗೆ.. ಮತ್ತಿಷ್ಟು ಮತ್ತಿಷ್ಟು ಎಂದು ಹಸಿದ ಕೂಸುಗಳೆಲ್ಲ ಗೋಗರೆದ ಹಾಗೆ.. ಆಗುತ್ತಿತ್ತು.. ಮತ್ತು ಇವೆಲ್ಲ ಮೂವತ್ತು ವರ್ಷಕ್ಕೂ ಹಿಂದೆ ಹುಬೇಹೂಬು ನನ್ನ ಅನುಭವಕ್ಕೆ ಸಿಕ್ಕಿದ ವಿಷಯಗಳೇ ಆಗಿದ್ದವು.. ಸುಬ್ಬಾಚಾರಿ ಮತ್ತು ಅವನ ಹೆಂಡತಿ ಈಗಿಲ್ಲದಿದ್ದರೂ ಅವನ ಹಿರೇ ಮಗ-ಇತ್ತೀಚೆಗೆ ಬಹಳ ಹಣ್ಣಾದ ಗೋವಿಂದ ಮೀನುಪೇಟೆ ಅಥವಾ ಸಂತೆಯಲ್ಲಿ ಅಪರೂಪಕ್ಕೆ ಸಿಕ್ಕಿ ನಿಂತು “ತಂಗೀ ಅವ್ವಿ ಹೆಂಗೀದು..? ” ಕೇಳದೇ ಮುಂದೆ ಹೋಗುತ್ತಿರಲಿಲ್ಲ..

ಹೀಗೆ ಐದಾರು ಬಾರಿ ಕನಸಾದ ಮೇಲೆ ನನಗೆ ಆಚಾರಿಮನೆಗೆ ಸುಮ್ಮನೊಂದು ಸಂಜೆ ಹೋಗಿಬರದೇ ಸಮಾಧಾನವಿಲ್ಲ ಅನ್ನಿಸತೊಡಗಿತು.. ಅನ್ನಿಸತೊಡಗಿದ ಮೇಲೆ ಅವರ ಸಣ್ಣ ಮನೆಯ ಹಿಂದೆ ಇದ್ದ ಒಂದು ದೊಡ್ಡ ಬಕುಲದ ಮರ, ಅದರ ಹೂವುಹೆಕ್ಕಿ ಬಾರೀಕು ಸಿಗಿದ ತೆಂಗಿನ ಗರಿಗೆ ಪೋಣಿಸಿ ನಾವು ಶಾಲೆ ಮಕ್ಕಳೆಲ್ಲ ಸೇರಿ ಮಾಲೆ ಮಾಡುತ್ತಿದ್ದುದು, ಉದುರಿದ ಅದರ ಮದರಗಾಯಿ ಕಿಶೆಯಲ್ಲಿಟ್ಟುಕೊಂಡು ತಿಂದು ಹಲ್ಲಿಗೆಲ್ಲ ಒಗಚಾಗುತ್ತಿದ್ದುದು, ಬೋನ್ಸಾಯ್ ತರಹದ ಬಿಂಬಲಿಮರದ ಕಾಂಡಕ್ಕೆ ಗೆಜ್ಜೆಯ ಹಾಗೆ ಹಿಡಿಯುತ್ತಿದ್ದ ಕಾಯಿಯ ಮಿಡಿಮಿಡಿಗಳನ್ನೆಲ್ಲ ಹರಿದು ತಿನ್ನುತ್ತಿದ್ದುದು, ಅವನ ಮನೆ ದಾರಿಯಲ್ಲೇ ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಚಕ್ಕಡಿಗಾಡಿಯ ಹಿಂದಿನ ಮೋಕಿನ ಮೇಲೆ ಮುಂದಿನ ಗಾಡಿ ಓಡಿಸುವವನಿಗೆ ಗೊತ್ತಾಗದಂತೆ ಹಾರಿ ಕುಳಿತು ಓ ಅಲ್ಲಿವರೆಗೆ ಹೋಗಿ ಸದ್ದಾಗದಂತೆ ಗುದುಕಿ ಹಿಂದಿಂದ ಓಡಿಬರುತ್ತಿದ್ದುದು ಎಲ್ಲ ನೆನಪಾಗಿ ಒಂದು ನಮೂನೆ ಉಮೇದಿಯಾಗತೊಡಗಿತು.

ಗೋವಿಂದ ಮತ್ತು ಆತನ ತಮ್ಮಂದಿರ ಮಕ್ಕಳೆಲ್ಲ ಮದುವೆಯಾಗಿ ಅವರ ಮಕ್ಕಳೂ ಈಗ ತಲೆಸೇರಿ ಬಂದಿದ್ದರು.. ಆಗಿದ್ದ ಮನೆಯ ಸುತ್ತಲೂ ಮತ್ತೀಗ ಸಣ್ಣ ಸಣ್ಣ ಮನೆ ಎದ್ದಿದ್ದವು. ‘ಈ ಕಮ್ಮಾರಿಕೆ ನೆಚ್ಚಿಕೊಂಡ್ರೆ ಹೊಟ್ಟೆಗೆ ಅನ್ನ ಸಿಕ್ಕಿದ ಹಾಗೇಯಾ..’ಎಂದುಕೊಂಡು ಹೊಟ್ಟೆ ಸಲುವಾಗಿ ರಿಕ್ಷಾ, ಟೆಂಪೋ, ಬಾಡಿಗೆ ಟ್ಯಾಕ್ಸಿ ಮಾಡಿಕೊಂಡಿದ್ದರು.. ಟೇಲರಕಿ ಕಲಿತು ಶಾಲೆ ಮಕ್ಕಳಿಗೆ ಯುನಿಫಾರಂ ಹೊಲಿಯುವ ದಿನಮಾನದಲ್ಲಿ ಸಣ್ಣಗೂಡಂಗಡಿಯಲ್ಲಿ ಹಗಲೂ ರಾತ್ರಿ ಹೊಲಿಗೆ ಮಷಿನ್ ತುಳಿಯುತ್ತಿದ್ದರು.. ಬಡಿಗತನ ಕಲಿತು ಅವರಿವರ ಜೊತೆ ಮನೆ ಮಾಲು ಮಾಡುವ ಸಹಾಯಕರಾಗಿ ಬೆಳಿಗ್ಗೆ ಚೆಲ್ಲಾಪಿಲ್ಲಿಯಾಗಿ ಹೋದವರು ರಾತ್ರಿ ಗೂಡು ಸೇರುತ್ತಿದ್ದರು.. ಬಕುಲದ ಮರ ಮತ್ತು ಬಿಂಬಲಿ ಮರ ಎರಡೂ ಕಾಣೆಯಾಗಿದ್ದವು.

ಈಗೊಂದು ಐದಾರು ವರ್ಷದ ಹಿಂದಿನವರೆಗೂ ಮನೆಕಟ್ಟಲು ಬಳಸುವ ಅತ್ಯುತ್ತಮ ಗುಣಮಟ್ಟದ ಮುರಕಲ್ಲು ಅಥವಾ ಚೀರೇಕಲ್ಲುಗಳಿಗಾಗಿ ಸುತ್ತಲಿನ ಐದಾರು ತಾಲೂಕಿನವರು ನಿರಂತರವಾಗಿ ಅಂಕೋಲೆಗೆ ಎಡತಾಕುವುದು ಅಥವಾ ಇಲ್ಲಿನ ಕಲ್ಲಿನ ಏಜೆಂಟರುಗಳ, ಕಣಿ ಮಾಲಕರ ಮೊಬೈಲುಗಳು ಖಾಯಂ ಹದಿನಾರು ತಾಸು ಕಲ್ಲಿಗಾಗಿ ಹೊಡೆದುಕೊಳ್ಳುವುದು ಮಾಮೂಲಾಗಿತ್ತು.

ಕಲ್ಲರೆಯ ಜಾಗದ ಮೂರು ನಾಲ್ಕು ಊರುಗಳಲ್ಲಿ ಮಾತ್ರ ಈ ಗಟ್ಟಿಕಲ್ಲು ಸಿಗುತ್ತಿತ್ತು. ಸ್ವಂತ ಕಲ್ಲುಬೇಣ ಇದ್ದವರು ಅಥವಾ ಇಂತಹ ಜಾಗವನ್ನು ಕೊಂಡುಕೊಂಡವರು ಮಾತ್ರ ಒಂದೆರಡು ಪವರ್‌ಟಿಲ್ಲರ್ ಇಟ್ಟುಕೊಂಡು ಅದಕ್ಕೆ ಕಲ್ಲುಕಟೆಯುವ ಸುದರ್ಶನ ಚಕ್ರದಾಕೃತಿಯ ದೊಡ್ಡ ಬ್ಲೇಡು ಸಿಕ್ಕಿಸಿ ಕಲ್ಲುಕಣಿ ಮಾಡುತ್ತಿದ್ದರು. ಮೇಲಿನ ಒಂದು ಅಥವಾ ಅರ್ಧ ಫೂಟ್ ಮಣ್ಣು ತೆಗೆದ ಮೇಲೆ ಕೆಳಗೆ ನಲವತ್ತು ಐವತ್ತು ಹಾಸಿನವರೆಗೂ ಈ ಕಲ್ಲು ಸಿಗುತ್ತಿತ್ತು.. ಸಾವಿರಾರು ಲಾರಿಗಳು ಕಲ್ಲುತುಂಬಿಕೊಂಡು ತಾಲೂಕಿನ ಎಂಟೂದಿಕ್ಕಿಗೆ ಪ್ರಯಾಣಿಸಿ ಹಮಾಲರನ್ನು ಹೊತ್ತು ದಿನವೂ ನಾಲ್ಕೈದು ಟ್ರಿಪ್ಪು ಓಡಾಡುತ್ತಿದ್ದವು.

ಈಗ ಸ್ವಂತ ಜಾಗದಲ್ಲಿ ಕೂಡ ಕಲ್ಲು ಖಣಿ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ-ಕಾಯಿದೆ ಕಾನೂನು ಬಿಗಿ ಮಾಡಿದ ಮೇಲೆ ಊರಿನ ನಾಲ್ಕೂ ದಿಕ್ಕಿನಲ್ಲಿ ಹಗಲೂ ರಾತ್ರಿ ಮೊರೆಯುತ್ತಿದ್ದ ಪವರ್‌ಟಿಲ್ಲರುಗಳ ಅವಾಜು ಬಂದ್ ಆಗಿದೆ. ಈ ವಿಷಯ ಯಾಕೆ ಹೇಳುತ್ತಿದ್ದೇನೆಂದರೆ ಪವರ್‌ಟಿಲ್ಲರಿಗೂ ಮೊದಲು ಕೈ ಮಚ್ಚಿನಿಂದ ಕಲ್ಲು ಕಡೆದು, ಹಾರೆ ಪಿಕಾಸಿಯಿಂದ ಕಲ್ಲು ಏಳಿಸುವ ಕಾಲ.. ಆಗ ಊರಿಗೊಂದು ಇರುವ ಕಮ್ಮಾರಸಾಲೆಗೆ ಬಿಡುವಿಲ್ಲದ ಕುಲುಮೆ ಕೆಲಸ.. ದಿನ ದಿನವೂ ಮಚ್ಚು ಕಾಸಿ ಹರಿತ ಮಾಡದಿದ್ದರೆ ಮರುದಿನ ಅದರಲ್ಲಿ ಕಲ್ಲು ಕಡೆಯಲಾಗದು.. ಸಾಲೆ ಮುಂದೆ ಮಚ್ಚು ಪಿಕಾಸುಗಳ ಸಾಲೇ ಸಾಲು.. ಸುಬ್ಬಾಚಾರಿಯ ನಾಲ್ಕೂ ಸೊಸೆಯರಂತೂ ದಿನ ಬೆಳಗಾದರೆ ಕುಲುಮೆಯ ಇದ್ದಲಿಗಾಗಿ ಒಂದು ದೊಡ್ಡ ಗೋಣಿ ಮಡಚಿ ತಲೆಗಿಟ್ಟುಕೊಂಡು ಹತ್ತಿರದ ಬೆಟ್ಟಕ್ಕೆ ಹಾದಿ ಹಿಡಿದುಬಿಡುತ್ತಿದ್ದರು..

ನಮ್ಮೂರ ಬೆಟ್ಟಗಳಲ್ಲಿ ದೊಡ್ಡ ದೊಡ್ಡ ಮರಗಳೆಲ್ಲ ಮಳೆಗಾಳಿಗೆ ಅಥವಾ ಹುಳ ಹೊಡೆದು ಲಡ್ಡಾಗಿ ಕೆಳಗೆ ಬಿದ್ದರೆ ಅದರ ಕೊಂಬೆ ಕವೆಗಳನ್ನೆಲ್ಲ ತಲೆಹೊರೆಯ ಸೌದೆಯವರು ಫಾರೆಸ್ಟಿನವರ ಕಣ್ಣು ತಪ್ಪಿಸಿ ಒಯ್ಯುತ್ತಾರೆ.. ಒಳ್ಳೆಯ ಸಾಗವಾನಿ, ಸೀಸಂ ಜಾತಿ ಮರವಾಗಿದ್ದರೆ ಮಾತ್ರ ಅರಣ್ಯ ಇಲಾಖೆ ಅದರ ದಪ್ಪ ದಿಮ್ಮಿಯನ್ನು ಡಿಪೋಗಳಿಗೆ ಸಾಗಿಸುತ್ತದೆ. ಬಿಟ್ಟರೆ ಹೀಗೆ ಬಿದ್ದ ಸಾದಾ ಜಾತಿಯ ಮರಗಳೆಲ್ಲ ಬಿದ್ದಲ್ಲೇ ಒರಲೆ ತಿಂದೋ ಮಳೆ ಗಾಳಿಗೆ ನವೆದೋ ಮಣ್ಣಾಗುತ್ತವೆ. ಇಂತಹ ಜೀರ್ಣವಾಗುತ್ತ ಬಂದ, ಹೊಟ್ಟೆ ಓಡು ಜಳಜಳ ಆಗುತ್ತ ಬಂದ ದಿಮ್ಮಿಗಳನ್ನು ಹುಡುಕಿ ಈ ಹೆಂಗಸರು ಬೆಂಕಿಕೊಡುತ್ತಾರೆ. ಕೊಟ್ಟ ಬೆಂಕಿ ದೊಡ್ಡದಾಗಿ ಜ್ವಲಿಸಿ ಸುತ್ತಮುತ್ತಲಿನ ಮರಕ್ಕೆ ಹಾನಿ ಮಾಡದ ಹಾಗೆ, ಮತ್ತು ಉರಿದು ಬೂದಿಯ ಸ್ಥಿತಿಗೆ ಬರದ ಹಾಗೆ ಒಂದಿಷ್ಟು ಸುತ್ತಮುತ್ತಲಿನ ಹುಡಿಮಣ್ಣು ಒಟ್ಟಾಗಿಸಿಕೊಂಡು ಸೋಕುತ್ತಲೇ ಇರುವ ಇವರು ಮರ ಹದಾ ಸುಟ್ಟು ಕೆಂಡದ ರೂಪಕ್ಕೆ ಬಂದ ಮೇಲೆ ಇನ್ನಷ್ಟು ಮಣ್ಣು ಮುಚ್ಚಿ ಅದನ್ನು ಇದ್ದಲಿಯಾಗಲು ಬಿಡುತ್ತಾರೆ.. ಇಷ್ಟು ಮಾಡಿದ ಮೇಲೆ ಹಿಂದಿನದಿನ ಬೇರೆಕಡೆ ಮಾಡಿಟ್ಟು ಹೋದ ತಣಿದ ಇದ್ದಲಿಯನ್ನು ಇಂದು ಗೋಣಿ ತುಂಬಿ ಮನೆಗೆ ತರುತ್ತಾರೆ. ಇಂದು ಮುಚ್ಚಿಟ್ಟದ್ದನ್ನು ತರುವುದು ನಾಳೆಗೆ ಅಥವಾ ಸಂಜೆಗೆ.. ಈ ಕೆಲಸದಲ್ಲಿ ಅವರೆಷ್ಟು ಕುಶಲಮತಿಗಳು ಎಂದರೆ ಒಮ್ಮೆಯೂ ಇವರ ಅಜಾಗರೂಕತೆಯಿಂದ ಬೆಟ್ಟದಲ್ಲಿ ಬೆಂಕಿ ಸುತ್ತಮುತ್ತ ಹರಡಿದ್ದು, ಇನ್ನೊಂದು ಮರಕ್ಕೆ ತಗುಲಿದ್ದು ನಾನು ಇದುವರೆಗೆ ಕೇಳಿದ್ದಿಲ್ಲ..

ಈಗ ಅರಣ್ಯ ಇಲಾಖೆಯ ಕಾನೂನು ಇನ್ನಷ್ಟು ಬಿಗಿಯಾಗಿ ಸಿಕ್ಕಿಬಿದ್ದರೆ ದೊಡ್ಡಮೊತ್ತದ ದಂಡ ಹಾಕುತ್ತಾರೆ.. ಗರಿಗರಿ ನೋಟೆಣಿಸಿ ದೊಡ್ಡಕುಳಗಳೆಲ್ಲ ತಪ್ಪಿಸಿಕೊಂಡ ಹಾಗೆ ಅಲ್ಲ ಈ ಸಂಚಿಯಲ್ಲಿ ಎಂಟಾಣೆ ಇಲ್ಲದ ಇದ್ದಿಲಿನವರು ತಪ್ಪಿಸಿಕೊಳ್ಳುವುದು.. ಹಾಗಾಗಿ ಇದ್ದಿಲು ಮಾಡುವುದು ಇತ್ತೀಚೆಗೆ ಇಲ್ಲವೇ ಇಲ್ಲವಾಗಿ ಅಂಕೋಲೆಯಿಂದ ಅಣಶಿ, ಶಿರಸಿ, ಸಿದ್ಧಾಪುರ, ಯಲ್ಲಾಪುರ ಮಾರ್ಗವಾಗಿ ಹೋಗುವಾಗ ರಸ್ತೆಯ ಇಕ್ಕೆಲಗಳ ಬೆಟ್ಟಗಳಲ್ಲಿ ಜೀರ್ಣವಾಗುತ್ತಿರುವ ಮರದ ಕಾಂಡಗಳು ಕಾಣಿಸಿದರೆ ನನಗೆ ನಮ್ಮೂರ ಸುಬ್ಬಾಚಾರಿ ಮನೆಯ ಹೆಂಗಸರು ನೆನಪಿಗೆ ಬರುತ್ತಾರೆ. ಅಯ್ಯೋ ಸುಳ್ಳೇ ಹಾಳಾಗ್ತಿವೆ.. ಅವರಿಗಾದ್ರೂ ಆಗ್ತಿತ್ತಲ್ಲ ಅನಿಸುತ್ತದೆ.

“ತಂಗೀ.. ಆಗ ಮನೆಗೊಂದು ಎತ್ತಿನಗಾಡಿ. ಎಲ್ರೂ ವರ್ಷಕ್ಕೊಮ್ಮೆ ಗಾಡಿಗಾಲಿಗೆ ಕಬ್ಣಪಟ್ಟಿ ಕಟ್ಟಿಸೂಕೆ ಇಲ್ಲಿಗೆ ಬರ್ತಿದ್ರು.. ಖಾಯಂ ಕೆಲ್ಸಿರ್ತಿತ್ತು.. ಈಗೆಲ್ಲಿದೆ ಗಾಡಿ..? ಗದ್ದೆಕೆಲ್ಸಕ್ಕೆ ಕತ್ತಿ, ಕುಟಾರಿ, ಪಿಕಾಸು, ಬಾಚಿ, ಪಾಳಿ ಕಾಸಲೂ ತಕಂಡು ಬರ್ತಿದ್ರು.. ಆಗೆಲ್ಲ ಹತಾರದ ಕೆಲಸ ಹೆಚ್ಚಿತ್ತು.. ಕಲ್ಲು ಕಣಿ ಕೆಲ್ಸದ ಹತಾರವೂ ಭಾಳ ಇರ್ತಿತ್ತು.. ದುಡ್ಡು ಕಡಿಮೆ ಕೊಟ್ರೂ ‘ತೆನಿ ತೆನಿ ಸೇರಿ ಬಳ್ಳ’ ಅಂತರಲ್ಲ.. ಹಾಂಗೇ ಏನೋ ಜೀವನೋಪಾಯ ಸಾಗ್ತಿತ್ತು.. ಇದು ನಮ್ಮ ಜಾತಿಮೇಲಿನ ಕುಲಕಸ್ಬು ಅಂತೇಳಿ ಎಷ್ಟೇ ಕಷ್ಟ ಇದ್ರು ಮಾಡ್ಕಂಡು ಹೋದೆವು ನಾನು ಮತ್ತು ನಮ್ಮಪ್ಪ.. ಈಗಿನ ಮಕ್ಳು ಎಲ್ಲಿ ಕೇಳ್ತರೆ..? ಲಾಭವೂ ಇಲ್ಲ ಅನ್ನು.. ತಿದಿಗೆ ಹಾಕಲು ಇಜ್ಜಲೂ ಸಿಗುದಿಲ್ಲ ಈಗ.. ಬೆಟ್ಟ ಬಿಟ್ಟ ಮೇಲೆ ಮದುವೆ ಛತ್ರಕ್ಕೆ, ಹಾಸ್ಟೆಲ್ಲಿಗೆ, ಹೊಟೇಲಿಗೆ ಹೋಗಿ ಇದ್ದಲು ತರ್ತಿದ್ದೆವು.. ಅವ್ರೂ ಈಗ ಗ್ಯಾಸ್ ಸಿಲೆಂಡರ್ ಬಳಸಿ ಅಡುಗೆ ಮಾಡ್ತಾರೆ. ನಮಗೆಲ್ಲಿ ಸಿಗ್ತದೆ ಸೌದೆಮಸಿ..? ಈಗ ಗೆರಟೆ ತಗೊಳ್ತೇವೆ ದೊಡ್ಡ ದೊಡ್ಡ ಅಡುಗೆ ಮಾಡುವಲ್ಲಿಗೆ ಹೋಗಿ.. ಗೆರಟೆ ಬೆಂಕಿ ಬರೀ ಪುರ್ ಪುರ್.. ಉರಿದೇ ಹೋಗ್ತದೆ ಬ್ಯಾಗೆ.. ಗೆರಟೆಯನ್ನು ಮನೆಗೆ ತಂದ ಮೇಲೆ ಕುಟ್ಟಿ ಸಣ್ಣ ಮಾಡ್ಬೇಕು ಬ್ಯಾರೆ.

ಮೊದಲು ಹತ್ತು ರೂಪಾಯಿಗೆ ನೂರು ಗೆರಟೆ ಸಿಗ್ತಿತ್ತು.. ಈಗ ನಲ್ವತ್ತು ರೂಪಾಯಿ. ಈಗ ಹತಾರ ಕಾಸೂಕೆ ಜನ ಬರೂದೂ ಕಮ್ಮಿಯಾಗಿದೆ ಬಿಡು”- ಗೋವಿಂದಣ್ಣ ಹೇಳುವಾಗ ನಾನು ಆಗೆಲ್ಲ ತಿದಿಯ ಬೆಂಕಿಗೆ ಕಾಸಿದ ಕಬ್ಬಿಣದ ಹಲಗೆಯ ಹಾಗೆ ಕೆಂಪಗೆ ಹೊಳೆಯುತ್ತಿದ್ದ ಅವನ ಎದೆ ಬೆನ್ನುಗಳೆಲ್ಲ ಈಗ ಅರವತ್ತೆಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಬೆಂಕಿಯ ಕಾವಿಗೆ ಬೆಂದ ಮೇಲೆ ಭತ್ತ ಬಡಿಯುವ ಬಿದಿರ ಚಿಬ್ಬಲಿ(ತಟ್ಟಿ)ಯಂತೆ ಒಳಗಿನ ಚಿಪ್ಪೆಲ್ಲ ಎದ್ದು ಗೂಡಾಗಿರುವುದನ್ನು ನೋಡುತ್ತ, ಅವನ ಮಾತನ್ನು ಕೇಳುತ್ತ ಕುಳಿತಿದ್ದೆ. 

ಆಧುನಿಕ ಜಗತ್ತಿನಲ್ಲಿ ಯಾಂತ್ರಿಕ ಪ್ರಗತಿಯಾದಂತೆಲ್ಲ ಎಲ್ಲಾ ಮೂಲ ಕಸಬಿಗೂ ಧಕ್ಕೆಯಾಗಿದೆ.. ಕಬ್ಬಿಣವನ್ನು ಕಾಯಿಸಲು ಯಾಂತ್ರಿಕ ಸೌಲಭ್ಯಗಳು ಬಂದು ತಿದಿಯೊತ್ತುವ ಕೆಲಸ ನೋಡಲೂ ಸಿಗದಾಗಿದೆ.. ಮೊದಲೆಲ್ಲ ಒಬ್ಬರು ತಿದಿಯೊತ್ತಿದರೆ ಇನ್ನೊಬ್ಬರು ಇಕ್ಕಳದಿಂದ ಕಾದ ಕಬ್ಬಿಣವನ್ನು ಅಡಿಗಲ್ಲಿನ ಮೇಲೆ ಇಡುತ್ತಿದ್ದರು. ಮತ್ತೊಬ್ಬರು ಗೂಡ ಅಥವಾ ಸುತ್ತಿಗೆಯಿಂದ ಬಡಿಯುತ್ತಿದ್ದರು ಈಗ ಬಂದ ವಿದ್ಯುತ್ಚಾಲಿತ ಯಂತ್ರ ಎಷ್ಟು ಗಾಳಿ ಬೇಕೋ ಅಷ್ಟನ್ನು ಯಾವ ಒತ್ತಡದಲ್ಲಿರಬೇಕೋ ಅಷ್ಟು ಸರಬರಾಜು ಮಾಡುತ್ತದೆ. ಇದ್ದಲಿಗೆ ಬದಲು ಕೋಕ್, ಕಲ್ಲಿದ್ದಲು ಮುಂತಾದ ಇಂಧನಗಳು ಬಳಕೆಗೆ ಬಂದಿವೆ.

ಮಾನವ ಶಕ್ತಿಯಿಂದ ಬಡಿದು ಸಿದ್ಧಪಡಿಸುವ ಕೆಲಸವನ್ನು ಯಂತ್ರಗಳೇ ಮಾಡತೊಡಗಿವೆ. ದೊಡ್ಡ ದೊಡ್ಡ ಕೊಂತಗಳಿಗೆ ಸೇರಿಸಿದ ಲೋಹಗಟ್ಟಿಗಳು ಮೇಲೆ ಕೆಳಗೆ ಚಲಿಸುತ್ತ ಇದ್ದು ಬೇಕೆಂದಾಗ ಕುಟ್ಟುತ್ತವೆ. ಒಬ್ಬ ಕೆಲಸಗಾರಮಾತ್ರ ಕುಳಿತು, ನಿಂತು ಸಾಮಗ್ರಿಯನ್ನು ಹೇಗೆ ರೂಪಿಸಬೇಕೋ ಹಾಗೆ ನೋಡಿಕೊಂಡರಾಯಿತು. ಕಾಯಿಸಿದ ವಸ್ತುವನ್ನು ಕೆಳಭಾಗದ ಅಚ್ಚಿನ ಮನೆಯೊಳಗಿಟ್ಟು ಮೇಲಿನಿಂದ ತೂಕದ ಗಟ್ಟಿಯನ್ನು ಎತ್ತರದಿಂದ ಬಿಡುವುದು ಒಂದು ವಿಧವಾದರೆ, ಎರಡೂ ಭಾಗಗಳನ್ನು ಒಂದರ ಮೇಲೊಂದನ್ನಿಟ್ಟು ಬಲವಾಗಿ ಒತ್ತುವುದು ಇನ್ನೊಂದು ವಿಧ.

ನೂರು ಜನರು ಮಾಡುವ ಕೆಲಸವನ್ನು ಒಂದೇ ಮಾಡಬಹುದಾದಾಗ ಅಷ್ಟು ಜನರಿಗೂ ನಿರುದ್ಯೋಗ ಕಟ್ಟಿಟ್ಟಿದ್ದೆ. ಆದ್ದರಿಂದಲೇ ಯಂತ್ರಗಳು ಆಧುನಿಕ ಜಗತ್ತಿನ ಒಂದು ಶಾಪ ಅಂತಾನೂ ಹೇಳುವುದು.. ಆದರೆ ಇವೆಲ್ಲವನ್ನು ಕೊಳ್ಳಲು ಸರ್ಕಾರದಿಂದ ಕೂಡ ತಮಗೆ ಯಾವ ಸೌಲಭ್ಯ ಇಲ್ಲ.ಸಾಲಸೋಲ ಮಾಡಿ ಕೊಂಡರೂ ಊರುಕೇರಿಗಳಲ್ಲಿ ಈಗ ಮಣ್ಣುಕೆರೆಯಲೂ ಜೇಸಿಬಿ ಕಂಪ್ರೆಸ್ಸರ್ರುಗಳು ಬಂದ ಮೇಲೆ… ಕಂತೆಗೆ ತಕ್ಕ ಬೊಂತೆ ಕೆಲಸ ಸಿಗದೇ ಇದ್ರೆ ಮಾಡಿಕೊಂಡ ಸಾಲ ತೀರಿಸಲಾಗದೇ ನೇಣು ಹಾಕಿಕೊಳ್ಳೂದಕಿಂತ ಈ ಕುಟುಕುಟು ಕೆಲ್ಸನೇ ಎಷ್ಟೋ ವಾಸಿ ಬಿಡು..ಆದ್ರೆ ಮಾಡೂದು..ಇಲ್ಲಾ ಮುಚ್ಚ್‌ಹಾಕಂಡು ಮನೀಕಣೂದು..ಮಕ್ಕಳೆಲ್ಲ ಹ್ಯಾಗೂ ಅವರವರ ದಾರಿ ನೋಡಿಕೊಂಡಿದ್ದಾರೆ..ಇದರಿಂದೇ ಹೊಟ್ಟೆತುಂಬಬೇಕು ಎಂಬ ಆಶೆ, ಗುರಿ ಎರಡೂ ಬಿಟ್ಟಾಗಿದೆ ನಾವು….

| ಮುಂದಿನ ಸಂಚಿಕೆಯಲ್ಲಿ |

December 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This