ಸಂಗೀತ ಕೇವಲ ಸದ್ದಾದಾಗ..

ಸದ್ದಾಗಿಬಿಡುವ ಸಂಗೀತ

– ಈಶ್ವರಯ್ಯ

ನಾದವಿಹಾರ

ನಮ್ಮ ಸಂಗೀತ ಕ್ಷೇತ್ರವನ್ನು ಪ್ರವೇಶಿಸಿದ ಎರಡು ಅಲಗಿನ ಒಂದು ಕತ್ತಿ ಎಂದರೆ ಧ್ವನಿವರ್ಧಕ ವ್ಯವಸ್ಥೆ. ಆರಂಭಕಾಲದಲ್ಲಿ ಕಛೇರಿಗಳಲ್ಲಿ ಬಳಕೆಯಾಗುತ್ತಿದ್ದ ಧ್ವನಿವರ್ಧಕ ಸದ್ದನ್ನು ವೃದ್ಧಿಗೊಳಿಸುತ್ತಿತ್ತಲ್ಲದೆ ನಾದದ ಕಡೆಗೆ ಅದರ ಗೊಡವೆ ಇರಲಿಲ್ಲ. ಇಂಥ ಸಂದರ್ಭದಲ್ಲಿ ಮೃದಂಗ ವಿದ್ವಾಂಸ ಪಾಲಕ್ಕಾಡ್ ಮಣಿ ಅಯ್ಯರ್ ಅದನ್ನು ಬಹಿಷ್ಕರಿಸಿದ್ದು. ಅಷ್ಟುಮಾತ್ರವಲ್ಲ, ತಮ್ಮ ವಿಸಿಟಿಂಗ್ ಕಾರ್ಡ್ ನಲ್ಲೂ ಅವರು ‘ಧ್ವನಿವರ್ಧಕ ವ್ಯವಸ್ಥೆ ಇರುವ ಸಂಗೀತ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಮುದ್ರಿಸಿಕೊಂಡಿದ್ದರು.

ಅಲ್ಲಿಯವರೆಗೆ ಹಾಡುಗಾರರು ಶ್ರೋತೃಗಳನ್ನು ತಲುಪುವ ಉದ್ದೇಶದಿಂದ ಏರು ಶ್ರುತಿಯನ್ನು ಇರಿಸಿಕೊಳ್ಳುತ್ತಿದ್ದರು. ತಮ್ಮ ಶಾರೀರದ ಸಹಜ ಶ್ರುತಿಯನ್ನು ಲೆಕ್ಕಿಸದೆ ಗಾಯಕರು ನಾಲ್ಕು, ನಾಲ್ಕೂವರೆ ಕಟ್ಟೆ ಶ್ರುತಿಯನ್ನು ಇರಿಸಿಕೊಂಡು ತಾರಸ್ಥಾಯಿ ಸಂಚಾರಗಳಲ್ಲಿ ತಿಣುಕುವುದು ಆಗಿನ ಕಾಲದಲ್ಲಿ ಸರ್ವೇಸಾಮಾನ್ಯ. ಗಾಯಕನ ಶ್ರೇಷ್ಠತೆಗೆ ಏರುಶ್ರುತಿಯೂ ಒಂದು ಮಾನದಂಡವಾಗಿ ಪರಿಗಣಿಸಲ್ಪಟ್ಟದ್ದು ಇದೇ ಸಂದರ್ಭದಲ್ಲಿ. ಮುಂದೆ ಧ್ವನಿವರ್ಧಕ ವ್ಯವಸ್ಥೆ ಸಾಕಷ್ಟು ಪರಿಷ್ಕಾರಗೊಂಡು, ಮಲ್ಟಿಟ್ರ್ಯಾಕ್ ಮಿಕ್ಸರ್, ಪ್ರೀಏಂಪ್, ಮಲ್ಟಿರೇಂಜ್ ಸ್ಪೀಕರ್ ಎಲ್ಲ ಬಳಕೆಯಾದಾಗ ಸನ್ನಿವೇಶ ಬದಲಾಗಬೇಕಿತ್ತು. ಆದರೆ ಯಾಕೋ ಹಾಗಾಗಲಿಲ್ಲ. ಧ್ವನಿಯನ್ನು ಹಿಗ್ಗಿಸುವ ವ್ಯವಸ್ಥೆ ಇರುವಾಗ ಮೂಲಧ್ವನಿ ಸಹಜವೂ, ಮೃದುವೂ ಆಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಮೈಕನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕಲೆಗಾರಿಕೆಯನ್ನು ಕರಗತಮಾಡಿಕೊಂಡ ಕಲಾವಿದರು ಕೆಲವೇ ಕೆಲವು ಮಂದಿ. ಇದರಿಂದಾಗಿ ರಭಸವಾಗಿಯೇ ಉಳಿದುಕೊಂಡ ಮೂಲಧ್ವನಿಗಳನ್ನು ಗರ್ಜನೆಗಳನ್ನಾಗಿ ಪರಿವರ್ತಿಸುವ ಕೆಲಸವನ್ನಷ್ಟೇ ಧ್ವನಿವರ್ಧಕ ಮಾಡಿತು. ವ್ಯವಸ್ಥೆಯೊಂದು ಲಭ್ಯವಿದೆ ಎಂದಾಗ ಪ್ರತಿಯೊಬ್ಬ ಕಲಾವಿದನೂ ತನಗೆ ಸಂಬಂಧಿಸಿದ ಧ್ವನಿಯನ್ನಷ್ಟೇ ವರ್ಧಿಸುವ ಪ್ರಯತ್ನ ನಡೆಸಿದರು. ಪಿಟೀಲಿಗೆ ಪಿಕಪ್ ಮೈಕ್ ಜೋಡಿಸಲಾಯಿತು. (ಈ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ತಮ್ಮ ಪಿಟೀಲಿಗೆ ಏಳು ತಂತಿಗಳನ್ನು ಜೋಡಿಸಿ ಚೌಡಯ್ಯನವರು ತಮ್ಮ ಆಪ್ತಮಿತ್ರ ಚೆಂಬೈಯವರಿಂದ ‘ಸೌಂಡಯ್ಯ’ ಎನ್ನುವ ಉಪನಾಮವನ್ನು ಪಡೆದುಕೊಂಡರು). ಮೃದಂಗದ ಎಡ ಬಲಗಳಲ್ಲಿ ಎರಡು ಮೈಕ್ ಗಳು ಬಂದು ಕುಳಿತವು. ಸ್ಯಾಕ್ಸೋಫೋನಿನ ಕೊಳವೆಗೇನೇ ಮೈಕ್ ಅಂಟಿಕೊಂಡಿತು. ವೀಣೆ, ಮ್ಯಾಂಡೊಲಿನ್, ಚಿತ್ರವೀಣೆ, ಗಿಟಾರ್, ಘಟವಾದ್ಯಗಳು ಅನಿವಾರ್ಯ ಎನ್ನುವಂತೆ ಕಾಂಟ್ಯಾಕ್ಟ್ ಮೈಕ್ ನಿಂದ ಶೋಭಿತಗೊಂಡವು. ಸದ್ಯ ನಾಗಸ್ವರ ಕಲಾವಿದರು ಮತ್ತು ತವಿಲು ವಾದಕರು ಆ ಕಡೆ ದೃಷ್ಟಿ ಹರಿಸದ್ದು ನಮ್ಮ ಪುಣ್ಯ! ಈ ಎಲ್ಲ ಬೆಳವಣಿಗೆಯ ಪರಿಣಾಮವೆಂದರೆ ಕಛೇರಿಯಲ್ಲಿ ಸದ್ದು ಮತ್ತು ಸಂಗೀತದ ನಡುವಿನ ವ್ಯತ್ಯಾಸ ಮಾಯವಾದದ್ದು. ಗಾಯಕ ಮೈಕ್ ನಿರ್ವಾಹಕನತ್ತ ನೋಡಿ ಅಂಗೈ ಮೇಲೆ ಮಾಡಿದರೆ ಮರುಕ್ಷಣ ಅದನ್ನು ಸರಿದೂಗಿಸಲು ಪಿಟೀಲು ವಿದ್ವಾಂಸರು ತಾವೂ ಕೈ ಎತ್ತುತ್ತಾರೆ. ನಾನೇಕೆ ಸುಮ್ಮನಿರಬೇಕೆಂದು ಮೃದಂಗ ವಿದ್ವಾಂಸರೂ ಅದೇ ಮುದ್ರೆಯನ್ನು ತೋರಿಸುತ್ತಾರೆ. ಸಂಗೀತದ ಕತೆ ಅಲ್ಲಿಗೆ ಮುಗಿಯಿತು. ಶ್ರೋತೃ ತನ್ನ ಕೈಯ್ಯನ್ನು ಏನು ಮಾಡಬೇಕೆಂದು ತೋಚದೆ ಕಿವಿಯಮೇಲೋ ತಲೆಮೇಲೋ ಇಟ್ಟುಕೊಳ್ಳುತ್ತಾನೆ. ಸಭಾಂಗಣ ಧ್ವನಿಮೇಲಾಟದ ರಣರಂಗವಾಗುತ್ತದೆ. ಓದುವಾಗ ನಿಮಗಿದು ಉತ್ಪೇಕ್ಷೆ ಅಂತನಿಸಬಹುದು. ಸ್ವಾನುಭವದಿಂದಲೇ ನಾನು ಹೇಳುತ್ತಿದ್ದೇನೆ. ಕೆಲವು ಕಛೇರಿಗಳಲ್ಲಿ ಸದ್ದಿನ ಆಘಾತವನ್ನು ತಡೆಯಲಾರದೆ ನಾನು ಎದ್ದು ಬಂದದ್ದು ಇದೆ. ಧ್ವನಿಯ ಸಮತೋಲನ ತಪ್ಪಿದ ಕಛೇರಿಗಳು ಅವೆಷ್ಟೋ. ಪ್ರತಿಯೊಬ್ಬ ಕಲಾವಿದನ ಮುದ್ರೆಗೆ ಅನುಗುಣವಾಗಿ ಬಡಪಾಯಿ ಮೈಕ್ಬಾಯ್ ವಾಲ್ಯೂಂ ಬಿರಡೆಗಳನ್ನು ತಿರುಗಿಸುತ್ತ ಬಂದಾಗ ಗಾಯನ ಕಛೇರಿ ಹೋಗಿ ಮೃದಂಗ ಕಛೇರಿ ಆಗುವುದಿದೆ. ಕೆಲವೊಮ್ಮೆ ಪಿಟೀಲಿನ ಮೊರೆತಕ್ಕೆ ಇತರೆಲ್ಲ ಧ್ವನಿಗಳು ಮಸುಕಾಗಿಬಿಡುವುದೂ ಇದೆ. ಇದಕ್ಕೆ ಅಪವಾದವೆನ್ನುವಂತೆ ಒಂದು ಉನ್ನತ ಮಟ್ಟದ ಸಂಗೀತ ಕಛೇರಿ ಇತ್ತೀಚೆಗೆ ಉಡುಪಿಯ ಎಂ. ಜಿ. ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಿತು. ನಡೆಸಿಕೊಟ್ಟವರು ಡಾ. ಶ್ರೀವಲ್ಸನ್ ಜೆ. ಮೆನೋನ್. ಕಛೇರಿಗೆ ಮುನ್ನವೇ ಪ್ರತಿಯೊಂದು ಮೈಕ್ರೋಫೋನಿನ ಧ್ವನಿಯನ್ನು ನಿಯಂತ್ರಿಸಿ, ಒಟ್ಟಾಗಿ ಹೊರಹೊಮ್ಮುವ ಧ್ವನಿಯ ಗಾತ್ರವನ್ನು ಹಿತಕರವಾದ ಒಂದು ಮಟ್ಟದಲ್ಲಿ ನಿಲ್ಲಿಸಿದರು. ಆ ಬಳಿಕ ಕಛೇರಿ ಮುಗಿಯುವ ವರೆಗೂ ಯಾರೊಬ್ಬರೂ ಹಸ್ತಮುದ್ರೆ ತೋರುವ ಮನ ಮಾಡಲಿಲ್ಲ. ಒಂದೇ ಒಂದು ಬಾರಿ ವಯೊಲಿನ್ ವಿದ್ವಾನ್ ಎಡಪಲ್ಲಿ ಅಜಿತ್ ಕುಮಾರ್ ಫೀಡ್ ಬ್ಯಾಕ್ ಮಾನಿಟರ್ ನ ಧ್ವನಿಯನ್ನು ತಗ್ಗಿಸುವಂತೆ ಸೂಚನೆ ನೀಡಿದರು. ಬಯಲು ರಂಗಮಂದಿರದಲ್ಲಿ ಮೃದು ಮಧುರವಾದ, ನಾದಶುದ್ಧಿಯಿಂದ ಹೊರಹೊಮ್ಮಿದ ಸಂಗೀತವನ್ನು ಕೇಳಿದ ಶ್ರೋತೃಗಳು ತಮ್ಮ ಮೆಚ್ಚುಗೆಯನ್ನು ಹೊರಗೆಡಹಲು ಹಿಂಜರಿಯಲಿಲ್ಲ. ಕಛೇರಿ ಮುಗಿದ ತಕ್ಷಣ ಹಲವರು ನೇರವಾಗಿ ಕಲಾವಿದರನ್ನು ಕಂಡು ತಮಗಾದ ಆನಂದವನ್ನು ತಿಳಿಸಿದರೆ ಇನ್ನು ಕೆಲವರು ಸಂಘಟಕರಲ್ಲಿ ತಮ್ಮ ಅನುಭವವನ್ನು ತೋಡಿಕೊಂಡರು. ಒಬ್ಬರು ಮರುದಿನ ಎರಡು ಬಾರಿ ಸಂಘಟಕರಿಗೆ ಪೋನ್ ಮಾಡಿ ಈ ಬಗೆಯ ಸಂಗೀತದ ‘ಸೌಖ್ಯ’ವನ್ನು ಅನುಭವಿಸದೆ ವರ್ಷಗಳೇ ಸಂದುಹೋದವು ಎಂದು ನುಡಿದರು. ಈ ರೀತಿಯಲ್ಲಿ ಆಪ್ಯಾಯಮಾನವಾದ ಸಂಗೀತದ ಪ್ರಸ್ತುತಿ ಸಾಧ್ಯ ಎಂದಾದಮೇಲೆ ಯಾಕಾಗಿ ನಮ್ಮ ಕಲಾವಿದರು, ಫೀಡ್ ಬ್ಯಾಕ್ ಮಾನಿಟರ್ ಇದ್ದಾಗಲೂ ಎತ್ತರದ ಧ್ವನಿಮಟ್ಟವನ್ನು ಅಪೇಕ್ಷಿಸುತ್ತಾರೆ ಎನ್ನುವುದು ಅರ್ಥವಾಗುವುದಿಲ್ಲ. ಇದಕ್ಕೆ ಪರಿಹಾರವಿಲ್ಲವೇ? ಇದೆ. ಕಲಾವಿದರು ಧ್ವನಿಯ ಕುರಿತಾದ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಳ್ಳಬಾರದು, ಸಂಘಟಕರು ಖಚಿತವಾದ ಸೂಚನೆ ನೀಡಿ ಅದು ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು. ಸಂಗೀತದ ಕಿವಿ ಇರುವವರು ಧ್ವನಿವರ್ಧಕ ವ್ಯವಸ್ಥೆಯ ನಿರ್ವಾಹಕರಾದರೆ ಹೆಚ್ಚಿನ ಅನುಕೂಲವಿದೆ. ಶ್ರೋತೃಗಳು ಎಲ್ಲವನ್ನು ಸಹಿಸಿಕೊಳ್ಳುತ್ತ ಸುಮ್ಮನಿರುವ ಬದಲು ಸಂಘಟಕರಲ್ಲೋ, ಕಲಾವಿದರಲ್ಲೋ ‘ಇದು ಸಹ್ಯವಲ್ಲ’ ಎಂದು ಹೇಳುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು. ಇದೇನು ಅಂಥ ಕಷ್ಟಕರ ಕೆಲಸವೇನಲ್ಲ, ಅಲ್ಲವೇ?]]>

‍ಲೇಖಕರು G

August 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. keshav

    Very well written. Most of the music organisers think music is all about loudness. Very few sound setters know the about Indian classical music. I hope more and more musicians should also learn setting the sound systems.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: