ಸಂಪು ಕಾಲಂ : ಅಶ್ವಿನಿ ದೇವತೆಗಳು ತಥಾಸ್ತು ಎಂದಾರು!


‘ಮುದ್ದು ಕಂದನಾಗಿ ಹುಟ್ಟಿ ಹೆಸರು ಗಿಸರು ಇಟ್ಟುಕೊಂಡು ಹಂಗುಹಿಂಗು ದೊಡ್ಡವನಾಗು…ಲೈಫು ಇಷ್ಟೇನೆ”, ಈ ಹಾಡು ನನ್ನ ಮೆಚ್ಚಿನದ್ದಾಗಿತ್ತು. ಆದರೆ ಇತ್ತೀಚಿಗೆ ಈ ಹಾಡು ತುಂಬಾ ಕಸಿವಿಸಿ ಅನಿಸುತ್ತಿದೆ. ಅದನ್ನು ಸರಿಯಾಗಿ ಒಂದಷ್ಟು ಬಾರಿ ಕೇಳಿ ನೋಡಿ! ಮೊದಲೆರಡು ಬಾರಿ ಹೌದಲ್ವಾ, ನಮ್ಮ ಭಟ್ರು ಎಷ್ಟು ಚೆನ್ನಾಗಿ ಹೇಳಿದ್ದಾರೆ ಅನಿಸುತ್ತದೆ. ನಂತರ ಒಂದಷ್ಟು ಬಾರಿ ಬರೀ ಅದರ ಸಂಗೀತ, ಲಯ ಪ್ರಾಸಗಳಿಗೆ ಮಾರುಹೊಗುತ್ತೇವೆ. ನಂತರ ಕೇಳಿ ನೋಡಿದರೆ, ಅನಿಸುವುದು “ಹೌದಾ? ಲೈಫು ನಿಜಕ್ಕೂ ಅಷ್ಟೇನಾ!” ಎಂದು. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಸತ್ಯವಾಗಿಬಿಡುತ್ತದೆಯಂತೆ. ಹಾಗೆ ಮತ್ತಷ್ಟು ಈ ಹಾಡನ್ನು ಕೇಳಿದರೆ ಎಲ್ಲಿ, “ಬಿಡು ಲೈಫು ಇಷ್ಟೇನೆ” ಅಂತ ಒಂದು ಚೌಕಟ್ಟು ಕಟ್ಟಿ ಬಿಡುತ್ತೇನೋ ಎಂದು ಆ ಹಾಡು ಕೇಳಲು ಈಗ ಮನಸ್ಸು ಒಪ್ಪುತ್ತಿಲ್ಲ!
ಈ ಹಾಡು ಒಂದು ಲೈಟರ್ ಟೋನ್ ನಲ್ಲಿರುವ ಆಧ್ಯಾತ್ಮಿಕ ಸಾಲುಗಳು ಎಂಬುದು ಖಂಡಿತ ಸತ್ಯ. ತಮಾಷೆಯಾಗಿ ಹೇಳಿದರೂ ಇದರಲ್ಲಿ ಜೀವನದ ಅನೇಕ ಸತ್ಯಗಳು ಅಡಗಿವೆ. ಆದರೆ, ಕೆಲವೊಮ್ಮೆ ಈ ರೀತಿ ಜ್ಞಾನಗಳು ನಮ್ಮ ಅರೆಬೆಂದ ಆಧ್ಯಾತ್ಮಿಕ ತಿಳುವಳಿಕೆಯ ಕಡತಗಳ ಬಿಗಿಯನ್ನು ಸಡಿಲಗೊಳಿಸುತ್ತವೆ. “ಜೀವನ ನಶ್ವರ, ನಾವು ಏನು ಮಾಡಿದರೂ ಅಂತಿಮ ಒಂದೇ” ಎಂಬ ಯಾವುದೋ ಕೆಲ ಸಾಲುಗಳು ನಮ್ಮ ಕಂಫರ್ಟ್ ಜೋನ್ ಆಗಿ ಬಿಡುತ್ತವೆ. ಅಲ್ಲಿಗೆ ನಮ್ಮೆಲ್ಲ ಪ್ರಯತ್ನಗಳೂ ಬಂದ್. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ನಾವು ಸದಾ ಧನಾತ್ಮಕವಾಗಿ, ಒಳ್ಳೆಯದನ್ನೇ ಮಾತನಾಡಬೇಕು ಎಂದು ಪ್ರೇರೇಪಿಸುತ್ತಿದ್ದರು. “ಅಯ್ಯೋ ನಾನು ಕೆಟ್ಟೆ” ಎಂದು ಯಾವುದೋ ಪ್ರಾಜೆಕ್ಟ್ ಗಾಗಿ ತಲೆಕೆಡಿಸಿಕೊಂಡು ಅಂದರೆ, ನಮ್ಮ ಅಜ್ಜಿ ಥಟ್ ಅಂತ, “ಥೂ, ಅದೇನ್ ಮಾತಾಡ್ತಿಯಾ, ಅಶ್ವಿನಿ ದೇವತೆಗಳು ಓಡಾಡ್ತಿರ್ತಾರೆ, ನೀನು ಹೀಗೆ ಹೇಳಿದ್ರೆ ತಥಾಸ್ತು ಎಂದು ಬಿಡ್ತಾರೆ” ಎನ್ನುತ್ತಿದ್ದರು. ಆಕೆ ಆ ಅಶ್ವಿನಿ ದೇವತೆಗಳ ಸಂಚಾರದ ಬಗ್ಗೆ, ಅವರು ದಯಪಾಲಿಸುವ ಅಸ್ತುಗಳ ಬಗ್ಗೆ ಎಷ್ಟು ಗಾಢವಾಗಿ ನಂಬಿಕೆ ಇಟ್ಟಿದ್ದಾಳೆ ಎಂದು ನಗು ಬರುತ್ತಿತ್ತು. ಆದರೆ ಈಗ ಆ ಅಶ್ವಿನಿ ದೇವತೆಗಳು ನನಗೆ ಬೇರೆಯ ರೀತಿಯಲ್ಲೇ ಗೋಚರಿಸುತ್ತಾರೆ. ಅವರು ಮತ್ತೆಲ್ಲೂ ಇಲ್ಲ, ನಮ್ಮ ಮನಸ್ಸಿನಲ್ಲೇ ಇರುತ್ತಾರೆ.
ನಾವು ಋಣಾತ್ಮಕವಾಗಿ, ನಿರಾಶಾವಾದಿಯಾಗಿ ಆಲೋಚಿಸಿದರೆ ನಮ್ಮ ಮನಸ್ಸಿನ ಅಶ್ವಿನಿ ದೇವತೆಗಳು ಸದಾ ನಮ್ಮನ್ನು ಹಾಗೇ ಇರುವಂತೆ ಪ್ರೋತ್ಸಾಹಿಸುತ್ತಾರೆ. ಇಲ್ಲ, ಪಾಸಿಟಿವ್ ಆಗಿ, ಆಗುವುದೆಲ್ಲ ಒಳಿತೇ, ಬದುಕು ಸುಂದರ, ಸಾಧನೆಗೆ ಸಾಕಷ್ಟು ಭಾವ ಎಂಬ ಮನೋಭಾವ ನಮ್ಮಲ್ಲಿದ್ದರೆ, ಅದೇ ದೇವತೆಗಳು ನಮ್ಮನ್ನು ಆಶೀರ್ವದಿಸುತ್ತಾರೆ. ಹೇಗೆಂದು ನೋಡೋಣ, ನಾವು ಗಾಬರಿಗೊಂಡರೆ, ಭಯಸ್ಮಿತರಾದರೆ ಬೆವರಲು ಪ್ರಾರಂಭಿಸುತ್ತೇವೆ, ಮೈ ನಡುಕ ಶುರುವಾಗುತ್ತದೆ. ಕೋಪಗೊಂಡಾಗ ಕಣ್ಣು ಕೆಂಪಗಾಗುತ್ತವೆ. ಈ ರೀತಿ ಮನಸ್ಸಿನ ಭಾವಕ್ಕೆ ದೇಹ ಪ್ರತಿಕ್ರಿಯಿಸುತ್ತದೆ. ಈ ಪ್ರಕ್ರಿಯೆಯನ್ನು ನಾವು ಲಾಭ ಮಾಡಿಕೊಳ್ಳಲೂಬಹುದು ಅಂತ ಕೆಲ ಮನೋವೈದ್ಯಕೀಯ ಸಂಶೋಧನೆಗಳು ತಿಳಿಸುತ್ತವೆ. ಇದನ್ನು “ಕ್ರಿಯೇಟಿವ್ ವಿಶುಯಲೈಜೇಶನ್” (ಕ್ರಿಯಾತ್ಮಕ ಒಳನೋಟ) ಎಂದು ಕರೆದಿದ್ದಾರೆ.
ಅವರ ಪ್ರಕಾರ ಇದು ಬಹಳ ಗಂಭೀರ ಮತ್ತು ಪರಿಣಾಮಕಾರೀ ತಂತ್ರ. ನಾವು ಧನಾತ್ಮಕವಾಗಿ ಯೋಚಿಸಿದಷ್ಟೂ ನಮ್ಮ ಕ್ರಿಯಾತ್ಮಕತೆ ಹೆಚ್ಚುತ್ತದೆ ಮತ್ತು ನಾವು ಸದಾ ಹಸನ್ಮುಖಿಯಾಗಿ ಇರಬಲ್ಲೆವು. ರಮ್ಯತೆಯ, ಆನಂದದ ಭಾವನೆಯನ್ನು ತೊಟ್ಟಷ್ಟೂ ನಾವು ಆನಂದವಾಗಿ, ಪ್ರಕಾಶವಾಗಿ ಬೆಳಗುತ್ತೇವೆ. ನಮ್ಮ ಮನಸ್ಸು ನಗುಮೊಗತಳೆಯುತ್ತದೆ. ಇದು ಯಾವಾಗ ಸಾಧ್ಯವಾಗುತ್ತದೋ ಅಂದು ಗೆಲುವಿನ ಹಾದಿ ತಾನೇ ತಾನಾಗಿ ತೆರೆದುಕೊಳ್ಳುತ್ತದೆ. ಜೀವನದಲ್ಲಿ ನಮ್ಮ ಉದ್ದೇಶ, ಗುರಿಗಳು ಪ್ರಖರಗೊಳ್ಳುತ್ತವೆ. ಸಾಧನೆಯ ಹಾದಿ ಸುಗಮವಾಗುತ್ತದೆ. ಇದಕ್ಕೆ ಪ್ರತಿಕೂಲವಾಗಿ ಮನಸ್ಸು ಸದಾ ಉತ್ಸಾಹರಹಿತವಾಗಿ, “ಜೀವನವೇ ಇಷ್ಟು, ನನ್ನ ಬದುಕೇ ಇಷ್ಟು, ನನಗ್ಯಾಕೆ ಹೀಗೆ” ಎಂದು ನಮ್ಮ ಬಗ್ಗೆ ನಾವು ಸ್ವಾನುಕಂಪದ ಸಮಾಧಾನದಲ್ಲಿ ಮುಳುಗಿದ್ದರೆ ಜೀವನ ಪೂರ್ತಿ ಅದರ ಅಮಲಿನಿಂದ ಹೊರಬರಲು ಸಾಧ್ಯವಿಲ್ಲ. ಹೌದು, ದುಃಖ ಅಮಲಿನಂತೆ. ನಾವು ದುಃಖಿತರಾದಷ್ಟೂ ಒಂಥರಾ ಸಮಾಧಾನ ಸಿಗುತ್ತಿರುತ್ತದೆ. ಅದಕ್ಕೆ ಹಿಂದೂ ಮುಂದೂ ಮಾರ್ಗದರ್ಶನ ಇಲ್ಲದೆ, ಅದು ಒಂದು ವ್ಯಸನವಾಗಿಬಿಡುತ್ತದೆ.
ಈ ಮಾತು ವಯಕ್ತಿಕವಾಗಿಯೂ ಎಷ್ಟು ಸತ್ಯವೋ ಅಷ್ಟೇ ಸತ್ಯ ಒಬ್ಬರ ನಕಾರಾತ್ಮಕ ಧೋರಣೆಗಳು ಇತರರ ಮೇಲೆ ಗಾಢ ಪರಿಣಾಮ ಬೀರುತ್ತದೆ ಎಂಬುದು. ಇದಕ್ಕೆ ಮನುಷ್ಯರಷ್ಟೇ ಅಲ್ಲ ಸಸ್ಯ-ಪ್ರಾಣಿ ಪ್ರಪಂಚವೂ ಹೊರತಲ್ಲ ಎಂಬುದಕ್ಕೆ ದಕ್ಷಿಣ ಪೆಸಿಫಿಕ್ ನ ಸೊಲೊಮನ್ ದ್ವೀಪದಲ್ಲಿ ಜರುಗುವ ಈ ವಿಚಿತ್ರ ಪರಿಪಾಠ! ಈ ದ್ವೀಪದಲ್ಲಿ ಜನರು ಅತ್ಯಂತ ದೊಡ್ಡ ಮರಗಳನ್ನು ಕತ್ತರಿಸಲು ಒಂದು ಉಪಾಯ ಹೂಡಿದ್ದಾರೆ. ಊರಿನ ಜನರೆಲ್ಲರೂ ಆ ಮರದ ಬಳಿ ಪ್ರತಿನಿತ್ಯ ಸೇರುವುದು. ಆ ಮರವನ್ನು ಹಿಗ್ಗಾ ಮುಗ್ಗಾ ಬೈಯುವುದು, ಚೀರುವುದು, ಕೂಗಾಡುವುದು. ಹೀಗೆ ಒಂದು ತಿಂಗಳವರೆಗೂ ಪ್ರತಿನಿತ್ಯ ಮಾಡಿದಲ್ಲಿ ಆ ಮರ ತಾನೇ ತಾನಾಗಿ ಸತ್ತು, ಉರುಳಿ ಹೋಗುತ್ತದೆ! ಇನ್ನು ರಾಗ-ಭಾವಗಳು ತುಂಬಿ ತುಳುಕುವ ಮನುಷ್ಯರ ಬಗ್ಗೆ ಕೇಳುವಷ್ಟೇ ಇಲ್ಲ. ಖಿನ್ನತೆ ಮತ್ತು ಆ ಖಿನ್ನತೆಯಿಂದ ಉಂಟಾದ ಸಿಟ್ಟು ಸೆಡವುಗಳು, ನಕಾರಾತ್ಮಕ ನಿರಾಶಾ ಭಾವನೆಗಳು ವ್ಯಕ್ತಿಗೂ ಮತ್ತು ಅವರ ಸುತ್ತಲಿನ ಪರಿಸರಕ್ಕೂ ಇರುವ ಸ್ಲೋ ಪಾಯಿಸನ್ ಎಂಬುದು ನಿಜದ ಮಾತು.

“Keep your face always toward the sunshine and shadows will fall behind you”, ಎಂಬ ವಾಲ್ಟ್ ವಿಟ್ಮನ್ ಹೇಳಿಕೆ ಎಷ್ಟು ಸತ್ಯ ಅಲ್ಲವಾ! ನಾವು ಸದಾ ಒಳ್ಳೆಯದನ್ನೇ ಯೋಚಿಸಬೇಕು, ಪಾಸಿಟಿವ್ ಆಗಿ ಜೀವನವನ್ನು ಕಾಣಬೇಕು. ಆಗ ನಮಗೆ ಇರುವ ಯಾವ ಭಯ ಬಾಧೆಗಳೂ, ಖಿನ್ನತೆಗಳೂ ದೂರವಾಗುತ್ತವೆ. ಅಷ್ಟೇ ಅಲ್ಲದೆ ಜೀವನವನ್ನುಗೆಲ್ಲಿಸುವ ಸಾಕಷ್ಟು ಬೆಳಕಿನ ಕಿರಣಗಳು ನಮ್ಮತ್ತ ಹರಿಯುತ್ತದೆ. ಈ ಮಾತು ಹೇಳುವಾಗ ಒಂದು ಜೆನ್ ಕಥೆ ನೆನಪಾಗುತ್ತದೆ. ಓನಾಮಿ ಎಂಬಾತ ಒಬ್ಬ ಗಟ್ಟಿ ಜಟ್ಟಿ. ಇಡೀ ಜಗತ್ತಿನ ಎಲ್ಲ ಮಲ್ಲಯುದ್ಧಗಳನ್ನೂ ಮೆಟ್ಟಿ ಗೆಲ್ಲುವ ಶಕ್ತಿ, ತಾಕತ್ತು ಇರುವ ಈ ಜಟ್ಟಿ, ತನ್ನ ಗುರುವನ್ನೂ ಮೀರಿಸುತ್ತಿದ್ದ. ಆದರೆ ಈತನಿಗೆ ತಾನು ಒಳ್ಳೆಯ ಪಟು ಅಲ್ಲ, ತಾನು ಆಡಲಾರೆ, ಬೆಳೆಯಲಾರೆ ಎಂಬ ಖಿನ್ನತೆ. ಇದೇ ಖಿನ್ನತೆ ಸದಾ ಕಾಡುತ್ತಾ, ಎಲ್ಲಾ ಆಟಗಳಲ್ಲೂ ಸೋಲನ್ನು ಕಾಣುತ್ತಿದ್ದ. ತನ್ನ ಈ ಸೋಲಿಗೆ ಕಾರಣವರಿಯಲು ತಾನೊಬ್ಬ ಗುರುವಿನ ಬಳಿ ಹೋಗಬೇಕೆಂದು ಬಗೆದು, ಜೆನ್ ಗುರು ಹಕುಜಿಯ ಬಳಿಗೆ ಹೋದ. ಗುರುವಿನಲ್ಲಿ ತನ್ನ ಸಮಸ್ಯೆ ತೋಡಿಕೊಂಡ. ಸಂಜೆಯವರೆಗೂ ಗುರು ಮಾತನಾಡಲಿಲ್ಲ. ಇನ್ನು ಲಾಭವಿಲ್ಲ, ತನ್ನ ಹಣೆಬರಹವೇ ಇಷ್ಟು ಎಂದು ಓನಾಮಿ ಹೊರಟು ಹೋಗುತ್ತಿದ್ದ. ಆಗ ಅವನನ್ನು ತಡೆದ ಗುರು ಸಮುದ್ರದ ದಂಡೆಗೆ ನಿಶ್ಶಬ್ದವಾಗಿ ಕರೆದುಕೊಂಡು ಹೋದ. ಅಲ್ಲಿ ಅವನನ್ನು ಕೂರಿಸಿ, “ನೋಡು ನಿನ್ನ ಹೆಸರು ಓನಾಮಿ ಎಂದು, ಅಂದರೆ ಶ್ರೇಷ್ಠ, ಅಸಾಧಾರಣ ಅಲೆ ಎಂದು. ಇಲ್ಲೇ ಕೂತು ಈ ಸಮುದ್ರದ ಅಲೆಗಳನ್ನು ಗಮನಿಸು, ಅವೆಷ್ಟು ಜೀವಂತ, ರಭಸ, ಶಕ್ತಿಯುತ ಎಂಬುದನ್ನು ಮನವರಿಕೆ ಮಾಡಿಕೊ. ಅದರಂತೆ ನೀನೂ” ಎಂದು ಹೇಳಿ ಹೊರಟೇ ಬಿಟ್ಟ. ಓನಾಮಿ ಇಡೀ ರಾತ್ರಿ ಅಲೆಗಳನ್ನು ಗಮನಿಸುತ್ತಿದ್ದ. ಅನೇಕಾನೇಕ ಅಲೆಗಳು. ಗಾಳಿ ಬೀಸಿದಂತೆ ಭೋರ್ಗರೆಯುತ್ತಿವೆ. ಕೆಲವೊಮ್ಮೆ ಸೌಮ್ಯವಾಗಿ, ಸರಸವಾಗಿ, ಕೆಲವೊಮ್ಮೆ ಭಯಂಕರವಾಗಿ, ಘೀಳಿಟ್ಟು ಮೊರೆಯುತ್ತಿವೆ. ಶಕ್ತಿಯುತ, ಜೀವಂತ ಅಲೆಗಳ ಶಕ್ತಿ ಅವನಿಗೆ ತನ್ನೆಲ್ಲಾ ಶಕ್ತಿಯನ್ನೂ ತೋರಿಸುತ್ತವೆ. ತಾನೂ ಆ ಅಲೆಯಂತೆ ಎಂಬುದನ್ನು ಅರಿತ ಓನಾಮಿ ತನ್ನ ಬಗ್ಗೆ ತನಗಿದ್ದ ನಿರಾಶಾ ಛಾಯೆಯನ್ನೆಲ್ಲಾ ಕಳೆದುಕೊಳ್ಳುತ್ತಾನೆ. ತದನಂತರ ಗೆಲುವಿನ ಹಾದಿ ಓನಾಮಿಯದು.
ಬದುಕಿನ ಪ್ರತಿ ವ್ಯಕ್ತಿಯೂ ಒಬ್ಬ ಓನಾಮಿಯೇ, ನಮ್ಮ ಗುರು ಹಕುಜಿ ಕೂಡ ನಮ್ಮಲ್ಲೇ ಅಡಗಿದ್ದಾನೆ. ಆ ಹಕುಜಿಯನ್ನು ನಮ್ಮೊಳಗಿಂದ ಹುಡುಕಿ ತೆಗೆಯುವ ಜವಾಬ್ದಾರಿ ಮಾತ್ರ ನಮ್ಮದು. ಪಾಸಿಟಿವ್ ಥಿಂಕಿಂಗ್ ನ ಶಕ್ತಿ, ವ್ಯಾಪ್ತಿಗಳನ್ನು ಅರಿತು, ನಮ್ಮಲ್ಲಿನ ನಿರಾಶಾಭಾವನೆಗಳನ್ನೂ, ಖಿನ್ನತೆಯನ್ನೂ ದೂರಮಾಡಲು ಪ್ರಯತ್ನ ಪಡೋಣ ಅಲ್ಲವೇ! ಜೀವನದ ಅನೇಕ ಓಘಗಳನ್ನೂ, ಅನಂತತೆಯನ್ನೂ ಸವಿಯಲು ಸಮಯ ಹೆಚ್ಚಿಲ್ಲ, ಆದ್ದರಿಂದ ಬೇಡದ ಜೋಲು ಮುಖವಾಡಗಳನ್ನೂ, ಖಿನ್ನತೆಯ ಹೆಸರಿನಲ್ಲಿ ನಮಗೆ ನಾವೇ ಮಾಡಿಕೊಳ್ಳುತ್ತಿರುವ ವಂಚನೆಯನ್ನೂ ಆದಷ್ಟು ಬೇಗ ಕಿತ್ತೊಗೆಯಬೇಕು ಅಲ್ಲವೇ! ಹೀಗೆ ಯೋಚಿಸಿದಾಗಲೆಲ್ಲಾ ಈ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ:
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
 

‍ಲೇಖಕರು avadhi

June 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

’ಚರಿತ್ರೆಯನ್ನು ನೆನೆದು ಕಲಕಿಬಿಟ್ಟ ಮನಸ್ಸು ಅರೆ ನಿಮಿಷ ಮೌನ’ – ಸಂಯುಕ್ತಾ ಪುಲಿಗಳ್

ನಾವು ಇಷ್ಟೇಕೆ ಹೆದರಿದ್ದೇವೆ? ಸಂಯುಕ್ತಾ ಪುಲಿಗಳ್ ಅದೆಷ್ಟೆಷ್ಟೋ ಓದಿಬಿಟ್ಟ, ಪದಕಗಳ ಮೇಲೆ ಪದಕಗಳ ಗೆದ್ದುಬಿಟ್ಟ, ಅತ್ಯುನ್ನತ...

10 ಪ್ರತಿಕ್ರಿಯೆಗಳು

 1. Vanamala V

  ಸಂಯುಕ್ತಾ…
  ತುಂಬಾ ಚೆನ್ನಾಗಿ ಬರ್ದಿದೀರಿ. ನಂದೂ ಅದೇ ಅಭಿಪ್ರಾಯ. ಯಾವಾಗ್ಲೂ ಜೋಲು ಮುಖ ಮಾಡ್ಕೊಂಡಿರೋರನ್ನ ನೋಡಿದ್ರೆ ನಂಗೂ ಆಗಲ್ಲ. ಎಲ್ಲರೂ ಖುಷಿ ಖುಷಿಯಾಗಿ ನಗ್ತಾ ಇರ್ಬೇಕು.
  ವನಮಾಲಾ ವಿ.

  ಪ್ರತಿಕ್ರಿಯೆ
 2. Ahalya Ballal

  ಚೆನ್ನಾಗಿ ಬರೆದಿದ್ದೀರಿ, ಸಂಯುಕ್ತಾ. “ಖಿನ್ನತೆಯ ಹೆಸರಿನಲ್ಲಿ ನಮಗೆ ನಾವೇ ಮಾಡಿಕೊಳ್ಳುತ್ತಿರುವ ವಂಚನೆ… ” ಬಗ್ಗೆ …… ಹಲವು ಸಲ ಅದು ‘ವಂಚನೆ’ ಅನಿಸೋದೇ ಇಲ್ಲ, ಅದೇ ನಮ್ಮ ಪಾಲಿನ ವಾಸ್ತವ ಅನಿಸಿಬಿಟ್ಟಿರುತ್ತೆ . ಕೊನೆಗೂ ನಮಗೆ ನಾವು ಏನು ಹೇಳಿಕೊಳ್ಳುತ್ತೇವೆ ಅನ್ನೋದೇ ಮುಖ್ಯ,ಆಲ್ವಾ!

  ಪ್ರತಿಕ್ರಿಯೆ
 3. prakash hegde

  ಸ್ಪೂರ್ತಿದಾಯಕ ಲೇಖನ….
  ನಿಮ್ಮ ಓದಿಗೆ..
  ಅಧ್ಯಯನಶೀಲತೆಗೆ ನನ್ನ ಸಲಾಮ್…

  ಪ್ರತಿಕ್ರಿಯೆ
 4. ಸತೀಶ್ ನಾಯ್ಕ್

  ಸಂಯುಕ್ತ ಮೇಡಂ ಮತ್ತೊಂದು ಒಳ್ಳೆ ಲೇಖನ..
  ಪ್ರತಿಭೆ ಇದ್ದೂ ಪ್ರತ್ಸಾಹ ಸಿಗದೇ, ಸರಿಯಾದ ಮಾರ್ಗ ದರ್ಶನ ಸಿಗದೇ ನರಳುವವರೆಲ್ಲ.. ತಮ್ಮ ಬಲದ ಮೇಲೆ ತಾವೇ ನಂಬಿಕೆ ಕಳೆದುಕೊಂಡು.. ಮುಂದಿಟ್ಟ ಹೆಜ್ಜೆ ಹಿಂದಿಡುವ ಯಾರಾದರೂ ಸರಿ ಅವಶ್ಯಕವಾಗಿ ಓದಲೇ ಬೇಕಾದ ಬರಹ..
  ಹಮ್ ಹೋಂಗೆ ಕಾಮಯಾಬ್ ಏಕ್ ದಿನ್..
  ಮನ್ ಮೇ ಹೇ ವಿಶ್ವಾಸ್.. ಪೂರಾ ಹೇ ವಿಶ್ವಾಸ್..
  ಹಮ್ ಹೋಂಗೆ ಕಾಮಯಾಬ್ ಏಕ್ ದಿನ್.. 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: