ಸಂವಾದಕ್ಕೆ ಆಹ್ವಾನಿಸುವಂತೆ ಬರೆವ ಆಸೆ

ಅವಧಿಗಾಗಿ ಮಾತ್ರ

ura2.jpg

“ಮಾತು ಸೋತ ಭಾರತ” ಅನಂತಮೂರ್ತಿಯವರ ಹೊಸ ಕೃತಿ. ಇಲ್ಲಿ ಮಾಗಿದ ಲೇಖಕನೊಬ್ಬನ ನಿವೇದನೆಗಳಿವೆ. ಇವತ್ತಿನ ವ್ಯವಸ್ಥೆಯ ಕುಟಿಲತನ ಮತ್ತು ಕಟುಕತನಗಳ ಕುರಿತ ತೀಕ್ಷ್ಣ ನೋಟಗಳಿವೆ. ಉತ್ತಮ ನಾಳೆಗಳ ಕುರಿತ ಅದಮ್ಯ ಹಂಬಲಗಳಿವೆ.

ಈ ಕೃತಿಯಲ್ಲಿನ ಮೊದಲ ಮಾತುಗಳಿಂದ ಹೆಕ್ಕಿದ ಕೆಲ ವಿಚಾರಗಳು ಅವಧಿಯ ಓದುಗರಿಗಾಗಿ.

—————————————

ura1.jpgಡಾ. ಯು ಆರ್ ಅನಂತಮೂರ್ತಿ

ಲೋಹಿಯಾರಂಥವರ ಜೊತೆ ನಾನು ಒಡನಾಡಲು ಸಾಧ್ಯವಾದದ್ದು ನನ್ನ ಅದೃಷ್ಟವೆಂದೇ ತಿಳಿದಿದ್ದೇನೆ. ಅವರ ವಿಚಾರಗಳ ಮೂಲಕ ಕರ್ನಾಟಕದಲ್ಲಿ ತೇಜಸ್ವಿ, ರಾಮದಾಸ್ ರಂಥವರು ನನ್ನ ಗೆಳೆಯರಾದರು. ಈ ಗೆಳೆತನದಲ್ಲಿ ಗುಮಾನಿಯೂ ಇತ್ತು, ಗೌರವವೂ ಇತ್ತು. ಈ ವಲಯದವರೇ ಆದ ಗತಿಸಿದ ಲಂಕೇಶ್, ಚಿಂತಕ ಪ್ರೊ.ಜಿ ಕೆ ಗೋವಿಂದರಾವ್ ಮತ್ತು ಮಾರ್ಕ್ಸ್ ವಾದಿಗಳಾದ ಡಾ. ರಾಮಕೃಷ್ಣರಂಥವರು ಸತ್ಯದ ಆಧಾರವಿಲ್ಲದೆ ನನ್ನನ್ನು ವೈಯಕ್ತಿಕವಾಗಿ ಸಂಶಯಿಸಿ ಟೀಕಿಸಿದ್ದೂ ಇದೆ. (ನನಗೆ ಮಂಜೂರಾಗಿದ್ದ ನಿವೇಶನವನ್ನು ಹಿಂದಕ್ಕೆ ಕೊಟ್ಟು, ಬೆಂಗಳೂರಲ್ಲಿ ವಾಸಿಸಲು ಕಟ್ಟಿದ ಮನೆಯೊಂದನ್ನು ಕೋರಿ ಪಡೆದಿದ್ದ ಸಂದರ್ಭದಲ್ಲಿ ಇದು ನಡೆದದ್ದು. ಪ್ರಶಸ್ತಿ ಪಡೆದ ಹಲವು ಲೇಖಕರಿಗೆ, ನನಗೆ ಮಾತ್ರವಲ್ಲ, ಶ್ರೀ ಮೊಯ್ಲಿಯವರು ನಿವೇಶನವನ್ನು ಮಂಜೂರು ಮಾಡಿದ್ದರು. ಶ್ರೀ ಪಟೇಲರು ಮುಖ್ಯಮಂತ್ರಿಯಾಗಿದ್ದಾಗ, ನನ್ನ ಕೋರಿಕೆಯ ಮೇರೆಗೆ ನನ್ನ ನಿವೇಶನವನ್ನು ಹಿಂದಕ್ಕೆ ಪಡೆದು, ಕಟ್ಟಿದ ಮನೆಯನ್ನು – ಬದಲಾದ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಹಲವರಿಗೆ ಕೊಟ್ಟಾಗಿನ ಬೆಲೆಗಿಂತ ಹೆಚ್ಚನ್ನು ಪಡೆದು – ನನಗೆ ಕೊಡಲಾಯಿತು. ಪಟೇಲರು ನನ್ನ ಬಾಲ್ಯದ ಗೆಳೆಯರೂ ಆಗಿದ್ದರೆಂಬುದು ನನ್ನ ಮೇಲಿನ ಗುಮಾನಿಗೆ ಕಾರಣವಾಯಿತು. ಕಾನೂನು ಬಾಹೀರವಾದದ್ದೇನೂ ಆಗಿರದಿದ್ದರೂ ನನ್ನ ಮೇಲೆ ವೈಯಕ್ತಿಕ ದಾಳಿಯಾಯಿತು.) ಇದರಿಂದ ನಾನು ವಿಚಲಿತನಾಗಿದ್ದು ಉಂಟು. ಯಾಕೆಂದರೆ ನಾನು ನನ್ನ ಟೀಕಾಕಾರರ ವೈಯಕ್ತಿಕ ಪ್ರಾಮಾಣಿಕತೆಯನ್ನು ಸಂಶಯಿಸಿರಲಿಲ್ಲ. ಯವುದಾದರೂ ಒಂದು ದಿನ ನನ್ನ ಬಗ್ಗೆಯೇ ಪಾರದರ್ಶಕವಾಗಿ ಬರೆದುಕೊಳ್ಳುವುದು ಸಾಧ್ಯವಾದಾಗ ನಾನು ಈಗ ಮರೆತಿರುವ ನೋವಿನ ಕಥೆಯನ್ನು ಹೇಳಿಕೊಳ್ಳುವೆ.

ಕೋಮುವಾದಿಗಳಿಗೆ, ಭ್ರಷ್ಟಾಚಾರಿಗಳಾದ ಧನಿಕರಿಗೆ ಆತ್ಮವಿಮರ್ಶೆ ಸಾಧ್ಯವಿಲ್ಲ; ಅಗತ್ಯವೂ ಇಲ್ಲ. ಆದರೆ ಇಂಥವರಿಗೆ ವಿರೋಧಿಯಾದವನು ತನ್ನ ಬಂಡಾಯಶೀಲತೆಯನ್ನೂ, ಅದರಿಂದ ಹುಟ್ಟುವ ತೋರುಗಣಿಕೆಯ ಚಪಲವನ್ನೂ ಆತ್ಮವಿಮರ್ಶೆಗೆ ಸದಾ ಒಳಪಡಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಲಂಕೇಶರು ಮಾತ್ರ ತಮ್ಮ ಸೋಗುಗಳನ್ನೂ, ಕಟುವಾದ ಅಭಿಪ್ರಾಯಗಳನ್ನೂ ತಮ್ಮ ಅತ್ಯುತ್ತಮ ಕಥೆಗಳಲ್ಲಿ – ಕೇವಲ ಮಂಡನೆಯಾಗದಂತೆ ಶೋಧನೆಯಾಗುವ ಕಥೆಗಳಲ್ಲಿ – ಮೀರುತ್ತಾರೆ. ತನ್ನನ್ನೇ ತಾನು ಗೇಲಿಮಾಡಿಕೊಳ್ಳುವ, ಅಹಂಭಾವದ ಸೋಂಕಿಲ್ಲದ ಹಾಸ್ಯದಲ್ಲಿ ತಾನೆಂಬುದು ಹಗುರಾಗಿಬಿಟ್ಟು, ಕಾಣುವ “ಅನ್ಯ”ದಲ್ಲೇ ತನ್ನನ್ನು ತೊಡಗಿಸಿಕೊಳ್ಳುವ ತನ್ಮಯತೆಯಲ್ಲಿ ತೇಜಸ್ವಿಯವರು ಬಂಡಾಯದ ಮಾತಿನ ಚಪಲದ ಸ್ವಪ್ರತಿಷ್ಠೆಯನ್ನು ಮೀರುತ್ತಾರೆ. ಹೀಗೆ ಮಾಡಲಾರದವರು ಚೀನಾದ, ಸೋವಿಯತ್ತಿನ, ಈಚೆಗೆ ಬಂಗಾಳದ ಲೆಫ್ಟಿಸ್ಟರಂತೆ ಬ್ಯಾಡ್ ಫೈತ್ ನಲ್ಲಿ ಬದುಕುವವರಾಗುತ್ತಾರೆ.

ನಮಗೆ ಈ ಕಾಲದ ಎಲ್ಲ ಸಂಕಟಗಳಿಗೂ, ಗೊಂದಲಗಳಿಗೂ ಕಾರಣರಾದ ಬಲಪಂಥೀಯರಂತೆಯೂ ಆಗದೆ, ಒಂದೊ ವಾಕ್ ಶೂರ ಅಥವಾ ರಕ್ತಪಿಪಾಸು ಎಡಪಂಥೀಯರಂತೆಯೂ ಆಗದೆ, ಒಳಬಾಳಿನಲ್ಲೂ ಗೋಚರಿಸುವ ವೈರುದ್ಧ್ಯಗಳನ್ನು ಒರೆಸಿಹಾಕದಂತೆ, ನಿಚ್ಚಳವಾಗಿ ತೋರುವಂತೆ, ನನ್ನ ಮೂಲದಲ್ಲಿರುವ ಕಾಣ್ಕೆಗಳನ್ನು ಕಳೆದುಕೊಳ್ಳದಂತೆ, ಓದುಗನನ್ನೂ ಈ ಸಂವಾದಕ್ಕೆ ಆಹ್ವಾನಿಸುವಂತೆ ನಾನು ಬರೆಯಬೇಕೆಂಬ ಆಸೆ ಉಳ್ಳವನು. ಇದರಲ್ಲಿ ನಾನು ಯಶಸ್ವಿಯಾಗಿದ್ದೇನೆ ಎಂದು ತಿಳಿದಿಲ್ಲ. ನಾನು ಬರವಣಿಗೆಯಲ್ಲಿ ತೋರುವ ಅರ್ಧ, ಸೂಕ್ಷ್ಮಜ್ಞನಾದ ಓದುಗ ಒದಗಿಸುವ ಇನ್ನರ್ಧದಿಂದ ಪೂರ್ಣವಾಗುತ್ತದೆ ಎಂಬ ಭರವಸೆಯ ಲೇಖಕ ನಾನು.

ರಾಜ್ಯಸಭೆಗೆ ನಾನು ಆಯ್ಕೆಯಾಗುವುದು ಅಸಾಧ್ಯವೆಂದು ಗೊತ್ತಿದ್ದೂ, ಅದೊಂದು ಭ್ರಷ್ಟಾಚಾರದ ವಿರುದ್ಧದ ಜೆಶ್ಚರ್ ಎಂದು ತಿಳಿದು ನಿಂತೆ. ನಿರೀಕ್ಷಿಸಿದಂತೆ ಸೋತೆ. ನನ್ನ ಬಗ್ಗೆ ಪ್ರೀತಿ ಮತ್ತು ಅಭಿಮಾನವಿರುವ ಕೆಲವು ಪರಿಚಿತರು, ಹಲವು ಅಪರಿಚಿತರು ನಾನು ಅಧಿಕಾರದ ಆಸೆಯಿಂದ ನಿಂತದ್ದೇ ಎಂದು ಗುಮಾನಿಸಿ ವಿಷಾದಿಸಿದರು. ನನನ್ನು ಕಂಡಾಗ ಕೋಪದಲ್ಲಿ ಟೀಕಿಸಿದರು. ಎಲ್ಲ ಮುಗಿದ ಮೇಲೆ ಈ ಚುನಾವಣೆಯ ನಾಟಕದಿಂದ ನಾನೇನೂ ಸಾಧಿಸಿದಂತೆ ಆಗಲಿಲ್ಲ ಎಂದು ಗೊತ್ತಾಯಿತು. ನನಗೂ ಸುದ್ದಿಯಲ್ಲಿ ಇರಬೇಕೆಂಬ ಆಸೆಯಿರಬಹುದೆಂದು ಸದಾ ನನ್ನನ್ನು ಟೀಕಿಸುವ, ಸಂಶಯಪಡುವ ನನ್ನ ಹೆಂಡತಿ, “ಇನ್ನು ಮುಂದೆ ತಪ್ಪಗಿರಿ, ನಿಮ್ಮನ್ನು ಓಲೈಸಿಕೊಂಡು ಬರುವ ಖದೀಮರಿಂದ ದೂರವಿರಿ” ಎಂದಳು.

ಅಧಿಕಾರದಲ್ಲಿ ಇರುವವರಿಗೆ ಪ್ರಿಯರಾಗಿ ಇರುವುದು, ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೇ ಇದ್ದಾಗಲೂ ಎಷ್ಟು ಅಪಾಯಕಾರಿಯೆಂಬುದು ನನಗೆ ಮನದಟ್ಟಾಗುತ್ತ ಹೋಗಿದೆ. ಈ ಬಗ್ಗೆ ನಾನು ಇನ್ನೂ ಹೆಚ್ಚು ಬರೆಯುವುದು ಇದೆ. ಇದನ್ನು ಬರೆದಾಗ, ಇನ್ನೂ ಹಸಿಯಾಗಿಯೇ ಉಳಿದಿರುವ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆಯೂ, ಅದರ ಹಿಂದಿರುವ ಭ್ರಷ್ಟಾಚಾರದ ಅಗೋಚರ ಕಬಂಧ ಬಾಹುವಿನ ಬಗ್ಗೆಯೂ ಬರೆದಂತಾಗುತ್ತದೆ.

ಕುವೆಂಪು ಕಾವ್ಯದ ನಮ್ಮ ವಿಮರ್ಶೆಗೆ ಕಾರಣ ಖಂಡಿತ ಜಾತಿ ರಾಜಕೀಯವಾಗಿರಲಿಲ್ಲ. ಅಪ್ರಜ್ಞಾಪೂರ್ವಕವಾಗಿಯೂ ಆಗಿರಲಿಲ್ಲ. ಕುವೆಂಪುರವರ ಘನ ರೆಟರಿಕ್ಕಿನಿಂದ ಬಿಡುಗಡೆಯಾಗುವುದು ಆ ಕಾಲದ ಅಗತ್ಯವಾಗಿತ್ತು.

ಆದರೆ ಹಿನ್ನೋಟದಲ್ಲಿ ನನಗೀಗ ಅನ್ನಿಸುವುದು ಕುವೆಂಪು ತನ್ನ ಕಾಲದ ನಾಡಿಮಿಡಿತಕ್ಕೂ ಭವಿಷ್ಯದ ನಮ್ಮ ಬೆಳವಣಿಗೆಗಳಿಗೂ ಸ್ಪಂದಿಸಿದ ಯುಗದ ಕವಿ ಎಂದು. ಅವರಿಗೆ ಮಾತ್ರ ಸಲ್ಲುತ್ತ ಇದ್ದ, ಅವರು ತಪಸ್ವಿಯಾದ ಶೀಲದಿಂದಲೇ ಗಳಿಸಿಕೊಂಡ ಶೈಲಿ ಅವರದು. ಬೇರೆಯವರಲ್ಲಿ ಅದು ಹಾಸ್ಯಾಸ್ಪದವಾಗಿ ನಮಗೆ ಕಾಣುತ್ತ ಇತ್ತು- ಹಿಂದೆ ಮಾತ್ರವಲ್ಲ, ಈಗಲೂ. ಆದರೆ ಈ ಎಲ್ಲ ನಮ್ಮ ಅನುಮಾನಗಳನ್ನು ಮೀರಿ ನಾವು ಕಾಣಲೇಬೇಕಾದದ್ದು ಏನೆಂದರೆ, ಕಾದಂಬರಿಗಳಲ್ಲಿ ಮಾತ್ರವಲ್ಲದೆ ವಿಮರ್ಶೆಯಲ್ಲೂ, ನಾಟಕಗಳಲ್ಲೂ, ಅವರ ಕೆಲವು ಅತ್ಯುತ್ತಮ ಕವಿತೆಗಳಲ್ಲಿ ಕೂಡ ಅವರು ನಮ್ಮ ಕಾಲದ ದೊಡ್ಡ ಚೇತನಾ ಪುರುಷ.

ನಾನು ಮಾಡಿದ ಭೈರಪ್ಪನವರ “ಆವರಣ” ಕೃತಿಯ ಮೇಲಿನ ಭಾಷಣದ ತಮ್ಮ ವರದಿಯನ್ನು ಮಾತ್ರ ಆಧರಿಸಿ, ನನ್ನ ಭಾಷಣದ ಸಾರಾಂಶವನ್ನು ನಾನು ಕೋರಿದರೂ ಹಾಕದೆ ನನ್ನಮೇಲೆ ಒಂದು ಪತ್ರಿಕೆ (ಎರಡು ಪತ್ರಿಕೆಗಳು? ಇನ್ನೊಂದನ್ನು ನಾನು ಓದಲು ಹೋಗಲಿಲ್ಲ) ನಡೆಸಿದ ಆಧುನಿಕ ಎಸ್ ಎಂ ಎಸ್ ದಾಳಿ ಹಿಂದೆಂದೂ ನಡೆಯದ ಲೇಖಕನೊಬ್ಬನ ಮೇಲಿನ ದುಷ್ಟ ಬಲಿಷ್ಠರ ಕ್ರೂರ ಆಕ್ರಮಣವಾಗಿತ್ತು. ಕೋಮುವಾದವನ್ನು ಟೀಕಿಸಿ ನಾನು ಬರೆದಿರುವ ಹಲವು ಲೇಖನಗಳಲ್ಲಿ, ಭಾಷಣಗಳಲ್ಲಿ ಕೋಮುವಾದಿಗಳನ್ನು ಹೀಯಾಳಿಸುವುದು ಮಾತ್ರ ನನ್ನ ಗುರಿಯಲ್ಲ. ನಾನು ಪ್ರೀತಿಸುವ ಹಲವರು, ಇನ್ನೆಲ್ಲ ವಿಷಯಗಳಲ್ಲೂ ಸಾತ್ವಿಕರಾದ ಸಂಸಾರಿಗಳೂ ಕೂಡ, ಅಪ್ರಜ್ಞಾಪೂರ್ವಕವಾಗಿ ಮುಸ್ಲಿಮರನ್ನು ದ್ವೇಷಿಸುತ್ತಾರೆಂಬುದನ್ನು ಗಮನಿಸಿ ನಾನು ಆತಂಕಗೊಂಡಿದ್ದೇನೆ. ನನಗೆ ಇದೊಂದು ಬಗೆಯ ವೈರಸ್ ಎನ್ನಿಸಿದೆ.

ತುಳಸೀದಾಸ, ಕಂಬನ್, ಎಳುತ್ತಚ್ಚನ್, ವಾಲ್ಮೀಕಿ, ಕುವೆಂಪು, ಗಾಂಧಿಯಂಥವರು ಜೀವಂತಗೊಳಿಸಿದ ರಾಮನನ್ನು ಅವನ ಭಕ್ತರೆಂದು ತಿಳಿದವರೇ ನಾಶ ಮಾಡುವುದನ್ನು ನಾವು ಕಣ್ಣಾರೆ ನೋಡಬೇಕಾಗಿದೆ. ಸಾಮಾನ್ಯ ಮನುಷ್ಯನೊಬ್ಬ ತನ್ನ ಕಷ್ಟದಲ್ಲೂ ಸುಖದಲ್ಲೂ ನೆನೆಸುವ ರಾಮನೇ ಬೇರೆ; ಚರಿತ್ರೆಯ ಒಬ್ಬ ವ್ಯಕ್ತಿಯಂತೆ ಭಾವಿಸಿ ಓಟಿಗಾಗಿ ಬಳಸುವ ಈ ರಾಮನೇ ಬೇರೆ.

ಭಾರತ ವಿಭಜನೆಯ ಕಾಲದಲ್ಲಿ ನಮ್ಮಂಥ ಮನುಷ್ಯರೇ ರಾಕ್ಷಸರಾದದ್ದನ್ನು ನೋಡಿದ್ದೇವೆ. ಕರ್ನಾಟಕದ ನಾವೂ ಇಲ್ಲಿ ಗುಜರಾತನ್ನು ಸೃಷ್ಟಿಸಿದರೆ, ನಮ್ಮಂಥವರು ಯಾರಿಗೆ ಬರೆಯಬೇಕು? ನಮ್ಮ ಅದೃಷ್ಟವೆಂದರೆ ಕರ್ನಾಟಕದ ಮುಸ್ಲಿಮರು “ಆವರಣ”ವೆಂಬ ಕೃತಿಯೂ, ಅದರ ಬೆಂಬಲಿಗರಾದ ನಮ್ಮ ಅತ್ಯಧಿಕ ಪ್ರಸಾರದ ಪತ್ರಿಕೆಯೊಂದರ ಕಟ್ಟಾ ಬೆಂಬಲಿಗರೂ  ನಿರೀಕ್ಷಿಸಿದಂತೆ ದಂಗೆ ಏಳಲೇ ಇಲ್ಲ. 

‍ಲೇಖಕರು avadhi

October 4, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This