ಸಂಪು ಕಾಲಂ : ಗುರುವಿಗೊಂದು ಸಲಾಮ್!

ಇದು ಶುಕ್ರವಾರ ಪ್ರಕಟವಾಗಬೇಕಾಗಿದ್ದ ಕಾಲಂ.  ಶುಕ್ರವಾರ ಮತ್ತು ಶನಿವಾರ ಅವಧಿಯಲ್ಲಿ ತೇಜಸ್ವಿ ನೆನಪಿನ ಸಂತೆ, ಹಾಗಾಗಿ ಲೇಖನವನ್ನು ಇಂದು ಪ್ರಕಟಿಸುತ್ತಿದ್ದೆವೆ.

“ನಿನಗೆ ಇನ್ಸ್ ಪೈರ್ ಮಾಡಿರೋಂತಹ ಟೀಚರ್ ಗಳ ಬಗ್ಗೆ ಲೇಖನ ಬರಿ” ಅಂತ ಒಬ್ಬರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. ಹಮ್…ಐ ವಿಲ್ ಸೀ ಎಂದು ಅನ್ಯಮನಸ್ಕಳಾಗಿ ತಲೆಯಾಡಿಸಿ ನನ್ನ ಕೆಲಸ ಮುಂದುವರೆಸಿದ್ದೆ. ಆದರೂ, ತಲೆಯಲ್ಲಿ ತೇಲಿಬಂದದ್ದು, ನನಗೆ ವಿದ್ಯೆ, ಪ್ರೀತಿ, ಸಲುಗೆಗಳನ್ನು ತಿಳಿಸಿ ಬೆಳೆಸಿದ ಸಾಕಷ್ಟು ಗುರುಗಳ ಸ್ನಾಪ್ ಷಾಟ್ ಗಳು. “ಮಿಸ್ ನಿಮಗೆ ಮದುವೆ ಆಗಿದ್ಯಾ?” ಅಂತ ಒಂದನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಹುಡುಗಿ, ಕೇಳ್ತಾಳೆ. ಅದಕ್ಕೆ ಸುಮಾರು ಅರವತ್ತು ದಾಟಿದ ಆ ಮಿಸ್ಸು ಹೊಟ್ಟೆ ಬಿರಿವಷ್ಟು ನಕ್ಕು, ಆ ಹುಡುಗಿಯ ಕೆನ್ನೆ ಚಿವುಟಿ, ತಲೆ ಸವರಿ, ಕಾಗುಣಿತ ಪೂರ್ತಿ ಬರಿ ಹೇಳ್ತೀನಿ ಅಂತಾರೆ. ಆ ಪುಟ್ಟ ಹುಡುಗಿ ಬೇರೆ ಯಾರೂ ಅಲ್ಲ ರೀ, ನಾನೇ. ಮತ್ತು ಆ ಮಿಸ್ಸು ನನ್ನ ಅತ್ಯಂತ ನೆಚ್ಚಿನ ಸರೋಜಾ ಮಿಸ್ಸು. ಅಷ್ಟೇನೂ ಹೇಳಿಕೊಳ್ಳುವಷ್ಟು ಶಾರೀರವಿಲ್ಲದಿದ್ದರೂ, ತರಗತಿಗೆ ಬಂದೊಡನೆ ರಾಗವಾಗಿ “ಕನ್ನಡ ಭಾರತೀ…..ತೆಗೆಯಿರಿ…” “ನಿರಿನಿರಿ ಗಮಗರಿ ಸಾಸಾ…” “ಬೇರೊಂದಟ್ಟೆಯ ಹೊದಿಸು ಮಗು” ಎಂದು ಹಾಡುತ್ತಾ ಹಾಡುತ್ತಾ ಹೇಳಹೆಸರಿಲ್ಲದೆ, ಪುಟ್ಟ ಮಕ್ಕಳ ಮನಸ್ಸನ್ನು ದೋಚಿದ್ದರು. ಯಾಕೋ ಅವರಲ್ಲಿನ ಮಾತೃತ್ವದ ಜಿನುಗು, ಕ್ಲಾಸಿನ ಪ್ರತಿ ಮಗುವೂ ಆಕೆಯನ್ನು ತಾಯಂತೆ ಪ್ರೀತಿಸುವ ಭಾವವನ್ನು ಹೊರಸೂಸುತ್ತಿತ್ತು. “ಭಾಳಾ ಒಳ್ಳೆವ್ರು ನಮ್ಮಿಸ್ಸು…ಏನ್ ಹೇಳಿದ್ರು ಎಸ್ ಎಸ್ಸು…” ಎಂದು ಆ ಸಣ್ಣ ವಯಸ್ಸಿಗೇ ಮನಃಪೂರ್ವಕವಾಗಿ ಹಾಡುವಂತೆ ಮಾಡಿದ್ದು ನಮ್ಮ ಸರೋಜಾ ಮಿಸ್ ನ ಅಂತಃಕರಣ. ಮಕ್ಕಳನ್ನು ಪ್ರೀತಿಸುವ ಬಗೆಯನ್ನು ನಾನು ಮೊದಲು ಕಲಿತದ್ದು ಅವರಿಂದ ಎನ್ನಬಹುದು. ನಾನು ಏನೇ ಮಾಡುತ್ತಿರಲಿ, ಧುತ್ ಎಂದು ಆಗಾಗ ನೆನಪಾಗುವವರು, ನಮ್ಮ ದಿ|| ವೈ ಎಸ್ ಮಾಶ್ಟ್ರು! “ಏನಮ್ಮಾ, ನಾನು ಹಾಜರಾತಿ ಹಾಕ್ತೀನಿ ಅಷ್ಟರಲ್ಲಿ ತೊಗೊಂಡು ಬಾ” ಅಂತ ಆತ ನಮ್ಮಲ್ಲಿ ಕೆಲವರನ್ನು ಕಳುಹಿಸುತ್ತಿದ್ದುದು, ಅವರಿಗೆ ನಶ್ಯ ತರಲು! “ಯಾರಿಗೂ ಕಾಣ್ದಂಗೆ ಇಂಗಾಸಿ ಇಂಗೋಗ್ಬಿಡಿ…” ಎಂದು, ಪಾಠ ಆದ ಕೂಡಲೆ, ಇನ್ನೂ ಸಮಯ ಉಳಿದಿದ್ದರೂ ನಮ್ಮನ್ನು ಆಟಕ್ಕೆ ಕಳುಹಿಸಿ ಬಿಡುತ್ತಿದ್ದರು. ನನ್ನ ಸಹಪಾಠಿಯೊಬ್ಬ ಪರೀಕ್ಷೆಯನ್ನು ಸಮಯಕ್ಕಿಂತ ಮುಂಚೆ ಮುಗಿಸಿಬಿಡಲು ಅವಕಾಶವಿತ್ತು. ಅದರ ಕಾರಣ, ಈತನಿಗೆ “ಬಿಸಿ ಬೇಳೆ ಬಾತ್” ಕಟ್ಟಿಸಿಕೊಂಡು ಬರಲು! ನೆನೆಸಿಕೊಂಡರೆ ತುಟಿ ಬಿರಿಯುವುದು ಖಂಡಿತ. ಆದರೆ, ಈತ ನಮ್ಮಲ್ಲಿ ಅದೆಂತದೋ ಒಂದು ಧೈರ್ಯವನ್ನು ತುಂಬಿದ್ದರು. ಶಿಕ್ಷಣ, ಪರೀಕ್ಷೆ, ಬದುಕು ಎಂದರೆ ಅಷ್ಟೇನೂ ನುಂಗಲಾರದ ಉಗುಳಲ್ಲ, ಟೇಕ್ ಇಟ್ ಈಸಿ, ಅನ್ನೋ ಒಂದು ಒಳ್ಳೆಯ ಬೋಧನೆಯನ್ನು ಬಳುವಳಿಯಾಗಿಸಿದ್ದರು. ಕನ್ನಡ ಮಾಧ್ಯಮವಾದ್ದರಿಂದ, ಇಂಗ್ಲೀಷು ಕಲಿಯಲು ಪ್ರಾರಂಭಿಸಿದ್ದು, ಐದನೇ ತರಗತಿಯಿಂದ. (ಕೊಂಚ ಮೆಲ್ಲ! ಈಗಿನ ಕಾಲದ ಮಕ್ಕಳು ಕೇಳಿದರೆ ನಗಾಡಿಯಾರು) ನಿಮ್ಮಪ್ಪನ ಹೆಸರು ಬರೀ ಎಂದರೆ, “ಮೈ ಫ಼ಾದರ್ಸ್ ನೇಮ್ ಈಸ್, ದ ಲಕ್ಷ್ಮೀ ನಾರಯಣ ರಾವ್” ಎಂದು ಬರೆದಿದ್ದೆ. ಅಪ್ಪ ಕಂಡಾಗ, “ದ ಲಕ್ಷ್ಮೀ ನಾರಯಣರೇ….” ಎಂದು ಮಾತಾಡಿಸಿದ್ದರು, ನಮ್ಮ ಹೆಚ್ ಪಿ ಸರ್! ಸಾಕಷ್ಟು ಆಂಗ್ಲ ಭಾಷೆ ಕಲಿತಿದ್ದ ಅವರು. “ಏನೂ ಇಲ್ಲ ಕಣ್ರೋ ಬದನೇಕಾಯಿ, ಅದೂ ಒಂದು ಭಾಷೇನೇ, ಆರಾಮವಾಗಿ ಕಲೀಬಹುದು” ಎಂದು ನಮಗೆ ಸಂತೈಸಿದ್ದರು. ಅಂತೆಯೇ ಇಂದು ನಾನು ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪಡೆಯಲು ಬುನಾದಿಯಾಯಿತು. “ಲೇ ಸಾಪಾಟ್ ರಾಮ…ನೆಟ್ಟಗೆ ಕೂತು ಗುಂಡಗೆ ಬರೆಯೋ, ಅಂದ್ರೆ ಗುಂಡಗೆ ಕೂತು ನೆಟ್ಟಗೆ ಬರೀತಿಯ…” ಎಂದು ಪ್ರಾರಂಭಿಸಿ ನಗೆಯ ಬುಗ್ಗೆಯನ್ನು ಚಿಮ್ಮಿಸಿ, ಒಂದು ಸೆನ್ಸ್ ಆಫ಼್ ಹ್ಯೂಮರ್ ನ ಅವಶ್ಯಕತೆಯನ್ನು ಪರಿಚಯಿಸಿದ್ದರು ನಮ್ಮ ಹೆಚ್ ಎಸ್ ಎಸ್ ಸರ್. ನನ್ನ ಅಕ್ಷರಗಳು ’ಓದಬಲ್’ ಆಗಿ ಕಾಣಲು ಇವರೇ ಕಾರಣ ಎನ್ನಬಹುದು. ಮಕ್ಕಳಿಗೆ ದಿನಚರಿಯನ್ನು ಬರೆಯಲು ಕಲಿಸಿ, ಉಗುರು ಕತ್ತರಿಸದ ಹೊರತು ತರಗತಿಗೆ ಸೇರಿಸದ ಮಹಾ ಶಿಸ್ತಿನ ಸಿಪಾಯಿ ನಮ್ಮ ಟಿ ಕೆ ಪಿ ಸರ್. ನನ್ನಲ್ಲಿ ಶಿಸ್ತು, ಶ್ರಧ್ಧೆಗಳು ಕೊಂಚ ಬೆಳೆದಿದ್ದಲ್ಲಿ, ಅದಕ್ಕೆ ಇವರ ಪಾಲು ಸಾಕಷ್ಟಿದೆ ಎಂದರೆ ತಪ್ಪಾಗಲಾರದು. ಇನ್ನು, ಜನಕ ತಾನೆ ಮೊದಲ ಗುರುವು, ಆದರೆ ನನಗೆ ನಂತರದ ಗುರುವೂ ಆಗಿದ್ದರು. ಕ್ಲಾಸ್ ಟೀಚರ್ ಕೂಡ ಆಗಿದ್ದರು. ಒಂದೆರಡು ಬಾರಿ, ಎಲ್ಲರ ಮುಂದೆ “ಅಪ್ಪಾ…” ಎಂದು ಕರೆದು ತುಟಿ ಕಚ್ಚಿ ಇಬ್ಬರಿಗೂ ಇರಿಸು ಮುರಿಸು ಮಾಡಿ ನಗಾಡಿದ್ದ ನೆನಪು. ನನ್ನಲ್ಲಿ ಒಂದು ಸ್ವಂತಿಕೆಯನ್ನು, ವೈಚಾರಿಕತೆಯನ್ನು, ಮಾನವೀಯತೆಯನ್ನು, ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳಲು ನನ್ನ ಕ್ಲಾಸ್ ರೂಮ್ ಅಪ್ಪನದೇ ಮೇಲುಗೈ ಎನ್ನಬಹುದು. ಮೊದಲಿನಿಂದಲೂ ಸಾಹಿತ್ಯ, ಭಾಷೆಗೆ ಒಲಿದ ನನ್ನ ಮನಸನ್ನು, ನಿನ್ನ ದಾರಿ ಇದೇ ಎಂದು ತಿದ್ದಿ ಸ್ಪಷ್ಟೀಕರಿಸಿದ್ದು ನಮ್ಮ ಮನು ಚಕ್ರವರ್ತಿ ಸರ್. ಷೇಕ್ಸ್ ಪಿಯರ್, ಟಿ ಎಸ್ ಎಲಿಯಟ್, ಎಮಿಲಿ ಡಿಕನ್ಸನ್, ಇತ್ಯಾದಿ ಎಲ್ಲಾ ಮಹೋನ್ನತ ವ್ಯಕ್ತಿತ್ವಗಳನ್ನು ಪರಿಚಯಿಸಿದ್ದು, ಅವರ ಅದ್ಭುತ ಕೃತಿಗಳ ರುಚಿಯನ್ನು ಉಣಬಡಿಸಿದ್ದು, ನಾವು ಕಣ್ಣು ಮಿಟುಕಿಸದಂತೆ ತರಗತಿಯಲ್ಲಿ ಅಂಟು ಹಾಕಿ ಕುಳಿತದ್ದು ಎಲ್ಲಾ ಇನ್ನೂ ಹಸಿ ಹಸಿ. ಇನ್ಸ್ ಪೈರಿಂಗ್ ಅಂದಾಗ ಇನ್ನೊಂದು ನೆನಪಾಯ್ತು ಕಣ್ರೀ, ನನ್ನ ಸ್ನೇಹಿತರೊಬ್ಬರು ಹೇಳಿದ ಮಾತು. ಒಂದು ತಮಾಷೆಯಾದ, ಆದರೂ ಗಮನಹರಿಸುವ ವಿಷಯ. ಅವರ ಶಾಲೆಯ ಶಿಕ್ಷಕರಾದ ಎಸ್.ಎಮ್ ದೇವರಾಜ್ ರವರು ಯಾವಾಗಲೂ ಈ ರೀತಿ ಹೇಳುತ್ತಿದ್ದರಂತೆ: “If you are Bad in Grammar… You will be Bad in language, If you are Bad in Language… You will be Bad in Education, If you are Bad in Education… You will be Bad in Life, If you are Bad in Life…You will end up with a Bad Wife throughout your Life…”   ಇದೇ ಪ್ರೇರಣೆಯೋ ಎಂಬಂತೆ, ಅವರ ಭಾಷೆಯೂ ಚೆನ್ನಾಗಿದೆ! ಹೀಗೆ ಹಂತ ಹಂತದಲ್ಲೂ, ನಮ್ಮ ಅರಿವಿನ ಪರಿಧಿಯೊಳಗೆ, ಅದರ ಹೊರತಾಗಿ, ನಮಗಾಗಿ, ನಮ್ಮ ಏಳಿಗೆಗಾಗಿ ಶ್ರಮಿಸಿದವರು ನಮ್ಮ ಗುರುಗಳು. ನಮ್ಮ ಇಂದಿನ ಇರವು ರೂಪುಗೊಳ್ಳಲು ನಮ್ಮೆಲ್ಲಾ ಗುರುಗಳೂ ಹರಿಕಾರರಾಗಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೇ ಅಲ್ಲವೆ, ತಂದೆ ತಾಯಿಯರ ನಂತರದ ಸ್ಥಾನವನ್ನು ಗುರುವಿಗೆ ಅರ್ಪಿಸಿರುವುದು ನಮ್ಮ ಸಮಾಜ. ನಮ್ಮ ಬದುಕನ್ನು ಬೆಳೆಸಲು, ರೂಪಿಸಲು ಸಹಕಾರಿಯಾದ, ನಮ್ಮೆಲ್ಲ ಟೀಚರ್ಸ್ ಗಳಿಗೆ ಒಂದು ಸಲಾಮ್! ಈ ಶಿಕ್ಷಕರ ದಿನಾಚರಣೆಯ ವಾರದಲ್ಲಿ, ನೀವೂ ನಿಮ್ಮ ನೆಚ್ಚಿನ ಗುರುಗಳನ್ನು ಒಮ್ಮೆ ಮನಸಾರ ನೆನೆದು ಬಿಡಿ. ಏನಂತೀರಿ ಗೆಳೆಯರೇ?  ]]>

‍ಲೇಖಕರು G

September 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

’ಚರಿತ್ರೆಯನ್ನು ನೆನೆದು ಕಲಕಿಬಿಟ್ಟ ಮನಸ್ಸು ಅರೆ ನಿಮಿಷ ಮೌನ’ – ಸಂಯುಕ್ತಾ ಪುಲಿಗಳ್

ನಾವು ಇಷ್ಟೇಕೆ ಹೆದರಿದ್ದೇವೆ? ಸಂಯುಕ್ತಾ ಪುಲಿಗಳ್ ಅದೆಷ್ಟೆಷ್ಟೋ ಓದಿಬಿಟ್ಟ, ಪದಕಗಳ ಮೇಲೆ ಪದಕಗಳ ಗೆದ್ದುಬಿಟ್ಟ, ಅತ್ಯುನ್ನತ...

5 ಪ್ರತಿಕ್ರಿಯೆಗಳು

 1. Badarinath Palavalli

  ಗುರುಭ್ಯೋ ನಮಃ
  ನಾವು ಸಧಾ ಋಣಿಯಾಗಬೇಕಿರುವ ಗುರುಗಳ ಬಗ್ಗೆ ಒಳ್ಳೆಯ ಬರಹ.
  ನಿಮ್ಮ ನಿರೂಪಣಾ ಶೈಲಿಯಲ್ಲೇ ನಿಮ್ಮ ಗೆಲುವಿದೆ.

  ಪ್ರತಿಕ್ರಿಯೆ
 2. vinaya

  ಒಳ್ಳೆ ಲೇಖನ ಅಕ್ಕ 🙂
  ನನಗೂ ನನ್ನ ಶಾಲೆಯ ಶಿಕ್ಷಕರನ್ನ ನೆನಪಿಸಿತು , ಅವರೂ ಅಂದು ತುಂಬಿದ ಧೈರ್ಯಗಳೆ ಇಂದು ನಮ್ಮನ್ನ ಇಲ್ಲಿಗೆ ತಂದು ನಿಲ್ಲಿಸಿದೆ .
  ನಾವೆಂದಿಗೂ ಸದಾ ಚಿರಋಣಿ ಆ ಜೀವಂತ ದೇವರುಗಳಿಗೆ.
  ಇಂತಿ
  ವಿನಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: