ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ

ಸಂಗೀತ ಲೋಕದ ಸಂತ
ಬಿಸ್ಮಿಲ್ಲಾ ಖಾನ್
(ಜೀವನ ಚರಿತ್ರೆ)
ಲೇಖಕರು: ಡಾ. ಎನ್ ಜಗದೀಶ್ ಕೊಪ್ಪ
ಪ್ರಕಾಶಕರು: ಮನೋಹರ ಗ್ರಂಥಾಲಯ, ಧಾರವಾಡ.
ಪುಟಗಳು: 200, ಬೆಲೆ: 200 ರೂಪಾಯಿ

ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಸಹ, ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಳು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮನರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.

ಸಂಗೀತಕ್ಕಾಗಿ ತಮ್ಮನ್ನು ತಾವು ತೆತ್ತುಕೊಂಡು ಉದಾತ್ತ ಮನೋಭಾವದಿಂದ ಘನತೆಯ ಬದುಕು ಬಾಳಿದ ಅನೇಕ ಕಲಾವಿದರ ಜೀವನ ಮತ್ತು ಅವರ ಬದುಕಿನ ಸಿದ್ಧಾಂತಗಳು ಇಂದಿಗೂ ಸಹ ವರ್ತಮಾನದ ಭಾರತದ ಎಲ್ಲಾ ವಿಕಾರಗಳಿಗೆ ಮದ್ದಾಗಬಲ್ಲವು. ಈ ದೃಷ್ಟಿಕೋನದಿಂದ ಈಗಾಗಲೇ ಕರ್ನಾಟಕ ಸಂಗೀತದ ಮೇರು ಪ್ರತಿಭೆಗಳಾದ ಬೆಂಗಳೂರು ನಾಗರತ್ನಮ್ಮ, ಎಂ.ಎಸ್.ಸುಬ್ಬುಲಕ್ಷ್ಮಿ, ಎಂ.ಎಲ್.ವಸಂತಕುಮಾರಿ, ಪಿಟಿಲು ಚೌಡಯ್ಯ ಮತ್ತು ಭೈರವಿ ಕೆಂಪೇಗೌಡರ ಜೀವನ ಚರಿತ್ರೆಯನ್ನು ಬರೆಯುವುದರ ಮೂಲಕ ಅವರ ಉದಾತ್ತ ಗುಣ ಮತ್ತು ಸಾಧನೆಗಳನ್ನು ದಾಖಲಿಸಿದ್ದೇನೆ. ಈ ನಿಟ್ಟಿನಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ನಾನು ಪ್ರಥಮವಾಗಿ ಬಿಸ್ಮಿಲ್ಲಾಖಾನ್ರ ಬದುಕನ್ನು ಆಯ್ಕೆ ಮಾಡಿಕೊಂಡಿದ್ದೇನೆ.

ತಮ್ಮ ಶಹನಾಯ್ ಸಂಗೀತ ಮೋಡಿಯ ಮೂಲಕ ಉತ್ತರ-ದಕ್ಷಿಣವೆಂಬ ಬೇಧಭಾವವಿಲ್ಲದೆ ಭಾರತೀಯರನ್ನೂ ಸಮ್ಮೋಹನಗೊಳಿಸಿದ ಬಿಸ್ಮಿಲ್ಲಾ ಖಾನರು ಒಂದು ರೀತಿಯಲ್ಲಿ ಹಿಂದೂ ಹಾಗೂ ಇಸ್ಲಾಂ ಧರ್ಮಗಳ ನಡುವಿನ ಕೊಂಡಿಯಾಗಿ ಸೇತುವೆಯಂತೆ ಬದುಕಿದವರು. ಉತ್ತರ ಭಾರತದಲ್ಲಿ ಮಂಗಳಕರ ವಾದ್ಯ ಎಂದು ಕರೆಯುವ ಶಹನಾಯ್ಗೆ ಪ್ರಾಮುಖ್ಯತೆಇದ್ದರೂ ಸಹ, ಅದನ್ನು ದೇಗುಲಗಳು, ಅರಮನೆ ಹಾಗೂ ಜನಸಾಮಾನ್ಯರ ಗೃಹಗಳ ಹೊಸ್ತಿಲಾಚೆಗೆ ಸೀಮಿತಗೊಳಿಸಲಾಗಿತ್ತು.

ಇಂತಹ ವಾದ್ಯವನ್ನು ಹಿಂದೂಸ್ತಾನಿ ಸಂಗೀತ ಕಚೇರಿಯ ವೇದಿಕೆಗೆ ಪರಿಚಯಿಸಿದವರಲ್ಲಿ ಬಿಸ್ಮಿಲ್ಲಾಖಾನ್ ಪ್ರಮುಖರು. ಅಷ್ಟು ಮಾತ್ರವಲ್ಲದೆ, ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಗಳಿಗೆಯಲ್ಲಿ ತಮ್ಮ ಶಹನಾಯ್ ವಾದ್ಯದ ಮೂಲಕ ಶುಭ ನುಡಿದವರು. . ಹಿಂದೂಸ್ತಾನಿ ಸಂಗೀತದಲ್ಲಿ ಬಿಸ್ಮಿಲ್ಲಾಖಾನ್ ರವರ ಶಹನಾಯ್ ನುಡಿಸಾಣಿಕೆಯ ಪ್ರಭಾವ ಎಷ್ಟಿತ್ತೆಂದರೆ, ಇವರನ್ನು ಮೀರಿಸುವ ಅಥವಾ ಇವರ ಸಾಲಿಗೆ ನಿಲ್ಲಬಲ್ಲ ಒಬ್ಬ ಕಲಾವಿದ ಈವರೆಗೆ ಬರಲು ಸಾಧ್ಯವಾಗಿಲ್ಲ.

ಇಂತಹ ಸಂತನ ಬದುಕು, ಬದುಕಿ ಬಾಳಿದ ವಾರಾಣಾಸಿಯ ಇತಿಹಾಸ, ಬನಾರಸ್ ಘರಾಣೆಯ ವೈಭವ ಹಾಗೂ ಹಿಂದೂ- ಮುಸ್ಲಿ
ಸಮುದಾಯಗಳ ನಡುವೆ ಬಾಂಧ್ಯವ್ಯಕ್ಕೆ ಬೆಸುಗೆ ಹಾಕಿರುವ ಅಲ್ಲಿನ ಇತಿಹಾಸ ಎಲ್ಲವೂ ಈ ಕೃತಿಯಲ್ಲಿ ದಾಖಲಾಗಿವೆ.

ಡಾ. ಶಶಿಧರ ನರೇಂದ್ರ

ʼನಿಮಗೆ ಮೊಮ್ಮಗ ಜನಿಸಿದ’ ಎಂಬುದನ್ನು ಕೇಳಿ ಸಂತೋಷಗೊಂಡ ರಸೂಲ್ ಖಾನ್ ರು ಆಕಾಶದತ್ತ ಮುಖ ಮಾಡಿ ದೇವರಿಗೆ ಕೃತಜ್ಞತೆ ಅರ್ಪಿಸುತ್ತಿದ್ದಂತೆ, ಅವರ ಬಾಯಿಂದ ‘ಬಿಸ್ಮಿಲ್ಲಾ’ ಎಂಬ ಉದ್ಘಾರ ಹೊರಟರೆ (ಹೀಗೆ ಯಾರೇ ಈ ‘ಬಿಸ್ಮಿಲ್ಲಾ’ ಎಂಬುದನ್ನು ಕೇಳಿದಾಗ ಖಾನ್ ಜೋಡಣೆಯಾಗಿ ‘ಬಿಸ್ಮಿಲ್ಲಾ ಖಾನ್’ ಎಂದು ಆ ಮೂಲಕ ಶಹನಾಯಿ – ಶಹನಾಯಿ ಎಂದರೆ ಬಿಸ್ಮಿಲ್ಲಾ ಖಾನ್ ಎಂಬ ಅವಿನಾಭಾವದ ಶುಭೋದಯದ ಮುಗುಳುನಗೆ ಅರಳುತ್ತದೆ. ಸಂಗೀತವು ಆನಂದದ ಆವಿರ್ಭಾವವಾಗಿದೆ, ಆನಂದವು ವಿಶ್ವನಾಥನ ಸ್ವರೂಪವಾಗಿದೆ. ದೇವರು ಮಾನವ-ದಾನವಾದಿಗಳಿಗೂ ಪ್ರಿಯವಾದ ಕಲೆ ಸಂಗೀತ. ಇಂತಹ ಸಂಗೀತ ವಾದ್ಯ) ಶಹನಾಯಿ ಸ್ವರಗಳಿಂದ ವಿಶ್ವನಾಥನ ಪ್ರಾತಃಕಾಲವನ್ನು ಬೆಳಗುತ್ತಿದ್ದರು.

‘ಭಾರತರತ್ನ’ ಬಿಸ್ಮಿಲ್ಲಾ ಖಾನರ ಜೀವನ ರಾಗದ ಆರೋಹ, ಅವರೋಹ ಸ್ವರಗುಚ್ಛ, ಮೀಂಡ, ಮುರುಳ, ಧೃತ, ಮಧ್ಯಲಯ, ಆಲಾಪಗಳನ್ನು ಅಕ್ಷರ ರೂಪದಲ್ಲಿ ಪ್ರಸುತ್ತ ಪಡಿಸಿದವರು ಎನ್ ಜಗದೀಶ ಕೊಪ್ಪ. ಶುಭ ನುಡಿವ ಶಕುನದ ಕರುಣೆಯಿಂದ, ಜನನ, ಬಾಲ್ಯ, ಸಾಧನೆ, ಬನಾರಸ್ ಘರಾಣೆ, ವೈಭವ, ಚಲನ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಬಿಸ್ಮಿಲ್ಲಾ ಸನಾದಿ ಹೀಗೆ ಇಪ್ಪತ್ತು ಅಧ್ಯಾಯಗಳಲ್ಲಿ, ಬಿಸ್ಮಿಲ್ಲಾ ಖಾನ್ ಮತ್ತು ಶಹನಾಯಿಯ ವರ್ಣನೆ, ಇತಿಹಾಸವಷ್ಟೇ ಅಲ್ಲ ಭಾರತೀಯ ಸಂಗೀತದ ಅನೇಕ ಹೊಳಹುಗಳನ್ನು ಬೆಳಗಿಸಿದ್ದಾರೆ.

ಮನದೊಳಗಿನ ಸುಪ್ರಭಾತ – ಎಂ ಎಸ್ ಸುಬ್ಬಲಕ್ಷ್ಮೀ, ಗಟ್ಟಿದನಿಯ ಕಲಾವಿದೆ ಬೆಂಗಳೂರು ನಾಗರತ್ನಮ್ಮ, ಕುವೆಂಪು ‘ಭಾಷಾ’ ಭಾರತೀಯ ಪ್ರಶಸ್ತಿ ಪುರಸ್ಕೃತ ‘ಮರುಭೂಮಿಯ ಹೂ’ ಹೀಗೆ ಅಮೂಲ್ಯವಾದ ಸಾಹಿತ್ಯ ಕೃತಿಗಳನ್ನು ನೀಡಿರುವ ಹಿರಿಯ ಪತ್ರಕರ್ತ ಎನ್ ಜಗದೀಶ್ ಕೊಪ್ಪರ ಈ ಕೃತಿ ಬಿಸ್ಮಿಲ್ಲಾ ಖಾನ್ ರ ಶಹನಾಯಿಯಂತೆ ನಸುಕಿನಲ್ಲಿಯೇ ಪ್ರೀತಿಯಿಂದ ಓದುವಂಥದು.

ಪುಸ್ತಕಗಳನ್ನು ಖರೀದಿಸಲು ಸಂಪರ್ಕಿಸಿ
WhatsApp – 98454 47002 

‍ಲೇಖಕರು Avadhi

November 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This