ಶ್ರೀನಿಧಿ ಮನಸ್ಸಿನಲ್ಲಿ ಮುಳುಗದ ಟೈಟಾನಿಕ್

ನೆನಪಿನಲಿ ತೇಲುವ ಹಡಗು

ಡಿ ಎಸ್ ಶ್ರೀನಿಧಿ

ತು೦ತುರು ಹನಿಗಳು

ದುರಂತಗಳನ್ನು ಮರೆಯಬೇಕು ಎನ್ನುತ್ತಾರೆ. ಮತ್ತೆ ಮತ್ತೆ ಮನಸ್ಸಿನೊಳಗೆ ನುಗ್ಗಿ ಬರುವ ನೋವುಗಳ ನೆನಪಿನಿಂದ ಯಾವುದೇ ಲಾಭವಿಲ್ಲ,ಹೀಗಾಗಿ ಅವುಗಳನ್ನು ಹಿಂದಕ್ಕೆ ಬಿಟ್ಟು ಮುನ್ನೆಡೆಯುವುದು ಜಾಣತನ. ಸುಮ್ಮನೆ ಹಳೆಯದನ್ನು ಕೆದಕುವುದಕ್ಕಿಂತ ವರ್ತಮಾನದ ನೆಮ್ಮದಿಯಲ್ಲಿ ಇರುವುದು ಒಳಿತು ಎನ್ನುತ್ತಾರೆ ತಿಳಿದವರು.ಆದರೆ ಕೆಲವು ದುರಂತಗಳನ್ನು ಜಗತ್ತು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತದೆ. ಅದನ್ನು ಆಚರಿಸಲಿಕ್ಕೊಂದು ದಿನವನ್ನೂ ಮಾಡಲಾಗುತ್ತದೆ. ಉಗ್ರವರ್ಲ್ಡ್ ಟ್ರೇಡ್ ಸೆಂಟರ್ ನ ಆಘಾತಕಾರೀ ಕುಸಿತ, ನಮ್ಮ ಜಲಿಯನ್ ವಾಲ್ ಬಾಗ್ ಹತ್ಯಾಕಾಂಡ..ಹೀಗೆ. ಈ ದುರಂತಗಳನ್ನು ನೆನಪಿಸಿಕೊಳ್ಳುವುದರ ಮೂಲಕ ಅಲ್ಲಿ ಸತ್ತವರ, ಹುತಾತ್ಮರಾದವರ ಬಗೆಗೊಂದು ಗೌರವ ನಮ್ಮೊಳಗೆ ಇನ್ನೂ ಉಳಿದೆದೆ ಎನ್ನುವುದನ್ನು ಮನುಕುಲ ತೋರಿಸಿಕೊಡುತ್ತದೆ. ಇನ್ನು ಇಂತಹ ಸಾವುನೋವುಗಳು ಸಂಭವಿಸದೇ ಇರಲಿ ಎಂಬ ಆಶಯವೂ ಆ ಸ್ಥಳಗಳಲ್ಲಿ ಹಚ್ಚಿಟ್ಟ ಮೇಣದಬತ್ತಿಯ ಬೆಳಕಲ್ಲಿ, ಸಾಲು ಸಾಲು ಹೂ ಗುಚ್ಛಗಳ ಪರಿಮಳದಲ್ಲಿ ಸೇರಿರುತ್ತದೆ.

ಪ್ರಾಯಶಃ ಟೈಟಾನಿಕ್ ದುರಂತ ಕೂಡ ಈ ಸಾಲಿಗೆ ಸೇರುತ್ತದೆ. ಈ ದುರಂತ ನಡೆದು ಮೊನ್ನೆ ಎಪ್ರಿಲ್ ಹದಿನಾಲ್ಕಕ್ಕೆ ನೂರು ವರ್ಷಗಳು ಕಳೆದಿದೆ. ಜಗತ್ತಿನಲ್ಲಿ ಆ ನಂತರ ಮಹಾಯುದ್ಧಗಳೇ ನಡೆದಿವೆ, ಎಂಥೆಂತದೋ ರಾಜಕೀಯ ವಿಪ್ಲವಗಳು, ಪ್ರಾಕೃತಿಕ ವಿಕೋಪಗಳು, ಸಾಮಾಜಿಕ ಬದಲಾವಣೆಗಳು ಸಂಭವಿಸಿವೆ. ಆದರೂ ಕೂಡ ಯಾರೂ “ಆರ್ ಎಂ ಎಸ್ ಟೈಟಾನಿಕ್” ಎಂಬ ಒಂದು ವೈಭವೋಪೇತ ಹಡಗು ತನ್ನ ಒಡಲಲ್ಲಿದ್ದ ಒಂದೂವರೆ ಸಾವಿರ ಜನರೊಂದಿಗೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದನ್ನು ಮರೆತಿಲ್ಲ. ಅದು ಎಷ್ಟು ಉದ್ದ ಇತ್ತು, ಎಷ್ಟು ಎತ್ತರ ಇತ್ತು, ಅದರೊಳಗೆ ಯಾರ್ಯಾರಿದ್ದರು, ಏನೇನಿತ್ತು ಏನಿರಲಿಲ್ಲ ಅದು ಮುಳುಗಿದ್ದು ಹೇಗೆ,ಸಮುದ್ರದ ಎಷ್ಟು ಆಳದಲ್ಲಿ ಅದರ ಅವಶೇಷಗಳಿವೆ ಎನ್ನುವುದರ ಬಗ್ಗೆಯೆಲ್ಲ ಬೇಕಷ್ಟು ಚರ್ಚೆಗಳು ಆಗಿ ಹೋಗಿವೆ. ಆ ದುರ್ಘಟನೆಯಲ್ಲಿ ಸತ್ತವರೂ ಸುದ್ದಿಯಾಗಿದ್ದಾರೆ, ಬದುಕಿ ಉಳಿದವರೂ ಪ್ರಸಿದ್ಧರಾಗಿದ್ದಾರೆ.ಈ ವಿಷಯದ ಮೇಲೆ ಪಿಎಚ್ ಡಿ ಮಾಡಿದವರಿದ್ದಾರೆ. ಎಷ್ಟೋ ಯುನಿವರ್ಸಿಟಿಗಳಲ್ಲಿ ಟೈಟಾನಿಕ್ ದುರಂತ ಪಠ್ಯವಾಗಿದೆ. ತೀರಾ ಮೊನ್ನೆ ಮೊನ್ನೆ ಕನ್ನಡದ ಯಾವುದೋ ನ್ಯೂಸ್ ಚಾನಲಿನಲ್ಲಿ ಜ್ಯೋತಿಷಿಯೊಬ್ಬರು ಬಂದು ಕೂತು ಟೈಟಾನಿಕ್ ಯಾವ ಘಳಿಗೆಯಲ್ಲಿ ಹೊರಟರೆ ಮುಳುಗುತ್ತಿರಲಿಲ್ಲ, ಆವತ್ತು ರಾಹು ಕೇತುಗಳು ಯಾವ ಮನೆಯಲ್ಲಿದ್ದರು, ಯಾರಿಂದ ಕೇಡು ಸಂಭವಿಸಿತು ಇತ್ಯಾದಿ ಪೋಸ್ಟ್ ಮಾರ್ಟಂ ಕೂಡ ಮಾಡುತ್ತ ಕೂತಿದ್ದರು! ಹೀಗಾಗಿ ನಾನೇನೂ ಮತ್ತೆ ಆವತ್ತು ಏನಾಯಿತು ಎಂಬುದನ್ನ ವಿವರಿಸುವ ಅಪಾಯಕಾರೀ ಕೆಲಸಕ್ಕೆ ಹೋಗುವುದಿಲ್ಲ.

ಟೈಟಾನಿಕ್ ಅನ್ನು ನಮ್ಮ ತಲೆಮಾರಿಗೆ ಸರಿಯಾಗಿ ಪರಿಚಯಿಸಿದ ಕೀರ್ತಿ, 1997 ರಲ್ಲಿ ಬಂದ ಜೇಮ್ಸ್ ಕ್ಯಾಮರೂನ್ ನಿರ್ದೇಶಿಸಿದ ಚಿತ್ರಕ್ಕೇ ಸಲ್ಲಬೇಕು. ಆದರೆ ಕ್ಯಾಮರೂನ್ ಗೂ ಮೊದಲು ಟೈಟಾನಿಕ್ ಬಗ್ಗೆ ಬಹಳ ಮಂದಿ ಚಿತ್ರ ನಿರ್ಮಾಣ ಮಾಡಿದ್ದರು! 1943,1953,1958,1979,1980 ನೇ ವರ್ಷಗಳಲ್ಲಿ ಟೈಟಾನಿಕ್ ಮುಳುಗಿದ ಬಗ್ಗೆಯೇ ಸಿನಿಮಾಗಳು ಬಂದಿವೆ. ಕ್ಯಾಮರೂನ್ ಸಿನಿಮಾ ಬಿಡುಗಡೆಗೊಳ್ಳುವ ಒಂದು ವರ್ಷ ಮೊದಲು ಕೂಡ, ಟೈಟಾನಿಕ್ ಹೆಸರಿನದೇ ಟಿ.ವಿಗಾಗಿ ಮಾಡಿದ ಸಿನಿಮಾವೊಂದು ಬಿಡುಗಡೆಯಾಗಿತ್ತು! ಆದರೆ ಇವುಗಳೆಲ್ಲದರ ನಂತರ ಬಂದ ಈ ಮಹಾನ್ ಚಿತ್ರ, ಟೈಟಾನಿಕ್ ಹಡಗು ಮುಳುಗುವ ಘಟನೆಯ ಜೊತೆಗೆ ಒಂದು ಅಮರ ಪ್ರೇಮ ಕಥೆಯನ್ನೂ ಸೇರಿಸಿ ಜನ ಹುಚ್ಚೆದ್ದು ನೋಡುವಂತೆ ಮಾಡಿತು. ಈ ಚಿತ್ರ ಮುರಿಯದ ದಾಖಲೆಗಳಿಲ್ಲ, ಗಳಿಸದ ಪ್ರಶಸ್ತಿಗಳಿಲ್ಲ. ಲಿಯೊನಾರ್ಡೋ ಡಿ ಕ್ಯಾಪ್ರಿಯೋ, ಕೇಟ್ ವಿನ್ಸ್ಲೆಟ್, ಜೇಮ್ಸ್ ಕ್ಯಾಮರೂನ್ ಎಲ್ಲರೂ ಒಮ್ಮಿಂದೊಮ್ಮೆಗೇ ಜಗತ್ಪ್ರಸಿದ್ದರಾಗಿ ಹೋದರು.

 

ಈ ಸಿನಿಮಾ ಬಿಡುಗಡೆಯಾದಾಗ ನಾನು ಹೈಸ್ಕೂಲ್ ನಲ್ಲಿದ್ದೆ. ಆಗಷ್ಟೇ ಚಿಗುರುತ್ತಿದ್ದ ಮೀಸೆಯ ಜೊತೆಗೆ ಕನಸುಗಳೂ ಮೊಳೆಯುತ್ತಿದ್ದ ಕಾಲ. ನನ್ನ ಸ್ನೇಹಿತನೊಬ್ಬ ಆಗಲೇ ಸಿನಿಮಾವನ್ನ ಮಂಗಳೂರಿನ ನ್ಯೂ ಚಿತ್ರಾ ಟಾಕೀಸ್ ಗೆ ಹೋಗಿ ನೋಡಿಕೊಂಡು ಬಂದಿದ್ದ. ಟಿಕೇಟಿಗಾಗಿ ಸುಮಾರು ಒಂದು ಕಿಲೋಮೀಟರ್ ಉದ್ದದ ಕ್ಯೂ ಇತ್ತಂತೆ! ಮುಂದಿನವಾರದ ಟಿಕೇಟನ್ನು ಕೂಡ ಈ ವಾರ ಕೊಟ್ಟಾಗಿ ಹೋಗಿದೆಯಂತೆ! ಈತ ಅಣ್ಣನ ಜೊತೆಗೆ ಹೋಗಿ ಹೇಗೋ ಅದೇನೋ ಡಬ್ಬಲ್ ರೇಟ್ ಕೊಟ್ಟು ಸಿನಿಮಾ ನೋಡಿಕೊಂಡು ಬಂದನಂತೆ. ಆತ ಸಿನಿಮಾ ಕಥೆ ಹೇಳುವುದು ಬಿಟ್ಟು, ಬಾಕಿ ವಿಷಯವನ್ನೇ ತಾನು ಮಾಡಿದ ಅಸಾಧ್ಯ ಸಾಧನೆ ಎಂದು ವರ್ಣಿಸುತ್ತಿದ್ದ. ಸುತ್ತ ಕೂತು ಕೇಳುತ್ತಿದ್ದವರಿಗೆ ಅಸಹನೆ. ಆಮೇಲೆ ಆತ ಸಿನಿಮಾ ಕಥೆಯನ್ನೇನೋ ಹೇಳಿದ. ಆದರೆ ನೆನಪಲ್ಲಿ ಉಳಿದದ್ದು ಹೀರೋಯಿನ್ ಳ ತೆರೆದೆದೆ ತೋರಿಸುತ್ತಾರಂತೆ ಎಂಬ ಒಂದು ಅತ್ಯಮೋಘ ವಿಷಯ! ಅವನಣ್ಣ ಆ ಸೀನು ಬರುವಾಗ ಎದ್ದು ಇವನನ್ನು ಹೊರಗೆ ಕರೆದುಕೊಂಡು ಹೋಗಿದ್ದನಂತೆ. ಯಾರೋ ಉಳಿದವರು ಅದನ್ನ ಹೇಳುವುದು ಕೇಳಿ ಈತ ನಮಗೆ ಅದನ್ನ ಮತ್ತೂ ಕಥೆ ಕಟ್ಟಿ ಹೇಳುತ್ತಿದ್ದ. ನಾನು ಅಲ್ಲಿಗೇ ಈ ಸಿನಿಮಾ ನೋಡುವ ಕನಸನ್ನ ಮನಸ್ಸಿನಿಂದ ಕಿತ್ತು ಹಾಕಿ ಬೇಜಾರು ಮಾಡಿಕೊಂಡು ಕೂತೆ. ಎಲ್ಲಾದರೊ ಮನೆಯಲ್ಲಿ ಈ ವಿಷಯ ಗೊತ್ತಾದರೆ ನನ್ನ ಗತಿ ಏನಾಗಬೇಕು? ಅಲ್ಲದೇ ಅಪ್ಪನ ಬಳಿ ಹೋಗಿ, ಮಂಗಳೂರಿಗೆ ಸಿನಿಮಾಕ್ಕೆ ಕರೆದುಕೊಂಡು ಹೋಗು ಎನ್ನುವ ಧೈರ್ಯ ದೇವರಾಣೆಗೂ ನನಗೆ ಇರಲಿಲ್ಲ.

ಇದಾಗಿ ಸುಮಾರು ಎರಡು ಮೂರು ತಿಂಗಳೇ ಕಳೆದಿರಬೇಕು. ಟೈಟಾನಿಕ್ ಜ್ವರ, ಹವಾ ಎಲ್ಲ ಇಳಿದು ಸಾಮಾನ್ಯ ಸ್ಥಿತಿಗೆ ಬಂದಿತ್ತು. ನಮ್ಮೂರಿನ ಸಿನಿಮಾ ಹುಚ್ಚರಷ್ಟೂ ಜನ ಮಂಗಳೂರಿಗೆ ಹೋಗಿ ಟೈಟಾನಿಕ್ ನೋಡಿಕೊಂಡು ಬಂದಿದ್ದರು. ಟೈಟಾನಿಕ್ ಅಂತಲ್ಲ, ಅವರುಗಳು ಮಂಗಳೂರಿಗೆ ಬಂದ ಎಲ್ಲ ಹೊಸ ಸಿನಿಮಾ ಎಲ್ಲ ನೋಡುತ್ತಿದ್ದರು. ಈ ಬಾರಿ ಟೈಟಾನಿಕ್ ನೋಡಿದ್ದೇನೆ ಅಂತ ಹೇಳಿಕೊಂಡು ಓಡಾಡುವ ಅವಕಾಶ ಸಿಕ್ಕಿತ್ತು,ಅಷ್ಟೆ. ಒಂದು ಶುಕ್ರವಾರ ಬೆಳ್ಳಂಬೆಳಗ್ಗೆ ನಮ್ಮ ಕ್ಲಾಸಿನಲ್ಲಿ ಭಯಂಕರ ಗುಸಪಿಸ ನಡೆದಿತ್ತು. ಏನಪ್ಪಾ ಅಂತ ಕೇಳಿದರೆ, ನಮ್ಮ ಕಿನ್ನಿಗೋಳಿಯ ಅಶೋಕ ಥಿಯೇಟರಿನಲ್ಲಿ ಟೈಟಾನಿಕ್ ಸಿನಿಮಾ ಹಾಕಿಬಿಟ್ಟಿದ್ದರು! ಎಂಥ ಸಿಹಿಯಾದ ಆಘಾತ! ಈ ಸಲ ಈ ಸಿನಿಮಾ ನೋಡದಿದ್ದರೆ ನನ್ನ ಬದುಕೇ ವ್ಯರ್ಥ ಎಂದು ನಿರ್ಧರಿಸಿಯಾಗಿತ್ತು. ಕಿನ್ನಿಗೋಳಿ ಬಸ್ ಸ್ಟ್ಯಾಂಡಿನ ಪಕ್ಕದಲ್ಲಿನ ಪೋಸ್ಟರು ಟೈಟಾನಿಕ್ ಹಡಗಿನ ತುದಿಯಲ್ಲಿ ನಿಂತಿದ್ದ ಹೀರೋ ಹೀರೋಯಿನ್ನುಗಳು ಇನ್ನೂ ಯಾಕೆ ಸಿನಿಮಾ ನೋಡೋಕೆ ಬಂದಿಲ್ಲವೋ, ಬಾರೋ ಎಂದು ಕರೆದಂತಾಗುತ್ತಿತ್ತು. ಮೊತ್ತಮೊದಲ ಬಾರಿಗೆ ನಮ್ಮೂರಿನ ಥಿಯೇಟರಿನಲ್ಲಿ ಎರಡನೇ ವಾರ ಎಂಬ ಪೋಸ್ಟರು ಕಾಣಿಸಿಕೊಂಡಿತು. ಇನ್ನು ತಡೆದುಕೊಂಡರೆ ಪ್ರಯೋಜನ ಇಲ್ಲ ಅನ್ನಿಸಿ, ಒಂದು ಭಾನುವಾರ ಗಟ್ಟಿ ಮನಸ್ಸು ಮಾಡಿ ಅಪ್ಪನ ಬಳಿ, ಟೈಟಾನಿಕ್ ಸಿನಿಮಾ ನೋಡಿಕೊಂಡು ಬರುತ್ತೇನೆ ಎಂದೆ. ಅದೇನನ್ನಿಸಿತೋ ಏನೋ, ಅಪ್ಪ ಒಪ್ಪಿಬಿಟ್ಟಿದ್ದರು.

ಆ ಥಿಯೇಟರಿನಲ್ಲಿ ನಾನು ಅದಾಗಲೇ ಕೆಲವು ಸಿನಿಮಾ ನೋಡಿದ್ದೆ.ಆದರೆ ಜೀವನದಲ್ಲಿ ನೋಡಿದ ಮೊತ್ತ ಮೊದಲ ಇಂಗ್ಲೀಷು ಸಿನಿಮಾ ಅದಾಗಿತ್ತು. ನಮ್ಮಪ್ಪನ ಆಣೆಯಾಗಿಯೂ ಅಲ್ಲೇನು ಮಾತನಾಡುತ್ತಾರೆ ಎಂದು ಅರ್ಥವಾಗುತ್ತಿರಲಿಲ್ಲ. ಅಲ್ಲದೇ ಬಿಳೀ ಮುಖದ ಹೀರೋಯಿನ್ನು ಕಂಡ ಕೂಡಲೇ ಎಲ್ಲರೂ ಹೋ ಎಂದು ಕಿರಿಚುವುದು ಬೇರೆ. ಪ್ರಾಯಶಃ ಆ ರೋಮಾಂಕಾರೀ ಸೀನು ಇನ್ನೇನು ಬರಲಿದೆ ಎಂದು ಅಂದುಕೊಂಡು ನಾನೂ ಉಸಿರುಬಿಗಿಹಿಡಿದು ಕೂರುತ್ತಿದ್ದೆ. ಆದರೆ ಸಿನಿಮಾದಲ್ಲಿ ಅಂತಹ ಯಾವುದೇ ಸನ್ನಿವೇಶ ಬರಲಿಲ್ಲ. ಕುಟುಂಬ ಸಮೇತ ಬರುವವರ ಮುಜುಗರ ತಪ್ಪಿಸಲು, ಅವುಗಳನ್ನೆಲ್ಲ ಕತ್ತರಿಸಿ ಬಿಸಾಕಲಾಗಿತ್ತು. ಆ ಸಿನಿಮಾದ ಅಗಾಧತೆ, ಅಲ್ಲಿನ ಅಮೋಘ ದೃಶ್ಯಗಳು, ಆ ಶ್ರೀಮಂತಿಕೆ ಎಲ್ಲವೂ ನನಗೆ ಇತರ ವಿಚಾರಗಳನ್ನ ಮರೆಸಿ ಹಾಕಿತ್ತು. ಹಡಗೊಳಗೆ ನುಗ್ಗುವ ನೀರು.. ಜನರ ಒದ್ದಾಟ, ಅಷ್ಟೆಲ್ಲ ಆದರೂ ಡೆಕ್ ಮೇಲೆ ನಿಂತು ಪಿಟೀಲು ಕುಯ್ಯುತ್ತಲೇ ಇದ್ದ ತಂಡ.. ಬಡ ಬಡ ಬಿದ್ದು ಹೋಗುವ ಪಿಂಗಾಣಿ ಪಾತ್ರೆ ..ಅಯ್ಯೋ ಎಷ್ಟೆಲ್ಲ ಒಳ್ಳೇ ವಸ್ತುಗಳು ಹಾಳಾಗ್ತಾ ಇದೆಯಲ್ಲ ಅಂತ ಬೇಜಾರಾಗುತ್ತಿತ್ತು. ಕೊನೆಯಲ್ಲಿ ಹೀರೋ ಅನ್ಯಾಯವಾಗಿ ಸತ್ತನಲ್ಲ ಅಂತ ಭಾರೀ ದುಃಖವಾಗಿ ಎದ್ದು ಬಂದರೂ ಅದ್ಭುತವಾದೊಂದ ಸಿನಿಮಾ ನೋಡಿದ ಖುಷಿ ಬಹಳ ದಿನ ಮನಸ್ಸಿನಲ್ಲಿತ್ತು.

ಆಮೇಲೆ ನಾನು ಟೈಟಾನಿಕ್ ಸಿನಿಮಾವನ್ನು ಅಸಂಖ್ಯ ಬಾರಿ ನೋಡಿದ್ದೇನೆ. ಅದರ ಡಿವಿಡಿ ಕೊಂಡಿದ್ದೇನೆ. ಟಿ.ವಿಯಲ್ಲಿ ಚಾನಲ್ ಬದಲಿಸುವಾಗ ಎಲ್ಲಾದರೂ ಟೈಟಾನಿಕ್ ಕಂಡರೆ, ಭಕ್ತಿಪೂರ್ವಕವಾಗಿ ಕೊಂಚ ಹೊತ್ತು ಅದನ್ನು ನೋಡಿಯೇ ಮುಂದಿನ ಚಾನಲ್ ಗೆ ಹೋಗುತ್ತೇನೆ. ಈ ಸಿನಿಮಾದಿಂದಲೇ ನನಗೆ ಸಿನಿಮಾ ನೋಡುವ ಹುಚ್ಚು ಬೆಳೆದುಕೊಂಡಿತು ಎನ್ನುವುದಂತೂ ಸತ್ಯ. ಇದರಿಂದಾಗೇ ನಾನು ಜಗತ್ತಿನ ಸರ್ವಶ್ರೇಷ್ಠ ಸಿನಿಮಾಗಳನ್ನು ನೋಡುವ ತೆವಲು ಹಚ್ಚಿಕೊಂಡೆ. ಟೈಟಾನಿಕ್ ಗಿಂತ ಉತ್ತಮವಾದ ಅದೆಷ್ಟೋ ಚಿತ್ರಗಳನ್ನು ನೋಡಿದ್ದರೂ, ಅವನ್ನು ನೋಡುವ ದಾರಿಯನ್ನು ತೋರಿಸಿದ್ದು ಮಾತ್ರ ಇದೇ ಟೈಟಾನಿಕ್. ಜಾಕ್ ಮತ್ತು ರೋಸ್ ರ ಪ್ರೇಮಕಥೆಗಿಂತ ಸೊಗಸಾಗಿರುವ ಅವೆಷ್ಟೋ ಸಿನಿಮಾಗಳನ್ನು ನೋಡಿದ್ದರೂ ಹಿನ್ನೆಲೆಯಲ್ಲಿ ಇವರಿದ್ದೇ ಇರುತ್ತಾರೆ.

ಅದಾಗಿ ಎಷ್ಟೋ ವರ್ಷಗಳು ಕಳೆದು, ನಾನೂ ಬೆಳೆದು ಟೈಟಾನಿಕ್ ನನ್ನ ಸ್ಮೃತಿಯೊಳಗೆ ಎಲ್ಲೋ ಸುಮ್ಮನೆ ಸೇರಿಕೊಂಡಿದೆ. ಟೈಟಾನಿಕ್ ಮತ್ತೆ ಥ್ರೀಡಿ ಆಗುತ್ತಿದೆ ಎಂದಾಗ ಹಳೆಯದೆಲ್ಲ ಮತ್ತೆ ನೆನಪಾದವು. ಹಿಂದೆ ಬಹಳ ಇಷ್ಟಪಟ್ಟಿದ್ದ, ಮುಂದೆ ಮತ್ತೆ ಬೃಹತ್ ಪರದೆಯ ಮೇಲೆ ನೋಡಲು ಸಾಧ್ಯವಿಲ್ಲ ಅಂದುಕೊಂಡಿದ್ದ ಒಳ್ಳೆಯದೊಂದು ಸಿನಿಮಾವನ್ನು ಹೊಸ ತಂತ್ರಜ್ಞಾನದಿಂದಾಗಿ ಬೇರೆಯದೇ ದೃಷ್ಟಿಯಲ್ಲಿ ನೋಡುವ ಸಾಧ್ಯತೆಯೇ ಎಷ್ಟೊಂದು ಮಜವಾಗಿದೆ! ಆದರೆ ಜೇಮ್ಸ್ ಕ್ಯಾಮರೂನ್ ಇತ್ತೀಚಿಗೆ ತನ್ನ ಹಳೆಯ ಸಿನಿಮಾಗಳಿಂದ ದುಡ್ದು ಮಾಡಿಕೊಳ್ಳೋ ಹೊಸ ಐಡಿಯಾ ಕಂಡು ಹುಡುಕಿದ್ದಾನೆ ಎಂಬ ಗುಮಾನಿ ನನ್ನನ್ನ ಈ ಚಿತ್ರಕ್ಕೆ ಹೋಗಬೇಕೇ ಬೇಡವೇ ಎಂದು ಯೋಚಿಸುವಂತೆ ಮಾಡಿತು. ತನ್ನ ಅವತಾರ್ ಸಿನಿಮಾದ ಯಶಸ್ಸಿನ ನಂತರ, ಕೆಲ ತಿಂಗಳು ಬಿಟ್ಟು ಮತ್ತೆ ಒಂದೋ ಎರಡೋ ದೃಶ್ಯಗಳನ್ನು ಸೇರಿಸಿ ಅದನ್ನ ರೀ-ರಿಲೀಸ್ ಮಾಡಿದ್ದ ಆತ. ಈಗ ನೋಡಿದರೆ ಟೈಟಾನಿಕ್ ಮುಳುಗಿದ ನೂರು ವರ್ಷಕ್ಕೆ ಸರಿಯಾಗಿ ಅದನ್ನ ಥ್ರೀಡಿ ಮಾಡಿದ್ದಾನೆ!

ಒಟ್ಟಿನಲ್ಲಿ ನಾನು ಥ್ರೀಡಿ ನೋಡುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ. ಅಲ್ಲದೇ ನನ್ನ ನಿರ್ಧಾರಕ್ಕೆ ಬೇರೆ ಕಾರಣವೂ ಇದೆ. ನನ್ನೂರಿನ ಪುಟ್ಟ ಥಿಯೇಟರಿನ ಗಟ್ಟಿ ಮರದ ಚೇರಿನಲ್ಲಿ ಕೂತು ನಾನು ನನ್ನ ಜೀವನದ ಮೊದಲ ಇಂಗ್ಲೀಷ್ ಸಿನಿಮಾ, ಟೈಟಾನಿಕ್ ಅನ್ನು ನೋಡಿದ್ದೆ. ಮೆತ್ತನೆಯ ಸೀಟಲ್ಲಿ ಕೂತು, ಕನ್ನಡಕ ಹಾಕಿಕೊಂಡು ಮತ್ತೆ ಹೊಸದಾಗಿ ಈ ಸಿನಿಮಾವನ್ನು ನೋಡಿ, ಹಳೆಯ ಮಧುರ ಅನುಭವದ ಮೇಲೆ ಹೊಸ ಲೇಪ ಹಚ್ಚಲು ನನಗೆ ಮನಸು ಬರುತ್ತಿಲ್ಲ

]]>

‍ಲೇಖಕರು G

May 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇನ್ನೂ ಎಷ್ಟು ದಿನ?

ಇನ್ನೂ ಎಷ್ಟು ದಿನ?

ಚೈತ್ರಾ ಶಿವಯೋಗಿಮಠ ತಣ್ಣಗೆ ಸಣ್ಣಗೆ ಇನ್ನೂ ಹಾಡುತ್ತಲೇ ಇದ್ದಾಳೆ ಸೋಗೆಯ ನಡುವೆ ಹಣಿಕುವ ಸೂರ್ಯರಶ್ಮಿಯ ಸ್ನಾನ, ಇಬ್ಬನಿಯ ಪಾನ. ಅಲಂಕಾರಕ್ಕೆ...

ಅಪ್ಪನ ಪದಕೋಶದಲಿ..

ಅಪ್ಪನ ಪದಕೋಶದಲಿ..

ಪ್ರವೀಣ ಹಿರೇಮಠ / ಬೋಡನಾಯಕದಿನ್ನಿ ಅಪ್ಪನ ಏಟುಗಳನ್ನು ಲೆಕ್ಕವಿಡುವ ಅಗತ್ಯವೇ ಇಲ್ಲ ಒಂದು ಏಟೂ ಕೊಟ್ಟ ಚಿಕ್ಕ ನೆನಪೂ ನನಗಿಲ್ಲ ಆದರೆ...

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ - ನಿಮ್ಮ ನಿರೀಕ್ಷೆ ಯಲ್ಲಿ ಮಾಳವಿಕ ಸಂಚಾರಿ ವಿಜಯ್ ಅಭಿನಯದ ಕಿರುಚಿತ್ರ. ಇದೊಂದು ' ದೇಶ- ದೇಹ- ಮನಸ್ಸುಗಳ' ಕತೆ . ನಿಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This