ಶೂ/ಚಪ್ಪಲಿ ಎಸೆಯುವವರಿಗೊಂದು ಕೈಪಿಡಿ

-ಸಂದೀಪ್ ಕಾಮತ್
  ಕಡಲತೀರ  
shoes1_350_x_352
 
 
 
 
 
 
 
 
 
 
 
 
ಒಂದು ಬಾರಿ ತಪ್ಪಾದರೆ ಕ್ಷಮಿಸಬಹುದು ,ಎರಡನೆಯ ಬಾರಿ ತಪ್ಪಾದರೆ ಅದು ಕ್ಷಮಿಸಲರ್ಹವಲ್ಲ .ಆದರೆ ಈಗ ಮೂರನೆಯ ಬಾರಿ ತಪ್ಪಾಗಿದೆ ಛೇ… ಏನಿದು !
ಮೊದಲನೆಯ ಬಾರಿ ಜಾರ್ಜ್ ಬುಷ್ ತಪ್ಪಿಸಿಕೊಂಡರು ,ಎರಡನೆಯ ಬಾರಿ ಚಿದಂಬರಂ ಗುರಿ ತಪ್ಪಿತು ,ಈಗ ಜಿಂದಾಲ್ ಕೂಡಾ ತಪ್ಪಿಸಿಕೊಂಡರು ! ಇದರ ಅರ್ಥ ಇಷ್ಟೇ ,ಶೂ ಎಸೆಯುವವರಿಗೆ ತರಬೇತಿ ಸರಿಯಾಗಿ ದೊರೆತಿಲ್ಲ.
ಅದಕ್ಕೋಸ್ಕರವೇ ಶೂ/ಚಪ್ಪಲಿ ಎಸೆಯುವವರಿಗೆ ಒಂದು ಕೈಪಿಡಿ ತಯಾರಿಸುವ ಆಲೋಚನೆ ಇದೆ.ಇದು ಸಕ್ಸೆಸ್ ಆದರೆ ಶೂ ಎಸೆಯುವ ತರಬೇತಿ ಕೇಂದ್ರವನ್ನು ತೆರೆಯುವ ಆಲೋಚನೆಯೂ ಇದೆ.ಯಾವುದಕ್ಕೂ ಮುಂದೆ ನೋಡೋಣ.
ಶೂ ಎಸೆಯಲು ಸರಿಯಾದ ತರಬೆತಿ ಪಡೆಯಬೇಕು.ಅದಕ್ಕೋಸ್ಕರವೇ ಮನೆಯಲ್ಲಿ ವ್ಯಕ್ತಿಯ ಕಾರ್ಡ್ ಬೋರ್ಡ್ ಪ್ರತಿಕೃತಿಯನ್ನು ತಯಾರಿಸಿ ಪ್ರಾಕ್ಟಿಸ್ ಮಾಡಬೇಕು.ಪ್ರತಿಕೃತಿ ಖುರ್ಚಿಯ ಮೇಲೆ ಕುಳಿತಿರುವ ಹಾಗೆ ತಯಾರಿಸಿದ್ದರೆ ಒಳ್ಳೆಯದು.ಯಾಕಂದ್ರೆ ನೀವು ನಿಂತಿರುವ ಪ್ರತಿಕೃತಿಯ ಮೇಲೆ ಶೂ ಎಸೆದು ಅಭ್ಯಾಸ ಮಾಡಿದ್ದು ,ಆ ವ್ಯಕ್ತಿ ಸಭೆಯಲ್ಲಿ ಕುರ್ಚಿಯಲ್ಲಿ ಕೂತಿದ್ದರೆ ನಿಮ್ಮ ಗುರಿ ತಪ್ಪೋದು ನಿಸ್ಸಂಶಯ.
ಇನ್ನೊಂದು ಒಂದು ಮುಖ್ಯ ವಿಚಾರ , ಯಾರ ಮೇಲೆ ಶೂ ಎಸೆಯುತ್ತೇವೆ ಅನ್ನೋದನ್ನು ಮೊದಲೇ ನಿರ್ಧರಿಸಬೇಕು.ಸಭೆಗೆ ಹೋದ ಮೇಲೆ ಅಲ್ಲಿ ನಿರ್ಧರಿಸಿ ಆಮೇಲೆ ಶೂ ಎಸೆಯೋದು ಮೂರ್ಖತನ.ಇಂಥ ದುಡುಕಿನ ನಿರ್ಧಾರ ತಗೊಂಡಲ್ಲಿ ನೀವು ಖಂಡಿತ ಜಯಶಾಲಿಯಾಗೋದಿಲ್ಲ ನೆನಪಿರಲಿ.
S.S.L.C ಪರೀಕ್ಷೆ ಬರೆಯುವ ಹುಡುಗನಿಗೆ ಇರಬೇಕಾದಷ್ಟೇ ಶೃದ್ಧೆ ಇಲ್ಲೂ ಇರಬೇಕು .ಇಂಥ ದೃಢ ಮನಸ್ಸಿಲ್ಲದವರು ಇಂಥ ಕೆಲಸಕ್ಕೆ ಕೈ ಹಾಕಬೇಡಿ ಪ್ಲೀಸ್.
ಶೂ ಯಾರ ಮೇಲೆ ಎಸೆಯಬೇಕು ಅನ್ನೋದನ್ನು ನಿರ್ಧರಿಸಿದ ಮೇಲೆ ಆ ವ್ಯಕ್ತಿ ಸಭೆಯಲ್ಲಿ ಯಾವ ಖುರ್ಚಿಯಲ್ಲಿ ಕೂತಿರುತ್ತಾರೆ ಅನ್ನೋದೂ ಮುಖ್ಯ ಆಗುತ್ತೆ.ಆದರೆ ಇಲ್ಲೊಂದು ಸಮಸ್ಯೆ ಇದೆ.ಅವರು ಎಲ್ಲಿ ಕೂರುತ್ತಾರೆ ಅನ್ನೋದು ಕೊನೆ ಘಳಿಗೆಯಲ್ಲಿ ನಿರ್ಧಾರವಾಗುವ ಸಾಧ್ಯತೆಗಳೇ ಹೆಚ್ಚು.ಹಾಗಾಗಿ ಆ ಗಣ್ಯರು ’ಎಲ್ಲೇ ’ ಕೂತರೂ ನಮ್ಮ ಗುರಿ ತಪ್ಪದ ಹಾಗೆ ನಾವು ಮೊದಲೇ ಅಭ್ಯಾಸ ಮಾಡಿರಬೇಕು.
ಈಗ ಶೂ ಅಥವಾ ಚಪ್ಪಲಿ ಆಯ್ಕೆಯ ಬಗ್ಗೆ ತಿಳಿದುಕೊಳ್ಳೋಣ.
ಶೂ/ಚಪ್ಪಲಿಯ ಗುಣ ಮಟ್ಟ ಯಾರ ಮೇಲೆ ಎಸೆಯಲ್ಲಿದ್ದೇವೆ ಅನ್ನೋದರ ಮೇಲೆ ನಿರ್ಧರಿತವಾಗಿದೆ.ಅತಿ ಗಣ್ಯರ ಮೇಲೆ ತುಂಬಾ ಕಡಿಮೆ ಬೆಲೆಯ,ದುರ್ವಾಸನೆ ಉಳ್ಳ ಶೂ ಎಸೆಯೋದು ಮಾನವೀಯತೆ ಅಲ್ಲ.ಇದಕ್ಕೋಸ್ಕರ ಕೊನೆ ಪಕ್ಷ ಉತ್ತಮ ಗುಣಮಟ್ಟದ ಬಾಟ ದಂಥ ಶೂ/ಚಪ್ಪಲಿ ಎಸೆಯೋದು ಜಾಣತನ.(ನನಗೆ ಬಾಟಾ ಕಂಪೆನಿಯವರು ಕಮಿಷನ್ ನೀಡುತ್ತಾರೆ ಅನ್ನೋದು ನಿಮ್ಮ ಕಲ್ಪನೆಯಾದರೆ ಅದು ಮೂರ್ಖತನ!)
ಎಸೆಯಲು ಶೂ ಅನ್ನು ಆಯ್ಕೆ ಮಾಡಿದ್ದರೆ ನೀವು ಅದರ ಲೇಸ್ ಹಾಕಲೇ ಬಾರದು.ಎಸೆಯುವ ಸಮಯ ಬಂದಾಗ ನೀವು ಲೇಸ್ ಬಿಚ್ಚುತ್ತಾ ಕೂತರೆ ಅಕ್ಕ-ಪಕ್ಕದವರಿಗೆ ಸಂಶಯ ಬರೋದು ಖಚಿತ.ಹಾಗಾಗಿ ಲೇಸ್ ಹಾಕದೆ ಕೂತಿರಬೇಕು.ಆದಷ್ಟೂ ಲೂಸ್ ಆಗಿರುವ ಶೂ ಧರಿಸಿರಿ ಇಲ್ಲಾಂದ್ರೆ ಕಾಲಿನಿಂದ ತೆಗೆಯಲು ನೀವು ತಿಣುಕಾಡಬಹುದು.
ನೀವು ಒಂದು ಪಾಲಿಥೀನ್ ಬ್ಯಾಗ್ ನಲ್ಲಿ ಇನ್ನೊಂದು ಜೋಡಿ ಚಪ್ಪಲಿ ಒಯ್ಯೋದು ಸೂಕ್ತ.ಯಾಕಂದ್ರೆ ನೀವು ಎಸೆದಿರುವ ಶೂ ಅನ್ನು ನಿಮಗೆ ಮತ್ತೆ ವಾಪಾಸ್ ಕೊಡಲಾಗೋದಿಲ್ಲ .ಹಾಗಾಗಿ ನೀವು ಪೋಲಿಸ್ ಸ್ಟೇಶನ್ ಗೆ ಚಪ್ಪಲಿ ಇಲ್ಲದೆ ಹೋಗಬೇಕಾಗುತ್ತೆ.ಇಈಗ ಬೇಸಗೆಯಾದ್ದರಿಂದ ಇದು ತುಂಬ ಕಷ್ಟದ ಕೆಲಸ ಹಾಗಾಗಿ ಮೊದಲೇ ಈ ಬಗ್ಗೆ ಯೋಚಿಸಿರಬೇಕು.
ಶೂ ಎಸೆದ ಮೆಲೆ ನಿಮ್ಮ ಮುಖ ಗಂಭೀರವಾಗಿರುವುದನ್ನು ಖಚಿತ ಪಡಿಸಿಕೊಳ್ಳಿ.ಅಲ್ಲಿ ಬಕ ಪಕ್ಷಿಗಳ ಹಾಗೆ ಫೋಟೋಗ್ರಾಫರ್ ಗಳು ಕಾದಿರ್ತಾರೆ.ನಿಮಗೆ ಬೇಕಾದ ಹಾಗೆ ಪೋಸ್ ಕೊಡಲು ಅವರು ಖಂಡಿತ ಅವಕಾಶ ಕೊಡುವುದಿಲ್ಲ -ನೆನಪಿರಲಿ.ಶೂ ಎಸೆದ ಮೇಲೆ ನೀವು ಹಲ್ಲು ಗಿಂಜುತ್ತಾ ಇದ್ದರೆ ನಿಮ್ಮನ್ನು ’ಲೂಸ್ ಪಾರ್ಟಿ ’ ಅಂತ ನಿರ್ಧರಿಸಿ ಬಿಟ್ಟು ಬಿಡುತ್ತಾರೆ .ಇದು ಅವಮಾನಕಾರಿ ,ನಿಮ್ಮ ಅಷ್ಟು ದಿನದ ಪರಿಶ್ರಮ ನೀರಿನಲ್ಲಿ ಹೋಮ ಆಗಿ ಬಿಡುತ್ತೆ ! ಹಾಗಾಗಿ ಮನೆಯಲ್ಲೇ ಕೆಲವು ಗಂಭೀರ ಮುಖ ಮುದ್ರೆ ಗಳನ್ನು ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡುವುದು ಜಾಣ ಅಭ್ಯರ್ಥಿಯ ಲಕ್ಷಣ.
ಕೊನೆಯದಾಗಿ ನೀವು ಶೂ ಎಸೆಯಬೇಕಾದರೆ ನಿಮ್ಮ ಬಳಿ ಒಂದು ಸಾಮಾಜಿಕ ಕಳಕಳಿಯ ಕಾರಣ ಇರಬೇಕು .ನನ್ನ ಮಗನಿಗೆ ಇಂಜಿನಿಯರಿಂಗ್ ಸೀಟ್ ಸಿಕ್ಕಿಲ್ಲ,ನಮ್ಮ ಮನೆಯ ನಲ್ಲಿಯಲ್ಲಿ ಕಾರ್ಪೋರೇಶನ್ ನೀರು ಬರುತ್ತಿಲ್ಲ ,ಹೆಂಡತಿಗೆ ಸರಕಾರಿ ಕೆಲ್ಸದಲ್ಲಿ ಪ್ರಮೋಶನ್ ಸಿಕ್ಕಿಲ್ಲ ಇಂಥ ಕಾರಣಗಳಿದ್ರೆ ನಿಮಗೆ ಖಂಡಿತ ಜನರ/ಮಾಧ್ಯಮದವರ ಬೆಂಬಲ ಸಿಗೋದಿಲ್ಲ.ಹಾಗಾಗಿ ಒಂದು ಒಳ್ಳೆಯ ಸಾಮಾಜಿಕ ಕಳಕಳಿಯ ಕಾರಣವನ್ನು ಮೊದಲೇ ಹುಡುಕಿಟ್ಟಿರಿ.
ಆಲ್ ದಿ ಬೆಸ್ಟ್ !
ಸೂಚನೆ :ಇದೊಂದು ಹಾಸ್ಯ ಲೇಖನ .ಇತ್ತೀಚೆಗೆ ಕೆಲವರು ಎಲ್ಲಾ ವಿಷಯಗಳನ್ನೂ ಸೀರಿಯಸ್ ಆಗಿ ತಗೊಳ್ಳುತ್ತಿರುವರಿಂದ ಕೊನೆಗಾದರೂ ಇದು ಹಾಸ್ಯ ಲೇಖನ ಅನ್ನೋದನ್ನು ಹೇಳಲೇಬೇಕಾಗಿದೆ.ಇದರಿಂದ ಯಾರಿಗಾದರೂ ನೋವಾದ್ರೆ ದಯವಿಟ್ಟು ಕ್ಷಮಿಸಿ.

‍ಲೇಖಕರು avadhi

April 11, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

4 ಪ್ರತಿಕ್ರಿಯೆಗಳು

  1. shama

    ಸಂದೀಪ್, ಭಯಂಕರ ಮಾರಾಯರೇ ನೀವು.. ಹಾಸ್ಯ ಪ್ರಜ್ಞೆ ಇರೋರಿಗೆ ಇದು ಅದ್ಭುತ… ಇಲ್ಲದವರಿಗೆ ಅದುಭೂತ !! ಹಾಸ್ಯವನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವವರ ಬಗ್ಗೆ ನೀವು ಸೀರಿಯಸ್ ಆಗಿ ಯೋಚಿಸಬೇಡಿ.. ಪ್ರಾಕ್ಟೀಸ್ ಸರಿಯಾಗಿ ಸಿಕ್ಕಿರಲ್ಲ ಅವರಿಗೆ ಹಾಸ್ಯಾಸ್ವಾದನೆಗೆ ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: