‘ಶೂದ್ರ’ ಕಂಡಂತೆ ಪ್ರಸನ್ನ

ಪ್ರಸನ್ನ : ಸಂಸ್ಕೃತಿ ಮತ್ತು ಸಾಮಾಜಿಕ ನೆಲೆಗಳ ಹುಡುಕಾಟದಲ್ಲಿ…

– ಶೂದ್ರ ಶ್ರೀನಿವಾಸ್

ಅಳಿಯಲಾರದ ನೆನಹು ಜೀವ ಜೀವಾಳದಲಿ

ಬಲವಾಗಿ ಬೇರೂರಿ ನಿಂದು

ಗಳಿಗೆ ಗಳಿಗೆಗೆ ಬಾಳುವೆಯ ದಾರಿಯನು ತಡೆದು

ಸೆಳೆದಪುದು ಭೂತದಡೆಗಿಂದು

– ಗೋಪಾಲಕೃಷ್ಣ ಅಡಿಗ

ಅದು ಅಪ್ಪಟ ಮಲೆನಾಡಿನ ಮನೆ. ಮಿಣ ಮಿಣ ಮಿಂಚುವ ಕೆಂಬಣ್ಣದ ಫ್ಲೋರ್. ಎಲ್ಲಿಯೂ ಆಧುನಿಕ ಸೋಫಾಗಳಿಗೆ ಅವಕಾಶವಿಲ್ಲದ ದೇಸಿ ಪರಿಕಲ್ಪನೆ. ಐದಾರು ಕಡೆ ಆರಾಮವಾಗಿ ಒಂದಷ್ಟು ಮಂದಿ ಕಾಲುಚಾಚಿಕೊಂಡೋ ಅಥವಾ ಬೇರೆ ಬೇರೆ ರೀತಿಯಲ್ಲಿ ಓದುವುದಕ್ಕೆ, ಬರೆಯುವುದಕ್ಕೆ, ಹರಟೆ ಕೊಚ್ಚುವುದಕ್ಕೆ ಹೇಳಿ ಮಾಡಿಸಿದ ಮನೆ. ಮನೆ ತುಂಬ ಹೆಣ್ಣು ಮಕ್ಕಳಿದ್ದಿದ್ದರೆ ಎಷ್ಟೊಂದು ಉಲ್ಲಾಸದಿಂದ ತರಾವರಿ ರಂಗೋಲಿ ಬಿಡಿಸುತ್ತಿದ್ದರು. ಆದರೆ ಕಲಾವಿದನ ಮನೆಯಾದ್ದರಿಂದ ಗೋಡೆಗಳ ಮೇಲೆ ಅಲ್ಲಲ್ಲಿ ಚಿತ್ತಾರ ರೂಪುಗೊಂಡಿದೆ. ಇಂಥ ಮನೆಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಒಂದಷ್ಟು ಘಟಾನುಘಟಿ ಲೇಖಕರ ಜೊತೆ ಹೋದಾಗ; ಎಷ್ಟು ಸಂಭ್ರಮಿಸಿದ್ದೆ. ಡಿ.ಆರ್.ನಾಗರಾಜನಂತೂ ಈ ಮನೆ ತುಂಬ ಮುಗ್ಧ ಬಾಲೆಯರು ತುಂಬುಕೊಂಡಿದ್ದರೆ; ಮತ್ತಷ್ಟು ಕಳೆ ತುಂಬಿಕೊಳ್ಳುತ್ತಿತ್ತು ಎಂದಾಗ: ಪ್ರಸನ್ನ ನಿಮ್ಮಂಥವರ ರೊಮ್ಯಾಂಟಿಕ್ ಅಭಿರುಚಿಯನ್ನು ಮುರಿಯಲೆಂದೇ ಇದು ಮೂಡಿಬಂದದ್ದು ಎಂದು ಹೇಳಿದಾಗ; ನಾವೆಲ್ಲ ಮತ್ತಷ್ಟು ತಮಾಷೆ ಮಾಡಿದ್ದೆವು. ಮನೆಯ ಕಲಾವಿದ ಯಜಮಾನ ತುಟಿ ಬಿಚ್ಚದೆ ನಕ್ಕಿದ್ದರು. ಈ ನಾಲ್ಕು ದಶಕಗಳಲ್ಲಿ ಆತ ತುಟಿ ಬಿಚ್ಚಿ ನಕ್ಕಿದ್ದನ್ನ ನಾನು ಕಂಡೇ ಇಲ್ಲ. ಆದರೆ ಕೆಲವರು ಹಾಗಿದ್ದರೆ ಮಾತ್ರ ಚೆನ್ನ.

ಸುಮಾರು ಎರಡು ದಶಕಗಳ ನಂತರ ಆ ಮನೆಗೆ ಹೋದೆ. ಅದರಲ್ಲೂ ಮಧ್ಯಾಹ್ನ ಊಟ ಮಾಡಿ ಒಂದಷ್ಟು ರೆಸ್ಟ್ ತೆಗೆದುಕೊಂಡು ಬರೋಣವೆಂದು ಹೇಳಿದ್ದರಿಂದ ಆತನನ್ನು ಹಿಂಬಾಲಿಸಿದ್ದೆ. ಮನೆಯ ತಂತಿ ಬೇಲಿಯ ಗೇಟು ತೆಗೆದರು. ಗೇಟಿನಿಂದ ಮೊದಲ್ಗೊಂಡು ಮನೆ, ಗಿಡ, ಮರ, ಬಳ್ಳಿ ಎಲ್ಲವೂ ಹಳೆಯದಾಗಿ ಕಾಣತೊಡಗಿದವು. ಪಕ್ಕದಲ್ಲಿ ರಸ್ತೆ ಬೇರೆ ಆಗಿರುವುದರಿಂದ ಕೆಂಪು ಮಣ್ಣಿನ ಧೂಳು ಸಾಕಷ್ಟು ಕೂತು ಮತ್ತಷ್ಟು ಕಳೆಗುಂದಿಸಿದೆ. ಚಳಿಗಾಲದ ಕೊನೆಯ ದಿನಗಳಾಗಿದ್ದರಿಂದ ಅಲ್ಲಿಯ ಯಾವ ಮರಗಿಡದಲ್ಲೂ ಸೊಬಗಿರಲಿಲ್ಲ. ಅಲ್ಲಲ್ಲಿ ಪುಟ್ಟ ಕಸದ ತೊಟ್ಟಿಯಂತೆ ಕಾಣತೊಡಗಿದೆ. ಇದೆಲ್ಲವನ್ನು ನೋಡಿ ಏನೂ ಕಾಮೆಂಟ್ ಮಾಡಲು ಹೋಗಲಿಲ್ಲ. ಮನೆಯ ಬೀಗವನ್ನು ಅಲ್ಲಿಯೇ ಜಗಲಿಯ ಮೇಲಿನ ಹಾಸಿಗೆಯ ದಿಂಬಿನ ಕೆಳಗಿಟ್ಟಿದ್ದರು ಅನ್ನಿಸುತ್ತದೆ. ತೆಗೆದುಕೊಂಡು ಬಾಗಿಲು ತೆಗೆದರು. ಸಣ್ಣ ಪ್ರಮಾಣದ ಕೀರಲು ಶಬ್ದ ಬಂತು. ಒಳಗೆ ಹೋದ ತಕ್ಷಣ ಕೈಬೀಸಿ ಶೂದ್ರ, ಎಲ್ಲಿ ಬೇಕಾದರೂ ಸ್ವಲ್ಪ ಹೊತ್ತು ಮಲಗಬಹುದು ಎಂದರು. ಆದರೆ ಸ್ವಲ್ಪ ಸಮಯ ಮೈಚಾಚುವ ಮುನ್ನ; ಮನೆಯನ್ನೆಲ್ಲ ಅವಲೋಕಿಸಬೇಕು ಅನ್ನಿಸಿತು. ಅದರಲ್ಲೂ ಹಿಂದೆ ನಾನು ಎರಡು ರಾತ್ರಿ ಮಲಗಿದ್ದ ಕೊಠಡಿಯನ್ನು ನೋಡಲು ಹೋದೆ. ಪಕ್ಕದ ಕೊಠಡಿಯನ್ನು ನೋಡಬೇಕೆನ್ನಿಸಿತು. ಡಿ.ಆರ್. ನಾಗರಾಜ್ ಅಲ್ಲಿ ಮಲಗಿದ್ದ. ಒಂದು ಕ್ಷಣ ಡಿ.ಆರ್.ನ ದೆಹಲಿ ಕೊಠಡಿ ನೆನಪಿಗೆ ಬಂತು. ಯಾಕೆಂದರೆ ಅವನು ಒಂದು ರೀತಿಯ ಭೀತಿಯಿಂದ ಕೊಠಡಿಯ ಬಾಗಿಲು ಹಾಕುತ್ತಿರಲಿಲ್ಲ. ಅಗಾಧವಾದ ಧೈರ್ಯವಿದ್ದರೂ; ಸಾವು ಬಾಗಿಲ ಬಳಿಯೇ ಮಲಗಿದೆ ಎಂದು ಪರಿಭಾವಿಸಿಕೊಳ್ಳುತ್ತಿದ್ದ. ಹಾಗೆಯೇ ಮಹಾ ಅದೇನು ಮಾಡುತ್ತದೆ ಎಂದು ಎಲ್ಲಿಲ್ಲದ ವಿಲ್ ಪವರ್ ಅನ್ನು ಮನದ ಮೇಲೆ ಎಳೆದುಕೊಂಡಿದ್ದ.

ನಾನು ಮಲಗಿದ್ದ ಕೊಠಡಿಯನ್ನು ನೋಡಿ ಹೊರಗಿನ ಅಂಗಳಕ್ಕೆ ಬಂದು ಮೈಚಾಚಿದೆ. ಅಲ್ಲಿಯೇ ಏನೇನೋ ಪುಸ್ತಕಗಳಿದ್ದುವು. ಅವೆಲ್ಲ ಬಹುಪಾಲು ಆ ಮನೆಯ ಯಜಮಾನನಿಗೆ ಅಥವಾ ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ನೂರಾರು ಹುಚ್ಚುಗಳನ್ನು ತುಂಬಿಕೊಂಡಿರುವ ಬಹುಮುಖೀ ವ್ಯಕ್ತಿತ್ವಕ್ಕೆ ಅಭಿಮಾನದಿಂದ ಕೊಟ್ಟಿರುವಂಥವಾಗಿದ್ದುವು. ಬೇರೊಂದು ಹಾಸಿಗೆಯ ಮೇಲೆ; ಇಲ್ಲವೇ ಅದರ ಮಗ್ಗುಲಲ್ಲಿ ನಾನು ಓದಬಹುದಾದ ಮತ್ತಷ್ಟು ಅರ್ಥಪೂರ್ಣ ಕೃತಿಗಳಿದ್ದುವೇನೋ ಗೊತ್ತಿಲ್ಲ. ಇಲ್ಲ ನಾನು ಓದಬಹುದಾದ ಅರ್ಥಪೂರ್ಣ ಎಂದು ಹೇಳುತ್ತಿರುವುದು: ನನ್ನ ಅಭಿರುಚಿಯ ದೃಷ್ಟಿಯಿಂದ. ಪ್ರಸನ್ನ ಕೂಡ ಅಭಿರುಚಿಯ ವಿವಿಧ ನೆಲೆಗಳನ್ನು ಕಂಡುಕೊಳ್ಳಲು ಗುದ್ದಾಡುತ್ತಿರುವಂಥವರೇ ಆಗಿದ್ದಾರೆ. ಆದ್ದರಿಂದಲೇ ಇಲ್ಲಿಯವರೆವಿಗೂ ಸಿಕ್ಕ ಸಿಕ್ಕ ಕಡೆ ಕೈಚಾಚುತ್ತ ಬಂದಿದ್ದಾರೆ. ಅಲ್ಲೆಲ್ಲ ಮಾನಸಿಕ ಗೊಬ್ಬರವನ್ನು ಚೆಲ್ಲಿ ತಮ್ಮ ಮನೋಲೋಕದ ಗಿಡಮರ ಬಳ್ಳಿಗಳ ಬಗ್ಗೆ ಕನಸು ಕಾಣುತ್ತ ಬಂದವರು.

ಹಾಸಿಗೆಯ ಮೇಲೆ ಹತ್ತು ನಿಮಿಷ ಮೈಚಾಚಿರಬಹುದು. ಪ್ರಸನ್ನ ಅವರ ನಾನಾ ಮುಖಗಳು ಕೊಲ್ಯಾಜ್ ರೀತಿಯಲ್ಲಿ ಮನಸ್ಸಿನ ತುಂಬ ಆವರಿಸಿಕೊಂಡಿತ್ತು. ಎದ್ದು ಹೊರಗೆ ಹೋದೆ. ಮತ್ತೊಮ್ಮೆ ಸುತ್ತಲೂ ನೋಡಿದೆ. ಅಲ್ಲೆಲ್ಲ ಏನೇನೋ ಬಿದ್ದಿವೆ. ತರಗೆಲೆಗಳು ರಾಶಿರಾಶಿಯಾಗಿವೆ. ಅಲ್ಲೆ ಒಂದು ಕ್ಷಣ ಪ್ರಸನ್ನ ಅವರ ನಾನಾ ರೀತಿಯ ಸೀರೆಗಳ ಸೆರಗು ಮತ್ತು ಬಾರ್ಡರ್ ಗಳು ನೆನಪಿಗೆ ಬಂದುವು. ಅವುಗಳ ವೈವಿಧ್ಯತೆಯ ನಡುವೆಯೇ ದೇಸಿ ಸಂಸ್ಕೃತಿ ನೆಪದಲ್ಲಿ ನೂರಾರು ಮಹಿಳೆಯರು ಜೀವ ಪಡೆದು ಕಿಲಕಿಲ ನಗುವ ಚಿತ್ರಣಗಳು ಓಡಾಡಿಕೊಂಡಿರುವುದು ಎದುರಾದುವು. ಹೌದು ಇಪ್ಪತ್ತು ವರ್ಷಗಳ ಹಿಂದೆ ಕವಿಕಾವ್ಯ ಟ್ರಸ್ಟ್ ಮಾಡಿದಾಗ; ನಾವೆಲ್ಲ ಅದರ ಉದ್ಘಾಟನೆಯ ಸಂಭ್ರಮಕ್ಕೆ ಬಂದಿದ್ದವರು. ಕಾವ್ಯಕ್ಕೆ ನಾನಾ ರೀತಿಯ ಮೈಬಣ್ಣ ತುಂಬುವುದರ ಜೊತೆಗೆ ಅದಕ್ಕೆ ಈಗಿನ ದೇಸಿ ಸೆರಗನ್ನು ಹಾಕಿ ಪ್ರಯೋಗ ನಡೆಸಬಹುದೆಂದು ಭಾವಿಸಿದ್ದೆ. ಹೀಗೆ ಭಾವನೆಗಳ ಸುತ್ತಾಟದಲ್ಲಿ ಮನೆಯ ಮುಂದೆ ನಿಂತು ನೋಡಿದೆ. ಅಲ್ಲಿಯ ಬಯಲಲ್ಲಿ ಹಳೆಯ ಪಳೆಯುಳಿಕೆಗಳು ಏನೇನೂ ಕಾಣಲಿಲ್ಲ. ಆದರೆ ಮನದ ಬಯಲಲ್ಲಿ ಅಲ್ಲಿಯ ಅಗ್ನಿಕುಂಡ ಝಗಮಗಿಸುತ್ತಿದೆ. ಅಲ್ಲಿ ಡಿ.ಆರ್. ನಾಗರಾಜ್ ವಿಶ್ವಾಮಿತ್ರನಂತೆ ‘ಮಹಾಬ್ರಾಹ್ಮಣ’ನಾಗಿ ಅರಿವಿನ ದಭರ್ೆಯ ಹಿಡಿದು ಕೂತಿದ್ದಾನೆ. ಸುತ್ತಲೂ ಬಿ.ಸಿ. ರಾಮಚಂದ್ರ ಶರ್ಮ, ಕೆ.ವಿ. ಸುಬ್ಬಣ್ಣ, ರಾಜೀವ ತಾರಾನಾಥ್, ಗಿರೀಶ್ ಕಾನರ್ಾಡ್, ಚಂದ್ರಶೇಖರ ಕಂಬಾರ, ಕೆ.ಎಚ್. ಶ್ರೀನಿವಾಸ್, ಕೆ. ಮರುಳಸಿದ್ದಪ್ಪ ಮುಂತಾದವರೆಲ್ಲ ಕೂತಿದ್ದಾರೆ. ಪುರೋಹಿತಶಾಹಿ ಕುರಿತು ಉಪನ್ಯಾಸ ನೀಡುತ್ತಿದ್ದಾನೆ. ಡಿ.ಆರ್.ನ ಒಟ್ಟು ಉಪನ್ಯಾಸದಲ್ಲಿ ಸಿನಿಕತನವಿಲ್ಲ. ಯಾರನ್ನೋ ತೇಜೋವಧೆಗೆ ಅಲ್ಲ. ಆದರೆ ಚರಿತ್ರೆ ಹೇಗೆ ಬೆಳೆದು ಬಂತು, ಯಾಕೆ ಬೆಳೆದು ಬಂತು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಾತಾಡಿದ ಧ್ವನಿ ಗುನುಗುನಿಸುತ್ತಿದೆ. ಅಗ್ನಿಕುಂಡ ನಿಮರ್ಿಸಿದ್ದು ಸಾರ್ಥಕವಾಯಿತು ಎಂದು ಎಲ್ಲರೂ ಹೇಳಿ ಹೋಗಿದ್ದರು. ಎಲ್ಲರೂ ಮಂತ್ರಮುಗ್ಧರಂತೆ ಕೂತು ಆಲಿಸಿದ್ದರು. ಈ ಒಟ್ಟು ಚಿತ್ರಣವನ್ನು ಬೆಂಗಳೂರಿಗೆ ಹೋದಾಗ ಲಂಕೇಶ್ ಅವರಿಗೆ ತಿಳಿಸಿದ್ದೆ. ನಮ್ಮ ಗ್ರೇಟ್ ಜೀನಿಯಸ್ ಎಂದು ಹೇಳಿದ್ದೆ. ಆ ಕಾಲಕ್ಕೆ ಇಬ್ಬರು ಮೂವರು ಬರಡು ಮಾಕ್ಸರ್್ವಾದಿಗಳು ಲಂಕೇಶ್ ಅವರೊಡನೆ ಡಿ.ಆರ್. ವಿರುದ್ಧ ಏನೇನೋ ಚಿತಾವಣೆ ನಡೆಸುತ್ತಿದ್ದರು. ನಮ್ಮ ಗುಂಪು ಹೊರಗೆ ಹೋಗಲಿ ಎಂದು. ನಾನು ಈ ಗುಂಗಿನಲ್ಲಿಯೇ ಇದ್ದೆ. ಕವಿ ಕಾವ್ಯ ಟ್ರಸ್ಟ್ ನ ಮುಂದುವರೆದ ಭಾಗವಾಗಿ ಚರಕ ಸಂಸ್ಥೆಯ ಸಾಧ್ಯತೆಗಳು ಯಾವ ಯಾವ ರೂಪದಲ್ಲಿ ವಿಸ್ತರಿಸುತ್ತಿದೆ ಎಂದು.

ಪ್ರಸನ್ನ ಒಳಗಿನಿಂದ ಬಂದು ಹೇ ಶೂದ್ರ, ಇಲ್ಲಿ ಏನು ಮಾಡುತ್ತಿದ್ದೀರಿ? ಟೀ ಮಾಡ್ಲಾ? ಎಂದು ಕೇಳಿದರು. ಆಗಲಿ ಎಂದೆ. ಟೀ ಕುಡಿದು ರಾಮದಾಸ್ ಶ್ರಮದ ಕೇಂದ್ರವನ್ನು ತೋರಿಸುವೆ ಎಂದರು. ಅಷ್ಟರಲ್ಲಿ ಗೇಟಿನ ಬಳಿ ವಾಹನವೊಂದರ ಶಬ್ದವಾಯಿತು. ನೋಡಿದರೆ ಸಮಾಜವಾದಿ ಚಳವಳಿಯ ಮೈಸೂರಿನ ಮಲ್ಲೇಶ್, ರಂಗಭೂಮಿಯ ರಮೇಶ್ ಹಾಗೂ ಹಳೆಯ ನಾಣ್ಯಗಳ ಸಂಗ್ರಹಕಾರ ಮುದ್ದುಕೃಷ್ಣ ಅವರು ಕಡಿದಾಳ್ ಶಾಮಣ್ಣನವರ ಅಧ್ಯಕ್ಷತೆಯಲ್ಲಿ ಇಳಿದರು. ಪ್ರಸನ್ನ ಎಲ್ಲರಿಗೂ ಟೀ ಸಿದ್ಧಪಡಿಸಿದರು. ಟೀ ಕುಡಿದು ಭೀಮನ ಕೋಣೆಯಿಂದ ಒಂದು ಕಿ.ಮೀಟರ್ ದೂರದಲ್ಲಿದ್ದ ರಾಮದಾಸ್ ಶ್ರಮದ ಕೇಂದ್ರಕ್ಕೆ ಕರೆದುಕೊಂಡು ಹೋದರು. ಏಳೆಂಟು ಎಕರೆಯ ಪ್ರದೇಶ. ನೇಕಾರ ಕುಟುಂಬಗಳಿಗೆ ಸಂಬಂಧಿಸಿದಂತೆ ನಾನಾ ಯೋಜನೆಗಳಿಗಾಗಿ ರೂಪಿಸಿದ ಕೇಂದ್ರ. ಈಗಾಗಲೇ ಸುಸಜ್ಜಿತ ಎರಡು ಷಡ್ಡು ದೇಸಿ ಪರಿಕಲ್ಪನೆಯಲ್ಲಿ ಪ್ರಸನ್ನ ನಿಮರ್ಿಸಿದ್ದಾರೆ. ನಾವು ಹೋದ ತಕ್ಷಣ ಮೂರು ನಾಯಿಮರಿಗಳು ನಮ್ಮನ್ನು ಸ್ವಾಗತಿಸಿದವು. ಅಲ್ಲಿಗೆ ಇನ್ನೂ ಯಾರೂ ಬರದಿರುವುದರಿಂದ ಅವುಗಳದ್ದೇ ರಾಜ್ಯಭಾರ. ಪ್ರಸನ್ನ ಅಲ್ಲಿಯ ಜಾಗವನ್ನೆಲ್ಲ ತೋರಿಸುತ್ತ ಒಟ್ಟು ಯೋಜನೆಗಳನ್ನು ವಿವರಿಸಿದರು. ಇದರ ಜೊತೆಗೆ ರಂಗಭೂಮಿ ನಟರನ್ನು ತರಬೇತಿಗೊಳಿಸುವ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿಯನ್ನು ಕೊಟ್ಟರು.

ಕವಿಕಾವ್ಯ ಟ್ರಸ್ಟ್ ಉದ್ಘಾಟನೆಯ ದಿವಸ ಕೆ.ವಿ. ಸುಬ್ಬಣ್ಣನವರಿಂದ ಮೊದಲ್ಗೊಂಡು ಎಲ್ಲರೂ; ಅದರ ಉದ್ದೇಶಗಳನ್ನು ಕುರಿತು ಮೆಚ್ಚಿಗೆಯಿಂದ ಮಾತಾಡಿದ್ದರು. ಕಾವ್ಯವೆಂದರೆ ಮತ್ತು ಇಸ್ಪೀಟು ಆಟವೆಂದರೆ ಸಾವಿರಾರು ಕಿ.ಮೀ. ದೂರ ಹೋಗುವ ರಾಮಚಂದ್ರಶರ್ಮರಂತೂ ರೋಮಾಂಚಿತರಾಗಿದ್ದರು. ಡಿ.ಆರ್. ನಾಗರಾಜ್ ಮತ್ತು ಕಂಬಾರರೂ ಕೂಡ ಇಂಥ ಟ್ರಸ್ಟ್ ಯಾಕೆ ಬೇಕಾಗಿದೆಯೆಂದು ತಮ್ಮದೇ ಆದ ಅಮೂಲ್ಯ ಸಲಹೆಗಳನ್ನು ನೀಡಿದ್ದರು. ಪ್ರಸನ್ನ ತಮ್ಮ ಸಿಟ್ಟು ಮತ್ತು ಸಿಡುಕಿನ ನಡುವೆಯೂ ಅತ್ಯಂತ ಚಾಣಾಕ್ಷ ಸಂಘಟಕರಾಗಿರುವುದರಿಂದ ಈ ಸಂಸ್ಥೆಯನ್ನು ಚೆನ್ನಾಗಿ ಬೆಳೆಸುವುದರ ಬಗ್ಗೆ ಯಾರೂ ಸಂದೇಹ ವ್ಯಕ್ತಪಡಿಸಲಿಲ್ಲ. ಇಷ್ಟಾದರೂ ಹೆಗ್ಗೋಡಿನ ನೀನಾಸಂ ಬಳಿ ಪ್ರಸನ್ನ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದರ ಬಗ್ಗೆ ಡಿ.ಆರ್. ಮತ್ತು ನಾನು ವಿರೋಧ ವ್ಯಕ್ತಪಡಿಸಿದ್ದೆವು. ಶೂದ್ರದಲ್ಲೂ ನಾಲ್ಕು ಸಾಲು ಪ್ರತಿಕ್ರಿಯಿಸಿದ್ದೆ. ಆದರೆ ಮುಂದಿನ ಕೆಲವು ವರ್ಷಗಳಲ್ಲಿ ಕವಿಕಾವ್ಯ ಟ್ರಸ್ಟ್ ಬಗ್ಗೆ ಏನೂ ಸುದ್ದಿ ಗೊತ್ತಾಗಲಿಲ್ಲ. ಈ ಮಧ್ಯೆ ‘ಚರಕ’ ಸಂಸ್ಥೆ ಹಾಗೂ ಅದರ ಮೂಲಕ ‘ದೇಸಿ’ ಪರಿಕಲ್ಪನೆಯ ವ್ಯಾಪಾರ ಮಳಿಗೆಗಳ ಪ್ರಾರಂಭ ನೋಡಿದಾಗ ಖುಷಿಯಾಯಿತು. ಇದನ್ನು ಮಾಡುತ್ತಲೇ ಆಗಾಗ ನಾಟಕ ಬರೆಯುವುದು, ನಿದರ್ೆಶಿಸುವುದು ಮತ್ತು ಪದ್ಯ ಬರೆಯುತ್ತ, ಸಂಕಲನ ತರುತ್ತ ಯಾರೂ ನನ್ನನ್ನು ಗಂಭೀರವಾಗಿ ಕವಿಯೆಂದು ಪರಿಗಣಿಸುತ್ತಿಲ್ಲ ಎಂಬ ಗೊಣಗಾಟವನ್ನು ಕೇಳಿದ್ದೇನೆ. ಪ್ರಸನ್ನ ಒಬ್ಬ ಅತ್ಯಂತ ಜೀನಿಯಸ್ ರಂಗಭೂಮಿ ನಿದರ್ೆಶಕನಾಗಿರುವುದರಿಂದ; ಅದರ ಪಕ್ಕ ಏನೇ ಮಾಡಿದರೂ ಗೌಣವಾಗುತ್ತ ಹೋಗುವುದು ಸ್ವಾಭಾವಿಕವಿರಬಹುದು. ಇದು ಪ್ರಸನ್ನ ಅವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಇಷ್ಟಾದರೂ ಒಮ್ಮೊಮ್ಮೆ ಉತ್ತಮ ಕೆಲಸ ಮಾಡಿದಾಗ ಭಾವನಾತ್ಮಕವಾಗಿ ಪ್ರಚಾರವನ್ನು ಅಥವಾ ಬೇರೆಯವರ ಗಮನವನ್ನು ಮೇಲೆಳೆದುಕೊಳ್ಳುವುದು ಮಾನವ ಸಹಜ ಅನ್ನಿಸುತ್ತದೆ. ಹೀಗೆ ಎಳೆದುಕೊಳ್ಳುತ್ತ ಬೇಸರದಿಂದ ಕೊಡವಿ ಮುಂದೆ ಸಾಗುವ ಪ್ರಸನ್ನ ಅವರ ವ್ಯಕ್ತಿತ್ವ ಹಿರಿದಾಗಿರುವುದು. ಎಲ್ಲೆಲ್ಲೋ ಏನೇನೋ ಹುಡುಕಾಟ. ಆ ಹುಡುಕಾಟದ ಉತ್ತುಂಗವೆನ್ನುವ ರೀತಿಯಲ್ಲಿ ‘ಚರಕ’ ಸಂಸ್ಥೆಯು ಮೈದಾಳಿದೆ. ಅವರ ವಿಶಾಲಾರ್ಥದ ಕಾವ್ಯವೂ ಕೂಡ ದೇಸಿ ಉಡುಪುಗಳಲ್ಲಿ ಬೆಸುಗೆಗೊಂಡಿದೆ. ಹಾಗೆ ನೋಡಿದರೆ ಪ್ರಸನ್ನ ಅವರ ಮನದಲ್ಲಿ ಒಂದು ವಸ್ತುವಿನ ಸೌಂದರ್ಯ ಮೀಮಾಂಸೆ ಮಾತ್ರ ಕೆಲಸ ಮಾಡುತ್ತಿಲ್ಲ. ಅದರ ಹಿಂದೆ ಜೀವನ ಮೀಮಾಂಸೆಯೂ ಇದೆ. ಆದ್ದರಿಂದಲೇ ನೂರಾರು ನೇಯ್ಗೆ ಕುಟುಂಬಗಳಿಗೆ ಬೆಳಕು ಕಾಣಿಸುತ್ತಲೇ ತಮ್ಮ ವೃತ್ತಿಯನ್ನು ಕುರಿತಂತೆ ಸ್ವಾಭಿಮಾನವನ್ನು ಬೆಳೆಸುವುದು ಮಹತ್ತರ ಉದ್ದೇಶವಾಗಿದೆ.

(ಮು೦ದುವರೆಯುವುದು….)

‍ಲೇಖಕರು G

May 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

  1. D.RAVI VARMA

    ಶೂದ್ರ ಶ್ರೀನಿವಾಸ್ ಸಾಹಿತ್ಯದ ರಾಜಕೀಯ,ರಂಗಭೂಮಿಯ ರಾಜಕೀಯ ಎಲ್ಲವುಗಳಿಂದ ಗಾವುದ ದೂರ ಇರುವ ಪ್ರಸನ್ನ ಅವರ ಆಲೋಚನೆ ಹಾಗು ಅವರ ಬದುಕೇ ಬೇರೆ. ಹೀಗೋಡಿನ ಅವರೇ ಪ್ಲಾನ್ ಮಾಡಿ ಕಟ್ಟಿಸಿದ ಮನೆ, ಅವರು ದುಡಿದ ಸಮುದಾಯ , ಅವರು ನೀನಾಸಂ ಗೆ ನಿರ್ದೇಶಿಸಿದ ನಾಟಕ, ಅವರ ದೇಸಿ ಚರಕ ಎಲ್ಲವು ಯಾವುದೇ ಅಬ್ಬರದ ಪ್ರಚಾರ ಇಲ್ಲದೆ ನಡೆಯುತ್ತಿರುವ ಕೆಲಸ . ಒಮ್ಮೆ ಹೊಸ್ಪೆಟ್ಗೆ ಅವರನು ಕರೆಸಿ ನಾಟಕ ನಿರ್ದೇಶಿಸಲು ಕೇಳಿದ್ದೆ, ಅವರು ನಟನೆ ಬಗ್ಗೆ ೧೦ ದಿನ ಶಿಬಿರ ನಡಿಸಿಕೊಟ್ಟರು ಆಗ ಅವರು ಉಳಿದದ್ದು ನನ್ನ ಮನೆಯಲ್ಲಿ ಅವರ ಸರಳ ಬದುಕು, ಅವರ ಯೋಚನೆ, ಎಲ್ಲವನ್ನು ನೋಡಿ ನಾನು ಅವಕ್ಕಾದೆ, ಇತ್ತೀಚಿಗೆ ಬಂಗಲೋರೆಗೆ ಬಂದಾಗ ಅವರ ದೇಸಿ ಮಳಿಗೆ ಉದ್ಗತಿಸಲು ಶ್ರೀಮತಿ ಪೂರ್ಣಚಂದ್ರ ತೇಜಸ್ವಿ ಬಂದಿದ್ದರು , ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾನು ಮಾರ್ಕ್ಸ್ವಾದಿ ಪ್ರಸನ್ನ ,ಸಮುದಾಯದ , ಎಡ ಮತ್ತು ಪ್ರಜಪ್ರಬುತ್ವ ಚಿಂತನೆಯ ಪ್ರಸನ್ನ ಅವರನ್ನು ನೋಡಿದ್ದೇನೆ .ಬಟ್ ಈಗ ಅವರು ದೇಸಿ,ಹಾಗೂ ಚರಕ ಮೂಲಕ ಹೊಸ ಹೆಜ್ಜೆ ಹಾಕಿದ್ದಾರೆ, ಆ ಚಿಂತನೆಗೆ,ಅವರ ಬದುಕಿನ ಬದ್ದತೆಗೆ ನನ್ನದೊಂದು ಪ್ರೀತಿಪೂರ್ವಕ ನಮಸ್ಕಾರ
    ರವಿ ವರ್ಮ ಹೊಸಪೇಟೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: