ಸನ್ಯಾಸಿಯ ಸಂಬಳ ಮತ್ತು ಸಂಸಾರಿಯ ಖರ್ಚು!

rajaram tallur low res profile

ರಾಜಾರಾಂ ತಲ್ಲೂರು

ಪ್ರಧಾನಮಂತ್ರಿಗಳು ಟೆಲಿವಿಷನ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುವುದು ಎಂದರೇನು?

ದೇಶದಲ್ಲಿರುವ 135  ಕೋಟಿ ಜನಸಂಖ್ಯೆಗೆ, ಅಂದಾಜು 25 ಕೋಟಿ ಮನೆಗಳಿವೆ. ಈ ಮನೆಗಳಲ್ಲಿ ಟೆಲಿವಿಷನ್ ಇರುವವರ ಮನೆಗಳು ಅಂದಾಜು 12  ಕೋಟಿ (2011ರ ಜನಗಣತಿಯನ್ವಯ). ಅಂದರೆ, ಟೆಲಿವಿಷನ್ ಮೂಲಕ ತಲುಪಲು ಸಾಧ್ಯವಾಗುವುದು ಅಂದಾಜು 60-70 ಕೋಟಿ ಜನರನ್ನು ಮಾತ್ರ. ರೇಡಿಯೋ ಬಳಕೆದಾರರ ಸಂಖ್ಯೆ ಅಂದಾಜು 16 ಕೋಟಿ. ಹೀಗೆ ಯಾವ ಅಂದಾಜಿನಲ್ಲೂ ದೇಶದೊಳಗೆ 30-40 ಕೋಟಿ ಜನವನ್ನು ತಲುಪಲು ಪ್ರಧಾನಮಂತ್ರಿಗಳಿಗೆ ಸಾಧ್ಯ ಆಗುವುದೇ ಇಲ್ಲ.

avadhi-column-tallur-verti- low res- cropಭಾನುವಾರ ಪ್ರಧಾನಮಂತ್ರಿಗಳು ತಮ್ಮ ‘ಮನ್ ಕೀ ಬಾತ್’ ನಲ್ಲಿ ದೇಶದ ಯುವಕರು ಕ್ಯಾಷ್ ಲೆಸ್ ಆರ್ಥಿಕತೆಗೆ ಮುಂದಾಗಬೇಕು ಮತ್ತು ಪ್ರತಿಯೊಬ್ಬರೂ 10 ಮಂದಿಗಾದರೂ ಕ್ಯಾಷ್ ಲೆಸ್ ಲೇವಾದೇವಿ ಮಾಡುವುದನ್ನು ಕಲಿಸಿಕೊಡಲು ಹೇಳಿದ್ದಾರಂತೆ. 73% ಜನ ಹಳ್ಳಿಗಳಲ್ಲಿ ವಾಸಿಸುವ ಭಾರತದಲ್ಲಿ, ಪ್ರಧಾನಿಯವರ ಈ ಮಾತುಗಳು ತಲುಪಿದ್ದು ಎಷ್ಟು ಜನರನ್ನು? ಎಂಬ ಪ್ರಶ್ನೆ ಒಂದೆಡೆಯಾದರೆ, ದೇಶದಲ್ಲಿರುವ ಅಂದಾಜು 103  ಕೋಟಿ ಮೊಬೈಲ್ ಫೋನುಗಳನ್ನು ಬಳಸುತ್ತಿರುವವರು ನೂರಕ್ಕೆ 81% ಮಂದಿ ಮಾತ್ರ. ಅಂದರೆ, ಇನ್ನೂ 30-40  ಕೋಟಿ ಮಂದಿಯ ಕೈನಲ್ಲಿ ಮೊಬೈಲ್ ಫೋನ್ ಇಲ್ಲ.

ಬ್ಯಾಂಕ್ ಅಕೌಂಟ್ ಗಳ ಲೆಕ್ಕ ತೆಗೆದರೆ, 2011ರ ತನಕ 35% ಇದ್ದ ಬ್ಯಾಂಕ್ ಅಕೌಂಟ್ ಗಳ ಪ್ರಮಾಣ ಈಗ ಜನಧನ್ ಯೋಜನೆಯ ಬಳಿಕ 53%  ಗೆ ಏರಿದೆ. ಅಂದರೆ, ಇನ್ನೂ ಅಂದಾಜು 50-60 ಕೋಟಿ ಜನರ ಕೈನಲ್ಲಿ ಬ್ಯಾಂಕ್ ಅಕೌಂಟ್ ಗಳೇ ಇಲ್ಲ.

ಸರ್ಕಾರ ಒದಗಿಸಿರುವ ಆಧಾರ್ ಕಾರ್ಡ್ ಗಳ ಲೆಕ್ಕ ತೆಗೆದುಕೊಳ್ಳಿ. ಸರ್ಕಾರದ ಲೆಕ್ಕಾಚಾರಗಳ ಪ್ರಕಾರ ದೇಶದ 108 ಕೋಟಿ ಮಂದಿ ಆಧಾರ್ ಕಾರ್ಡ್ ಹೊಂದಿದ್ದಾರೆ. ಅಂದರೆ ಇಲ್ಲೂ ಅಂದಾಜು 25 ಕೋಟಿ ಜನ ಹೊರಗುಳಿದಿದ್ದಾರೆ.

ಈ ಎಲ್ಲ ಸ್ಟಾಟಿಸ್ಟಿಕ್ಸ್ ಗಳು ಒಟ್ಟಾಗಿ ಹೇಳುವುದು ಏನೆಂದರೆ, 135 ಕೋಟಿ ಜನರ ಭಾರತದೊಳಗೆ ಇನ್ನೊಂದು 40-50 ಕೋಟಿ ಜನರ ಭಾರತ ಇದ್ದು, ಅವರು ಇನ್ನೂ ಇದ್ಯಾವುದೂ ಕಟ್ಟುಗಳೊಳಗೆ ಸಿಕ್ಕಿಲ್ಲ ಎಂದೇ.  ಸರ್ಕಾರದ ಲೆಕ್ಕದಿಂದ ಎಲ್ಲ ಹಾದಿಗಳಲ್ಲೂ ಹೊರಗುಳಿದಿರುವ ಈ ಭಾರತ ಯಾರಿಗೆ ಸೇರಿದ್ದು?

ಅಗ್ನಿಪರೀಕ್ಷೆಗೆ ದಿನ ಬಂತು!

ನೋಟು ರದ್ಧತಿಯ ಬಳಿಕದ ಕೇಂದ್ರ ಸರ್ಕಾರ ಎದುರಿಸಬೇಕಾಗಿರುವ ಮೊದಲ ಅಗ್ನಿಪರೀಕ್ಷೆಯ ದಿನ ಹತ್ತಿರಾಗುತ್ತಿದೆ. ದೇಶದಾದ್ಯಂತ ನಗದು ಸರಬರಾಜು ತೀರಾ ಕುಂಟುನಡೆಯಲ್ಲಿರುವುದು, ಮಧ್ಯಾಹ್ನಕ್ಕೆ ಮೊದಲೇ ಬ್ಯಾಂಕುಗಳು-ಎಟಿಎಮ್ ಗಳು ಕಾಸು ಖಾಲಿ ಮಾಡಿಕೊಂಡು ಕೈ ಎತ್ತುತ್ತಿರುವುದು ಅವ್ಯಾಹತವಾಗಿ ನಡೆಯುತ್ತಲೇ ಇದೆ.

modi-advtಈಗ ನಾಡಿದ್ದು, ಡಿಸೆಂಬರ್ ಒಂದರಿಂದ ಒಂದು ವಾರ ನೌಕರವರ್ಗದವರಿಗೆ ಸಂಬಳದ ದಿನಗಳು ಬರಲಿವೆ. ದೇಶದಾದ್ಯಂತ ದುಡಿಯುವ, ಮಧ್ಯಮ ವರ್ಗದವರು ತಮಗೆ ನಗದಾಗಿ ಸಿಗುವ ಅಥವಾ ತಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುವ ಸಂಬಳದ ದುಡ್ಡಿಗಾಗಿ ಕಾಯುತ್ತಿದ್ದಾರೆ. ಆ ದುಡ್ಡು ನಗದಾಗಿ ಸಿಕ್ಕಿದರೆ ಮಾತ್ರ ಅವರ ತಿಂಗಳ ರೇಷನ್, ತರಕಾರಿ, ಹಾಲು ಮನೆಗೆ ಬರುವುದು. ಮನೆ ಬಾಡಿಗೆ, ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ಫೋನ್ ಬಿಲ್ಲು ಪಾವತಿ ಆಗುವುದು. ಈ ಖರ್ಚುಗಳಲ್ಲಿ ಮುಕ್ಕಾಲು ಭಾಗ ನಗದಾಗಿಯೇ ನಡೆಯುವುದು. ಅಂದಹಾಗೆ ಈ ಪಾವತಿಗಾಗಿ ಬೇಕಾಗುವ ದುಡ್ಡು ಎಷ್ಟು ಗೊತ್ತೇ? ಅಂದಾಜು ಐದರಿಂದ ಆರು ಲಕ್ಷ ಕೋಟಿ ರೂಪಾಯಿಗಳು. ಬೇರೆಲ್ಲ ಬಿಡಿ. ಬರಿಯ ಕೇಂದ್ರ ಸರ್ಕಾರಿ ನೌಕರರ ಸಂಬಳವೇ ಅಂದಾಜು ಒಂದೂವರೆ ಲಕ್ಷ ಕೋಟಿ.

ಈ ಸವಾಲಿಗೆ ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕ್ ಎಷ್ಟು ಸನ್ನದ್ಧ ಎಂಬ ವಿಚಾರ, ಕಳೆದ 15 ದಿನಗಳಲ್ಲಿ ಆಗಿರುವ ಚಟುವಟಿಕೆಗಳನ್ನು ಗಮನಿಸಿದರೆ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುತ್ತಿದೆ. ಇದೆಲ್ಲ ಮಾಡಲಾಗದ್ದಲ್ಲ. ಆದರೆ ಬೇಕಾದಷ್ಟು ಪೂರ್ವ ತಯಾರಿ ಇಲ್ಲದೆ ಮಾಡಲಾಗುವಂತಹದೂ ಅಲ್ಲ.

ಕಾರ್ಡ್ ಸ್ವೈಪ್ ಮಾಡುವ, ಇಲೆಕ್ಟ್ರಾನಿಕ್ ವಾಲೆಟ್ ಬಳಸುವ, ಮೊಬೈಲ್ ಮೂಲಕ ಪಾವತಿ ಮಾಡುವ ಸಲಹೆಗಳು ಆಕರ್ಷಕ ಅನ್ನಿಸಿದರೂ ಊಟಕ್ಕಿಲ್ಲದ ಉಪ್ಪಿನಕಾಯಿಗಳೇ. ಸಣ್ಣ ಸಣ್ಣ ಊರುಗಳಲ್ಲಿ ಕಾರ್ಡ್ ಸ್ವೈಪ್ ಮಾಡುವ ಸಾಧನಗಳಿರುವ ಅಂಗಡಿಗಳ ಪ್ರಮಾಣವೇ 10-20%.  ಮೇಲಾಗಿ ಹೊಸ ಸ್ವೈಪ್ ಸಾಧನಗಳಿಗಾಗಿ ಎದ್ದಿರುವ ಬೇಡಿಕೆ ಪೂರೈಸಲು ಬ್ಯಾಂಕ್ ಗಳಾಗಲೀ ಸ್ವೈಪ್ ಸಾಧನ ತಯಾರಿಸುವ ಸಂಸ್ಥೆಗಳಾಗಲೀ ಸಜ್ಜಾದಂತಿಲ್ಲ. ಹಾಗಾಗಿ ಅಲ್ಲೂ ಸರದಿ ಸಾಲು ಆರಂಭವಾಗಿದೆ.

ನೋಟು ರದ್ಧತಿಗೆ ಪೂರ್ವ ತಯಾರಿ ಇರಲಿಲ್ಲ ಎಂದರೆ, ಗಂಟು ಕಳ್ಳರಿಗೆ ಪೂರ್ವ ತಯಾರಿ ಅವಕಾಶ ಕೊಡುವಂತಿರಲಿಲ್ಲ ಎನ್ನುತ್ತಿದೆ ಸರ್ಕಾರ. ಸರಿ. ಗಂಟುಕಳ್ಳರ ಬೆನ್ನುಹತ್ತಿ. ಆದರೆ, ಒಪ್ಪೊತ್ತಿನ ಗಂಜಿಗೆ ಚಡಪಡಿಸುತ್ತಿರುವವರನ್ನು ನೆನಪು ಬಿಡಬೇಡಿ. ಅವರೂ ಭಾರತ, ಅವರೇ ಭಾರತ.

‍ಲೇಖಕರು Admin

November 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನನ್ನ ಮೇಲೊಂದು ಹಲ್ಲೆ

ನನ್ನ ಮೇಲೊಂದು ಹಲ್ಲೆ

ಅದು 1990ರ ಆಜುಬಾಜು. ಹಂಪಸಾಗರದಲ್ಲಿದ್ದೆ. ಆಸ್ಪತ್ರೆಗೂ ನಾನಿದ್ದ ಬಾಡಿಗೆ ಮನೆಗೂ ನೂರು ಮೀಟರ್ ಸಹ ಇದ್ದಿಲ್ಲ. ಹೆಂಡತಿ ಮಗುವಿನೊಂದಿಗೆ...

ಇಳಿವಯಸ್ಸಿಗೆ ಬಣ್ಣಗಾರ…

ಇಳಿವಯಸ್ಸಿಗೆ ಬಣ್ಣಗಾರ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ...

ರೈತರ ‘ಚಲೋ ದಿಲ್ಲಿ’

ರೈತರ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು...

3 ಪ್ರತಿಕ್ರಿಯೆಗಳು

 1. Sandeep Kamath

  ಒಂದು ಕಾಲದಲ್ಲಿ ಪಟ್ಟಾಪಟ್ಟಿ ಚಡ್ಡಿಯ ಜೋಬಿನ ಒಳಗೆ ಹಣ ಇಟ್ಟು ತಿರುಗಾಡ್ತಾ ಇದ್ರು(ಈಗಲೂ ಕೆಲವರು ತಿರುಗ್ತಾರೆ). ಆದ್ರೆ ಈಗ ಅವರ ಮಕ್ಕಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡು ಹಿಡಿದುಕೊಂಡು ತಿರುಗಾಡ್ತಾರೆ. ‘ಸಾಧ್ಯ ಆದಷ್ಟು’ ಡಿಜಿಟಲ್ ಬಳಕೆ ಹೆಚ್ಚು ಮಾಡಿ ಅಂದದ್ದನ್ನೆ ನೀವು “ಮೋದಿ ಸರ್ವಾಧಿಕಾರಿ ನಾಳೆಯಿಮ್ದ ಎಲ್ಲರೂ ಡೆಬಿಟ್ ಕಾರ್ಡ್ ಬಳಶಬೆಕು ಅಂದಿದ್ದಾನೆ” ಅನ್ನೊ ಥರ ಬಿಂಬಿಸ್ತಾ ಇದ್ದೀರ.

  ಸರ್ಕಾರ ಆದಷ್ಟು ಡಿಜಿಟಲ್ ವ್ಯವಹಾರ ಮಾಡಿ ಅನ್ನೋದು ಜನರ ಮೇಲಿನ ಪ್ರೀತಿಯಿಂದಲ್ಲ. ಬದಲಾಗಿ ಪ್ರತಿಯೊಂದು ರೂಪಾಯಿ ಯಾರಿಂದ ಯಾರಿಗೆ ಹೋಗುತ್ತೆ ಅನ್ನೋ ಲೆಕ್ಕ ಹಿಡಿಯಲು. ಖಂಡಿತ ನೂರ ಮೂವತ್ತೈದು ಕೋಟಿ ಜನರನ್ನು ಡಿಜಿಟಲ್ ನೆಟ್ ವರ್ಕ್ ಒಳಗೆ ತರೋದು ಸಾಧ್ಯವೆ ಇಲ್ಲ. ಆದರೆ ಇವರ ಸಂಖ್ಯೆ ಹೆಚ್ಚಾದಷ್ಟೂ ಸರಕಾರಕ್ಕೆ ಲೆಕ್ಕ ಸಿಗುತ್ತೆ.

  ಇಲ್ಲಿ ಪ್ರಶ್ನೆ ಇರೋದು ಇದನ್ನು ವಿರೋಧಿಸುವವರು ಯಾರು ಅನ್ನೋದು? ನಾನು ಈವರೆಗೆ ನೋಡಿದ ಪ್ರಕಾರ ಇದನ್ನು ವಿರೋಧಿಸಿದ್ದು ಒಂದೋ ಮೋದಿ ವಿರೋಧಿಗಳು. ಅಥವ ತಾನು ಖರ್ಚು ಮಾಡುವ ಹಣದ ಲೆಕ್ಕ ಸರಕಾರಕ್ಕೆ ಸಿಗಬಾರದು ಅನ್ನೋ ಮನಸ್ಥಿತಿಯವರು.

  ಯಾವುದೇ ಒಂದು ಲೇಖನ ಬಹಳಷ್ಟು ಅಂಕಿ ಅಂಶ ಇದ್ದ ಮಾತ್ರಕ್ಕೆ ಸರಿ ಅನ್ನಿಸುವುದಿಲ್ಲ. ನೀವೇ ಕೊಟ್ಟಿರೋ ಅಂಕಿ ಅಂಶದಲ್ಲಿ ಟಿ.ವಿ ಇರೋ ಮನೆಗಳು ಇಷ್ಟು ೬೦ ಕೋಟಿ ಅಂದಿರಿ. ಆದ್ರೆ ಅದರಲ್ಲಿ ಎಷ್ಟು ಜನ ಟಿ.ವಿ ನೋಡ್ತಾರೆ ಅನ್ನೋದು ನಿಮಗೆ ಗೊತ್ತೇ. ಅದರಲ್ಲೂ ಅವರೆಲ್ಲ ಮೊದಿಯ ಭಾಷಣ ನೋಡಿದ್ದಾರೆ ನಿಮಗೆ ಗೊತ್ತೆ?

  ಮೋದಿಯ ನವೆಂಬರ್ ಎಂಟರ ಭಾಷಣ “ನೋಡದ” ಕೋಟ್ಯಂತರ ಜನರಿಗೂ ಈಗ ಐನೂರು/ಸಾವಿರ ನೊಟು ಅಮಾನ್ಯವಾಗಿರುವ ವಿಷಯ ಗೊತ್ತಿದೆ? ಎಲ್ಲವೂ ಸ್ವಥಃ ನೋಡಿಯೇ ತಿಳಿಯುವ ಕಾಲ ಹೋಗಿ ಎಷ್ಟೋ ವರ್ಷ ಆಯ್ತು. ಇನ್ನು ಈ ವಾಟ್ಸಾಪ್, ಫೇಸ್ ಬುಕ್ ಮೂಲಕ ವಿಷಯಗಳು ಅದೆಷ್ಟು ಜನರಿಗೆ ತಲುಪುತ್ತೆ ಅನ್ನೋ ಲೆಕ್ಕ ಯಾರ ಬಳಿಯೂ ಇಲ್ಲ.

  ೫೦ ಕೋಟಿ ಜನರ ಬಳಿ ಅಕೌಂಟ್ ಇಲ್ಲ ಅನ್ನೋದು ನಿಮ್ಮ ಅಂಕಿ ಅಂಶ. ಆದ್ರೆ ಅದರಲ್ಲಿ ಎಷ್ಟು ಜನರಿಗೆ ಅಕೌಂಟ್ ಅಗತ್ಯ ಅನ್ನೋ ಅಂಕಿ ಅಂಶ ನಿಮ್ಮ ಬಳಿ ಇಲ್ಲ. ಯಾಕಂದ್ರೆ ಆ ೫೦ ಕೋಟಿಯಲ್ಲಿ ಬಹುಷಃ ೪೦ ಕೋಟಿ ಜನರ ಬಳಿ ಹಣ ಇರೋದೇ ಇಲ್ಲ. ಇನ್ನು ಅಕೌಂಟ್ ಇಟ್ಟು ಏನು ತಾನೆ ಮಾಡ್ತಾರೆ ಪಾಪ?

  ಆ ಹಣವೆ ಇರದ ಜನರ ಬಳಿ ಹಣ ಬರುವಂತೆ ಮಾಡೋದು ಮೊದಲ ಆದ್ಯತೆ. ಆದರೆ ಆ ಬಗ್ಗೆ ಇಲ್ಲಿ ಚರ್ಚೆ ಸೂಕ್ತ ಅಲ್ಲ. ಯಾಕಂದ್ರೆ ಅದರ ಬಗ್ಗೆ ಮಾತಾಡಲು ಹೋದ್ರೆ ಮತ್ತೆ ಅದೇ ಅಂಬಾನಿ, ಅದಾನಿ, ಅನ್ನೋ ಮೂಲ ವಿಷಯಕ್ಕೆ ಬರ್ತೀರಿ ನೀವು.

  ನಿಮ್ಮ ಎಲ್ಲಾ ಅಂಕಿ ಅಂಶಗಳಲ್ಲಿ ಮೋದಿವಿರೊಧಿಗಳು ಎಷ್ಟು ಮತ್ತೆ ನನ್ನಂಥ ಮೊದಿ ಭಕ್ತರು ಅನ್ನೊ ಲೆಕ್ಕ ಮೊದಲು ಹಾಕಿ. ಆಮೇಲೆ ಎಲ್ಲಾ ಲೆಕ್ಕಾಚಾರ ಸುಲಭ ಆಗುತ್ತೆ.

  ಪ್ರತಿಕ್ರಿಯೆ
 2. Pradeep

  ಕಾರ್ಡ್ ಸ್ವೈಪ್ ಮಾಡಿದರೆ ಎಲ್ಲ ಬ್ಯಾಂಕ್ ಗಳು ಕನಿಷ್ಠ ೨ ಟು ೩ ಪರ್ಸೆಂಟ್ ಚಾರ್ಜ್ ಮಾಡುತ್ತವೆ. ಮಿನಿಮಂ current ಅಕೌಂಟ್ requirement ಬಯಸುತ್ತವೆ.
  ಈ ೨ ಟು ೩ ಪರ್ಸೆಂಟ್ ಚಾರ್ಜ್ ಯಾಕೆ ಮಾರಾಟಗಾರ ಬರಿಸಬೇಕು? ಇಡೀ ದೇಶವನ್ನು ಕನ್ಸಿಡರ್ ಮಾಡಿದರೆ ೨ ಟು ೩ ಪರ್ಸೆಂಟ್ ದೊಡ್ಡ ಮೊತ್ತವಲ್ಲವೇ. ಇದು ಮಾರುವವನಿಗೂ ಅಲ್ಲ , ಖರೀದೀದಾರನಿಗೂ ಅಲ್ಲ. ಮದ್ಯೆ ಬ್ಯಾಂಕ್ ಪ್ರಾಫಿಟ್ ಆಗುತ್ತದಷ್ಟೆ.

  ಇನ್ನು ಪೆಟಿಎಂ ಕೂಡ ಕನಿಷ್ಠ ಶುಲ್ಕ ವಿಧಿಸುತ್ತದೆ. ಇದು ಚೀನಾದ ಆಲಿಬಾಬ ಹೂಡಿಕೆ ರಕ್ಷಿಸಬಹುದಷ್ಟೆ. ಮುಂದಾದರು ಪ್ರಧಾನಿಯರು ಯೋಚಿಸದೆ ಮಾತನಾಡುವದನ್ನು ಕಡಿಮೆ ಮಾಡಲಿ.

  ಪ್ರತಿಕ್ರಿಯೆ
 3. Ananda Prasad

  ತರಾತುರಿಯಲ್ಲಿ ೫೦೦ ಹಾಗೂ ೧೦೦೦ ಸಾವಿರ ರೂಪಾಯಿ ನೋಟು ರದ್ದು ಮಾಡಿರುವುದು ಒಳ್ಳೆಯ ಆಡಳಿತದ ಲಕ್ಷಣ ಅಲ್ಲ. ತನ್ನದೇ ದೇಶದ ಜನಸಾಮಾನ್ಯರು ತಮ್ಮ ದುಡಿಮೆಯ ಹಾಗೂ ಉಳಿತಾಯದ ಹಣವನ್ನು ತೆಗೆಯಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಉಂಟುಮಾಡಿರುವುದು ಕೂಡ ದೇಶದ ಜನಸಾಮಾನ್ಯರ ಬಗ್ಗೆ ಕಾಳಜಿ ಉಳ್ಳ ಆಡಳಿತಗಾರ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ಇಂಥ ನಿರ್ಧಾರ ತೆಗೆದುಕೊಳ್ಳುವ ಮೊದಲು ಬೇಕಾದಷ್ಟು ಪ್ರಮಾಣದ ೧೦೦ರ ನೋಟು ಪ್ರಿಂಟ್ ಮಾಡಿ ಇಡಲು ಏನು ತೊಂದರೆ ಏನು ಇತ್ತು ಎಂದು ಗೊತ್ತಾಗುವುದಿಲ್ಲ. ಅದೇ ರೀತಿ ಸಾಕಷ್ಟು ಹೊಸ ೫೦೦ ರೂಪಾಯಿ ನೋಟುಗಳನ್ನು ಕೂಡ ಮೊದಲೇ ಪ್ರಿಂಟ್ ಮಾಡಿ ಇಡುವುದು ಏಕೆ ಸಾಧ್ಯವಿರಲಿಲ್ಲ ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ. ನನಗನಿಸುವಂತೆ ಇದು ಸಾಧ್ಯವಿತ್ತು ಏಕೆಂದರೆ ನೋಟು ಪ್ರಿಂಟ್ ಮಾಡುವ ವಿಶೇಷ ಮುದ್ರಣಾಲಯಗಳು ಇರುವುದು ಸರ್ಕಾರದ ವಶದಲ್ಲಿ. ಖಾಸಗಿಯವರು ನೋಟು ಪ್ರಿಂಟ್ ಮಾಡುವುದಾದರೆ ಅದು ಹೊರಗೆ ಸೋರಿಕೆಯಾಗಬಹುದು ಎಂದು ಹೇಳಬಹುದಿತ್ತು. ಹೊಸ ೫೦೦ ಹಾಗೂ ೨೦೦೦ ನೋಟುಗಳ ಗಾತ್ರ ಸಣ್ಣದು ಮಾಡಬೇಕಾದ ಅಗತ್ಯ ಏನಿತ್ತು ಅರ್ಥವಾಗುವುದಿಲ್ಲ. ಅವುಗಳ ಗಾತ್ರ ಬದಲಿಸದೆ ಬಣ್ಣ ಹಾಗೂ ವಿನ್ಯಾಸ ಬದಲಿಸದರೆ ಸಾಕಿತ್ತು. ಹೀಗೆ ಮಾಡಿದ್ದಿದ್ದರೆ ದೇಶದ ಎಲ್ಲಾ ಎಟಿಎಂಗಳನ್ನು ಹೊಸ ನೋಟುಗಳಿಗೆ ಮರುವಿನ್ಯಾಸಗೊಳಿಸುವ ಅಗತ್ಯವೇ ಇರಲಿಲ್ಲ. ಇದರಿಂದ ಜನರಿಗೆ ಈಗ ಆಗುತ್ತಿರುವ ತೊಂದರೆ ತಪ್ಪುತ್ತಿತ್ತು.

  ಸರಿಯಾದ ಯೋಜನೆ ಇಲ್ಲದೆ ಈಗ ಇದ್ದಕ್ಕಿದ್ದಂತೆ ನೋಟುಗಳನ್ನು ರದ್ದು ಮಾಡಬೇಕಾದ ಅಂಥ ತುರ್ತು ಏನೂ ಇರಲಿಲ್ಲ. ಈ ನೋಟುಗಳನ್ನು ಆರು ತಿಂಗಳ ಯೋಜನೆ ಮಾಡಿ ರದ್ದು ಮಾಡಿದ್ದರೆ ದೇಶವೇನೂ ಮುಳುಗಿಹೋಗುತ್ತಿರಲಿಲ್ಲ. ಈಗ ಚಿಲ್ಲರೆ ಸಮಸ್ಯೆಯಿಂದಾಗಿ ಇಡೀ ದೇಶದಲ್ಲಿ ವ್ಯಾಪಾರ ವಹಿವಾಟಿಗೆ ಸಾಕಷ್ಟು ಧಕ್ಕೆಯಾಗಿದೆ. ಇದು ಹೀಗೇ ಇನ್ನಷ್ಟು ಸಮಯ ಮುಂದುವರಿದರೆ ದೇಶವು ಆರ್ಥಿಕ ಹಿಂಜರಿತಕ್ಕೆ ಸಿಲುಕಬಹುದು. ಒಮ್ಮೆ ದೇಶವು ಆರ್ಥಿಕ ಹಿಂಜರಿತಕ್ಕೆ ಸಿಲುಕಿದರೆ ಮತ್ತೆ ಬೇಗನೆ ಚೇತರಿಕೆ ಸಾಧ್ಯವಿಲ್ಲ. ದೇಶದ ಜನ ಈಗ ಮುಂದೆ ದೇಶಕ್ಕೆ ಭಾರೀ ಒಳ್ಳೆಯದಾಗುತ್ತದೆ ಎಂಬ ಭ್ರಮಾಲೋಕದಲ್ಲಿ ಮುಳುಗಿದ್ದಾರೆ. ಮುಂದೆ ಹಾಗಾಗದೆ ಹೋದರೆ ಅದರ ದುಷ್ಪರಿಣಾಮ ಬಿಜೆಪಿ ಪಕ್ಷದ ಮೇಲೆ ಬೀಳುವುದರಲ್ಲಿ ಸಂದೇಹವಿಲ್ಲ.

  ಬಲವಂತವಾಗಿ ಸಾಮಾನ್ಯ ಜನರನ್ನು ನಗದುರಹಿತ ಆರ್ಥಿಕತೆಗೆ ದೂಡುವುದು ಸಾಧ್ಯವಿಲ್ಲ ಮತ್ತು ಅದರ ಅಗತ್ಯವೂ ಇಲ್ಲ. ಯೂನಿವರ್ಸಲ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಮೂಲಕ ಮೊಬೈಲ್ ಮೂಲಕ ಎಲೆಕ್ಟ್ರಾನಿಕ್ ಹಣ ವಿನಿಮಯಕ್ಕೆ ದೇಶ ಸಿದ್ಧಗೊಂಡಿಲ್ಲ. ಅದಕ್ಕೆ ಸ್ಮಾರ್ಟ್ ಫೋನ್ ಅತ್ಯಗತ್ಯ. ಭಾರತದ ಜನಸಂಖ್ಯೆಯ ಬಹಳ ದೊಡ್ಡ ಪ್ರಮಾಣದ ಜನ ಇನ್ನೂ ಸ್ಮಾರ್ಟ್ ಫೋನ್ ಹೊಂದಿಲ್ಲ, ಭಾರತದ ಹಳ್ಳಿಗಳು ಇಂದಿಗೂ ೩ಜಿ ಮೊಬೈಲ್ ನೆಟ್ ವರ್ಕ್ ಹೊಂದಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಳ್ಳದೆ ಡಿಜಿಟಲ್ ಇಂಡಿಯಾ ಎಂದು ಬಡಾಯಿ ಕೊಚ್ಚುವುದರಿಂದ ಪ್ರಯೋಜನವಿಲ್ಲ. ಜನ ಸ್ಮಾರ್ಟ್ ಫೋನ್ ಹೊಂದಿದರೂ ಬಹಳ ಸಂಖ್ಯೆಯ ಹಿಂದಿನ ತಲೆಮಾರಿನ (ವಯಸ್ಸಾದವರು, ಹಿರಿಯ ನಾಗರಿಕರು) ಜನ ಸ್ಮಾರ್ಟ್ ಫೋನ್ ಬಳಸಲು ಪರಿಣತಿ ಹೊಂದಲಾರರು. ಇವರನ್ನೆಲ್ಲ ನಗದುರಹಿತ ಆರ್ಥಿಕತೆಗೆ ತರಲು ಸಾಧ್ಯವಿಲ್ಲ ಮತ್ತು ಹಾಗೆ ತರಬೇಕಾದ ಅಗತ್ಯವೂ ಇಲ್ಲ. ಸರಕಾರ ಜನಸಾಮಾನ್ಯರನ್ನು ಕಳ್ಳನಂತೆ ನೋಡುವುದು ಕೂಡ ತರವಲ್ಲ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: