`ಸಂಬಂಧ ಅನ್ನೋದು ದೊಡ್ಡದು ಕಣಾ’

 

 

ಅಕ್ಷತಾ ಕೆ

ದಣಪೆಯಾಚೆ…

ಮೊನ್ನೆ ಕಡಿದಾಳು ಶಾಮಣ್ಣನವರು ತಮ್ಮ ಬದುಕಿನ ಪುಟಗಳನ್ನು ತೆರೆದಿಡುತಿದ್ದ ಸಂದರ್ಭದಲ್ಲಿ ಈ ಘಟನೆ ಹೇಳಿದರು. ಪುಟ್ಟದಾದ ಈ ಘಟನೆ ನನ್ನಲ್ಲಿ ಹಲವು ನೆನಪುಗಳನ್ನು ಉಕ್ಕಿಸಿತು. ಹಲವು ವರ್ಷಗಳಿಂದ ಪರಸ್ಪರರನ್ನು ಅರಿತಿದ್ದ, ಪ್ರೇಮಿಸುತಿದ್ದ ಶಾಮಣ್ಣ-ಶ್ರೀದೇವಿ 1970 ರಲ್ಲಿ ಮದುವೆ ಮಾಡಿಕೊಂಡು ಭಗವತಿಕೆರೆಗೆ ಬಂದು ಸಂಸಾರ ಹೂಡುತ್ತಾರೆ. 

ದಟ್ಟ ಕುರುಚಲು ಕಾಡಿನ, ಬೆಟ್ಟ ಗುಡ್ಡಗಳ, ನೀರಾವರಿ ಪ್ರದೇಶವಾದ ಈ ಊರಿನಲ್ಲಿ ಆಗ ಇದ್ದಿದ್ದು ಇವರ ಒಂದು ಗುಡಿಸಲು ಮಾತ್ರ. ನರಮನುಷ್ಯ ಸಂಚಾರವೇ ವಿರಳವಾಗಿದ್ದ ಊರಿನಲ್ಲಿ ಸಾಲು ಸಾಲು ಕರಡಿಗಳು, ಜಿಂಕೆಗಳು,ನರಿಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದವಂತೆ. ಇವರು ಭಗವತಿಕೆರೆಗೆ ಬಂದು ಮೂರ್ನಾಲ್ಕು ದಿನವೂ ಆಗಿರಲಿಲ್ಲ ಅಷ್ಟರಲ್ಲಿ ಅಂಬಾಸಿಡರ್ ಕಾರೊಂದು ತಮ್ಮ ಮನೆ ಕಡೆ ಬರುತ್ತಿರುವುದು ಗೋಚರಿಸುತ್ತದೆ. ನಿಶಬ್ದವೇ ಮೈ ತಾಳಿದಂತಿರುತಿದ್ದ ಆ ಪ್ರದೇಶದಲ್ಲಿ ಯಾವುದೇ ಒಂದು ವಾಹನ ಮಾರು ದೂರದಲ್ಲಿ ಶಬ್ದ ಮಾಡಿದರೂ ಓಹೋ ನಮ್ಮನೆಗೆ ಯಾರೋ ಬರುತಿದ್ದಾರೆ ಎಂದು ತಿಳಿಯುತಿತ್ತಂತೆ. ಆ ದಿನ ಕಾರಿನ ಶಬ್ದ ಕೇಳಿ ಯಾರಪ್ಪ ಅತಿಥಿಗಳು ಎಂದು ಅಚ್ಚರಿಗೊಂಡು ನೋಡಿದರೆ ಅದು ಶ್ರೀದೇವಿಯವರ ತವರು ಮನೆಯ ಕಾರು ಆದರೆ ಅದರಲ್ಲಿ ಡ್ರೈವರ್ ಜೊತೆ ಬಂದಿದ್ದು ಒಂದು ನಾಯಿ.  ಅದರ ಹೆಸರು ಘಟ್ಟಾನಿ ಅದನ್ನು ತವರುಮನೆಯಲ್ಲಿರುವಾಗ ಶ್ರೀದೇವಿಯವರೇ ಸಾಕಿದ್ದಂತೆ. ಇವರು ಮದುವೆ ಮಾಡಿಕೊಂಡು ಬಂದ ದಿನದಿಂದ ಅದು ಊಟ ತಿಂಡಿಯನ್ನು ತಿನ್ನದೇ ಯಾವಾಗಲೂ ಶೋಕಿಸುತಿತ್ತಂತೆ. ಹೀಗಿದ್ದರೆ ನಾಯಿ ಸತ್ತೆ ಹೋಗುತ್ತದೆ ಎಂದು ಭಯಗೊಂಡ ಅವರ ತಂದೆ ಕಾರಿನಲ್ಲಿ ನಾಯಿಯನ್ನು ಇಲ್ಲಿಗೆ ಕಳಿಸಿಕೊಟ್ಟಿದ್ದರು. ಆ ನಾಯಿ ಶ್ರೀದೇವಿಯನ್ನು ನೋಡಿದ ಕೂಡಲೇ ಹಾರಿ ಜಿಗಿದು ಅವಳ ಮೈಕೈಯಲ್ಲ ಸವರಿದ್ದು ನೋಡ್ಬೇಕಿತ್ತು ಮಾರಾಯ್ರೆ ನೀವು ಎಂದರು ಶಾಮಣ್ಣ ಮೂವತ್ತೆಂಟು ವರ್ಷಗಳ ಹಿಂದಿನ ಘಟನೆಯನ್ನು ನೆನೆಸಿಕೊಂಡು. ಅವರಾಗಲೇ ಹಳೆಯ ನೆನಪುಗಳಿಗೆ ಜಾರಿದ್ದರು.

ಅದು ನಮ್ಮ ಹಳ್ಳಿಯ ಒಂದು ಮನೆ. ಹಿಂದೆ ವಿಶಾಲವಾದ ಹಿತ್ತಿಲು. ಹಿತ್ತಿಲ ತುಂಬಾ ಡೇರೆ, ಕನಕಾಂಬರ, ಮಲ್ಲಿಗೆ ಹೂವಿನ ಸಾಲುಸಾಲು ಗಿಡಗಳು. ಬುಟ್ಟಿ ಹಿಡಿದು ಕೊಯ್ಯಲು ಶುರುಮಾಡಿದರೆ ಕೈ ನೋವು ಬಂದು ಹೂ ಕೊಯ್ಯುವುದನ್ನು ನಿಲ್ಲಿಸಬೇಕಿತ್ತೆ ವಿನಃ ಕೊಯ್ದು ಮುಗಿಯಿತು ಎಂದಲ್ಲ. ಆ ಹಿತ್ತಿಲ ಗಿಡಗಳಲ್ಲಿ ಹೂವಿಲ್ಲದ ದಿನವನ್ನು ನಾನು ನೋಡೆ ಇರಲಿಲ್ಲ. ಆ ಮನೆಯ ಮಗಳು ಶೋಭಕ್ಕ ಯಾವಾಗಲೂ ಇರುತಿದ್ದುದು ಹಿತ್ತಿಲಿನಲ್ಲಿ. ಮೆಲುದನಿಯಲ್ಲಿ ಯಾವುದಾದರೂ ಹಾಡನ್ನು ಗೊಣಗಿಕೊಳ್ಳುತ್ತಾ ಗಿಡದ ಬುಡ ಸರಿ ಮಾಡುತ್ತಲೋ, ನೀರು,ಮಣ್ಣು ಹಾಕುತ್ತಲೋ, ಕೆಲಸವೇ ಇಲ್ಲ ಎಂದರೆ ಅಲ್ಲೆ  ಗಿಡಗಳ ಬುಡದಲ್ಲಿ ಸುಮ್ಮನೆ ಕೂತು ಕಾಲ ಕಳೆಯುತಿದ್ದಳು. ಗೆಳತಿಯರ ದಂಡಿನಲ್ಲಿ ಒಬ್ಬಳಾಗಿ ಬೆರೆತುಹೋಗುವಷ್ಟು ಸಲೀಸಾಗಿ ಗಿಡಗಳೊಂದಿಗೆ ಕಾಲ ಕಳೆಯುತಿದ್ದಳು ಶೋಭಕ್ಕ. ಒಂದು ಶುಭ ದಿನ ಶೋಭಕ್ಕನಿಗೂ ಮದುವೆಯಾಗಿ ಗಂಡನ ಮನೆಗೆ ಹೋದಳು. ಅವಳು ಹೋಗಿ ಆರು ತಿಂಗಳು ಆಗಿರಲಿಲ್ಲ. ಅವಳ ಮನೆಯ ಹಿತ್ತಿಲು ಕೆಲವೇ ತಿಂಗಳ ಹಿಂದೆ ಹೂಗಿಡಗಳಿಂದ ನಳನಳಿಸುತಿತ್ತು ಎಂಬ ಯಾವ ಕುರುಹು ಇಲ್ಲದಂತೆ ಬರಿದಾಯಿತು.

ಶೋಭಕ್ಕನ ಅಮ್ಮ ಹೇಳುತಿದ್ದರು ನೀರು, ಗೊಬ್ಬರ ಏನಕ್ಕೂ ನಾನು ಕಡಿಮೆ ಮಾಡಲಿಲ್ಲ. ಆದರೂ ಒಂದು ಗಿಡವೂ ಉಳೀಲಿಲ್ಲ. ಅವಳ ಹಿಂದೆ ಆ ಗಿಡಗಳು ಹೋಗಿ ಅವಳ ಗಂಡನ ಮನೆ ಸೇರಿಕೊಂಡು ಬಿಟ್ಟವೇನೋ? ಅವಳಿರುವಷ್ಟು ದಿನ ಏನಿಲ್ಲ ಎಂದರೂ ರಾಶಿ ರಾಶಿ ಹೂವಿತ್ತು.  

ಅವಳು ಭವಾನಿ, ಪಾರಿಜಾತ ಹೂವಿನಲ್ಲಿ ಬಿಳಿಬಣ್ಣದ ಜೊತೆ ಎದ್ದು ಕಾಣುತ್ತದೆಯಲ್ಲ ಕೇಸರಿ ದಂಟು ಆ ಬಣ್ಣದ ಸುಂದರಿ. ಆಧರ್ೃತೆ ಸೂಸುವ ಗಂಭೀರೆ ಜೊತೆಗೆ ಪುಟ್ಟ ಪುಟ್ಟ ಕೋಡಿದ್ದರೂ ಅದರಿಂದ ಯಾರಿಗಾದರೂ ತಿವಿಯುವುದಿರಲಿ ಅದನ್ನು ಎತ್ತರಿಸಿ ಸಹ ನಡೆದವಳಲ್ಲ ಈ ವಿನಯವಂತೆ.  ನಮ್ಮನ್ನು ಸೇರಿಸಿದಂತೆ ಹಳ್ಳಿಯ ಮಕ್ಕಳಿಗೆಲ್ಲ ತುಂಬಾ ಪ್ರೀತಿ ಪಾತ್ರಳು. ಈ ನಮ್ಮ ಅಮ್ಮಮ್ಮನ ಮುದ್ದಿನ ಹಸು.  ಅವಳ ಜೊತೆ ಅಮ್ಮಮ್ಮ ಪಕ್ಕದ ಮನೆಯವರ ಕೂಡೆ ಮಾತಾಡಿದಷ್ಟೆ ಸಲೀಸಾಗಿ ಗಂಟೆ ಗಟ್ಟಲೆ ಮಾತಾಡುತಿದ್ದಳು.

 ಅದೊಂದು ಭಾನುವಾರ. ನನಗೆ ಚೆನ್ನಾಗಿ ನೆನಪಿದೆ ಆವತ್ತು ಅಮ್ಮ ನನಗೆ ಮತ್ತು ನನ್ನ ತಂಗಿಗೆ ತಲೆಸ್ನಾನ ಮಾಡಿಸುವ ಗಡಿಬಿಡಿಯಲ್ಲಿದ್ದಾಗಲೇ ಬಂತು ವಾತರ್ೆ. ನಮ್ಮನೆಗೆ ಸ್ವಲ್ಪ ದೂರದಲ್ಲಿ ರಸ್ತೆ ಬದಿ ಮೇಯುತಿದ್ದ ಭವಾನಿಗೆ ಮೆಟೋಡರ್ ಒಂದು ಹೊಡೆದು ಅವಳು ಅಲ್ಲೆ ಗಾಯಗೊಂಡು ಬಿದ್ದಿದ್ದಾಳೆ ಏಳೋ ಸ್ಥಿತಿಯಲ್ಲೆ ಇಲ್ಲ ಹೊಟ್ಟೆಯ ಕರುಳು ಹೊರಗೆ ಬಂದಿದೆ ಕಾಲಿಗೂ ಪೆಟ್ಟು ಬಿದ್ದಿದೆ ಅಂತ. ಯಾರೋ ಇಬ್ಬರು ಭವಾನಿಯನ್ನು ಎತ್ತಿ ತಂದು ನಮ್ಮನೆಯ ಕೊಟ್ಟಿಗೆಯಲ್ಲಿ ಮಲಗಿಸಿದರು. ಅಮ್ಮಮ್ಮ ಬೇರೆ ಊರಲಿಲ್ಲ ತೀರ್ಥಹಳ್ಳಿಗೆ ದೊಡ್ಡಮ್ಮನ ಮನೆಗೆ ಹೋಗಿದ್ದಳು. ಅಮ್ಮನೇ ಪಶು ಡಾಕ್ಟರಿಗೆ ಹೇಳಿ ಕಳಿಸಿದಳು. ಆತ ಬಂದು ನೋಡಿ ಬದುಕುವ ಸಾಧ್ಯತೆ ತುಂಬಾ ಕಡಿಮೆ ಎಂದವ ಇವತ್ತು ರಾತ್ರಿ ಒಂದು ಜೀವ ಹಿಡಿದುಕೊಂಡು ಇದ್ದು ಬಿಟ್ಟರೆ ಮತ್ತೆ ಬದುಕಿಯೇ ಬಿಡತ್ತೆ ಎಂದು ಭರವಸೆ ನೀಡಿ ಹೋದ. 

 ಈ ಹಸುವಿನ ಬಗ್ಗೆ ಇಡೀ ಹಳ್ಳಿಯ ಜನಕ್ಕೆ ಏನೋ ಪ್ರೀತಿ, ಮಮತೆ. ಅಮ್ಮಮ್ಮನೇ ಹಾಗೊಂದು ಭಾವನೆ ಅವರಲ್ಲಿ ಹುಟ್ಟೋ ಹಾಗೆ ಮಾಡಿದ್ದಳು ಅನಿಸತ್ತೆ. ಶುರುವಾಯಿತು ಮನೆಗೆ ಜನ ಜಾತ್ರೆ. ಬಂದವರೆಲ್ಲರ ಕಣ್ಣಲ್ಲಿ ನೀರು. ಆವತ್ತು ನಮಗ್ಯಾರಿಗೂ ಒಂದು ತುತ್ತನ್ನು ಬಾಯಲ್ಲಿಡಲು ಸಾಧ್ಯವಾಗಲಿಲ್ಲ. ಪದೇ ಪದೇ ಕೊಟ್ಟಿಗೆಗೆ ಹೋಗಿ ನೋವಿನಿಂದ ಕಣ್ಣೀರು ತೆಗೆಯುತಿದ್ದ ಭವಾನಿಯನ್ನು ಮುಟ್ಟುವುದು ಅದು ಹಸಿ ಹುಲ್ಲನ್ನೇನಾದರೂ ತಿನ್ನುತ್ತದೋ ಎಂದು ಅದರ ಬಾಯಿಗಿಟ್ಟು ತಿನ್ನಿಸಲು ಪ್ರಯತ್ನಿಸುವುದು. ಇದೊಂದು ರಾತ್ರಿ ಹೇಗಾದರೂ ಮಾಡಿ ಸಾಯದಿರುವಂತೆ ನೋಡಿಕೊಳ್ಳಪ್ಪ ಎಂದು ದೇವರನ್ನು ಬೇಡುವುದು ಹೀಗೆ ಹೇಗೋ ಆ ರಾತ್ರಿ ಅಂತೂ ಕಳೆಯಿತು. ಭವಾನಿ ಬದುಕಿದ್ದಳು. ಮನೆಮಂದಿಗೆ ಒಂದು ಚೂರು ನಿರಾಳ ಎಲ್ಲೋ ಕುಡಿಯೊಡೆದ ಭರವಸೆ. ಅಮ್ಮಮ್ಮ ಸೋಮವಾರ ಬೆಳಿಗ್ಗೆ ಎಂಟು ಗಂಟೆ ಬಸ್ಸಿಗೆ ಬಂದಿಳಿದಳು. ವಿಷಯ ತಿಳಿದವಳೇ ಕಂಗಾಲಾಗಿ ಕೊಟ್ಟಿಗೆಗೆ ಹೋಗಿ ಅಯ್ಯೋ ಇದೇನಾಯ್ತು ಮಗಳೇ ಎಂದು ಭವಾನಿಯ ಕತ್ತನ್ನು ಎತ್ತಿದ್ದೆ ಸೈ ಒಮ್ಮೆ ಅಮ್ಮಮ್ಮನನ್ನು ಕಣ್ ಬಿಟ್ಟು ನೋಡಿದ ಭವಾನಿ ಕ್ಷಣಾರ್ಧದಲ್ಲಿ ಕತ್ತನ್ನು ವಾಲಿಸಿದಳು. ಅಮ್ಮಮ್ಮನ ಮಡಿಲಲ್ಲೆ ಕಟ್ಟಿಕೊಂಡಿದ್ದ ಅವಳ ಬದುಕು ಅಲ್ಲೆ ಕೊನೆಯು ಆಯಿತು. ನಿನ್ನೆ ಆ್ಯಕ್ಸಿಡೆಂಟ್ ಆದಾಗಲೇ ಹೋಗುತಿದ್ದ ಜೀವವನ್ನು ಭವಾನಿ ಅಮ್ಮಮ್ಮನಿಗಾಗಿ ತಡೆದಿದ್ದಳೇನೋ. ಹೋಗುವ ಜೀವವನ್ನು ತಡೆದು ನಿಲ್ಲಿಸುವ ಪ್ರಕ್ರಿಯೆಯಲ್ಲಿ ಅದೆಷ್ಟು ನೋವು ತಿಂದಳೋ..

`ಸಂಬಂಧ ಅನ್ನೋದು ದೊಡ್ಡದು ಕಣಾ’. ಅದರಲ್ಲೂ ಅರ್ಥವಿಲ್ಲದ, ಸ್ವಾರ್ಥವಿಲ್ಲದ ಭಾವಗೀತೆಯಂತಹ ಇಂಥಹ ಸಂಬಂಧಗಳು. 

 

 

 

 

‍ಲೇಖಕರು avadhi

September 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

3 ಪ್ರತಿಕ್ರಿಯೆಗಳು

 1. srinivasagowda_mbs

  ಹೌದು ಕಣಾ, ಸಂಭಂಜ ಅನ್ನೋದು ತುಂಬಾ ದೊಡ್ಡದು, ನೀವು ಇಂತಾ ವಿಷಯ
  ಅವಧಿಯಲ್ಲಿ ಹಾಕಿ ನಮ್ದು ನಿಮ್ದು ಸಂಭಂಜ ಹೆಚ್ಟು ಮಾಡಿಕಂಬುಟ್ರಿ ಕಣಾ….

  ಪ್ರತಿಕ್ರಿಯೆ
 2. sughosh nigale

  ಹೌಜು…ಗೌಜ…..ಈಗ ನೋಜು ನನ್ನ ನಿನ್ನ ಸಂಬಂಜ ಇಲ್ವಾ…- ಸುಘೋಷ್ ನಿಗಳೆ

  ಪ್ರತಿಕ್ರಿಯೆ
 3. na. ravikuamr

  bahusha badukinalli tumba bele ulladdu adare belakattalaaraddendare sambadhakke matra.adu kevala manushya sambhandakke maatravalla idi jeeva jagattina ella kanakanagaligiruva sambhandakke anvayisuvantadu.mathomme namma balyada dinagalige kondoyda akshata avariga mattu avadhige danyavaadagalu mattomme sambham\ndhakke jayavaagali
  ravikumara na

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: