ಸದಾ ಚಡಪಡಿಸಿ ಸಿಡಿದ ಸಿಲ್ವಿಯಾ ಪ್ಲಾಥ್

sylvia_plath.jpg

ಟೀನಾ

ಮೆರಿಕನ್ ಕವಯಿತ್ರಿ ಸಿಲ್ವಿಯಾ ಪ್ಲಾಥ್ ತನ್ನ ಮೊದಲನೇ ಕವಿತೆಯನ್ನು ಬರೆದು ಪ್ರಕಟಿಸಿದ್ದು ಆಕೆಯ ಎಂಟನೆಯ ವಯಸ್ಸಿನಲ್ಲಿ. ಆಕೆ ತನ್ನ ಪರಿವಾರದಲ್ಲಿಯೇ ಅತ್ಯಂತ ಬುದ್ಧಿವಂತ ಹುಡುಗಿ. ಶಾಲೆಯಲ್ಲಿ ಯಾವಾಗಲೂ ಉನ್ನತ ಶ್ರೇಣಿ. ಯಾವ ವಿಷಯಗಳೆಡೆ ಆಸಕ್ತಿ ಹರಿಯುತ್ತಿತ್ತೊ, ಅದರಲ್ಲಿ ಪರಿಣತಿ ಸಾಧಿಸುವ ತನಕ ಸುಮ್ಮನಿರದ ತರಳೆ. ಕಾಲೇಜಿಗೆ ಹೋಗುವ ವೇಳೆಗಾಗಲೇ ಆಕೆಯ ಕವಿತೆಗಳು ಹಲವಾರು ಹೆಸರುವಾಸಿಯಾದ ಪ್ರಕಾಶನಗಳಿಂದ ಪ್ರಕಟವಾಗಿದ್ದವು. ಫುಲ್ ಬ್ರೈಟ್ ವಿದ್ಯಾರ್ಥಿವೇತನದೊಡನೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದಾಕೆ.

ಆದರೆ ಈ ಚೆಂದದ ಮುಖವಾಡದ ಸಿಲ್ವಿಯಾಳ ಹಿಂದೆ ಇನ್ನೊಬ್ಬ ಹೆಣ್ಣು ಅಡಗಿದ್ದಳು. ಆ ಸಿಲ್ವಿಯಾ ತನ್ನ ವ್ಯಕ್ತಿಗತ ಸೋಲುಗಳಿಂದ ಮುರಿದುಬಿದ್ದ ಹೆಣ್ಣಾಗಿದ್ದಳು. ಆಕೆಯ ಈ ಎರಡನೆಯ ಮುಖ ಬಾಲ್ಯದ ಹಲವಾರು ಕಹಿ ಅನುಭವಗಳಿಂದ ಹೊರಹೊಮ್ಮತೊಡಗಿತು.

ಕಾಲೇಜಿನಲ್ಲಿರುವಂತೆಯೇ ಒಮ್ಮೆ ನಿದ್ರೆಮಾತ್ರಗಳನ್ನು ನುಂಗಿ ಆತ್ಮಹತ್ಯೆಗೆತ್ನಿಸಿದ್ದಳು. ಈ ಬಗ್ಗೆ ನಂತರ ತನ್ನ ಆತ್ಮಕಥಾ ಕಾದಂಬರಿ “ದ ಬೆಲ್ ಜಾರ್”ನಲ್ಲಿ ಬರೆದಳು ಕೂಡ. ಸಿಲ್ವಿಯಾಳ ಕವಿತೆಗಳು ಆಕೆಯ ಸ್ವಂತ ಜೀವನದ ವೈರುದ್ಧ್ಯಗಳು, ತಂದೆ, ತಾಯಿ, ಗಂಡನ ಜೊತೆಗಿನ ಹಳಸಿದ ಸಂಬಂಧಗಳು, ಆಕೆಯ ಅಸಹಾಯಕತೆಯಿಂದ ಹೊರಟ ಕೋಪ… ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತವೆ.

ಅಪ್ಪ, ಕೊಲ್ಲುವವಳಿದ್ದೆ ನಿನ್ನ
ಪುರುಸೊತ್ತು ಸಿಗುವ ಮುನ್ನ ಸತ್ತೆ ನೀನು…
ಅಮೃತಶಿಲೆಯ ಭಾರ ಚೀಲ, ಅದರ ತುಂಬ ದೇವರು
ಫ್ರಿಸ್ಕೋ ಸೀಲಿನಷ್ಟು ಅಗಲದ
ಒಂಟಿ ಬೂದುಗಾಲಿನ ಭಯಾನಕ ಶಿಲ್ಪ

ತಾನು ಎಂಟು ವಯಸ್ಸಿನವಳಾಗಿರುವಾಗ ಕಾಲಿನ ಗ್ಯಾಂಗ್ರೀನ್ ನಿಂದ ತೀರಿಕೊಂಡ ತನ್ನ ತಂದೆ ಅಟ್ಟೋ ಪ್ಲಾಥನ ಮೇಲೆ ಬರೆದ “ಡ್ಯಾಡಿ” ಕವಿತೆಯ ಕೆಲವು ಸಾಲುಗಳಿವು. ತನ್ನ ತಂದೆಯ ಮೇಲೆ ಆಕೆಗಿದ್ದ ಸಿಟ್ಟು, ಕೋಪ, ಭಯ, ಆತನ ನಿರ್ದಯತೆಗಳು ಈ ಕವಿತೆಯಲ್ಲಿ ಎದ್ದು ಕಾಣುತ್ತವೆ. ಸಿಲ್ವಿಯಾಳನ್ನು ಆಂಗ್ಲ ಸಾಹಿತ್ಯದ “ಕನ್ಫೆಷನ್” ಕವಿಯೆಂದು ಹೇಳಲಾಗುತ್ತದೆ. ಈ ರೀತಿಯ ಸಾಹಿತ್ಯದಲ್ಲಿ ಲೇಖಕರು ತಮ್ಮ ಅತ್ಯಂತ ಖಾಸಗಿ, ವೈಯಕ್ತಿಕ ಭಾವನೆಗಳನ್ನು – ಸಾವು, ಭಯ, ನೋವು, ಸಂಬಂಧ ಇತ್ಯಾದಿಗಳ ಬಗ್ಗೆ ಬಹಿರಂಗವಾಗಿ ನಿವೇದಿಸುತ್ತಾರೆ.

೧೯೫೬ರಲ್ಲಿ ಬ್ರಿಟಿಷ್ ಕವಿ ಟೆಡ್ ಹ್ಯೂಯಿಯನ್ನು ಮದುವೆಯಾದ ಸಿಲ್ವಿಯಾ ಬ್ರಿಟನ್ನಿನ ಡಿವಾನ್ ಪ್ರಾಂತ್ಯದಲ್ಲಿ ಬಂದು ಆತನೊಡನೆ ನೆಲೆಸತೊಡಗಿದಳು. ಒಂದು ಮಗುವೂ ಆಯಿತು. ಮಗುವಾದ ಒಂದು ವರ್ಷದೊಳಗೇ ಆ ಮದುವೆ ಮುರಿದುಬಿತ್ತು. ೧೯೬೨-೬೩ರ ಚಳಿಗಾಲವನ್ನು ಸಿಲ್ವಿಯಾ ಲಂಡನ್ನಿನ ಒಂದು ಪುಟ್ಟ ಫ್ಲಾಟಿನಲ್ಲಿ ತನ್ನಿಬ್ಬರು ಮಕ್ಕಳೊಡನೆ ದುಸ್ತರವಾಗಿ ಕಳೆದಳು. ಆಕೆಯ ತೊಂದರೆಗಳು ಬರೆಯುವ ತುಡಿತವನ್ನು ಇನ್ನೂ ಹೆಚ್ಚಿಸಿದವು. ಆ ಸಮಯದಲ್ಲಿ ಆಕೆ ಬರೆದ ಕವಿತೆಗಳಲ್ಲಿ ಸಾವಿನ ಬಗ್ಗೆ ಆಕೆಗಿದ್ದ ಆಕರ್ಷಣೆ, ಮಾನಸಿಕ ನೋವುಗಳು ದೈಹಿಕವಾಗಿ ಬಾಧಿಸುತ್ತಿದ್ದುದು ಹಾಗೂ ಆಕೆಯನ್ನು ಮೀರಿದ ಅನೂಹ್ಯ ಶಕ್ತಿಯೊಂದು ಆಕೆಯನ್ನು ಹಿಡಿದಿಟ್ಟು ಮುನ್ನಡೆಸುತ್ತಿರುವುದು… ಎಲ್ಲವೂ ಒಟ್ಟಾಗಿ ಕಾಣಿಸುತ್ತವೆ.

ಫೆಬ್ರವರಿ ೧೧, ೧೯೬೩ರಲ್ಲಿ, ತನ್ನ ಮೂವತ್ತನೆ ವಯಸ್ಸಿನಲ್ಲಿ ಸಿಲ್ವಿಯಾ ಪ್ಲಾಥ್ ಆತ್ಮಹತ್ಯೆ ಮಾಡಿಕೊಂಡಳು. 

‍ಲೇಖಕರು avadhi

September 6, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

3 ಪ್ರತಿಕ್ರಿಯೆಗಳು

 1. CT

  Silviya baduku ade bhavanegala nonda hennugalalli svanukampa huttisadiddare saku!
  chendada baraha. heege aparoopada hennu makkalanna parishayistiru Teen.

  ಪ್ರತಿಕ್ರಿಯೆ
 2. shashi sampalli

  “ಈ ಹೃದಯ,..
  ಇದೊಂದು ಹತ್ಯಾಕಾಂಡದ ಖನಿ,
  ಅದರ ಮೇಲೇ ನಾನು ನಡೆದಾಡುತ್ತಿದ್ದೇನೆ…
  ಓ ಮಗುವೇ ಈ ಜಗತ್ತು ಕೊಲ್ಲುವ, ಮುಕ್ಕುವ ತಿದಿ”
  ಎಂಬಂತಹ ಮನುಷ್ಯನ ಬದುಕಿನ ವಿಪರ್ಯಾಸವನ್ನು ರಾಚುವಂತೆ ಹೇಳಿದ ಧೀಮಂತೆ ಸಿಲ್ವಿಯಾ… ಲೇಖನ ಪರಿಚಯಾತ್ಮಕವಾಗಿ ಚೆನ್ನಾಗಿದೆ. ಇನ್ನಷ್ಟು ಕುತೂಹಲಕಾರಿ ಸಂಗತಿಗಳನ್ನು ಹೇಳಬಹುದಿತ್ತು. any how thank u…

  ಪ್ರತಿಕ್ರಿಯೆ
 3. Tina

  ಚೇತೂ, ಖಂಡಿತಾ.
  ಶಶಿ, ಇದನ್ನು ’ಕನ್ನಡ ಟೈಮ್ಸ್’ಗಾಗಿ ಬರೆದದ್ದು. columnಗೆ ಕೆಲವು space limitations ಇದ್ದ ಕಾರಣ ಹೆಚ್ಚು ಹೇಳಲಾಗಲಿಲ್ಲ. ಮೇಲಾಗಿ ನನಗೆ ಈ ಲೇಖನ ’ಅವಧಿ’ಯಲ್ಲಿ ಪೋಸ್ಟ್ ಆಗಿದೆ ಎಂದು ತಿಳಿದಿದ್ದು ಚೇತನಾಳಿಂದ!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: