ಸಣ್ಣ ಕಥೆ

ನಿರುದ್ಯೋಗಿ (ಸಣ್ಣ ಕತೆ)

– ಟಿ.ತಿಮ್ಮಪ್ಪ

ಅವನ ಹೆಸರು ಆದರ್ಶ. ಪದವಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಅವನ ಅಪ್ಪ ಅಮ್ಮನಿಗೆ ಮಗನ ಬಗ್ಗೆ ತುಂಬಾ ಹೆಮ್ಮೆಯಾಗಿತ್ತು. ಅವನಿಗೆ ಮುಂದೆ ಓದುವ ಆಲೋಚನೆಯಿರಲಿಲ್ಲ. ಅಪ್ಪ ನಿವೃತ್ತರಾಗಿದ್ದರು. ಸ್ವಂತ ಮನೆಯಿತ್ತು. ನಿವೃತ್ತಿ ವೇತನದ ಹಣದಲ್ಲಿ ಸಂಸಾರ ಸಾಗುತ್ತಿತ್ತು. ಆದರ್ಶನಿಗೆ ಯಾವುದಾದರೂ ಕೆಲಸಕ್ಕೆ ಸೇರಿ ಅಪ್ಪ ಅಮ್ಮನಿಗೆ ಆಸರೆಯಾಗಬೇಕೆಂಬ ಹಂಬಲವಿತ್ತು. ಪದವಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದಿದ್ದವನಿಗೆ ಇನ್ನಿಲ್ಲದ ಆತ್ಮ ವಿಶ್ವಾಸ. ಯಾವುದೇ ಕೆಲಸಕ್ಕೆ ಪ್ರಯತ್ನಿಸಿದರೂ ಸಿಕ್ಕೇ ಸಿಗುತ್ತದೆ. ಇಷ್ಟೊಂದು ಉತ್ತಮ ಅಂಕ ಗಳಿಸಿರುವ ನನಗಲ್ಲದೆ ಇನ್ಯಾರಿಗೆ ಕೆಲಸ ಕೊಡುತ್ತಾರೆ ಎಂಬ ಭರವಸೆ ಅವನಿಗಿತ್ತು. ಅವಕಾಶಗಳಿಗಾಗಿ ಕಾಯುತ್ತಿದ್ದ. ಅಪ್ಪ ಹಾಸಿಗೆ ಹಾಸುತ್ತಿದ್ದರು. ಅಮ್ಮ ಹೊದಿಕೆ ಹೊದಿಸಿ ಮಲಗಿಸುತ್ತಿದ್ದರು. ಇವನು ಹೊದಿಕೆಯೊಳಗೆ ಕನಸು ಕಾಣುತ್ತಿದ್ದ. ದೊಡ್ಡ ಕೆಲಸ, ಕೈತುಂಬಾ ಸಂಬಳ, ಕಾರು, ಮನೆ ಎಲ್ಲವೂ ಕನಸಿನಲ್ಲಿ ಕಾಣುತ್ತಿದ್ದವು. ರೋಮಾಂಚನಗೊಳ್ಳುತ್ತಿದ್ದ. ಪ್ರತಿದಿನ ಸಂಜೆ ಮನೆಯ ಮುಂದಿನ ರಸ್ತೆಯಲ್ಲಿ ನಾಯಿ ಹಿಡಿದು ಹೋಗುತ್ತಿದ್ದ ಟೀ ಶರ್ಟ, ಚಡ್ಡಿ ಧರಿಸಿಕೊಂಡು ದಂತದ ಗೊಂಬೆಯಂತಿದ್ದ ಹುಡುಗಿ ಹೊದಿಕೆಯೊಳಗೆ ಬಂದು ಮುತ್ತು ಕೊಟ್ಟಂತೆ ಭಾಸವಾಗಿ ಇವನಿಗೆ ಉನ್ಮಾದವೇರುತ್ತಿತ್ತು. ಉನ್ನತ ಹುದ್ದೆ ಪಡೆಯಲೆಂದು ಮೂರ್ನಾಲ್ಕು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡ. ಅಪ್ಪ ಹೇಳುತ್ತಿದ್ದರು ‘ಪರೀಕ್ಷೆಗೆ ಸ್ವಲ್ಪ ಓದಿಕೊಳ್ಳೋ’ ಎಂದು. ‘ಅದರಲ್ಲಿ ಓದೋದೇನಿದೆ ಅಪ್ಪ. ನನಗೆ ಗೊತ್ತಿಲ್ಲದೇ ಇರೋದು ಏನಿದೆ? ಅದೂ ಅಲ್ದೆ ಈ ಪರೀಕ್ಷೆಗಳಲ್ಲಿ ಇನ್ನೇನು ಕೊಟ್ಟಿರ್ತಾರೆ? ತಿರುಗಾಮುರುಗಾ ಅದೇ ಪ್ರಶ್ನೆಗಳು’ ಎಂದು ಆತ್ಮ ವಿಶ್ವಾಸದಿಂದ ನುಡಿದ. ಅಪ್ಪನಿಗೆ ಬೆಳೆದ ಮಗನಿಗೆ ಏನು ಬುದ್ಧಿ ಹೇಳುವುದೆಂದು ತೋಚದೆ ಸುಮ್ಮನಾದರು. ಸ್ನೇಹಿತರೊಂದಿಗೆ ಸಮಯ ಕಳೆಯಲು ಅಪ್ಪ ಡಿಗ್ರಿ ಓದುವಾಗ ಕೊಡಿಸಿದ್ದ ಬೈಕ್ ಇತ್ತು. ಅಮ್ಮ ಹೇಗೋ ಮಾಡಿ ಅಪ್ಪನ ಪೆನ್ ಷನ್ ಹಣದಲ್ಲಿಯೇ ಉಳಿಸಿ ಪೆಟ್ರೋಲಿಗೆಂದು ಇವನಿಗೆ ಆಗಾಗ ಹಣ ನಿಡುತ್ತಿದ್ದರು. ತನ್ನ ಸ್ನೇಹಿತರ ಜೊತೆ ತಾನು ತೆಗೆದುಕೊಂಡಿರು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ‘ಸ್ವಲ್ಪ ಓದ್ಕೋಬೇಕು ಕಣ್ರೋ ಬರ್ತೀನಿ’ ಎಂದು ಹೊರಟರೆ ಅವನ ಸ್ನೇಹಿತರೆಲ್ಲಾ ‘ಅದ್ರಲ್ಲಿ ಓದೋದೇನಿದೆ ಬಿಡೋ ಮಗಾ, ನೀನು ಯಾವ ಪರೀಕ್ಷೆ ತಗೋಂಡ್ರು ಪಾಸಾಗ್ತೀಯ, ನಿಂದು ಒಂಥರಾ ವಿಶ್ವೇಶ್ವರಯ್ಯನ ತಲೆ ಕಣೋ ಮಗಾ’ ಎಂದು ಇವನನ್ನು ಉಬ್ಬಿಸುತ್ತಿದ್ದರು. ರಾತ್ರಿಯಾಗುವವರೆಗೂ ರಸ್ತೆ ಬದಿಯಲ್ಲಿ ಕುಳ್ಳಿರಿಸಿಕೊಂಡು ಅಲ್ಲಿ ಓಡಾಡುತ್ತಿದ್ದ ಹುಡುಗಿಯರ ಸೌಂದರ್ಯದ ಬಗ್ಗೆ, ಅವರ ವೇಷಭೂಷಣದ ಬಗ್ಗೆ, ಇತ್ತೀಚೆಗೆ ಬಿಡುಗಡೆಯಾಗಿರುವ ಪಿಕ್ಚರ್ ಬಗ್ಗೆ, ಐಪಿಎಲ್ ಕ್ರಿಕೆಟ್ ಮ್ಯಾಚಿನ ಬಗ್ಗೆ ಪುಂಖಾನುಪುಂಖವಾಗಿ ಹರಟೆ ಕೊಚ್ಚುತ್ತಿದ್ದರು. ಇವನು ಪರೀಕ್ಷೆಯ ಎರಡು ಮೂರು ದಿನಗಳ ಹಿಂದೆ ಹಗಲು ರಾತ್ರಿ ನಿದ್ದೆಗೆಟ್ಟು ಓದಿ ಪರೀಕ್ಷೆಗಳನ್ನು ಬರೆದ. ಚೆನ್ನಾಗಿಯೇ ಬರೆದಿದ್ದೇನೆ ಆಯ್ಕೆಯಾಗುವುದು ಖಂಡಿತ ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡ. ಫಲಿತಾಂಶಕ್ಕಾಗಿ ಕಾಯುತ್ತಾ ಅದೇ ಸ್ನೇಹಿತರ ಜೊತೆ ಅದೇ ರಸ್ತೆಯಲ್ಲಿ ನಿಲ್ಲಿಸಿದ ಬೈಕಿನ ಮೇಲೆ ಕುಳಿತುಕೊಂಡು ಹರಟೆ ಕೊಚ್ಚುತ್ತಾ ಸಮಯ ಕಳೆಯತೊಡಗಿದ. ಫಲಿತಾಂಶಗಳೂ ಬಂದವು. ಇವನು ಯಾವ ಪರೀಕ್ಷೆಯಲ್ಲಿಯೂ ಸಂದರ್ಶನಕ್ಕೆ ಆಯ್ಕೆಯಾಗಿರಲಿಲ್ಲ. ಚೆನ್ನಾಗಿಯೇ ಬರೆದಿದ್ದೆನಲ್ಲ ಎಂದು ಇವನಿಗೆ ಅಚ್ಚರಿಯಾಗತೊಡಗಿತು. ಫಲಿತಾಂಶ ಕೇಳಿದ ಸ್ನೇಹಿತರೆಲ್ಲಾ ‘ಏನೋ ಗೋಲ್ಮಾಲ್ ನಡೆದಿದೆ ಮಗಾ, ಎಲ್ಲಾ ಮೊದಲೇ ಬುಕ್ ಆಗಿರಬೇಕು, ಈ ಪರೀಕ್ಷೆ ಎಲ್ಲಾ ಕಣ್ಣೊರೆಸುವ ನಾಟ್ಕ ಇರ್ಬೇಕು ಕಣೋ’ ಎಂದು ಸಮಾಧಾನಪಡಿಸಿದರು. ಇವನಿಗೂ ಇರಬಹುದು ಎನಿಸಿತು. ತನ್ನ ಸಾಮರ್ಥದ ಬಗ್ಗೆ ಇದ್ದ ಆತ್ಮವಿಶ್ವಾಸ ಕುಗ್ಗಲಿಲ್ಲ. ದಿನಗಳು ಓಡತೊಡಗಿದವು. ಪದವಿ ಮುಗಿದು ಎರಡು ವರ್ಷವಾಯಿತು. ಯಾವ ಯಾವುದೋ ಪೇಪರಿನ ಉದ್ಯೋಗ ಜಾಹಿರಾತುಗಳನ್ನು ನೋಡಿ ಅರ್ಜಿ ಹಾಕಿ ಸಂದರ್ಶನಕ್ಕೆ ಹೋದ. ಎಂದಿನಂತೆ ಯಾವುದೇ ತಯಾರಿಯಿಲ್ಲದೇ ತುಂಬು ಆತ್ಮವಿಶ್ವಾಸದಿಂದ ಸಂದರ್ಶನಗಳನ್ನು ಎದುರಿಸಿದ. ಯಾವ ಕೆಲಸವೂ ಸಿಕ್ಕಲಿಲ್ಲ. ಇವನಿಗೆ ಎಲ್ಲಾ ಕೆಲಸಗಳಿಗೂ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುತ್ತಾರೆ, ಇದೆಲ್ಲಾ ಬರೀ ನಾಟಕ, ಇಡೀ ಸಮಾಜವೇ ಮೋಸದಿಂದ ತುಂಬಿದೆ ಎಂದು ಆಕ್ರೋಶ ಹುಟ್ಟಿತು. ಪದವಿ ಮುಗಿದು ಎರಡು ವರ್ಷವಾಯಿತು ಮಗನಿಗೆ ಯಾವ ಕೆಲಸವೂ ಸಿಗಲಿಲ್ಲ ಎಂದು ಇವನ ಅಪ್ಪ ಅಮ್ಮಂದಿರಿಗೆ ಭೀತಿ ಶುರುವಾಯಿತು. ಅಪ್ಪ ಅಮ್ಮನ ಬಾಡಿದ ಮುಖ ಕಂಡಾಗಲೆಲ್ಲಾ ಇವನಿಗೆ ಒಳಗೊಳಗೆ ಏನೋ ಚುಚ್ಚಿದಂತಾಗುತ್ತಿತ್ತು. ಅಮ್ಮನ ಬಳಿ ಬೈಕಿನ ಪೆಟ್ರೋಲಿಗೆ ದುಡ್ಡು ಕೇಳುವಾಗಲೆಲ್ಲಾ ಸ್ವಾಭಿಮಾನ ಅಡ್ಡ ಬರತೊಡಗಿತು. ಪೆಟ್ರೋಲಿಲ್ಲದೆ ಬೈಕ್ ಅಲ್ಲಲ್ಲೇ ರಸ್ತೆಯಲ್ಲಿ ನಿಂತುಹೋಗತೊಡಗಿದಾಗ ಬೆವರಿಳಿಸಿಕೊಂಡು ಮನೆಯವರೆಗೂ ತಳ್ಳಿಕೊಂಡು ಬರತೊಡಗಿದ. ಇವನ ಅಮ್ಮನಿಗೆ ಮಗನ ಸ್ಥಿತಿ ಕಂಡು ಮರುಕವಾಗಿ ಹೊರಗೆ ಹೊರಟರೆ ‘ಪೆಟ್ರೋಲಿದಿಯೇನೋ’ ಎಂದು ಕೇಳಿ ಹಣ ನೀಡತೊಡಗಿದರು. ಅಮ್ಮನಿಂದ ಹಣ ತೆಗೆದುಕೊಳ್ಳುವಾಗಲೆಲ್ಲಾ ‘ಇದೆಂತಾ ಬೇವರ್ಸಿ ಬದುಕು’ ಎಂದು ಇವನಿಗೆ ದುಃಖವಾಗುತ್ತಿತ್ತು. ಒಂದು ದಿನ ಬೆಳಿಗ್ಗೆ ಅಂದಿನ ದಿನಪತ್ರಿಕೆಯಲ್ಲಿ ಕಣ್ಣಾಡಿಸುತ್ತಾ ಉದ್ಯೋಗ ಜಾಹರಾತಿನ ಅಂಕಣವನ್ನು ನೋಡುತ್ತಿದ್ದಾಗ ಒಂದು ಜಾಹಿರಾತು ಇವನ ಕಣ್ಣಿಗೆ ಬಿತ್ತು. ಪಂಚತಾರಾ ಹೋಟೆಲೊಂದರಲ್ಲಿ ಹೌಸ್ ಕೀಪಿಂಗ್ ಅಸಿಸ್ಟೆಂಟ್ ಹುದ್ದೆ. ಕೆಲಸದ ಜವಾಬ್ದಾರಿಗಳು ಎಂಬುದರಲ್ಲಿ ಕೊಠಡಿ ಶುಚಿಗೊಳಿಸುವುದು ಎಂದಿತ್ತು. ಹನ್ನೆರಡು ಹುದ್ದೆಗಳು, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಪಾಸ್ ಅಥವಾ ಫೈಲ್, ಸಂಬಳ: ಆರು ಸಾವಿರ ರೂಪಾಯಿಗಳು ಮತ್ತು ಇತರೆ ಭತ್ಯೆಗಳು ಎಂದು ನಮೂದಾಗಿತ್ತು. ಅರ್ಹ ಅಭ್ಯರ್ಥಿಗಳು ಸಂದರ್ಶನ ಮತ್ತು ಕೌಶಲ್ಯ ಪರೀಕ್ಷೆಗಾಗಿ ಇದೇ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಹಾಜರಾಗುವುದು. ಜಾಹಿರಾತು ಓದಿದ ಇವನಿಗೆ ಮನಸ್ಸಿನಲ್ಲಿ ಏನೋ ಬೆಳಕು ಕಾಣಿಸಿದಂತಾಯಿತು. ಯಾವುದೋ ಒಂದು ಕೆಲಸ, ಸದ್ಯ ಸ್ವಂತ ಖರ್ಚಿಗೆ ಸಾಕಾಗುವಷ್ಟು ಹಣ ಸಿಕ್ಕರೆ ಸಾಕು ಎಂದುಕೊಂಡ. ಯೋಚಿಸುತ್ತಾ, ಯೋಚಿಸುತ್ತಾ ಅವನಿಗೆ ಈ ಕೆಲಸ ಅನಿವಾರ್ಯವಾಗತೊಡಗಿತು. ಆತಂಕ ಹೆಚ್ಚಾಗಿ ಏನಾದರೂ ಮಾಡಿ ಈ ಕೆಲಸವನ್ನು ಗಿಟ್ಟಿಸಿಕೊಳ್ಳಲೇಬೇಕು ಎಂದು ದೃಢನಿರ್ಧಾರ ಮಾಡಿಕೊಂಡ. ಇಂದು ಶುಕ್ರವಾರ, ಇನ್ನೆರಡು ದಿನ ಬಾಕಿಯಿದೆ ಎಂದುಕೊಂಡವನೇ ತನ್ನ ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡ. ಶನಿವಾರ ಸಂಜೆಯವರೆಗೂ ಊಟ ತಿಂಡಿಗೆ ಬಿಟ್ಟು ರೂಮಿನಿಂದ ಹೊರಗೆ ಬರಲಿಲ್ಲ. ಆತನಿಗೆ ಕೊಠಡಿ ಶುಚಿಗೊಳಿಸುವುದು ಎಂದರೆ ಏನೆಂದು ಅರ್ಥವಾಗಿತ್ತು. ತನ್ನ ಕೊಠಡಿಯಲ್ಲಿದ್ದ ಹಾಸಿಗೆ ಹೊದಿಕೆಯನ್ನು ಮಂಚದ ಮೇಲೆ ಸರಿಯಾಗಿ ಹಾಸಿ ಕೊಳೆಯಾಗಿದ್ದ ಬೆಡ್ಶೀಟನ್ನು ಬದಲಿಸಿ, ಕಿಟಕಿ ಬಾಗಿಲು ಮತ್ತು ತನ್ನ ರೂಮನ್ನೆಲ್ಲಾ ಒಂದು ಧೂಳಿನ ಕಣವೂ ಇಲ್ಲದಂತೆ ಕಣ್ಣಲ್ಲಿ ಕಣ್ಣಿಟ್ಟು ಶುಚಿಗೊಳಿಸಿದ. ಅಟ್ಯಾಚಡ್ ಬಾತ್ ರೂಮನ್ನು ಫಳಫಳ ಎನ್ನುವಂತೆ ತೊಳೆದ. ಎರಡು ದಿನದಿಂದ ಎಲ್ಲಿಯೂ ಹೊರಗೆ ಹೋಗದೆ ಬಾಗಿಲು ಮುಚ್ಚಿಕೊಂಡು ರೂಮಿನಲ್ಲೇ ಇದ್ದ ಮಗನ್ನು ಕಂಡು ಅವನ ಅಮ್ಮನಿಗೆ ದಿಗಿಲಾಗಿ ಏನಾದರೂ ಬೇಸರದಲ್ಲಿದ್ದಾನೇನೋ ಎಂದುಕೊಂಡು ಮಗನನ್ನು ಮಾತನಾಡಿಸಲೆಂದು ರೂಮಿಗೆ ಬಂದವರು ರೂಮನ್ನು ನೋಡಿ ದಂಗಾಗಿಹೋದರು. ‘ಇದ್ಯಾಕೋ, ಹೇಳಿದ್ರೆ ನಾನೇ ಕ್ಲೀನ್ ಮಾಡ್ ಕೊಡ್ತಿದ್ದನಲ್ಲೋ’ ಎಂದ ಅಮ್ಮನಿಗೆ ‘ಇಷ್ಟು ದಿವ್ಸ ನೀನು ಮಾಡಿದ್ದು ಸಾಕು ಬಿಡಮ್ಮಾ’ ಎಂದು ಅತ್ತ ತಿರುಗಿ ಕಣ್ಣಲ್ಲಿ ನೀರು ತುಂಬಿಕೊಂಡ. ಭಾನುವಾರ ಕೆಲಸಕ್ಕೆ ಇರುವ ಸಂದರ್ಶನದ ಬಗ್ಗೆ ಹೇಳಿದರೆ ಕೊಠಡಿ ಶುಚಿಗೊಳಿಸುವ ಕೆಲಸವೇ ಎಂದು ಬೇಸರ ಮಾಡಿಕೊಂಡಾರೆಂದು ಅಮ್ಮನಿಗೆ ಅದನ್ನು ಹೇಳಲು ಹಿಂಜರಿಕೆಯಾಯಿತು. ಕೆಲಸ ಸಿಗದೇ ನನ್ನ ಮಗನಿಗೆ ಬೇಸರವಾಗಿ ಇದೆಲ್ಲಾ ಮಾಡಿರಬೇಕು ಎಂದು ಅವನ ಅಮ್ಮ ನೊಂದುಕೊಂಡರು. ಶನಿವಾರ ರಾತ್ರಿ ನಿರಾಳವಾಗಿ ನಿದ್ರೆ ಮಾಡಿ ಬೆಳಿಗ್ಗೆಯೇ ಎದ್ದು ರೆಡಿಯಾದ. ಬೈಕಿನಲ್ಲಿ ಪೆಟ್ರೋಲಿದೆಯಾ ಎಂದು ಅಳ್ಳಾಡಿಸಿ ನೋಡಿ ಖಾಲಿಯಾಗಿದೆ ಎನ್ನಿಸಿ ಸಿಟಿ ಬಸ್ಸಿನಲ್ಲಿಯೇ ಹೋಗೋಣವೆಂದುಕೊಂಡು ತನ್ನ ಬ್ಯಾಗಿನಲ್ಲಿ ಅಂಕಪಟ್ಟಿಗಳು ಮತ್ತು ಇತರೆ ಸರ್ಟಿಪಿಕೇಟುಗಳಿದ್ದ ಫೈಲನ್ನು ಹಾಕಿಕೊಂಡು, ತಿಂಡಿ ತಿಂದು ಅಮ್ಮನಿಗೆ ‘ಇಲ್ಲೇ ಒಂದು ಇಂಟರ್ ವ್ಯೂ ಇದೆ, ಹೋಗಿ ಬರ್ತೀನಿ’ ಎಂದು ಹೇಳಿ ಹೊರಟ. ಅವನ ಅಮ್ಮ ‘ಒಳ್ಳೆಯದಾಗಲಿ ಹೋಗಿ ಬಾರಪ್ಪಾ’ ಎಂದು ಹರಸಿ ‘ನನ್ನ ಕಂದನಿಗೆ ಕೆಲಸ ಸಿಗುವಂತೆ ಮಾಡಪ್ಪಾ ದೇವರೇ’ ಎಂದು ಮನದಲ್ಲಿಯೇ ದೇವರನ್ನು ಪ್ರಾರ್ಥಿಸಿದರು. ಪಂಚತಾರಾ ಹೋಟೆಲಿನ ಬಳಿ ಬಂದಾಗ ಆಗಲೇ ಅಲ್ಲಿ ಬಹಳಷ್ಟು ಯುವಕರು ಕ್ಯೂನಲ್ಲಿ ನಿಂತುಕೊಂಡಿದ್ದರು. ಒಬ್ಬೊಬ್ಬರದೇ ದಾ ಖಲಾತಿಗಳನ್ನು ಪರಿಶೀಲಿಸಿ ಒಂದೆರಡು ಪ್ರಶ್ನೆ ಕೇಳಿ ಒಳಗೆ ಕಳುಹಿಸುತ್ತಿದ್ದರು. ಒಳಗೆ ಹೋದ ಮೇಲೆ ಪ್ರತಿಯೊಬ್ಬರನ್ನೂ ಕೌಶಲ್ಯ ಪರೀಕ್ಷೆಗಾಗಿ ಒಂದೊಂದು ರೂಮಿಗೆ ಕರೆದೊಯ್ದು ಕೊಠಡಿ ಶುಚಿಗೊಳಿಸುವಂತೆ ತಿಳಿಸಲಾಯಿತು. ಇವನು ತನಗೆ ಸಿಕ್ಕಿದ ರೂಮಿನ ಒಳಗೆ ಹೋದವನು ಇಡೀ ರೂಮನ್ನು ಮತ್ತು ಅದರಲ್ಲಿದ್ದ ಅಟ್ಯಾಚಡ್ ಬಾತ್ ರೂಮನ್ನು ಅತೀವ ಶ್ರದ್ಧೆಯಿಂದ ಶುಚಿಗೊಳಿಸಿದ. ಪ್ರತಿಯೊಂದನ್ನೂ ಪರೀಕ್ಷಿಸಿದ. ಮತ್ತೆ ಮತ್ತೆ ಶುಚಿಗೊಳಿಸಿದ. ಎಲ್ಲವೂ ಮುಗಿದ ಮೇಲೆ ತಾನು ಮಾಡಿದ್ದ ಕೆಲಸವನ್ನು ಒಮ್ಮೆ ನಿಂತು ನೋಡಿದ. ಮನಸ್ಸಿಗೆ ತೃಪ್ತಿಯಾಯಿತು. ಈ ಕೆಲಸ ಸಿಕ್ಕೇ ಸಿಕ್ಕುತ್ತದೆಂಬ ಆತ್ಮವಿಶ್ವಾಸ ಮನದಲ್ಲಿ ಮೂಡಿ ಹೊರಗೆ ಬಂದು ಇತರರು ಶುಚಿಗೊಳಿಸಿದ್ದ ರೂಮುಗಳನ್ನು ಬಗ್ಗಿ ನೋಡಿದ. ಎಲ್ಲಾ ಕೊಠಡಿಗಳು ಸ್ವಚ್ಛವಾಗಿರುವಂತೆ ಕಂಡರೂ ಅಲ್ಲಲ್ಲಿ ಸಂದಿಗೊಂದಿಗಳಲ್ಲಿ ಧೂಳು, ಕಸ ಕಾಣಿಸುತ್ತಿತ್ತು. ಎಲ್ಲರೂ ಹೊರಗೆ ಬಂದ ಮೇಲೆ ಹೋಟೆಲಿನ ಅಧಿಕಾರಿಗಳು ಮಧ್ಯಾಹ್ನ ಮೂರು ಗಂಟೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಹಾಕುತ್ತೇವೆ ಎಂದು ಹೇಳಿದರು. ಇವನಿಗೆ ಆತಂಕ ಶುರುವಾಯಿತು. ಆರು ಹುದ್ದೆಗಳು, ಬಂದಿದ್ದವರು ಅದೆಷ್ಟೋ ಜನ. ಏನಾಗುತ್ತದೋ ಅಂದುಕೊಂಡರೂ ಮನದಲ್ಲಿ ಎಂತಹುದೋ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು. ಹೇಗೋ ಮಾಡಿ ಅಲ್ಲಿ ಇಲ್ಲಿ ಓಡಾಡಿ ಮುಂದಿದ್ದ ಪಾರ್ಕಲ್ಲಿ ಕುಳಿತು ಮಧ್ಯಾಹ್ನದ ಹೊಟ್ಟೆಯ ಹಸಿವನ್ನೂ ತಾಳಿಕೊಂಡು ಸಮಯ ಕಳೆಯುವಷ್ಟರಲ್ಲಿ ಮೂರು ಗಂಟೆಯಾಗಿ ಹೋಟೇಲಿನ ನೋಟಿಸ್ ಬೋರ್ಡ್ ಮುಂದೆ ಬೆಳಿಗ್ಗೆ ಬಂದಿದ್ದ ಯುವಕರೆಲ್ಲಾ ಜಮಾಯಿಸತೊಡಗಿದರು. ಎಲ್ಲರೂ ಪಟ್ಟಿಯನ್ನು ನೋಡಿ ಮೂರ್ನಾಲ್ಕು ಮಂದಿ ಕೆಲಸ ಸಿಕ್ಕಿದೆಯೆಂದು ಸಂತೋಷಗೊಳ್ಳುತ್ತಿದ್ದರೆ ಉಳಿದವರೆಲ್ಲಾ ನಿರಾಶೆಯಿಂದ ಹೊರಟು ಹೋಗುತ್ತಿದ್ದರು. ಇವನು ನೋಟೀಸ್ ಬೋರ್ಡ್ ಮುಂದೆ ನಿಂತು ನೋಡಿದ. ಹೌಸ್ ಕೀಪಿಂಗ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದ ಹನ್ನೆರಡು ಜನರ ಪಟ್ಟಿಯಲ್ಲಿ ಇವನ ಹೆಸರು ಇರಲಿಲ್ಲ! ಇವನಿಗೆ ತೀವ್ರ ನಿರಾಶೆಯಾಗಿ ನಾನು ಅಂದುಕೊಂಡಿದ್ದು ನಿಜ ಪ್ರಪಂಚವೆಲ್ಲಾ ಮೋಸದಿಂದ ತುಂಬಿದೆ ಎಂದುಕೊಂಡು ಮತ್ತೊಮ್ಮೆ ಆಯ್ಕೆಯಾದವರ ಹೆಸರುಗಳನ್ನು ಮತ್ತೊಮ್ಮೆ ಓದಿ ಕೆಳಗೆ ಏನೋ ವಾಕ್ಯವಿದ್ದುದನ್ನು ಕಂಡು ಅದರ ಮೇಲೆ ಕಣ್ಣಾಡಿಸಿದ. ವಿಶೇಷ ಸೂಚನೆ: ಆದರ್ಶ ಎಂಬ ಅಭ್ಯರ್ಥಿಯನ್ನು ಹೌಸ್ ಕೀಪಿಂಗ್ ಸೂಪರವೈಸರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ. ತಕ್ಷಣವೇ ಸಿಬ್ಬಂದಿ ವ್ಯವಸ್ಥಾಪಕರನ್ನು ಭೇಟಿ ಮಾಡಲು ತಿಳಿಸಿದೆ. ಆದರ್ಶನ ಕಣ್ಣುಗಳಲ್ಲಿ ಆನಂದದ ಕಣ್ಣೀರು ಜಿನುಗತೊಡಗಿದವು. (19-08-12 ರಂದು ತುಮಕೂರಿನ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಕತೆ)  ]]>

‍ಲೇಖಕರು G

September 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

ಹಬ್ಬಿದಾ ಬಲೆ ಮಧ್ಯದೊಳಗೆ…

ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್...

ಮಳೆ, ಸಾಲ ಮತ್ತು ವಿನೋದ…

ಮಳೆ, ಸಾಲ ಮತ್ತು ವಿನೋದ…

ಬೇಲೂರು ರಾಮಮೂರ್ತಿ ಸೋಮು ಹೆಚ್ಚು ಸಾಲ ಮಾಡಿದವನಲ್ಲ. ಏನೋ ಆಗಾಗ ಸ್ನೇಹಿತರ ಬಳಿ ಕೈ ಸಾಲ ಅಂತ ಮಾಡ್ತಿದ್ದ. ಅದನ್ನು ಸಂಬಳ ಬಂದಾಗ...

5 ಪ್ರತಿಕ್ರಿಯೆಗಳು

  1. B Nagarajappa

    Really a good message for the youths and parents too, especially for the lethargic attitude youths

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: