ಶೂದ್ರ ಕ೦ಡ ಪ್ರಸನ್ನ – ಭಾಗ ೨

– ಶೂದ್ರ ಶ್ರೀನಿವಾಸ

ಈ ಲೇಖನದ ಮೊದಲನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ಕಿಸಿ :

2012 ಜನವರಿ ಮೂರನೆ ವಾರ ಹೆಗ್ಗೋಡಿನಲ್ಲಿ ‘ಚರಕ’ ಉತ್ಸವವಿತ್ತು. ಆ ಉತ್ಸವದಲ್ಲಿ ‘ಚರಕ’ದ ಪರಕಲ್ಪನೆ ಬಗ್ಗೆ ದುಡಿದ ಮತ್ತು ಅಂಥ ಆಲೋಚನ ಕ್ರಮದ ಬಗ್ಗೆ ಕಳಕಳಿ ಇದ್ದವರನ್ನು ಕುರಿತು ಮಾತಾಡಿಸಿದರು. ಈ ದೃಷ್ಟಿಯಿಂದ ಪ್ರಸನ್ನ ಈ ವರ್ಷ ಲಂಕೇಶ್ ಅವರನ್ನು ಆರಿಸಿಕೊಂಡಿದ್ದರು. ಅವರ ಬಗ್ಗೆ ಮಾತಾಡಲು ಕರೆದಾಗ; ಸ್ವಲ್ಪ ಅನಾರೋಗ್ಯದ ತೊಂದರೆ ಇದ್ದರೂ ಒಪ್ಪಿಕೊಂಡೆ. ಬಹಳ ದಿವಸವಾಯಿತು ಆ ಕಡೆ ಹೋಗಿ ಎಂದು. ಹಾಗೆಯೇ ಈ ಲೇಖಕ, ಕಲಾವಿದ, ರಂಗಕಮರ್ಿ ಹಾಗೂ ದೇಸಿ ಅಪ್ಪಟ ಕಾರ್ಯಕರ್ತ ಏನೇ ಮಾಡಿದರೂ ಅಚ್ಚುಕಟ್ಟಾಗಿ ಮಾಡುವರು ಎಂಬ ಧ್ವನಿ ನನ್ನ ಮನಸ್ಸಿನಲ್ಲಿ ಗುನುಗುನಿಸುತ್ತಿತ್ತು. ಹಿಂದೆ ಪ್ರಸ್ತಾಪಿಸಿದ ಹಾಗೆ ಆತ ಅಲ್ಲಿಂದ-ಇಲ್ಲಿಗೆ ನೆಗೆಯುತ್ತಿದ್ದರೂ; ಅದು ಪರಾರಿತನದಿಂದ ಬಂದದ್ದಲ್ಲ. ತನ್ನ ಅಸ್ತಿತ್ವವನ್ನು ನಿಜವಾದ ಅರ್ಥದಲ್ಲಿ ಗ್ರಹಿಸಿಕೊಳ್ಳುವುದೇ ಆಗಿರುತ್ತದೆ. ಅದೇನೇ ಆಗಿರಲಿ. ಉತ್ಸವಕ್ಕೆ ಹೋದೆ. ಹೋಗದಿದ್ದರೆ ಅಪರಾಧಿಯಾಗಿಬಿಡುತ್ತಿದ್ದೆ. ಅದು ಪ್ರಸನ್ನ ಅವರ ದೃಷ್ಟಿಯಿಂದಲ್ಲ. ನನ್ನ ವೈಯಕ್ತಿಕ ಅನುಭವದ ಕಾರಣಕ್ಕಾಗಿ.

ಮಲೆನಾಡಿನ ಆ ಭೀಮನ ಕೋಣೆ ಹೆಸರೇ ಎಷ್ಟು ಧ್ವನಿಪೂಣವಾದದ್ದು. ಅದಕ್ಕೆ ಮತ್ತಷ್ಟು ಅರ್ಥವಂತಿಕೆಯನ್ನು ತಂದುಕೊಡುವುದಕ್ಕಾಗಿಯೋ ಎನ್ನುವಂತೆ; ಸಾಂಸ್ಕೃತಿಕವಾಗಿ ಒಂದು ಗುಡ್ಡವನ್ನು ಎಂತೆಂಥ ಆಕಾರದಲ್ಲಿ ಕಡಿದು; ನಾಳೆಯ ದಿನಗಳಲ್ಲಿ ಚಾರಿತ್ರಿಕವಾಗಿ ಮಾತಾಡಿಕೊಳ್ಳುವುದಕ್ಕೆ ವೇದಿಕೆಯನ್ನು ನಿಮರ್ಾಣ ಮಾಡಿಟ್ಟಿದ್ದಾರೆ. ಎಷ್ಟಾದರೂ ರಂಗಭೂಮಿಯ ಜೀನಿಯಸ್ ಅಲ್ಲವೇ? ಪ್ರತಿ ವರ್ಷ ಈ ರೀತಿಯ ಚರಕ ಉತ್ಸವ ನಡೆಯುವಾಗ ಪ್ರಸನ್ನ ಅವರು ತಮ್ಮ ಒಟ್ಟು ಇಮಾಜಿನೇಷನ್ ಬಳಸಿ ಒಂದು ‘ಎಪಿಕ್ ಪ್ಲೇ’ಯನ್ನು ನಿಮರ್ಾಪಕರಾಗಿ ನಿದರ್ೆಶಕರಾಗಿ ಸೃಷ್ಟಿಸುವಂತಿದ್ದರೆ; ಕನರ್ಾಟಕದ ಮೂಲೆಮೂಲೆಗಳಿಂದ ಬಂದು ನೋಡಿ ಹೋಗುವರು. ಜೊತೆಗೆ ಪ್ರಸನ್ನ ಅವರ ಬೆನ್ನು ತಟ್ಟಿ ಹೋಗುವರು. ಕಲಾವಿದರನ್ನು ಎಲ್ಲಿಯೋ ಹುಡುಕಿಕೊಂಡು ಹೋಗಬೇಕಾಗಿಲ್ಲ. ಚರಕ ಸಂಸ್ಥೆಯಲ್ಲಿ ದುಡಿಯುವಂತವರಿಗೂ ತರಬೇತಿ ಕೊಡಬಹುದು. ಹಾಗೆಯೇ ಒಂದು ಕರೆ ಕೊಟ್ಟರೂ; ಎಲ್ಲ ಕಡೆಯಿಂದ ಬಂದು ರಂಗ ತರಬೇತಿಯನ್ನು ಪಡೆದು ಹೋಗುವರು.

ನಾನು ಲಂಕೇಶ್ ಅವರನ್ನು ಕುರಿತು ಮಾತಾಡುವಾಗ ಪ್ರಸನ್ನ ಅವರು ಮುಂದೆ ಕೂತಿದ್ದರು. ಏನೇನೋ ಮಾತಾಡಿದೆ ತುಂಬ ದೀರ್ಘವಾಗಿ, ಆಗ ಒಂದು ಮಾತು ಹೇಳಿದೆ: ಯಾವಾಗಲೂ ಪ್ರಸನ್ನ ಅವರನ್ನು ಗುಮಾನಿಯಿಂದ ನೋಡುತ್ತಿದ್ದ ಲಂಕೇಶ್ ಅವರು ಈ ಭೀಮನ ಕೋಣೆಯ ಸೃಷ್ಟಿಯನ್ನು ಕಂಡಿದ್ದರೆ; ನಿಜವಾಗಿಯೂ ಮೆಚ್ಚಿಗೆ ಸೂಚಿಸುತ್ತಿದ್ದರು. ಯಾಕೆಂದರೆ ಅವರಿಗೂ ಈ ರೀತಿಯ ಕಟ್ಟುವ ಕೆಲಸವನ್ನು ತುಂಬ ಇಷ್ಟಪಡುತ್ತಿದ್ದರು. ಹಾಗೆಯೇ ಒಂದು ಕ್ಷಣ ಲಂಕೇಶ್ ಅವರ ಮನಸ್ಸಿನಲ್ಲಿ ಪ್ರಸನ್ನ ಈಗಲಾದರೂ ‘ಗುಣಮುಖ’ ನಾಟಕವನ್ನು ನಿದರ್ೆಶಿಸುವರೇ ಎಂಬ ಪುಟ್ಟ ಆಶಯ ಮನಸ್ಸಿನಲ್ಲಿ ತುಂಬಿಕೊಳ್ಳುತ್ತಿತ್ತೇನೋ? ಯಾಕೆಂದರೆ ಅವರು ಪ್ರಸನ್ನ ಅವರು ಹೇಳಿದ್ದರಿಂದ ತುಂಬ ಥ್ರಿಲ್ ನಿಂದ ನಾಟಕವನ್ನು ಬರೆದು ಮುಗಿಸಿದ್ದರು. ಒಂದಷ್ಟು ದಿವಸ ಅದರ ಗುಂಗಿನಲ್ಲಿಯೇ ಇದ್ದರು. ಆದರೆ ಪ್ರಸನ್ನ ಅವರು ನಾಟಕವನ್ನು ಓದಿ; ನಿದರ್ೆಶಿಸದೆ ಸ್ಕ್ರಿಪ್ಟನ್ನ ವಾಪಸ್ಸು ಕೊಟ್ಟಾಗ ತುಂಬ ಪೆಚ್ಚಾಗಿ ಬಿಟ್ಟಿದ್ದರು. ಒಮ್ಮೆ ಒಂದು ಸಂಜೆ ಲಂಕೇಶ್ ಅವರ ಕೊಠಡಿಯಲ್ಲಿ ನಾವಿಬ್ಬರೇ ಕೂತಿದ್ದೆವು. ಗಿರಿ ಬಂದು ಹೇಳಿದರು ಪ್ರಸನ್ನ ಅವರು ಬಂದ ವಿಷಯವನ್ನ. ಲಂಕೇಶ್ ಅವರು ಭೇಟಿಗೆ ಅವಕಾಶ ಕೊಡಲಿಲ್ಲ. ಸ್ವಲ್ಪ ಸಮಯದ ನಂತರ ಅವರೇ ಹೇಳಿದರು: ನಿನ್ನ ಗೆಳೆಯ, ನೀಚ ಎಂದರು. ನನಗೆ ತಕ್ಷಣ ಅರ್ಥವಾಗಲಿಲ್ಲ. ಆಮೇಲ್ ಪ್ರಸನ್ನ ಬಂದಿದ್ದ ವಿಷಯ ತಿಳಿಸಿದರು. ಇಲ್ಲ ಸರ್, ಕರೆಯಬೇಕಾಗಿತ್ತು ಎಂದೆ. ಒಂದು ಕ್ಷಣ ನನ್ನ ಮುಖವನ್ನೇ ನೋಡಿ ತುಂಬ ವಿಷಾದದಿಂದ ಹೌದು ಕರೆಯಬೇಕಾಗಿತ್ತು ಎಂದು ಮೌನಿಯಾದರು. ಮುಂದೆ ಏನೇನು ಮಾತಾಡಲಿಲ್ಲ. ಹೀಗೆಯೇ ಒಂದು ದಿವಸ ಮಾತಿನ ನಡುವೆ ಬಸವರಾಜ ಅರಸ್ ಅವರು ಶೂದ್ರ, ನಿಮ್ಮ ಫ್ರೆಂಡ್ ಪ್ರಸನ್ನ ಅವರಿಗೆ ಹೇಳಿ, ‘ಗುಣಮುಖ’ಕ್ಕಿಂತ ಉತ್ತಮ ನಾಟಕ ಬೇಕಂತ ಅವರಿಗೆ? ಅದರಲ್ಲೂ ಅವರೇ ಹೇಳಿ ಬರೆಸಿ ಇದ್ದಕ್ಕಿದ್ದಂತೆ ತಿರಸ್ಕರಿಸುವುದಿದೆಯಲ್ಲ, ಇದು ಅತ್ಯಂತ ಹೀನವಾದದ್ದು. ನಾನು ನಾಟಕವನ್ನು ಓದಿದ್ದೇನೆ ಎಂದಿದ್ದರು. (ಬಸವರಾಜ್ ಅರಸ್ ಸೂಕ್ಷ್ಮ ಸಂವೇದನೆಯ ಸಾಹಿತ್ಯದ ವಿದ್ಯಾಥರ್ಿ. ಕೆಲವು ವರ್ಷ ಲಂಕೇಶ್ ಅವರ ಜೊತೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದವರು. ಆದರೆ ಇಲಾಖೆಯ ಒಳರಾಜಕೀಯದಿಂದ ಬೇಸತ್ತು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅಧಿಕಾರಿಯಾಗಿ ಮುಂಬಯಿಗೆ ಹೋದವರು. ಈಗ ನಿವೃತ್ತರಾದ ಮೇಲೆ ಬೇರೆ ಬೇರೆ ಕಾಲೇಜುಗಳಲ್ಲಿ ಎಂ.ಎ. ವಿದ್ಯಾಥರ್ಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳುವರು. ಇಸ್ಪೀಟು, ಸಿಗರೇಟೆಂದರೆ ಪಂಚಪ್ರಾಣ). ಆದರೆ ನಾನು ಪ್ರಸನ್ನ ಅವರಿಗೆ ಹೇಳಲು ಮನಸ್ಸು ಬರಲಿಲ್ಲ. ಒಂದು ವೇಳೆ ಹೇಳಿದ್ದರೆ; ಲಂಕೇಶ್ ಅವರು ‘ವೈಲ್ಡ್’ ಆಗಿಬಿಡುತ್ತಿದ್ದರು. ಇಷ್ಟಾದರೂ; ಅಂದು ಅವರು ಒಂದು ರೀತಿಯ ಮನಸ್ಥಿತಿಯಲ್ಲಿದ್ದರು. ಇವರು ಯಾಕೆ ಈ ರೀತಿ ಮಾಡುತ್ತಾರೆ? ಎಂದು. ಇದಕ್ಕಾಗಿಯೇ ಲಂಕೇಶ್ ಅವರಿಗೆ ಕೊನೆಯವರೆವಿಗೂ ತಮ್ಮ ಬಗ್ಗೆ ಅನಂತಮೂತರ್ಿಯಂಥವರು ಏನೂ ಹೇಳುವುದಿಲ್ಲ; ಬರೆಯುವುದಿಲ್ಲ ಎಂಬುದರ ಬಗ್ಗೆ ಅಸಮಾಧಾನವಿದ್ದಿದ್ದು. ಇದನ್ನು ಅಂದು ಆಡಿ ತೋರಿಸದಿದ್ದರೂ; ಮನಸ್ಸಿನಲ್ಲಿತ್ತು. ಯಾಕೆಂದರೆ ‘ಸಂಕ್ರಾಂತಿ’ ನಾಟಕದ ನಂತರ ‘ಗುಣಮುಖ’ದ ಬಗ್ಗೆ ಸಾಕಷ್ಟು ಆಶಾವಾದಿಯಾಗಿದ್ದರು. ಒಂದು ದೃಷ್ಟಿಯಿಂದ ಅಂದು ‘ಚರಕ’ ಉತ್ಸವದ ದಿವಸ ಲಂಕೇಶ್ ಅವರನ್ನು ಕುರಿತು ಮಾತಾಡುವಾಗ; ಅಪ್ಪಿ ತಪ್ಪಿ ಈ ವಿಷಯ ನನ್ನ ಬಾಯಿಂದ ಬರಬಾರದೆಂದು ಎಚ್ಚರ ವಹಿಸಿದ್ದೆ. ಯಾಕೆಂದರೆ ಅಂಥ ಸಭೆಯಲ್ಲಿ ಯಾರ್ಯಾರೋ ಇರ್ತಾರೆ. ಒಟ್ಟು ಮಾತಿನ ಅಭಿಪ್ರಾಯವನ್ನು ಕೆಟ್ಟದ್ದಾಗಿ ರವಾನಿಸಲು ಸಾಧ್ಯ.

‘ಚರಕ’ ಉತ್ಸವದಲ್ಲಿ ಮೂರು ದಿನ ಇರಲು ಹೋದವನು. ಆದರೆ ಎರಡು ದಿನ ಮಾತ್ರ ಇದ್ದೆ. ಆ ಜಾಗ ಬಿಡುವ ಮುನ್ನ ಎಲ್ಲವನ್ನು ವ್ಯವಸ್ಥಿತವಾಗಿ ನಿಮರ್ಾಣ ಮಾಡಿರುವುದನ್ನು ಕಂಡು ಧನ್ಯತೆ ನನ್ನ ಮನಸ್ಸಿನಲ್ಲಿ ತುಂಬಿ ಬಂತು. ಹಾಗೆಯೇ ಬಂದ ಅತಿಥಿಗಳಿಗೆಲ್ಲ ಕಬ್ಬಿನ ಹಾಲನ್ನು ದೇಸಿ ಪದ್ಧತಿಯ ಗಾಣದಲ್ಲಿ ಅರೆದು ಕೊಡುತ್ತಿದ್ದುದನ್ನು ಕಂಡು ಸಂತೋಷವಾಯಿತು. ಆ ಗಣದ ಎತ್ತು ಕೂಡ ಮಜಬೂತಾಗಿತ್ತು. ಬಡಕಲು ಎತ್ತಾಗಿರಲಿಲ್ಲ. ಅಲ್ಲಿ ಹತ್ತಾರು ಉದ್ಯೋಗಿ ಹೆಣ್ಣುಮಕ್ಕಳ ಬಳಿ ಮಾತಾಡಿದೆ. ಅವರೆಲ್ಲ ಸಂಭ್ರಮದಿಂದ ಪ್ರಸನ್ನ ಅವರನ್ನ, ಎನ್.ಎಂ. ಕುಲಕಣರ್ಿ, ಪದ್ಮಶ್ರೀಯವರ ಬಗ್ಗೆ ಸಂಭ್ರಮದಿಂದ ಮಾತಾಡಿದರು. ನಾನು ಬೆಂಗಳೂರಿನಲ್ಲಿ ನೂರಾರು ಹೆಣ್ಣುಮಕ್ಕಳು ಗಾಮರ್ೆಂಟ್ ಫ್ಯಾಕ್ಟರಿಗಳಲ್ಲಿ ಹೇಗೆ ನರಳುತ್ತಾರೆ ಎಂಬುದನ್ನು ಹತ್ತಿರದಿಂದ ಕಂಡವನು. ಆದರೆ ಇಲ್ಲಿ ಪ್ರಸನ್ನ ಅವರು ಕಳೆದುಹೋಗಿರುವ ಮತ್ತು ಕಳೆದು ಹೋಗುತ್ತಿರುವ ಅತ್ಯುತ್ತಮವಾದದ್ದಕ್ಕೆ ಪುನರ್ವಸತಿ ಕಲ್ಪಿಸುವ ದೊಡ್ಡ ಮನಸ್ಸಿನಿಂದ ಹೊರಟವರು. ಆದ್ದರಿಂದಲೇ ಎಲ್ಲದಕ್ಕು ಒಂದು ಶಿಸ್ತಿದೆ ಮತ್ತು ನಿದರ್ಿಷ್ಟತೆ ಇದೆ.

ವಾಪಸ್ಸು ಬೆಂಗಳೂರಿಗೆ ಬರುವಾಗ, ದಾರಿಯುದ್ದಕ್ಕೂ ಪ್ರಸನ್ನ ಅವರನ್ನು ಕುರಿತೇ ಯೋಚಿಸುತ್ತ ಬಂದೆ. ನನ್ನ ಜೊತೆಯಲ್ಲಿ ಬಂದಿದ್ದ ಜೇನುಗೂಡು ಮಹೇಶ್ ಅವರಿಗಂತೂ ಪ್ರಸನ್ನ ಆರಾಧ್ಯದ ವ್ಯಕ್ತಿಯಾಗಿಬಿಟ್ಟಿದ್ದರು. ಅದರಲ್ಲೂ ತನ್ನ ವೃತ್ತಿಬಾಂಧವರಿಗೆ ವಸತಿ ಕಲ್ಪಿಸುತ್ತಿದ್ದಾರೆಂಬುದರತ್ತ; ಭಾವನಾತ್ಮಕತೆಯನ್ನು ಬೆಳೆಸಿಕೊಂಡಿದ್ದರು. ಇದು ಸ್ವಾಭಾವಿಕ ಕೂಡ. ಆದರೆ ಹೀಗೆ ಯೋಚಿಸುತ್ತಿರುವಾಗ ಪ್ರಸನ್ನ ನನ್ನ ಬದುಕಿನಲ್ಲಿ ಹೇಗೆ ಬಂದರು ಎಂಬುದೇ ಒಂದು ಸ್ವಾರಸ್ಯಕರವಾದ ವಿಷಯ. ಬೆಂಗಳೂರಿನ ಚಾರಿತ್ರಿಕ ಸೆಂಟ್ರಲ್ ಕಾಲೇಜ್ ನಮ್ಮ ನಮ್ಮ ಬದುಕಿನಲ್ಲಿ ಯಾರ್ಯಾರನ್ನೋ ಬೆಸೆದಂತೆ; ಇವರೂ ಕೂಡ ಕೂಡಿಕೊಂಡರು. ಅದು ಲೈಬ್ರರಿಯಲ್ಲಿರಬಹುದು, ಕೆ. ಮರುಳಸಿದ್ದಪ್ಪ ಅವರ ಕೊಠಡಿಯಲ್ಲಿರಬಹುದು ಅಥವಾ ಲೈಬ್ರರಿ ಮುಂಭಾಗದ ಪಿ.ಪಿ.ಕಟ್ಟೆಯ ಬಳಿ ಇರಬಹುದು. ಎಲ್ಲ ವಿಭಾಗಗಳ ಸಾಂಸ್ಕೃತಿಕ ಮನಸ್ಸುಗಳು ಒಂದೆಡೆ ಸೇರುವ ವಾತಾವರಣ ತುಂಬ ಸೃಜನಾತ್ಮಕವಾಗಿಯೇ ಇತ್ತು. ಪ್ರಸನ್ನ ವಿಜ್ಞಾನದ ವಿದ್ಯಾಥರ್ಿಯಾದರೂ ಹೆಚ್ಚು ಮಿಕ್ಸ್ ಆಗುತ್ತಿದ್ದುದು ಸಾಹಿತ್ಯದ ವಿದ್ಯಾಥರ್ಿಗಳ ಜೊತೆಯಲ್ಲಿ. ಇದೇ ಸಮಯಕ್ಕೆ ಗೋಪಾಲಕೃಷ್ಣ ಅಡಿಗರು ಬೆಂಗಳೂರಿಗೆ ಬಂದ ಪ್ರಾರಂಭದ ವರ್ಷಗಳು. ಸಮಾಜವಾದಿ ಹಿನ್ನೆಲೆಯಿಂದ ಬಂದ ಬಹುಪಾಲು ಲೇಖಕರಿಗೆ ‘ನೆಹರೂ ನಿವೃತ್ತರಾಗುವುದಿಲ್ಲ’ ಕವನವಂತೂ ತುಂಬ ಪ್ರಭಾವ ಬೀರಿತ್ತು. ನೆಹರೂ ಕಾಲವಾಗಿ ಐದಾರು ವರ್ಷವಾಗಿದ್ದರೂ; ಕಾಂಗ್ರೆಸ್ಸೇ ನೆಹರೂ ಎಂದು ಯೋಚಿಸುವ ಮನಸ್ಥಿತಿಗಳು ದಟ್ಟವಾಗಿದ್ದುವು. ಆದ್ದರಿಂದಲೇ ಭರತವಾಕ್ಯಕ್ಕೂ ಬೆದರನೀತ ಧೀರೋದಾತ್ತ ನಾಯಕ / ತೆರೆ ಬಿದ್ದರೂ ರಂಗಬಿಡದ ಚಿರ ಯುವಕ / ಹೊತ್ತು ಸುತ್ತುತ್ತಾನೆ ಬಲುಭಾರಿ ಭೂಗೋಳ ಎಂಬ ಇಂಥ ಸಾಲುಗಳು ಕಾಂಗ್ರೆಸ್ಸನ್ನು ವ್ಯಂಗ್ಯವಾಗಿ ನೋಡುವ ಕಾಲವದು. ಲಂಕೇಶ್ ಅವರು ಪಕ್ಕಾ ಸಮಾಜವಾದಿಯಾದರೂ; ಜನಸಂಘದ ವಿರೋಧಿಯಾದರೂ ಅಡಿಗರ ಕಾರಣಕ್ಕಾಗಿ ಚುನಾವಣಾ ಪ್ರಚಾರಕ್ಕಿಳಿದಿದ್ದರು. ನಮ್ಮಂಥವರನ್ನು ಪೋಸ್ಟಸರ್್ಗಳನ್ನು ಅಂಟಿಸುವುದಕ್ಕೆ, ಬೀದಿಗಳಲ್ಲಿ, ಗೋಡೆಗಳ ಮೇಲೆ ಘೋಷಣೆಗಳನ್ನು ಬರೆಯುವುದಕ್ಕೆ ಪ್ರಸನ್ನ ಮತ್ತು ನನಗೆ ಜವಾಬ್ದಾರಿ ವಹಿಸಿದ್ದರು. ಲಂಕೇಶ್ ಅವರ ಮಾತನ್ನು ನಾವು ಮೀರುತ್ತಿರಿಲ್ಲ ಎನ್ನುವುದರ ಜೊತೆಗೆ; ಅಡಿಗರ ಕಾವ್ಯದಷ್ಟೇ: ಅವರು ಬೆಂಗಳೂರಿಗೆ ಬಂದ ಹೊಸದರಲ್ಲಿ ಸಿಟಿ ಮಾಕರ್ೆಟ್ ಬಳಿಯ ಎಸ್.ಎಲ್.ಎನ್. ಕಾಲೇಜಿನಲ್ಲಿ ‘ಕತ್ತಲು ಮತ್ತು ಏಕಾಂತ’ ಕುರಿತ ಉಪನ್ಯಾಸ ನನ್ನ ಮೇಲೆ ತುಂಬ ಪ್ರಭಾವ ಬೀರಿತ್ತು. ಈಗಲೂ ನಾನು ಕೇಳಿದ ಎಷ್ಟೋ ಅಡಿಗರ ಉಪನ್ಯಾಸಗಳಲ್ಲಿ ಅದು ನನಗೆ ತುಂಬ ಪ್ರಿಯವಾದದ್ದು. ಈ ಎಲ್ಲ ಕಾರಣಗಳಿಗೂ ನಾನೊಬ್ಬ ಪಕ್ಕಾ ನೆಹರೂ ಅಭಿಮಾನಿಯಾಗಿದ್ದರೂ; ಲೋಹಿಯಾ ಅವರ ಮೂಲಕ ನೆಹರೂ ಅವರನ್ನು ಅಥರ್ೈಸಿಕೊಳ್ಳಲು ಪ್ರಯತ್ನಿಸಿದ ದಿನಗಳವು.

ಇರಲಿ, ನಾವು ರಾತ್ರಿಯೆಲ್ಲ ಕೆಲಸ ಮಾಡತೊಡಗಿದೆವು. ಬೆಂಗಳೂರಿನ ಶೇಷಾದ್ರಿಪುರಂನ ಬಬ್ಬೂರು ಕಮ್ ಹಾಸ್ಟೆಲ್ ನಲ್ಲಿ ಲಂಕೇಶ್ ಮುಂತಾದವರ ಭಾಷಣವಿತ್ತು. ಭಾಷಣಗಳ ಜೊತೆಗೆ ವಾಗ್ವಾದಗಳು. ಇದೆಲ್ಲವನ್ನು ಮುಗಿಸಿಕೊಂಡು ಮೆಜೆಸ್ಟಿಕ್ ನಲ್ಲಿದ್ದ ಬಂಡಿಶೇಷಮ್ಮ ಹಾಸ್ಟೆಲ್ ಗೆ ಹೋದೆ. ಹಾಸ್ಟೆಲ್ ಬಾಗಿಲೇ ತೆಗೆಯಲಿಲ್ಲ. ಆ ಹಾಸ್ಟೆಲ್ ತುಂಬ ಇದ್ದವರು ಕೆಂಗಲ್ ಹನುಮಂತಯ್ಯನವರ ಅಭಿಮಾನಿಗಳು. ಕೊನೆಗೆ ಸುಮಾರು ಒಂದೂವರೆ ಗಂಟೆ ಹೋರಾಟ ಮಾಡಿದ ಮೇಲೆ ಹಾಸ್ಟೆಲ್ ಮ್ಯಾನೇಜರ್ ಗೇಟ್ ತೆಗೆಸಿದರು. ಅವರು ನನ್ನನ್ನು ಕಂಡರೆ ತುಂಬ ಇಷ್ಟಪಡುತ್ತಿದ್ದರು. ಅಡಿಗರು ಸೋತರು. ತತ್ವಚಿಂತನೆಯ ದೃಷ್ಟಿಯಿಂದ ‘ಸಾಂಕೇತಿಕ ಹೋರಾಟ’ ನಮ್ಮ ಮನಸ್ಸುಗಳಲ್ಲಿ ಮೊದಲನೆಯ ಬಾರಿಗೆ ಜಾಗ ಗಿಟ್ಟಿಸಿಕೊಂಡಿತ್ತು. ಇದಾದ ಕೆಲವೇ ತಿಂಗಳುಗಳಲ್ಲಿ ‘ಮುಕ್ತ’ ಪತ್ರಿಕೆಯನ್ನು ತರಲು ಪ್ರಾರಂಭಿಸಿದೆವು. ಎಲ್ಲವೂ ಪ್ರಸನ್ನ ಅವರದ್ದೇ ಮೇಲುಗೈ. ಒಂದಷ್ಟು ದಿವಸ ತುಂಬ ಸೆನ್ಸೇಷನಲ್ಲಾಗಿ ಬಂದ ತಿಂಗಳ ಪತ್ರಿಕೆ. ನಾನು ಆಗ ತಾನೇ ಆರ್.ವಿ. ಹೈಸ್ಕೂಲಿನಲ್ಲಿ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಸೇರಿಕೊಂಡಿದ್ದೆ. ಪ್ರತಿ ತಿಂಗಳು ಇಪ್ಪತ್ತೈದು ರೂಪಾಯಿ ಮುಕ್ತಾಗೆ ಕೊಡುತ್ತಿದ್ದೆ. ಹಾಗೆಯೇ ಯಾವುದಾದರೂ ವಿಷಯದ ಬಗ್ಗೆ ಕಿ.ರಂ. ಅಂಥವರಿಂದ ಲೇಖನ ಬರೆಸಬೇಕಾದರೆ ಹುಚ್ಚನಾಗಿಬಿಡುತ್ತಿದ್ದೆ. ಪ್ರಸನ್ನ ಲೇಖನಕ್ಕಾಗಿಯೇ ಹೀನಾಯವಾಗಿ ನಡಕೊಳ್ಳುತ್ತಿದ್ದರು. ಕಿ.ರಂ. ಅವರು ಆಗ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಬಿಡುವಿನ ಸಮಯದಲ್ಲಿ ಡಿಕ್ಟೇಟ್ ಮಾಡಿದರೆ ಬರೆದುಕೊಳ್ಳುತ್ತಿದ್ದೆ. ಒಂದೊಂದು ಪ್ಯಾರಾಗೂ ಎಷ್ಟೋ ಸುತ್ತಾಡಿಸುತ್ತಿದ್ದರು. ಆದರೆ ವಿದ್ಯಾಥರ್ಿ ಭವನದಲ್ಲಿ ದೋಸೆ ಮತ್ತು ರವೆ ವಡೆಗೆ ಕೊರತೆ ಇರುತ್ತಿರಲಿಲ್ಲ. ಇದೇ ಕಾಲಘಟ್ಟದಲ್ಲಿ ‘ಮುಕ್ತ’ ತುಂಬ ಸುದ್ದಿ ಮಾಡಿತ್ತು. ಲಂಕೇಶ್ ಅವರು ಬಿ.ವಿ. ಕಾರಂತರನ್ನ ದೃಷ್ಟಿಯಲ್ಲಿಟ್ಟುಕೊಂಡು ದ.ಕ.ಗಳು ನಂಬಿಕೆಗೆ ಅನರ್ಹರು’ ಎಂಬ ಹೇಳಿಕೆಯನ್ನೊಳಗೊಂಡ ಲೇಖನ ಪ್ರಕಟವಾಗಿತ್ತು. ಅದಕ್ಕೆ ಪ್ರಸನ್ನ ಅವರು ಕಾರಣರೇನು ಅಲ್ಲ. ಆದರೆ ‘ಮುಕ್ತ’ ಗುಂಪಿನಲ್ಲಿ ಬೇರೆ ಬೇರೆ ತುಂಟತನದ ಮನಸ್ಸುಗಳು ತುಂಬ ಕ್ರಿಯಾಶೀಲವಾಗಿದ್ದುವು. ಅದರಲ್ಲಿ ಮುಖ್ಯವಾಗಿ ಎನ್.ಕೆ. ಮೋಹನರಾಂ ಮತ್ತು ಟಿ.ಎನ್. ಸೀತಾರಾಂ ಮುಂತಾದವರು. ಸ್ವಲ್ಪ ಮಟ್ಟಿಗೆ ಕಿ.ರಂ. ಅವರೂ ಭಾಗಿಯಾಗಿದ್ದರು.

ಹೀಗೆಯೇ ಪ್ರಸನ್ನ ಅವರು ‘ಮುಕ್ತ’ದ ವಿಷಯಕ್ಕಾಗಿ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಭೇಟಿಯಾದೆವು. ಕಿ.ರಂ. ಅವರನ್ನು ನೋಡಿದೆವು. ಬುಲ್ ಟೆಂಪಲ್ ರೋಡ್ ಪಕ್ಕ ಇದ್ದ ಅವರ ಮನೆಗೆ ಕರೆದುಕೊಂಡು ಹೋದರು. ಅವರ ತಾಯಿ ಊಟ ಮಾಡಲು ಒತ್ತಾಯ ಮಾಡಿದರು. ಊಟಕ್ಕೆ ಕೂತಾಗ ತಟ್ಟೆ ತುಂಬ ಷೇಕ್ ಆಗುತ್ತಿತ್ತು. ಅದರಲ್ಲೂ ಸಿಮೆಂಟಿನ ಫ್ಲೋರ್ ತೆಳು ಪ್ರಮಾಣದಲ್ಲಿ ತಗ್ಗು ದಿಣ್ಣೆ ಇತ್ತು. ನನಗೆ ಊಟ ಮಾಡುವಾಗ ತಟ್ಟೆ ಷೇಕ್ ಆದರೆ ಸಂತೋಷವಾಗಿ ಊಟ ಮಾಡಲು ಆಗುವುದಿಲ್ಲ. ಎಡಗೈಯಲ್ಲಿ ತಟ್ಟೆ ಹಿಡಿದು ತಿನ್ನುತ್ತಿದ್ದೆ. ನಾನು ತಟ್ಟೆ ಹಿಡಿದಿರುವುದನ್ನು ಕಂಡು ನಮ್ಮಮ್ಮ ನೋಡಿದರೆ ಬೈತಾರೆ. ಶೂದ್ರನ ರೀತಿಯಲ್ಲಿ ತಿನ್ನಬೇಡ ಎಂದರು. ಒಂದು ಕ್ಷಣ ತುಂಬ ಬೇಸರವಾಯಿತು. ಪ್ರಸನ್ನ ಇದನ್ನು ಸ್ವಾಭಾವಿಕವಾಗಿ ಹೇಳಿರಬಹುದು. ಆದರೆ ಅದನ್ನು ತುಂಬ ಭಾವನಾತ್ಮಕವಾಗಿ ತೆಗೆದುಕೊಂಡೆ. ಹಾಗೆಯೇ ಯಾವ ತಾಯಿಗೂ ‘ಶೂದ್ರ’ನ ರೀತಿಯಲ್ಲಿ ಎಂಬ ಶಬ್ದ ಗೊತ್ತಿರುವುದೇ ಇಲ್ಲ. ಜಾತೀಯತೆ ರಾತ್ರೋ ರಾತ್ರಿ ಓಡಿ ಹೋಗಿಬಿಡಬೇಕು ಎಂಬ ಕಾರಣಕ್ಕಾಗಿ; ನನ್ನ ಹೆಸರಿನ ಮುಂದಿನ ರೆಡ್ಡಿಯನ್ನು ತೆಗೆದಿದ್ದೆ. ಈಗಾಗಿದ್ದರೆ ನಿಜವಾಗಿಯೂ ತೆಗೆಯುತ್ತಿರಲಿಲ್ಲ. ಇರಲಿ, ಇದಾದ ಕೆಲವೇ ದಿನಗಳಲ್ಲಿ ಪ್ರಸನ್ನ ‘ಮುಕ್ತ’ವನ್ನು ಬೇರೆಯವರಿಗೆ ವಹಿಸಲು ಕಿ.ರಂ. ಅವರ ಮನೆಯಲ್ಲಿ ಒಂದು ಸಭೆ ಸೇರಿತ್ತು. ಕೆಲವರು ನನ್ನ ಹೆಸರು ಸೂಚಿಸಿದರೂ ಪ್ರಸನ್ನ ಒಪ್ಪಲಿಲ್ಲ. ನಾನು ಹೆಚ್ಚಾಗಿ ಯಾವುದಕ್ಕೂ ಪ್ರತಿಕ್ರಿಯಿಸಲು ಹೋಗಲಿಲ್ಲ. ಕಿ.ರಂ. ಅವರು ತಲೆ ನೇವರಿಸಿ ‘ಹಾಳಾಗಿ ಹೋಗಲಿ ಬಿಡೋ ಶ್ರೀನಿವಾಸ’ ಎಂದು ತಮಗೆ ಪ್ರಿಯವಾದ ಜಾಗಕ್ಕೆ ಕರೆದುಕೊಂಡು ಹೋಗಿ ಏನೇನೋ ಕೊಡಿಸಿದರು.

ನನ್ನ ಮನಸ್ಸಿನ ತುಂಬ ‘ಶೂದ್ರ’ ಎಂಬುದು ಕೊರೆಯುತ್ತಲೇ ಇತ್ತು. ಅಷ್ಟರಲ್ಲಿ ಯು.ಆರ್. ಅನಂತಮೂತರ್ಿಯವರ ಪ್ರಜ್ಞೆ ಮತ್ತು ಪರಿಸರ ಸಾಕಷ್ಟು ಪ್ರಭಾವ ಬೀರಿತ್ತು. ಇದೇ ಸಮಯದಲ್ಲಿ ನನಗೆ ರಾಜಕೀಯವಾಗಿ ತುಂಬ ಪ್ರಿಯರಾದ ಎಸ್. ವೆಂಕಟರಾಂ ಅವರು ಮೆಜೆಸ್ಟಿಕ್ ನಲ್ಲಿ ಊಟಕ್ಕೆ ಕರೆದುಕೊಂಡು ಹೋದರು. ಜೊತೆಯಲ್ಲಿ ಕೊಣಂದೂರು ಲಿಂಗಪ್ಪ ಅವರೂ ಇದ್ದರು. ಊಟ ಮಾಡುವಾಗ ವೆಂಕಟರಾಂ ಅವರು ಯಾರಾದರೂ ‘ಶೂದ್ರ’ ಹೆಸರಿನಲ್ಲಿ ಪತ್ರಿಕೆ ತಂದರೆ ಎಷ್ಟು ಚೆನ್ನಾಗಿರುತ್ತದೆಂದು ಹೇಳಿದರು. ಅದನ್ನು ಕೊಣಂದೂರು ಲಿಂಗಪ್ಪ ಅವರೂ ಅನುಮೋದಿಸಿದರು. ಈ ಇಬ್ಬರ ಧ್ವನಿ ದಟ್ಟವಾಗಿ ಮನಸ್ಸಿನಲ್ಲಿ ಬೇರೂರತೊಡಗಿತ್ತು. ಆದರೆ ನಾನು ಶೂದ್ರವನ್ನು ತಂದೆ. ಅದೇ ಬೇರೆ ವಿಷಯ. ಆದರೆ ಒಂದು ದಿನವೂ ಪ್ರಸನ್ನ ಅವರ ಮುಂದೆ ಇದನ್ನು ಯಾವುದೇ ಕಾರಣಕ್ಕಾಗಿ ಪ್ರತಿಕ್ರಿಯಿಸಲು ಹೋಗಲಿಲ್ಲ. ಹಾಗೆ ಪ್ರತಿಕ್ರಿಯಿಸುವುದರಿಂದ ನಾನೇ ‘ಸಿಕ್’ ಆಗ್ತೀನಿ ಎಂಬುದೂ ಗೊತ್ತು. ಈ ದೃಷ್ಟಿಯಿಂದ ಕೊನೆಯ ಪಕ್ಷ ‘ಶೂದ್ರ’ದ ಮೂಲಕ ನೂರಾರು ಮನಸ್ಸುಗಳ ವೈಪರೀತ್ಯಗಳನ್ನು ನಾನು ಒಳಗೆ ಬಿಟ್ಟುಕೊಳ್ಳಲು ಸಾಧ್ಯವಾಗಿದೆ. ಒಂದು ವೇಳೆ ಬಿಟ್ಟುಕೊಳ್ಳದಿದ್ದರೆ; ಪ್ರಸನ್ನ ಅವರ ಇಷ್ಟು ವರ್ಷಗಳ ಸಾಧನೆಯನ್ನು ಗುಮಾನಿಯಿಂದ ನೋಡುವ ರೋಗಿಷ್ಟ ಮನಸ್ಸು ನನ್ನೊಳಗೆ ಆವರಿಸಿಕೊಂಡು ಬಿಡುತ್ತಿತ್ತು.

ಪ್ರಸನ್ನ ಅವರು ಭಾರತದ ರಂಗಭೂಮಿಯ ವಿಶಾಲಭೂಮಿಕೆಯಲ್ಲಿ ಬಹುದೊಡ್ಡ ಹೆಸರು. ಆ ಹೆಸರನ್ನು ಆಸ್ವಾದಿಸುವ ಬಹುಪಾಲು ಮಂದಿಗೆ ಅವರ `ದೇಸಿ’ ಪರಿಕಲ್ಪನೆಗಳು ಹಾಗೂ ಅದರ ಮುಂದುವರಿದ ಭಾಗವಾಗಿ `ಚರಕ’ ಪ್ರತಿಷ್ಠಾನ ಬೆಳೆಸಿರುವ ಸಾಧನೆ ಗೊತ್ತಿರುವುದೇ ಇಲ್ಲ. ಅವರ ಕಾವ್ಯ ಮತ್ತು ಉತ್ತಮ ಕಾದಂಬರಿಗಳಾದ ‘ಸ್ವಯಂವರ’ ಹಾಗೂ ‘ನೌಟಂಕಿ’ ಗೊತ್ತಿರುವುದೇ ಇಲ್ಲ. ಇಲ್ಲಿಯೂ ಅಷ್ಟೇ ಎಷ್ಟು ಮಂದಿ ಸಾಹಿತ್ಯದ ಇಲ್ಲವೇ ರಂಗಭೂಮಿಯ ವಿದ್ಯಾಥರ್ಿಗಳಿಗೆ ಗೊತ್ತಿದೆ? ಹಾಗೆಯೇ ಕನರ್ಾಟಕದಲ್ಲಿ `ಸಮುದಾಯ’ವೆಂಬ ಸಾಂಸ್ಕೃತಿಕ ಸಂಘಟನೆಯಾದ ರಂಗಭೂಮಿಯ ವಿವಿಧ ಮುಖಗಳನ್ನು ಪ್ರತಿಬಿಂಬಿಸುವ ಅಪರೂಪದ ಸಂಸ್ಥೆಯನ್ನು ಪ್ರಾರಂಭಿಸಿದರು. ಅದರ ಪ್ರಾರಂಭದಲ್ಲಿ ನಾವೆಲ್ಲ ಕೂತು ಚಚರ್ೆಮಾಡಿ ಅದಕ್ಕೊಂದು ಆಕಾರಕೊಟ್ಟರೂ. ಅದು ಕನರ್ಾಟಕದ `ಇಪ್ಟಾ’ ರೀತಿಯಲ್ಲಿ ಕೆಲಸಮಾಡಿದೆ. ಅದಕ್ಕೆ ವೈವಿಧ್ಯಮಯವಾದ ವೇದಿಕೆಯನ್ನು ನಿಮರ್ಾಣ ಮಾಡಿದರು. ಅದರ ಜಾಥಾಗಳಿಗೆ ಸಂಸ್ಕೃತಿ ಚಿಂತಕರನ್ನು ಒಳಗೆ ಬಿಟ್ಟುಕೊಳ್ಳುವುದಕ್ಕೆ ಅನುಕೂಲವಾಯಿತು. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಸಮುದಾಯದ ಶಾಖೆ ಕ್ರಿಯಾಶೀಲವಾಗಿದ್ದದು ಮಹತ್ವಪೂರ್ಣವಾದದ್ದು, ಕೆಲವು ವರ್ಷ ಸಿ.ಜಿ.ಕೃಷ್ಣಸ್ವಾಮಿ ಇದರ ಮುಂದುವರಿದ ಭಾಗವಾಗಿದ್ದರು ಎಂಬುದೂ ಕೂಡ ಅರ್ಥಪೂರ್ಣವಾದದ್ದು. ಇಲ್ಲಿ ಸಿ.ಎಸ್. ಲಲಿತ ಮತ್ತು ಆಕೆಯ ಸೋದರ ನಿಜಗುಣ ಹಾಗೂ ಅದ್ಭುತ ನಟ ಲೋಹಿತಾಶ್ವ ಎಷ್ಟು ಕ್ರಿಯಾಶೀಲರಾಗಿದ್ದರು. ಇದರೊಟ್ಟಿಗೆಯೇ ಗುತರ್ಿಸಿಕೊಂಡ ಸಮುದಾಯದ ವಾತರ್ಾಪತ್ರ ಅತ್ಯುತ್ತಮ ಕೆಲಸ ಮಾಡಿತು. ಪ್ರಸನ್ನ ಒಬ್ಬ ದೊಡ್ಡ ಸಂಘಟಕ. ಎರಡನೇ ಮಾತಿಲ್ಲ. ಆದರೆ ಅಲ್ಲಲ್ಲೇ ಅಮೂಲ್ಯ ಪಳೆಯುಳಿಕೆಗಳನ್ನು ಬಿಟ್ಟು ಹೋಗುವುದರಲ್ಲಿಯೂ ನಿಸ್ಸೀಮ. ಅದಕ್ಕೆ ಮುಖ್ಯ ಕಾರಣ ಹಿಂದೆ ತಿಳಿಸಿದಂತೆ; ಅತೃಪ್ತಿ ಅದರ ಮುಂದುವರಿದ ಭಾಗವಾಗಿ ಹುಡುಕಾಟ. ಇದು ಸಾಲದು ಇದರ ಮುಂದುವರಿದ ಪದರುಗಳು ಇನ್ನೂ ಏನೇನೋ ಇದೆ ಎಂದು ತಿಳಿದವರು. ಹೀಗೆ ತಿಳಿದೇ `ಚರಕ’ ಸಂಸ್ಥೆಯ ಮೂಲಕ `ದೇಸೀ’ಯತೆಯ ವಿವಿಧ ನೆಲೆಗಳನ್ನು ಹುಡುಕುತ್ತಿರುವುದು. ಇದೊಂದು ಗಾಂಧೀಜಿಯವರನ್ನು ಅರಿಯುವ ಕೆಲಸವೂ ಆಗಿದೆ. ಸ್ವಲ್ಪ ಸಂಯಮವೂ ಮನದಲ್ಲಿ ನೆಲೆಯೂರುತ್ತಿದೆ. ಈ ಶಾಂತ ಮನಸ್ಥಿತಿಯ ಹುಡುಕಾಟದ ಹಿಂದೆಯೇ ಮೂಲಭೂತವಾಗಿ ತಾನೊಬ್ಬ `ರಂಗಕಮರ್ಿ’. ಇದಕ್ಕಾಗಿ ಮಾಡಬೇಕಾದದ್ದು ಬೇಕಾದಷ್ಟಿದೆ ಎಂಬ ತಹತಹದ ಕಾವು ಆರಿಲ್ಲ ಎಂಬುದೂ ಕೂಡ ಆಶಾದಾಯಕವಾದದ್ದು. ಪ್ರಸನ್ನ ಅವರನ್ನು ತುಂಬ ಹತ್ತಿರದಿಂದ ಬಲ್ಲ ಯಾರಿಗೆ ಬೇಕಾದರೂ ಬಣ್ಣವನ್ನು ಬಳಿದುಕೊಂಡು ಹಿರಿತನದ ವ್ಯಕ್ತಿಯಾಗಿ ಕಾಣಲು ಹಂಬಲಿಸುತ್ತಿರುವಂಥವರು. ಹಿರಿತನ ಬಂದಿದ್ದರೂ ಅಲ್ಲಿಯೂ ಅದೂ ಸಾಲದು ಎಂಬ ಒಳಗುದಿ ಇದೆ. ಇದಕ್ಕೆ ಮತ್ತೊಂದು ಮುಖ್ಯಕಾರಣವೂ ಇರಬಹುದು. ಈ ಮಹಾನುಭಾವನ ಪಾದಗಳು ಒಂದೇ ಕಡೆ ನೆಲೆಯೂರಿಲ್ಲ. ಎಲ್ಲ ಕ್ಷೇತ್ರಗಳ ದೊಡ್ಡ ಮನಸ್ಸುಗಳ ಸಂಪರ್ಕದಲ್ಲಿರುವಂಥವರು, ಸಂವಾದದಲ್ಲಿ ತೊಡಗಿರುವಂಥವರು. ಆದ್ದರಿಂದ ಸ್ವಾಭಾವಿಕವಾಗಿಯೇ ತ್ರಿಲೋಕ ಸಂಚಾರಿಯ ಗುಣ ಸ್ಥಾಯಿಯಾಗಿರುವಂಥದ್ದು. ಇಂಥವರಿಗೆ ಮತ್ತೊಂದು ಮುಖ್ಯ ಕಾರಣವೂ ಇರುತ್ತದೆ. ಅದು ಬಾಲ್ಯಕಾಲದಿಂದ ಬಂದದ್ದು. ಅವರ ತಂದೆ ಸಕರ್ಾರಿ ಕೆಲಸದಲಿದ್ದುದರಿಂದ `ತಿರುಗಾಟ’ ಕರ್ತವ್ಯದ ದೃಷ್ಟಿಯಿಂದ ಅಗತ್ಯವಾಗಿತ್ತು. ಈಗ ಅದು ಪ್ರಸನ್ನವರಿಗೆ `ಅರಿವಿನ’ ಮುಂದುವರಿದ ಭಾಗವಾಗಿದೆ. ನಮ್ಮ ಹಾಗೆ ರೈತಕುಟುಂಬದ ಹಿನ್ನೆಲೆಯಿಂದ ಬಂದವರಿಗೆ `ಓಡಿಹೋಗುವ’ ಅಥವಾ `ತಿರುಗಾಟ’ದ ಪ್ರಮೇಯವೇ ಬಂದಿರುವುದಿಲ್ಲ. ಯಾಕೆಂದರೆ ಒಂದು ದೊಡ್ಡ ಕುಟುಂಬದ ಭಾಗವಾದ ಹೊಲಗದ್ದೆ ಗಿಡಮರ ಬಳ್ಳಿ ಹಸು ಕರು ಎಲ್ಲವೂ ಭಾಗಿಯಾಗಿರುತ್ತದೆ, ಮತ್ತು ಒಂದು ರೀತಿಯಲ್ಲಿ ಬಂಧಿಸಿರುತ್ತದೆ. ಅದರ ಜೊತೆಗೆ ಮಳೆಗಾಲ ಮತ್ತು ಬೇಸಿಗೆಕಾಲ ವಿಚಿತ್ರ ರೀತಿಯ ಆತಂಕಗಳನ್ನು ಸೃಷ್ಟಿಸಿರುತ್ತದೆ. ಪ್ರತಿ ತಿಂಗಳು ಸಂಬಳ ಬರುವ ಸಕರ್ಾರಿ ನೌಕರಿಯ ಕುಟುಂಬಗಳಿಗೆ ಇಂಥ ಅನಿಶ್ಚತೆಯಿಂದ ಕೂಡಿದ ಆತಂಕಗಳಿರುವುದಿಲ್ಲ. ಹಾಗೆಯೇ ಗಾಢವಾಗಿ ಕಾಡುವ ನೆಲೆಗಳಿರುವುದಿಲ್ಲ. ಇವೆಲ್ಲ ಅಲ್ಲವೆಂದು ಕೊಡವಿಕೊಂಡು ಮುಂದೆ ಮುಂದೆ ಹೋಗುತ್ತಿರಬಹುದು. ನನ್ನಂಥವನು ಕುಡಿಯುವ ನೀರನ್ನು ಅಳತೆ ಪ್ರಕಾರ ಕುಡಿದ ದಿನಗಳಿವೆ. ಇದರ ಮುಂದುವರಿದ ಭಾಗಗಳು ಬೇಕಾದಷ್ಟಿರುತ್ತವೆ. ಇದನ್ನು ಮುಖ್ಯವಾಗಿ ಪ್ರಸ್ತಾಪಿಸಿದ್ದು ಒಂದು ಮುಖ್ಯ ಕಾರಣಕ್ಕಾಗಿ; ಯಾವುದನ್ನು ಲೋಹಿಯಾ ಕಾಡರ್್ ಹೋಲ್ಡಸರ್್ ಕುರಿತು ಚಚರ್ಿಸುವರೋ ಅಂದರೆ ಸಕರ್ಾರಿ ಸಂಬಳ ಪಡೆಯುವಂಥವರು ಮುಂದುವರಿದು ಅವರನ್ನೆಲ್ಲ ನವ ಬ್ರಾಹ್ಮಣರು ಎಂದು ಉಲ್ಲೇಖಿಸುವರು. ಪ್ರಸನ್ನ ಈ ರೀತಿಯಲ್ಲಿ ಪ್ರತಿ ತಿಂಗಳು ಸಂಬಳ ಪಡೆಯುವ ಮತ್ತು ಒಂದು ವೃತ್ತಿಯನ್ನು ಕಾಪಾಡುವ ದಿಕ್ಕಿನಲ್ಲಿದ್ದಾರೆ. ಅಷ್ಟರಮಟ್ಟಿಗೆ ಅಂಥ ನೂರಾರು ಕುಟುಂಬಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಆತಂಕಗಳನ್ನು ಕಡಿಮೆ ಮಾಡಿದಂತೆ. ಈ ದೃಷ್ಟಿಯಿಂದಲೂ `ಚರಕ’ ಸಂಸ್ಥೆ ಅನನ್ಯ ಅನ್ನಿಸಿಬಿಟ್ಟಿದೆ.

ಹಿಂದಿನ ಶತಮಾನದ ಎಪ್ಪತ್ತರ ದಶಕದ ಪ್ರಾರಂಭದಲ್ಲಿ ವಿಜ್ಞಾನದಲ್ಲಿ ಉನ್ನತ ಶ್ರೇಣಿಯ ಮಾಸ್ಟರ್ ಡಿಗ್ರಿಯನ್ನು ಪಡೆದದ್ದು. ಕಾನ್ಪುರದ ಪ್ರತಿಷ್ಟಿತ ಐ.ಐ.ಟಿಯಲ್ಲಿ ಶಿಕ್ಷಣ. ಅದೂ ಸಾಲದೆಂಬಂತೆ ಇವೆರಡರ ವಿರುದ್ಧ ದಿಕ್ಕಿನ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ. ಇವುಗಳ ಎತ್ತಣ ಸಂಬಂಧ? ಕೊನೆಗೂ ಹುಡುಕಾಟವೇ ಮೂಲಭೂತವಾದದ್ದು. ಇದರ ಕಾರಣಕ್ಕಾಗಿಯೇ ಕನ್ನಡದ ಸಂದರ್ಭದಲ್ಲಿ ಹುಟ್ಟಿಕೊಂಡ ಇವರ ನಿದರ್ೇಶನದ ಕದಡಿದ ನೀರು, ತಾಯಿ, ಗೆಲಿಲಿಯೋ, ಹದ್ದುಮೀರಿದ ಹಾದಿ, ಹ್ಯಾಮ್ಲೆಟ್ ಮುಂತಾದ ನಾಟಕಗಳು ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸಿದವು. ಯಾರ್ಯಾರನ್ನೋ ಒಳಗೆ ಬಿಟ್ಟುಕೊಂಡಿತು. ಅಷ್ಟೇ ಅಲ್ಲ ಇವರೆಲ್ಲ ಬಿ.ವಿ. ಕಾರಂತ ಅಂತವರನ್ನು ಗಮಾನಿಯಿಂದ ನೋಡಲು ಸಾಧ್ಯವಾಯಿತು. ಆರೋಗ್ಯ ಪೂರ್ಣ ರಂಗಭೂಮಿಯ ಕಾರಣಕ್ಕಾಗಿ ಸಮುದಾಯ ಅದರ ವಾತರ್ಾಪತ್ರ ಪತ್ರಿಕೆ ಹುಟ್ಟಿಕೊಂಡರೂ ಕೂಡ ಈ ಕಾಲಘಟ್ಟದಲ್ಲಿಯೇ ಪ್ರಸನ್ನ ಅವರಿಗೆ ಹೇಗೆ `ಸ್ಮಾಲ್ ಈಸ್ ಬ್ಯೂಟಿಫುಲ್’ ಮುಖ್ಯವೋ ಅದನ್ನು ‘ಬಿಗ್ ಈಸ್ ಆಲ್ಸೋ ಬ್ಯೂಟಿಫುಲ್’ ಮಾಡುವ ಹಂಬಲದಿಂದ ಹೊರಡುವಂಥವರು. ಹೊರಟರೂ ಕೂಡ ದಟ್ಟವಾದ ಅತೃಪ್ತಿಯನ್ನು ಬೆನ್ನಿಗಂಟಿಸಿಕೊಂಡೇ ತಿರುಗುವರು. ಆದ್ದರಿಂದಲೇ ಇವರಿಗೆ ಭೌತಿಕವಾಗಿಯೂ ಸಹ ನಿಧಾನವಾಗಿ ನಡೆಯಲು ಬರುವುದಿಲ್ಲ ಇದು ಕೇವಲ ನಮ್ಮ ನಡುವಿನ ನಡಿಗೆ ಮಾತ್ರವಲ್ಲ. ಭಾರತದ ಉದ್ದಗಲಕ್ಕೂ ಅಲ್ಲೆಲ್ಲ ಹಿಂದಿ, ಪಂಜಾಬಿ, ಇಂಗ್ಲೀಷ್, ಮಲೆಯಾಳಂ ಮತ್ತು ತಮಿಳು ನಾಟಕಗಳನ್ನು ನಿದರ್ೇಶಿಸುತ್ತ; ಸಮಯ ಸಿಕ್ಕಿದಾಗಲೆಲ್ಲ ಕನ್ನಡ ಭಾಷೆ ಮತ್ತು ಸಾಹಿತ್ಯ ಕುರಿತು ಹೆಚ್ಚುಗಾರಿಕೆಯನ್ನು ಪರಿಚಯಿಸುವಂಥವರು. ಇದನ್ನು ಸಮರ್ಪಕವಾಗಿ ಆಟರ್ಿಕ್ಯುಲೇಟ್ ಮಾಡಿ ಹೇಳುವಂಥವರು. ಒಂದು ವೇಳೆ ಈಗಾಗಲೇ ಚಚರ್ಿಸಿರುವಂತೆ ಇವರು ತಮ್ಮೆಲ್ಲ ಏಳುಬೀಳುಗಳನ್ನು ಬದಿಗೆ ಸರಿಸಿ ಕೇವಲ ರಂಗಭೂಮಿಯನ್ನೇ ತಮ್ಮ ಮನದಂಗಳಲ್ಲಿ ಬಿಟ್ಟುಕೊಂಡು ಕೆಲಸ ಮಾಡಿದ್ದರೆ ಎಲ್ಲ ಭಾಷೆಯವರೂ ದೊಡ್ಡ ಪ್ರಮಾಣದಲ್ಲಿ ಮಾತಾಡಿಕೊಳ್ಳುವ ಜೀನಿಯಸ್ ಪಾತ್ರವಾಗಿ ಬಿಡುತ್ತಿದ್ದರು. ಈಗ ನಾವ್ಯಾರಾದರೂ ಅಂಥ ಪ್ರಶ್ನೆಯನ್ನು ಕೇಳಿದರೆ ಈಗಲೂ ಇವೆಲ್ಲವನ್ನು ಕಟ್ಟಿಕೊಂಡು ಮಾಡಬಲ್ಲೆ ಶೂದ್ರ ಎಂದು ಸ್ವಾಭಿಮಾನದಿಂದ ಹೇಳಬಹುದು. ಅಥವಾ ಅಷ್ಟೇ ಅಲ್ಲ ಶೂದ್ರ, ಬೇರೆ ಇನ್ನು ಎಂತೆಂಥವೋ ಇವೆ ಎಂದು ಬಾಯಿ ಮುಚ್ಚಿಸಬಹುದು. ಪ್ರಸನ್ನ ಅವರ ಬತ್ತಳಿಕೆಯಲ್ಲಿ ಎರಡಕ್ಕೂ ಬೇಕಾದ ಅಗಾಧವಾದ ಚೈತನ್ಯವಿದೆ. ಇದರಿಂದಲೇ ಮುನ್ನುಗ್ಗುವುದರಲ್ಲಿ ನಿಸ್ಸೀಮರು. ತಮ್ಮ ಯಾವುದೋ ಒಂದು ನಾಟಕಕ್ಕೆ ಸರಿಯಾಗಿ ನಮ್ಮ ದಿನಪತ್ರಿಕೆಗಳು ಸ್ಪಂದಿಸಲಿಲ್ಲ ಎಂಬ ಕಾರಣಕ್ಕಾಗಿ ಪತ್ರಿಕೆಗಳಿಗೆ ವಿಮಶರ್ೆಗೆ ಕರೆಯುವುದೇ ಬೇಡವೆಂದು ತೀಮರ್ಾನ ಅಂತಿಮವಾಯಿತು. ಇದರ ಮುಂದುವರಿದ ಭಾಗವಾಗಿಯೇ ಸಮುದಾಯ ವಾತರ್ಾಪತ್ರ ಹುಟ್ಟಿಕೊಂಡದ್ದು. ಈ ಕಾಲದಲ್ಲಿಯೇ ಸಮುದಾಯದ ಮತ್ತು ಪ್ರಸನ್ನ ಅವರ ಪ್ರತಿಯೊಂದು ನಾಟಕವನ್ನು `ಶೂದ್ರ’ದ ಪ್ರತಿ ಸಂಚಿಕೆಯಲ್ಲಿ ಬರೆಯಲು ಸಾಧ್ಯವಾಗಿದ್ದು. ಆದರೆ ದಿನ ಪತ್ರಿಕೆಗಳ ಪ್ರಚಾರವನ್ನು ಉಪೇಕ್ಷೆ ಮಾಡಬೇಕು ಎಂಬ ಅವರ ತೀಮರ್ಾನ ಬಹಳ ದಿವಸ ಗಟ್ಟಿಯಾಗಿ ಉಳಿಯಲಿಲ್ಲ. ಪತ್ರಿಕೆಯವರಿಗೆ ಹತ್ತಿರವಾದರು. ಈಗಂತೂ ಹೇಳಲೇಬೇಕಾಗಿಲ್ಲ. ಇದನ್ನು ಅಪರಾಧವೆಂದು ಹೇಳುತ್ತಿಲ್ಲ. ಒಂದು ಚಾಣಾಕ್ಷ ಮನಸ್ಸು ಕೆಲಸಮಾಡುವ ರೀತಿಯ ಕುರಿತು ದಾಖಲಿಸುತ್ತಿರುವೆ. ಇಲ್ಲೆಲ್ಲ ಡಿ.ಆರ್.ನಾಗರಾಜ್, ಕೆ.ಮರುಳ ಸಿದ್ದಪ್ಪ, ಕವಿ ಸಿದ್ಧಲಿಂಗಯ್ಯ, ಅಗ್ರಹಾರ ಕೃಷ್ಣಮೂತರ್ಿ, ಎಸ್.ಎನ್. ಶ್ರೀಧರ್, ಶಂಕರಸ್ವಾಮಿ, ದಿನೇಶ್ ಮತ್ತು ಟಿ.ಎನ್. ಸೀತಾರಾಂ ಅವರು ಭಾಗಿಯಾಗುತ್ತಿದ್ದ ಕ್ರಮವೇ ಚೇತೋಹಾರಿಯಾಗಿತ್ತು. ನಮಗೆಲ್ಲ ದಿನಾ ಕಲಾಕ್ಷೇತ್ರ ಮೆಟ್ಟಿಲುಗಳ ಮೇಲೆ ಕೂತು ಮಾತಾಡಿ ಬರದಿದ್ದರೆ ಎಂತೆಂಥದ್ದನ್ನ ಕಳಕೊಳ್ತೀವಿ ಎಂಬ ಭಾವನೆ ಬೇರೂರಿತು. ಸುಮಾರು ಕಳೆದ ನಾಲ್ಕೂವರೆ ದಶಕಗಳಲ್ಲಿ ನಮ್ಮ ಬಹುಪಾಲು ಕಾರ್ಯಕ್ರಮಗಳು ಬೇರೂರಿದ್ದು ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಮತ್ತು ಸೆಂಟ್ರಲ್ ಕಾಲೇಜ್ ಲೈಬ್ರರಿ ಮುಂದಿನ ಪಿ.ಪಿ.ಕಟ್ಟೆಯ ಬಳಿ.

‍ಲೇಖಕರು G

May 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This