ಇಮ್ತಿಯಾಜ್ ಶಿರಸಂಗಿ
ರಾತ್ರೋರಾತ್ರಿ ಚಿತೆಗಳೂರಿದು
ಸತ್ಯವು ಸುಡುತಿರುವಾಗ…
ಸತ್ತವರ ನೋವನ್ನು
ಪ್ರಜೆಗಳು ನೆನಪಿಟ್ಟುಕೊಳ್ಳಬೇಕು…
ಕೆಲಸವಿಲ್ಲದೇ,
ಹಸಿದ ಹೊಟ್ಟೆಯಲಿ,
ಊದುದ್ದ ಟಾರು ರೋಡುಗಳಲ್ಲಿ,
ಖಾಲಿ ಪಾದಗಳನ್ನು ಸವೆಸುತ್ತಾ
ಕುಸಿದು ಸತ್ತವರ ಹೆಸರುಗಳನ್ನೂ
ಪ್ರಜೆಗಳು ನೆನಪಿಟ್ಟುಕೊಳ್ಳಬೇಕು…

ಬರೀ ಶಾಂತಿಯೇ ನೆಲಸಿದ್ದ ನಾಡಿನಲ್ಲಿ,
ನೀರಿನ ಹಾಗೆ ರಕ್ತಹರಿಸಿ,
ಬಿಳಿ ಹೂವನ್ನು ಅದರಲ್ಲದ್ದಿ
ಸಂಕೇತವನ್ನಾಗಿಸಿಕೊಂಡವರನ್ನು
ಪ್ರಜೆಗಳು ನೆನಪಿಟ್ಟುಕೊಳ್ಳಬೇಕು…
ಹೌದು
ಪ್ರಜೆಗಳು ನೆನಪಿಟ್ಟುಕೊಳ್ಳಬೇಕು
ಎಲ್ಲವನ್ನು…
ಚೂರೇ ಚೂರು ಕೂಡ
ಮರೆಯದ ಹಾಗೆ.
ಮುಂದೆ
ಪ್ರಜಾದಿನ ಬಂದಾಗ,
ಮರೆಯದೆ ಒಳ್ಳೆಯವರಿಗೆ
ಮತ ಚಲಾಯಿಸುವವರೆಗಾದರು
ಪ್ರಜೆಗಳು ನೆನಪಿಟ್ಟುಕೊಳ್ಳಬೇಕು.
0 ಪ್ರತಿಕ್ರಿಯೆಗಳು