ಶ್ರವಣಕುಮಾರಿ ಸರಣಿ: ಸ.ನಿ.ಹ. ಸನಿಹವಾಗಿದ್ದು…

.ನಿ.ಹ. ಸನಿಹವಾಗಿದ್ದು…

2009ರ ಕೊನೆಯಲ್ಲಿ ಬ್ಯಾಂಕಿನ ಬೆಂಗಳೂರಿನ ಒಂದು ಹೆಸರಾಂತ ಶಾಖೆಗೆ ಮೈಸೂರಿನಿಂದ ವರ್ಗವಾಗಿ ಬಂದಾಗ ʻನನ್ನನ್ನು ಯಾವ ಕುರ್ಚಿಯಲ್ಲಿ ಕೂರಿಸಬೇಕುʼ ಎನ್ನುವ ತಲೆನೋವು ಶಾಖಾ ವ್ಯವಸ್ಥಾಪಕಿ ಮತ್ತು ಕಾರ್ಮಿಕ ಸಂಘದ ಕಾರ್ಯದರ್ಶಿಗೆ. ನಮ್ಮ ಕಾರ್ಯದರ್ಶಿ ನನ್ನ ಆತ್ಮೀಯ ಗೆಳತಿ, ನನ್ನನ್ನು ಮೂವತ್ತು ವರ್ಷಗಳಿಂದ ಬಲ್ಲವಳು. ಅವಳಿಗೆ ನನ್ನ ಆರೋಗ್ಯಸ್ಥಿತಿಯ ಅರಿವಿತ್ತು. ಶಾಖೆಯ ಕೆಳ ಆವರಣದಲ್ಲಿ ಇದ್ದದ್ದು ಹೆಚ್ಚಾಗಿ ಏಕ ಗವಾಕ್ಷಿ ಸೇವೆಗಳು. ಅಲ್ಲಿ ಹರಿದು ಬರುತ್ತಿದ್ದ ಕರೆನ್ಸಿ ನೋಟುಗಳ ರಭಸವನ್ನು ತಡೆದುಕೊಳ್ಳುವ ತ್ರಾಣ ರೊಮಟಾಯ್ಡ್‌ ಸಂಧಿವಾತದಿಂದ ಬಳಲುತ್ತಿದ್ದ ನನ್ನ ಕೈಕಾಲುಗಳಿಗಿರಲಿಲ್ಲ; ಹಾಗಾಗಿ ನಗದು ವಿಭಾಗ ನನಗೆ ತಗದು! ಹೇಗೋ ದಿನಕ್ಕೊಂದು ಸಲ ಕಷ್ಟ ಪಟ್ಟಾದರೂ ಮಹಡಿಯ ಮೇಲೆ ಹತ್ತಿ ಹೋಗಬಹುದಿತ್ತೇನೋ…

ಅಲ್ಲಿನ ಕೆಲವು ಸ್ಥಾನಗಳು ನನಗೆ ತಕ್ಕವಾಗಿದ್ದರೂ ಅಲ್ಲಿನ ಕುರ್ಚಿಭದ್ರರು ಅವನ್ನು ನನ್ನಂತ ಹೊಸಬಳಿಗೆ ಬಿಟ್ಟುಕೊಡಲು ಯಾಕಾದರೂ ಒಪ್ಪಿಯಾರು ಎನ್ನುವುದು ಒಂದು ಸಮಸ್ಯೆ. ಅಷ್ಟಲ್ಲದೆ ಆ ಕುರ್ಚಿಗೆ ಬೇಕಾದಂತಹ ಗಹನವಾದ ವಿಷಯಗಳನ್ನು ಅರಗಿಸಿಕೊಂಡು ಕುಡಿದು ಗಡಿಯಾರದ ಕಡೆ ನೋಡದೆ ಕೆಲಸ ಮಾಡುತ್ತಿದ್ದ ಆ ಮೇಧಾವಿಗಳ ಸ್ಥಳ ಪಲ್ಲಟ ಮಾಡಿದರೆ ಅಂತಹ ಪ್ರಸಿದ್ಧ ಶಾಖೆಯ ತಾರಾ ಮೌಲ್ಯ ಕುಸಿಯುವುದೆಂಬ ಭಯ ಶಾಖಾ ವ್ಯವಸ್ಥಾಪಕರಿಗೆ ಸಹಜವಾಗಿ ಇತ್ತು! ಅಂತಹ ಸ್ಥಾನಗಳನ್ನು ಆಸೆ ಪಡುವುದಕ್ಕೂ ಒಂದು ರೀತಿಯ ಅರ್ಹತೆ ಇರಬೇಕು!

ಎಲ್ಲವನ್ನೂ ಅಳೆದು, ಸುರಿದು, ತೂಗಿ ವಿಚಾರ ಮಂಥನ ಮಾಡಿದ ಕಾರ್ಮಿಕ ಸಂಘದ ಕಾರ್ಯದರ್ಶಿ ಮತ್ತು ಶಾಖಾ ವ್ಯವಸ್ಥಾಪಕರು ಒಂದು ಮಹತ್ವದ ನಿರ್ಧಾರಕ್ಕೆ ಬಂದರು. ʻಎ.ಟಿ.ಎಂ. ಗೆ ಸಂಬಂಧಪಟ್ಟ ಎಲ್ಲ ಕೆಲಸಗಳು, ಪ್ರಮುಖವಾಗಿ ಎ.ಟಿ.ಎಂ. ದೂರುಗಳು ಮತ್ತು ಅದಕ್ಕೆ ಸಂಬಂಧಪಟ್ಟ ಖಾತೆಗಳ ನಿರ್ವಹಣೆ,  ಇವುಗಳ ಜೊತೆಗೆ ಅಂದಂದಿನ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಮೇಲ್ಕೆಲಸವನ್ನಾದರೂ ನಿಭಾಯಿಸಬೇಕುʼ ಎನ್ನುವ ಕಛೇರಿಯ ಆಜ್ಞೆ ನನ್ನ ಕೈಸೇರಿತು, ನನಗೆ ಅನುಕೂಲವಾಗಲೆಂದು ಶೌಚಾಲಯಕ್ಕೆ ಆದಷ್ಟೂ ಸನಿಹದಲ್ಲಿರುವ ಒಂದು ಮೂಲೆಯಲ್ಲಿ ನನ್ನ ಸಿಂಹಾಸನ ಸ್ಥಾಪಿತವಾಯಿತು.

ಸ್ವಾರಸ್ಯವೇನೆಂದರೆ ಅಲ್ಲಿಯವರೆಗೆ ನಾನು ಒಂದು ಬಾರಿಯೂ ಸ.ನಿ.ಹ. (ಎ.ಟಿ.ಎಂ. ನ ಕನ್ನಡ ರೂಪ ʻಸದಾ ನಿಮಗೆ ಹಣʼ)ಕ್ಕೆ ಸನಿಹಳಾದವಳೇ ಅಲ್ಲ. ನನ್ನ ಕಾರ್ಡನ್ನೂ, ಪಿನ್ನನ್ನೂ ನನ್ನವರ ಕೈಲಿ ಕೊಟ್ಟಿದ್ದವಳು ಮತ್ತೆ ಅದನ್ನು ನೋಡಿಯೂ ಇರಲಿಲ್ಲ. ದಿನವೂ ಬ್ಯಾಂಕಿಗೆ ಹೋಗಿಬರುತ್ತಿರುವಾಗ ಅದರ ಅವಶ್ಯಕತೆಯೂ ನನಗೆ ಕಂಡಿರಲಿಲ್ಲ. ಇಷ್ಟರ ಮೇಲೂ ಬೇಕಾದಾಗ ದುಡ್ಡು ತಂದುಕೊಟ್ಟರೆ ಸಾಕಲ್ಲ. ದಿನವೂ ಕಣ್ಣಿಗೊತ್ತಿಕೊಂಡು ನೋಡಲು ಅದೇನು ದೇವರ ಫೋಟೋನೇ..?

ಇಂತಹ ಸ.ನಿ.ಹ.ದ ಅಕ್ಷರಸ್ಥಳ ಪಾಲಿಗೆ ಇಡೀ ಸಾಮ್ರಾಜ್ಯವನ್ನೇ ನಿರ್ವಹಿಸುವ ಜವಾಬ್ದಾರಿ!! ಒಂದು ಕ್ಷಣ ಭಯವಾಯಿತು. “ಎ.ಟಿ.ಎಂ. ಬಗ್ಗೆ ನನಗೇನೂ ಗೊತ್ತಿಲ್ಲ” ನನ್ನನ್ನಲ್ಲಿ ಕೂರಿಸಿದ ಗೆಳತಿಯೊಂದಿಗೆ ಹೇಳಿಕೊಂಡೆ. “ಇಲ್ಲಿರೋ ಬೇರೆ ಯಾರಿಗೂ ಗೊತ್ತಿಲ್ಲ. ಇದು ಸದಾ ಎತ್ತಿಕೊಂಡವರ ಬಗಲ ಕೂಸು. ತರಬೇತಿಗೆ ಅಂತ ಬಂದ ಹೊಸ ಅಧಿಕಾರಿಗಳು ಅವರಿರೋ ತಂಕ ಹೇಗೋ ನಿಭಾಯಿಸಿಕೊಂಡು ಹೋಗ್ತಿದ್ರು. ಇಲ್ಲಿದ್ದವಳು ಹೋದ ವಾರ ಮುಂದಿನ ಶಾಖೆಗೆ ಹೊರಟ್ಳು. ಬೇಕಾದರೆ ಅವಳ ಮೊಬೈಲ್‌ ನಂಬರ್‌ ಕೊಟ್ಟಿರ್ತೀನಿ. ಸಂಶಯ ಬಂದಾಗ ಫೋನ್‌ ಮಾಡಿ ಕೇಳ್ಕೋ” ಎಂದು ನಡೆದೇ ಬಿಟ್ಟಳು.‌ ಸಂಶಯ ಬಂದಾಗ?? ಸಂಶಯ ಸಂಚಾರಿಯಲ್ಲ, ಸ್ಥಾಯೀ ಭಾವ ಸಧ್ಯದ ನನ್ನ ಪರಿಸ್ಥಿತಿಯಲ್ಲಿ!!

ಶೂನ್ಯ ಭಾವ ಆವರಿಸಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತೆ. ಆದರೆ ಹಾಗಿರಲು ಜನ ಬಿಡಬೇಕಲ್ಲ! ಒಬ್ಬರಾದ ಮೇಲೊಬ್ಬರು ಬಂದು ನೂರೆಂಟು ಪ್ರಶ್ನೆಗಳು. ಅವರ ಸಮಸ್ಯೆಯೇ ಅರ್ಥವಾಗದಿದ್ದಾಗ ಉತ್ತರ ತಾನೇ ಹೇಗೆ ಗೊತ್ತು? ಇಷ್ಟು ವರ್ಷ ಕೆಲಸಮಾಡಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದವಳು ಏನೂ ಗೊತ್ತಿಲ್ಲದೆ ಪಿಳಪಿಳ ಕಣ್ಣು ಬಿಡುವ ಪರಿಸ್ಥಿತಿ… ನಿಜಕ್ಕೂ ಕಂಗಾಲಾದೆ. ʻಅಕ್ಕಪಕ್ಕದವರನ್ನೇನಾದರೂ ಕೇಳೋಣʼ ಎಂದುಕೊಂಡರೆ ಮೊದಲೇ ಕಾರ್ಯದರ್ಶಿಣಿ ʻಇಲ್ಲಿರೋ ಯಾರ್ಗೂ ಈ ಸೀಟಿನ ವಿಷಯ ಗೊತ್ತಿಲ್ಲʼ ಎಂದು ಹೇಳಿ ನನ್ನಲ್ಲಿ ಹುಟ್ಟಬಹುದಾಗಿದ್ದ ಆಸೆಯ ಮೊಳಕೆಯನ್ನು ಚಿವುಟಿಯೇ ಹೋಗಿದ್ದಾಳೆ. ಆದರೂ ಯಾರಾದರೊಬ್ಬರು ನನ್ನ ಕಡೆ ತಿರುಗಿದರೆ ಒಂದು ನಗೆ ಬೀರಿ ಸ್ನೇಹವನ್ನಾದರೂ ಕುದುರಿಸಿಕೊಂಡು ಅವರ ಕಿವಿಯ ಮೇಲೆ ಬಿದ್ದಿರಬಹುದಾದ ಜ್ಞಾನವನ್ನಾದರೂ ಪಡೆದುಕೊಳ್ಳೋಣ ಎಂದುಕೊಂಡರೆ ಎಲ್ಲರೂ ಅವರವರ ಗೂಡುಗಳಲ್ಲಿ ತಮ್ಮ ಮುಂದಿರುವ ಪರದೆಯಲ್ಲಿ ತಲ್ಲೀನರಾಗಿ ಎದುರು ಕುಳಿತ ಗ್ರಾಹಕರನ್ನು ನಿಭಾಯಿಸುತ್ತಿದ್ದಾರೆ.

ವಿಧಿಯಿಲ್ಲದೆ ನನ್ನ ಬಳಿ ಬಂದವರ ಮಾತುಗಳನ್ನು (ನನ್ನ ಪಾಲಿಗೆ ಅವು ಗ್ರೀಕು, ಲ್ಯಾಟಿನ್ನು…ʼ) ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿರುವ ರೀತಿ ತಾಳ್ಮೆಯಿಂದ ಕೇಳಿಸಿಕೊಂಡೆ!  ದೂರುಗಳನ್ನು ಲಿಖಿತ ರೂಪದಲ್ಲಿ ಕೊಡಿ ಎಂದು ಹಾಳೆ ಪೆನ್ನನ್ನು ಕೊಟ್ಟೆ.  ನನ್ನಂತದೇ ಗಿರಾಕಿಯೊಬ್ಬ “ಏನು ಬರೀಬೇಕು ಮೇಡಂ?” ವಿನಯವಾಗಿ ಕೇಳಿದ. “ಏನಾಗಿದೆಯೋ ಅದನ್ನೇ ಬರೆದು ಕೊಡಿ” ಎಂದೆ. “ಅದೇ ನಿಮ್ಹತ್ರ ಎಲ್ಲಾ ಹೇಳಿದ್ನಲ್ಲಾ… ನೀವೇ ಬರ್ಕೊಟ್ಟು ಬಿಡಿ. ಸೈನು ಹಿಂಗಂದು ಕೊಟ್ಬಿಡ್ತೀನಿ” ಎಂದ ಆ ಭೂಪ. ʻಇದಪ್ಪಾ ವರಸೆ! ನಿಂಗೆ ಎ.ಟಿ.ಎಂ. ಉಪಯೋಗ್ಸಕ್ಕಾದ್ರೂ ಬರತ್ತೆ, ನಂಗೆ ಅದೂ ಬರಲ್ಲʼ ಅಂತ ಹೇಳಕ್ಕಾಗತ್ಯೆ?! “ಹಾಗೆಲ್ಲಾ ನಾವು ಬರ್ಕೊಡ್ಬಾರ್ದು. ಯಾವ್ದುಕ್ಕೂ ನಿಮ್ಮ ಅಕೌಂಟ್‌ ನಂಬರ್ರು, ಮೊಬೈಲ್‌ ನಂಬರ್ರು ಮೊದ್ಲು ಬರೆದ್ಬಿಡಿ. ಆಮೇಲೆ ನೀವು ಹೇಳಿದ್ರಲ್ಲಾ ಅದನ್ನ ಬರೆದ್ಬುಡಿ” ಎಂದೆ, ಏನೋ ಬಹಳ ಕೆಲಸ ಇರುವವರ ಹಾಗೆ ಮುಂದಿರುವ ಕಂಪ್ಯೂಟರನ್ನು ನೋಡುತ್ತಾ. ನನ್ನ ಬಗ್ಗೆಯೇ ನನಗೆ ಹೀನಾಯವಾಗಲು ಶುರುವಾಯಿತು.

ಅಷ್ಟರಲ್ಲಿ ಅಲ್ಲೇ ಅಡ್ಡಾಡುತ್ತಿದ್ದ ಮೆಸೆಂಜರ್‌ ಒಬ್ಬ ಅವನ ಬಳಿ ಬಂದು ಸಲಿಗೆಯಿಂದ ಹೆಗಲ ಮೇಲೆ ಕೈಹಾಕಿ “ಏನಣ್ಣಾ ಇಲ್ಬಂದು ಕುಂತಿದೀಯ” ಎಂದು ಕುಶಲೋಪರಿ ವಿಚಾರಿಸಿಕೊಂಡು, “ಅಷ್ಟೇ ತಾನೆ. ಪಾಪ ಮೇಡಂ ಒಸುಬ್ರು. ಇವತ್ತು ಬಂದಿದಾರೆ. ಅವರಿಗೆ ಗೊತ್ತಾಗಲ್ಲ. ನಾನು ಏಳ್ತೀನಿ. ನೀನು ಬರ್ಕೋ” ಎಂದು ವ್ಯಾಸ ಮಹರ್ಷಿಯ ಹಾಗೆ ಕತೆ ಹೇಳಿದ; ಗಣಪತಿಯ ಹಾಗೆ ಅವನೂ ಬರೆದು “ನನ್ದುಡ್ಡು ನಾಳೀಕೆ ಬರ್ತದಾ ಮೇಡಂ” ಎಂದು ಕೇಳುತ್ತಾ ಕೊಟ್ಟ. ಅದು ಯಾವತ್ತು ಬರತ್ತೆ, ಹೇಗೆ ಬರತ್ತೆ ಒಂದೂ ಗೊತ್ತಿಲ್ಲದ ನಾನು ಗಲಿಬಿಲಿಗೊಳ್ಳುತ್ತಿರುವಾಗಲೇ “ಅವ್ರು ಒಸುಬ್ರು ಅಂತ ಏಳ್ಳಿಲ್ವಾ. ಇನ್ನ ವಾರ್ವೋ ಅದ್ನೈದು ದಿನ್ವೋ ಆಯ್ತದೆ” ಎಂದು ಹೇಳುತ್ತಾ ಅವನನ್ನು ಕರೆದುಕೊಂಡು ಹೊರಟ. 

ʻನನ್ನ ಬಂಡವಾಳ ಇವ್ನು ಬಯಲು ಮಾಡಿದ್ನಲ್ಲʼ ಅಂತ ಒಂದು ಕ್ಷಣ ಕೋಪ ಬಂದರೂ ಸಧ್ಯದ ಸಮಸ್ಯೆ ಪರಿಹಾರವಾಯಿತಲ್ಲ ಎಂದು ನಿರಾಳವಾಗಿ ಅವನು ಕೊಟ್ಟ ಕಾಗದವನ್ನು ಜೋಪಾನವಾಗಿ ಖಾನೆಯ ಒಳಗಿಡಲು ನೋಡಿದರೆ ಅಲ್ಲಿ ಇಂತಹ ದೂರುಗಳ ಕಂತೆಯೇ ಇದೆ. ಇದನ್ನೇನು ಮಾಡಬೇಕು?? ಪರಿಹಾರ ಹೇಗೆ? ಇನ್ನು ತಡಮಾಡದೆ ತಕ್ಷಣವೇ ಮಾಜಿ ಸಿಂಹಾಸನಾಧೀಶ್ವರಿಯ ನಂಬರ್‌ಗೆ ಫೋನಾಯಿಸಿದೆ. ಪರಿಚಯ ಮಾಡಿಕೊಂಡು ಸಹಾಯ ಕೇಳಿದೆ. “ಈಗ ಟೈಮಿಲ್ಲ; ಸಾಯಂಕಾಲ ನಾಲ್ಕು ಗಂಟೆಗೆ ಫೋನ್‌ ಮಾಡಿ” ಎಂದಳು. “ಸಧ್ಯಕ್ಕೆ ನಿಭಾಯಿಸುವಷ್ಟಾದರೂ ಸಲಹೆ ಕೊಡಿ” ಅಕ್ಷರಶಃ ಬೇಡಿಕೊಂಡೆ. “ಓ ಅಷ್ಟು ಪುರಸೊತ್ತಿಲ್ಲ. ಒಂದ್ಕೆಲಸ ಮಾಡಿ, ದೂರುಗಳನ್ನೆಲ್ಲಾ ಇಟ್ಬಿಡಿ. ಯಾವಾಗ್ಲಾದ್ರೂ ಆಕಡೆ ಬಂದಾಗ ಹೇಳಿಕೊಡ್ತೀನಿ. ಮ್ಯಾನೇಜ್‌ ಮಾಡಕ್ಕೆ ಅಟೆಂಡರ್‌ ರಂಗಣ್ಣನ್ನ ಕೇಳಿ. ಅವ್ನಿಗೆ ಸ್ವಲ್ಪ ಗೊತ್ತಿದೆ” ಎಂದವಳೇ ಫೋನ್‌ ಬಂದ್‌ ಮಾಡಿದಳು.

ಪಕ್ಕದಲ್ಲಿ ಕಂಪ್ಯೂಟರಿನಲ್ಲೇ ಮುಳುಗಿ ಹೋಗಿದ್ದ ಸಹೋದ್ಯೋಗಿಯನ್ನು ಕೇಳಿದೆ. “ರಂಗಣ್ಣ ಯಾರು?”. ತಲೆ ಎತ್ತದೆ “ಈಗ ನಿಮ್ಮೆದುರೇ ಕಂಪ್ಲೇಂಟ್‌ ಬರೆಸಿ ಹೋದ್ನಲ್ಲಾ ಅವನೇ. ಅವನಿಗೆ ತಾನೆ ಏನ್ಗೊತ್ತು” ನಕ್ಕಳು. ಆ ನಗೆಯಲ್ಲಿ ಏನೇನು ಅರ್ಥ ತುಂಬಿತ್ತೋ! ʻಮೂವತ್ತು ವರ್ಷ ಸರ್ವೀಸ್‌ ಆಗಿ, ಒಳ್ಳೆಯ ಕೆಲಸಗಾರಳೆಂದು ಹೆಸರು ಗಳಿಸಿದ್ದ ನನಗೆ ಎಂತಹ ಗುರು! ಇದು ಬೇಕಿತ್ತಾ?ʼ ಎಂದು ಮನದಲ್ಲೇ ತಲೆ ಚಚ್ಚಿಕೊಂಡೆ. ವಿಧಿಯಿಲ್ಲ…. ಕಾರ್ಯವಾಸಿ… ಹಿಡಿದೆ… ಅವನೂ ಚೆನ್ನಾಗಿ ನನ್ನ ಪರಿಸ್ಥಿತಿಯ ಸ್ಕೋಪ್‌ ತೆಗೆದುಕೊಳ್ಳತೊಡಗಿದ.

ಮೂರು ದಿನದಲ್ಲಿ ವ್ಯವಸ್ಥಾಪಕರಿಗೆ ನನ್ನ ಬಂಡವಾಳ ಅರ್ಥವಾಯಿತು. ಹಿಂದಿನ ಸಾಮ್ರಾಜ್ಞಿಯನ್ನು ಒಂದು ಮಧ್ಯಾಹ್ನ ಕರೆಸಿದರು. ಅವಳು ಪಿ. ಎಚ್.‌ ಡಿ.ಯವರಿಗೆ ಹೇಳುವ ಹಾಗೆ ಅರ್ಧ ಗಂಟೆ ಉಪನ್ಯಾಸ ಕೊಟ್ಟು, “ನೀವು ಮಾಡ್ತಾ ಇರಿ. ನಾನು ಕೆಲವು ಬಿಲ್ಸ್ ಸಬ್ಮಿಟ್‌ ಮಾಡ್ಬೇಕು. ಐದು ನಿಮ್ಷ ಮೇಲೆ ಹೋಗಿ ಬರ್ತೀನಿ” ಎಂದು ಹೋದವಳು ಸಂಜೆ ಆರು ಗಂಟೆಯಾದರೂ ಕೆಳಗೆ ಬರುವ ಮನಸ್ಸು ಮಾಡಲಿಲ್ಲ. ಮೊಬೈಲ್‌ಗೆ ಫೋನಾಯಿಸಿದರೆ “ಓ… ಸಾರೀ… ಹಾಗೇ ಮೇಲ್ಗಡೆ ಎಲ್ಲರ ಜೊತೆ ಮಾತಾಡ್ತಾ ಮರೆತ್ಬುಟ್ಟು ಮನೆಗೆ ಬಂದ್ಬಿಟ್ಟೆ. ನಾಳೆ ಬರ್ತೀನಿ” ಅಂದಳು.

ಮೈಯೆಲ್ಲಾ ಉರಿದು ಹೋಯಿತು. ತೋರಿಸಿಕೊಳ್ಳುವಂತಿಲ್ಲ “ನಾಳೆ ನಾನು ಕುಕ್ಕೆ ಸುಬ್ರಮಣ್ಯಕ್ಕೆ ಹೋಗ್ತಿದೀನಿ, ಮೂರು ದಿನ ಇರಲ್ಲ” ಅಂದೆ. “ಒಳ್ಳೇದಾಯ್ತು. ಅರಾಮಾಗಿ ಹೋಗಿ ಬನ್ನಿ. ನಂಗೊಂದು ಸಹಾಯ ಮಾಡಕ್ಕಾಗತ್ತಾ. ಅಲ್ಲಿಂದ ಅಭಿಷೇಕದ ತೀರ್ಥ ತಂದ್ಕೊಡ್ತೀರಾ?” ಎಂದಳು. “ಅಲ್ಲಿ ಅದನ್ನ ಮಾರ್ತಾರಾ” ಕೇಳ್ದೆ. “ಅಯ್ಯಯ್ಯೋ ಮಾರೋದಲ್ಲಾ… ನಿಜವಾಗಿ ಅಭಿಷೇಕ ಮಾಡಿರೋ ನೀರು ಸಣ್ಣ ಕಾಲುವೆಯಲ್ಲಿ ಹೊರಕ್ಕೆ ಬರ್ತಿರತ್ತಲ್ಲ, ಸುತ್ಲೂ ಒಂದು ಸಣ್ಣ ಕಟ್ಟೆ ಕಟ್ಟಿರ್ತಾರೆ ನೋಡಿ, ಅಲ್ಲಿ ಬರೋದನ್ನ ಒಂದು ಸೀಸೇಲಿ ಹಿಡ್ಕೊಂಡು ಬರ್ಬೇಕು” ಅಂದಾಗ ʻವರ್ಷ, ಎರಡ್ವರ್ಷಕ್ಕೊಂದು ಸಲವಾದ್ರೂ ಹೋಗಿ ಬರೋ ನಂಗೆ ಈ ವಿಷಯ ಹೊಸದು. ಇರ್ಲಿ ಗುರುದಕ್ಷಿಣೆ ಅಂತ ತಂದುಕೊಟ್ರಾಯ್ತುʼ ಅಂದುಕೊಂಡು ಅಲ್ಲಿಗೆ ಹೋದವಳು ಕಷ್ಟ ಪರಿಹಾರಕ್ಕೆ ದೇವರಲ್ಲೂ ಬೇಡಿಕೊಂಡು, ನಂತರ (ಗುರು?)ಭಕ್ತಿಪೂರ್ವಕವಾಗಿ ಬಗ್ಗಿನಿಂತು ಕಣ್ಣೀರಿನಂತೆ ಒಸರುತ್ತಿದ್ದ ಆ ತೀರ್ಥವನ್ನು ಒಂದು ದೊಡ್ಡ ಬಿಸ್ಲೇರಿ ಬಾಟಲಿನ ತುಂಬಾ ತುಂಬಿಕೊಂಡು ಬಂದೆ…

ಬಂದ ತಕ್ಷಣವೇ ಅವಳಿಗೆ ತೀರ್ಥ ತಂದಿರುವ ವಿಷಯ ತಿಳಿಸಿ ʻಯಾವಾಗ ಸಿಗ್ತೀರಾ?ʼ ಅಂತ ಕೇಳಿದೆ. ʻಇವತ್ತು ನಾಳೇನಲ್ಲಿʼ ಅಂದವಳು ಮೂರು ದಿನವಾದರೂ ಪತ್ತೆಯಿಲ್ಲ. ಅಷ್ಟರಲ್ಲಿ ಮೈಸೂರಿನ ಕೆಲವು ಸ್ನೇಹಿತೆಯರಿಂದ ಕೆಲವು ವಿಷಯಗಳನ್ನು ಕೇಳಿ ತಿಳಿದುಕೊಂಡು ಸ್ವಲ್ಪ ಮಟ್ಟಿಗೆ ದಿನ ದೂಡಲು ಕಲಿತೆ. ಆದರೂ ನನ್ನ ʻಮಾಜಿʼಗೆ ಗುರುದಕ್ಷಿಣೆ ತಂದಿರುವುದಕ್ಕಾಗಿಯಾದರೂ ಅವಳಿಂದ ಕಲಿಯಲೇ ಬೇಕು ಎನ್ನುವ ಹಟಕ್ಕೆ ಬಿದ್ದು ನೀರಲ್ಲಿ ಮುಳುಗಿ ಸಾಯುವವರು ಮೂರು ಸಲ ಕೈಯೆತ್ತುವ ಹಾಗೆ ಅವಳಿಗೆ ಮೂರನೆಯ ಕರೆ ಮಾಡಿದರೆ “ಇವತ್ತು ಸಂಜೆ ಬರ್ತೀನಿ” ಎಂದಳು.

ಮಧ್ಯಾಹ್ನದ ಮೇಲೆ ಅಕೌಂಟೆಂಟ್‌ ನನ್ನ ಬಳಿ ಬಂದು  “ನೀವು ತಂದಿರೋ ತೀರ್ಥದ ಬಾಟಲನ್ನು ನನ್ನ ಹತ್ರ ಕೊಟ್ಟು ಹೋಗಿ. ಅವ್ರಿಗೆ ತುಂಬಾ ಕೆಲಸವಂತೆ. ಬರೋದು ತುಂಬಾ ಲೇಟಾಗತ್ತೆ. ಅಮೇಲೆ ಬಂದು ಇಸ್ಕೋತೀನಿ ಅಂತ ಆಕೆ ಫೋನ್‌ ಮಾಡಿದಾರೆ” ಮುಂದೆ ನಿಂತರು. ಅಲ್ಲಿಗೆ ʻಅವಳಿಂದ ಕಲಿಯೋ ಆಸೆಗೆ ತರ್ಪಣ ಬಿಟ್ಟ ಹಾಗೆʼ ಅಂದುಕೊಂಡು ಬಾಟಲನ್ನು ಅವರ ಕೈಗಿತ್ತೆ ಎನ್ನುವಲ್ಲಿ ಗುರುತೀರ್ಥ ದಕ್ಷಿಣೆ ಪ್ರಹಸನ ಮುಗಿಯಿತು.

ಮರುದಿನ ಬೆಳಗ್ಗೆ ನಮ್ಮ ಶಾಖಾ ವ್ಯವಸ್ಥಾಪಕಿ ದೂರ್ವಾಸಿಣಿಯ ರೂಪದಲ್ಲಿ ನನ್ನೆದರು ಪ್ರತ್ಯಕ್ಷರಾಗಿ “ಬಂದು ಎರಡ್ವಾರಕ್ಕೆ ಬಂದ್ರೂ ಇನ್ನೂ ನೀವು ಕೆಲ್ಸ ಕಲೀಲಿಲ್ಲ. ನೋಡಿ ಕಸ್ಟಮರ್ಸ್‌ ನನ್ನ ಹತ್ರ ಬಂದು ತಲೆ ತಿಂತಿದಾರೆ. ಹೀಗಾದ್ರೆ ಹೇಗೆ. ಇದಕ್ಕೆ ಸಂಬಂಧ ಪಟ್ಟ ಆ ಮೂರು ಖಾತೆಗಳು ಈಗ ಹದ್ನೈದು ದಿನದ ಕೆಳಗೆ ಹೇಗಿದ್ವೋ ಇನ್ನೂ ಅದೇ ಸ್ಥಿತೀನಲ್ಲೇ ಇದೆ… ಇಷ್ಟು ಸೀನಿಯರ್‌ ಇದ್ದೀರಿ… ಇಷ್ಟನ್ನ ನಿಭಾಯಿಸದೆ ಹೇಗೆ….ಬೌ…ಬೌ…ಬೌ…” ಎನ್ನುತ್ತಾ ಗುರುಗುಟ್ಟಿದರು. ನಾನೂ ತಾಳ್ಮೆ ಕಳೆದುಕೊಳ್ಳದೇ ಇರುವ ವಿಷಯ ಹೇಳಿದೆ. ಕೇಳಲೂ ತಯಾರಿಲ್ಲದ ಅವರು “ಇದೆಲ್ಲಾ ಕತೆ ಬೇಡ. ಅವರನ್ನ ಕರೆಸಿದ್ದಾಗ ಬಿಡ್ದೆ ಎದುರು ಕೂರುಸ್ಕೊಂಡು ಕಲಿತ್ಕೋಬೇಕಿತ್ತು. ಹೇಗೆ ಮಾಡ್ತೀರಿ ಅಂತ ಗೊತ್ತಿಲ್ಲ. ಒಟ್ಟಿನಲ್ಲಿ ನಂಗೆ ಕೆಲ್ಸ ಆಗ್ಬೇಕು” ಎನ್ನುತ್ತಾ ಮಾತು ಮುಗಿಸಿ ʻಇನ್ನು ನನ್ನಿಂದ ಯಾವ ಸಹಾಯವೂ ಇಲ್ಲʼ ಎನ್ನುವುದನ್ನು ಸೂಚಿಸಿ ಧಡಧಡ ಹೊರಟೇ ಹೋದರು.

ಆದ ಅವಮಾನದಿಂದ ಬರುತ್ತಿದ್ದ ಕಣ್ಣೀರನ್ನು, ಬಾಯಲ್ಲಿದ್ದ ಮಾತುಗಳನ್ನು, ಹೊರಬರದಂತೆ ತಡೆದೆ. ಪಕ್ಕದ ಸೀಟಿನಲ್ಲಿದ್ದ ಸಹೋದ್ಯೋಗಿ (ಇಷ್ಟು ದಿನದಲ್ಲಿ ಸ್ವಲ್ಪ ಪರಿಚಿತಳಾಗಿದ್ದವಳು) “ನೀನು ಸುಮ್ನೆ ಯಾಕಿದ್ದೆ? ʻಕೆಲ್ಸ ಕಲಿಸ್ಕೊಟ್ರೆ ಮಾಡ್ತೀನಿ. ಎಲ್ಲಾನೂ ಹುಟ್ತಾನೇ ಕಲ್ತುಕೊಂಡು ಬಂದಿರಕ್ಕಾಗಲ್ಲ. ನಂಗೂ ಮೂವತ್ತು ವರ್ಷ ಸರ್ವೀಸಾಗಿದೆ. ಹೀಗೆಲ್ಲಾ ಮಾತಾಡ್ಬೇಡಿʼ ಅಂತ ವಾಪಸ್ಸು ಕೊಡ್ಬೇಕಿತ್ತು” ಅಂದಳು. ಅವಳತ್ತ ತಿರುಗಿ “ಅವ್ರಿಗೆ ನಾನೇನೂಂತ ಗೊತ್ತಿಲ್ಲ; ಹಾಗನ್ಸೋದು, ಆಡಿದ್ದೂ ಸಹಜಾನೇ. ಇವ್ರೇ ಒಂದಿನ ನನ್ನ ಕೆಲ್ಸಾನ ಬಾಯ್ಬಿಟ್ಟು ಮೆಚ್ಚಿಕೊಳ್ಳೋ ಹಾಗ್ಮಾಡಿ ತೋರಿಸ್ದಿದ್ರೆ ನಾನ್ಯಾಕಾದೆ! ಇದು ನನಗೊಂದು ಸವಾಲು” ದೃಢವಾಗಿ ಹೇಳಿದೆ. ಅವಳಿಗೆಷ್ಟು ಅರ್ಥವಾಯಿತೋ… ಸುಮ್ಮನೆ ನೋಡಿದಳು…

ಒಂದು ದಾರಿ ನನ್ನ ಮುಂದೆ ಮುಚ್ಚಿದ್ದಕ್ಕೆ ನೂರು ದಾರಿ ತೆರೆದಿದ್ದವು……. ಹಲವು ಸಹೋದ್ಯೋಗಿಗಳು, ಗೆಳತಿಯರೊಂದಿಗೆ ಮಾತಾಡಿದೆ. ಇದರ ವಿಷಯ ಕುರಿತಾಗಿ ನನಗೆ ಸಿಕ್ಕ ಮಾಹಿತಿಗಳನ್ನೆಲ್ಲಾ ಓದಿದೆ… ಕೆಲವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡೆ. ಕೈ ಬಿಡಿಸಿಕೊಂಡು ಓಡುತ್ತಿದ್ದ ಎಳೆಗಳನ್ನೆಲ್ಲಾ ಹಿಡಿದು ನನ್ನ ಅಂಕೆಯಲ್ಲಿಟ್ಟುಕೊಳ್ಳಲು ಕಲಿತೆ… ಕಡೆಕಡೆಗೆ ನನಗೆ ಹೇಳಿಕೊಟ್ಟವರೇ ಅವರಿಗೆ ಎದುರಾದ ಸಮಸ್ಯೆಗಳಿಗೆ ನನ್ನ ಬಳಿ ಕೇಳುವಂತ ಪರಿಣಿತಿ ಪಡೆದುಕೊಂಡೆ!! ಅಂದು ಪಕ್ಕದವಳೊಂದಿಗೆ ಹೇಳಿದ್ದ ಮಾತನ್ನು ನಿಜಮಾಡಿದೆ.

ನಂತರ ಹಲವು ಬಾರಿ ಅದೇ ವ್ಯವಸ್ಥಾಪಕಿ ನನ್ನೆದುರಿಗಷ್ಟೇ ಅಲ್ಲದೆ ಎಲ್ಲರೆದುರೂ ನನ್ನ ಕೆಲಸವನ್ನು ಹೊಗಳಿರುವುದನ್ನೂ ಕೇಳಿದೆ. ನಾನು ಆ ಕುರ್ಚಿಯಲ್ಲಿ ಕುಳಿತಿರುವಷ್ಟು ಕಾಲವೂ ಖಾತೆಯಲ್ಲಿ ಕಡಿತವಾಗದೇ, ಎ.ಟಿ.ಎಂ.ನಿಂದ ಹಣ ಪಡೆದುಕೊಂಡ ಒಬ್ಬರನ್ನೂ ಬಿಡದೆ ಅವರಿಂದ ಮರಳಿ ವಸೂಲಿ ಮಾಡಿ ಶಾಖೆಗೆ ಆಗುವ ನಷ್ಟವನ್ನು ತಪ್ಪಿಸಿದ ತೃಪ್ತಿ ನನಗಿದೆ; ಅಂತೆಯೇ ಖಾತೆಯಲ್ಲಿ ಹಣ ಕಡಿತವಾಗಿ ಎ.ಟಿ.ಎಂ.ನಲ್ಲಿ ದುಡ್ಡು ಬರದಿದ್ದವರಿಗೆ ಅವರ ದೂರಿನ ಹಿಂದೆ ಬಿದ್ದು ಹಣ ಮರಳಿ ಕೊಡಿಸುವಲ್ಲೂ ಸಫಲಳಾದೆ.

ಮುಂದೆ ಐದು ವರ್ಷ ಅದೇ ಕುರ್ಚಿಯಲ್ಲಿ ಕುಳಿತವಳು ಆ ಅವಧಿಯಲ್ಲಿ ಬಂದ ಎಲ್ಲ ವ್ಯವಸ್ಥಾಪಕರ, ಲೆಕ್ಕಾಧಿಕಾರಿಗಳ, ಲೆಕ್ಕ ಪರಿಶೋಧಕರ ಮೆಚ್ಚುಗೆಗೆ ಪಾತ್ರಳಾದದ್ದಷ್ಟೇ ಅಲ್ಲದೆ ನಮ್ಮ ಶಾಖೆ ʻಎ.ಟಿ.ಎಂ.ದೂರುಗಳಿಲ್ಲದ ಶಾಖೆ; ಅದಕ್ಕೆ ಸಂಬಂಧಿಸಿದ ಖಾತೆಗಳನ್ನು ಶೂನ್ಯ ಉಳಿಕೆಯ ಖಾತೆಗಳಾಗಿ ಇಟ್ಟುಕೊಂಡ ಶಾಖೆʼ ಎನ್ನುವ ಹೆಸರು ಗಳಿಸಿಕೊಳ್ಳುವಂತೆ ಮಾಡಿದೆ. ಇದರ ಫಲಶ್ರುತಿಯಾಗಿ ಮುಂದೆ ನಮ್ಮ ಪ್ರಾದೇಶಿಕ ವ್ಯವಹಾರಗಳ ಕಛೇರಿಯಲ್ಲಿ ವರ್ಷಗಟ್ಟಲೇ ಬಾಕಿಯಾಗುಳಿದಿದ್ದ ಎ.ಟಿ.ಎಂ. ಖಾತೆಗಳನ್ನು ಸರಿಪಡಿಸುವ ಕೆಲಸಕ್ಕೆ ನನ್ನನ್ನು ಕರೆಸಿಕೊಂಡರು.

ನಾನು ಮತ್ತು ಒಬ್ಬ ಅಧಿಕಾರಿ ಇದರ ಬಗ್ಗೆ ಬಹಳಷ್ಟು ಪರಿಶೋಧನೆ ನಡೆಸಿ, ಶ್ರಮ ವಹಿಸಿ ಇಡೀ ಬೆಂಗಳೂರು ವಿಭಾಗದಲ್ಲಿ ನಮ್ಮ ಪ್ರದೇಶ ಮೊತ್ತ ಮೊದಲು ಈ ಖಾತೆಗಳನ್ನು ಸರಿಪಡಿಸಿದ ಪ್ರದೇಶವೆಂದು ನಮ್ಮ ವೃತ್ತದ ಜಾಲತಾಣದಲ್ಲಿ ವಿಜೃಂಭಿಸಲು ಕಾರಣರಾದೆವು. ಇದಕ್ಕಾಗಿ ಬಹುಮಾನವನ್ನೂ, ಉಪ ಪ್ರಧಾನ ವ್ಯವಸ್ಥಾಪಕರಿಂದ ಮೆಚ್ಚುಗೆಯ ಪತ್ರವನ್ನೂ ಪಡೆದವು. ಮುಂದೆ ಅದೇ ಕಛೇರಿಯಲ್ಲಿ ಎ.ಟಿ.ಎಂ.ಗಾಗೇ ಒಂದು ಪ್ರತ್ಯೇಕ ವಿಭಾಗ ಆರಂಭವಾಗಿ ಅಲ್ಲಿ ಎಲ್ಲ ಶಾಖೆಗಳಿಂದ ಬರುವ ಎ.ಟಿ.ಎಂ. ಮತ್ತು ಸಿ.ಡಿ.ಎಂ.ನಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವ ಕೆಲಸ ಮುಂದುವರೆಯಿತು ಎನ್ನುವಲ್ಲಿ ನನ್ನ ವೃತ್ತಿ ಜೀವನದ ಈ ಭಾಗ ಸಫಲವಾಗಿ ಮುಕ್ತಾಯವಾಯಿತು.

ಇಂದಿಗೂ ನಾನು ಸ್ವ.ಸ.ಯಂ. ಬಳಿ ಸಾರುವುದಿಲ್ಲ. ಕಾರ್ಡು ಕೂಡಾ ನನ್ನವರ ಬಳಿಯೇ ಇದೆ (ನನಗಿಂತಲೂ ಅವರ ಬಳಿಯೇ ಹೆಚ್ಚು ಸುರಕ್ಷಿತವಾಗಿರುತ್ತದೆ). ಆದರೆ ಕೆಲಸದಿಂದ ನಿವೃತ್ತಳಾಗಿ ಎರಡು ವರ್ಷಗಳ ಸನಿಹಕ್ಕೆ ಬಂದರೂ ಇನ್ನೂ ಕೆಲವು ಸಹೋದ್ಯೋಗಿಗಳು (ಗುರುತಿರುವವರು, ಇಲ್ಲದವರು) ಅವರಿಗೆ ಸ.ನಿ.ಹ.ದ ಸಮಸ್ಯೆಗಳು ಎದುರಾದಾಗ ನನ್ನನ್ನು ಕೇಳುವುದಿದೆ.

‍ಲೇಖಕರು Avadhi

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

ಅಣಬೆ ­ಎದ್ದವು ­ನೋಡಿ!

ಅಣಬೆ ­ಎದ್ದವು ­ನೋಡಿ!

'ಅಣಬೆ ಎಂದರೆ ಪಂಚಪ್ರಾಣ' ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’...

2 ಪ್ರತಿಕ್ರಿಯೆಗಳು

  1. ಕೆ ಜನಾರ್ದನ ತುಂಗ

    ಅವಧಿಯಲ್ಲಿ ಲೇಖನವನ್ನು ಓದಿದೆ. ಪ್ರಭುಶಂಕರರು ತಮ್ಮ ಶಿಕ್ಷಕ ವೃತ್ತಿಜೀವನದ ಅನುಭವಗಳ ಬಗ್ಗೆ ಬರೆದ ಬರಹಗಳನ್ನು ಓದಿದಾಗ ಶಿಕ್ಷಕನಾಗದೆ ಲೆಕ್ಕಿಗನಾಗಿ ತುಂಬ ಕಳೆದುಕೊಂಡೆ ಎನ್ನಿಸಿತ್ತು. ಶ್ರವಣಕುಮಾರಿಯವರ ಲೇಖನ ಓದಿದ ಮೇಲೆ “ಹೌದಲ್ಲವೆ! ನಮ್ಮ ದೈನಂದಿನ‌ ಬದುಕೂ ಅಷ್ಟೇ ಸ್ವಾರಸ್ಯಕರವಾಗಿವೆಯಲ್ಲವೇ” ಎನಿಸಿತು. ನೋಡುವ ಕಣ್ಣು, ಬರೆಯುವ ಪೆನ್ನು ಬೇಕಷ್ಟೇ. ಶ್ರವಣಕುಮಾರಿಯವರಲ್ಲಿ ಎರಡೂ ಇವೆ, ಬರಹ ಚೆನ್ನಾಗಿದೆ.

    ಪ್ರತಿಕ್ರಿಯೆ
  2. Shyamala Madhav

    ಆಸಕ್ತಿಕರವಾಗಿತ್ತು, ಶ್ರವಣಕುಮಾರೀ. ನನಗಂತೂ ಚೆಕ್ ಗೆ ಎಲ್ಲಿ ಸೈನ್ ಮಾಡಬೇಕೆಂದು ತೋರಿಸಿದರೆ ಮಾಡಲು ಅಷ್ಟೇ ಗೊತ್ತು.‌ ಹಣ, ಬ್ಯಾಂಕ್ ವ್ಯವಹಾರಗಳಲ್ಲಿ ಏನೂ ಅರಿಯೆ. ನಿಮ್ಮ ಸಾಧನೆ ಖುಶಿಯೆನಿಸಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: