ಸಂದೀಪನ ‘ಛಂದ’ದ ಕಥೆ

ಒಂಬತ್ತು, ಎಂಟು, ಎಂಟು…

-ಸಂದೀಪ ನಾಯಕ್

footsteps

ತುಸುವೇ ತಳ್ಳಿದರೂ ಬಿದ್ದು ಹೋಗುವಂತಿದ್ದ ದಣಪೆಯನ್ನು ಓರೆ ಮಾಡಿ ದೇವಿ ರಸ್ತೆಗೆ ಬಂದಾಗ ಕವಿದ ಮೋಡಗಳಿಂದಾಗಿ ಮಧ್ಯಾಹ್ನದ ಹಗಲು ಎಣ್ಣೆ ತೀರುತ್ತ ಬಂದ ದೀಪದಂತಿತ್ತು. ಅವಳು ಈ ಊರಿಗೆ ಮನೆ ಕೆಲಸಕ್ಕೆಂದು ಬಂದು ಆಗಲೇ ಆರು ತಿಂಗಳಿಗಿಂತಲೂ ಹೆಚ್ಚೇ ಇರಬೇಕು.

ಇಲ್ಲಿಗೆ ಬಂದ ಮೊದಲಿಗೆ ದೇವಿ `ನಾನು ಬಂದು ಇಪ್ಪತ್ತು ದಿನ ಆಯ್ತು, ತಿಂಗಳಾಯ್ತು, ನೂಲು ಹಬ್ಬಕ್ಕೆ ಮೂರು ತಿಂಗಳು’ ಎಂದೆಲ್ಲ ಲೆಕ್ಕ ಹಾಕುತ್ತಿದ್ದಳು. ಈಗೀಗ ಅದನ್ನು ನಿಲ್ಲಿಸಿದ್ದಾಳೆ. ಆ ದಿನಗಳು ನಿಲ್ಲದೆ ಮುಂದೆ ಹೋಗುತ್ತಿರುವಾಗ ಹಿಂದಿನಿಂದ ಅವುಗಳ ಲೆಕ್ಕವನ್ನು ದೇವಿ ಮಾಡದೆ ಅವುಗಳೊಂದಿಗೆ ಹೋಗುತ್ತಿದ್ದಳು.

ದೇವಿಗೆ ರಸ್ತೆಯಲ್ಲಿ ಸಾಗುವ ವಾಹನಗಳ ನಡುವೆ ಹಾದಿ ಬಿಡಿಸಿಕೊಂಡು ಹೋಗುವುದೆಂದರೆ ಜೀವ ಕುತ್ತಿಗೆಗೆ ಬರುತ್ತಿತ್ತು. ಈಗ ಈ ಊರಿನ ಎಲ್ಲ ವೈವಾಟೂ ಅವಳಿಗೆ ಆಗಿದೆ. ಬೆಳಿಗ್ಗೆ ಎದ್ದು ಹಾಲನ್ನು, ತುಸು ದೂರವೇ ಇರುವ ಮೀನಿನ ಅಂಗಡಿಯಿಂದ ಮೀನನ್ನು ಅವಳೇ ತರುತ್ತಿದ್ದಳು. ಈಗವಳು ಮನೆಯಲ್ಲಿ ಉಂಡು ಚಾಪೆಯ ಮೇಲೆ ಅಡ್ಡವಾಗಿರುವ ಮಂಕಾಳಜ್ಜಿಗೆ ಗುಳಿಗೆಗಳನ್ನು ತರಬೇಕಿತ್ತು. ಏನೇನೋ ಮನಸ್ಸಿಗೆ ಹಚ್ಚಿಕೊಂಡು ಆ ಅಜ್ಜಿಗೆ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ. ಆಗಾಗ ರಕ್ತದ ಒತ್ತಡ ಏರಿ ಬಡಬಡಿಸುವುದೂ ನಡೆಯುತ್ತಿತ್ತು. ದೇವಿ ಈಗ ಅಜ್ಜಿ ಮಲಗಿರುವಾಗಲೇ ಗುಳಿಗೆಗಳನ್ನು ತಂದುಬಿಡುವಾ ಎಂದು ಹೊರಟಿದ್ದಳು

ತೆಂಕಣಕೇರಿಯ ರತ್ನ ಅಕ್ಕೋರು ದೇವಿಯನ್ನು ಅವಳ ಅವ್ವ ಸಾವಿತ್ರಿಗೆ ಕಬೂಲು ಮಾಡಿಸಿ ಮನೆ ಕೆಲಸಕ್ಕೆಂದು ಕಳಿಸಿಕೊಟ್ಟಿದ್ದರು. `ನಾನೂ ಎಲ್ಲೂ ಹೋಗೂದಿಲ್ಲ, ಇಲ್ಲೇ ಇರ್ತೆ’ ಎಂದ ದೇವಿಯ ಹಠವನ್ನು ಒಂದೇ ಮಾತಿನಲ್ಲಿ ಇಲ್ಲದಂತೆ ಮಾಡಿದ್ದಳು. ಕೆಲವು ಹಸಿರು ಕೋರಾ ನೋಟುಗಳನ್ನು ಸೀರೆಯ ತುದಿಗೆ ಗಂಟು ಹಾಕಿಕೊಂಡು ರತ್ನ ಅಕ್ಕೋರಿಗೆ ಮಾತು ಕೊಟ್ಟು ಬಂದ್ದಿದ ಸಾವಿತ್ರಿ `ಬಾಯಿ ಬಿಟ್ಟರೆ ನೋಡು. ನಿನ್ನ ಮದ್ವೆ ಮಾಡುವವರು ಯಾರು? ನಮಗೇನು ನಿಮ್ಮ ಅಜ್ಜ ಮಾಡಿಟ್ಟ ಆಸ್ತಿ ಇದ್ಯೇನೆ? ಅಕ್ಕನಂಗೆ ಇಲ್ಲೇ ಇದ್ದು, ಯಾರ ಸಂಗತಿಗಾದರೂ ಓಡಿ ಹೋಗ್ತಿಯೋ ನೋಡ್ತೆ. ಸುಮ್ಮನೆ ನಾನ ಹೇಳದಂಗೆ ಕೇಳು’ ಎಂದವಳೇ ತಲೆ ಕೆಳಗಾಗಿ ನೇತಾಡುವ ಕೋಳಿಗಳನ್ನು ಹಿಡಿದು ಅವನ್ನು ಮಾರಲು ಅಂಕೋಲೆ ಪೇಟೆಯ ಆಡೂಕಟ್ಟೆ ಕಡೆ ನಡೆದಿದ್ದಳು.

footsteps

ದೇವಿಯ ಕಣ್ಣಿನ ಮುಂದೆ ಬೇರೆ ಹಾದಿಗಳೇ ಇರಲಿಲ್ಲ. ಅವಳ ಹಾಗೆಯೇ ಅರ್ಧಕ್ಕೆ ಶಾಲೆ ಬಿಟ್ಟ ಊರಿನ ಪೋರಿಯರಾದ ಮಾಲಾ, ರುಕ್ಮಿಣಿ, ಗುಲಾಬಿಯರು, ತಾವು ಮಾರುತ್ತಿದ್ದ ಹೂವು, ತೆಂಗಿನಕಾಯಿ, ಗೇರುಬೀಜ, ಹುಳಿಸೊಪ್ಪು, ಮುರುಗಲ ಕಾಯಿಯ ಹಿತ್ತಲ ವ್ಯವಹಾರಗಳನ್ನು, ಏಕಾಏಕಿ ಇಲ್ಲಿನ ಕೆಲಸಗಳನ್ನು ತಮ್ಮ, ತಂಗಿಯರಿಗೆ ವಹಿಸಿ ಬಸ್ಸುಗಳನ್ನು ಹತ್ತಿದ್ದರು. ಮುಂಬಯಿ, ಹುಬ್ಬಳ್ಳಿ, ಹೈದ್ರಾಬಾದು ಎಂದೆಲ್ಲ ಮನೆ ಕೆಲಸಕ್ಕೆಂದು ಹೋದ ಅವರು, ಊರಿನ ಬಂಡಿ ಹಬ್ಬಕ್ಕೆ ಬಂದಾಗ ಬಣ್ಣದ ಬಟ್ಟೆ ಹಾಕಿಕೊಂಡು ದೇವಿಗೆ ಅರ್ಥವಾಗದ ಅಲ್ಲಿನ ಭಾಷೆ ಮಾತಾಡುತ್ತ ಅವಳಿಗೆ ಗಡಿಬಿಡಿ ಆಗುವಂತೆ ಮಾಡುತ್ತಿದ್ದರು. ಅವರ ಮಾತಿನಿಂದ ದೇವಿ ಕೆಂಗೆಡುತ್ತಿದ್ದಳು. ಅವರ ವರ್ಣನೆಯ ಊರುಗಳು ದೇವಿಯನ್ನು ಕನಸಿನ ತೀರಗಳಿಗೇನೂ ಕರೆದಿರಲಿಲ್ಲ. ಚೂರುಪಾರು ದುಡ್ಡನ್ನು ಮನೆಗಳಿಗೆ ಕಳಿಸುತ್ತಿದ್ದ ಆ ಹುಡುಗಿಯರ ತೂಕ ಊರವರ ದೃಷ್ಟಿಯಲ್ಲಿ ಒಂದು ಗುಂಜಿಯಷ್ಟಾದರೂ ಹೆಚ್ಚಾಗಿದ್ದು ಖರೆ ಎಂಬುದು ಸಣ್ಣವಳಾದ ಅವಳಿಗೂ ತಿಳಿಯುತ್ತಿತ್ತು.

`ಅಕ್ಕನ ಹಂಗೆ ಯಾರ ಸಂಗ್ತಿಯಾದರೂ ಓಡಿ ಹೋಗ್ತಿಯೊ ನೋಡ್ತೆ’ ಎಂದ ಅವ್ವನ ಮಾತು, ಉಪ್ಪಿದ್ದರೆ, ಗಂಜಿ ಇಲ್ಲದ, ಗಂಜಿಯ್ದಿದರೆ ಉಪ್ಪಿಲ್ಲದ ತಮ್ಮ ಮನೆ ಸ್ಥಿತಿ ಆದದ್ದಾಗಲಿ ಹೋಗಿಯೇ ಬಿಡುವ’ ಎಂದುಕೊಳ್ಳುವಂತೆ, ಗಟ್ಟಿ ಮನಸ್ಸು ಮಾಡುವಂತೆ ಮಾಡಿದವು. ಆ ಹಡಬೆ ಅಕ್ಕ ನೀಲಾ ಯಾರೊಂದಿಗೊ ಓಡಿ ಹೋಗಿ, ಊರವರು `ಸಾವಿತ್ರಿಗೆ ಒಬ್ಬ ಪುಕಟ್ ಅಳಿಯ ಸಿಕ್ಕ’ ಎಂದು ನಗಾಡುವಂತೆ ಆಗಿತ್ತು. ಅಕ್ಕ ಹೋಗಿದ್ದು ಯಾರೊಂದಿಗೆ, ಅವನು ಎಲ್ಲಿಯವನು ಎಂಬುದು ಇಲ್ಲಿಯವರೆಗೆ ಪತ್ತೆ ಹತ್ತದ ಸಂಗತಿಯಾಗಿತ್ತು. ಅವಳೊಂದು ಮನೆಗೆ ಪತ್ರ ಬರೆಯಬಹುದು, ಒಂದು ತಾರು ಬಿಡಬಹುದು, ಇಲ್ಲ ಗಂಡನೊಂದಿಗೆ ಮನೆಗೇ ಬರಬಹುದು ಎಂದು ಸಾವಿತ್ರಿ,ಮಗಳು ದೇವಿ ಅಂದುಕೊಂಡು ಸುಳ್ಳಾಗಿತ್ತು. ಅಕ್ಕನಂತೆ ನಾನು ಆಗಬಾರದು ಅಂದುಕೊಂಡು ದೇವಿ ಪೂರ್ವ ನಿರ್ಧಾರದಂತೆ ಜೋರು ಮಳೆಯಲ್ಲಿ ರತ್ನ ಅಕ್ಕೋರ ತಂಗಿ ಇರುವ ಊರಿಗೆ ಬಸ್ಸು ಹತ್ತಿದ್ದಳು. ಆ ಸಮಯದಲ್ಲಿ ಊರಲ್ಲಿ ಬತ್ತ ಸಸಿಗಳನ್ನು ನೆಟ್ಟಿ ಮಾಡಲು ಜನರು ಹಣಕಿದ್ದರು.

ಗುಳಿಗೆ ತಕ್ಕೊಂಡು ದೇವಿ ಮರಳುತ್ತಿರುವಾಗ ಅವಳ ಕೈಯಲ್ಲಿನ ಮೊಬೈಲು ಕಿಣಿಕಿಣಿ ಅಂದಿತು. `ಓಹ್ ಮಾಸ್ತರದು’ ಅಂದುಕೊಳ್ಳುತ್ತ ದೇವಿ ಕೈಯಲ್ಲಿನ ಚೀಲವನ್ನು ಕಂಕುಳಿಗೆ ಸಿಕ್ಕಿಸಿ ಮಾತಿಗೆ ಕಿವಿಕೊಟ್ಟಳು. ಪದ್ಮಾವತಿ ಅಕ್ಕೋರ ಗಂಡನನ್ನು ದೇವಿ `ಮಾಸ್ತರೇ’ ಎಂದೇ ಕರೆಯುತ್ತಿದ್ದಳು. ಅವರೇನೊ ದೇವಿಯ ಬಾಯಿಗೆ ಬಾರದ ಯಾವುದೋ ಒಂದು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಉಂಡಾದ ಮೇಲೆ ಒಂದು ಸಲ ಅವರು ಆಫೀಸಿನಿಂದ ದೇವಿಗೆ ಕರೆ ಮಾಡುತ್ತಿದ್ದರು. `ಯಾರಾದರೂ ನಮ್ಮ ಮನೆಗೆ ಬಂದ್ದಿದರೆ, ಬೇರೆ ಯಾರದಾದರೂ ಕರೆ ಬಂದಿತ್ತೆ, ಅವ್ವ ಊಟ ಮಾಡಿದಳೆ, ಗುಳಿಗೆ ತಕ್ಕೊಂಡಳೆ’ ಇದಿಷ್ಟನ್ನೆ ಅವರು ವಿಚಾರಿಸುತ್ತಿದ್ದದು. ತಪ್ಪಿಯೂ ಒಂದು ಸಲವೂ `ನಿನ್ನ ಊಟ ಆಯ್ತೆ’ ಎಂದು ಕೇಳಿದ್ದು ದೇವಿಗೆ ಜ್ಞಾಪಕದಲ್ಲಿರಲಿಲ್ಲ.

ಮಾಸ್ತರದಾಗಲಿ, ಅಮ್ಮನವರದಾಗಲಿ ಕರೆ ಬಂದಾಗ ದೇವಿ ಒಮ್ಮೊಮ್ಮೆ ಹೊರಗೆ ಎಲ್ಲಾದರೂ ತಿರುಗಾಡುತ್ತಿರುತ್ತಿದ್ದಳು. ಆಗೆಲ್ಲ `ಮನೆಯ್ಲಲೇ ಇದ್ದೇನೆ’ ಅನ್ನುತ್ತಿದ್ದಳು. ಇಂಥ ಯಾರ ಅಂಕೆಯಿಲ್ಲದ ನಿರಂಬಳ ಸ್ವಾತಂತ್ರ್ಯಕ್ಕೆ, ಸುಳ್ಳು ಹೇಳಿದರೂ ಆ ಕಡೆಯವರು ನಂಬುವ ಈ ಸಣ್ಣ ಸಾಧನದ ಬಗ್ಗೆ ಅವಳಿಗೆ ರೋಮಾಂಚನವಾಗುತ್ತಿತ್ತು. ಅದೊಂದು ಮಾತನಾಡುವ ಮಂತ್ರದಂಡ ಎಂಬುದು ಅವಳಿಗೆ ಖಾತರಿಯಾಗಿತ್ತು. ಹಾಗಾಗಿ ಧೈರ್ಯದಿಂದ ಅವಳು ಬಿಸಿಲು ಬಾಡುತ್ತ ಬರುವ ಹೊತ್ತಿನಲ್ಲಿ ಪಾರ್ಕು, ಬೀದಿ ಎಂದೆಲ್ಲ ಮನೆಯ ಹತ್ತಿರದಲ್ಲಿ ಒಬ್ಬಳೇ ಸುಳಿದಾಡುತ್ತಿದ್ದಳು; ಮಂಕಾಳಜ್ಜಿಯನ್ನು ಮನೆಯಲ್ಲಿ ಮಲಗಿಸಿ.

`ಬಿಲ್ಲು ಹೆಚ್ಚು ಬರುತ್ತಿದೆ’ ಎಂಬ ಕಾರಣಕ್ಕಾಗಿ ಮನೆಯಲ್ಲಿನ ಫೋನನ್ನು ಪದ್ಮಾವತಿ ಅಮ್ಮನವರು ತೆಗೆಸಿಹಾಕ್ದಿದರು; ದೇವಿ ಬಂದ ಹೊಸತರಲ್ಲಿ. ಫೋನನ್ನು ತೆಗೆಸಿಹಾಕ್ದಿದಕ್ಕೆ ಬೇರೆಯದೇ ಕಾರಣವನ್ನು ಮಂಕಾಳಜ್ಜಿ ಕಣ್ಣೀರು ಹಾಕುತ್ತ ದೇವಿಗೆ ಹೇಳಿದ್ದಳು. ಮಗ ಅಜ್ಜಿಯ ಆಸ್ತಿಯನ್ನೆಲ್ಲ ಮಾರಿ ತಾಯಿಯನ್ನು ತಂದು ಇಲ್ಲಿ ಇಟ್ಟುಕೊಂಡಿದ್ದ. ಆಸ್ತಿಗೆ ಹಕ್ಕುದಾರಳಾದ ಮಗಳು ಸುಲೋಚನಾ ತಾಯಿಯೊಂದಿಗೆ ಮಾತನಾಡಬಹುದೆಂದು ಫೋನನ್ನೇ ತೆಗೆಸಿಹಾಕಿದ್ದರು. `ಯಾವುದಕ್ಕೂ ಇರಲಿ’ ಎಂದು ಮೊಬೈಲ್ ತಂದು, ಅದನ್ನು ಬಳಸುವುದನ್ನು ದೇವಿಗೆ ಹೇಳಿಕೊಟ್ಟಿದ್ದರು. ಅದು ಅಜ್ಜಿಯ ಮೇಲೆ ಲಕ್ಷ್ಯ ಇಡಲು ಇಟ್ಟಿದ್ದು ಎಂದು ದೇವಿಗೆ ಅನೇಕ ಸಾರಿ ಅನ್ನಿಸುತ್ತಿತ್ತು. ಆ ಮೊಬೈಲ್ಗೆ ಮನೆ ಯಜಮಾನರಿಬ್ಬರ ಹೊರತಾಗಿ ಯಾರೂ ಮಾತನಾಡುತ್ತಿರಲಿಲ್ಲ.

ಆದರೂ ಒಮ್ಮೊಮ್ಮೆ ದಾರಿ ತಪ್ಪಿದ ಕರೆಗಳು ಆ ಮೊಬೈಲ್ಗೆ ಬರುತ್ತ್ದಿದವು. ಆಗ ದೇವಿಗೆ ಮಜಾ. ಹಾಗೊಮ್ಮೆ ಬಂದ ಕರೆ `ದೇವಾನಂದ ಇದ್ದಾರೆಯೆ?’ ಎಂದು ವಿಚಾರಿಸಿದಾಗ, ದೇವಿ `ಹೌದು ಇದ್ದಾರೆ’ ಎಂದ್ದಿದಳು.

`ನೀವ್ಯಾರು? ಗೊತ್ತಾಗಲಿಲ್ಲ’

`ನಾನು ಅವರ ಹೆಂಡತಿ’

`ಸ್ವಲ್ಪ ಅವರಿಗೆ ಫೋನ್ ಕೊಡ್ತೀರಾ?’

ಅದಕ್ಕೆ ದೇವಿ `ಈಗ ಅವರಿಗೆ ಕೊಡಲಿಕ್ಕಾಗುವುದಿಲ್ಲ. ಈಗವರು ಮನೆಯ ಬಟ್ಟೆಗಳನ್ನು ತೊಳೆಯುತ್ತಿದ್ದಾರೆ’ ಅಂದು ಆ ಕರೆಯನ್ನು ಕತ್ತರಿಸಿದ್ದಳು. ಇಂಥದ್ದರಲೆಲ್ಲ ಅವಳು ಒಳ್ಳೆಯ ಆಟಗಾರ್ತಿ. ಆಗ ಮಂಕಾಳಜ್ಜಿ `ಏ, ಹುಡುಗಿ ಹಂಗೆಲ್ಲ ಬೇರೆಯವರಿಗೆ ತ್ರಾಸು ಕುಡೂಕಾಗ. ಬಾ ಇಲ್ಲೆ ಕಣ್ಣೆಲ್ಲ ಮಂಜ ಮಂಜ ಆತೀದ. ಸ್ವಲ್ಪ ನೆತ್ತಿ ಮೇಲೆ ಎಣ್ಣೆ ಹಾಕು’ ಎಂದು ಬೈದಂತೆ ಮಾಡುತ್ತಿದ್ದಳು.

* * *

ಮನೆಯವರೆಲ್ಲ ತಮ್ಮ ಕೆಲಸಗಳಿಗೆಂದು ಹೋದ ಮೇಲೆ ದೇವಿಯ ಮನೆ ಕೆಲಸಗಳು ತುಸು ಹೊತ್ತಿನ್ಲಲೇ ಮುಗಿದುಬಿಡುತ್ತಿದ್ದವು. ಮಂಕಾಳಜ್ಜಿಗೆ ದೇವಿಯೊಂದಿಗೆ ಮಾತು ಬೇಕು. ದೇವಿಗೆ ಒಂದೊಂದು ಸಲ ಅಜ್ಜಿಯೊಂದಿಗಿನ ಮಾತೂ ಮನೆ ಕೆಲಸದಂತೆ ಅನಿಸಿಬಿಡುತ್ತಿತ್ತು. ಅವಳೊಂದಿಗಿನ ಮಾತು ತುದಿಯನ್ನೇ ಮುಟ್ಟುತ್ತಿರಲಿಲ್ಲ. ತಾವು ಸಣ್ಣವರಿರುವಾಗಿನ ಕಾಲ ಹೇಗಿತ್ತು, ಮದುವೆಯಾದಾಗ ಹೇಗಿತ್ತು, ಮಗ ಮಗಳು ಹುಟ್ಟಿದ್ದು- ಈ ಮಂಕಾಳಜ್ಜಿಯ ಆತ್ಮಕತೆಯ ನಿರೂಪಣೆಯ ಬಗ್ಗೆ ದೇವಿಗೆ ಆಸಕ್ತಿ ಇರಲಿಲ್ಲ. ಅಜ್ಜಿಯ ಮಾತಿಗೆ `ಹಾಂ, ಹೂಂ’ ಅನ್ನುತ್ತ, ಮೊಬೈಲ್ನಲ್ಲಿ ಯಾವುದಾದರೂ ಕರೆ ಬರಬಹುದೆ ಎಂದು ನಿರೀಕ್ಷಿಸುತ್ತ, ಕಿಟಕಿಯಿಂದ ರಸ್ತೆಯಲ್ಲಿ ಹೋಗುವ ಜನರನ್ನು ನೋಡುತ್ತಿರುತ್ತಿದ್ದಳು ದೇವಿ.

ಏನಿದ್ದರೂ ಊರಿನ ವಿಷಯಗಳ ಬಗ್ಗೆ ಮಾತನಾಡಲು ದೇವಿಗಿರುವುದು ಅಜ್ಜಿಯೊಬ್ಬಳೆ. ಅವಳ ಸ್ವಮಾತುಗಳು ಮುಗಿದ ಮೇಲೆ ಹಗೂರವಾಗಿ ತಮ್ಮ ಮನೆಯ, ಊರಿನ ಬಗ್ಗೆ ಮಾತು ತೆಗೆಯುತ್ತಿದ್ದಳು. ಇದೇ ಅಜ್ಜಿ ಹಿತ್ತಲಿನಲ್ಲಿರುವ ತೆಂಗಿನ ಕಾಯಿಗಳನ್ನು ಹೆಕ್ಕಿಕೊಡುತ್ತಿದ್ದುದಕ್ಕೆ ದೇವಿಗೆ ಒಂದು ತೆಂಗಿನ ಕಾಯಿಯನ್ನು ಕೊಟ್ಟು ಕಳಿಸುತ್ತಿದ್ದಳು. ಅದನ್ನು ದೇವಿ ಶೆಟ್ಟರ ಅಂಗಡಿಗೆ ಮಾರಿ ಭಜ್ಜಿ ತಿನ್ನುತ್ತಿದ್ದಳು. ಈಗ ಅದನ್ನು ನೆನಪು ಮಾಡಿದಾಗ `ಆಗ ನಮ್ಮ ಕೈಯಲ್ಲಿ ದುಡ್ಡೇ ಇರೂದಿಲ್ಲಾಗಿತ್ತು, ನೋಡು’ ಅನ್ನುತ್ತಿದ್ದಳು. ಅದು ಸುಳ್ಳೆಂದು ದೇವಿಗೆ ಗೊತ್ತಿಲ್ಲದೇನಲ್ಲ.

ಅಜ್ಜಿಗೆ ದೇವಿಯ ಅಪ್ಪ ಪರಮೇಶ್ವರನ ಬಗ್ಗೆ ಬಹಳ ಅಭಿಮಾನ. ಅವನು ಊರಲ್ಲಿ ಹೇಗೆ ಒಬ್ಬ ಮರ್ಯಾದಸ್ತನಾಗಿದ್ದ, ನಾಲ್ಕು ಊರಲ್ಲಿ ಅವನ ಮಾತಿಗೆ ಕಿಮ್ಮತ್ತು ಹೇಗಿತ್ತು ಎಂಬುದನ್ನು ಅಜ್ಜಿ ಹೇಳುತ್ತಿದ್ದರೆ ದೇವಿ ಬಿಟ್ಟ ಬಾಯಿ ಮುಚ್ಚದೆ ಕೇಳುವಳು. ಅಪ್ಪ ಬೆಟ್ಟಕ್ಕೆ ಸೌದೆ ಕಡಿಯಲೆಂದು ಹೋದವನು ಹುಲಿ ಬಾಯಿಗೆ ಸಿಕ್ಕಿದ್ದನ್ನು ಕೇಳಿ ತಡೆಯಲಾಗದೆ ಎರಡು ಹನಿ ಅವಳ ಕಣ್ಣಿಂದ ಉದುರುವುದೂ ಇತ್ತು. ದೇವಿಯ ಕಣ್ಣ ಮುಂದೆ ಬರದ ಅಪ್ಪ ಮಂಕಾಳಜ್ಜಿಯ ಮಾತಲ್ಲಿ ಜೀವ ತಳೆಯುತ್ತಿದ್ದ.

ಅಜ್ಜಿಯ ಕೆಲಸಗಳ ಮೇಲೆ ಒಂದು ಕಣ್ಣಿಡಬೇಕೆಂದು ಯಾರೂ ಹೇಳದ್ದಿದರೂ ಮನೆಗೆ ಬಂದ ಮೇಲೆ ಯಜಮಾನತಿಯ ವಿಚಾರಣೆಗಳು ಹಾಗೇ ಇರುತ್ತಿದ್ದವು. ಆಗೆಲ್ಲ ದೇವಿ ಯಾವ ಗುಟ್ಟನ್ನು ಅಜ್ಜಿಯ ಕುರಿತಂತೆ ಬಿಟ್ಟುಕೊಡುತ್ತಿರಲಿಲ್ಲ. ಮತ್ತು ಅಜ್ಜಿ ಕೇಳಿದಳೆಂದು ಮಗಳೊಂದಿಗೆ ಮಾತನಾಡಲು ಮನೆ ಎದುರಿಗಿನ ಫೋನಿನ ಬೂತಿಗೆ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದಳು. ಅಜ್ಜಿ ಮಗಳೊಂದಿಗೆ ಮಾತಾಡುತ್ತ `ನನ್ನನ್ನು ಊರಿಗಾದರೂ ಕರೆದುಕೊಂಡು ಹೋಗಿ ಬಿಟ್ಟುಬಿಡು’ ಎಂಬ ಮೊರೆ ದೇವಿಯನ್ನು ಬಹಳ ದಿನ ತಡೆ ತಡೆದು ಕಾಡುತ್ತಿತ್ತು. ಆ ದಿನವೇ ದೇವಿ ಅಜ್ಜಿಯೊಂದಿಗೆ ಮಳ್ಳು ಮಳ್ಳಾಗಿ “ಅಜ್ಜೀ ನಾವಿಬ್ಬರೂ ನಮ್ಮೂರಿಗೆ ಬಸ್ಸು ಹತ್ತಿ ಯಾರಿಗೂ ತಿಳಿಯದ ಹಾಗೆ ಹೋಗಿಬಿಡುವಾ?” ಎಂದು ಕೇಳಿ ಅಜ್ಜಿಯನ್ನು ನಗಿಸಿದ್ದಳು.

“ದೇವಿ ನಿಮ್ಮ ಅಕ್ಕ ಹಾಗೆ ಬೇರೆ ಯಾವನದೋ ಸಂಗತಿಗೆ ಓಡಿ ಹೋಗೋದು ಬೇಡಾಗಿತ್ತು. ಮರ್ಯಾದೆಯಿಂದ ಮದುವೆಯಾಗಿ ಊರಲ್ಲೇ ಇರಬೇಕಿತ್ತು. ಅದೇ ಘನತನ ತರುವಂಥದ್ದು” ಎಂದು ಇದ್ದಕ್ಕಿದ್ದಂತೆ ಮೊದಲ ಸಲ ದೇವಿಯ ಅಕ್ಕನ ಬಗ್ಗೆ ಮಾತನಾಡ್ದಿದಳು. ಇದೇ ಅಕ್ಕನ ಬಗ್ಗೆ ತಿಳಿಯಲು ಸರಿಯಾದ ಹೊತ್ತೆಂದು ದೇವಿ ಎಷ್ಟು ಕೇಳಿದರೂ ಅಜ್ಜಿಗೆ ಮಾತಾಡುವ ಉಮೇದು ಇರಲಿಲ್ಲ.

“ಅದೆಲ್ಲ ಆದ ಕತೆ. ಮುಂದಿನ ಕತೆ ಏನಾದರೂ ಇದ್ದರೆ ಹೇಳು” ಎಂದು ಎದ್ದು ಹೋಗ್ದಿದಳು ಅಜ್ಜಿ.

ಅಕ್ಕ ಓಡಿ ಹೋದಾಗ ಅದನ್ನು ಅರಿಯುವ ವಯಸ್ಸಾಗಿರಲಿಲ್ಲ ದೇವಿಗೆ. ಅವಳು ಬಹಳ ಚಂದವಾಗಿ ಸೀರೆ ಉಡುತ್ತಿದ್ದಳು. ಸೀರೆಯನ್ನು ಹಲ್ಲಿನಲ್ಲಿ ಕಚ್ಚಿ ಹಿಡಿದು ಹೊಕ್ಕಳ ತುಸು ಕೆಳಗೆ ಉಡುತ್ತಿದ್ದುದು ದೇವಿಗೆ ನೆನಪಿದೆ. ಪೌಡರಿನ ವಾಸನೆಯೊಂದಿಗೆ ಅವಳು ಘಮಘಮಿಸುತ್ತ, ಅಂಗಳದಲ್ಲಿ ಬಾಳೇ ಗಿಡದ ಮೇಲೆ ನಿನ್ನೆ ಕಟ್ಟಿಟ್ಟ ಅಬ್ಬಲಿಗೆ ಮಾಲೆ ಮುಡಿದು ತನ್ನನ್ನೂ ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿದ್ದಳು. ಅವಳ ಕೈಹಿಡಿದು ನಡೆಯುತ್ತಿದ್ದರೆ ಮಾಯಾ ಕಿನ್ನರಿಯೊಂದಿಗೆ ಗಾಳಿಯಲ್ಲಿ ತೇಲಿದಂತಾಗುತ್ತಿತ್ತು. ಬಹಳ ಜನರಿಗಿಲ್ಲದ ಅವಳ ಚಂದವೇ ಅವಳು ಓಡಿ ಹೋಗಲು ಕಾರಣವಾಯ್ತೆ ಎಂದು ದೇವಿ ತನ್ನಲ್ಲಿ ಅನೇಕ ಸಾರಿ ಕೇಳಿಕೊಳ್ಳುತ್ತಿದ್ದಳು. `ತಾನೇನಾದರೂ ಅವಳನ್ನು ಅರಸಿಕೊಂಡು ಇಲ್ಲಿಗೆ ಬಂದೆನೆ’ ಎಂಬ ವಿಚಾರವನ್ನು ತನ್ನಲ್ಲೆ ಆಗಾಗ ಅವಳು ಕೇಳಿಕೊಳ್ಳುವುದಿತ್ತು.

* * *

ಹಗಲು ಕಪ್ಪಾಗುತ್ತಿದ್ದಂತೆ ದೇವಿಗೆ ಬರುವ ಕರೆಗಳು `ರಾತ್ರಿ ತಡವಾಗಿ ಬರುತ್ತೇವೆ- ಊಟವನ್ನು ಟೇಬಲ್ ಮೇಲೆ ಇಟ್ಟು ಮಲಗಿ’ ಎಂದು ಮಾಸ್ತರ ಅಥವಾ ಅಮ್ಮನವರದಾಗಿರುತ್ತಿತ್ತು. ತಡವಾಗಿ ಬರಲಿರುವ ಅವರನ್ನು ಕಾಯದೆ ಅಜ್ಜಿ ಮತ್ತು ದೇವಿ ಆರಾಮಾಗಿ ಟಿ.ವಿ. ನೋಡುತ್ತ ಊಟ ಮಾಡುತ್ತಿದ್ದರು. ಇಬ್ಬರಿಗೂ ಅನಂತನಾಗ್ ನಟಿಸಿದ ಸಿನಿಮಾಗಳನ್ನು ನೋಡುವುದರಲ್ಲಿ ಯಾವುದೇ ತಕರಾರಿರಲಿಲ್ಲ. ಅನಂತನಾಗ್ ಯಾವುದೇ ಸುಂದರಿಯನ್ನು ಪ್ರೀತಿ ಮಾಡುವುದು ದೇವಿಗೆ ಬಹಳ ಸೇರುತ್ತಿತ್ತು. ಪ್ರೀತಿ ಮಾಡಿದರೆ ಅವನ ಹಾಗೆ ಮಾಡಬೇಕು ಎಂದು ಅವಳು ಅಂದುಕೊಳುತ್ತಿದ್ದಳು.

ಮಂಕಾಳಜ್ಜಿ “ಅವನು ನಮ್ಮ ಕಡೆಯವನೇ ಹೊನ್ನಾವರದವನು. ಪಾರ್ಟು ಚಲೋ ಮಾಡ್ತ” ಎಂದು ದೇವಿಗೆ ಹೇಳಿದಾಗಿನಿಂದ ಅನಂತನಾಗ್ ದೇವಿಗೆ ಇನ್ನಷ್ಟು ಹತ್ತಿರದವನಾಗಿದ್ದ. ದೇವಿ ಅಕ್ಕನೊಂದಿಗೆ ಅವನ ಸಿನಿಮಾ ನೋಡ್ದಿದಲ್ಲದೆ, ಆಗೀಗ ಪೇಟೆಯಲ್ಲಿ ಪ್ರದರ್ಶನವಾಗುವ ಅವನ ಬಹಳಷ್ಟು ಸಿನಿಮಾಗಳನ್ನು ನೋಡಿದ್ದಳು. ಅಕ್ಕನೊಂದಿಗೆ ಸಿನಿಮಾ ನೋಡುವಾಗಲೆಲ್ಲ. ಅನಂತನಾಗನದೇ ಕ್ರಾಪ್ ಬಿಟ್ಟ ಹುಡುಗನೊಬ್ಬ ಅಕ್ಕನ ಹೆಗಲ ಮೇಲೆ ಕೈಹಾಕಿ ನಗುತ್ತ ಕೂತಿರುತ್ತಿದ್ದ. ಅಕ್ಕ “ಬೇಡ, ಬೇಡ, ಶೀ… ಶೀ…” ಅನ್ನುವುದು ಯಾಕೆಂದು ದೇವಿಗೆ ಆಗ ಗೊತ್ತಾಗುತ್ತಿರಲಿಲ್ಲ. ಅವನದು ಅಕ್ಕನ ಹೆಗಲ ಮೇಲೆ ಕೈಹಾಕುವಂಥ ಅದೆಂಥ ದೋಸ್ತಿಯೋ, ಬೆಳಕಾಗುತ್ತಿದ್ದಂತೆ ಬೆಳ್ಳಿ ತೆರೆಯ ಮೇಲೆ ಅನಂತನಾಗ್ ನಾಯಕಿ ಲಕ್ಷ್ಮಿಯನ್ನು ಪ್ರೀತಿಸಿದ್ದೇ ಸುಳ್ಳು ಅನ್ನುವಂತೆ ಮಾಯವಾಗಿರುತ್ತಿದ್ದ.

ಮೊದಲಿಂದಲೂ ಅನಂತನಾಗ್ ದೇವಿಗೆ ಅಭಿಮಾನಿ ನಟ. “ಈ ವಯಸ್ಸಿನಲ್ಲೂ ಎಷ್ಟು ಚಂದ ಕಾಣುತ್ತಾನೆ” ಎಂದು ಅಜ್ಜಿಯ ಹತ್ತಿರ ಹೇಳುವಷ್ಟು ಅವನ ಬಗ್ಗೆ ಮೆಚ್ಚುಗೆ. ಮೊನ್ನೆ ಮೊನ್ನೆ ಬೇಕರಿಯಲ್ಲಿ ಪರಿಚಯವಾದ ಮೇಲಿನ ಮನೆ ಹುಡುಗಿ ವಾಸಂತಿಯ ಹತ್ತಿರ ಅವನ ಫೋನ್ ನಂಬರನ್ನು ಪತ್ತೆ ಮಾಡಲು ಹೇಳಬೇಕು. ಅದು ಸಿಕ್ಕಿದರೆ ಅವನೊಂದಿಗೆ ಮಾತಾಡಬಹುದು. ಇಂಥದ್ದರಲ್ಲಿ ವಾಸಂತಿ ಚುರುಕು. “ಆಕಾಶದಿಂದ ಧರೆಗಿಳದ ರಂಭೆ…” ಎಂದು ಅನಂತ್ ನಾಗ್ ಸಿನಿಮಾದ ಹಾಡನ್ನು ಗುಣುಗುತ್ತ ಪಾತ್ರೆ ತೊಳೆಯುತ್ತ ದೇವಿ ಅವನೊಂದಿಗೆ ಮಾತಾಡುವ ಬಗ್ಗೆ ಯೋಚಿಸುತ್ತಿದ್ದಳು.

ಒಂದು ವೇಳೆ ಅನಂತನಾಗ್ ನಂಬರು ಸಿಕ್ಕಿ, ಅವನೊಂದಿಗೆ ಏನು ಮಾತಾಡಬಹುದು. ದೇವಿ ಲಹರಿಯಲ್ಲಿ ತೇಲುತ್ತಿದ್ದಳು. ‘ನಿಮ್ಮ ಅಭಿಮಾನಿ ನಾನು’ ಎಂದರೆ ನಗಬಹುದು. `ನಾನು ನಿಮ್ಮ ಊರ ಕಡೆಯವಳು’ ಎಂದರೂ ಅವರು ನನ್ನೊಂದಿಗೆ ಮಾತಾಡುತ್ತಾರೆಯೋ, ಇಲ್ಲವೊ ಎಂಬುದು ಒಂದು ಗಳಿಗೆ ದೇವಿಗೆ ಯೋಚನೆಯಾಯ್ತು. ಅನಂತನಾಗ್ ಜೊತೆ ಮಾತಾಡುವ, ಕನಸುಕಾಣುತ್ತ ದೇವಿ ನಿದ್ದೆ ಹೋದಳು. “ಕಾಪಾಡು ಶಿವನೆ” ಎನ್ನುವ ಅಜ್ಜಿಯ ಕನವರಿಕೆಯಿಂದ ಬೆಚ್ಚಿ ಕಣ್ಣು ತೆರೆದ ದೇವಿ, ನೀರಲ್ಲಿ ಬಿದ್ದ ನಾಯಕಿಯನ್ನು ಕಾಪಾಡಿದ ನಾಯಕನ ನೆನಪಾಗಿ- ಹಾಗೇ ಕಣ್ಣುಮುಚ್ಚಿ ಮಲಗಲು ಪ್ರಯತ್ನಿಸಿದಳು.

***

“ದೇವಿ, ನೀನು ಬೇಕಾದರೆ, ಊರಿಗೆ ಫೋನ್ ಮಾಡಿ, ನಿಮ್ಮ ಅವ್ವಿಯೊಂದಿಗೆ ಮಾತಾಡು” ಎಂದು ಪದ್ಮಾವತಿ ಅಮ್ಮನವರು ಹೇಳ್ದಿದೇ ನೆಪವಾಗಿ, ತಮ್ಮ ಮನೆ ಹತ್ತಿರದಲ್ಲಿರುವ ರಾಯ್ಕರ ಮಾಸ್ತರರ ಮನೆಗೆ ಫೋನ್ ಮಾಡಿದ್ದಳು. ಇವಳ ಫೋನ್ ಕರೆಗೆ ಗಾಬರಿಯಿಂದ ಓಡಿ ಬಂದ ಅವ್ವ ಸಾವಿತ್ರಿಗೆ “ನಂದೇ ಫೋನ್ನಲ್ಲಿ ಮಾತಾಡ್ತೆ” ಎಂದು ಧಿಮಾಕಿನಲ್ಲಿ ಹೇಳಿದಳು. ದೇವಿಗೆ ಅವಳವ್ವ “ನೀನು ಇಂಥದ್ದಕ್ಕೆಲ್ಲ ದುಡ್ಡು ಖರ್ಚು ಮಾಡಬೇಡ. ಮುಂದೆ ಬೇಕಾಗುತ್ತದೆ” ಎಂದು ಆ ಕಡೆಯ ಸಂಪರ್ಕ ಕಡಿದಿದ್ದಳು. ಆಗ ದೇವಿಯ ಮನಸ್ಸಿಗೆ ಬೇಜಾರು ಅನ್ನಿಸಿಬಿಟ್ಟಿತು. “ಈ ಹಡಬೆ ರಂಡೆಯೊಂದಿಗೆ ಮಾತೇ ಆಡಬಾರದು” ಎಂದು ತನಗೆ ತಾನೇ ನಿಕ್ಕಿ ಮಾಡಿಕೊಂಡಳು. ಮರುಕ್ಷಣ ಅವ್ವನ ಬಗ್ಗೆ ಪಾಪ ಅನ್ನಿಸಿತು. ಊರೆಲ್ಲ ಅಲೆದು ಕೋಳಿಗಳನ್ನು ತಕ್ಕೊಂಡು ಅವನ್ನು ಪೇಟೆಯಲ್ಲಿ ಮಾರುತ್ತಾಳೆ. ಹಗಲಿನ ಉರಿಬಿಸಿಲು ನೆತ್ತಿಯನ್ನು ಸೀಳುತ್ತಿದ್ದರೂ, ಕೋಳಿಗಳನ್ನು ಹೇಳಿದ ದರ ಬಿಡದೆ ಮಾರಿಯೇ ನಾಲ್ಕು ಕಾಸು ಮಾಡಿಕೊಂಡು, ಪಳದಿಗೆಂದು ಮೀನು ಹಿಡಿದೇ ಮನೆಗೆ ಬರುತ್ತಾಳೆ. ಅವಳು ಹೇಳುವುದರಲ್ಲಿ ತಪ್ಪಿಲ್ಲ. ಆದರೆ ಇದು ನಾನು ದುಡ್ಡುಕೊಟ್ಟು ತಕ್ಕೊಂಡದ್ದಲ್ಲ ಎಂದು ಅವ್ವನಿಗೆ ಹೇಳಿದರೂ ಅವಳು ಕೇಳುತ್ತಾಳೆ ಎಂಬುದರಲ್ಲಿ ದೇವಿಗೆ ನಂಬಿಕೆ ಇರಲಿಲ್ಲ.

ಮೊದಲೆಲ್ಲ ಯಾರೆಲ್ಲ ಫೋನ್ ಕರೆಗಳು ಬಂದವು. ಯಾರಿಗೆ ಫೋನ್ ಮಾಡಿದ್ದಾರೆ ಎಂಬ ಮೊಬೈಲ್ ತಪಾಸಣೆ ಈಗೀಗ ಪದ್ಮಾವತಿ ಅಮ್ಮನಿಂದ ಕಮ್ಮಿಯಾಗಿತ್ತು. ಹಾಗಾಗಿ ದೇವಿ ರತ್ನ ಅಕ್ಕೋರಿಗೆ ಆಗೀಗ ಫೋನ್ ಮಾಡಿ ತನ್ನ ಅವ್ವಿಯ ಬಗ್ಗೆ ವಿಚಾರಿಸುತ್ತಿದ್ದಳು. `ಕೋಳಿ ವ್ಯಾಪಾರಕ್ಕೆ ಹೆಚ್ಚು ಹೋಗದಿರುವಂತೆ, ಅವಳಿಗೆ ದುಡ್ಡೇನಾದರೂ ಬೇಕಾದರೆ ಕೊಡುವಂತೆ’ ರತ್ನ ಅಕ್ಕೋರನ್ನು ದೇವಿ ಕೇಳಿಕೊಳ್ಳುತ್ತಿದ್ದಳು.

ಒಮ್ಮೊಮ್ಮೆ ಅವಳ ಮೊಬೈಲ್ಗೆ ಯಾವ ಕರೆಗಳು ಇಡೀ ದಿನ ಕಾದರೂ ಬರುತ್ತಿರಲಿಲ್ಲ. ತನ್ನೊಂದಿಗೆ ಮಾತನಾಡುವುದಕ್ಕೆಂದೇ ಹುಡುಗನದೊ, ಗಂಡಸಿನದೊ ಕರೆ- ಅದೂ ಬರುತ್ತಿರಲಿಲ್ಲ. ಅದು ಕೂಡ ಹಾದಿ ತಪ್ಪಿ ಬಂದ ನಿಧಾನವಾಗಿ ಪರಿಚಯ ಬೆಳೆದ ಕರೆ. ಎಷ್ಟು ಒತ್ತಾಯ ಮಾಡಿದರೂ ತನ್ನ ಹೆಸರು, ವಿಳಾಸವನ್ನು ಹೇಳದೆ- ಸಣ್ಣದನಿಯಲ್ಲಿ ಕೊಮಣೆ ಮಾಡುತ್ತಿದ್ದಳು ದೇವಿ. ಇಂಥ ಮಾತುಕತೆಗಳು, ಪರಿಚಯ, ಗುರುತು, ಹೆಸರು, ವಿಳಾಸವಿಲ್ಲದೆ ನಡೆಯುತ್ತವಲ್ಲ ಎಂದು ಅವಳಿಗೆ ಸೋಜಿಗ.

***

ರಸ್ತೆಯಲ್ಲಿ ಹಾಯುವ ಇಡೀ ಬಸ್ಸುಗಳನ್ನೇ ಪ್ರತಿಫಲಿಸುವ, ಮೈಪೂರ್ತಿ ಕನ್ನಡಿಗಳಿರುವ ಇಮಾರುತುಗಳ ನೆರಳನ್ನು ದಾಟಿ ಅವ್ವನಿಗೆ ಸೀರೆ ತಕ್ಕೊಳ್ಳಲೆಂದು ಹೋಗಿ ಬಂದ ದಿನದಿಂದ ದೇವಿಗೆ ತಳಮಳ ಶುರುವಾಗಿತ್ತು. ಅದೆಲ್ಲೊ ಸೀರೆ ಅಂಗಡಿಯ ಮುಂದೆ ಸಿಕ್ಕ ದೇವಿಯ ಊರಿನ ಗೌರಿ ಅವಳಾಗಿಯೇ ಗುರುತು ಹಿಡಿದು ಮಾತಾಡಿಸಿ “ಏ, ನೀನೂ ಇಲ್ಲೇ ಇದ್ಯೇನೆ?, ಯಾರ ಮನೆಯಲ್ಲಿ ಕೆಲಸ ಮಾಡ್ತಿಯೆ? ನಾನು ಶಾಂತ ಅಕ್ಕೋರ ಮಗಳ ಮನೇಲಿ ಕೆಲಸ ಮಾಡ್ತೆ” ಎಂದವಳಿಗೆ ಗಡಿಬಿಡಿಯಲ್ಲೇ ಅವಳ ಬಗ್ಗೆ ಹೇಳಿ, ಇವಳು ಯಾರ ಮನೆಯಲ್ಲಿ ಕೆಲಸ ಮಾಡುತ್ತಾಳೆಂಬುದನ್ನು ಕೇಳಿ ತಿಳಿದುಕೊಂಡ್ದಿದಳು. ಸೀರೆ ತಕ್ಕೊಳಲು ಅವಳೇ ದೇವಿಗೆ ಸಹಾಯ ಮಾಡಿ, ಮಾತಿನ ನಡುವೆ ದೇವಿಯ ಅಕ್ಕ ನೀಲಾ ಇದೇ ಊರಿನಲ್ಲಿ ಇರುವಳೆಂದೂ, ಗೌರಿ ಸಿನಿಮಾ ನೋಡಲು ಹೋದಾಗ ಅವಳೇ ಸಿಕ್ಕು ಮಾಡನಾಡಿಸಿದಳೆಂದೂ ಹೇಳಿದಳು. `ಫೋನ್ ಮಾಡು’ ಎಂದು ನೀಲಾ ತನ್ನ ನಂಬರನ್ನೂ ಕೊಟ್ಟಳಂತೆ. `ಅವಳು ಎಲ್ಲಿದ್ದಾಳೆ, ನೀನು ಅವಳನ್ನು ಮತ್ತೆ ಮಾತಾಡಿಸಿದ್ಯೇನೆ, ಅವಳೊಂದಿಗೆ ಯಾರಿದ್ದರು ಎಂಬೆಲ್ಲ ದೇವಿಯ ಪ್ರಶ್ನೆಗೆ ಗೌರಿ `ಗೊತ್ತಿಲ್ಲ’ ಎಂದಿದ್ದಳು.

“ನಿನಗೆ ಆ ನಂಬರು ಕೊಡ್ತೆ. ಮನೆಯಲ್ಲಿ ಎಲ್ಲೋ ಇಟ್ಟಿದ್ದೆ. ಸಿಕ್ಕ ಕೂಡಲೇ ನಿಂಗೆ ಹೇಳ್ತೆ. ಊರಲ್ಲಿ ಹಬ್ಬಕ್ಕೆ ಸಿಕ್ಕುವಾ” ಎಂದು ಗೌರಿ ದೇವಿಯ ಬಾಡಿದ ಮುಖವನ್ನು ನೋಡಿ ಅವಳ ಕೈ ಹಿಡಿದು “ಮುದ್ದಾಂ ಹುಡುಕಿ ಹೇಳ್ತೆ” ಎಂದು ಎರಡೆರಡು ಸಲ ಹೇಳಿ ಇವಳನ್ನು ಬಸ್ಸು ಹತ್ತಿಸಿದ್ದಳು.

ಮನೆಯಲ್ಲಿ ದೇವಿಯ ಮುಖ ಸಣ್ಣದಾಗಿರುವುದನ್ನು ನೋಡಿದ ಮಂಕಾಳಜ್ಜಿ. “ಏನೇ, ಎಂಥದ್ದಕ್ಕೆ ಬೇಜಾರೆ? ಹಂಗೆಲ್ಲ ಮನಸ್ಸಿಗೆ ಬೇಜಾರು ಮಾಡಕಣುಕಾಗ” ಎಂದಳು.

“ಅಕ್ಕ ಇದೇ ಊರಲ್ಲಿ ಇದ್ದಾಳೆ ಅಜ್ಜಿ”. ಮೆಲ್ಲಗೆ ಎಂದ ದೇವಿಗೆ “ಜೀವನ ಎಲ್ಲಿಂದ, ಎಲ್ಲಿಗೋ ಕೂಡಸ್ತಿದ ನೋಡ್. ಪೂರಾ ಹರಿದು ಹೋಯ್ತಂದೆ ಬಿಟ್ಟದ್ದೂ, ನಸೀಬು ಇದ್ರೆ ಮತ್ತೆ ಕೂಡಬಹುದು. ನಿಮ್ಮ ಅಕ್ಕನದೂ ನಿಂದೂ ಆದ ಹಂಗೆ. ವಿಚಾರ ಮಾಡಬೇಡ. ನಿಂಗೆ ಅಕ್ಕ ಸಿಕ್ಕುವಹಂಗೆ ಇದ್ರೆ ಸಿಕ್ಕೇ ಸಿಕ್ಕುತ್ತಾಳೆ… ಇಬ್ಬರಿಗೂ ನಸೀಬು ಬೇಕು. ಏನು ಹೇಳು ನಸೀಬು ಅನ್ನುವುದು ಒಂದು ಜೀವನಕ್ಕೆ ಬೇಕು” ಅಂದು ಸಮಾಧಾನದ ನಾಲ್ಕು ಮಾತಾಡ್ದಿದಳು.

***

ವೆಂಕಟ್ರಮಣ ದೇವರ ಬಂಡೀಹಬ್ಬ ದಿನ ನಿನ್ನ ಹಣೆಯ ನಡುವೆ ಹಾಕಿಸಿದ ಹಸಿರು ಹಚ್ಚೆ ಹಾಗೆಯೇ ಇದೆಯೇ… ಅಳಿಸಲಾಗದ ಚುಕ್ಕಿಯೊಂದನ್ನು ನಿನ್ನ ಹಣೆಗೆ ಇಟ್ಟಂತೆ…

ಕಿವಿಗೆ ಅವ್ವ ನಿನಗೆ ಮಾಡಿಸಿಕೊಟ್ಟ ದೊಡ್ಡ ರಿಂಗು, ಕೈಯ ಬಳೆ ಹಾಗೆಯೇ ಇದೆಯೆ… ಏನೆಲ್ಲ ಕೇಳಬೇಕಿದೆ ನಿನಗೆ. ನೀನು ಬೆಳೆಸಿದ ದಾಸಾಳ, ರಂಜದ ಹೂವಿನಗಿಡಗಳು ಮನೆಯ ಹಿತ್ತಲಲ್ಲಿ ಬೆಳೆದು ನಿಂತಿವೆ. ಗೋಡೆಯಲ್ಲಿ ನೀನು ಬರೆದ ನವಿಲು, ಗಿಳಿ, ಗುಬ್ಬಿಗಳ ಕೆಂಪು ಹಸೆ ಕಳೆದ ವರ್ಷ ಮನೆಗೆ ಗಿಲಾಯಿ ಮಾಡುವಾಗ ಅಳಸಿ ಹೋದವು… ನಾವಿಬ್ಬರೂ ಜೋರು ಮಳೆಯಲ್ಲಿ ಸೂಡಿಕೊಂಡ ಕೊಡೆಯನ್ನು ಜೋರು ಗಾಳಿಗೆ ಹಾರಿಹೋಗದಂತೆ ಸಂಭಾಳಿಸಿ ಹಿಡಿದುಕೊಳ್ಳುತ್ತ ದೇವಳದ ಗದ್ದೆಗೆ ಅವ್ವನಿಗೆಂದು ಗಂಜಿ ತಕ್ಕೊಂಡು ಹೋದದ್ದು ಈಗಲೂ ನಿನಗೆ ನೆನಪಿದೆಯೆ…

ನೀನೀಗ ಏನು ಮಾಡುತ್ತೀ? ಇಷ್ಟು ವರ್ಷ ನಮ್ಮ ನೆನಪು ಬರಲಿಲ್ಲವೆ? ನೀನು ಓಡಿ ಹೋಗುವ ಮೊದಲ ದಿನ ಅನಂತನಾಗನ ಸಿನಿಮಾ ನೋಡಿ ಬಂದೆವಲ್ಲ, ಆ ರಾತ್ರಿ ಅವ್ವ ನಿನಗೇಕೆ ಬಯ್ದಳು? ಕೇಳಬೇಕೆಂದು ಕೊಂಡರೆ ನೀನೇ ಇರಲಿಲ್ಲ…

‘ನಾನು, ನಿನ್ನ ತಂಗಿ ದೇವಿ, ಊರು ಇಂಥದ್ದು, ಅವ್ವನ ಹೆಸರು ಸಾವಿತ್ರಿ…. ಅಪ್ಪ ಪರಮೇಶ್ವರ -ಅವರಿಬ್ಬರೂ ನನ್ನಂತೆಯೇ ನಿನಗೂ ತಂದೆ ತಾಯಿಯರು’ ಎಂದು ಅಕ್ಕನಿಗೆ ಹೇಳಬೇಕೆಂದುಕೊಳ್ಳುವುದನ್ನು ತನಗೆ ತಾನು ಹೇಳಿಕೊಳ್ಳುತ್ತ ದೇವಿ, ಗೌರಿ ಕೊಟ್ಟ ಅಕ್ಕನ ಸಂಖ್ಯೆಗಳಿಗೆ ಪ್ರಯತ್ನಿಸುತ್ತಿದ್ದಳು. ಹಾಗೆ ಪ್ರಯತ್ನಿಸಿದಾಗಲೆಲ್ಲ `ನೀವು ಡಯಲ್ ಮಾಡಿದ ಸಂಖ್ಯೆ ಸರಿ ಇದೆಯೇ ಎಂದು ಪರೀಕ್ಷಿಸಿ’ ಎಂದು ಮತ್ತೆ ಮತ್ತೆ ಬರುತ್ತಿತ್ತು.

ದೇವಿ ಪ್ರಯತ್ನ ಬಿಡದೆ `ಒಂಬತ್ತು, ಎಂಟು, ಎಂಟು….’ ಎಂದು ಪ್ರಯತ್ನಿಸುತ್ತಲೇ ಇದ್ದಳು- ಅಗೋಚರ ಧ್ವನಿಯೊಂದನ್ನು ಹಿಡಿಯುವ ತವಕದಲ್ಲಿ. ಸಂಜೆಯ ಮಬ್ಬುಗತ್ತಲಲ್ಲಿ ದೇವಿಯ ಕಣ್ಣುಗಳಲ್ಲಿ ಸಂಖ್ಯೆಗಳಷ್ಟೆ ಶಾಶ್ವತ ಬಿಂಬಗಳಾಗಿ ಹೊಳೆಯುತ್ತಿದ್ದವು.

‍ಲೇಖಕರು avadhi

May 29, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

10 ಪ್ರತಿಕ್ರಿಯೆಗಳು

 1. suresh kota

  ಹ್ವಾಯ್ ಸಂದೀಪ್ ನಾಯಕರೆ, ಎಷ್ಟು ಚಲೋ ಬರೀತ್ರಿ ನೀವು!
  ಅಸಲಿಗೆ ನೀವು ಉತ್ತರಕನ್ನಡದ ಕತೆಗಾರರೇ ಹಾಗೆ, ಏನೋ ಮೋಡಿ ಮಾಡಿಬಿಡ್ತೀರಿ ಮಾರಾಯ್ರೆ!
  ಛಂದದ ಕತೆಗಾಗಿ ಥ್ಯಾಂಕ್ಸ್, ಅವಧಿ!

  ಪ್ರತಿಕ್ರಿಯೆ
 2. Santhosh Ananthapura

  Hearty Congratulations for having a “Chanda Pusthaka Award”.

  it is an excellent story Mr. Nayak. Looking forward to read many more….
  Once again Congratulations…

  ಪ್ರತಿಕ್ರಿಯೆ
 3. JOGI

  ತುಂಬ ದಿನವಾಗಿತ್ತು ಚೆಂದದ ಕತೆ ಓದಿ. ಒಮ್ಮೆ ಹಗುರಾಗಿ, ತಿಳಿಯಾಗಿ, ಕತೆಯೊಳಗೆ ತನ್ಮಯನಾಗುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್.

  ಪ್ರತಿಕ್ರಿಯೆ
 4. shivu.k

  ಕತೆ ತುಂಬಾ ಚೆನ್ನಾಗಿದೆ….

  ಬಹುಮಾನ ಗಳಿಸಿದ್ದಕ್ಕೆ ಧನ್ಯವಾದಗಳು.

  ಪ್ರತಿಕ್ರಿಯೆ
 5. ಆಲಾಪಿನಿ

  ಸಂದೀಪ್‌, ಎಂಥಾ ಆಪ್ತತೆ ಇದೆ ಈ ಕಥೆಯಲ್ಲಿ… ಪಾತ್ರಚಿತ್ರಣ ತುಂಬಾ ಇಷ್ಟವಾಯ್ತು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: