ಸಂಪು ಕಾಲಂ : ಹ್ಯಾಪ್ಪಿ ಬರ್ತ್ ಡೇ!

ಬರ್ತಡೇ ಗಿಫ಼್ಟ್! “ಹ್ಯಾಪಿ ಬರ್ತಡೇ ಕಣೇ” ಅಂತ ಸಾಕಷ್ಟು ಜನ, ಸಾಕಷ್ಟು ವಿಧದಲ್ಲಿ ವಿಶ್ ಮಾಡಿದ್ರು. ಅಂದು ನನ್ನ ಬರ್ತಡೇ. ಅದೇನೋ, ಈ ಹುಟ್ಟಿದ ಹಬ್ಬ ತುಂಬ ಏಕತಾನವಾಗಿಬಿಟ್ಟಿದೆ ಅನ್ಸತ್ತೆ. ಚಿಕ್ಕಂದಿನಲ್ಲಿ ಹೊಸ ಬಟ್ಟೆ, ಹೊಸ ಸಿಹಿ ತಿಂಡಿ, ಸ್ನೇಹಿತರು, ಚಾಕೊಲೇಟು…ಅಬ್ಬ… ಒಂದೇ ಎರಡೇ ಪುಳಕಗಳು ಸಂಭ್ರಮಿಸೋಕೆ! ಈಗ ಅನ್ನಿಸತ್ತೆ, ಅದೂ ಕ್ಯಾಲೆಂಡರಿನ ಒಂದು ದಿನ ಅಲ್ಲವೆ! ಜಸ್ಟ್ ಅನದರ್ ಡೇ! ಅಬ್ಸರ್ಡಿಟಿ ಅಂದ್ರೆ, ಈ ದಿನ, “ಲೇ ತಿಮ್ಮಿ, ನಿನಗೆ ಹೆಚ್ಚು ಹೆಚ್ಚು ವಯಸ್ಸಾಗ್ತಿದೆ, ಜೀವನದಲ್ಲಿ ಏನಾದರೂ ಆಸೆ ಇದ್ರೆ ಬೇಗ ಬೇಗ ತೀರಿಸ್ಕೋ” ಅಂತ ಎಚ್ಚರಿಕೆಯ ಕರೆಗಂಟೆ ಹೊಡೆಯೋ ದಿನ! ಇದರಲ್ಲಿ, ಜೀವನದ ಬಗ್ಗೆ ಗಾಂಭೀರ್ಯ, ಎಚ್ಚರಿಕೆ, ಮನನ, ಅಂತರ್ಮುಖೀ ಭಾವ ಇರಬೇಕೆ ಹೊರತು, ಸೆಲೆಬ್ರೇಷನ್ನೇ! ಏನು ಸಾಧಿಸಿದೇ ಅಂತ ಎಲ್ಲಾರೂ ಅಭಿನಂದನೆಗಳನ್ನು, ಶುಭಾಶಯಗಳನ್ನು ತಿಳಿಸುತ್ತಿದ್ದಾರಪ್ಪಾ, ಅಂತ ನಗು! ಜೊತೆಗೆ, ಇಷ್ಟೆಲ್ಲ ನನ್ನ ಬಗ್ಗೆ ಪ್ರೀತಿ ಇಟ್ಟಿದಾರಲ್ಲ ಅನ್ನೋ ಖುಷಿ! ಹೀಗೇ ಗೊಂದಲ ಹಾಗೂ ಸಂಭ್ರಮದ ಸಮ್ಮಿಳಿತದಿಂದ ಮೊದಲಾದ ನನ್ನ ಹುಟ್ಟು ಹಬ್ಬದ ದಿನ, ಸಡಗರ ಹಾಗೂ ಸ್ಪೂರ್ತಿದಾಯಕವಾಗಿಯೇ ಮುಗಿಯಿತು. ಒಂದು ಹೊಸ ಉತ್ಸಾಹ, ಆಶಾವಾದ ಹೊರಹೊಮ್ಮಿತ್ತು. ಹೇಗೆ ಅಂತೀರಾ? ಹೇಳಿ ಕೇಳಿ ಅಂದು ವೀಕ್ ಎಂಡ್. ಕಾರ್ಪೊರೇಟ್ ಆಳುಗಳಾಗಿರುವ ನಮ್ಮೆಲ್ಲರಿಗೂ ಇದು ಸುದಿನ. ಹೀಗೆ ಕಾಲ ಕಳೆಯಲು, ನನಗೆ ಪರಿಚಯದ ಒಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅಚಾನಕ್ ಆಗಿ, ಓರ್ವ ಹಿರಿಯ ಮಹಿಳೆಯ ಭೇಟಿ ಆಯಿತು. ಎಂಬತ್ತರ ಹರೆಯದ ಆಕೆಯನ್ನು ಒಂದೇ ಮಾತಿನಲ್ಲಿ, ಉತ್ಸಾಹದ ಬುಗ್ಗೆ ಎನ್ನ ಬಹುದು. “ನೋಡಮ್ಮ ನನಗೆ ಎಂಭತ್ತು ವಯಸ್ಸು, ಆದರೆ ಪುಸ್ತಕ ಹಿಡಿದರೆ, ಹದಿನೆಂಟರ ಹೆಣ್ಣಾಗಿ ಬಿಡುತ್ತೇನೆ” ಎಂದೇ ಆಕೆ ಮಾತು ಪ್ರಾರಂಭಿಸಿದರು. ಇವರ ಹೆಸರು ಲಲಿತಮ್ಮ ಚಂದ್ರಶೇಖರ್. 1932 ರಲ್ಲಿ ಹುಟ್ಟಿದ ಈಕೆ, ಒಂಭತ್ತನೇ ವಯಸ್ಸಿನಲ್ಲಿ ಶಾಲೆಯಲ್ಲಿ ಭಾಷಣ ಮಾಡಿ, ಹತ್ತನೇ ವಯಸ್ಸಿನಲ್ಲಿ ಕಥೆ ಬರೆದಿದ್ದರು ಎಂದು ಕೇಳಿ ನನಗೆ ಆಶ್ಚರ್ಯವಾಯಿತು. ಮುಂದೆ ಅವರ ಕಥೆ ಕೇಳಲು ಕುತೂಹಲವಾಯಿತು. ಚಿಕ್ಕಂದಿನಲ್ಲೇ, ಓದು ಬರಹದಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದರು. ಹಿಂದಿನ ಕಾಲದಲ್ಲಿ ಮಹಿಳೆಯರು ಓದುವುದು ಬರೆಯುವುದು ಅಂದರೆ ಅಷ್ಟು ಸಖ್ಯ ಅಲ್ಲ ಎನ್ನುವುದು ಸಾಮಾಜಿಕ. ಇವರ ಮನೆಯಲ್ಲೂ ಹೀಗೆ, ಪುಸ್ತಕ ಹಿಡಿಯಲು ಹೆದರಿಕೆ. ಆದರೂ, ತಮ್ಮ ಹತ್ತನೇ ವಯಸ್ಸಿನಲ್ಲಿ, ಎಲ್ಲರೂ ಮಲಗಿದ ನಂತರ, ಸಣ್ಣ ಲಾಟೀನಿನ ಬೆಳಕಿನಲ್ಲಿ, ಕಾರಂತರ “ಮರಳಿ ಮಣ್ಣಿಗೆ” ಒಂದೇ ಉಸಿರಿನಲ್ಲಿ ಓದಿ ಮುಗಿಸಿದ್ದರು. ಅಂದೇ ಪ್ರಾರಂಭವಾದದ್ದು ಇವರ ಓದು ಬರವಣಿಗೆ ಬಗೆಗಿನ ತುಡಿತ! ಪುಸ್ತಕ ಓದಿ ಮುಗಿಸಿದ ಆ ಎಳೆ ಮನಸ್ಸು, ಅಂದೇ ನಿರ್ಧರಿಸಿತ್ತು, ಜೀವನದಲ್ಲಿ ಒಮ್ಮೆ ಕಾರಂತರನ್ನು ಭೇಟಿಯಾಗಬೇಕು ಎಂದು. “ನನ್ನ ಆಸ್ತಿ ಅಂದರೆ ಒಂದಷ್ಟು ಕಟ್ಟು ಖಾಲೀ ಹಾಳೆಗಳು ನೀಲಿ ರೀಫ಼ಿಲ್ಲುಗಳು” ಎಂದು ಆಕೆ ನಗುತ್ತಾ ಹೇಳುವಾಗ, ಆಕೆಯ ಕಣ್ಣುಗಳಲ್ಲಿ ಒಂದು ಅನಿರ್ವಚನೀಯ ಭಾವ ತುಂಬಿ ತುಳುಕುತ್ತಿತ್ತು, ಅದೇನೆಂದರೆ ಒಂದು ಕಂಟೇಜಿಯಸ್ ಜೀವನೋತ್ಸಾಹ! ಆಕೆಯ ನಡೆ ನುಡಿಗಳಲ್ಲಿ ನನಗೆ ಬಹಳ ಹಿಡಿಸಿದ್ದೆಂದರೆ, ಈ ಇಳಿ ವಯಸ್ಸಿಗೂ ಕುಗ್ಗದ ಅವರ ಆಶಾವಾದ, ಲವಲವಿಕೆ ಮತ್ತು ಮುಗ್ಧತೆ. “ಪ್ರತಿಯೊಂದೂ ಸಾಹಿತ್ಯ ಕಣಮ್ಮ, ಒಂದು ಗುಲ್ಪಾವಟೆ ಮಾಡೋದರಿಂದ ಹಿಡಿದು, ಪ್ರಸವವಾಗೋದು, ಮನೆಕೆಲಸ ಮಾಡೋದು ಎಲ್ಲಾದೂ ಒಂದು ಸಾಹಿತ್ಯಾನೆ ಅಲ್ಲವೇ”, ಎಂದು ಆಕೆ ನಗುತ್ತಾರೆ. ನಮ್ಮ ಹೆಣ್ಣು ಮಕ್ಕಳು ಬೆಳೀಬೇಕು, ಅಡಿಗೆ ಮನೆಗಿಂತ ಹೆಚ್ಚಿನ ಸಾಮ್ರಾಜ್ಯ ಇದೆ ಅನ್ನೋದು ಅವರ ಅರಿವಿಗೆ ಬರಬೇಕು ಎಂದು ಅಹರ್ನಿಶಿ ದುಡಿದವರಲ್ಲಿ ಇವರೂ ಒಬ್ಬರು ಎಂದು ಅವರ ಕುಟುಂಬದವರು ಹೆಮ್ಮೆಯಿಂದ ಹೇಳುತ್ತಿದ್ದರು. ನನಗೆ ಅವರಲ್ಲಿ ಕಂಡದ್ದು, ಒಂದು ಮುಗ್ಧ, ಪ್ರಾಮಾಣಿಕ, ಸಾಮಾಜಿಕ ಪ್ರಯತ್ನ. ಫ಼ೆಮಿನಿಸಮ್ ಅನ್ನು, ಸಾಕಷ್ಟು ಮಂದಿ ತಪ್ಪು ತಿಳಿದಿದ್ದಾರೆ, ಒಂದಷ್ಟು ಹೆಂಗಸರು ಅದನ್ನು ತಪ್ಪಾಗಿ ಪ್ರೊಜೆಕ್ಟ್ ಮಾಡಿ, ಇಡೀ ಕಲ್ಪನೆಯನ್ನು ನಗೆಪಾಟಲು ಮಾಡಿರುವುದು ಸುಳ್ಳಲ್ಲ. ಆದರೆ, ಇಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಕಂಡಾಗ, ಆ ಪೊಳ್ಳು ಪ್ರಚಾರಗಳೆಲ್ಲದರ ಹೊರತಾಗಿ ಒಂದಷ್ಟು ಪಂಥ, ಚಳುವಳಿಗಳು ಉಸಿರಾಡಿವೆ, ಅವು ನಮ್ಮೆಲ್ಲರ ಇಂದಿನ ಏಳಿಗೆಯ ಬುನಾದಿಯಾಗಿವೆ ಎಂಬುದು ಗೋಚರವಾಗುತ್ತದೆ. ಮದುವೆ, ಸಂಸಾರ, ಮನೆಗೆಲಸ ಇವುಗಳ ನಡುವೆ ಸಮಯ ಸಿಕ್ಕಾಗ ಓದು, ಸಮಯ ಮಾಡಿಕೊಂಡು ಬರವಣಿಗೆ. ಹೀಗೆ ಇವರ ಬೆಳವಣಿಗೆ ನಿಶ್ಯಬ್ಧವಾಗಿದ್ದರೂ ನಿರಾತಂಕವಾಗಿ, ನಿರಂತರವಾಗಿ ಸಾಗಿತು. ಕೊನೆಗೊಮ್ಮೆ, 1955 ರಲ್ಲಿ ಮಹಿಳಾ ಸಮಾಜ ಸ್ಥಾಪನೆ ಮಾಡಿದರು. ಇದರ ಧ್ಯೇಯೋದ್ದೇಶ ಅಭಿವೃದ್ಧಿಗೆ 9 ವರ್ಷಗಳ ಕಾಲ ಸತತವಾಗಿ ದುಡಿದರು. ನಾಟಕಗಳು ಒಂದು ಒಳ್ಳೆಯ ಮಾಧ್ಯಮ ಎಂದು ನಂಬಿದ್ದ ಇವರು, 1956 ರಲ್ಲಿ ಮೊಟ್ಟ ಮೊದಲನೇ ಬಾರಿಗೆ ಕೇವಲ ಮಹಿಳೆಯರ ಗುಂಪನ್ನು ಸೇರಿಸಿ ನಾಟಕ ಮಾಡಿಸಿದರು. 1977 ರಲ್ಲಿ ಲಯನ್ಸ್ ಕ್ಲಬ್ ನ ಅಧ್ಯೆಕ್ಷೆಯಾಗಿದ್ದರು. ಈ ಅಧ್ಯಕ್ಷತೆಯಲ್ಲಿಯೇ, ಶಾಲೆಯೊಂದನ್ನು ನಿರ್ಮಿಸಿ ಅದರ ಏಳಿಗೆಗಾಗಿ ಸಾಕಷ್ಟು ದುಡಿದರು. ಅವರ ವಿಷೇಶತೆಯೆಂದರೆ, ನಾನು ಆಗಲೇ ಹೇಳಿದಂತೆ, ಅವರ ಮುಗ್ಧ ಮನಸ್ಸು. ಸುಮ್ಮನೆ ಅವರೊಡನೆ ಕುಳಿತರೆ, ಮಗುವಿನೊಂದಿಗೆ ಕುಳಿತಂತಹ ಅನುಭವ. ಅವರ ಪತಿ ಡಾಕ್ಟರಾಗಿದ್ದರು. ಪತಿಯ ಮಾತು ಬಂದಾಕ್ಷಣ ಹೊಳೆವ ಇವರ ಕಂಗಳು ಮತ್ತೊಂದು ಇನ್ಟೆರಸ್ಟಿಂಗ್ ಕಥೆಯನ್ನು ಹೇಳಿತ್ತು. ಅವರ ಆನಿವರ್ಸರಿ ದಿನದಂದು, ಅವರ ಪತಿ ಒಡವೆ ಮಾಡಿಸಿಕೋ ಅಂತ ಹಣ ಕೊಟ್ಟರಂತೆ. ಹಣಕ್ಕೆ ಬೆಲೆ ಕೊಡಲಾರದ ಇವರು, ಒಡವೆ ವಸ್ತ್ರಗಳಿಂದಲೂ ದೂರ. ರಾತ್ರಿಯೆಲ್ಲ ಆಲೋಚಿಸಿ, ಕೊನೆಗೆ “ಡಾಕ್ಟರ್ ಮಡದಿ” ಎಂದು ಒಂದು ಪುಸ್ತಕ ಬರೆದು, ಅದನ್ನು ಎಲ್ಲರೊಡನೆ ಹಂಚಿಕೊಂಡರು. ಬರವಣಿಗೆಯ ಮಹಾಸಾಗರದಲ್ಲಿ ನನ್ನದೂ ಒಂದು ಅಳಿಲು ಸೇವೆ ಎಂದು ಇವರು ನಕ್ಕು ಹಲ್ಲು ಕಚ್ಚುತ್ತಾರೆ. ಬೆಳಗ್ಗೆ ಎದ್ದಾಕ್ಷಣ, ನಾನು ಇಂದು ಏನು ಓದಬೇಕು ಬರೆಯಬೇಕು ಎಂದು ಲೆಕ್ಕ ಹಾಕುವ ಇವರನ್ನು ಕಂಡು, ಸಮಯ ಸಿಕ್ಕಾಗ, ಹೇಳಕೇಳದೆ ಟೈಮ್ ವೇಸ್ಟ್ ಮಾಡುವ ನನಗೆ ನಾಚಿಕೆಯಾಯಿತು ಎಂದು ಹೇಳುವುದರಲ್ಲಿ ಬೇಷಕ್ ನಾಚಿಕೆಯಿಲ್ಲ ಬಿಡಿ! ಒಟ್ಟು 34 ಪುಸ್ತಕಗಳನ್ನು ಬರೆದ ಇವರಿಗೆ, ಅವರ ಸಾಹಿತ್ಯ ಹಾಗೂ ಸಮಾಜ ಸೇವೆಯನ್ನು ಮೆಚ್ಚಿ ಆರ್ಯಭಟ ಪ್ರಶಸ್ತಿಯನ್ನು ಪುರಸ್ಕರಿಸಲಾಗಿದೆ. ಅವರ ಸಾಮಾಚಿಕ ಕಳಕಳಿಯನ್ನು ಗುರ್ತಿಸಿ “ಮಹಲಿಂಗ ರಂಗ ಸಾಹಿತ್ಯ ಪ್ರಶಸ್ತಿ”ಯನ್ನೂ ನೀಡಲಾಗಿದೆ.  ಮಕ್ಕಳ ಸಾಹಿತ್ಯದಲ್ಲಿ ಅದಮ್ಯ ಆಸಕ್ತಿ. ಇವರ ಮಹಿಳಾಪರ ಮನೋಭಾವವನ್ನು ಕಂಡು,  ಜಿಲ್ಲಾ ವನಿತಾ ಸಾಹಿತ್ಯ ಕಲಾ ವೇದಿಕೆಯವರು ಪ್ರಶಸ್ತಿಯನ್ನು ಪುರಸ್ಕರಿಸಿದ್ದಾರೆ. ಇವರ “ಎಮ್ಮೆ ಖೆಡ್ಡ” ಅನ್ನೋ ಕೃತಿಗೆ ರತ್ನಮ್ಮ ಹೆಗ್ಡೆ ಪ್ರಶಸ್ತಿಯೂ ಲಭಿಸಿದೆ. ಎಲ್ಲಕ್ಕಿಂತಲೂ ಮಿಗಿಲು ಎಂಬಂತೆ, ಇವರಲ್ಲಿ ಅತ್ಯಂತ ಪವರ್ಫ಼ುಲ್ ಆಗಿ ಕಂಡು ಬಂದದ್ದು, ಕಿರಿಯ, ಯುವ ಬರಹಗಾರರನ್ನು ಸೃಷ್ಟಿಸುವ, ಬೆಳೆಸುವ ತೀರದ ಆಸಕ್ತಿ. “ಬರವಣಿಗೆ, ಬರವಣಿಗೆ ಮತ್ತು ಬರವಣಿಗೆ” ಇವರ ಮಂತ್ರ. ಅವರು ಎಲ್ಲರಿಗೂ ಬೋಧಿಸುವ ವೇದ ಮಂತ್ರ. “ಅದು ಏನೇ ಇರಲಿ, ಮೊದಲಿಗೆ ಬರೀ ಬರವಣಿಗೆಯಾಗುತ್ತದೆ. ಬೆಳೀತಾ ಬೆಳೀತಾ ಅದು ಸಾಹಿತ್ಯವಾಗುತ್ತಾದೆ. ಮಾಗ್ತಾ ಮಾಗ್ತಾ ಅದು ಕೃತಿಯಾಗುತ್ತದೆ, ಸಮಾಜಕ್ಕೆ ಒಂದು ಕಾಣ್ಕೆಯಾಗುತ್ತದೆ”, ಎಂಬುದು ಇವರ ಅಪಾರ ನಂಬಿಕೆ. ಹತ್ತನೇ ವಯಸ್ಸಿನಲ್ಲಿ, ಕತ್ತಲ ಲಾಟೀನು ದೀಪದಲ್ಲಿ ಕಂಡ ಕಾರಂತರನ್ನು ಭೇಟಿಯಾಗುವ ಇವರ ಕನಸು ನನಸಾಗದೇ ಉಳಿಯಲಿಲ್ಲ. ಕಾರಂತರೊಬ್ಬರೇ ಅಲ್ಲ, ಬೇಂದ್ರೆ, ಮಾಸ್ತಿ, ಡಿವಿಜಿ, ವಿಸೀ, ರಾಜರತ್ನಂ, ಇತ್ಯಾದಿ ಅನೇಕ ದಿಗ್ಗಜರೊಂದಿಗಿನ ಇವರ ಒಡನಾಟ ಕೇಳಲು ಪ್ರಿಯ. ಒಟ್ಟಿನಲ್ಲಿ, ನಾನಾಗಲೇ ಹೇಳಿದಂತೆ, ಇವರದು ಕಂಟೇಜಿಯಸ್ ಜೀವನೋತ್ಸಾಹ ಹಾಗೂ ಆತ್ಮೀಯತೆ. ನಾವಾಯ್ತು, ನಮ್ಮ ಲಾಪ್ ಟಾಪ್ ಆಯ್ತು ಅಂತ ಇರುವ ನಮ್ಮಂತಹ ಕೂಚಂಭ್ಟರಿಗೆ ಇವರು ಒಳ್ಳೆ, ಪುಲ್ ಅಪ್! ಇಂತಹ ಒಬ್ಬರು ಹಿರಿಯ ಚೇತನರನ್ನು ಭೇಟಿಯಾದದ್ದು, ಅವರಿಂದ ಸಾಕಷ್ಟು ಕಲಿತದ್ದು, ಇವೆಲ್ಲದಕ್ಕಿಂತ ಒಳ್ಳೆ ಬರ್ತಡೇ ಗಿಫ಼್ಟ್ ಇದ್ದೀತೇ!]]>

‍ಲೇಖಕರು G

September 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

’ಚರಿತ್ರೆಯನ್ನು ನೆನೆದು ಕಲಕಿಬಿಟ್ಟ ಮನಸ್ಸು ಅರೆ ನಿಮಿಷ ಮೌನ’ – ಸಂಯುಕ್ತಾ ಪುಲಿಗಳ್

ನಾವು ಇಷ್ಟೇಕೆ ಹೆದರಿದ್ದೇವೆ? ಸಂಯುಕ್ತಾ ಪುಲಿಗಳ್ ಅದೆಷ್ಟೆಷ್ಟೋ ಓದಿಬಿಟ್ಟ, ಪದಕಗಳ ಮೇಲೆ ಪದಕಗಳ ಗೆದ್ದುಬಿಟ್ಟ, ಅತ್ಯುನ್ನತ...

13 ಪ್ರತಿಕ್ರಿಯೆಗಳು

 1. D.RAVI VARMA

  ಅವರ ವಿಷೇಶತೆಯೆಂದರೆ, ನಾನು ಆಗಲೇ ಹೇಳಿದಂತೆ, ಅವರ ಮುಗ್ಧ ಮನಸ್ಸು. ಸುಮ್ಮನೆ ಅವರೊಡನೆ ಕುಳಿತರೆ, ಮಗುವಿನೊಂದಿಗೆ ಕುಳಿತಂತಹ ಅನುಭವ. ಅವರ ಪತಿ ಡಾಕ್ಟರಾಗಿದ್ದರು. ಪತಿಯ ಮಾತು ಬಂದಾಕ್ಷಣ ಹೊಳೆವ ಇವರ ಕಂಗಳು ಮತ್ತೊಂದು ಇನ್ಟೆರಸ್ಟಿಂಗ್ ಕಥೆಯನ್ನು ಹೇಳಿತ್ತು. ಅವರ ಆನಿವರ್ಸರಿ ದಿನದಂದು, ಅವರ ಪತಿ ಒಡವೆ ಮಾಡಿಸಿಕೋ ಅಂತ ಹಣ ಕೊಟ್ಟರಂತೆ. ಹಣಕ್ಕೆ ಬೆಲೆ ಕೊಡಲಾರದ ಇವರು, ಒಡವೆ ವಸ್ತ್ರಗಳಿಂದಲೂ ದೂರ. ರಾತ್ರಿಯೆಲ್ಲ ಆಲೋಚಿಸಿ, ಕೊನೆಗೆ “ಡಾಕ್ಟರ್ ಮಡದಿ” ಎಂದು ಒಂದು ಪುಸ್ತಕ ಬರೆದು, ಅದನ್ನು ಎಲ್ಲರೊಡನೆ ಹಂಚಿಕೊಂಡರು. ಬರವಣಿಗೆಯ ಮಹಾಸಾಗರದಲ್ಲಿ ನನ್ನದೂ ಒಂದು ಅಳಿಲು ಸೇವೆ ಎಂದು ಇವರು ನಕ್ಕು ಹಲ್ಲು ಕಚ್ಚುತ್ತಾರೆ.
  ಒಟ್ಟಿನಲ್ಲಿ, ನಾನಾಗಲೇ ಹೇಳಿದಂತೆ, ಇವರದು ಕಂಟೇಜಿಯಸ್ ಜೀವನೋತ್ಸಾಹ ಹಾಗೂ ಆತ್ಮೀಯತೆ. ನಾವಾಯ್ತು, ನಮ್ಮ ಲಾಪ್ ಟಾಪ್ ಆಯ್ತು ಅಂತ ಇರುವ ನಮ್ಮಂತಹ ಕೂಚಂಭ್ಟರಿಗೆ ಇವರು ಒಳ್ಳೆ, ಪುಲ್ ಅಪ್! ಇಂತಹ ಒಬ್ಬರು ಹಿರಿಯ ಚೇತನರನ್ನು ಭೇಟಿಯಾದದ್ದು, ಅವರಿಂದ ಸಾಕಷ್ಟು ಕಲಿತದ್ದು, ಇವೆಲ್ಲದಕ್ಕಿಂತ ಒಳ್ಳೆ ಬರ್ತಡೇ ಗಿಫ಼್ಟ್ ಇದ್ದೀತೇ!
  ನಿಮ್ಮ ಈ ಮನದಾಳದ ಮಾತುಗಳು ನನ್ನ ಮನಮುಟ್ಟಿದವು…..
  ಆ ತಾಯಿಗೊಂದು, ಅವರ ಜೀವೊನೋತ್ಸಕ್ಕೊಂದು ವಿನಯ ಪೂರ್ವಕ ನಮಸ್ಕಾರ …..

  ಪ್ರತಿಕ್ರಿಯೆ
 2. RJ

  ಇಂತಹ ಒಬ್ಬರು ಹಿರಿಯ ಚೇತನರನ್ನು ಭೇಟಿಯಾದದ್ದು, ಅವರಿಂದ ಸಾಕಷ್ಟು ಕಲಿತದ್ದು, ಇವೆಲ್ಲದಕ್ಕಿಂತ ಒಳ್ಳೆ ಬರ್ತಡೇ ಗಿಫ಼್ಟ್ ಇದ್ದೀತೇ!
  Good Job! 🙂

  ಪ್ರತಿಕ್ರಿಯೆ
 3. Nataraju S M

  ಬೆಳಿಗ್ಗೆ ಫೇಸ್ ಬುಕ್ ಓಪನ್ ಮಾಡಿದಾಗ ನಿಮ್ಮ ಮೆಸೇಜ್ ನೋಡಿದೆ.. ನಿಮ್ಮ ಜನ್ಮ ದಿನಾಂಕ ಕೇಳೋಣ ಎಂದುಕೊಳ್ಳುತ್ತಲೇ ಇವತ್ತು ಶುಕ್ರವಾರ ನಿಮ್ಮ ಕಾಲಂನ ದಿನ ಎಂದು ಸಂಪು ಕಾಲಂನ ಮೇಲೆ ಕಣ್ಣಾಡಿಸಿದಾಗ ಜನ್ಮ ದಿನದ ಕುರಿತೇ ನಿಮ್ಮ ಲೇಖನ ಪ್ರಾರಂಭವಾಗಿತ್ತು.. ಖುಷಿಯಾಯಿತು.. ಹಿರಿಯರೊಬ್ಬರ ಜೀವನ ನಮಗೆಲ್ಲಾ ಆದರ್ಶವಾಗಲಿ.. ಹೀಗೆಯೇ ಮುಂದುವರೆಯಲಿ ನಿಮ್ಮ ಲೇಖನ ಮಾಲೆ..

  ಪ್ರತಿಕ್ರಿಯೆ
 4. Gopaal Wajapeyi

  ”ಪ್ರತಿಯೊಂದೂ ಸಾಹಿತ್ಯ ಕಣಮ್ಮ… ಒಂದು ಗುಲ್ಪಾವಟೆ ಮಾಡೋದರಿಂದ ಹಿಡಿದು, ಪ್ರಸವವಾಗೋದು, ಮನೆ ಕೆಲಸ ಮಾಡೋದು ಎಲ್ಲಾನೂ ಒಂದು ಸಾಹಿತ್ಯಾನೆ ಅಲ್ಲವೇ…”
  ”ಅದು ಏನೇ ಇರಲಿ, ಮೊದಲಿಗೆ ಬರೀ ಬರವಣಿಗೆಯಾಗುತ್ತದೆ. ಬೆಳೀತಾ ಬೆಳೀತಾ ಅದು ಸಾಹಿತ್ಯವಾಗುತ್ತದೆ. ಮಾಗ್ತಾ ಮಾಗ್ತಾ ಅದು ಕೃತಿಯಾಗುತ್ತದೆ, ಸಮಾಜಕ್ಕೆ ಕಾಣ್ಕೆಯಾಗುತ್ತದೆ…”
  ಆಹಾ… ಎಂಥಾ ಮಾತು…! ಎಂಥಾ ವಿಚಾರ…!
  ನಿಜಕ್ಕೂ ಅದ್ಭುತ ಅಪರೂಪದ ವ್ಯಕ್ತಿತ್ವವನ್ನು ಪರಿಚಯಿಸಿದ್ದೀರಿ ಸಂಯುಕ್ತಾ…! ಅವರನ್ನೊಮ್ಮೆ ಕಂಡು ಕೈಮುಗಿಯುವಾ ಅನ್ನಿಸುತ್ತಿದೆ…

  ಪ್ರತಿಕ್ರಿಯೆ
 5. Swarna

  ”ಪ್ರತಿಯೊಂದೂ ಸಾಹಿತ್ಯ ಕಣಮ್ಮ… ಒಂದು ಗುಲ್ಪಾವಟೆ ಮಾಡೋದರಿಂದ ಹಿಡಿದು, ಪ್ರಸವವಾಗೋದು, ಮನೆ ಕೆಲಸ ಮಾಡೋದು ಎಲ್ಲಾನೂ ಒಂದು ಸಾಹಿತ್ಯಾನೆ ಅಲ್ಲವೇ…”
  Nice.
  Swarna

  ಪ್ರತಿಕ್ರಿಯೆ
 6. ಮಂಜುಳಾ ಬಬಲಾದಿ

  ನಿಮಗೆ ಪ್ರತಿ ವರ್ಷ ಇಂತಹ ಅದ್ಭುತ ಬರ್ತ್‍ಡೇ ಗಿಫ್ಟ್‍ಗಳೇ ಸಿಗಲಿ.. ಹೇಗಿದ್ರೂ ನೀವು ಅವನ್ನ ನಮ್ಮ ಜೊತೆ ಹಂಚ್ಕೋತೀರಲ್ಲ 🙂

  ಪ್ರತಿಕ್ರಿಯೆ
 7. malathi S

  ಫೆಮಿನಿಸಮ್ ಅನ್ನು, ಸಾಕಷ್ಟು ಮಂದಿ ತಪ್ಪು ತಿಳಿದಿದ್ದಾರೆ, ಒಂದಷ್ಟು ಹೆಂಗಸರು ಅದನ್ನು ತಪ್ಪಾಗಿ ಪ್ರೊಜೆಕ್ಟ್ ಮಾಡಿ, ಇಡೀ ಕಲ್ಪನೆಯನ್ನು ನಗೆಪಾಟಲು ಮಾಡಿರುವುದು ಸುಳ್ಳಲ್ಲ. ಆದರೆ, ಇಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಕಂಡಾಗ, ಆ ಪೊಳ್ಳು ಪ್ರಚಾರಗಳೆಲ್ಲದರ ಹೊರತಾಗಿ ಒಂದಷ್ಟು ಪಂಥ, ಚಳುವಳಿಗಳು ಉಸಿರಾಡಿವೆ, ಅವು ನಮ್ಮೆಲ್ಲರ ಇಂದಿನ ಏಳಿಗೆಯ ಬುನಾದಿಯಾಗಿವೆ ಎಂಬುದು ಗೋಚರವಾಗುತ್ತದೆ.
  well said Samyukta…ಚಂದದ ಬರಹ. ನಿಮ್ಮ ಮೂಲಕ ಅವರ ಪರಿಚಯ ಆಗಿದ್ದು ಸಂತೋಷ.
  ಮಾಲತಿ ಎಸ್

  ಪ್ರತಿಕ್ರಿಯೆ
 8. samyuktha

  ಬರಹ ಓದಿ ಮೆಚ್ಚಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಆಶೀರ್ವಾದ ಹೀಗೇ ಇರಲಿ. 🙂

  ಪ್ರತಿಕ್ರಿಯೆ
 9. Bharathi

  Weekend time sigade ee dina oodide. Nimminda avarannu nodidante aayithu. Nice Article.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: