“ಭಾಮಿನಿ ಷಟ್ಪದಿ”
ಚೇತನಾ ತೀರ್ಥಹಳ್ಳಿ
ನಿನ್ನನ್ನ ಏನೂ ಅಂತ ಪರಿಚಯ ಮಾಡಿಸ್ಬೇಕಿತ್ತು ನಾನು?
ಅವನು ಕೇಳಿದ್ದ.
ಕೈಲಿದ್ದ ಮೊಬೈಲು ಬಿಸಾಕಿ ನೆಲಕ್ಕೆ ಹೆಜ್ಜೆ ಬಡಿಯುತ್ತ ರೂಮೊಳಗೆ ಹೋಗಿ ಬಾಗಿಲು ಬಡಚಿಕೊಂಡಳು.
*
ಎರಡು ವರ್ಷವಾಗಿತ್ತು ಅವರ ಸ್ನೇಹಕ್ಕೆ. ಅದು ಪ್ರೇಮವೂ ಆಗಿತ್ತು. ಮದುವೆ – ಸಂಸಾರ ಇತ್ಯಾದಿಯಲ್ಲಿ ನಂಬಿಕೆ ಇರದೆ ಒಂದೇ ಗೂಡಲ್ಲಿ ಒಟ್ಟೊಟ್ಟಿಗೆ ಕಿತ್ತಾಡಿಕೊಂಡು ಉಳಿದಿದ್ದರು.
ಅವಳು ದಿಟ್ಟ ಹುಡುಗಿ. ದಿನದಿನವೂ ಅಪ್ಪ ಅಮ್ಮನಿಗೆ ಝಾಡಿಸಿ ಒದೆಯೋದನ್ನ ನೋಡುತ್ತಲೇ ಬೆಳೆದಿದ್ದಳು. ಉಪ್ಪಿಟ್ಟು ಮಾಡಿದ ಹಸಿ ಬಾಣಂತಿ ಚಿಕ್ಕಮ್ಮನನ್ನ ಚಿಕ್ಕಪ್ಪ ಕುತ್ತಿಗೆ ಹಿಡಿದು ನೂಕಿದಾಗ ಅವಳು ಸತ್ತೇ ಹೋಗಿದ್ದಳು. ಹಾಡುಹಗಲೇ ಅಪ್ಪನೊಟ್ಟಿಗೆ ಸೇರಿ ಅಂವ ಹೆಣವನ್ನ ಬಾವಿಗೆ ನೂಕಿ, ‘ಬಾಣಂತಿ ಸನ್ನಿ ಹಿಡಿದು ಸತ್ತಳು’ ಅಂತ ಮಾವನ ಮನೆಗೆ ತಾರು ಕಳಿಸಿದ್ದ.
ಇದೆಲ್ಲ ನೋಡುತ್ತ ಬೆಳೆದ ಪರಿಣಾಮವೋ ಏನೋ, ಅವಳೊಟ್ಟಿಗೆ ಗಂಡಸಿನೆಡೆಗೆ ಅರಿವಿಲ್ಲದ ಹಾಗೊಂದು ತಾತ್ಸಾರ ಕೂಡ ಬೆಳೆಯುತ್ತಿತ್ತು. ಅದೇ, ಅವಳು ಮದುವೆಯಾಗದೆ ಉಳಿಯುವ ಹಾಗೆ ಪ್ರೇರೇಪಿಸಿತ್ತು.
ಆದರೇನು? ಕಾಮ ಗಂಡಸಾದರೂ ಅವನನ್ನ ದ್ವೇಷಿಸಿ ಗೆಲ್ಲೋದು ಸುಲಭವಲ್ಲವಲ್ಲ!? ಹಾಗಂತ ಅವಳದು ಕಚ್ಚಾ ಹರೆಯದ ಸೆಳೆತವೇನೂ ಆಗಿರಲಿಲ್ಲ. ಜತೆಯಲ್ಲಿ ಕ್ಯಾಮೆರಾ ನೇತುಹಾಕಿಕೊಂಡು ಊರೂರು ಅಲೆಯಲು ಬರುತ್ತಿದ್ದ ಅವನು ತನಗೆ ಎಲ್ಲ ರೀತಿಯಲ್ಲೂ ಸರಿಹೊಂದುವ ಹಾಗೆ ಕಂಡ.
ಅಂವ ಕೂಡ ಮೂವತ್ತು ದಾಟಿದ್ದರೂ ಮದುವೆಯಾಗದೆ ಇದ್ದುಬಿಟ್ಟಿದ್ದ. ಅಲೆಮಾರಿ ಬದುಕಿನ ತನ್ನನ್ನ ಹೆಂಡತಿಯಾಗಿ ಬರುವವಳು ಕಣ್ಣೀರಲ್ಲಿ ಕಟ್ಟಿಹಾಕುವಳೆಂಬ ಹೆದರಿಕೆಯಿತ್ತಂತ ಅವನಿಗೆ!
ಹೀಗೆ ಕಟ್ಟಿಸಿಕೊಳ್ಳಲು ಇಷ್ಟವಿರದ ಅವರಿಬ್ಬರೂ ಎರಡು ಮನೆಯಿಂದ ಒಂದಕ್ಕೆ ಶಿಫ್ಟಾದರು. ಯಾವ ಕರಾರು- ತಕರಾರುಗಳೂ ಇಲ್ಲದೆ ಒಟ್ಟಿಗೆ ಇರಲು ಶುರುವಿಟ್ಟಿದ್ದರು.
ಮೊದಮೊದಲು ಎಲ್ಲ ಚೆಂದವಿತ್ತು. ಅವಳು ಮೊಟ್ಟೆ ಒಡೆದರೆ ಅಂವ ಆಮ್ಲೆಟ್ ಬೇಯಿಸುವನು. ಅಂವ ವಾಶಿಂಗ್ ಮೆಶೀನು ಚಾಲೂ ಮಾಡಿದರೆ ಅವಳು ಬಟ್ಟೆ ಒಣಗಿಸುವಳು. ಹೀಗೇ, ಕೆಲಸ- ಖರ್ಚುಗಳೆರಡೂ ಸಮ ಸಮ ಹಂಚಿಕೆಯಾಗಿತ್ತು.
ಹಾಳು ಹೆಣ್ತನ ಸುಮ್ಮನಿರಬೇಕಲ್ಲ? ಅಂವ ಪಾತ್ರೆ ತೊಳೆಯೋದು, ಕಸ ಗುಡಿಸೋದು ಇವೆಲ್ಲ ಅವಳನ್ನ ಕಲಕಿ ‘ಪಾಪ’ ಅನಿಸುವ ಹಾಗಾಗಿಬಿಡುತ್ತಿತ್ತು. ಬರಬರುತ್ತ ಅವೆಲ್ಲ ಕೆಲಸಗಳಿಂದ ಅಂವನ್ನ ಆಚೆ ಹಾಕಿದಳು.
ಅಂವ ಅದನ್ನ ಹೇಗೆ ಅರ್ಥೈಸಿಕೊಂಡನೋ? ಮನೆಯಲ್ಲಿ ಸರಿ ತಪ್ಪು ಶುರುಮಾಡಿದ. ಅಂತೂ ಮದುವೆಯಿಲ್ಲದ ಸಂಸಾರ ಅಧಿಕೃತವಾಗಿ ಆರಂಭವಾಯಿತು!
ಜತೆಯಿರಲು ಶುರು ಮಾಡಿದಾಗಿಂದಲೂ, ಅದಕ್ಕೆ ಮೊದಲೂ ಅವರು ಒಟ್ಟೊಟ್ಟಿಗೆ ಊರೂರು ಅಲೆಯೋದಿತ್ತು. ಅವರ ಕೆಲಸವೇ ಅಂಥದ್ದು. ಆಗೆಲ್ಲ ಎದುರು ಸಿಕ್ಕವರಿಗೆ ‘ಇಂವ ನನ್ನ ಗೆಳೆಯ’, ‘ಇವಳು ನನ್ನ ಗೆಳತಿ’ ಅಂತೆಲ್ಲ ಪರಿಚಯ ಮಾಡಿಸೋದಿತ್ತು. ಆಗ ಅದೊಂದು ಹೆಮ್ಮೆಯ ಸಂಗತಿ.
ಆದರೆ, ಇತ್ತೀಚೆಗೆ ಎಲ್ಲವೂ ಹಾಗೇ ಉಳಿದಿಲ್ಲ! ಅದನ್ನವಳು ಗಮನಿಸ್ತಿದಾಳೆ.
ಅದೊಮ್ಮೆ, ಅವಳ ಮೆಚ್ಚಿನ ತಾಣಕ್ಕೆ ಅಂವ ಹೊರಟಿದ್ದ. ಓಹ್! ಕೆಲಸ ಮುಗಿಸಿ ಒಂದಿನ ಹಾಯಾಗಿದ್ದು ಬರಬಹುದು!! ಖುಶಿಯಾದಳು.
ರೆಡಿಯಾಗಿ ನಿಂತಿದ್ದ ಅವಳ ಸೂಟ್ ಕೇಸು ನೋಡಿದ ಅಂವ. ನಾಲ್ಕು ದಿನ ನಾನೆಲ್ಲೋ ಹೋಗಿಬರುವುದಿದೆ ಅಂದು ಹೊರಟುಬಿಟ್ಟ. ಅವಳ ಪಾಡಿಗೆ ಅವಳೂ ಹೊರಡಲು ಯಾವುದರ ಅಡ್ಡಿಯಿರಲಿಲ್ಲ. ಆದರೆ, ಹಾಗೆ ಅವನೊಟ್ಟಿಗೆ ಕರೆಯದೆ ಹೋಗುವುದು ಸ್ವಾಭಿಮಾನಕ್ಕೆ ಕೇಡು!
ಕೂದಲು ತಿರುವುತ್ತ ತನ್ನ ಯೋಚನೆಗಳಿಗೆ ತಾನೇ ಸಿಟ್ಟಾಗಿ ಉಗಿದುಕೊಂಡಳು. “ಬೇರೇನೋ ಕೆಲಸವಿದ್ದೀತು, ಇದಕ್ಯಾಕೆ ಹೊಸತೊಂದು ಅರ್ಥ ಹುಡುಕಿ ಮೂಲೆ ತಡಕಬೇಕು? ಶುದ್ಧ ಹೆಂಗಸರ ಹಾಗೆ!!” ಅಂತ ನಕ್ಕು ಹಗುರಾಗಲು ಹೆಣಗಿದಳು.
ಅಂವ ಕೆಲಸ ಮುಗಿಸಿ ಬಂದ ದಿನ ಇವಳು ತನ್ನ ಕೆಲಸಕ್ಕೆ ಹೋಗಿದ್ದಳು. ಅವಳು ಬರುವ ಹೊತ್ತಿಗೆ ಇಂವ ಮತ್ತೆಲ್ಲಿಗೋ ಹೊರಡುವ ತಯಾರಿ ನಡೆಸಿದ್ದ. ಬರಬರುತ್ತ ಹಾಗೆ ಅವಳನ್ನ ಬಿಟ್ಟು ತಾನೊಬ್ಬನೆ ಹೊರಡುವುದು ಆದತ್ತಾಗಿಬಿಟ್ಟಿತು ಅವನಿಗೆ. ಹಾಗೆಲ್ಲ ಹೋಗುವ ಮುನ್ನ, ಬಂದಮೇಲೆ ಅವನ ಒಲವು ನೂರು ಪಟ್ಟಾಗುತ್ತಿತ್ತು ಅವಳಮೇಲೆ. ಅಂವ ಈಗ ಕೊಂಚ ಪಾಪ್ಯುಲರ್ ಕೂಡ ಆಗಿದ್ದ. ಅಂವ ತೆಗೆಯುವ ಫೋಟೋಗಳು, ಅವನ ಬರವಣಿಗೆ- ಇವೆಲ್ಲ ಭಾರೀ ಸುದ್ದಿ ಮಾಡಿದ್ದವು. ಜನ ಅಂವನ್ನ ಗುರುತಿಸತೊಡಗಿದ್ದರು. ಅವನ ದುಡಿಮೆಯೂ ಹೆಚ್ಚಾಗತೊಡಗಿತು. ಅವಳು ಮನೆ ಮುದ್ದಾಗಿರಲಿ ಅಂತ ಅಂವ ಆಶಿಸತೊಡಗಿದ. ಬೋರು ಅನ್ನುತ್ತಿದ್ದ ಅವಳಿಗೆ ತನ್ನ ಕೆಲಸಗಳಲ್ಲಿ ಪಾಲು ಕೊಟ್ಟು ಮನೇಲಿ ಕುಂತು ಮಾಡು ಅನ್ನತೊಡಗಿದ! ಇವಳ ಹೆಜ್ಜೆ ತಿರುಗಾಟಕ್ಕೆ ತುಡಿಯತೊಡಗಿತು!
ಅದೆಂಥ ಕಮಿಟ್ ಮೆಂಟೋ ಹೆಣ್ಣುಮಕ್ಕಳದು! ಮನೆ- ಮದುವೆ ಬೇಡವೆನ್ನುತ್ತಲೆ ಅವನಿಗೆ ತಾನು ಬದ್ಧಳಾಗಿ ಉಳಿದುಬಿಟ್ಟಳು ಅವಳು. ತನ್ನೆಲ್ಲ ಪ್ರೀತಿಯನ್ನ ಅವನ ಮೇಲೆ ಸುರಿಸುತ್ತ, ತನ್ನ ಆಸೆಗಳನ್ನ ಹಾಗೇ ಬಲಿ ಕೊಡುತ್ತ…
ಅಷ್ಟಾದರೂ ಅವಳಿಗೆ ತನಗೇನಾಗುತ್ತಿದೆ ಅನ್ನುವ ಖಬರಿರಲಿಲ್ಲ. ಅವಳು ತೀರ ಆಸೆ ಪಟ್ಟಿದ್ದ ಮಹತ್ವದ ಶೂಟಿಂಗಿಗೆ ಹೋಗುವಾಗ ಅಂವ ಅವಳನ್ನ ಬೇಡ ಅಂದುಬಿಟ್ಟಿದ್ದ. ಅದು ಅವನ ಅಪ್ಪ ಅಮ್ಮ ಇರುವ ಊರಾಗಿತ್ತು. ಅಲ್ಲಿಗೆ ಹೋಗಲೆಂತಲೇ ಅವಳು ಹೊಸ ಸೀರೆ ಕೊಂಡಿಟ್ಟಿದ್ದಳು! ಯಾಕೆ? ಅಂಥದೊಂದು ತಯಾರಿಗೆ ಅವಳನ್ನು ಹಚ್ಚಿದ್ದ ಒಳಗಿನ ಸಂಭ್ರಮ ಯಾವುದಿತ್ತು?
ಅದಲ್ಲ ವಿಷಯ, ಅಂವನ್ನ ಅವಳು ಬೇಡವನ್ನುವ ಹಾಗೆ ಮಾಡಿದ್ದ ಒತ್ತಡ ಎಂಥದ್ದು?
*
ಇನ್ನು ಸಹಿಸದಾದಳು. ‘ಇನ್ನೆಷ್ಟು ದಿನ ಒಳಗೊಳಗೆ ನಾನೊಬ್ಬಳೆ ಗುದ್ದಾಡಿಕೊಳ್ಳಲಿ?’ ಅವಡುಗಚ್ಚಿದಳು. ನೇರಾನೇರ ತರಾಟೆಗೆ ನಿಂತಳು, “ಹೇಳು ಯಾಕೆ ನನ್ನ ಜತೆ ತಪ್ಪಿಸಿ ತಿರುಗಾಡುತ್ತೀ ಇತ್ತೀಚೆಗೆ?”
ಅಂವ ತಡವರಿಸಿದ. “ಜನ ಈಗ ನನ್ನ ಗುರುತು ಹಿಡೀತಾರೆ… ಜತೆಯಲ್ಲಿ ನೀನಿದ್ದರೆ… ” ಅವನ ದನಿಯಲ್ಲಿ ಗಿಲ್ಟಿನ ವಾಸನೆ.
“ಇದ್ದರೆ? ಏನೀಗ? ಮೊದಲೂ ಇರ್ತಿದ್ದೆನಲ್ಲ!?”
“ಆಗಿನದು ಬೇರೆ ಮಾತು. ಈಗ, ನಿನ್ನನ್ನ ನಾನು ಏನಂತ ಪರಿಚಯ ಮಾಡಿಕೊಡಲಿ? ನಾಳೆ ಪೇಪರಲ್ಲಿ ಬರೆದರೆ…”
ಅಂವ ಇನ್ನೂ ಏನೇನು ಹೇಳ್ತಿದ್ದನೋ?
ಅವಳೆಸೆದ ಮೊಬೈಲು ಹಾಲ್ ನಲ್ಲಿ ಬಿದ್ದಿತ್ತು. ರೂಮಿನ ಕದ ಧಬಾರನೆ ಮುಚ್ಚಿತ್ತು.
ಚೇತನಾ,
ನೀವು ಕಥೆ ಬರೆಯುತ್ತಿಲ್ಲ. ಎಷ್ಟೊಂದು ಜನರ ಮನಸಿನ ರೋಗಕ್ಕೆ ಕನ್ನಡಿ ಹಿಡಿಯುತ್ತಿದ್ದೀರಿ. ನೀವು ಬರೆದದ್ದು ಓದಿದ ನಂತರ ಸಿಕ್ ಅನಿಸುತ್ತದೆ. ಆದರೆ ನಂತರ ನಿಧಾನಕ್ಕೆ ಅದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುತ್ತೆ. ಬೆತ್ತಲಾಗದೆ ಬಯಲು ಸಿಕ್ಕದಿಲ್ಲಿ.. ಎಂಬುದಂತೂ ನನಗೆ ಅರ್ಥವಾಗಿದೆ.
-ಜಿ ಎನ್ ಮೋಹನ್
ಚೇತನಾ, ಕಥೆ ಸೊಗಸಾಗಿದೆ. ಕೆಲವೇ ಕೆಲವು ವಾಕ್ಯಗಳಲ್ಲಿ ಹೇಳಬೇಕಾದುದನ್ನು
ಪರಿಣಾಮಕಾರಿಯಾಗಿ ಹೇಳುವ ಕಲೆ ನಿಮಗೆ ಸಿಧ್ಢಿಸಿದೆ. ಬದುಕಿರುವೆವು ಎಂದು
ಭಾವಿಸಿರುವ ಬಹಳಷ್ಟು ಜನರು ಕೇವಲ ಮನುಷ್ಯರು. ಅನೇಕ ಸಲ ಇದು ಅರ್ಥವಾಗುವ
ಹೊತ್ತಿಗೆ ತೀರಾ ತದವಾಗಿರುತ್ತದೆ…
-ನಾಸೋ