‘ಸಂಪಂಗಿ’ ಮರದ ಹಸಿರೆಲೆ ನಡುವೆ….

 

ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು

-ಎನ್ ಎ ಎಂ ಇಸ್ಮಾಯಿಲ್ ‘

‘ಬರೆವ ಬದುಕಿನ ತಲ್ಲಣ’ದಿಂದ

 

corruption_india-1

 

ಜನವರಿ 29ರಂದು ಕರ್ನಾಟಕದ ಭ್ರಷ್ಟಾಚಾರದ ಇತಿಹಾಸದಲ್ಲಿ ಮೂರು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದ್ದು ಇದೇ ಮೊದಲ ಬಾರಿಗೆ ಶಾಸಕನೊಬ್ಬ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು. ಎರಡನೆಯದ್ದು ಶುದ್ಧ ಹಸ್ತದ ರಾಜಕಾರಣಿ ಎಂದೇ ಎಲ್ಲರೂ ಗುರುತಿಸುವ ಸಿದ್ದರಾಮಯ್ಯನವರು `ಎಲ್ಲರೂ ಭ್ರಷ್ಟರೇ ದುರದೃಷ್ಟವಶಾತ್‌ ಈತ ಸಿಕ್ಕಿಬಿದ್ದಿದ್ದಾನೆ’ ಎಂದು ಇದಕ್ಕೆ ಪ್ರತಿಕ್ರಿಯಿಸಿದ್ದು. ಈ ಪ್ರತಿಕ್ರಿಯೆಗೆ 225 ಮಂದಿ ವಿಧಾನಸಭೆ ಸದಸ್ಯರು ಮತ್ತು 75 ಮಂದಿ ವಿಧಾನ ಪರಿಷತ್ತಿನ ಸದಸ್ಯರಲ್ಲಿ ಯಾರೊಬ್ಬರೂ ವಿರೋಧ ವ್ಯಕ್ತಪಡಿಸದೇ ಇದ್ದದ್ದು. ಮತ್ತು ಲೋಕಾಯುಕ್ತ ಕಚೇರಿಗೆ ಶಾಸಕರ ದಂಡೊಂದು ನುಗ್ಗಿ ಬಂಧಿತ ಶಾಸಕ ವೈ ಸಂಪಂಗಿಯನ್ನು ಜಾಮೀನಿನ ಮೇಲೆ ತಕ್ಷಣ ಬಿಡುಗಡೆ ಮಾಡಬೇಕೆಂದು ರಂಪಾಟ ನಡೆಸಿದ್ದು. ಈ ಮೂರು ಘಟನೆಗಳು ಭ್ರಷ್ಟಾಚಾರದ ಸ್ವರೂಪವನ್ನು ವಿವರಿಸುತ್ತಿವೆ.

***
ಲೋಕಾಯುಕ್ತರ ಬಲೆಗೆ ಬಿದ್ದವರು ಆಡಳಿತಾರೂಢ ಬಿಜೆಪಿಗೆ ಸೇರಿದ ಕೋಲಾರ ಜಿಲ್ಲೆ ಕೆಜಿಎಫ್‌ ಶಾಸಕ ವೈ ಸಂಪಂಗಿ. ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ (ಐವತ್ತು ಸಾವಿರ ನಗದು, ಉಳಿದದ್ದು ಚೆಕ್‌) ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಮಾನ್ಯ ಶಾಸಕರು ಈ ಮೊತ್ತ ಏಕೆ ಪಡೆಯುತ್ತಿದ್ದರು? ಲೋಕಾಯುಕ್ತ ಪೊಲೀಸರು ನೀಡುವ ಮಾಹಿತಿ ಹೀಗಿದೆ.

ಕೆಜಿಎಫ್‌ನ ಆಂಡರ್ಸನ್‌ ಪೇಟೆಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೊಯಿನ್‌ ಫಾರೂಕ್‌ ಎಂಬವರಿಗೆ ಒಂದು ನೀವೇಶನವಿದೆ. ಇದನ್ನು ಸುಳ್ಳು ದಾಖಲೆಗಳ ಮೂಲಕ ತಮ್ಮ ವಶಕ್ಕೆ ತೆಗೆದುಕೊಳ್ಳಲು ಇಲಿಯಾಸ್‌, ನಯಾಝ್‌ ಮತ್ತು ಖಾನ್‌ ಫಯಾಝ್‌ ಪ್ರಯತ್ನಿಸಿದ್ದರು. ಇದರ ವಿರುದ್ಧ ಮೊಯಿನ್‌ ಫಾರೂಕ್‌ ಇದೇ ಠಾಣೆಯಲ್ಲಿ ದೂರು ನೀಡಲು ಹೋದಾಗ ಅದನ್ನು ಠಾಣಾಧಿಕಾರಿ ಸ್ವೀಕರಿಸಿರಲಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠರು ನಿರ್ದೇಶಿಸಿದ ನಂತರ ದೂರು ದಾಖಲಿಸಿಕೊಂಡಿದ್ದರು. ಮೊಯಿನ್‌ ಫಾರೂಕ್‌ ವಿರುದ್ಧ ಇಲಿಯಾಸ್‌ ತಮ್ಮ ಪತ್ನಿಯ ಮೂಲಕ ದೂರು ಕೊಡಿಸಿದ್ದರು. ಈ ದೂರನ್ನೂ ಪಡೆದ ಪೊಲೀಸರು ಯಾರನ್ನೂ ಬಂಧಿಸುವುದಕ್ಕೆ ಹೋಗಿರಲಿಲ್ಲ.

ತನ್ನ ನಿವೇಶನ ಅಪಹರಿಸಲು ಪ್ರಯತ್ನಿಸಿದವರ ವಿರುದ್ಧ ತಾನು ದೂರು ನೀಡಿರುವಾಗಲೇ ತನ್ನ ಮೇಲೊಂದು ಕ್ರಿಮನಲ್‌ ಪ್ರಕರಣ ದಾಖಲಾಗಿರುವುದನ್ನು ಕಂಡು ಮೊಯಿನ್‌ ಫಾರೂಕ್‌ ಸಹಜವಾಗಿಯೇ ಭಯಪಟ್ಟಿದ್ದಾರೆ. ಈ ಪ್ರಕರಣದಿಂದ ಪಾರಾಗಲು ಠಾಣೆಯ ಇನ್ಸ್‌ಪೆಕ್ಟರ್‌ ಲಕ್ಷಣ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಪಾಶಾ ಒಂದು ಸಲಹೆಯನ್ನೂ ನೀಡಿದ್ದಾರೆ. ಅದರಂತೆ ಶಾಸಕರನ್ನು ಸಂಪರ್ಕಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಫಾರೂಕ್‌ ಅವರು ಶಾಸಕ ವೈ ಸಂಪಂಗಿಯವರನ್ನು ಸಂಪರ್ಕಿಸಿ ತಮ್ಮ ಅಳಲು ತೋಡಿಕೊಂಡಾಗ ಐದು ಲಕ್ಷ ರೂಪಾಯಿ ಕೊಟ್ಟರೆ ಕೇಸು ಇತ್ಯರ್ಥಗೊಳಿಸಿ `ಬಿ’ ರಿಪೋರ್ಟ್‌(ಪ್ರಕರಣ ಮುಕ್ತಾಯ)ಹಾಕಿಸುವುದಾಗಿ ಹೇಳಿದ್ದರು. ಈ ಮಾತುಕತೆಯನ್ನು ಫಾರೂಕ್‌ ಧ್ವನಿ ಮುದ್ರಿಸಿಕೊಂಡು ಲೋಕಾಯುಕ್ತವನ್ನು ಸಂಪರ್ಕಿಸಿದರು. ಲೋಕಾಯುಕ್ತ ಪೊಲೀಸರು ಶಾಸಕರನ್ನು ಲಂಚ ಪಡೆಯುವಾಗಲೇ ಹಿಡಿಯಲು ತೀರ್ಮಾನಿಸಿ ದಾಳಿಯ ರೂಪು ರೇಷೆಗಳನ್ನು ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಿದರು.

ಫಾರೂಕ್‌ರಿಂದ 50,000 ರೂಪಾಯಿಗಳ ನಗದು ಮತ್ತು ಉಳಿದ ಹಣವನ್ನು ಚೆಕ್‌ ರೂಪದಲ್ಲಿ ಶಾಸಕರ ಭವನದಲ್ಲಿಯೇ ಪಡೆದ ಶಾಸಕ ವೈ ಸಂಪಂಗಿ ತಕ್ಷಣವೇ ಆಂಡರ್ಸನ್‌ಪೇಟೆಯ ಪೊಲೀಸ್‌ ಠಾಣೆಗೆ ದೂರವಾಣಿ ಕರೆ ಮಾಡಿ ಫಾರೂಕ್‌ ವಿರುದ್ಧ ಇರುವ ಕ್ರಿಮಿನಲ್‌ ಪ್ರಕರಣ ಇತ್ಯರ್ಥಗೊಳಿಸಲು ಸಬ್‌ ಇನ್ಸ್‌ಪೆಕ್ಟರ್‌ ಪಾಶಾಗೆ ಸೂಚಿಸಿದರು. ತಕ್ಷಣವೇ ಲೋಕಾಯುಕ್ತ ಪೊಲೀಸರು ರಂಗ ಪ್ರವೇಶ ಮಾಡಿದರು.

***

ಜೆ ಎಚ್‌ ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರಿಗಳು ಮತ್ತು ರಾಜಕಾರಣಿಗಳ ಸಂಬಂಧದ ಬಗ್ಗೆ ಮಾತನಾಡುತ್ತಾ `ಒಬ್ಬ ಎಂಎಲ್‌ಎ ಮತ್ತು ಸಬ್‌ ಇನ್ಸ್‌ಪೆಕ್ಟರ್‌ ಒಂದಾಗಿಬಿಟ್ಟರೆ ಮತ್ತೆ ಆ ಕ್ಷೇತ್ರವನ್ನು ಉದ್ದಾರ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದರು. ಶಾಸಕ ವೈ ಸಂಪಂಗಿ ಪ್ರಕರಣದಲ್ಲಿ ಸಂಭವಿಸಿರುವುದು ಇದುವೇ. ಕರ್ನಾಟಕದಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆಯ ಮೂಲವಿರುವುದೂ ಇಲ್ಲಿಯೇ.

ಪೊಲೀಸ್‌ ಇನ್ಸ್‌ಪೆಕ್ಟರ್‌ ಅಥವಾ ಸಬ್‌ ಇನ್ಸ್‌ಪೆಕ್ಟರ್‌ಗಳು ತಮಗೆ ಬೇಕಿರುವ ಠಾಣೆಗೆ ವರ್ಗಾವಣೆ ಪಡೆಯಲು ಶಾಸಕರಿಗೆ ಲಂಚ ಕೊಡುತ್ತಾರೆ. ಅದೇ ಠಾಣೆಯಲ್ಲಿ ಉಳಿದುಕೊಳ್ಳುವುದಕ್ಕೆ ನಿಯಮಿತವಾಗಿ ಒಂದಷ್ಟು ಲಂಚವನ್ನು ಶಾಸಕರಿಗೆ ಕೊಡುತ್ತಲೇ ಇರಬೇಕಾಗುತ್ತದೆ. ಇಲ್ಲದಿದ್ದರೆ ಹೆಚ್ಚು ಕೊಡುವ ಮತ್ತೊಬ್ಬ ಆ ಸ್ಥಾನ ಕಬಳಿಸಬಹುದೆಂಬ ಭಯ ಪೊಲೀಸ್‌ ಅಧಿಕಾರಿಗಳಿಗಿರುತ್ತದೆ. ಅಂದರೆ ಲಂಚ ಕೊಟ್ಟು ವರ್ಗಾವಣೆ ಪಡೆದುಕೊಂಡು ಬಂದ ಪೊಲೀಸ್‌ ಅಧಿಕಾರಿ ವರ್ಗಾವಣೆಗೆ ಕೊಟ್ಟ ಲಂಚ, ಅಲ್ಲಿ ಉಳಿಯುವುದಕ್ಕೆ ಕೊಡಬೇಕಾದ ಲಂಚ ಹಾಗೂ ಅದರ ಮೇಲೆ ತನ್ನ ಲಾಭವನ್ನು ಸಂಗ್ರಹಿಸಲೇ ಬೇಕಾಗುತ್ತದೆ. ಈ ಸಂಗ್ರಹಣೆಯ ಒಂದು ಮಾರ್ಗ ಪ್ರಕರಣಗಳನ್ನು `ಇತ್ಯರ್ಥ’ಗೊಳಿಸುವುದು.

ಕರ್ನಾಟಕದ ಎಲ್ಲೆಡೆಯೂ ನಡೆಯುವ ದಂಧೆಯಿದು. ಇದರಲ್ಲಿ ಎಲ್ಲಾ ಶಾಸಕರು ಮತ್ತು ಎಲ್ಲಾ ಪೊಲೀಸ್‌ ಠಾಣೆಗಳಲ್ಲಿರುವ ಅಧಿಕಾರಿಗಳೂ ಇದ್ದಾರೆಂದು ಹೇಳಲು ಸಾಧ್ಯವಿಲ್ಲ. ಆದರೆ `ಆಯಕಟ್ಟಿನ ಸ್ಥಳ’ಗಳಿಗಾಗಿ ಹಪಹಪಿಸುವ ಪೊಲೀಸ್‌ ಅಧಿಕಾರಿಗಳು ಮತ್ತು ಅಂಥ ಸ್ಥಳಗಳನ್ನು ಒದಗಿಸುವ ಶಾಸಕರು ಈ ದಂಧೆಯಲ್ಲಿ ಸಕ್ರಿಯರಾಗಿದ್ದಾರೆ. ಬೆಂಗಳೂರು ನಗರದಲ್ಲಿಯೂ ಭೂಗತ ದೊರೆಗಳಿಗಾಗಿ ಜಮೀನು ವಿವಾದಗಳನ್ನು ಇತ್ಯರ್ಥಗೊಳಿಸುವ ಪೊಲೀಸ್‌ ಅಧಿಕಾರಿಗಳಿದ್ದಾರೆ. ಇವರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕೂರಿಸಿರುವ ಶಾಸಕರೂ ಇದ್ದಾರೆ. ಇವರಾರೂ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿಲ್ಲ ಎಂಬುದನ್ನು ಹೊರತು ಪಡಿಸಿದರೆ ಇವರಿಗೂ ವೈ ಸಂಪಂಗಿ ಮತ್ತು ಅವರ ಪೊಲೀಸ್‌ ಅನುಯಾಯಿಗಳಿಗೂ ಯಾವ ವ್ಯತ್ಯಾಸವೂ ಇಲ್ಲ.

***

ವೈ ಸಂಪಂಗಿ ಲಂಚ ಸ್ವೀಕರಿಸಿದ್ದು ಕೊಳೆತ ವ್ಯವಸ್ಥೆಯ ಬಹಿರಂಗ ಮುಖ ಮಾತ್ರ. ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಆರಂಭಿಸಿ ಆಡಳಿತ ಪಕ್ಷದ ಪ್ರಮುಖರು ಮತ್ತು ವಿರೋಧ ಪಕ್ಷದ ಪ್ರಮುಖ ನಾಯಕರ ತನಕದ ಎಲ್ಲರ ಪ್ರತಿಕ್ರಿಯೆಯೂ ಶಾಸಕನೊಬ್ಬ ಲಂಚ ಸ್ವೀಕರಿಸಿದ್ದಕ್ಕೆ ಸೀಮಿತವಾಗಿತ್ತು. ಹಾಗೆ ನೋಡಿದರೆ ಸಿದ್ದರಾಮಯ್ಯನವರದ್ದು ಸಿನಿಕ ಪ್ರತಿಕ್ರಿಯೆಯಾಗಿದ್ದರೂ ಇಡೀ ವ್ಯವಸ್ಥೆಯ ಹುಳುಕನ್ನು ಅದು ಪ್ರತಿಬಿಂಬಿಸಿತು.

ಹಿಂದೊಮ್ಮೆ ವಿಧಾನ ಸಭೆಯಲ್ಲಿ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ `ಇಲ್ಲಿ ಯಾರು ಪ್ರಾಮಾಣಿಕರು?’ ಎಂಬರ್ಥದ ಪ್ರಶ್ನೆ ಎತ್ತಿದ್ದಕ್ಕೆ ಸುರೇಶ್‌ ಕುಮಾರ್‌, ಯೋಗೀಶ್‌ ಭಟ್‌ `ನಾವು ಪ್ರಾಮಾಣಿಕರು’ ಎಂದು ಧೈರ್ಯವಾಗಿ ಹೇಳಿ,ರಮೇಶ್‌ ಕುಮಾರ್‌ರ ಸಾಮಾನ್ಯೀಕೃತ ಹೇಳಿಕೆ ವಿರೋಧಿಸಿದ್ದರು. ಸಿದ್ದರಾಮಯ್ಯ `ಈತ ದುರದೃಷ್ಟವಶಾತ್‌ ಸಿಕ್ಕಿಬಿದ್ದಿದ್ದಾನೆ’ ಎಂದಾಗ ಸುರೇಶ್‌ ಕುಮಾರ್‌ ಮತ್ತು ಯೋಗೀಶ್‌ ಭಟ್‌ ಕೂಡಾ ಈ ಬಾರಿ ಪ್ರತಿಕ್ರಿಯಿಸಲಿಲ್ಲ. ಭ್ರಷ್ಟ ವ್ಯವಸ್ಥೆ ಇವರ ಬಾಯಿಯನ್ನೂ ಮುಚ್ಚಿಸಿಬಿಟ್ಟಿತ್ತೇ? ಅಥವಾ ಸಿಕ್ಕಿಬಿದ್ದವನು ತಮ್ಮ ಪಕ್ಷದ ಶಾಸಕ ಎಂಬ ಕಾರಣಕ್ಕೆ ಸುಮ್ಮನಾಗಿಬಿಟ್ಟರೇ?

ವಿಧಾನ ಪರಿಷತ್ತಿನಲ್ಲಿ ಶಾಸಕ ಸ್ಥಾನದ ಮಹತ್ವವನ್ನೂ ವ್ಯಾಪ್ತಿಯನ್ನೂ ಅರಿತ ಎಂ ಸಿ ನಾಣಯ್ಯನವರಂಥ ಸದಸ್ಯರಿದ್ದಾರೆ. ಅವರೂ ಸಿದ್ದರಾಮಯ್ಯನವರ ಸಿನಿಕ ಹೇಳಿಕೆಗೆ ಪ್ರತಿಕ್ರಿಯಿಸಲಿಲ್ಲ. ಸಿದ್ದರಾಮಯ್ಯನವರ ಹೇಳಿಕೆಗೆ ಯಾವ ವಿರೋಧವೂ ಬಾರದಿರುವುದು ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಮಂತ್ರಿಗಳು, ಎರಡೂ ಸದನಗಳ ವಿರೋಧ ಪಕ್ಷದ ನಾಯಕರು ಮತ್ತು ಸಭಾಧ್ಯಕ್ಷರು ಸೇರಿದಂತೆ ಎಲ್ಲಾ 300 ಮಂದಿ ಶಾಸಕರೂ ಭ್ರಷ್ಟರೆಂದು ಅವರೇ ಒಪ್ಪಿಕೊಂಡಂತಾಗುವುದಿಲ್ಲವೇ? ಈ ಹೇಳಿಕೆ ಇಡೀ ಶಾಸಕಾಂಗಕ್ಕೆ ಮಾಡುವ ಅವಮಾನ ಎಂದೂ ಯಾರಿಗೂ ಅನ್ನಿಸುತ್ತಿಲ್ಲವೇ?

***

ಬಿಜೆಪಿಗಿದ್ದ ಶಿಸ್ತಿನ ಪಕ್ಷವೆಂಬ ಹೆಗ್ಗಳಿಕೆ ಅದು ಅಧಿಕಾರಕ್ಕೆ ಬರುವ ಮೊದಲೇ ಕಾಣೆಯಾಗಿತ್ತು. ಅದಕ್ಕಿರುವ ಕಾರಣಗಳನ್ನು ಪಟ್ಟಿ ಮಾಡುವುದಕ್ಕೆ ಮತ್ತೊಂದು ದೊಡ್ಡ ಲೇಖನದ ಅಗತ್ಯವಿದೆ. ವೈ ಸಂಪಂಗಿ ಪ್ರಕರಣದಲ್ಲಿ ಬಿಜೆಪಿಯೊಳಗಿನ ಅಶಿಸ್ತು ಮತ್ತೊಮ್ಮೆ ಕಾಣಿಸಿಕೊಂಡಿತು. ಲೋಕಾಯುಕ್ತರು ವೈ ಸಂಪಂಗಿಯನ್ನು ಬಂಧಿಸಿ ಕರೆದೊಯ್ದ ನಂತರ ಬಿಜೆಪಿಯ ಶಾಸಕರ ಗುಂಪೊಂದು ಲೋಕಾಯುಕ್ತರ ಕಚೇರಿಗೆ ನುಗ್ಗಿತು. ಲೋಕಾಯುಕ್ತ ಸಂತೋಷ್‌ ಹೆಗ್ಡೆಯವರು ಹೇಳಿದಂತೆ `ಲೋಕಾಯುಕ್ತ ಕಚೇರಿಗೆ ಕಾಯ್ದೆಯಲ್ಲಿ ಒಂದು ಪೊಲೀಸ್‌ ಠಾಣೆಗೆ ಇರುವ ಸ್ಥಾನವಿದೆ. ಈ ಕಚೇರಿ ಸಂದರ್ಶಿಸುವವರು ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹೆಸರು, ಸಂದರ್ಶನದ ಕಾರಣಗಳನ್ನು ಬರೆಯಬೇಕು. ಈ ಔಪಚಾರಿಕತೆಯನ್ನು ಪಾಲಿಸಿದವರ ಮೇಲೆ ನಾವು ಅತಿಕ್ರಮ ಪ್ರವೇಶದ ಕೇಸು ದಾಖಲಿಸಬಹುದು’.

ಶಾಸಕರು ಜನಪ್ರತಿನಿಧಿಗಳು ಸದನವನ್ನು ಹೊರತು ಪಡಿಸಿದರೆ ಇವರು ಉಳಿದೆಲ್ಲೆಡೆಯೂ ಸಾಮಾನ್ಯ ನಾಗರಿಕರೇ. ಜನಪ್ರತಿನಿಧಿಗಳಾಗಿರುವುದರಿಂದ ಸಾಮಾನ್ಯ ನಾಗರಿಕರಿಗೆ ಮಾದರಿಯಾಗಿ ನಡೆದುಕೊಳ್ಳುವ ಹೊಣೆ ಹೊತ್ತವರು. ಆದರೆ ಲೋಕಾಯುಕ್ತ ಕಚೇರಿಯಲ್ಲಿ ಇವರು ನಡೆದುಕೊಂಡದ್ದು ಅವರ ಶಾಸಕ ಸ್ಥಾನಕ್ಕೆ ಗೌರವ ತರುವಂಥದ್ದಂತೂ ಆಗಿರಲಿಲ್ಲ. ಜನಪ್ರತಿನಿಧಿ ಎಂದರೆ ಜನರ ಸೇವಕ ಎಂಬುದನ್ನು ಇವರಿಗೆ ನೆನಪಿಸಿಕೊಡುವ ಕೆಲಸವನ್ನು ಅವರ ಪಕ್ಷವಾದರೂ ಮಾಡಬೇಕಾಗಿದೆ.

***

ವೈ ಸಂಪಂಗಿ ಪ್ರಕರಣ ಕೇವಲ ಶಾಸಕನೊಬ್ಬ ಲಂಚ ಪಡೆದ ಪ್ರಕರಣವಷ್ಟೇ ಅಲ್ಲ. ಅಧಿಕಾರರೂಢ ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಂದಾದರೆ ವ್ಯವಸ್ಥೆ ಎಷ್ಟರ ಮಟ್ಟಿಗೆ ಜನವಿರೋಧಿಯಾಗಬಲ್ಲದು ಎಂಬುದರ ಉದಾಹರಣೆ. ವರ್ಗಾವಣೆ ದಂಧೆಯ ವಿರಾಟ್‌ ರೂಪದ ಅನಾವರಣ. ದುರದೃಷ್ಟವಶಾತ್‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಎಲ್ಲಾ ಚರ್ಚೆಗಳೂ ಈ ಅಂಶ ಮರೆತಂತೆ ಕಾಣಿಸುತ್ತಿವೆ ಅಥವಾ ವೈ ಸಂಪಂಗಿ ಲಂಚ ಪಡೆದದ್ದನ್ನು ಖಂಡಿಸುವುದಕ್ಕೆ ಒತ್ತು ನೀಡುವ ಮೂಲಕ ನಿಜ ಸಂಗತಿ ಮರೆಮಾಚುವ ಪ್ರಯತ್ನವೊಂದು ನಡೆಯುತ್ತಿದೆ.

‍ಲೇಖಕರು avadhi

February 10, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. Dr. BR. Satyanarayana

    ಸಾರ್, ಆಗಾಗ ಅಲ್ಲಲ್ಲಿ ಓದಿದ್ದ ಸುದ್ದಿಯ ತುಣುಕುಗಳ ಜೊತೆಗೆ ನಿಮ್ಮ ಲೇಖನ ಓದಿದಾಗ ಒಂದು ದಿಕ್ಕು ದೆಸೆ ಲಭಿಸಿತು. ಒಳ್ಳೆಯ ಲೇಖನ. ನಿಮ್ಮ ಬ್ಲಾಗನ್ನು ಫಾಲೋ ಮಾಡಿದ್ದೇನೆ. ಇದಕ್ಕೆ ನಿಮ್ಮ ಅಭ್ಯಂತರವಿಲ್ಲವೆಂದು ಭಾವಿಸಿರುತ್ತೇನೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Dr. BR. SatyanarayanaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: